• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೇಗಿತ್ತು ನಮ್ಮ ಉತ್ತರ ಕನ್ನಡ..! ಈಗ ಹೇಗಾಗಿದೆ ನೋಡಿ...

|

"ಒಡಲು ಬಗೆದು ಮರಳು ತೆಗೆದು ಮಾರಿದ್ದಿರಲ್ಲ
ಬಂದಿದೆ ನೋಡಿ ನದಿ ಮನೆಬಾಗಿಲಿಗೆ ಮರಳಿ ಕೇಳಲು ಮರಳನ್ನು..."

ಉತ್ತರ ಕನ್ನಡ ಎಂಬ ಹಸಿರು ಜಿಲ್ಲೆ ಪ್ರವಾಹದ ಒಡಲಲ್ಲಿ ಬಿದ್ದು ನರಳುತ್ತಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂಥದೊಂದು ಸಂದೇಶ ಹರಿದಾಡುತ್ತಿತ್ತು. ನದಿಪಾತ್ರಗಳಲ್ಲಿ ಅವ್ಯಾಹತವಾಗಿ ಮರಳನ್ನು ತೆಗೆದು ಸಾಗಿಸಿದ್ದೇ ಈ ಪ್ರವಾಹಕ್ಕೆ ಮುಖ್ಯ ಕಾರಣ ಎಂಬರ್ಥದ ಸಂದೇಶ ಓಡಾಡಿತ್ತು. ಆದರೆ ಒಡಲು ಬಗೆದು, ಮರಳು ತೆಗೆದು ಮಾರಿದವರ್ಯಾರೋ, ಇದೀಗ ಪ್ರವಾಹಕ್ಕೆ ಸಿಕ್ಕಿ ನಲುಗುತ್ತಿರುವವರ್ಯಾರೋ! ಪ್ರವಾಹಕ್ಕೆ ಸಿಲುಕಿರುವವರಲ್ಲಿ ಯಾರೂ ಒಡಲು ಬಗೆದವರು, ಮರಳು ತೆಗೆದವರಲ್ಲ ಎಂಬುದೇ ದುರಂತ!

ಮಲೆನಾಡು, ಬಯಲುಸೀಮೆ, ಕರಾವಳಿ ಎಲ್ಲವನ್ನೂ ತನ್ನ ಒಡಲಲ್ಲಿರಿಸಿಕೊಂಡಿರುವ ಉತ್ತರ ಕನ್ನಡ ಜಲಪಾತಗಳ ನಾಡು ಎಂಬ ಖ್ಯಾತಿಯೊಂದಿಗೆ ಪ್ರವಾಸಿಗರ ನೆಚ್ಚಿನ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ.

'ರಾಷ್ಟ್ರೀಯ ವಿಪತ್ತು': ಘೋಷಣೆ ಯಾಕೆ? ಕರ್ನಾಟಕಕ್ಕೆ ಏನು ಲಾಭ?'ರಾಷ್ಟ್ರೀಯ ವಿಪತ್ತು': ಘೋಷಣೆ ಯಾಕೆ? ಕರ್ನಾಟಕಕ್ಕೆ ಏನು ಲಾಭ?

"ನಾವು ಉತ್ತರ ಕನ್ನಡವರು. ರಕ್ತದಲ್ಲೇ ಪ್ರತಿಭೆಯನ್ನೂ, ಬುದ್ಧಿವಂತಿಕೆಯನ್ನೂ ಹೊತ್ತುಬಂದವರು. ಸ್ವಾಭಿಮಾನಿಗಳು, ಪ್ರಕೃತಿಯನ್ನೇ ದೇವರೆಂದುಕೊಂಡು ಬದುಕುತ್ತಿರುವವರು...." ಎಂದು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದವರೆಲ್ಲ ಇಂದು ಒಂದು ಹೊತ್ತಿನ ಊಟಕ್ಕೂ ಮತ್ತೊಬ್ಬರೆದುರು ಕೈಚಾಚಿ ನಿಲ್ಲಬೇಕಾದ ದೈನೇಸಿ ಸ್ಥಿತಿಯಲ್ಲಿದ್ದಾರೆಂದರೆ ಕರುಳು ಕಿವುಚುತ್ತದೆ.

