ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿತೃಪಕ್ಷ ವಿಶೇಷ ಲೇಖನ: ಅಮಾವಾಸ್ಯೆಯ ಮೌನದಲ್ಲಿ ಹಿರಿಯರ ನೆನಪು

By ಡಾ. ಗುರುರಾಜ ಪೋಶೆಟ್ಟಿಹಳ್ಳಿ
|
Google Oneindia Kannada News

Recommended Video

Pitru Paksha 2019 : ಪಿತೃ ಪಕ್ಷ 2019 | ಇತಿಹಾಸ, ಮಹತ್ವ ಹಾಗು ಆಚರಣೆಯ ದಿನಗಳು

ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 15 ರಿಂದ 28 ರವರೆಗೆ ವ್ಯಾಪಿಸಿದೆ. ಪ್ರತಿಪತ್‍ನಿಂದ ಶುರುವಾಗಿ ಮಹಾಲಯ ಅಮಾವಾಸ್ಯೆ ದಿನ ಕೊನೆಗೊಳ್ಳುತ್ತದೆ. ಹಿರಿಯರು ನಮ್ಮನ್ನು ಬಿಟ್ಟು ಭೌತಿಕವಾಗಿ ದೂರವಾದರೂ ಅವರನ್ನು ನೆನೆಪಿಸಿಕೊಂಡು ಗೌರವ ಸಲ್ಲಿಸುವ ಪದ್ದತಿ ಭಾರತೀಯ ಪರಂಪರೆಯಲ್ಲಿದೆ. ಈ ಆಚರಣೆಯ ಮಹತ್ವವೇನು ಎಂಬುದನ್ನು ವಿವರಿಸುವ ಸಕಾಲಿಕ ಬರಹ ...

ಭಾರತೀಯ ಸಂಸ್ಕೃತಿಯಲ್ಲಿ ಇಹ ಪರ ಸೌಖ್ಯಗಳಿಗೆ ಸಮಾನವಾದ ಪ್ರಾಧಾನ್ಯವನ್ನು ನಮ್ಮ ಸ್ಮೃತಿಕಾರರು ನೀಡಿದ್ದಾರೆ . ನಮ್ಮಿಂದ ದೂರವಾದ ಹಿರಿಯರನ್ನು ನೆನೆದು ಅವರಿಗೆ ಗೌರವ ಸಲ್ಲಿಸುವ ಸಂಪ್ರದಾಯ ಜಗತ್ತಿನ ಹಲವು ದೇಶಗಳಲ್ಲಿ ರೂಡಿಯಲ್ಲಿದೆ.

ಗೃಹಸ್ಥಾಶ್ರಮದ ಕರ್ತವ್ಯಪಾಲನೆಯಂತೆ ಸರ್ವರ ಹಾಗೂ ಪ್ರಾಣಿ ಮಾತ್ರದ ಹಿತದ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಗೃಹಸ್ಥಾಶ್ರಮ ಧರ್ಮದಲ್ಲಿ ಮುಂದುವರೆಯಬೇಕು. ಗೃಹಸ್ಥನಾದವನಿಗೆ ಐದು ಬಗೆಯ ಋಣವನ್ನು ತೀರಿಸುವ ಹೊಣೆಗಾರಿಕೆ ಇದೆ. ಆ ಋಣಗಳನ್ನು ತೀರಿಸಿ ಹಿರಿಯರನ್ನು ಋಣಮುಕ್ತರನ್ನಾಗಿ ಮಾಡುವ ಮಹತ್ತರ ಕರ್ತವ್ಯ ಗೃಹಸ್ಥನಿಗಿರುತ್ತದೆ. ಪಿತೃ, ದೇವ, ಋಷಿ, ಭೂತ ಮತ್ತು ಮನುಷ್ಯ ಋಣ.

ತಂದೆ ತಾಯಿಗೆ ಸಮನಾದ ಇನ್ನೊಂದು ದೇವತೆ ಇರಲಾರದು. ಶರೀರ, ವಿದ್ಯೆ, ಬುದ್ಧಿ, ಸಂಸ್ಕಾರ, ಸಂಪತ್ತುಗಳಿಗೆ ಕಾರಣ ಅವರವರ ಮಾತಾ-ಪಿತೃಗಳು. ಇದನ್ನೇ "ಋಣಾನುಬಂಧು ರೂಪೇಣ ಪಶು ಪತ್ನಿ ಸುತಾಲಯ" ಎನ್ನುವುದು.

