• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಪರ ಹೋರಾಟದ ಶಕ್ತಿ ಎಂ ಚಿದಾನಂದ ಮೂರ್ತಿ

|

ಕನ್ನಡ ಪರ ಹೋರಾಟದ ಶಕ್ತಿಯಾಗಿದ್ದ ಸಾಹಿತಿ, ಹಿರಿಯ ಲೇಖಕ, ವಿದ್ವಾಂಸ, ಸಂಶೋಧಕ ಎಂ ಚಿದಾನಂದ ಮೂರ್ತಿ ಅವರ ನಿಧನದಿಂದ ಕನ್ನಡದ ದನಿ ಸ್ತಬ್ಧವಾಗಿದೆ. ಕನ್ನಡ ನೆಲ, ಜಲ, ಭಾಷೆ ಉಳಿಸಿ, ಬೆಳೆಸಿಕೊಂಡು ಬಂದಿದ್ದ ಪರಂಪರೆಯ ಕೊಂಡಿ ಕಳಚಿದೆ. ಶ್ವಾಸಕೋಶದ ಸೋಂಕು ಸಮಸ್ಯೆಯಿಂದ ಬಳಲುತ್ತಿದ್ದ ಎಂ.ಚಿದಾನಂದಮೂರ್ತಿ ತಮ್ಮ 88ನೇ ವರ್ಷದಲ್ಲಿ ಇಅಹಲೋಕ ಯಾತ್ರೆ ಮುಗಿಸಿದ್ದಾರೆ. ಮಗ ವಿನಯ್ ಕುಮಾರ್, ಮಗಳು ಶೋಭಾ ಸೇರಿದಂತೆ ಅಪಾರ ಶಿಷ್ಯ ಬಳಗ, ಅಭಿಮಾನಿಗಳನ್ನು ತೊರೆದಿದ್ದಾರೆ.

ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಗಳಿಸಲು ನಡೆಸಿದ ಹೋರಾಟ ಸದಾ ಸ್ಮರಣೀಯ.ಎಂ ಚಿದಾನಂದ ಮೂರ್ತಿ ಅವರ ವ್ಯಕ್ತಿಚಿತ್ರದ ಸಂಕ್ಷಿಪ್ತ ಪರಿಚಯ.

ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನ

ಚಿದಾನಂದಮೂರ್ತಿಗಳು 1931ನೇ ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ(ಈಗ ದಾವಣಗೆರೆಯಲ್ಲಿದೆ) ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಹುಟ್ಟಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆಸಿದರು. ಇಂಟರ್ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಅವರು ಹತ್ತನೆಯ ಸ್ಥಾನಗಳಿಸಿದರು. ಆದರೆ ಮೆಡಿಕಲ್ ಇಂಜಿನಿಯರಿಂಗ್ ಸೇರದೆ ಕನ್ನಡ ಆನರ್ಸ್ ಸೇರಿದರು.

ಸುತ್ತೂರು ಸಂಸ್ಥಾನದ ಉಚಿತ ವಿದ್ಯಾರ್ಥಿನಿಲಯದ ಪೋಷಣೆಯಲ್ಲಿ ಪ್ರಥಮ ವರ್ಗ, ಪ್ರಥಮ ಶ್ರೇಣಿ ಅಲ್ಲದೆ ಆಲ್ ಆನರ್ಸ್ ಚಿನ್ನದ ಪದಕ ಸಹಾ ಪಡೆದರು.

ವ್ಯಾಸಂಗದ ಜೊತೆಗೆ ವೃತ್ತಿ ಬದುಕು

ವ್ಯಾಸಂಗದ ಜೊತೆಗೆ ವೃತ್ತಿ ಬದುಕು

ವ್ಯಾಸಂಗದ ಜೊತೆಗೆ ವೃತ್ತಿ ಬದುಕು: ಆನರ್ಸ್ ಪದವಿ ಪಡೆದ ಬಳಿಕ ಎರಡು ವರ್ಷಗಳ ಕಾಲ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾದರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ 1957ರಲ್ಲಿ ಗಳಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಇವರು ಕುವೆಂಪು ಪುತೀನ ಹಾಗು ರಾಘವಾಚಾರಂತ ಕನ್ನಡದ ಮಹಾ ಸಾಹಿತಿಗಳ ಪ್ರಭಾವಕ್ಕೊಳಗಾದವರು. ಎಂ.ಎ ಓದುವಾಗಲೇ ಡಿ.ಎಲ್. ನರಸಿಂಹಾಚಾರ್ಯರ ಸೂಚನೆಯ ಮೇರೆಗೆ ಪಂಪನಿಗೆ ಹಿನ್ನೆಲೆಯಾಗಿದ್ದ ಸಾಮಾಜಿಕ ಬದುಕನ್ನು ಶಾಸನಗಳನ್ನು ಆಧರಿಸಿ ಪುನಃರಚಿಸುವ ಪ್ರಯತ್ನಕ್ಕೆ ಮೂರ್ತಿಗಳು ತೊಡಗಿದರು. ಮುಂದೆ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ‘ಪಂಪಕವಿ ಮತ್ತು ಮೌಲ್ಯಪ್ರಸಾರ'. ಆ ಮೂಲಕ ಶಾಸನಕ್ಷೇತ್ರದೆಡೆಗೆ ಹೊರಳಿದ ಮೂರ್ತಿಗಳು ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ನಿಬಂಧ ಸಿದ್ಧಪಡಿಸಿದರು. 1964ರಲ್ಲಿ ಇದೇ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದರು.