ಕಳೆದ ಸುಮಾರು ಹದಿನೈದು ದಿನಗಳಿಂದ ಹೊರಜಗತ್ತಿನ ಸಂಪರ್ಕವಿಲ್ಲದೆ ಬದುಕುತ್ತಿರುವ ಈ ಜಿಲ್ಲೆಯ ಜನರ ಪಾಡು ದೇವರಿಗೇ ಪ್ರೀತಿ. ಜಲವಿದ್ಯುತ್, ಅಣುವಿದ್ಯುತ್, ಪ್ರವಾಸ ಎಲ್ಲಕ್ಕೂ ಉತ್ತರ ಕನ್ನಡ ಬೇಕು. ಆದರೆ ರಾಜ್ಯದಲ್ಲೇ ಅತೀ ಹೆಚ್ಚು ಕಾಡನ್ನು ಹೊಂದಿರುವ ಜಿಲ್ಲೆ ಕೊಚ್ಚಿಹೋಗುತ್ತಿದ್ದರೆ ಮಾಧ್ಯಮಗಳಲ್ಲಿ ಚಕಾರವಿಲ್ಲ!

In Pics: ಕರ್ನಾಟಕದಲ್ಲಿ ಮಹಾ ಮಳೆ

ಪೈಸೆ ಪೈಸೆಯನ್ನೂ ಕೂಡಿಟ್ಟು ಕಟ್ಟಿದ್ದ ಸೂರು ಕಣ್ಣೆದುರಲ್ಲೇ ಕೊಚ್ಚಿ ಹೋಗಿದೆ, ಮೈಯನ್ನೆಲ್ಲ ಹಿಂಡಿ ಬೆವರು ಸುರಿಸಿ ಬೆಳೆದಿದ್ದ ಹೊಲ-ಗದ್ದೆಯನ್ನು ಜಲದೇವಿ ಆಪೋಶನ ತೆಗೆದುಕೊಂಡಿದ್ದಾಳೆ! ಎಲ್ಲೆಲ್ಲೂ ರಸ್ತೆಯ ಕುರುಹಿಲ್ಲ, ಸೇತುವೆಗಳೂ ಪ್ರವಾಹದೊಂದಿಗೆ ಸೇರಿ ನಾಪತ್ತೆಯಾಗಿವೆ, ಉತ್ತರ ಕನ್ನಡ ಎಂಬ ಹಸಿರನ್ನೇ ಹೊದ್ದ ಸುಂದರ ಜಿಲ್ಲೆಯಲ್ಲಿಗ ಸ್ಮಶಾನದ ಕಳೆ!

ಹೇಗಿತ್ತು ನಮ್ಮ ಉತ್ತರ ಕನ್ನಡ?

ಹೇಗಿತ್ತು ನಮ್ಮ ಉತ್ತರ ಕನ್ನಡ?

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ|

ಎಂಬ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಸಾಲುಗಳು ಉತ್ತರ ಕನ್ನಡದ ಪ್ರಕೃತಿ ಸೌಂದರ್ಯದ ದ್ಯೋತಕವಾಗಿವೆ. ಜಲಪಾತಗಳ ನಾಡು ಎಂದೇ ಕರೆಸಿಕೊಂಡ ಈ ಜಿಲ್ಲೆಯಲ್ಲಿ ಗಂಟೆ ಹೊಡೆದಂತೆ ಜೂನ್ ಮೊದಲ ವಾರದಲ್ಲಿ ಮಳೆ ಆರಂಭವಾದರೆ, ಅಕ್ಟೋಬರ್ ನಲ್ಲಿ ಎಲ್ಲೋ ಒಂದೊಂದು ಸಣ್ಣ ಮಳೆಯಾಗಿ ಮಳೆಗಾಲ ನಿಲ್ಲುತ್ತಿತ್ತು. ಒಮ್ಮೊಮ್ಮೆ ಅತಿ ಮಳೆ, ಒಮ್ಮೊಮ್ಮೆ ಅನಾವೃಷ್ಟಿಗಳನ್ನು ಇಲ್ಲಿನ ರೈತರು ಎದುರಿಸಿದರೂ ಅದು ಬದುಕನ್ನೇ ಮೂರಾಬಟ್ಟೆ ಮಾಡುವ ಅತಿರೇಕಕ್ಕೆ ಎಂದಿಗೂ ಹೋಗಿರಲಿಲ್ಲ. ಎಲ್ಲೆಲ್ಲೂ ಹಸಿರ ಕಾನನ, ಸರ್ವಋತುಗಳಲ್ಲೂ ಧೂಳನ್ನು ಹೊದ್ದ ರಸ್ತೆ, ಹಕ್ಕಿಗಳ ಚಿಲಿಪಿಲಿ, ಯಾವ ಹಿಂಸಾಚಾರದ ಅರಿವೂ ಇಲ್ಲದ ಶಾಂತ ಪರಿಸರ... ಯಾವುದಕ್ಕೂ ಯಾರ ಮೇಲೂ ಅವಲಂಬಿತರಾಗದೆ, ಸ್ವತಂತ್ರ, ಸ್ವಾಭಿಮಾನದ ಬದುಕನ್ನು ಕಂಡುಕೊಡವರು ಉತ್ತರ ಕನ್ನಡದ ಜನ.

