• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ರೇಡಿಯೋದಿನದಂದು ಸವಿನೆನಪು ಸಾವಿರ ನೆನಪು...

By ತಿರು ಶ್ರೀಧರ, ಯುಎಐ
|

ನಮ್ಮ ಬದುಕಿನ ಅಮೂಲ್ಯ ನೆನಪುಗಳಲ್ಲಿ ರೇಡಿಯೋಗೆ ವಿಶಿಷ್ಟ ಸ್ಥಾನವಿದೆ. ರೇಡಿಯೋ ಅಂದರೆ ನೆನಪುಗಳೊಂದಿಗೆ ನಾನೂ ಚಿಕ್ಕವನಾದ ಭಾವ ಮೂಡಿ ಮನ ಬಾಲ್ಯದತ್ತ ಹಿಂದಕ್ಕೋಡುತ್ತದೆ. ನಾಲ್ಕೈದು ವರ್ಷದ ಹುಡುಗನಿರಬೇಕು. ನಮ್ಮ ಮನೆಗೆ ಒಂದು ಸೆಕೆಂಡ್ ಹ್ಯಾಂಡ್ ಮರ್ಫಿ ರೇಡಿಯೋ ಬಂತು. ಆ ಯಂತ್ರ "ವಾರ್ತೆಗಳು ಓದುತ್ತಿರುವವರು ರಂಗರಾವ್" ಎಂದು ನುಡಿಯಲು ಪ್ರಾರಂಭಿಸಿದ್ದು ಕೂಡಾ ಅಚ್ಚರಿಯ ವಿಷಯವಾಗಿ ಈಗಲೂ ನೆನಪಿದೆ. ಅದರೊಳಗೆ ಯಾರು ಹೋಗಿ ಕೂತಿದ್ದಾರೆ ಎಂದು ನೋಡುವ ಎಂದರೆ ಅದನ್ನು ಐದು ಅಡಿಗಿಂತ ಎತ್ತರದಲ್ಲಿ ಒಂದು ಗೋಡೆ ಸ್ಟಾಂಡಿನ ಮೇಲೆ ಬೇರೆ ಕೂರಿಸಿಬಿಟ್ಟಿದ್ದರು. ಆದರೂ ಆ ರೇಡಿಯೋದಲ್ಲಿ ವಾರ್ತೆ ಹೇಳುವವನು ಹೇಗೆ ಹೋದ, ಯಾವಾಗ ಅಲ್ಲಿಂದ ಎದ್ದು ಬರುತ್ತಾನೆ ಎಂಬುದು ಒಂದು ದೊಡ್ಡ ವಿಸ್ಮಯವಾಗಿತ್ತು.

ಮುಂದೆ ಆ ರೇಡಿಯೋದಲ್ಲಿ ಬರುವವರು ಬರೀ ವಾರ್ತೆ ಓದುವವ ಮಾತ್ರ ಆಗಿರಲಿಲ್ಲ. ಆ ರೇಡಿಯೋದಲ್ಲಿ ಸಂಗೀತ, ಸುಪ್ರಭಾತ ಇತ್ಯಾದಿ ಕೂಡಾ ಬರತೊಡಗಿದಾಗ ಯಾರಾದ್ರೂ ಬಂದು ಏನಾದ್ರೂ ಮಾಡಿಕೊಂಡು ಹೋಗಲಿ ಎಂಬ ಭಾವ ಬಂದುಬಿಟ್ಟಿತು. ಕ್ರಮೇಣ ಓದುವ ದಿನಗಳು ಪ್ರಾರಂಭವಾದಂತೆ ರೇಡಿಯೋದ ಉಪಯೋಗ ಹೆಚ್ಚು ಹೆಚ್ಚು ಅರ್ಥವಾಗತೊಡಗಿತು!

ಯುರೋಪಿಗೂ ಲಗ್ಗೆ ಇಟ್ಟ ಕನ್ನಡದ ಏಕೈಕ ಆನ್ಲೈನ್ ರೇಡಿಯೋ!

