ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

"ಈಗ ಎದ್ದಿರುವ ಪ್ರತ್ಯೇಕ ರಾಜ್ಯದ ಕೂಗಿನ ಹಿಂದೆ ಇರುವುದು ಜಾತಿ ಮತ್ತು ರಾಜಕೀಯ ಕಾರಣಗಳಷ್ಟೇ. ಅದರಲ್ಲೂ ಈ ಮೈತ್ರಿ ಸರಕಾರದ ಸಂಪುಟದಲ್ಲಿ ಅದ್ಯಾಕೆ ಹಾಗಾಯಿತೋ ಉತ್ತರ ಕರ್ನಾಟಕ ಭಾಗದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ರಂಥ ಕಾಂಗ್ರೆಸ್ ನ ಹಿರಿಯ ನಾಯಕರು ಕಡೆಗಣನೆಗೆ ಒಳಗಾದರು ಎಂಬ ಭಾವನೆ ಮೂಡಿತು" ಇವೆಲ್ಲ ಅಂಶಗಳು ಕೆಲಸ ಮಾಡಿದಂತಿವೆ ಎಂದರು ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಆಗಸ್ಟ್ ಎರಡರಂದು ಕರೆ ನೀಡಿರುವ ಹದಿಮೂರು ಜಿಲ್ಲೆಗಳ ಬಂದ್ ಬಗ್ಗೆ ಒನ್ಇಂಡಿಯಾ ಕನ್ನಡ ಅವರನ್ನು ಮಾತನಾಡಿಸಿತು. ಮೂಲತಃ ವಿಜಯಪುರದವರು ಹಾಗೂ ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾಗಿ ರಾಜ್ಯ ರಾಜಕೀಯವನ್ನು, ಭೌಗೋಳಿಕ, ಸಾಮಾಜಿಕ ಸಂಗತಿಗಳನ್ನು ತುಂಬ ಚೆನ್ನಾಗಿ ಬಲ್ಲ ಅವರು, ಹೊಸ ಬೇಡಿಕೆ ವಿಚಾರವನ್ನು ಇಷ್ಟಿಷ್ಟಾಗಿ ಬಿಡಿಸಿಟ್ಟರು.
ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?
"ಈ ಬಾರಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಸರಿಯಾದ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಕೂಗೆದ್ದಿತು. ಎಚ್.ಕೆ.ಪಾಟೀಲ್ ಅವರು, ಇದೇನು ಬಿಬಿಎಂಪಿ ಬಜೆಟ್ಟೋ ಅಥವಾ ಕರ್ನಾಟಕ ಬಜೆಟ್ಟೋ ಅಂತ ತಮ್ಮ ಅಸಮಾಧಾನ ಬಹಿರಂಗವಾಗಿ ಹೇಳಿಕೊಂಡರು. ಆದರೆ ಇವೇ ಕಾರಣಗಳಿಂದಲೇ ಅಸಮಾಧಾನ ಎದ್ದಿದೆ ಎಂದು ತೀರ್ಮಾನ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದರು.

ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಮಂದಿ ಸಿಎಂ
ಮೈಸೂರು ಭಾಗದಲ್ಲಿ ಅರಸರ ಆಳ್ವಿಕೆ ಇತ್ತು. ಆ ಭಾಗದ ಸುತ್ತ ಮುತ್ತ ಆದ ಅಭಿವೃದ್ಧಿ ಕಾರ್ಯಗಳನ್ನು ಉತ್ತರ ಕರ್ನಾಟಕದ ಜತೆಗೆ ಹೋಲಿಸುವುದಕ್ಕೆ ಸಾಧ್ಯವೇ ಇಲ್ಲ. ಹಾಗಂತ ಉತ್ತರ ಕರ್ನಾಟಕದಿಂದ ಯಾರೂ ಮುಖ್ಯಮಂತ್ರಿಗಳೇ ಆಗಲಿಲ್ಲವಾ? ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಧರಂ ಸಿಂಗ್, ಜಗದೀಶ್ ಶೆಟ್ಟರ್ ಹೀಗೆ ಬಹಳ ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಇನ್ನು ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಹಣೆಪಟ್ಟಿ ಕೂಡ ದಶಕಗಳಿಂದಲೂ ಹಾಗೇ ಉಳಿದುಹೋಗಿದೆ. ಆ ಭಾಗಕ್ಕೆ ಶಿಕ್ಷಣ, ನೀರಾವರಿ, ಅಭಿವೃದ್ಧಿಗೆ ಅಂತ ಇಂತಿಷ್ಟು ಹಣ ಮೀಸಲಿಟ್ಟರೆ ಸಾಲದು. ಅದನ್ನು ಇಷ್ಟು ಕಾಲಾವಧಿಯೊಳಗೆ ಸರಿಯಾದ ದಾರಿಯಲ್ಲಿ ಖರ್ಚು ಮಾಡುವ ಗುರಿ ಹಾಕಿಕೊಳ್ಳಬೇಕು. ಡಿ.ಎಂ.ನಂಜುಂಡಪ್ಪ ಅವರು ತಮ್ಮ ವರದಿಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. ಹದಿನಾರು ಸಾವಿರ ಕೋಟಿ ರುಪಾಯಿ ಇಷ್ಟು ವರ್ಷದಲ್ಲಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಖರ್ಚು ಮಾಡಬೇಕು ಅಂದಿದ್ದರು. ಅದರಲ್ಲಿ ಯಾವ ಕೆಲಸಕ್ಕೆ ಎಷ್ಟು ಖರ್ಚಾಗಿದೆ ಅನ್ನೋದರ ಲೆಕ್ಕ ಇದೆಯಾ?

ಎಚ್ ಡಿಕೆ ಮುಖ್ಯಮಂತ್ರಿ ಆಗಿದ್ದಾಗಲೇ ಸುವರ್ಣಸೌಧ ನಿರ್ಮಾಣ
ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಅಂತ ಇದೆ. ಅದರಲ್ಲಿ ಇರುವವರೆಲ್ಲ ಶಾಸಕರೇ. ಅದರೊಳಗೆ ಯೋಜನೆ ಮಾಡುವಂತಹ, ದೂರದೃಷ್ಟಿ ಇರುವಂಥವರನ್ನು ಒಳಗೊಳ್ಳಬೇಕು. ವರದಿ ಕೊಟ್ಟು, ಇಪ್ಪತ್ತು ಸಾವಿರ ಕೋಟಿ ಅಂತ ಹಣ ಮೀಸಲಿಟ್ಟೆ ಎಂಬ ಧೋರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಅದರ ಖರ್ಚನ್ನು ಇಂತಿಷ್ಟೇ ಅವಧಿಯಲ್ಲಿ ಮಾಡಬೇಕು. ಈಗಲೂ ಕಲಬುರಗಿ, ಬೀದರ್, ಬಾಗಲಕೋಟೆ ಜಿಲ್ಲೆಗಳನ್ನು ಮೈಸೂರು ಭಾಗಕ್ಕೆ ಹೋಲಿಸಲು ಸಾಧ್ಯವಿಲ್ಲ. ಈಗ ಮೈಸೂರು ಭಾಗ ಅನ್ನೋ ಮಾತು ಬಂದಿದ್ದರಿಂದ ಜನರ ಮನಸ್ಸಿನಲ್ಲಿ ಎಂಥ ಭಾವನೆ ಇದೆ ಅಂತ ಹೇಳ್ತಿದ್ದೀನಿ. ಈಗ ಅಧಿಕಾರದಲ್ಲಿರುವ ಜೆಡಿಎಸ್ ದಕ್ಷಿಣ ಕರ್ನಾಟಕದ ಹಾಸನ, ಮಂಡ್ಯ, ತುಮಕೂರು, ರಾಮನಗರ, ಮೈಸೂರಿನ ಕೆಲ ಭಾಗದಲ್ಲಿ ಮಾತ್ರ ಪ್ರಬಲವಾಗಿರುವ ಪಕ್ಷ. ಆದ್ದರಿಂದ ಬಜೆಟ್ ನಲ್ಲಿ ಆ ಭಾಗಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಿದ್ದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಅನ್ನೋದು ಮರೆಯಬಾರದು.
ಆಗಸ್ಟ್ 2ರ ಉತ್ತರ ಕರ್ನಾಟಕ ಬಂದ್ : ಯಾರು, ಏನು ಹೇಳಿದರು?