ಜೀವನದಿಗಳು ಮುನಿಸಿಕೊಂಡು...

ಜೀವನದಿಗಳು ಮುನಿಸಿಕೊಂಡು...

ಆದರೆ ಈ ಬಾರಿ ಜೂನ್, ಜುಲೈ ನಲ್ಲಿ ಕೈಕೊಟ್ಟ ಮುಂಗಾರು, ಆಗಸ್ಟ್ ಆರಂಭದ ಹೊತ್ತಿಗೆ ಪ್ರವಾಹವಾಗಿ ಬಂದೆರಗುತ್ತದೆ ಎಂಬ ಅರಿವು ಯಾರಿಗಿತ್ತು? ಅಂಕೋಲಾ ಜಿಲ್ಲೆಯ ಕಲ್ಲೇಶ್ವರ, ಹೆಗ್ಗಾರ, ಸಿದ್ದಾಪುರ ತಾಲೂಕಿನ ಹೆಮ್ಮನಬೈಲು, ಅಕ್ಕುಂಜಿ ಸೇರಿದಂತೆ ಜಿಲ್ಲೆಯ ಒಟ್ಟು 216 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದಿಂದ ಅತೀ ಹೆಚ್ಚು ಹಾನಿಗೊಳಗಾಗಿವೆ. ಅವು ಮತ್ತೆ ಚೇತರಿಸಿಕೊಳ್ಳುವುದಕ್ಕೆ ಇನ್ನೆಷ್ಟು ಕಾಲ ಬೇಕೋ! ಕೊಡಸಳ್ಳಿ ಮತ್ತು ಕಂದ್ರ ಆಣೆಕಟ್ಟಿನಿಂದ 1 ಟಿಎಂಸಿ ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. ಜಿಲ್ಲೆಯ ಜೀವನದಿಗಳಾದ ಕಾಳಿ, ಗಂಗಾವಳಿ ಮತ್ತು ಅಘನಾಶಿನಿ ನದಿಗಳು ತುಂಬಿ ಹರಿಯುತ್ತಿವೆ. ಅಂಕೋಲಾ ಮತ್ತು ಕುಮುಟಾದಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ನೂರಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳನ್ನು ಕಳೆದ ಎರಡು ವಾರಗಳಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶಾಲೆಗಳಲ್ಲೇ ಗಂಜಿ ಕೇಂದ್ರ ತೆರೆದು ಸಂತ್ರಸ್ಥರಿಗೆ ಊಟ, ವಸತಿ ನೀಡಲಾಗಿತ್ತು.

ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

84 ಗಂಜಿ ಕೇಂದ್ರಗಳು

84 ಗಂಜಿ ಕೇಂದ್ರಗಳು

ಜಿಲ್ಲೆಯಲ್ಲಿ ಒಟ್ಟು 84 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಗಂಜಿ ಕೇಂದ್ರಕ್ಕೆ ಸಾಮಗ್ರಿಗಳನ್ನು ತರುವುದಕ್ಕೂ ಸಂಪರ್ಕಕ್ಕೆ ರಸ್ತೆಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದಲ್ಲೂ ಪ್ರವಾಹ ಇರುವುದರಿಂದ ಅಲ್ಲಿಂದ ಜಿಲ್ಲೆಗೆ ಬರುತ್ತಿದ್ದ ತರಕಾರಿಗಳು ಬರುತ್ತಿಲ್ಲ. ಆಯಾ ಪ್ರದೇಶದ ಜನರೇ ಸದ್ಯಕ್ಕೆ ಕ್ಐಲಾದ ಮತ್ತಿಗೆ ಸಹಾಯ ಮಾಡಿ, ಸಂತ್ರಸ್ಥರಿಗೆ ಕೊಂಚ ಧೈರ್ಯ ನೀಡುವ ಕೆಲಸ ಮಾಡುತ್ತಿದ್ದಾರೆ.

ಕುಡಿಯುವ ನೀರಿಗೂ ತತ್ವಾರ

ಕುಡಿಯುವ ನೀರಿಗೂ ತತ್ವಾರ

ಜಿಲ್ಲೆಯಲ್ಲಿ ಕಣ್ಣು ತೆರೆದರೆ ಎಲ್ಲಿ ನೋಡಿದರೂ ನೀರು. ಆದರೆ ಬಾಯಾರಿದರೆ ಕುಡಿಯೋಕೆ ಒಂದು ಹನಿಯೂ ಇಲ್ಲ! ಹೌದು, ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ನದಿಯ ಮರಳಲೆಲ್ಲ ನೀರಿಗೆ ಸೇರಿ ಕುಡಿಯುವ ನೀರು, ಕುಡಿಯಲು ಯೋಗ್ಯವಲ್ಲದ ಸ್ಥಿತಿ ತಲುಪಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಸರಿಸುಮಾರು 378 ಲಕ್ಷ ರೂ. ಹಾನಿ ಸಂಭವಿಸಿದೆ. ಇಲಾಖೆಗೆ ಸೇರಿದ ಜಿಲ್ಲೆಯಲ್ಲಿನ 144 ಕುಡಿಯುವ ಶುದ್ಧ ನೀರಿನ ಘಟಕಗಳು ಹಾಳಾಗಿವೆ. ಮುಂಡಗೋಡಿನ ಚಿಗಳ್ಳಿ ಜಲಾಶಯದ ಒಡ್ಡು ಒಡೆದು 400-500 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಗೋವಿನ ಜೋಳ ಸೇರಿದಂತೆ ತೋಟಗಳು ಹಾನಿಯಾಗಿದೆ. ಯಲ್ಲಾಪುರಕ್ಕೆ ಸಂಪರ್ಕ ಕೊಂಡಿಯಾಗಿದ್ದ ಮುಂಡಗೋಡ ಮಾರ್ಗ ಕೂಡ ಶಿಡ್ಲಗುಂಡಿ ಸೇತುವೆ ಕೊಚ್ಚಿ ಹೋಗಿರುವುದರಿಂದ ಬಂದ್ ಆಗಿದೆ. ಯಲ್ಲಾಪುರ ತಾಲೂಕು ಈಗ ದ್ವೀಪವಾಗಿ ಹೊರಜಗತ್ತಿನ ಸಂಪರ್ಕವಿಲ್ಲದಂತಾಗಿದೆ.

ದಾನ ಕೊಟ್ಟ ಕೈಗೆ ಬೇಡುವ ಸ್ಥಿತಿ ಬಂದರೆ...

ದಾನ ಕೊಟ್ಟ ಕೈಗೆ ಬೇಡುವ ಸ್ಥಿತಿ ಬಂದರೆ...