ಹುಟ್ಟಿದ ಪ್ರತಿಯೊಬ್ಬ ಮಾನವನಿಗೂ ಮೂರು ಬಗೆಯ ಕರ್ತವ್ಯಗಳಿವೆ. ವೇದಗಳ ಮೂಲಕ ನಮಗೆ ಆಧ್ಯಾತ್ಮಿಕ ಜ್ಞಾನ ಕರುಣಿಸಿದವರು ಋಷಿಗಳು, ನಾವು ಅವರು ನೀಡಿದ ಜ್ಞಾನದ ಪರಂಪರೆಯನ್ನು ಉಳಿಸಿ ಬೆಳೆಸುವ ಮತ್ತು ಪ್ರತಿಫಲಾಪೇಕ್ಷೇಯಿಲ್ಲದೆ ಇನ್ನೊಬ್ಬರಿಗೆ ನೀಡುವ ಕರ್ತವ್ಯ ವನ್ನು ಹೊಂದಿದ್ದೇವೆ.ಇದನ್ನು ಮಾಡಿದಾಗ ಮಾತ್ರವೇ ನಾವು ಋಷಿ ಋಣದಿಂದ ಮುಕ್ತರಾಗಬಹುದು.

ನಾವು ಮಾಡುವ ತಂದೆ-ತಾಯಿ, ಗುರು ಹಿರಿಯರ ಸೇವೆಯು ಮತ್ತು ಪರೋಪಕಾರ ದೇವ ಪೂಜೆ ಮೊದಲಾದ ಸತ್ಕರ್ಮಗಳು ಯಜ್ಞಗಳನೆಸಿವೆ.ಇವುಗಳಿಂದ ದೇವತೆಗಳು ಸಂತುಷ್ಟರಾಗುವರು. ಈ ಕರ್ಮಾನುಷ್ಠಾನದಿಂದ ನಾವು ದೇವಋಣದಿಂದ ಮುಕ್ತರಾಗುತ್ತೇವೆ.

ಪಿತೃದೇವತಾಗಣವನ್ನು ತೃಪ್ತಿಪಡಿಸುವ ‘ಶ್ರಾದ್ಧ’

ಪಿತೃದೇವತಾಗಣವನ್ನು ತೃಪ್ತಿಪಡಿಸುವ ‘ಶ್ರಾದ್ಧ’

ಇದರಂತೆ ಪುಣ್ಯ ಕರ್ಮಗಳ ಅನುಷ್ಠಾನದ ಮೂಲಕ ಸಾತ್ವಿಕವಾದ ಹಾಗು ದೇಶಭಕ್ತಿಯುಳ್ಳ ಸಂತತಿಯನ್ನು ಪಡೆಯುವುದು ನಮ್ಮ ಕರ್ತವ್ಯ ವಾಗಿದೆ , ತಂದೆತಾಯಿಗಳ ಸೇವೆ ಹಾಗು ಅವರನ್ನು ಉದ್ದೇಶಿಸಿ ಬದುಕಿದಾಗಲು ಮೃತರಾದ ಮೇಲೂ ಮಕ್ಕಳು ಮಾಡುವ ಪುಣ್ಯಕಾರ್ಯಗಳು ಇಬ್ಬರ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಕಾರಣವಾಗಿರುವುದು.

