ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಲು ಹಾದಿಯಲ್ಲಿ ಜನಾರ್ದನ ರೆಡ್ಡಿ 'ಗಾಲಿ', ಪಿಕ್ಚರ್ ಅಭಿ ಬಾಕಿ ಹೈ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

Recommended Video

ಜನಾರ್ಧನ ರೆಡ್ಡಿಯವರ ರಾಜಕೀಯ ಜೀವನ ಏಳು ಬೀಳುಗಳ ಕಥೆ | Oneindia Kannada

ಗಾಲಿ ಜನಾರ್ದನ ರೆಡ್ಡಿ ಎಂಬ ಹೆಸರು ಕಳೆದ ಹತ್ತು-ಹದಿನೈದು ವರ್ಷದಲ್ಲಿ ರಾಜ್ಯ ರಾಜಕಾರಣದ ಪಗಡೆಯಾಟದಲ್ಲಿ ಮುಖ್ಯ ದಾಳವಾಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಅವಧಿಯಲ್ಲಿ ಏನೆಲ್ಲ ಆಗಿಹೋಯಿತು ಎಂಬುದನ್ನು ನೆನಪಿಸಿಕೊಳ್ಳುವ ವರದಿ ಇದು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಜೆಪಿ ದೋಸ್ತಿ ಆಗಿದ್ದುಕೊಂಡು, ರೆಡ್ಡಿ ತೆಗೆದುಕೊಂಡ ನಿರ್ಧಾರ ಕಡಿಮೆ ರಿಸ್ಕಿನದಾಗಿರಲಿಲ್ಲ.

ಗಣಿ ಮಾಲೀಕರಿಂದ ನೂರೈವತ್ತು ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ, ಇಡೀ ಮಾಧ್ಯಮ ಲೋಕವೇ ರೆಡ್ಡಿ ಮನೆ ಮುಂದೆ ನಿಲ್ಲುವಂತೆ ಮಾಡಿದ್ದು ಇದೇ ಜನಾರ್ದನ ರೆಡ್ಡಿ. ಈ ಮನುಷ್ಯನಿಗೆ ಇದೆಲ್ಲಿಯ ಧೈರ್ಯ? ದೇವೇಗೌಡರ ಕುಟುಂಬದ ಬಗ್ಗೆ ಹೀಗೆ ಮಾತನಾಡ್ತಾರಲ್ಲ ಎಂದು ಕಮಲ ಪಕ್ಷದ ಮುಖಂಡರೇ ಕಣ್ಣು-ಬಾಯಿ ಬಿಟ್ಟು ನೋಡುತ್ತಿದ್ದರು.

ಶೀಲಾ ಬಜಾಜ್ ಪ್ರಕಾರ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಹೇಗಿದೆ?ಶೀಲಾ ಬಜಾಜ್ ಪ್ರಕಾರ ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯ ಹೇಗಿದೆ?

ತುಂಬ ಹಿಂದೇನಲ್ಲ. ಹತ್ತು ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ಅಂದರೆ ಮಂತ್ರದಂಡ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬಲ್ಲೆ ಎಂಬ ಭಾರೀ ವಿಶ್ವಾಸದಲ್ಲಿ ಮಾತನಾಡುತ್ತಿದ್ದ ಗಣಿ ಧಣಿ. ಇನ್ನೇನು ಕರ್ನಾಟಕದ ಕಾಂಗ್ರೆಸ್- ಜೆಡಿಎಸ್ ಅನ್ನು ಅನಾಮತ್ತಾಗಿ ಆಪೋಶನ ತೆಗೆದುಕೊಳ್ಳುವ ಶಕ್ತಿ ಬಿಜೆಪಿಗೆ ಸಿಕ್ಕಿಬಿಡ್ತು ಎಂದು ಮಾತನಾಡುವ ಹಾಗಿತ್ತು.

 ದಮ್ಮಯ್ಯಗುಡ್ಡೆ ಹಾಕಿದ್ದರು ಸದಾನಂದ ಗೌಡರು

ದಮ್ಮಯ್ಯಗುಡ್ಡೆ ಹಾಕಿದ್ದರು ಸದಾನಂದ ಗೌಡರು

ಅದಕ್ಕೆ ತಕ್ಕಂತೆ ಬಿಜೆಪಿ ಸರಕಾರದಲ್ಲಿ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಹಾಗೂ ರೆಡ್ಡಿ ಆಪ್ತ ಶ್ರೀರಾಮುಲು ಸಚಿವರಾದರು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ.ಸದಾನಂದ ಗೌಡರು ದಮ್ಮಯ್ಯಗುಡ್ಡೆ ಹಾಕಿದರೂ ಕೇರ್ ಮಾಡದೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಜನಾರ್ದನ ರೆಡ್ಡಿ ಸೋದರ ಸೋಮಶೇಖರ್ ರೆಡ್ಡಿಯನ್ನು ಕೂರಿಸಲಾಯಿತು.