* 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು.

* 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಅಧ್ಯಾಪಕರಾದರು.

* 1968ರವರೆಗೆ ಅಲ್ಲಿ ಅಧ್ಯಾಪಕರಾಗಿ, ಕನ್ನಡ ರೀಡರ್ ಆಗಿದ್ದು ಬಳಿಕ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿದರು. ಚಿದಾನಂದ ಮೂರ್ತಿ ಅವರು ಬೆಂಗಳೂರು ವಿಶ್ವವಿದ್ಯಾಲದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.

* 1990ರ ಅಕ್ಟೋಬರ್ 10ರಂದು ಸ್ವಯಂಸೇವಾ ನಿವೃತ್ತಿ ಪಡೆದರು.

ಸಂಶೋಧನೆಗಾಗಿ ನಿರಂತರ ಹುಡುಕಾಟ

ಸಂಶೋಧನೆಗಾಗಿ ನಿರಂತರ ಹುಡುಕಾಟ

* ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಗ್ರೀಸ್, ಈಜಿಪ್ಟ್, ಥೈಲಾಂಡ್, ಜಪಾನ್, ಹವಾಯ್, ಸ್ವಿಟ್ಜರ್ಲ್ಯಾಂಡ್ ಮುಂತಾದ ದೇಶಗಳನ್ನು ಅವರು ಸುತ್ತಿದ್ದಾರೆ. ಸಂಶೋಧನೆಗೆ, ಕನ್ನಡದ ಕಾರಣಕ್ಕೆ ಕರ್ನಾಟಕದ ಬೇರೆ ಬೇರೆ ಪ್ರಾಂತ್ಯಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.

ನಾಡೋಜ ಚಿದಾನಂದ ಮೂರ್ತಿಯವರ ಹುಟ್ಟೂರಿನಲ್ಲಿ ನೀರವ ಮೌನ...

* ಬರ್ಕ್ಲಿ, ಫಿಲಡೆಲ್ಫಿಯ, ಸ್ಟಾನ್ಫೋರ್ಡ್ ಮುಂತಾದ ಹಲವಾರು ವಿಶ್ವವಿದ್ಯಾಲಯಗಳು ಮತ್ತು ವಿಶ್ವಮಟ್ಟದ ಐತಿಹಾಸಿಕ ಬಾಷಾವಿಜ್ಞಾನ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರು ಕನ್ನಡ ಶಕ್ತಿ ಕೇಂದ್ರದೊಂದಿಗೆ ಸಹ ಕೆಲಸ ಮಾಡಿದ್ದಾರೆ. ಚಿ. ಮೂ ರವರು ಕನ್ನಡ ಭಾಷೆ ಹಾಗು ಕರ್ನಾಟಕದ ಇತಿಹಾಸದ ಕುರಿತು ಹಲವಾರು ಪುಸ್ತಕಗಳನು ಪ್ರಕಟಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಅವರ ಸಂಶೋಧನದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಹಲವು ಸಂಶೋಧನಾ ಕೃತಿ ರಚಿಸಿದ್ದಾರೆ

ಹಲವು ಸಂಶೋಧನಾ ಕೃತಿ ರಚಿಸಿದ್ದಾರೆ

ಕೃತಿ: ಚಿದಾನಂದಮೂರ್ತಿಗಳು ಇಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ, ನಾನೂರಕ್ಕೂ ಹೆಚ್ಚು ಸಂಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ. ಭಾಷೆ, ವ್ಯಾಕರಣ, ಸ್ಥಳನಾಮ, ಛಂದಸ್ಸು, ಗ್ರಂಥ ಸಂಪಾದನೆ, ಸಾಹಿತ್ಯ ಚರಿತ್ರೆ, ಜಾನಪದ, ಶಾಸನ, ಕರ್ಣಾಟಕ ಇತಿಹಾಸ -ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ.

ತೀ. ನಂ. ಶ್ರೀಕಂಠಯ್ಯ ಅವರು ಚಿದಾನಂದಮೂರ್ತಿಗಳನ್ನು "ಕನ್ನಡ ಭಾಷಾ ಸಾಹಿತ್ಯಗಳ ನೈಷ್ಠಿಕ ವಿದ್ಯಾರ್ಥಿ" ಎಂದು ಮೆಚ್ಚಿದ್ದಾರೆ. ಅದರ ಸಮರ್ಥನೆ ಎಂಬಂತೆ ಮೂರ್ತಿಗಳು ಕನ್ನಡ ಸಾಹಿತ್ಯ ಚರಿತ್ರೆಯ ಕ್ಷೇತ್ರದಲ್ಲಿ ವಿಫುಲವಾಗಿ ಕೆಲಸಮಾಡಿದ್ದಾರೆ. ಕವಿರಾಜಮಾರ್ಗ ಕಾಲದ ಕನ್ನಡ ಸಾಹಿತ್ಯದಿಂದ ಹಿಡಿದು ಮುದ್ದಣ್ಣನವರೆಗೆ ಅವರ ಬರವಣಿಗೆ ವ್ಯಾಪಿಸಿದೆ.

