ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರ: ಬಯಲುಸೀಮೆಯಲ್ಲಿ ಮಲೆನಾಡಿನ ಏಲಕ್ಕಿ, ಕಾಳು ಮೆಣಸು ಕಂಪು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 16: ರಾಮನಗರ ಎಂದರೆ ರೇಷ್ಮೆ, ಮಾವು ಹಾಗೂ ಹೈನುಗಾರಿಕೆಗೆ ಹೆಸರಾಗಿದೆ. ರೇಷ್ಮೆ ನಗರಿಯಲ್ಲಿ ಏಲಕ್ಕಿ ಮತ್ತು ಮೆಣಸು ಬೆಳೆಯಲು ರೈತರು ಸಿದ್ಧವಾಗಿದ್ದಾರೆ. ಮಲೆನಾಡಿನ ಏಲಕ್ಕಿ ಮೊಗ್ಗು ಅರಳಿದ್ದು ಇನ್ನೇನು ಫಲ ಸಿಗಲಿದೆ.

ರಾಮನಗರ ತಾಲೂಕಿನ ಕಸಬ ಹೋಬಳಿಯ ಪಾದರಹಳ್ಳಿಯ ರೈತ ದಂಪತಿ ಪುರುಷೋತ್ತಮ ಹಾಗೂ ರತ್ನ, ತಮ್ಮ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಸಾವಯವ ಪದ್ಧತಿ ಅನುಸರಿಸಿಕೊಂಡು ಬೆಳೆ ಬೆಳೆಯುತ್ತಿದ್ದು, ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ರೈತ ದಂಪತಿಗಳು ತೆಂಗು, ಬಾಳೆ, ಪಪ್ಪಾಯಿ, ಕರಿಬೇವು, ಸೀಬೆ, ನುಗ್ಗೆ ಸೇರಿದಂತೆ ಮಲೆನಾಡಿನ ವಾತಾವರಣದಲ್ಲಿ ಮಾತ್ರ ಬೆಳೆಯುವ ಕಾಳುಮೆಣಸು ಮತ್ತು ಏಲಕ್ಕಿ ಹೀಗೆ ಒಂದು ಎಕರೆಯಲ್ಲಿ ಹತ್ತಾರು ವೈವಿಧ್ಯಮಯ ಬೆಳೆ ಬೆಳೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ವ್ಯವಸಾಯದಲ್ಲಿ ಸಾಧನೆ ಮಾಡಿದ್ದಾರೆ.

ಅಪರೂಪವಾದ ಏಲಕ್ಕಿ ಕೃಷಿ

ಅಪರೂಪವಾದ ಏಲಕ್ಕಿ ಕೃಷಿ

ವಿಶೇಷವಾಗಿ, ಅದರಲ್ಲೂ ಈ ಭಾಗಕ್ಕೆ ಅಪರೂಪವಾದ ಏಲಕ್ಕಿ ಕೃಷಿಯನ್ನು ಕೈಗೊಂಡಿದ್ದಾರೆ. ವರ್ಷದ ಹಿಂದೆ ಮೂಡಿಗೆರೆಯಿಂದ ತಂದ ಏಲಕ್ಕಿ ಸಸಿಗಳು ಈಗಾಗಲೇ ಎತ್ತರಕ್ಕೆ ಬೆಳೆದಿದ್ದು, ಬುಡದಲ್ಲಿ ಏಲಕ್ಕಿ ಕಾಯಿ ಕಾಣಿಸಿಕೊಂಡಿದೆ.