ಕಾರಣವಿಷ್ಟೇ, ಮನೆಯಲ್ಲಿ ಯಾರಾದರೂ ಯಾವಾಗಲೂ ರೇಡಿಯೋವನ್ನು ಬ್ಯುಸಿಯಾಗಿಟ್ಟಿರುತ್ತಿದ್ದರು. ರೇಡಿಯೋ ಕೇಳುತ್ತಾ ಓದಿನ ಶಾಸ್ತ್ರ ಮಾಡುವುದು ಅಷ್ಟೊಂದು ತ್ರಾಸದಾಯಕವಲ್ಲ ಅಲ್ವ! ಪಾಪ ಈಗಿನ ಹುಡುಗರು ಟಿ.ವಿ ನೋಡ್ಕೊಂಡು ಓದುವ ಶಾಸ್ತ್ರ ಮಾಡೋ ಹಾಗಿಲ್ಲ. ಸುಲಭವಾಗಿ ಗೊತ್ತಾಗಿಬಿಡುತ್ತೆ.

ರೇಡಿಯೋದ ಮತ್ತೊಂದು ನೆನಪು ಅಂದ್ರೆ ಅಂದಿನ ದಿನದಲ್ಲಿ ರೇಡಿಯೋದಲ್ಲಿ ಬರುತ್ತಿದ್ದ ಸಿನಿಮಾ ಸೌಂಡ್ ಟ್ರಾಕ್ ಅಥವಾ ಸಿನಿಮಾ ಧ್ವನಿವಾಹಿನಿ. ಅಂದಿನ ದಿನಗಳಲ್ಲಿ ರೇಡಿಯೋದಲ್ಲಿ ಸಿನಿಮಾ ಧ್ವನಿವಾಹಿನಿ ಬರುತ್ತೆ ಅಂದ್ರೆ ಮನೆಯವರೆಲ್ಲ ಸಿನಿಮಾಗೆ ಹೊರಡುವಷ್ಟೇ ನೀಟಾಗಿ ಡ್ರೆಸ್ ಮಾಡ್ಕೊಂಡು ಸಿದ್ಧ ಮಾಡಿಕೊಳ್ತಾ ಇದ್ರು. ಕಾರಣ ರೇಡಿಯೋ ಇಲ್ದೇ ಇರೋರು, ರೇಡಿಯೋ ಇರುವವರ ಮನೆಗೆ ಬರ್ತಾ ಇದ್ರು. ಒಟ್ಟಿಗೆ ಸಿನಿಮಾ ಸಂಭಾಷಣೆ ಕೇಳಿ ಆನಂದಪಡ್ತಾ ಇದ್ರು. ವಿಮರ್ಶೆ ಮಾಡ್ತಾ ಇದ್ರು. ಸತ್ಯ ಹರಿಶ್ಚಂದ್ರ ಸಿನಿಮಾ ಬಂದಾಗ ಅಲ್ಲಿ ಹರಿದ ಕಣ್ಣಿನ ಕೋಡಿಯಲ್ಲಿ ಎಷ್ಟು ಬಕೆಟ್ ನೀರು ತುಂಬುತ್ತಿತ್ತು ಎಂಬುದು ಈಗಲೂ ಲೆಕ್ಕಕ್ಕೆ ಸಿಗದಂತದ್ದು.

 ಬಿನಾಕಾ ಗೀತ್ ಮಾಲಾ...

ಬಿನಾಕಾ ಗೀತ್ ಮಾಲಾ...