 ಕಡತಗಳು ಹೆಲಿಕಾಪ್ಟರ್ ನಲ್ಲಿ ಬರುತ್ತಿದ್ದವು

ಕಡತಗಳು ಹೆಲಿಕಾಪ್ಟರ್ ನಲ್ಲಿ ಬರುತ್ತಿದ್ದವು

ಪ್ರವಾಸೋದ್ಯಮ ಖಾತೆ ವಹಿಸಿಕೊಂಡಿದ್ದ ಜನಾರ್ದನ ರೆಡ್ಡಿ ಅವರಿಗೆ ಮೈ ತುಂಬ ಕೆಲಸ. ಗಣಿ ಉದ್ಯಮದ ಜವಾಬ್ದಾರಿ ಬೇರೆ. ತಮ್ಮ ಖಾತೆಯಿಂದ ಬಿಡಿಗಾಸಿನ ಆಮದನಿ ನಿರೀಕ್ಷೆ ಮಾಡದ ರೆಡ್ಡಿಗಾರು ತಮ್ಮ ಇಲಾಖೆಯ ಕಡತಗಳಿಗೆ ಸಹಿ ಹಾಕಲು ಹೆಲಿಕಾಪ್ಟರ್ ಗಳಲ್ಲಿ ತರಿಸಿಕೊಳ್ಳುತ್ತಿದ್ದರಂತೆ. ಹಂಪಿ ಉತ್ಸವವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅದ್ಧೂರಿಯಾಗಿ ಮಾಡಲು ಆರಂಭಿಸಿದ್ದು ಇದೇ ಜನಾರ್ದನ ರೆಡ್ಡಿ.

 ಜಬರಿಸಿ ಕೇಳುವುದಕ್ಕೆ ಹೈಕಮ್ಯಾಂಡ್ ಎಲ್ಲಿತ್ತು?

ಜಬರಿಸಿ ಕೇಳುವುದಕ್ಕೆ ಹೈಕಮ್ಯಾಂಡ್ ಎಲ್ಲಿತ್ತು?

ಸರಕಾರದಲ್ಲಿ ತಮಗೇನೋ ಸರಿ ಹೋಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯ ಶಾಸಕರನ್ನು ಹೈದರಾಬಾದ್ ಗೆ ಹೊತ್ತೊಯ್ದು ಕೋಪದಲ್ಲಿ ವೀರಭದ್ರನ ಅಪರಾವತಾರ ಎನಿಸಿದ್ದ ಯಡಿಯೂರಪ್ಪನವರ ಮೂಗು ಹಿಡಿದು ಜಗ್ಗಾಡಿಬಿಟ್ಟರು ಜನಾರ್ದನ ರೆಡ್ಡಿ. ಆಗೆಲ್ಲ ಬಿಜೆಪಿ ಹೈಕಮ್ಯಾಂಡ್ ಎಲ್ಲಿತ್ತು? ದೂರದ ದಿಲ್ಲಿಯಿಂದ ಸುಷ್ಮಾ ಸ್ವರಾಜ್, ನಮ್ಮ ಹುಡುಗರಿಗೆ ಸಿಟ್ಟು ಬಾರದಂತೆ ನೋಡಿಕೊಳ್ಳಿ ಅಂತ ನೈಸಾಗಿ ಹೇಳುತ್ತಿದ್ದರೆ ವಿನಾ ಜಬರಿಸಿ ಕೇಳುವುದಕ್ಕೆ ಯಾರಿದ್ದರು.