ಕಳೆದ ಹತ್ತಾರು ವರ್ಷಗಳಿಂದ ಪುರುಷೋತ್ತಮ್ ಜಮೀನು ಏನನ್ನು ಬೆಳೆಯದೆ ಪಾಳುಬಿದ್ದಿತ್ತು. ಎರಡು ವರ್ಷ ಹಿಂದೆ ಸಾವಯವ ಕೃಷಿಗೆ ಮನಸ್ಸು ಮಾಡಿದರು, ಪಾಳುಬಿದ್ದ ಹೊಲವನ್ನು ಹದ ಮಾಡಿ ಒಂದೊಂದೇ ಸಸಿ ನೆಡುತ್ತಾ ಬಂದು ಸಮಗ್ರ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮೂಡಿಗೆರೆಯಿಂದ ಏಲಕ್ಕಿ ಸಸಿಗಳನ್ನು ದುಬಾರಿ ಬಾಡಿಗೆ ವಾಹನ ಮೂಲಕ ಸುಮಾರು 450ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಏಲಕ್ಕಿಗೆ ನೆರವಾಗಲಿ ಎಂದು 750 ಬಾಳೆ ಸಸಿಗಳನ್ನು ಬೆಳೆದಿದ್ದು, ಅದರ ಮಧ್ಯ 1000 ಪಪ್ಪಾಯ ಸಸಿಗಳನ್ನು ನೆಟ್ಟಿದ್ದಾರೆ. ಐದುನೂರು ಕಾಳುಮೆಣಸಿನ ಸಸಿಗಳನ್ನು ನೆಟ್ಟಿದ್ದು, ಅವುಗಳಿಗೆ ಸರಿಯಾಗಿ ಮರಗಳನ್ನು ಬೆಳೆಸಿದ್ದಾರೆ. ಇದಲ್ಲದೆ 500 ಕರಿಬೇವು, 60 ತೆಂಗಿನ ಸಸಿಗಳನ್ನು ವಿಜಯಪುರದಿಂದ ತಂದು ನೆಟ್ಟಿದ್ದಾರೆ.

ರೈತ ಪುರುಷೋತ್ತಮ ಪ್ರತಿಕ್ರಿಯೆ

ರೈತ ಪುರುಷೋತ್ತಮ ಪ್ರತಿಕ್ರಿಯೆ

ರೈತ ಪುರುಷೋತ್ತಮ ಮಾತನಾಡಿ, "ಸಂಪೂರ್ಣ ಸಾವಯವ ಕೃಷಿ ಪದ್ಧತಿ ಹೆಚ್ಚಿನ ರೀತಿ ಲಾಭ ಕಾಣಬಹುದು, ನಾವು ಯಾವುದೇ ರಾಸಾಯನಿಕ ಬಳಸುತ್ತಿಲ್ಲ. ಸಸಿಗಳಿಗೆ ಕೊಟ್ಟಿಗೆ ಗೊಬ್ಬರ, ಜೀವಾಮೃತ ಹಾಗೂ ವಿಜ್ಞಾನಿಗಳು ಸೂಚಿಸುವ ಸಾವಯವ ಪೂರೈಕೆ ಕ್ರಿಮಿನಾಶಕಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ," ಎಂದರು.

"ಇನ್ನೂ ಹಲವಾರು ಕಡೆಗಳಿಂದ 9 ಬೆಳೆಗಳನ್ನು ತಂದು ನಾವು ಹಾಕಿದ್ದೇವೆ. ಏಲಕ್ಕಿ, ಮೆಣಸು ನಮ್ಮ ಜಿಲ್ಲೆಯಲ್ಲಿ ಬೆಳೆಯುತ್ತಿರಲಿಲ್ಲ. ನಮ್ಮಿಂದ ರೈತರುಗಳಿಗೆ ಮಾದರಿಯಾಗಲಿ. ಕಡಿಮೆ ಜಾಗದಲ್ಲಿ ರೈತರು ಶ್ರಮವಹಿಸಿ ಮಾಡಿದರೆ ಸಂತೃಪ್ತ ಜೀವನ ಸಾಗಿಸಬಹುದು, ಉತ್ತಮ ಬೆಳೆಗಳನ್ನು ಬೆಳೆಯಬಹುದು," ಎಂದು ಸಂತಸಪಟ್ಟರು.

ರೈತ ಮಹಿಳೆ ರತ್ನ ಪ್ರತಿಕ್ರಿಯೆ

ರೈತ ಮಹಿಳೆ ರತ್ನ ಪ್ರತಿಕ್ರಿಯೆ

ರೈತ ಪುರುಷೋತ್ತಮ ಬೆಂಬಲಕ್ಕೆ ನಿಂತಿರುವ ಪತ್ನಿ ರತ್ನ ಮಾತನಾಡಿ, "ಸುಮಾರು 20 ವರ್ಷಗಳಿಂದ ಜಮೀನನ್ನು ಹಾಗೆ ಬಿಟ್ಟಿದ್ದೆವು. ಈಗ ಕೃಷಿ ಚಟುವಟಿಕೆ ಕಡೆಗೆ ಮನಸ್ಸು ಮಾಡಿ ನುಗ್ಗೆ, ಪಪ್ಪಾಯ, ಕಾಳು ಮೆಣಸು, ಏಲಕ್ಕಿ, ಬಾಳೆ, ಕರಿಬೇವು ರೀತಿಯ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಹಲವು ಸರ್ಕಾರಿ ಯೋಜನೆಗಳಿಂದ ನಮಗೆ ಸಹಾಯ ಸಿಕ್ಕಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆ ಬೆಳೆಯಲು ಜಿಲ್ಲಾ ತೋಟಗಾರಿಕೆ ಇಲಾಖೆ ನಮಗೆ ಪ್ರೋತ್ಸಾಹ ನೀಡುತ್ತಿದೆ," ಎಂದರು.

