ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜನ ಇನ್ನೆಷ್ಟು ದಿನ ರಾಜಕೀಯ ದೊಂಬರಾಟ ನೋಡಬೇಕು?

|
Google Oneindia Kannada News

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಲೇಬೇಕೆಂದು ಹೊರಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮೇಲಿಂದ ಮೇಲೆ ಎಡವುತ್ತಲೇ ಇದ್ದರೂ ಕೆಳಕ್ಕೆ ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ಅಸಹ್ಯ ಹುಟ್ಟಿಸಿದೆ.

ಇಷ್ಟಕ್ಕೂ ರಾಜ್ಯದಲ್ಲಿ ಕಳೆದ ಎಂಟು ತಿಂಗಳಿನಿಂದ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರವನ್ನು ಉರುಳಿಸಲು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಲೇ ಬರುತ್ತಿದ್ದರೂ ಅದ್ಯಾವುದೂ ನಿರೀಕ್ಷಿತ ಫಲವನ್ನು ಕೊಟ್ಟಿಲ್ಲ ಎಂಬುದಂತು ಸತ್ಯ.

ಆಪರೇಷನ್ ಕಮಲ : ಸ್ಪೀಕರ್‌ಗೆ ಎಚ್.ಡಿ.ಕುಮಾರಸ್ವಾಮಿ ದೂರುಆಪರೇಷನ್ ಕಮಲ : ಸ್ಪೀಕರ್‌ಗೆ ಎಚ್.ಡಿ.ಕುಮಾರಸ್ವಾಮಿ ದೂರು

ಹೀಗಿರುವಾಗ ಪದೇ ಪದೇ ದೋಸ್ತಿ ಸರ್ಕಾರದ ಮೇಲೆ ಆಪರೇಷನ್ ಕಮಲ ಮಾಡಲು ಹೊರಟಿರುವುದು ಅವರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಎಂದರೂ ತಪ್ಪಾಗಲಾರದು. ಬಿಜೆಪಿ ಪಕ್ಷದ ಬಗ್ಗೆ ಜನ ಒಂದಷ್ಟು ಅಭಿಮಾನ ಹೊಂದಿದ್ದರು. ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನವನ್ನು ಪಡೆಯಲು ಸಾಧ್ಯವಾಯಿತು.

ಅವತ್ತು ಬಹುಮತ ಇಲ್ಲದಿದ್ದರೂ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತು ಪಡಿಸುವುದು ಅಸಾಧ್ಯ ಎಂಬುದು ಅರಿವಾಗುತ್ತಿದ್ದಂತೆಯೇ ರಾಜೀನಾಮೆ ನೀಡಿ ಬಂದಿದ್ದರು.

ಬಿಜೆಪಿ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ : ಸಿದ್ದರಾಮಯ್ಯಬಿಜೆಪಿ ಆಪರೇಷನ್ ಕಮಲದ ಕೆಸರಲ್ಲಿ ಉರುಳಾಡುತ್ತಿದೆ : ಸಿದ್ದರಾಮಯ್ಯ

ಅಲ್ಲಿಂದ ಶುರುವಾಗಿದ್ದೇ ಆಪರೇಷನ್ ಕಮಲ. ಹೇಗಾದರೂ ಮಾಡಿ ದೋಸ್ತಿ ಸರ್ಕಾರದ ಒಂದಷ್ಟು ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಆಡಳಿತರೂಢ ಸರ್ಕಾರದ ಮ್ಯಾಜಿಕ್ ಸಂಖ್ಯೆಯನ್ನು ಕುಗ್ಗಿಸಿ ತಮ್ಮ ಅಧಿಪತ್ಯ ಸ್ಥಾಪಿಸುವ ಕನಸನ್ನು ಜೀವಂತವಾಗಿರಿಸಿಕೊಂಡು ಬರುತ್ತಿರುವ ಯಡಿಯೂರಪ್ಪ ಈ ಅವಧಿಯಲ್ಲೇ ಮುಖ್ಯಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದಿರುವುದು ಮತ್ತು ಅದಕ್ಕಾಗಿ ಕೀಳುಮಟ್ಟದ ರಾಜಕೀಯಕ್ಕಿಳಿದಿರುವುದು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೊಂದು ಕಪ್ಪು ಚುಕ್ಕೆಯಾಗಿದೆ.