ಇದೇನಿದು ಜಾತಿ ಲೆಕ್ಕಾಚಾರ?
ಇನ್ನು ಈ ಪ್ರತ್ಯೇಕ ರಾಜ್ಯದ ಕೂಗಿನ ಹಿಂದೆ ಇರುವುದು ಜಾತಿ ಲೆಕ್ಕಾಚಾರ. ಉತ್ತರ ಕರ್ನಾಟಕದಲ್ಲಿ ಲಿಗಾಯತರ ಪ್ರಭಾವ ಹೆಚ್ಚಿದ್ದರೆ, ದಕ್ಷಿಣದಲ್ಲಿ ಒಕ್ಕಲಿಗರ ಪಾರಮ್ಯ ಇದೆ. ಒಂದು ವೇಳೆ ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾದರೆ ಲಿಂಗಾಯತರೇ ಮುಖ್ಯಮಂತ್ರಿ ಆಗಬಹುದು ಎಂಬ ಲೆಕ್ಕಾಚಾರ ಇರಬಹುದು. ಅದರಲ್ಲೂ ಈ ಸಲ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಹಾಗೂ ಎಂ.ಬಿ.ಪಾಟೀಲ್ ಅಂಥವರನ್ನು ಯಾಕೆ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ವಿಚಾರವೇ ಅಚ್ಚರಿಗೆ ಕಾರಣವಾಗುತ್ತದೆ. ಇನ್ನೊಂದು ವಿಷಯ ಗಮನಿಸಿ, ಬರೀ ಎರಡು ವರ್ಷದ ಹಿಂದೆ ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬ ಧ್ವನಿ ಎತ್ತಿದಾಗ ಅವರನ್ನು ಗೇಲಿ ಮಾಡಿದ್ದರು. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಅವರ ಧ್ವನಿಗೆ ಬೆಂಬಲವಾಗಿ ಇಷ್ಟು ದೊಡ್ಡ ಮಟ್ಟದ ಮಾನ್ಯತೆ ಸಿಗುತ್ತಿದೆ ಅಂದರೆ ಇದು ಅಪಾಯದ ಮುನ್ಸೂಚನೆ.

ನಾಜೂಕಾಗಿ ಪರಿಸ್ಥಿತಿ ನಿರ್ವಹಿಸಬೇಕಿತ್ತು
ಇನ್ನೊಂದು ಮುಖ್ಯ ವಿಷಯ ಏನೆಂದರೆ ಭಿನ್ನಾಭಿಪ್ರಾಯಗಳು ಜಿಲ್ಲೆಗಳ ಮಧ್ಯ ಕೂಡ ಇರುತ್ತವೆ. ಬೆಳಗಾವಿಯವರಿಗೆ ತಮ್ಮ ಜಿಲ್ಲೆಯು ಹುಬ್ಬಳ್ಳಿಗಿಂತ ಹೆಚ್ಚು ಅಭಿವೃದ್ಧಿ ಆಗಿರಬೇಕಿತ್ತು ಎಂಬ ಭಾವನೆ ಇರುತ್ತದೆ. ಅದೇ ರೀತಿ ಆಯಾ ಜಿಲ್ಲೆಯವರಿಗೆ ಇತರ ಜಿಲ್ಲೆಯ ಬಗ್ಗೆ ಅಸಮಾಧಾನ ಇರುತ್ತದೆ. ಆದರೆ ಈ ಸಂದರ್ಭವನ್ನು ಕುಮಾರಸ್ವಾಮಿ ಅವರು ತುಂಬ ಸೂಕ್ಷ್ಮವಾಗಿ ನಿರ್ವಹಿಸಬೇಕಿತ್ತು. ಯಾವ ಸರಕಾರಗಳು ಉತ್ತರ ಕರ್ನಾಟಕ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿವೆ ಎಂಬ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ದೇವೇಗೌಡರು ಹೇಳಿಕೆ ನೀಡಬಾರದಿತ್ತು. ಏಕೆಂದರೆ, ಸರಕಾರಗಳು ಎಷ್ಟೇ ಅನುದಾನ ನೀಡಿದ್ದರೂ ಇನ್ನಷ್ಟು ಅಭಿವೃದ್ಧಿ ಮಾಡುವ ಅಗತ್ಯ ಹಾಗೂ ಅವಕಾಶ ಇದ್ದೇ ಇರುತ್ತದೆ. ಈ ಪ್ರತ್ಯೇಕ ರಾಜ್ಯದ ಧ್ವನಿಯನ್ನು ಕಡಿಮೆ ಮಾಡಲು ಅಥವಾ ಪೂರ್ತಿಯಾಗಿ ಇಲ್ಲದಂತೆ ಮಾಡಲು ಸರಕಾರ ಯಾವ ರೀತಿಯ ಸಕಾರಾತ್ಮಕ ಹೆಜ್ಜೆಗಳನ್ನು ಇರಿಸಬೇಕು ಎಂಬುದನ್ನು ಈಗ ತುರ್ತಾಗಿ ಯೋಚಿಸಬೇಕು.