ನಮಗೆ ಉಪಕರಿಸಿದ ವ್ಯಕ್ತಿಗಳ ಋಣವನ್ನು ಎಂದೂ ಪೂರ್ಣವಾಗಿ ತೀರಿಸಲು ಸಾಧ್ಯವಾಗದಿದ್ದರೂ ಅವರನ್ನು ಸದಾ ಕೃತಜ್ಞತೆಯಿಂದ ನೆನೆದು ಅವರ ಸಂಪ್ರೀತಿಗಾಗಿ ಶ್ರದ್ದೆಯಿಂದ ನಡೆಸುವ ಪುಣ್ಯಕಾರ್ಯಗಳನ್ನು ಶ್ರಾದ್ಧವೆನ್ನಲಾಗಿದೆ . ಶ್ರದ್ಧೆಯಿಂದ ಮಾಡುವ ಅಗ್ನಿಯ ಮೂಲಕ ಹೋಮ, ಪಿಂಡ ಪ್ರದಾನ, ಇವುಗಳೇ ಪಿತೃದೇವತಾಗಣವನ್ನು ತೃಪ್ತಿಪಡಿಸುವ 'ಶ್ರಾದ್ಧ'ವೆನಿಸುತ್ತದೆ.

ಒಂದು ವರ್ಷದಲ್ಲಿ ಪಿತೃಗಳಿಗಾಗಿ ತೊಂಭತ್ತಾರು ಪರ್ವ ದಿನಗಳಲ್ಲಿ ಶ್ರಾದ್ಧವನ್ನು ಮಾಡಬೇಕು. ಅದರಲ್ಲಿ ಈ ಪಕ್ಷದ ಹದಿನಾರು ದಿನಗಳಲ್ಲಿ ಸೂರ್ಯನು ಕನ್ಯಾ ರಾಶಿಗೆ ಪ್ರವೇಶ ಮಾಡಿರುವಾಗ ಸಕಲ ಪಿತೃಗಳಿಗೂ 'ಪರ್ವಕಾಲ' ಎನಿಸುತ್ತದೆ.

‘ತರ್ಪಣ’ ಪಿತೃಗಳಿಗೆ ತಲುಪುವುದೇ ?

‘ತರ್ಪಣ’ ಪಿತೃಗಳಿಗೆ ತಲುಪುವುದೇ ?

ಈ ಕಾಲದಲ್ಲಿ ಪ್ರೇತಪುರದಲ್ಲಿ ಜೀವಿಗಳಿರುವುದಿಲ್ಲವೆಂದೂ ಮಾನವ ಲೋಕದಲ್ಲಿ ವಾಯು ರೂಪದೊಂದಿಗೆ ಆತ್ಮೀಯರಲ್ಲಿ ಅನ್ನೋದಕಾಕಾಂಕ್ಷಿಗಳಾಗಿ ಇರುವರೆಂದು ಮಹಾಭಾರತ ಉಲ್ಲೇಖಿಸಿದೆ. ಪ್ರತಿನಿತ್ಯ ಶ್ರಾದ್ಧದ ಪ್ರತಿನಿಧಿಯಾಗಿ ತಿಲತರ್ಪಣವನ್ನು ಕೊಡಬೇಕು. 'ತರ್ಪಣ' ಎಂದರೆ ತೃಪ್ತಿಪಡಿಸುವುದು ಎಂದರ್ಥ.

ಅಮೆರಿಕಾದಲ್ಲಿರುವ ಮಗನು ಬೆಂಗಳೂರಿನಲ್ಲಿ ವಾಸಿಸುವ ತಂದೆ-ತಾಯಿಯರಿಗೆ ಹಣವನ್ನು ಕಳುಹಿಸುತ್ತಾನೆ. ತಾನು ಇರುವ ದೇಶದಲ್ಲಿ ಚಲಾವಣೆಯಲ್ಲಿರುವ ಡಾಲರನ್ನು ಕಳುಹಿಸುತ್ತಾನೆ. ಆದರೆ ಅದೇ ಡಾಲರ್ ಬೆಂಗಳೂರಿನಲ್ಲಿರುವ ತಂದೆಗೆ ತಲುಪುವುದಿಲ್ಲ. ಭಾರತಕ್ಕೆ ಬರುವಾಗ ರೂಪಾಯಿಯಾಗಿ ಪರಿವರ್ತನೆಗೊಂಡು ತಂದೆಯ ಬ್ಯಾಂಕಿನ ಖಾತೆಗೆ ವರ್ಗಾವಣೆಯಾಗಿರುತ್ತದೆ. ಹಾಗೆಯೇ ನಾವು ಪಿತೃಗಳ ಉದ್ದಿಶ್ಯ ಕೊಡತಕ್ಕ ತರ್ಪಣವು ಪಿತೃದೇವತೆಗಳು ಸ್ವೀಕರಿಸಿ ನಮ್ಮ ಪಿತೃಗಳು ಯಾವ ಜನ್ಮ ಪಡೆದಿದ್ದಾರೋ ಅವರಿಗೆ ಅನ್ನಾದಿಗಳನ್ನು ಕೊಟ್ಟು ಅನುಗ್ರಹಿಸುವರು.