 ನಿಜಕ್ಕೂ ಬೇಸರದ ಸಂಗತಿಯಾಗಿದೆ

ನಿಜಕ್ಕೂ ಬೇಸರದ ಸಂಗತಿಯಾಗಿದೆ

ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಬಹುಶಃ ತನ್ನ ಪಾಡಿಗಿದ್ದು, ವಿರೋಧ ಪಕ್ಷದಲ್ಲಿದ್ದುಕೊಂಡು ತನ್ನ ಜವಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗಿದ್ದಿದ್ದರೆ ಗೌರವ ಸಿಗುತ್ತಿತ್ತು. ಆದರೆ ವಿರೋಧಪಕ್ಷದ ಜವಬ್ದಾರಿಯುತ ಸ್ಥಾನವನ್ನು ಮರೆತು ದಿನನಿತ್ಯ ಆಡಳಿತ ರೂಢ ಸರ್ಕಾರದ ಶಾಸಕರನ್ನು ತನ್ನತ್ತ ಸೆಳೆಯುವ ತಂತ್ರ ಹೆಣೆಯುವುದರಲ್ಲಿಯೇ ದಿನಗಳನ್ನು ಕಳೆದಿರುವುದು ನಿಜಕ್ಕೂ ಆಯ್ಕೆ ಮಾಡಿ ಕಳುಹಿಸಿದ ಜನಕ್ಕೆ ಮಾಡಿದ ದ್ರೋಹ ಎಂದರೂ ತಪ್ಪಾಗಲಾರದು. ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಹಲವು ಜವಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಆಡಳಿತ ಪಕ್ಷವನ್ನು ತಿದ್ದಿತೀಡುವ, ಎಚ್ಚರಿಸುವ ಕೆಲಸವನ್ನು ಮಾಡಬೇಕಾಗಿದೆ. ಆದರೆ ಆ ಎಲ್ಲ ಜವಬ್ದಾರಿಯನ್ನು ಮರೆತು ಕೇವಲ ಸರ್ಕಾರವನ್ನು ಕೆಡವಲು ದಿನಕ್ಕೊಂದು ತಂತ್ರಗಳನ್ನು ಹುಡುಕುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

 ತಮ್ಮ ವ್ಯಕ್ತಿತ್ವವನ್ನೇ ಹರಾಜಿಗಿಡುವಂತೆ ಮಾಡಿದೆ

ತಮ್ಮ ವ್ಯಕ್ತಿತ್ವವನ್ನೇ ಹರಾಜಿಗಿಡುವಂತೆ ಮಾಡಿದೆ

ಇಷ್ಟಕ್ಕೂ ದೋಸ್ತಿ ಸರ್ಕಾರದ ಶಾಸಕರೆಲ್ಲ ಒಟ್ಟಾಗಿದ್ದಿದ್ದರೆ ಇಂತಹದೊಂದು ಪರಿಸ್ಥಿತಿ ಒದಗಿ ಬರುತ್ತಿರಲಿಲ್ಲ. ಅವರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದರೆ ಬಿಜೆಪಿ ಆಪರೇಷನ್ ಕಮಲ ಮಾಡಲು ಅವಕಾಶವೇ ಇರುತ್ತಿರಲಿಲ್ಲ. ಆದರೆ ಅಲ್ಲಿ ಕೆಲವರು ಅಧಿಕಾರದಾಸೆಯಿಂದ ಬಾಯಿಬಿಟ್ಟುಕೊಂಡು ಕಾಯುತ್ತಿದ್ದಾರೆ. ಅವರನ್ನೇ ಟಾರ್ಗೆಟ್ ಮಾಡಿಕೊಂಡ ಬಿಜೆಪಿ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅದೆರಡು ಪಕ್ಷದ ನಾಯಕರಲ್ಲಿದ್ದಿದ್ದರೆ ಇವತ್ತು ರಾಜ್ಯದ ಜನ ಪ್ರತಿನಿತ್ಯ ರಾಜಕೀಯ ದೊಂಬರಾಟವನ್ನು ನೋಡುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಅಲ್ಲಿಯೂ ಅಧಿಕಾರದ ದಾಹ ತಮ್ಮ ವ್ಯಕ್ತಿತ್ವವನ್ನೇ ಹರಾಜಿಗಿಡುವಂತೆ ಮಾಡಿದೆ.

ನಾಲ್ವರು ಕಾಂಗ್ರೆಸ್‌ ಶಾಸಕರನ್ನು ಅಮಾನತುಗೊಳಿಸಲು ತೀರ್ಮಾನನಾಲ್ವರು ಕಾಂಗ್ರೆಸ್‌ ಶಾಸಕರನ್ನು ಅಮಾನತುಗೊಳಿಸಲು ತೀರ್ಮಾನ

