• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿ

By Lekhaka
|

ಹಳ್ಳಿಯ ವಾತಾವರಣದಲ್ಲಿರುವ ಯಾವುದೇ ತಂದೆ ತಾಯಿಯನ್ನು ಪ್ರಶ್ನಿಸಿ ನೋಡಿ, ಖಂಡಿತ ಹೀಗೆ ಹೇಳುತ್ತಾರೆ. ಮಗನಿಗೆ ಮದುವೆ ಆಗೋ ತನಕ ಆತ ಸಿಟಿಲೇ ಇರಲಿ. ಆಮೇಲೆ ಬೇಕಿದ್ರೆ ಮನೆಗೆ ಬರಲಿ. ಈಗಲೇ ಆತ ಹಳ್ಳಿ ಸೇರಿದ್ರೆ ಮದುವೆ ಮಾಡೋದು ಕಷ್ಟ ಆಗುತ್ತೆ. ಹುಡುಗಿ ಸಿಗೋದಿಲ್ಲ ಅನ್ನೋದು ಈ ನಿರ್ಧಾರಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಕಾರಣವೇನೋ ಸರಿ. ಹಾಗಂತ ನಾವು ಏಕಾಏಕಿ ಹುಡುಗಿಯರು ಸಿಟಿ ವ್ಯಾಮೋಹಕ್ಕೆ ಜೋತುಬಿದ್ದಿದ್ದಾರೆ. ಅವರಿಗೆ ಹಳ್ಳಿ ಅಂದ್ರೆ ಅಸಡ್ಡೆ. ಸಿಟಿಯ ಐಶಾರಾಮಿ ಜೀವನ ಬೇಕು ಎಂದು ಹುಡುಗಿಯರು ಬಯಸುತ್ತಾರೆ ಎಂದು ಕೇವಲ ಹುಡುಗಿಯರನ್ನು ದೂರುವುದಕ್ಕೆ ಸಾಧ್ಯವಿಲ್ಲ. ಯಾಕಂದರೆ ಇದಕ್ಕೆ ಕಾರಣ ಹುಡುಗಿಯರು ಮಾತ್ರ ಅಲ್ಲವೇ ಅಲ್ಲ. ಹಾಗಾದ್ರೆ ಈಗಿನ ಯುವಕ ಯುವತಿಯರು ಹಳ್ಳಿ ಬಿಟ್ಟು ಸಿಟಿ ಪಾಲಾಗುತ್ತಿರುವುದಕ್ಕೆ ಯಾರು ಕಾರಣ? ಖುದ್ದು ಅವರೇ ಕಾರಣರಾ? ಪೋಷಕರು ಕಾರಣನಾ? ಇಲ್ಲ ವ್ಯವಸ್ಥೆ ಕಾರಣವಾ?

ಸಿಟಿ ಪಾಲಾಗುತ್ತಿರುವ ಯುವ ಜನತೆ: ತಮ್ಮ ಮಕ್ಕಳು ಸಿಟಿ ಪಾಲಾಗುತ್ತಿರುವುದಕ್ಕೆ ಹೆಚ್ಚಿನ ಹಳ್ಳಿಯ ಪೋಷಕರಲ್ಲಿ ಪಶ್ಚಾತ್ತಾಪ ಇಲ್ಲವೇ ಇಲ್ಲ. ಇಲ್ಲಿ ಒದ್ದಾಡುವುದಕ್ಕಿಂತ ಒಳ್ಳೆಯ ವಿದ್ಯೆ ಕಲಿತು ಸಿಟಿಲಿ ಯಾವುದಾದರೂ ಉದ್ಯೋಗ ಮಾಡ್ಕೊಂಡು ಆರಾಮಾಗಿ ಇರಲಿ ಎಂದು ಆಶಿಸುವ ಪೋಷಕರೇ ಬಹುಪಾಲು. ಮಕ್ಕಳನ್ನು ಸಿಟಿ ಸೇರಿಸುತ್ತಿರುವುದಕ್ಕೆ ಹಳ್ಳಿಗಳಲ್ಲಿ ಅಲಭ್ಯವಾಗಿರುವ ಉತ್ತಮ ವಿದ್ಯಾಭ್ಯಾಸದ ಕೊರತೆಯೂ ಒಂದು. ಹೆಚ್ಚಾಗಿ ಹಳ್ಳಿಗಳಲ್ಲಿ ಮಕ್ಕಳನ್ನು ಅವರ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಸೇರಿಸಿ ಬಿಡುತ್ತಾರೆ. ಅದು ಅವರಿಗೆ ಅನಿವಾರ್ಯ ಕೂಡ. ವಿದ್ಯಾಭ್ಯಾಸಕ್ಕಾಗಿ ಹಳ್ಳಿ ಬಿಟ್ಟ ಮಕ್ಕಳು ಆಗಾಗ ಹಬ್ಬಕ್ಕೆ, ರಜೆಗೆ ಮನೆಗೆ ಹೋಗೋದು ಬಿಟ್ರೆ ಮತ್ತೆ ಪುನಃ ಹಳ್ಳಿ ವಾಸ್ತವ್ಯಕ್ಕೆ ಜಾರುವುದು ಬಹಳ ಕಡಿಮೆ. ಅವರ ಜೀವನ ಸಿಟಿ ಜೀವನಶೈಲಿಗೆ ಒಗ್ಗುವಂತಾಗುತ್ತದೆ.

ಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿ

ವಿದ್ಯಾಭ್ಯಾಸದ ಸಂದರ್ಭದಲ್ಲಿ ಹಾಸ್ಟೆಲ್ ಗೆ ಸೇರಿಸಿದರೆ ಮಕ್ಕಳಿಗೆ ಮನೆ ಮೇಲಿನ ಪ್ರೀತಿಯೇನು ಕಡಿಮೆ ಆಗೋದಿಲ್ಲ. ಅವರು ಆಗಾಗ ರಜೆಗೆ ಮನೆಗೆ ಬರ್ತಾರೆ. ನಮ್ ಜೊತೆಗೆ ಇರ್ತಾರೆ. ಇನ್ನೇನು ಮಾಡೋದು ಒಳ್ಳೆಯ ವಿದ್ಯೆ ಕೊಡ್ಬೇಕು ಅಂದ್ರೆ ಹಾಸ್ಟೆಲ್ ಗೆ ಸೇರಿಸಲೇ ಬೇಕು. ಸಿಟಿಗೆ ಕಳಿಸಲೇಬೇಕು. ಹಳ್ಳಿಲೇ ಇದ್ರೆ ಶಾಲೆ-ಕಾಲೇಜು ಎಲ್ಲಾ ಕನಸಿನ ಮಾತಾಗುತ್ತೆ. ಈಗಿನ ಕಾಲದಲ್ಲಿ ವಿದ್ಯೆ ಇಲ್ಲದೆ ಇದ್ರೆ ಏನ್ ಮಾಡೋಕೆ ಆಗುತ್ತೆ ಹೇಳಿ ಎಂದು ಪೋಷಕರು ವಿದ್ಯಾಭ್ಯಾಸದ ಹಂತದಲ್ಲಿರುವಾಗ ಹೇಳಿಕೊಳ್ಳುವುದು ಸಾಮಾನ್ಯ. ಆದರೆ ಮುಂದೆ ಇದೇ ಅವರ ಜೀವನದ ಮುಳುವಾಗುವ ಸಾಧ್ಯತೆಯ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ.

ಕೆಲಸ ಗಿಟ್ಟಿಸುವ ಮನಸ್ಥಿತಿಗೆ ತಳ್ಳುವುದು: ಹತ್ತಾರು ಎಕರೆ ತೋಟವಿದ್ದರೂ, ಲಕ್ಷಾಂತರ ರೂಪಾಯಿ ಆದಾಯವಿದ್ದರೂ, ಉತ್ತಮ ವಾತಾವರಣವಿದ್ದರೂ ನಮ್ಮ ಯುವಕ ಯುವತಿಯರು ಎಲ್ಲವನ್ನೂ ಬಿಟ್ಟು ನಗರಕ್ಕೆ ವಲಸೆ ಹೋಗಿ ಸರಿಯಾದ ಊಟ ತಿಂಡಿ ತಿನ್ನದೆ, ಒತ್ತಡದ ಜೀವನದ ಜೊತೆಗೆ ನಿದ್ದೆ ಬಿಟ್ಟು ದುಡಿದ ಆದಾಯ ಆಯಾ ದಿನಕ್ಕೆ ಸೀಮಿತವಾಗುವಂತಾಗುತ್ತದೆ. ಹಾಗಂತ ನಾವು ಹಳ್ಳಿ ಬಿಟ್ಟು ಸಿಟಿ ಸೇರಿದ ಯುವಕ-ಯುವತಿಯರದ್ದು ತಪ್ಪು ಅನ್ನುವುದಕ್ಕಿಂತ ಅವರ ಪೋಷಕರದ್ದೇ ಬಹುಪಾಲು ತಪ್ಪು ಎಂದರೆ ಅತಿಶಯೋಕ್ತಿಯಾಗಲಾರದು. ವಿದ್ಯೆಯ ನೆಪದಲ್ಲಿ ಊರು ಬಿಡಿಸುವ ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆಯಿಂದ ಸಿಟಿಯಲ್ಲಿ ಕೆಲಸ ಗಿಟ್ಟಿಸುವ ಮನಸ್ಥಿತಿಯನ್ನು ಬೆಳೆಸುತ್ತಾರೆಯೇ ಹೊರತು, ತಾವೇ ಒಂದಷ್ಟು ಜನಕ್ಕೆ ಕೆಲಸ ಕೊಡುವಂತೆ ಬೆಳೆಯಿರಿ ಎಂದು ಹೇಳುವುದೇ ಇಲ್ಲ.