"ಪ್ರಸ್ತುತ ಕೋವಿಡ್-19 ಹಾವಳಿಯಿಂದ ಸ್ವಲ್ಪ ಕಷ್ಟವಾಗಿತ್ತು. ಕೊರೊನಾ ಮೊದಲ ಅಲೆಯಲ್ಲಿ ಪಪ್ಪಾಯ ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟವಾಯಿತು. ನಂತರ ಕೊರೊನಾ ಎರಡನೇ ಅಲೆಯಲ್ಲಿ ನುಗ್ಗೆ ಬೆಳೆಗೆ ಮಾರುಕಟ್ಟೆ ಇಲ್ಲದೆ ಸಮಸ್ಯೆಯಾಯಿತು.‌ ಆದರೂ ನಮಗೆ ಅಲ್ಪ ಪ್ರಮಾಣದಲ್ಲಿ ಲಾಭ ಸಿಕ್ಕಿದೆ. ಸಮಗ್ರ ಬೇಸಾಯವಾದ್ದರಿಂದ ಒಂದರಲ್ಲಿ ನಷ್ಟವಾದರೆ, ಮತ್ತೊಂದರಲ್ಲಿ ಲಾಭ ಸಿಗುತ್ತದೆ," ಎಂದು ತಿಳಿಸಿದರು.

ಉಪ ನಿರ್ದೇಶಕ ಮುನೇಗೌಡ ಪ್ರತಿಕ್ರಿಯೆ

ಉಪ ನಿರ್ದೇಶಕ ಮುನೇಗೌಡ ಪ್ರತಿಕ್ರಿಯೆ

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮುನ್ನೇಗೌಡ ಮಾತನಾಡಿ, "ಸಮಗ್ರ ಬೇಸಾಯದಿಂದ ಇತರ ರೈತರಿಗೆ ಪಾದರಹಳ್ಳಿ ರೈತರು ಮಾದರಿಯಾಗಿದ್ಧಾರೆ. ಒಂದು ಎಕರೆಯಲ್ಲಿ 9 ತರಹದ ಬೆಳೆಗಳನ್ನು ಬೆಳೆದು ಇತರ ಜಿಲ್ಲೆಗಳ ರೈತರುಗಳಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಇಲಾಖೆಯಿಂದ ಹಲವಾರು ಯೋಜನಗಳ ಮೂಲಕ ಸಹಕಾರ ನೀಡುತ್ತಿದ್ದೇವೆ."

"ಇಲಾಖೆಯ ಹಲವು ಯೋಜನೆಗಳಿಂದ ರೈತರಿಗೆ ನೆರವು ನೀಡುತ್ತಿದ್ದೇವೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಎಲ್ಲಾ ಬಹುವರ್ಷ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಉತ್ತಮವಾದ ಅವಕಾಶಗಳಿವೆ. ಬೇಕಾಗುವ ಸಸಿಗಳನ್ನು ತರಿಸಿಕೊಡುವುದು, ತಾಂತ್ರಿಕ ಸಲಹೆಗಳನ್ನು ನೀಡುವುದರ ಮೂಲಕ ನಾವು ರೈತರಿಗೆ ಉತ್ತೇಜನ ನೀಡುತ್ತಿದ್ದೇವೆ. ರಾಮನಗರ ಜಿಲ್ಲೆಯಲ್ಲಿ ಏಲಕ್ಕಿ ಮತ್ತು ಮೆಣಸು ಹೊಸ ಬೆಳೆಯಾಗಿದ್ದು, ಇದರಲ್ಲೂ ನಮ್ಮ ರೈತರು ಯಶಸ್ಸನ್ನು ಕಂಡಿದ್ದಾರೆ," ಎಂದು ಹೇಳಿದರು.

English summary
Purushottam and Ratna, a farmer couple from the Kasaba hobali of Ramanagara taluk, have started a comprehensive farming experiment on their one acre land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X