 ಪಾರುಪತ್ಯೆ ಮೆರೆಯಬೇಕೆಂದು ಬಯಸುತ್ತಿದ್ದಾರೆ

ಪಾರುಪತ್ಯೆ ಮೆರೆಯಬೇಕೆಂದು ಬಯಸುತ್ತಿದ್ದಾರೆ

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವಾಗ ಶಾಸಕರಲ್ಲಿ ಇಲ್ಲದ ಅಧಿಕಾರದ ದಾಹ ಇದೀಗ ಶುರುವಾಗಿದೆ. ಆ ದಾಹವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ದಾಳವನ್ನು ಉರುಳಿಸಿ ಬಿಡುತ್ತಲೇ ಇದ್ದಾರೆ. ಜತೆಗೆ ಆಡಳಿತ ಮತ್ತು ವಿಪಕ್ಷಗಳ ನಾಯಕರು ತಾವೆಷ್ಟು ಪ್ರಾಮಾಣಿಕರು ಎಂಬುದನ್ನು ತೋರಿಸುವ ಸಲುವಾಗಿ ಕೆಸರು ಎರಚಾಡಿಕೊಳ್ಳುತ್ತಿದ್ದಾರೆ. ಖುದ್ದು ತಾವೇ ಡೀಲ್ ಮಾಡಿರುವ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ತೆರೆಮರೆಯಲ್ಲಿ ಮಾಡುತ್ತಿರುವ ತಂತ್ರಗಳನ್ನು ತೆರೆದಿಟ್ಟಿದ್ದಾರೆ. ಆದರೆ ಇದರಿಂದ ಎಲ್ಲವೂ ಸರಿಹೋಯಿತು ಎಂದು ಹೇಳಲು ಸಾಧ್ಯವಿಲ್ಲ. ಜತೆಗೆ ಇಷ್ಟಕ್ಕೆ ಬಿಎಸ್ ವೈ ತೆಪ್ಪಗೆ ಕುಳಿತು ಬಿಡುತ್ತಾರೆ ಎಂದು ನಂಬಲು ಸಾಧ್ಯವಿಲ್ಲ. ಏಕೆಂದರೆ ಬಿ.ಎಸ್.ಯಡಿಯೂರಪ್ಪ ಈ ಅವಧಿಯಲ್ಲೆ ಮುಖ್ಯಮಂತ್ರಿಯಾಗಬೇಕು. ಮುಂದಿನ ಅವಧಿ ತನಕ ಕಾಯಲು ಅವರಿಂದ ಸಾಧ್ಯವಿಲ್ಲ. ಏಕೆಂದರೆ ಅಷ್ಟು ಹೊತ್ತಿಗೆ ಅವರಿಗೆ ನೂರೆಂಟು ವಿಘ್ನಗಳಾಗಬಹುದು. ಆದ್ದರಿಂದ ಅದು ಏನೇ ಆಗಲಿ ದೋಸ್ತಿ ಸರ್ಕಾರವನ್ನು ನೆಲಕ್ಕುರುಳಿಸಿ ತಮ್ಮ ಪಾರುಪತ್ಯೆ ಮೆರೆಯಬೇಕೆಂದು ಬಯಸುತ್ತಿದ್ದಾರೆ.

 ರಾಜಕೀಯ ಆಟ ನೋಡುವುದು ಅನಿವಾರ್ಯ

ರಾಜಕೀಯ ಆಟ ನೋಡುವುದು ಅನಿವಾರ್ಯ

ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ಬಿಎಸ್ ವೈ ಎಡವಿ ಬೀಳುತ್ತಲೇ ಇದ್ದರೂ ತನ್ನ ಪ್ರಯತ್ನವನ್ನು ಮಾತ್ರ ಬಿಡುತ್ತಿಲ್ಲ. ಈಗಾಗಲೇ ಜನ ಎಲ್ಲವನ್ನೂ ನೋಡುತ್ತಲೇ ಬರುತ್ತಿದ್ದು, ತಮ್ಮ ಆಕ್ರೋಶವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೊರ ಹಾಕಲಿದ್ದಾರೆ ಎಂಬುದಂತು ಸತ್ಯ. ಲೋಕಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿವೆ. ಎಲ್ಲ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ನಮ್ಮ ರಾಜ್ಯದಲ್ಲಿ ಅದಕ್ಕೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿದೆ. ದೋಸ್ತಿ ಸರ್ಕಾರದ ನಾಯಕರು ಸರ್ಕಾರವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದರೆ, ವಿಪಕ್ಷದ ನಾಯಕರು ಸರ್ಕಾರವನ್ನು ಕೆಡವಲು ಕಾಯುತ್ತಿದ್ದಾರೆ. ಇವರ ನಡುವೆ ರಾಜ್ಯದ ಜನ ಅಸಹಾಯಕರಾಗಿ ತೆಪ್ಪಗೆ ಕೂರುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಅತಂತ್ರ ಸ್ಥಿತಿಯನ್ನು ತಂದುಕೊಂಡ ತಪ್ಪಿಗೆ ಮತದಾರರು ಇಂತಹದೊಂದು ರಾಜಕೀಯ ಆಟವನ್ನು ನೋಡುವುದು ಅನಿವಾರ್ಯವಾಗಿದೆ.

 ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ: ಸಿದ್ದರಾಮಯ್ಯ ಟೀಕೆ ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ: ಸಿದ್ದರಾಮಯ್ಯ ಟೀಕೆ

English summary
People are bored about Operation lotus.It has become a black spot for the national party BJP.Here's a complete description of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X