ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಪಶ್ಚಿಮ ಜಾಗರಪೂಜೆ: ಮಲಗಿರುವ ಕೃಷ್ಣನ ಎಬ್ಬಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 21: ಉಡುಪಿ ಕೃಷ್ಣ ಮಠ ವಿಶೇಷ ಸಂಪ್ರದಾಯ, ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ, ಅಶ್ವಯುಜ ಮಾಸದಲ್ಲಿ ಯೋಗ ನಿದ್ರೆಯಲ್ಲಿ ಇರುವ ಮಾಧವನನ್ನು ಎಚ್ಚರಿಸುವ, ಪಶ್ಚಿಮ ಜಾಗರ ಪೂಜೆ ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹಣತೆಗಳ ಬೆಳಕಿನಿಂದ ಕೃಷ್ಣ ಸಾನಿಧ್ಯ ಕಂಗೊಳಿಸಿದರೆ, ವಾದ್ಯಘೋಷಗಳು ಭಕ್ತರ ಮನಸ್ಸಿಗೆ ಮುದ ನೀಡುತ್ತದೆ. ಉಷಾ ಕಾಲದ ಪೂಜೆಯ ಅದ್ಭುತ ದೃಶ್ಯಕಾವ್ಯಕ್ಕೆ ಮನಸೋರೆಗೊಳಿಸುತ್ತದೆ.

ಹಣತೆ ಬೆಳಕಿನಿಂದ ಕಂಗೊಳಿಸುವ ಉಡುಪಿ ಕೃಷ್ಣ ಮಠ. ಶಂಖ, ನಗಾರಿ, ಡಮರು, ಡೋಲು ವಾದ್ಯಘೋಷಗಳು, ರಂಗನಾಯಕ ರಾಜೀವ ಲೋಚನಾ ರಮಣನೇ ಬೆಳಗಾಯಿತೆನೆನ್ನುತ... ಎನ್ನುವ ಮುಂಜಾನೆಯ ಉದಯರಾಗ. ಪರ್ಯಾಯ ಅದಮಾರು ಮಠಾಧೀಶ ಈಶ ಪ್ರಿಯ ಶ್ರೀಗಳಿಂದ ಕೂರ್ಮಾರತಿ.

ಇದು ದಿನ‌ಕರ ದಿನ ಆರಂಭಿಸು ಮುನ್ನ, ಮುಂಜಾವಿನ ಸಮಯದಲ್ಲಿ ಯೋಗ ನಿದ್ರೆಯಲ್ಲಿ ಇರುವ ಮಾಧ್ವನನ್ನು ಎಚ್ಚರಿಸುವ ವಿಶೇಷ ಪೂಜೆ. ಆಶ್ವಯುಜ ಶುದ್ಧ ಏಕಾದಶಿಯಿಂದ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ತನಕ ದೇವರನ್ನು ಯೋಗನಿದ್ರೆಯಿಂದ ಎಬ್ಬಿಸುವ ಸಂಭ್ರಮದ ಪಶ್ಚಿಮ ಜಾಗರ ಪೂಜೆ. ಉಡುಪಿ ಕೃಷ್ಣನಿಗೆ 16 ಬಗೆಯ ಪೂಜೆ ಮಾಡುತ್ತಾರೆ. ಆದರೆ ಎಲ್ಲಾ ಪೂಜೆಗಳಿಗೂ ಕಳಶವಿಟ್ಟಂತೆ ಈ ಪಶ್ಚಿಮ ಜಾಗರ ಪೂಜೆ ನಡೆಯುತ್ತದೆ.

Pashchima Jagara Pooja To Awaken Of Sri Krishna In Udupi Krishna Math

ಭಕ್ತರ ಆರಾಧನೆಯ ಕಲ್ಪನೆಗಳೇ ಅದ್ಭುತ, ತಮ್ಮಂತೆಯೇ ದೇವರು ಎಂದು ಭಾವಿಸುವ ಭಕ್ತರು ದೇವರಿಗೂ ನಿದ್ರೆ ಮಾಡಿಸಿ, ಮತ್ತೆ ಅವರನ್ನು ಸುಪ್ರಭಾತ ಪೂಜೆಗಳಿಂದ ಎಬ್ಬಿಸುವ ಪರಿಯೇ ಅನನ್ಯ. ಈ ವೇಳೆ ಉಡುಪಿಯ ಕೃಷ್ಣ ಮಠದ ಆವರಣದಲ್ಲಿ ಅಪರೂಪದ ಸೂರ್ಯವಾದ್ಯವನ್ನು ಮೊಳಗಿಸಲಾಗುತ್ತದೆ. ಅಪರೂಪದ ವಾದ್ಯವನ್ನು ತಲೆಯಮೇಲೆ ಕೀಟದಂತೆ ಧರಿಸಿ, ಅದನ್ನು ನುಡಿಸುವುದು ಒಂದು ವಿಶಿಷ್ಟ ಆಚರಣೆ.