ರೇಡಿಯೋದ ಮಹತ್ವದ ಪ್ರೀತಿ ಪಾತ್ರ ಉಪಯೋಗವೆಂದರೆ ಸಂಗೀತ ಮತ್ತು ಸಿನಿಮಾ ಸಂಗೀತ. ಅಂದಿನ ಬಿನಾಕಾ ಗೀತ್ ಮಾಲಾ, ಅದರ ನಿರ್ವಾಹಕ ಅಮೀನ್ ಸಯಾನಿಯ ಸುಂದರ ಮಾತುಕತೆ, ಅಲ್ಲಿ ಹರಿಯುತ್ತಿದ್ದ ರಫಿ, ಕಿಶೋರ್, ಲತಾ ಅಂತಹ ಶ್ರೇಷ್ಠ ಮಾಧುರ್ಯ ಇವೆಲ್ಲ ಮರೆಯಲಾಗದ್ದು. ಕನ್ನಡ ಚಿತ್ರಗೀತೆಗಳು ಬರಲಿ ಎಂದು ನ್ಯೂಸ್ ಮುಗಿಯುವುದೇ ಕಾಯುತ್ತಿದ್ದೆವು. ಹಾಗಾಗಿ, ವಿಷ್ಣುವಿನದು ಕೇವಲ ಸಹಸ್ರನಾಮ ಸ್ಮರಣೆಯಾದರೆ ನೆಹರೂ, ಇಂದಿರಾ ಗಾಂಧಿ ಅವರ ಸ್ಮರಣೆ ಮಾತ್ರ ಹಲವು ಕೋಟಿಗಳನ್ನು ನಮ್ಮ ಕಿವಿಗಳು ಹೀರಿ ಪುನೀತವಾಗಿವೆ.

ಇವೆಲ್ಲದರ ಜೊತೆಗೆ ಆಗಾಗ ಗಾಂಧೀ ಸ್ಮೃತಿ, "ಈ ವಾರದ ಕಾರ್ಯಕ್ರಮಗಳ ಪಕ್ಷಿನೋಟ" ಎನ್ನುತ್ತಿದ್ದ ಕೃಷ್ಣಮಾಚಾರ್, "ಏನ್ ಮಕ್ಳೆ, ಪುಸ್ತಕ ಪೆನ್ಸಿಲ್ಲು ರೆಡೀನಾ" ಎನ್ನುತ್ತಿದ್ದ ನಿರ್ಮಲಾ ದೇವಿ, ಆರ್ ಕೆ ಶ್ರೀಕಂಠನ್ ಸಂಗೀತ ಪಾಠ, "ಅಯ್ಯೋ ಕಾಫಿ ಮರ್ತೇ ಬುಟ್ಟೆ" ಅನ್ನುತ್ತಿದ್ದ ಎ. ಎಸ್. ಮೂರ್ತಿ ಇವರೆಲ್ಲರ ನೆನಪು ಹಸುರು ಹಸುರಾಗಿದೆ. ಹೀಗೇ ಒಂದು ದಿನ ಆಕಾಶವಾಣಿ ವಾಣಿಜ್ಯ ವಿಭಾಗ ಬಂದಾಗ ಅದರಲ್ಲಿ ಬರುತ್ತಿದ್ದ ‘ಬೋನಸ್ ನೊರೆ ಮಿನು ಮಿನುಗಿತು, ಮಿನುಗು ತಂದಿತು ಬೋನಸ್', "ಫಳ ಫಳದಲ್ಲಿ ಇಡ್ಲಿ ಮೀರಿಸ್ತದೆ ಸಾರ್, ನಿಮ್ಮ ರಿನ್ ಬಿಳುಪಿನ ಶರ್ಟು", "ಮಮ್ಮಿ ಮಮ್ಮಿ ಮಾಡರ್ನ್ ಬ್ರೆಡ್, ಅಧಿಕ ಪೌಷ್ಟಿಕ ಮಾಡರ್ನ್ ಬ್ರೆಡ್" ಇತ್ಯಾದಿಗಳೆಲ್ಲಾ ಅಲ್ಲಿ ಬರುತ್ತಿದ್ದ ಚಿತ್ರಗೀತೆಗಳಿಗಿಂತ ನಮಗೆಲ್ಲಾ ಅಚ್ಚು ಮೆಚ್ಚಾಗಿದ್ದವು.

 ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್

ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್

ರೇಡಿಯೋದಲ್ಲಿ ನಮಗೆಲ್ಲಾ ಪ್ರೀತಿ ಪಾತ್ರವಾದ ಮತ್ತೊಂದು ಚಾನೆಲ್ಲು ಶ್ರೀಲಂಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್. ಅದರಲ್ಲಿ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಐದು ಐದೂವರೆವರೆಗೆ ಎಲ್ಲಾ ಭಾಷೆಯ ಚಿತ್ರಗೀತೆಗಳೂ ಬರುತ್ತಿದ್ದು ಅವೆಲ್ಲವನ್ನೂ ಭಾಷೆ ಗೊತ್ತಿದೆಯೋ ಇಲ್ಲವೋ ಪ್ರೀತಿಯಿಂದ ಕೇಳುತ್ತಿದ್ದೆವು. ಹೀಗಾಗಿ ಅದು ನಮಗೆ ಹಿಂದಿ ಮತ್ತು ದಕ್ಷಿಣ ಭಾರತದ ಯಾವುದೇ ಭಾಷೆಗಳೂ ಅನ್ಯ ಎನಿಸಿದಿರಲು ಪ್ರಮುಖ ಕಾರಣ ಎಂದು ನನಗೆ ಬಹಳಷ್ಟು ಭಾರೀ ಅನಿಸಿದೆ.

ವಿಶ್ವ ರೇಡಿಯೋ ದಿನ ಆಚರಿಸಿದ ಟ್ವಿಟ್ಟಿಗರು

ರೇಡಿಯೋದಲ್ಲಿ ಕಾಮೆಂಟರಿ ಕೇಳುವುದಂತೂ ಮಹಾನ್ ಸೌಭಾಗ್ಯದ ಘಟನೆ ಎಂಬಂತೆ ಕಾಯುತ್ತಿದ್ದೆವು. ಭಾರತದವರು ಕ್ರಿಕೆಟ್ಟಿನಲ್ಲಿ ಸೋಲುವುದು ತಪ್ಪುತಿರಲಿಲ್ಲವಾದರೂ ನಮ್ಮ ಕಿವಿಗಳು ಮಾತ್ರ ರೇಡಿಯೋದಿಂದ ಎಂದೂ ಕದಲುತ್ತಿರಲಿಲ್ಲ. ಒಮ್ಮೆ ರೇಡಿಯೋ ಕೇಳುತ್ತಿದ್ದ ಕ್ರಿಕೆಟ್ ಪ್ರಿಯರ ಬಳಿ ನಮ್ಮಣ್ಣ ಕುತೂಹಲದಿಂದ ಹೋಗಿ ಪಟೌಡಿ ಔಟಾ ಅಂತ ಕೇಳಿದಾಗ "ಅಪಶಕುನ ನುಡೀತೀಯೇನೋ ಮುಂಡೇದೇ" ಅಂತ ಪಟ್ ಅಂತ ಏಟು ಕೊಟ್ಟದ್ದು ಈಗಲೂ ನೆನಪಿದೆ.