ಪಿತೃಗಳಿಗೆ ತಿಲವೇಕೆ ?

ಪಿತೃಗಳಿಗೆ ತಿಲವೇಕೆ ?

ಪಿತೃಗಳ ಲೋಕ ಚಂದ್ರಲೋಕದ ಮೇಲ್ಭಾಗದಲ್ಲಿದೆ. 'ತಿಲ'(ಎಳ್ಳು) ಇದರ ಅಭಿಮಾನಿ ಸೋಮ (ಚಂದ್ರ). ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲುಗಳಾಗುವಂತೆ ಪಿತೃಲೋಕದ ಸೂರ್ಯನ ಚಲನೆಯೇ ರಾತ್ರಿ ಹಗಲುಗಳಿಗೆ ಕಾರಣವಾಗಿದೆ.

ಭೂಮಿಯಲ್ಲಿ 24 ಗಂಟೆಗೆ ಒಂದು ದಿನವಾಗುವಂತೆ, ಚಂದ್ರನಲ್ಲಿ 15 ದಿನ ಹಾಗೂ 15 ರಾತ್ರಿಯಾದರೆ 1 ದಿನವಾಗುವುದು. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುವುದು. ಬಿಸಿಲಿನ ತಾಪ ಹೆಚ್ಚಾಗಿರುತ್ತದೆ.
ಪಿತೃಗಳಿಗೆ ಎಳ್ಳು ಬಹು ಪ್ರೀತಿಕರವಾದ ಆಹಾರ. ಹೇಗೆಂದರೆ ಎಳ್ಳು ಗರ್ಭಕೋಶದ ಶುದ್ಧಿಗೆ - ರಕ್ತ ಶುದ್ಧಿಗೆ ಅತ್ಯುತ್ತಮ ಪದಾರ್ಥ. ಸ್ತ್ರೀಯು ಪ್ರಥಮ ಬಾರಿ ರಜಸ್ವಲೆಯಾದಾಗ ಆಕೆಗೆ ಎಳ್ಳಿನ ಚಿಗಳಿ ತಿನ್ನಿಸುವುದು ಶುದ್ಧೀಗಾಗಿಯೇ. ತನ್ನ ವಂಶ ಸದ್ವಂಶವಾಗಬೇಕೆಂದು ಪಿತೃಗಳ ಹಿರಿಯಾಸೆ. ಆದ್ದರಿಂದ ತಿಲತರ್ಪಣ ಪಿತೃಗಳಿಗೆ ಅತ್ಯಂತ ಪ್ರಿಯ.

ಮಹಾಲಯ ಅಮಾವಾಸ್ಯೆ ಕತ್ತಲೆಯ ಸಂಕೇತವಾದರೆ , ಅದರ ಮರುದಿನ ಕತ್ತಲನ್ನು ಹರಿಸುವ ನವರಾತ್ರಿ ಆರಂಭವಾಗುತ್ತದೆ. ಮನೆ, ಕರ್ಮಭೂಮಿ, ನದಿತೀರ ದಲ್ಲಿ ಮಾಡುವದಕ್ಕಿಂತ ಸಂಗಮಗಳಲ್ಲಿ ಮಾಡುವ ಪಿತೃಕಾರ್ಯ ಶ್ರೇಷ್ಠವಾಗಿರುತ್ತದೆ.

ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ

ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ

ದೈವಶಾಪವನ್ನಾದರು ತಡೆದುಕೊಳ್ಳಬಹುದು , ಆದರೆ ಪಿತೃಶಾಪಕ್ಕೆ ಗುರಿಯಾದರೆ ಕಷ್ಟತಪ್ಪಿದಲ್ಲ , ಆವರ ಒಲುಮೆ ಸದಾ ನಮ್ಮ ಮೇಲಿರಬೇಕು ಎನ್ನುವುದು ಶಾಸ್ತ್ರವಚನ. ನಮ್ಮ ಬಾಳನ್ನು ರೂಪಿಸುವಲ್ಲಿ ಪೂರ್ವಜರು ಮಾಡಿದ ತ್ಯಾಗ ಅಪಾರ. ಅವರಿಂದು ಸ್ಥೂಲ ಶರೀರ ರೂಪದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತ ಇರುತ್ತಾರೆ. ಪಿತೃದೇವತೆಗಳ ಆರ್ಶೀವಾದದಿಂದಲೇ ಸಂತಾನ , ಸುಖ , ಧನಲಾಭಗಳು ಉಂಟಾಗುತ್ತದೆ. ಅವರಿಗೆ ನೀಡುವ ತರ್ಪಣದಿಂದ ಸಂತೃಪ್ತರಾಗಿ ನಮ್ಮನು ಹರಸುತ್ತಾರೆ. ಮಾತೃದೇವೋಭವ , ಪಿತೃದೇವೋಭವ ಎಂದು ಪಠಿಸದರಷ್ಟೇ ಸಾಲದು , ಆ ಭಾವವು ನಮ್ಮೊಳಗೆ ಹಾಸುಹೊಕ್ಕಾಗಬೇಕು, ಪಿತೃದೇವತೆಗಳ ಋಣ ತೀರಿಸುವ ಪರ್ವವೇ ಮಹಾಲಯ .

ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತ

ಪಿತೃಕ್ರಿಯೆಗಳಿಗೆ ಅಮಾವಾಸ್ಯೆ ಪ್ರಶಸ್ತ

ಇದು ವೈಜ್ಞಾನಿಕತೆಯ ಆಧಾರದಲ್ಲಿ ನೆಲೆನಿಂತಿದೆ. ಪಿತೃಲೋಕವು ಚಂದ್ರನ ಮೇಲ್ಭಾಗದಲ್ಲಿದೆ. ಶುಕ್ಲ ಪಕ್ಷದಲ್ಲಿ ಚಂದ್ರನು ಸೂರ್ಯನಿಂದ ದೂರಸರಿಯುತ್ತಾನೆ. ಆಗ ಪಿತೃಗಳಿಗೆ ರಾತ್ರಿ, ಕೃಷ್ಣಪಕ್ಷದಲ್ಲಿ ಸೂರ್ಯನು ದಿನದಿಂದ ದಿನಕ್ಕೆ ಚಂದ್ರಗೋಳದ ಹತ್ತಿರ ಬಂದು ಅಮಾವಾಸ್ಯೆಯಂದು ಒಂದೇ ಕಕ್ಷೆಯಲ್ಲಿ( ಸರಳ ರೇಖೆಯಲ್ಲಿ) ಸೇರಿದಾಗ ಪಿತೃಗಳಿಗೆ ಮಧ್ಯಾಹ್ಣ ಕಾಲ ,ಆಗ ಪಿತೃಗಳಿಗೆ ತೈಲ ಧಾನ್ಯವಾದ ಎಳ್ಳಿನಿಂದ ತರ್ಪಣ ಕೊಡುವುದರಿಂದ ವಸು ರುದ್ರ ಆದಿತ್ಯ ರೂಪದ ಪಿತೃಗಳು ಕೃತಕೃತ್ಯರಾಗುವ ಮಹತ್ವಪೂರ್ಣ ಪಕ್ಷವಾಗಿ ಆಚರಿಸಲಾಗುತ್ತದೆ.