ವಿರೋಧಿಗಳನ್ನು ನೆಲಕ್ಕಲ್ಲ, ಪಾತಾಳಕ್ಕೆ ತುಳಿದು ಬಿಡುವಂಥ ಕ್ರೌರ್ಯ

ವಿರೋಧಿಗಳನ್ನು ನೆಲಕ್ಕಲ್ಲ, ಪಾತಾಳಕ್ಕೆ ತುಳಿದು ಬಿಡುವಂಥ ಕ್ರೌರ್ಯ

2008ರ ಚುನಾವಣೆ ಬಗ್ಗೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರು ಹೀಗೆ ನೆನಪಿಸಿಕೊಳ್ಳುತ್ತಾರೆ: ಬಳ್ಳಾರಿಯಲ್ಲಿ ಯಾವ ಪರಿ ದುಡ್ಡು ಚೆಲ್ಲಲಾಗಿತ್ತು ಅಂದರೆ, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೊಳ್ತೀನಿ ಅಂದರೂ ಒಂದು ರೇಡಿಯೋ ಸಿಗ್ತಿರಲಿಲ್ಲ. ಚಿನ್ನದ ಮಾತು ದೂರ ಆಯಿತು ಬಿಡಿ. ಜನಾರ್ದನ ರೆಡ್ಡಿ ರಾಜಕೀಯದ ಲೆಕ್ಕಕ್ಕೆ ಬಂದರೆ, ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಟೀಮ್ ಇದ್ದ ಹಾಗೆ. ವಿರೋಧಿಗಳನ್ನು ನೆಲಕ್ಕಲ್ಲ, ಪಾತಾಳಕ್ಕೆ ತುಳಿದು ಬಿಡುವಂಥ ಕ್ರೌರ್ಯ ಅದು. ಅಂದರೆ ಎಷ್ಟಾದರೂ ಮೂಲತಃ ಉದ್ಯಮಿ. ಗೆಲ್ಲುವ ಸಲುವಾಗಿ ಆತ ಮಾಡುತ್ತಿದ್ದ ರಣತಂತ್ರ ಹಾಗಿರುತ್ತಿತ್ತು ಎನ್ನುತ್ತಾರೆ. ಇದೇನು ಹೊಗಳಿಕೆಯೋ ಅಥವಾ ಆಕ್ಷೇಪವೋ ಅಂದರೆ, ಮುಂದಕ್ಕೆ ಮಾತನಾಡಲ್ಲ.

ರಾಜಶೇಖರ ರೆಡ್ಡಿ ಜತೆಗಿನ ಸ್ನೇಹ

ರಾಜಶೇಖರ ರೆಡ್ಡಿ ಜತೆಗಿನ ಸ್ನೇಹ

ಜನಾರ್ದನ ರೆಡ್ಡಿ ಮತ್ತೊಂದು ಬುದ್ಧಿವಂತಿಕೆ ಹಾಗೂ ರಕ್ಷಣೆ ಎಂದು ಇದ್ದಿದ್ದು ಆಂಧ್ರದ ರಾಜಶೇಖರ ರೆಡ್ಡಿ. ನಲವತ್ತು-ನಲವತ್ತೊಂದು ವರ್ಷದ ಜನಾರ್ದನ ರೆಡ್ಡಿಗೆ ಇಡೀ ದೇಶದ ರಾಜಕಾರಣ ಸುಷ್ಮಾ ಸ್ವರಾಜ್ ಹಾಗೂ ರಾಜಶೇಖರ ರೆಡ್ಡಿ ರೂಪದಲ್ಲಿ ಕಣ್ಣೆದುರು ದಕ್ಕಿಹೋಯಿತು. ಮೊದಲೇ ಕನಸುಗಳನ್ನು ಬೆನ್ನಟ್ಟುವುದಕ್ಕೆ ತನ್ನ ಕಾಲಡಿ ಸಿಕ್ಕಿದ್ದೇನು, ತುಳಿದಿದ್ದೇನು ಎಂಬುದನ್ನು ಕಣ್ಣು ತಗ್ಗಿಸಿ ನೋಡಲು ಪುರುಸೊತ್ತು ಇಲ್ಲದಂಥ ಜನಾರ್ದನ ರೆಡ್ಡಿ, ಚಂದ್ರಬಾಬು ನಾಯ್ಡು ವಿರುದ್ಧ ತೀರಾ ಕೆಟ್ಟ ಮಾತುಗಳನ್ನಾಡಿದರು. ದೇವೇಗೌಡರ ಕುಟುಂಬದ ಬಗ್ಗೆ ಹಗುರ ಮಾತನಾಡಿದರು. ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ಅದಾಗಲೇ ರಾಜಕಾರಣದ ಪೈಲ್ವಾನ್ ಆಗಿದ್ದ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದರು.