 ಸೋನಿ’ ಸಂಸ್ಥೆಯ ರೇಡಿಯೋ ಟ್ರಾನ್ಸಿಸ್ಟರ್

ಸೋನಿ’ ಸಂಸ್ಥೆಯ ರೇಡಿಯೋ ಟ್ರಾನ್ಸಿಸ್ಟರ್

ಸ್ವಲ್ಪ ದಿನಗಳ ನಂತರದಲ್ಲಿ ‘ಸೋನಿ' ಸಂಸ್ಥೆಯವರು ರೇಡಿಯೋ ಟ್ರಾನ್ಸಿಸ್ಟರ್ ಹೊರತಂದಾಗ ಅದನ್ನು ಕೈಯಲ್ಲಿ ಹಿಡಿದು, ಕಿವಿ ಬಳಿ ಇಟ್ಟುಕೊಂಡು ಏನೂ ಕೇಳದಿದ್ದರೂ ಕೊರ್ ಎನಿಸಿಕೊಂಡು ತಿರುಗುವುದು ಹೆಮ್ಮೆಗಾರಿಕೆಯ ವಿಷಯವಾಗಿತ್ತು. ನಾನು ಕೆಲಸಕ್ಕೆ ಸೇರಿದ ಮೊದಲ ತಿಂಗಳುಗಳಲ್ಲಿ ಮಾಡಿದ ಮೊದಲ ಹೆಮ್ಮೆಯ ಕೆಲಸವೆಂದರೆ ಟ್ರಾನ್ಸಿಸ್ಟರ್ ಕೊಂಡು ಕೆಲವೊಂದು ಸಹೋದ್ಯೋಗಿಗಳ ಹೊಟ್ಟೆ ಉರಿಸಿದ್ದು. ಒಂದು ದಿನ ಇಯರ್ ಫೋನ್ ಹಾಕಿಕೊಂಡು ಆಫೀಸಿನಲ್ಲಿ ರೇಡಿಯೋ ಕೇಳುತ್ತಿದ್ದರೆ ಎಲ್ಲರೂ ನಗುತ್ತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಗೊತ್ತಾಯ್ತು ನನ್ನ ಟ್ರಾನ್ಸಿಸ್ಟರಿನಲ್ಲಿ ಇಯರ್ ಫೋನ್ ಹಾಕಿದ್ದಾಗ ಸೈಲೆನ್ಸರ್ ಕೆಟ್ಟು ಕೂತಿತ್ತು. ಪುಣ್ಯಕ್ಕೆ ನಮ್ಮ ಬಾಸ್ ಕಿವಿಗೆ ನನ್ನ ರೇಡಿಯೋ ಧ್ವನಿ ಬಿದ್ದಿರಲಿಲ್ಲ!

ನನ್ನಲ್ಲಿ ಸಂಗೀತದ ಅಭಿರುಚಿ ಹುಟ್ಟುವುದಕ್ಕೆ ರೇಡಿಯೋ ಕೊಟ್ಟ ಕೊಡುಗೆ ಮಹತ್ವದ್ದು. ನಮ್ಮಪ್ಪನಿಗೆ ರಾತ್ರಿ ರೇಡಿಯೋ ಕೇಳುವುದು ಒಂದು ಅನಿವಾರ್ಯ ಕಾರ್ಯಕ್ರಮವಾಗಿತ್ತು. ಕೆಲವೊಮ್ಮೆ ಈ ಆಲಾಪನೆಯ ಸಂಗೀತ ಕೇಳುವುದು ಕಷ್ಟ ಎನಿಸುತ್ತಿತ್ತು. ಹಾಗಾಗಿ ನಮ್ಮಪ್ಪನ ಗೊರಕೆ ಕೇಳಿಸಿದ್ದೇ ತಡ ಮೆತ್ತಗೆ ರೇಡಿಯೋ ಆಫ್ ಮಾಡಲು ಹೋದರೆ, ‘ಅದೆಷ್ಟೇ ಗಾಢ ನಿದ್ದೆಯಲ್ಲಿರಲಿ ಏಯ್ ಕತ್ತೆ ಯಾಕೋ ಆರಿಸ್ದೆ ಅಂತ ಬಯ್ಕೊಂಡು ಎಚ್ಚರಾವಾಗಿಬಿಡೋರು".