ಕಡೆಗೋಲು ಕೃಷ್ಣನ ವಿಶ್ವರೂಪ ದರ್ಶನ ಕಾಣಲು ಅದ್ಬುತವಾಗಿರುತ್ತದೆ. ಸಾವಿರಾರು ದೀಪಗಳನ್ನು ಬೆಳಗಿ ದೇವರ ಆರಾಧನೆ ನಡೆಯುತ್ತದೆ. ಸೂರ್ಯನ ಬೆಳಕು ಹರಿಯುವ ಮುನ್ನವೇ ಚಳಿಗಾಲದ ಈ ಹಿತವಾದ ವಾತಾವರಣದಲ್ಲಿ ಈ ಅನುಪಮ ಗಳಿಗೆಯನ್ನು ಅನುಭವಿಸುವುದೇ ಒಂದು ವಿಶಿಷ್ಟ ಅನುಭವ. ಆಶ್ವೀಜ ಮಾಸದಿಂದ ಕಾರ್ತಿಕ ಮಾಸದವರೆಗೆ ಈ ಅಪರೂಪದ ಪೂಜೆ ನೋಡಬಹುದು.

Pashchima Jagara Pooja To Awaken Of Sri Krishna In Udupi Krishna Math

ಪಶ್ಚಿಮ ಜಾಗರಣ ಪೂಜೆ ನಡೆಯುವುದು ಮುಂಜಾವಿನ ಜಾವ 5.45ರ ವೇಳೆಗೆ. ಈ ಪೂಜೆಗೆ ಬೆಳಗ್ಗೆ 3.45ರಿಂದ 5.45ರವರೆಗೆ ಮಠದ ವಾದ್ಯಗಳಿಂದ ವಿಶೇಷ ವಾದನ ನಡೆಯುತ್ತದೆ. ಶಂಖನಾದ, ನಗಾರಿ, ಬಾರ್ ತಂಬೂರಿ, ರಣಕಹಳೆ, ಡೋಲು, ದಮಣಿ, ತ್ರಾಸೆ, ಉಡುಕುನಾಗಸ್ವರ, ಸೂರ್ಯವಾದ್ಯ, ಸ್ಯಾಕ್ಸೋ ಫೋನ್, ಕೊಳಲು, ವೀಣೆ, ವಯಲಿನ್ ವಾಹನಗಳನ್ನು ಶ್ರೀಕೃಷ್ಣನ ಗರ್ಭಗುಡಿಯ ಎದುರು ನುಡಿಸಲಾಗುತ್ತದೆ.

ಪಶ್ಚಿಮ ಜಾಗರಣ ಪೂಜೆ ಆರಂಭವಾಗುವ ಮುನ್ನ ಪರ್ಯಾಯ ಶ್ರೀ ಮತ್ತು ಇತರ ಮಠಾಧೀಶರು ಆಗಮಿಸಿ ನೈರ್ಮಲ್ಯ ಪೂಜೆ, ಬಾಲವಿಸರ್ಜನೆ, ಉಷಾಕಾಲ ಗೋಪೂಜೆ, ಅಕ್ಷಯ ಪಾತ್ರೆ, ಪಂಚಾಮೃತ ಅಭಿಷೇಕಗಳನ್ನು ಮಾಡುತ್ತಾರೆ. ಪಶ್ಚಿಮ ಜಾಗರಣ ಪೂಜೆಯ ಬಳಿಕ ಉಧ್ವರ್ತನ, ಕಲಶ ಪೂಜೆ, ತೀರ್ಥ ಪೂಜೆ, ಅಲಂಕಾರ ಪೂಜೆ ನಂತರ ಲಕ್ಷ ತುಳಸಿ ಅರ್ಚನೆ, ಮಹಾಪೂಜೆಗಳು ಶ್ರೀಕೃಷ್ಣನಿಗೆ ನಡೆಯುತ್ತದೆ.

Pashchima Jagara Pooja To Awaken Of Sri Krishna In Udupi Krishna Math

ಒಟ್ಟಿನಲ್ಲಿ ಸೂರ್ಯೋದಯದ ಮುನ್ನ ಇರುವ ಬ್ರಾಹ್ಮೀ ಮುಹೂರ್ತದಲ್ಲಿ ನಡೆಸುವ ಪೂಜೆಗಳಿಗೆ ಸಿಕ್ಕುವ ಫಲ ಹೆಚ್ಚು ಅನ್ನುವುದು ಭಕ್ತರ ನಂಬಿಕೆ. ಉದಯಕಾಲದ ಈ ಪೂಜೆ ಕಂಡರೆ ದಿನವಿಡೀ ಉಲ್ಲಾಸ ಮನೆಮಾಡುತ್ತದೆ ಅನ್ನೋದು ಅವರ ವಿಶ್ವಾಸ. ಉಡುಪಿಗೆ ಈ ತಿಂಗಳಿನಲ್ಲಿ ಬಂದರೆ ಸೂರ್ಯ ಮೂಡುವ ಮುನ್ನ ಈ ಪೂಜೆಯನ್ನು ಕಾಣಲು ಮರೆಯಬೇಡಿ.

English summary
The Special worship held to awaken of sri krishna at the Krishna Math in Udupi as part of the Pashchima Jagara Pooja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X