ಪ್ರತಿ ದಿನ ಪ್ರಾತಃಕಾಲದಲ್ಲಿ ದೇವತಾ ಸ್ಮರಣೆ, ಪೂಜೆ , ಮಧ್ಯಾಹ್ನ ಅತಿಥಿ ಅಭ್ಯಾಗತ ಸತ್ಕಾರ , ಅಪರಾಹ್ನದಲ್ಲಿ ಪಿತೃಗಳ ಆರಾಧನೆ ಮಾಡಬೇಕು . ಮಕ್ಕಳಿಗಾಗಿ ಮಾತಾಪಿತೃಗಳು ಮಾಡಿದ ತ್ಯಾಗ , ಕರ್ತವ್ಯಗಳ ಋಣದ ಭಾರವನ್ನು ಹಗುರ ಮಾಡಿಕೊಳ್ಳಲು ಮನುಷ್ಯ ಕಂಡು ಕೊಂಡ ಸುಲಭ ಮಾರ್ಗವೇ ಈ ಪಿತೃಕಾರ್ಯವೆಂದರೂ ತಪ್ಪಲ್ಲ . ಪಿತೃಕಾರ್ಯಗಳು ಪುನರ್ ಜನ್ಮಸಿದ್ದಾಂತ ವನ್ನು ಸಮರ್ಥಿಸುತ್ತದೆ. ಅಲ್ಲದೆ ಜನ್ಮಾಂತರ ಶರೀರ ನಿರ್ಮಾಣಕಾರ್ಯಕ್ಕೆ ಸಹಕಾರಿಯಾಗಿದೆ. ಅದಕ್ಕಾಗಿಯೇ ಪಿತೃಕಾರ್ಯಗಳನ್ನು ಶ್ರದ್ದೇಯಿಂದ ನಿಯಮಾನುಸಾರವಾಗಿ ಶಾಸ್ರ್ತಬಧ್ದವಾಗಿ ಮಾಡಬೇಕು ಎನ್ನಲಾಗುತ್ತದೆ.

ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ

ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ

ಜನನ-ಮರಣಗಳಿಗೆ ಹೇಗೆ ಜಾತಿ ಭೇದವಿಲ್ಲವೋ ಹಾಗೆಯೇ ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ. ಈ ಹದಿನೈದು ದಿನಗಳು ಯಾವ ಶುಭ ಕಾರ್ಯಗಳನ್ನು ಮಾಡುವುದಿಲ್ಲ.

ಈ ಒಂದು ಆಚರಣೆಯು ನಮ್ಮ ಪ್ರಾಚೀನ ಸಂಸ್ಕೃತಿಯ ಉತ್ತಮ ಕುರುಹಾಗಿ ಕಾಣುತ್ತಿದೆ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು. ಅವರಿಗೆ ನಮ್ಮ ಕೃತಜ್ಞತೆ ಸಲ್ಲಿಸಬೇಕು.ಭಾರತೀಯ ಸಂಸ್ಕೃತಿಯ ಪ್ರಕಾರ ಮೃತ್ಯುವಿನ ಜೊತೆಗೆ ಜೀವನ ಪೂರ್ತಿಯಾಗುವುದಿಲ್ಲ. ಅನಂತ ಜೀವನದ ಸರಪಣಿಯಲ್ಲಿ ಮೃತ್ಯುವು ಒಂದು ಕೊಂಡಿಯಾಗಿದೆ. ಆದ್ದರಿಂದ ಪಿತೃ ಪಕ್ಷದಲ್ಲಿ ಜೀವನ ಆ ಸ್ಥಿತಿಯನ್ನು ಸಂಯೋಜಿಸಲಾಗಿದೆ. ಒಂದು ಜನ್ಮವನ್ನು ಪೂರ್ಣಗೊಳಿಸಿ ಮುಂದಿನ ಜೀವನದ ಕಡೆ ಹೊರಟಾಗ ಸಂಬಂಧಿತ ಜೀವಾತ್ಮದ ಮುಂದಿನ ಜೀವನ ಹಿಂದಿನಕ್ಕಿಂತ ಹೆಚ್ಚು ಹಿತವಾಗಿ ಸದ್ಗತಿಯನ್ನು ಹೊಂದಲೆಂಬ ಮನೋಭಾವದಿಂದ ಆಚರಿಸಲಾಗುವ ಈ ಪಿತೃ ಪಕ್ಷ ಆಚರಣೆಯು ವಿಶೇಷ ಮಹತ್ವ ಹೊಂದಿದೆ.
ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ

ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ

ಸೂರ್ಯನು ಕನ್ಯಾ- ತುಲಾ ರಾಶಿಗಳ ನಡುವೆ ಹಾದುಹೋಗುವಾಗ ಯಮನು ಪಿತೃಗಳನ್ನು ಸ್ವಚ್ಛಂದವಾಗಿ ಹೋಗಲು ಬಿಡುವನು ಪ್ರೇತಪುರದಿಂದ ಬಿಡಲ್ಪಟ್ಟು ಪಿತೃಗಳು , ತಮ್ಮ ಮಕ್ಕಳು ಮೊಮ್ಮಕ್ಕಳನ್ನು ನಿರೀಕ್ಷಿಸಲು ಬರುವರು. ಬಂದಾಗ ನೀಡಿದ ಅನ್ನದಾನ ,ತರ್ಪಣ ಗಳಿಂದ ಸಂತೃಪ್ತರಾಗುವರು. ಹರಸಲು ಹಾತೊರೆದು ಬಂದ ಪಿತೃಗಳಿಗೆ ಏನ್ನನ್ನೂ ನೀಡದಿದ್ದಾಗ ಹಸಿವಿನಿಂದ ಕಂಗೆಟ್ಟ ಅವರು ದೀರ್ಘ ನಿಟ್ಟುಸಿರು ಬಿಟ್ಟು ಶಪಿಸಿ ಮುಂದೆ ಸಾಗುವರು, ಅದರ ಫಲವೇ ಕಚ್ಚಾಡುವ ಮನೆ , ಕಾದಾಡುವ ಮಕ್ಕಳು , ಅಶಾಂತಿಯ ವಾತಾವರಣ ಎಂಬುದರಲ್ಲಿ ಸಂದೇಹವಿಲ್ಲ ಹೀಗಾಗಿ ಪಿತೃಪಕ್ಷದಲ್ಲಿ ಶ್ರಾದ್ಧದ ಆಚರಣೆ ಅತ್ಯಂತ ಸಮುಚಿತವಾದುದು. .
15 ದಿನಗಳು ಸಹ ಶ್ರಾದ್ಧಾಧಿಗಳನ್ನು ಮಾಡುವಿಕೆ ಉತ್ತಮವೆಂದೂ, ಆಗದಿರುವಾಗ ಪಂಚಮಿ, ಷಷ್ಠಿ, ಅಷ್ಟಮಿ, ದಶಮಿ, ಅಮಾವಾಸ್ಯೆ ಈ ದಿನಗಳು ಅತ್ಯಂತ ಪ್ರಶಸ್ತಪೂರ್ಣವೆಂದು ಹೇಳುತ್ತಾರೆ. ಇದನ್ನು ಆಚರಿಸಿದರೇ ಗಯಾಶ್ರಾದ್ಧವನ್ನೇ ಆಚರಿಸಿದ ಗರಿಷ್ಠ ಫಲ ಬರುವುದೆಂಬ ಹಿರಿಮೆ ಇದೆ.

ಮುತ್ತೈದೆಯಾಗಿ ಮೃತರಾದವರಿಗೆ ಅವಿಧವಾನವಮಿಯಂದು , ವಂಶದಲ್ಲಿ ಯತಿಯಾಗಿ ಹೋದವರಿಗೆ ಯತಿದ್ವಾದಶಿಯಂದು, ಅಪಘಾತದ ದುರಂತದಲ್ಲಿ ಮೃತರಾಧವರಿಗೆ ಘಾತಚತುದರ್ಶಿಯಂದು ಶ್ರಾದ್ಧವನ್ನು ಮಾಡುವುದು ಶಾಸ್ತ್ರವಚನ