"ನಾಗರಪಂಚಮಿಯ ದಿನ ಬಂದ ಪ್ರವಾಹ ನಲವತ್ತು ವರ್ಷಗಳ ನಮ್ಮ ಬದುಕನ್ನೇ ನಾಶ ಮಾಡಿದೆ. ನಾವು ಉಟ್ಟ ಬಟ್ಟೆಯಲ್ಲೇ ಜೀವ ಉಳಿಸಿಕೊಳ್ಳಲು ಮನೆಯಿದ ಆಚೆ ಬಂದಿದ್ದೇವೆ. ಪ್ರವಾಹ ಕೊಂಚ ಇಳಿದ ಮೇಲೆ ಹೋಗಿ ನೋಡಿದರೆ ಮನೆಯಿಲ್ಲ! ಅದರೊಳಗಿದ್ದ ಯಾವ ಸಾಮಗ್ರಿಯೂ ಇಲ್ಲ! ಬಟ್ಟೆಯಿಲ್ಲ. ಈಗ ಯಾರದೋ ಬಳಿ ಬಟ್ಟೆ ತೆಗೆದುಕೊಂಡು ಹಾಕಿಕೊಂಡಿದ್ದೇವೆ. ಯಾವಾಗಲೂ ದಾನ ಕೊಟ್ಟ ಕೈ ಇದು. ಆದರೆ ಬೇಡಬೇಕಾದ ಸ್ಥಿತಿ ಬಂದಾಗ ಆಗುವ ಸಂಕಟವನ್ನ ಹೇಗೆ ಹೇಳೋದು? ನಮಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ಕೇಳಬೇಕೋ ಗೊತ್ತಿಲ್ಲ. ಆದರೆ ಸ್ನೇಹಿತರು, ಸಂಘ-ಸಂಸ್ಥೆಗಳು ಬಂದು ನೆರವಿಗೆ ನಿಂತಿವೆ. ನಾವು ತ್ತೆ ನೊದಲಿನಂತಾಗುತ್ತೇವೆ ಎಂಮಬ ಭರವಸೆಯನ್ನು ಇವರೆಲ್ಲ ಉಳಿಸಿದ್ದಾರೆ..." ಎಂದು ಆ ಸಂಕಟದಲ್ಲೂ ಆತ್ಮವಿಶಸ್ವಾಸ ಮರೆಯದೆ ಪ್ರಶಾಂತ ಹೆಗ್ಗಾರ್ ಮಾತನಾಡುತ್ತಿದ್ದರೆ ಕಣ್ಣಂಚಲ್ಲಿ ಹನಿ ಜಿನುಗುತ್ತದೆ!

ಕೆಲಸ ಇಲ್ಲ, ರೊಕ್ಕ ಇಲ್ಲ

ಕೆಲಸ ಇಲ್ಲ, ರೊಕ್ಕ ಇಲ್ಲ

"ಹೊಳೆ ತುಂಬಿ ಹರೀತಾ ಇದೆ. ನಮಗೆ ಕೆಲಸ ಇಲ್ಲ, ರೊಕ್ಕ ಇಲ್ಲ. ಊರಲ್ಲಿ ಯಾರ್ಯಾರ ಮನೆಯಲ್ಲಿ ಕಡಿಮೆ ಹಾನಿಯಾಗಿದಯೋ ಅವರು ಬೇರೆಯವರಿಗೆ ಊಟ ಕೊಡ್ತಿದ್ದಾರೆ. ಈಗ ಸಂಘ-ಸಂಸ್ಥೆಗಳು ಬಂದು ಅಗತ್ಯವಿದ್ದ ಮಾತ್ರೆಗಳನ್ನೆಲ್ಲ ಕೊಟ್ಟು ಹೋಗಿವೆ. ನಮ್ಮ ನೆರವಿಗೆ ಬರುವ ಮನಸ್ಸಿದ್ದರೂ, ಊರಿಗೆ ಬರುವುದಕ್ಕೇ ಆಗದಷ್ಟು ಪ್ರವಾಹ ಇತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. ನಮಗೆ ಸರ್ಕಾರದ ಕಡೆಯಿಂದ ಇನ್ನೂ ಯಾವ ಸಹಾಯವೂ ಸಿಕ್ಕಿಲ್ಲ್. ಇಂಥ ಪ್ರವಾಹ ಬಹಳ ವರ್ಶಃದ ಹಿಂದೆ ಬಂದಿತ್ತೆಂದು ನೆನಪು. ಮತ್ತೆ ಇಂಥ ಪ್ರವಾಹವನ್ನು ನೋಡಿದ್ದು ಈಗಲೇ" ಎನ್ನುತ್ತಾರೆ ಗಣಪತಿ ಸಿದ್ಧಿ.