 ನಾಡಿಗೇರ ಕೃಷ್ಣ ರಾಯರ ಒಂದು ಹಾಸ್ಯ

ನಾಡಿಗೇರ ಕೃಷ್ಣ ರಾಯರ ಒಂದು ಹಾಸ್ಯ

ಹ್ಞಾ, ರೇಡಿಯೋ ಸಂಗೀತ ಅಂದ್ರೆ ನಾಡಿಗೇರ ಕೃಷ್ಣ ರಾಯರ ಒಂದು ಹಾಸ್ಯ ನೆನಪಾಗುತ್ತೆ. ಒಬ್ಬ ಸಂಗೀತ ಮೇಷ್ಟ್ರ ಬಳಿ ತಂದೆ ಮಗಳನ್ನು ಕರೆತಂದು ನನ್ನ ಮಗಳಿಗೆ ಸಂಗೀತ ಹೇಳಿಕೊಡ್ಬೇಕು ಅಂತ ಕೇಳಿದರು. ಹೇಳಿಕೊಡ್ತೇನೆ, "ಫೀಸು ತಿಂಗಳಿಗೆ ನೂರು ರೂಪಾಯಿ ಆಗುತ್ತೆ" ಅಂದ್ರು ಮೇಷ್ಟ್ರು. ನೋಡಿ ಮೇಷ್ಟ್ರೇ, ನನ್ನ ಮಗಳು ಈಗ್ಲೇ ಸಾಕಷ್ಟು ಕೀರ್ತನೆಗಳನ್ನು ಕಲಿತಿದ್ದಾಳೆ ಫೀಸು ಐವತ್ತು ಮಾಡ್ಕೊಳ್ಳಿ ಅಂದ್ರು ಹುಡುಗಿಯ ಅಪ್ಪ.

ಅಂದು ರೇಡಿಯೋದಲ್ಲಿ ತೇಲಿ ಬರುತ್ತಿದ್ದ ಹಾಡು ನೆನಪಿದೆಯಾ?

ಎಲ್ಲಿ ಮಗು ಒಂದು ಕೀರ್ತನೆ ಹಾಡು ಅಂತ ಅಪ್ಪಣೆ ಕೊಡಿಸಿದರು ಮೇಷ್ಟ್ರು. ಹುಡುಗಿ ಹಾಡಿದ್ದನ್ನು ಆರ್ಧಕ್ಕೆ ನಿಲ್ಲಿಸಿದ ಮೇಷ್ಟ್ರು ಕೇಳಿದರು. "ಮಗು ನೀನು ಹಾಡೋದನ್ನು ಎಲ್ಲಿ ಕಲಿತೆಯಮ್ಮ?". "ರೇಡಿಯೋ ಸಂಗೀತ ಕೇಳಿ ಮೇಷ್ಟ್ರೇ" ಅಂದಳು ಹುಡುಗಿ. ಮೇಷ್ಟ್ರು ಹುಡುಗಿಯ ಅಪ್ಪನ ಕಡೆ ತಿರುಗಿ ನೋಡಿ "ಫೀಸು ತಿಂಗಳಿಗೆ ಇನ್ನೂರಕ್ಕಿಂತ ಕಡಿಮೆ ಮಾಡಲು ಬಿಲ್ಕುಲ್ ಸಾಧ್ಯವಿಲ್ಲ" ಅಂದರು. "ಇದೇನು ಮೇಷ್ಟ್ರೇ, ಮೊದಲು ನೀವು ನೂರು ಅಂದ್ರಿ, ನಾನು ಐವತ್ತು ಮಾಡ್ಕೊಳ್ಳಿ ಅಂದ್ರೆ ಇನ್ನೂರು ಅಂತಿದೀರ?" ಗಾಭರಿಯಾದ್ರು ಹುಡುಗಿಯ ಅಪ್ಪ.. ಮೇಷ್ಟ್ರು ಹೇಳಿದ್ರು, "ನೋಡಿ ಈಗ ನಿಮ್ಮ ಹುಡುಗಿ ಕಲಿತ ಸಂಗೀತ ಪಾಠದಿಂದ ಆಕೆಯನ್ನು ಬಿಡಿಸೋಕೆ ನೂರು ರೂಪಾಯಿ ಫೀಸು, ಹೊಸದಾಗಿ ಕಲಿಸೋಕೆ ನೂರು ರೂಪಾಯಿ!"