ವಿಧಿಯೆಂಬ ಕತ್ತಿಗೆ ಸಿಕ್ಕ ಬಾಳೆ ಗಿಡದಂತೆ ಆದರು

ವಿಧಿಯೆಂಬ ಕತ್ತಿಗೆ ಸಿಕ್ಕ ಬಾಳೆ ಗಿಡದಂತೆ ಆದರು

ವಿಮಾನ ಅಪಘಾತದಲ್ಲಿ ವೈಎಸ್ ಆರ್ ಕಾಲವಾದರು, ಬೆಂಗಳೂರಿನಿಂದ ಬಳ್ಳಾರಿವರೆಗೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದರು. ಲಿಫ್ಟ್ ನಲ್ಲಿ ಯಶಸ್ಸಿನ ಎತ್ತರಕ್ಕೆ ಏರಿದ್ದ ಜನಾರ್ದನ ರೆಡ್ಡಿಗೆ ಆಗಲೇ ದುರಂತದ ಕಮರಿ ಕಂಡಿರಬಹುದು. ಆದರೆ ಅಕ್ರಮ ಗಣಿಗಾರಿಕೆ ವರದಿ ಕೊಟ್ಟ ನ್ಯಾ. ಸಂತೋಷ್ ಹೆಗ್ಡೆ ತಂಡದ ಪ್ರಹಾರದಲ್ಲಿ ವಿಧಿಯೆಂಬ ಕತ್ತಿಗೆ ಸಿಕ್ಕ ಬಾಳೆ ಗಿಡದಂತೆ ಆದರು ಜನಾರ್ದನ ರೆಡ್ಡಿ. ಆ ನಂತರದ ಜೈಲು ವಾಸ, ಕಷ್ಟದ ಸಮಯ ಎಲ್ಲ ಮುಗಿಸಿ ಆಚೆ ಬಂದರು. ಮಗಳ ಮದುವೆ ಮಾಡುವ ಮೂಲಕ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದರು ಜನಾರ್ದನ ರೆಡ್ಡಿ.

ಯಾರಿಗೆಷ್ಟು ಬೆಲೆ ಎಂದು ನಿರ್ಧರಿಸುವುದು ಚೆನ್ನಾಗಿ ಗೊತ್ತು

ಯಾರಿಗೆಷ್ಟು ಬೆಲೆ ಎಂದು ನಿರ್ಧರಿಸುವುದು ಚೆನ್ನಾಗಿ ಗೊತ್ತು

ಜನಾರ್ದನ ರೆಡ್ಡಿಗೆ ಯಾರಿಗೆಷ್ಟು ಬೆಲೆ ಎಂದು ನಿರ್ಧರಿಸುವುದು ಚೆನ್ನಾಗಿ ಗೊತ್ತು. ಆದರೆ ಸಮಸ್ಯೆ ಇರುವುದು ನಾಲಗೆಯಲ್ಲಿ. ಜೈಲಿನಿಂದ ಬಿಡುಗಡೆ ಆದ ನಂತರ ಬಳ್ಳಾರಿಗೆ ಮೊದಲ ಬಾರಿಗೆ ಹೋದಾಗ ಕಾಂಗ್ರೆಸ್ಸಿನ ಬಗ್ಗೆ ಹರಿತವಾದ ಮಾತನಾಡಲು ಆರಂಭಿಸಿದ ರೆಡ್ಡಿ ಅವರನ್ನು ಸುಮ್ಮನಿರುವಂತೆ ಮಾಡಿದ್ದು ಶ್ರೀರಾಮುಲು. ಅದೇನು ಜನಾರ್ದನ ರೆಡ್ಡಿ ಅವರ ದೌರ್ಬಲ್ಯವೋ, ಕೆಲವು ಸಲವಂತೂ ವಿಪರೀತ ಎನಿಸುವಷ್ಟು, ಸೇಡು ಮೂಡುವಂಥ ಮಾತನಾಡುತ್ತಾರೆ. ಸದ್ಯದ ಸ್ಥಿತಿಯಲ್ಲಿ ಹೊರ ಜಗತ್ತಿನ ಮುಂದೆ ನಂಟು ಬೇಡ ಎಂದುಕೊಂಡಿರುವ ಬಿಜೆಪಿ ಬಗ್ಗೆಯೂ ಜನಾರ್ದನ ರೆಡ್ಡಿಯವರ ನಡೆ ಏನಿರಬಹುದು ಎಂಬ ಕುತೂಹಲ ಇದೆ. ಜನಾರ್ದನ ರೆಡ್ಡಿಯ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿವೆ. ತನಿಖೆ ಹಂತದಲ್ಲಿವೆ. ಸತ್ಯಾಸತ್ಯತೆ ನಿರ್ಧರಿಸಬೇಕಾಗಿರುವುದು ಕಾನೂನು. ಆದರೆ ಒಂದು ದಶಕದಲ್ಲಿ ಗಗನದ ಎತ್ತರ ಏರಿ, ಪಾತಾಳ ತಲುಪಿ, ಸದ್ಯಕ್ಕೆ ನೆಲದ ಮೇಲೆ ನಿಂತಿರುವ ಜನಾರ್ದನ ರೆಡ್ಡಿ ಅವರ ವರ್ಣರಂಜಿತ ರಾಜಕಾರಣ ಮುಂದೆ ಹೇಗಿರುತ್ತದೋ ಎಂಬ ಕುತೂಹಲ ಇದೆ.

English summary
Here is the memory, raise and fall of Janaradana Reddy political career. He starts from Ballari and grown till Delhi. His journey from 2008 Karnataka assembly elections to 2018 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X