ತಾನೇ ಸಂಕಷ್ಟದಲ್ಲಿದ್ದರೂ ನೆರವಿಗೆ ಮುಂದಾಗುವ ಮನಸ್ಸು

ತಾನೇ ಸಂಕಷ್ಟದಲ್ಲಿದ್ದರೂ ನೆರವಿಗೆ ಮುಂದಾಗುವ ಮನಸ್ಸು

ತಮ್ಮ ತೋಟ, ಗದ್ದೆಗಳೆಲ್ಲ ನೀರಿನಲ್ಲಿ ತೊಳದು ಹೋದರೂ ಉಳಿಯಲು ಮನೆಯಿದೆಯಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಸೂರಜ್ ಹೆಗಡೆ. ಜೊತೆಗೆ, ತಮಗಿಂತ ಕಷ್ಟದಲ್ಲಿರುವವರಿಗಾಗಿ ಮೆಡಿಕಲ್ ಶಾಫ್ ಮತ್ತು ವೈದ್ಯ ಸ್ನೇಹಿತರನ್ನು ಮನವಿ ಮಾಡಿ ಒಂದಷ್ಟು ಔಷಧ ಪಡೆದು ನೆರೆ ಸಂತ್ರಸ್ಥರಿಗೆ ಕಳಿಸಿಕೊಟ್ಟಿದ್ದಾರೆ.

ಬೆಳೆ ಹಾನಿಯ ಪರಿಹಾರ ಮೊತ್ತ ಹೆಚ್ಚಿಸಿ

ಬೆಳೆ ಹಾನಿಯ ಪರಿಹಾರ ಮೊತ್ತ ಹೆಚ್ಚಿಸಿ

"ಈ ಬಾರಿಯ ನೆರೆಯಿಂದ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಕೃಷಿಭೂಮಿಗೆ ನಷ್ಟ ಉಂಟಾಗಿದೆ. ಇಲಾಖೆಯವರು ಎಕರೆಗೆ 21,000ರೂ. ಹಾನಿಯಾದ ವರದಿ ನೀಡುತ್ತಿದ್ದಾರೆ. ಈ ಭಾಗದ ಜನರು ಕಡಿಮೆ ಜಮೀನಿನಲ್ಲೂ ಸಹ ಸಾಕಷ್ಟು ಖರ್ಚು ಮಾಡಿ ಅಧಿಕ ಬೆಳೆ ಬೆಳೆದಿದ್ದಾರೆ. ಸರ್ಕಾರ ನೀಡುವ ಪರಿಹಾರದ ಮೊತ್ತ ರೈತರಿಗೆ ಎಲ್ಲೂ ಸಾಲದ ಕಾರಣ ಬೆಳೆ ಹಾನಿಯ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ್ ನಾಯ್ಕ್. ಈಗಾಗಲೇ ಹಲವು ಸಂಘ ಸಂಸ್ಥೆಗಳಲು, ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುತ್ತಿರುವ ಜೊತೆಗೆ ಜಿಲ್ಲೆಯ ಯುವಕರು ನೆರೆ ಸಂತ್ರಸ್ಥರ ನೆರವಿಗೆ ಬಂದಿದ್ದು, ತಾತ್ಕಾಲಿಕವಾಗಿ ಅವರಿಗೆ ಊಟ, ಬಟ್ಟೆ, ವಸತಿ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರದ ವತಿಯಿಂದ ತಮ್ಮ ಭವಿಷ್ಯವನ್ನು ಭದ್ರವಾಗಿಸುವಂಥ ನೆರವು ಮತ್ತು ಸಹಕಾರ ಸಿಕ್ಕರೆ ನಾವು ಖಂಡಿತ, ಶೀಘ್ರವಾಗಿ ಮೊದಲಿನಂತಾಗುತ್ತೇವೆ ಎಂಬುದು ಇಲ್ಲಿನ ಜನರ ವಿಶ್ವಾಸದ ನುಡಿ.

English summary
Heavy to heavy Rain and flood in Uttara Kannada changed the picture of the district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X