 ಹಳೆ ರೇಡಿಯೋ ಕೆಟ್ಟು ಹೋದಾಗ ಯಮಯಾತನೆ

ಹಳೆ ರೇಡಿಯೋ ಕೆಟ್ಟು ಹೋದಾಗ ಯಮಯಾತನೆ

ರೇಡಿಯೋ ಬಗೆಗಿನ ಭಯಾನಕ ಮತ್ತು ಬೇಡದ ನೆನಪು ಅಂದ್ರೆ ಅದು ಕೆಟ್ಟು ಹೋದಾಗ ಅದನ್ನು ಹೊತ್ತುಕೊಂಡು ಹೋಗಲು ಆಗುತ್ತಿದ್ದ ಯಮಯಾತನೆ. ಅದನ್ನು ಚೀಲದಲ್ಲಿ ಹಾಕಿಕೊಂಡು ಹೋಗುವ ಹಾಗಿಲ್ಲ. ಸೈಕಲ್ಲಿನಲ್ಲಿ ಹಿಂದೆ ಇಟ್ಟುಕೊಂಡು ಹೋಗುವ ಹಾಗಿರಲಿಲ್ಲ. ಎಲ್ಲಾದರೂ ಲಟ ಲಟ ಎಂದು ಬಿಟ್ಟರೆ, ಲತ ಲತ ಎಂಬ ಲಾತಾ ಬಗ್ಗೆ ಭಯ. ಅದನ್ನು ಮಗುವಿನಂತೆ ಕಂಕುಳಿನಲ್ಲೆ ಹೊತ್ತುಕೊಂಡು ಹೋಗಬೇಕು. ರೇಡಿಯೋ ಬಗೆಗಿನ ಅತ್ಯಂತ ಹಾಸ್ಯಪೂರ್ಣ ವಿಚಾರವೆಂದರೆ ರೇಡಿಯೋ ಇಟ್ಕೊಳ್ಳೋದಕ್ಕೆ ಪ್ರತೀ ವರ್ಷ ಮನೆ ಕಂದಾಯ ಕಟ್ಟೋ ಹಾಗೆ ಪೋಸ್ಟ್ ಆಫೀಸಲ್ಲಿ ಕ್ಯೂ ನಿಂತು ಕಂದಾಯ ಕಟ್ಬೇಕಿತ್ತು.

ಇದು ಆನ್‌ಲೈನ್ ರೆಡಿಯೋ, ಇದು ನಮ್ ರೆಡಿಯೋ

ಹೀಗೇ ರೇಡಿಯೋ ಸವಿನೆನಪು ಸಾವಿರಾರು. ಒಂದು ದಿನ ಈ ರೇಡಿಯೋ ಮಲಗಿಯೇ ಬಿಟ್ಟಿತು ಅಂತ ಎಲ್ಲರೂ ಭಾವಿಸಿದ್ದಾಗ ಎಫ್. ಎಮ್ ರೇಡಿಯೋ ಬಂದಿದೆ. ಎಫ್. ಎಮ್ ರೇಡಿಯೋದಿಂದ ಟ್ರಾಫಿಕ್ಕಿನಲ್ಲಿ ನಲುಗುತ್ತಿರುವ ನಮ್ಮಮುಖಾರವಿಂದಗಳಿಗೆ ತುಸು ಟಾನಿಕ್ ಒದಗುತ್ತಿದೆ. ಆದರೆ ಇಂದು ಬರುತ್ತಿರುವ ಜಾಹೀರಾತು, ಕೆಟ್ಟ ಕಂಗ್ಲಿಷ್ ಮಾತು, ಅದಕ್ಕೂ ಮಿಗಿಲಾಗಿ ಇಂದಿನ ಮಾಡರ್ನ್ ಕರ್ಕಶ ಸಂಗೀತಕ್ಕಿಂತ ಕೆಲವೊಂದು ಭಾರೀ ಟ್ರಾಫಿಕ್ಕಿನ ಬ್ರೇಕಿಲ್ಲದ ಹಾರನ್ನುಗಳೇ ವಾಸಿ ಎನಿಸಿರಲಿಕ್ಕೂ ಸಾಕು. ಹೀಗೆಲ್ಲಾ ಹೇಳಿದ್ರೆ ಕೆಲವರು ಜಗಳಕ್ಕೆ ಬರ್ತಾರೆ, "ಏನ್ರೀ ನಮ್ಮ ಹತ್ರ ಮೊಬೈಲ್ ಇಲ್ವಾ, ಗಂಟೆ ಗಟ್ಲೆ ಮಾತಾಡೋಕೆ ಸಬ್ಜೆಕ್ಟ್ ಇಲ್ವಾ, ಕರೆನ್ಸಿ ಇಲ್ವ, ಕನೆಕ್ಷನ್ ಇಲ್ವ, ‘ನನ್ ಪಾಡ್'(ಐಪಾಡ್) ಇಲ್ವ...." ಇತ್ಯಾದಿ. ಅಯ್ಯೋ ಬಿಡಿ ಅವರವರ ಪಾಡು ಅವರವರಿಗೆ.