ಮಹಾಲಯ ಅಮಾವಾಸ್ಯೆ ಆಚರಣೆ ಹಿಂದೊಂದು ಕಥೆ

ಮಹಾಲಯ ಅಮಾವಾಸ್ಯೆ ಆಚರಣೆ ಹಿಂದೊಂದು ಕಥೆ

ಮಹಾಲಯ ಅಮಾವಾಸ್ಯೆ ಆಚರಣೆ ಹಿಂದೊಂದು ಐತಿಹ್ಯವಿದೆ. ದಾನಶೂರ ಕರ್ಣ ತನ್ನ ಜೀವಿತಾವಧಿಯಲ್ಲಿ ಬೆಳ್ಳಿ , ಬಂಗಾರ ವನ್ನು ದಾನ ಮಾಡಿದ್ದರೂ ಅನ್ನದಾನ ಮಾಡಿರುವುದಿಲ್ಲ . ಹಾಗಾಗಿ ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಪ್ರಯಾಣ ಬೆಳೆಸುವಾಗ , ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ದುಃಖಿತನಾದ ಕುಂತಿಪುತ್ರ , ಯಮರಾಜನನ್ನು ದೈನ್ಯತೆಯಿಂದ ಪ್ರಾರ್ಥಿಸಿ , ಮಹಾಲಯ ಅಮಾವಾಸ್ಯೆಯಂದು ಭೂಮಿ ಬಂದು ಹತ್ತಾರು ಜನರಿಗೆ ಅನ್ನದಾನ ಮಾಡಿ ನೆಮ್ಮದಿಯಿಂದ ಪರಲೋಕಕ್ಕೆ ಹಿಂತಿರುಗುತ್ತಾನೆ , ಹೀಗಾಗಿ ಅಂದು ಹಸಿದವರಿಗೆ ಅನ್ನದಾನ ಮಾಡುವುದು ವಿಶೇಷ ಪುಣ್ಯಪ್ರದವಾಗಿದೆ.

ಹರಸಲು ಹಾತೊರೆದು ಬಂದು ಪಿತೃಗಳಿಗೆ ಏನನ್ನೂ ನೀಡಿದಿದ್ದಾಗ ಹಸಿವಿನಿಂದ ಕಂಗೆಟ್ಟ ಅವರು ದೀರ್ಘ ನಿಟ್ಟುಸಿರು ಬಿಟ್ಟು ಶಪಿಸಿ ಮುಂದೆ ಸಾಗುವರು. ಅದರ ಫಲವೇ ಕಚ್ಚಾಡುವ ಮನೆ, ಕಾದಾಡುವ ಮಕ್ಕಳು, ಅಶಾಂತಿಯ ವಾತಾವರಣ ಎಂಬುದರಲ್ಲಿ ಸಂದೇಹವಿಲ್ಲ. ಹೀಗೆ ಪಿತೃಪಕ್ಷದಲ್ಲಿ ಶ್ರಾದ್ಧದ ಆಚರಣೆ ಅತ್ಯಂತ ಸಮುಚಿತ. ಯಾವುದೇ ಶ್ರಾದ್ಧವನ್ನು ಮಾಡಲು ಆಗದಿರುವ ಶ್ರಾದ್ಧಕರ್ತನು ನಿರ್ಜನ ಅರಣ್ಯಕ್ಕೆ ಹೋಗಿ ಕೈಗಳನ್ನು ಮೇಲಕ್ಕೆತ್ತಿ. ನಾನು ಬಡವ ಹಾಗೂ ಅನ್ನರಹಿತನಾಗಿದ್ದೇನೆ, ನನ್ನಷ್ಟು ಪಿತೃಋಣದಿಂದ ಮುಕ್ತಗೊಳಿಸಿರಿ ಎಂದು ಬೇಡಿಕೊಳ್ಳಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಇವತ್ತಿನ ನಮ್ಮ ಸಮಾಜದಲ್ಲಿ ಅನೇಕರಿಗೆ ಇದರ ಇರುವಿಕೆಯೇ ಗೊತ್ತಿಲ್ಲದೇ ಹೋಗಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಅಂತಹ ಒಂದು ಉತ್ತಮ ಉದಾತ್ತ ಧ್ಯೇಯದ, ಕರ್ಮದ ವಾಸನೆಯೂ ಇಲ್ಲದೇ ಹೋಗುತ್ತಿರುವುದು ವಿಷಾದನೀಯ.

English summary
Pitru Paksha is a 16–lunar day period in Hindu calendar when Hindus pay homage to their ancestor (Pitrs), especially through food offerings. Here is article on Mahalaya amavasya significance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X