ಪ್ರತ್ಯೇಕ ರಾಜ್ಯದ ಬೇಡಿಕೆ ತಳ್ಳಿ ಹಾಕಿದ ಒನ್ಇಂಡಿಯಾ ಕನ್ನಡ ಓದುಗರು

ಸಮಸ್ಯೆಗೆ ಪ್ರತ್ಯೇಕ ರಾಜ್ಯವೇ ಪರಿಹಾರವಲ್ಲ
ಅಭಿವೃದ್ಧಿಯಲ್ಲಿ ಹಿನ್ನಡೆ ಎಂಬುದು ಎಲ್ಲಿಂದ ಶುರುವಾಗುತ್ತದೆ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ. ಉತ್ತಮ ಮೂಲ ಸೌಕರ್ಯ ಇಲ್ಲದ ಕಡೆ ಹಾಗೂ ಸರಕಾರಗಳಿಂದ ಅನುಕೂಲಕರವಾದ ಉದ್ಯಮಸ್ನೇಹಿ ವಾತಾವರಣ ಇಲ್ಲದಿದ್ದರೆ ಹೊಸ ಕಾರ್ಖಾನೆಗಳು, ಕಚೇರಿಗಳು ಆರಂಭವಾಗುವುದಿಲ್ಲ. ಉದ್ಯೋಗ ಸೃಷ್ಟಿ ಆಗುವುದಿಲ್ಲ. ಆದಾಯ ಇಲ್ಲದೆ ಜೀವನ ಮಟ್ಟ ಕೂಡ ಸುಧಾರಣೆ ಆಗಲ್ಲ. ಉದ್ಯೋಗ ಸೃಷ್ಟಿ ಆಗದೆ ಜನರು ಗುಳೇ ಹೋಗಬೇಕಾಗುತ್ತದೆ. ತಮ್ಮ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳನ್ನು ಜೊತೆಗೆ ಕರೆದೊಯ್ಯಲಾಗದೆ ಬಾಲ್ಯ ವಿವಾಹ ಮಾಡುತ್ತಾರೆ. ಮೊದಲೇ ಅಪೌಷ್ಟಿಕತೆಯಿಂದ ಬಳಲುವ ಅಂಥ ಹೆಣ್ಣುಮಕ್ಕಳು ಚಿಕ್ಕವಯಸ್ಸಿಗೆ ಗರ್ಭಿಣಿಯರಾಗಿ ಹೆರಿಗೆ ಸಂದರ್ಭದಲ್ಲಿ ತೀರಿಕೊಳ್ಳುವ ಸಂಭವ ಕೂಡ ಹೆಚ್ಚಿರುತ್ತದೆ. ಒಂದು ವೇಳೆ ಜಮೀನಿದ್ದರೂ ವಿದ್ಯುತ್, ನೀರಾವರಿ ಹಾಗೂ ಕೆಲಸಕ್ಕೆ ಜನ ಕೂಡ ಸಿಗದಿದ್ದರೆ ಏನು ಮಾಡಲು ಸಾಧ್ಯ? ಸಮಸ್ಯೆಯ ಆಳ ಹೀಗೆ ಹೋಗುತ್ತಲೇ ಇರುತ್ತದೆ. ಆದರೆ ಅದಕ್ಕೆ ಪ್ರತ್ಯೇಕ ರಾಜ್ಯವೇ ಪರಿಹಾರ ಅಂತ ಅನ್ನಿಸುವುದಿಲ್ಲ.