1960ರ ದಶಕಗಳಲ್ಲಿ ತಾವು ಪ್ರಕಟಿಸಿದ ಹಲವಾರು ಲೇಖನಗಳಲ್ಲೇ ಉಂಬರಿ, ಇರ್, ಡುಂಡುಚಿ, ಅಮ್ಮ, ಅಬ್ಬೆ, ಅಲ್ಲಮ, ಬಾಮಬ್ಬೆ, ಶಬ್ದಗಳನ್ನು ಕನ್ನಡ ಭಾಷೆ, ವ್ಯಾಕರಣ, ಅವಸ್ಥಾಂತರಗಳ ಹಿನ್ನೆಲೆಯಲ್ಲಿ ಮೂರ್ತಿಗಳು ಪರಿಶೀಲಿಸಿದ್ದಾರೆ. ಅನಂತರ ''ಭಾಷಾ ವಿಜ್ಞಾನದ ಮೂಲತತ್ವಗಳು'' (1965), ''ವಾಗಾರ್ಥ'' (1981) ಎಂಬ ಎರಡು ಮುಖ್ಯವಾದ ಅವರ ಭಾಷಾಸಂಬಂಧವಾದ ಕೃತಿಗಳು ಪ್ರಕಟವಾದವು.

ಕೃತಿಗಳ ಪಟ್ಟಿ

ಕೃತಿಗಳ ಪಟ್ಟಿ

ವೀರಶೈವ ಧರ್ಮ, ಭಾರತೀಯ ಸಂಸ್ಕ್ರತಿ ಪ್ರಕಾಶನ, 2000

ವಾಗರ್ಥ, ಬಪ್ಕೋ ಪ್ರಕಾಶನ, 1981

ವಕಾನ ಸಾಹಿತ್ಯ 1975

Sweetness and light Sahithigala Kalavidara Balaga, 1989 [microform]

ಸಂಶೋಧನೆ, 1967

ಸಂಶೋಧನಾ ತರಂಗ ಸರಸ, ಸಾಹಿತ್ಯ ಪ್ರಕಾಶನ, 1966

ಪುರಾಣ ಸೂರ್ಯಗ್ರಹಣ, ಐಬಿಎಚ್ ಪ್ರಕಾಶನ, 1982

ಪಾಂಡಿತ್ಯ ರಸ, ಕನ್ನಡ ವಿಶ್ವವಿದ್ಯಾಲಯ, 2000

ಸೂನ್ಯ ಸಂಪಾದನೆಯನ್ನು ಕುರಿತು. 1962

ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ, 1985

ಲಿಂಗಾಯತ ಅಧ್ಯಯನಗಳು, ವಾಗ್ದೇವಿ ಪುಸ್ತಕಗಳು, 1986

ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ. 1973

ಕರ್ನಾಟಕ ಸಂಸ್ಕ್ರತಿ, ಕನ್ನಡ ಸಾಹಿತ್ಯ ಪರಿಷತ್ತು, 1991

ಕರ್ನಾಟಕ-ನೇಪಾಳ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, 2003

ಕನ್ನಡಾಯಣ, ಪ್ರಿಯದರ್ಶಿನಿ ಪ್ರಕಾಶನ, 1999

ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ. 1966

ಹೊಸತು ಹೊಸತು, ಕನ್ನಡ ವಿಶ್ವವಿದ್ಯಾಲಯ,1993

ಗ್ರಾಮೀಣ, ಬಪ್ಕೋ ಪ್ರಕಾಶನ, 1977

ಚಿದಾನಂದ ಸಮಗ್ರ ಸಂಪುಟ, ಸಪ್ನಾ ಬುಕ್ ಹೌಸ್, 2002

ಬಸವಣ್ಣ, National Book Trust, India, 1972

ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ

ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ

ಕನ್ನಡದ ಬಗೆಗಿನ ಚಿದಾನಂದಮೂರ್ತಿಗಳ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಮೂರ್ತಿಗಳಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಭಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ, ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

ಚಿದಾನಂದಮೂರ್ತಿ ಜಾನಪದ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ‘ಗ್ರಾಮೀಣ' ಹಾಗೂ ‘ಪಗರಣ ಮತ್ತು ಇತರ ಸಂಪ್ರಯದಾಯಗಳು' ಎಂಬ ಎರಡು ಪುಸ್ತಕಗಳಲ್ಲಿ ಅವರ ಈ ಸಂಬಂಧವಾದ ಸಂಪ್ರಬಂಧಗಳು ಸಂಗ್ರಹಗೊಂಡಿವೆ

English summary
Kannada writer, researcher and historian M Chidananda Murthy. Chidananda Murthy died on Jan 11, 2029. Here is his brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X