 ಬಾಲ್ಯದ ನೆನಪು ತಂದ ರೇಡಿಯೋಗೊಮ್ಮೆ ಥ್ಯಾಂಕ್ಸ್

ಬಾಲ್ಯದ ನೆನಪು ತಂದ ರೇಡಿಯೋಗೊಮ್ಮೆ ಥ್ಯಾಂಕ್ಸ್

ಫೆಬ್ರುವರಿ 13 ದಿನಾಂಕವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ. (ವಿಶ್ವಸಂಸ್ಥೆಯ ಅಂಗವಾದ ಯುನೈಟೆಡ್ ನೇಷನ್ಸ್ ರೇಡಿಯೋ 13ನೇ ಫೆಬ್ರುವರಿ 1946ರ ವರ್ಷದಲ್ಲಿ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ ಯುನೆಸ್ಕೋ ಸಂಸ್ಥೆ ಈ ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲು ತೀರ್ಮಾನ ಕೈಗೊಂಡಿತು.)

ನೆನಪಿನ ತರಂಗಾಂತರಗಳು!

ಆ ಮಾರ್ಕೋನಿ ಮಾಡಿದ ಆ ರೇಡಿಯೋ, ಆ ವೈರ್ಲೆಸ್ಸು ಆ ಬೈರ್ಡ್ ಮಾಡಿದ ಟಿ.ವಿ., ಮತ್ಯಾರೋ ಮಾಡಿದ ಮೊಬೈಲು, ಕಂಪ್ಯೂಟರು, ನಮ್ಮಂತ ದಂಡ ಪಿಂಡಗಳು ಇವೆಲ್ಲಾ ನೋಡಿದ್ರೆ, ಇದನ್ನೆಲ್ಲಾ ಕಂಡುಹಿಡಿದ್ರಲ್ಲಾ ಅವರನ್ನೆಲ್ಲಾ.......

ಅದೆಲ್ಲಾ ಬೇಡ ಬಿಡಿ. ನಮಗೆ ಮುದ ಕೊಟ್ಟ ಬಾಲ್ಯದ ನೆನಪು ತಂದ ರೇಡಿಯೋಗೊಮ್ಮೆ ಥ್ಯಾಂಕ್ಸ್ ಹೇಳೋಣ. ಅಂದ ಹಾಗೆ ಮತ್ತೊಂದು ವಿಚಾರ. ಆರು ವರ್ಷದ‍ ಹಿಂದೆ ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಅಂದು ವಾರ್ತೆ ಓದುತ್ತಿದ್ದ ನಮ್ಮ ನೆಚ್ಚಿನ ‘ಓದುತ್ತಿರುವವರು ರಂಗರಾವ್' ಅವರನ್ನು ಭೇಟಿ ಮಾಡಿದಾಗ ಆದ ಸಂತೋಷ ಮರೆಯಲಾಗದ್ದು.

English summary
Remembering my pleasant memories of radio on World Radio Day By Tiru Sridhara native Bengalurean now working as software engineer working in UAE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X