ತಲೆಯಲ್ಲಿ ತುಂಬಲಾಗುವ ಹುಳ: ಮಕ್ಕಳಿಗೆ ಹಳ್ಳಿಯ ಬಗ್ಗೆ ಒಲವು ಬರುವಂತೆ ಬೆಳೆಸುವುದೇ ಇಲ್ಲ. ಸರಿಯಾಗಿ ಓದಿ ಒಳ್ಳೆಯ ಮಾರ್ಕ್ಸ್ ತೆಗೆದು ಇಂಜಿನಿಯರ್ರೋ, ಡಾಕ್ಟರೋ ಆಗಿ ಬಿಡು, ಇಲ್ಲ ಒಂದು ಒಳ್ಳೆಯ ಉದ್ಯೋಗ ಗಿಟ್ಟಿಸಿಬಿಡು ಎಂದು ಸಣ್ಣವರಿರುವಾಗಿನಿಂದಲೇ ಪೋಷಕರು ಮಕ್ಕಳ ತಲೆಯಲ್ಲಿ ತುಂಬಲು ಶುರುಮಾಡಿ ಬಿಡುತ್ತಾರೆ. ನಮ್ಮ ಹಾಗೆ ಒದ್ದಾಟದ ಜೀವನ ನಿಂಗೆ ಬೇಡ ಎಂಬುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಪೋಷಕರು ನುಡಿಯುವ ನುಡಿ. ಸಣ್ಣವರಿರುವಾಗಿನಿಂದಲೇ ಪೋಷಕರು ತಲೆಗೆ ತುಂಬುವ ಹಳ್ಳಿ ಜೀವನ ಕಷ್ಟ ಅನ್ನೋ ಮನಸ್ಥಿತಿ ಮಕ್ಕಳನ್ನು ದೊಡ್ಡವರಾದ ಮೇಲೆ ಸಿಟಿಗೆ ವಲಸೆ ಹೋಗುವಂತೆ ಮಾಡುತ್ತದೆ.

ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ

ವಾಪಸ್ ಬರಬಾರದು ಎಂದು ಬಯಸುವುದಿಲ್ಲ: ಹಾಗಂತ ಪೋಷಕರು ಮನಸ್ಸಲ್ಲಿ ಮಕ್ಕಳು ಪುನಃ ಹಳ್ಳಿಗೆ ಬರಬಾರದು ಎಂಬ ಮನಸ್ಥಿತಿ ಯಾವಾಗಲೂ ಇರುವುದಿಲ್ಲ. ನಮ್ಮ ಕೈಯಲ್ಲಿ ಆಗುವಷ್ಟು ದಿನ ನಾವಿಲ್ಲಿ ತೋಟ-ಮನೆ ನೋಡ್ಕೊಂಡು ಇರ್ತೀವಿ. ಅಲ್ಲಿವರೆಗೂ ಅವನು ವಿದ್ಯೆ ಕಲಿತು ಸಿಟಿಲೊಂದು ಕೆಲಸ ಗಿಟ್ಟಿಸಿಕೊಂಡು ಆರಾಮಾಗಿ ಇರಲಿ. ನಮ್ಮ ಕೈಯಲ್ಲಿ ಆಗದೇ ಇದ್ದಾಗ ಅವರು ವಾಪಸ್ ಬರಲಿ ಎಂದೇ ಬಯಸುತ್ತಿರುತ್ತಾರೆ. ಆದರೆ ದುರದೃಷ್ಟವಶಾತ್ ಕಾಲ ಮಿಂಚಿರುತ್ತದೆ. ಮಕ್ಕಳು ವಾಪಸ್ ಹಳ್ಳಿ ಸೇರುವ ಮನಸ್ಥಿತಿಯಿಂದ ದೂರವೇ ಸರಿದಿರುತ್ತಾರೆ.

ಹತ್ತು-ಹನ್ನೆರಡನೇ ವಯಸ್ಸಲ್ಲಿ ಹಾಸ್ಟೆಲ್ ಸೇರಿ ಅಪರೂಪಕ್ಕೆ ಮನೆಗೆ ಬಂದಾಗ ಅಮ್ಮನ ಕೈಯಡುಗೆ ಬೇಕು ಎಂದು ಮಾಡಿಸಿಕೊಂಡು ತಿಂದು, ಹಾಸ್ಟೆಲ್ ನಲ್ಲಿ ಟಿವಿನೇ ನೋಡೊಕೆ ಆಗಿಲ್ಲ ಎಂದು ಟಿವಿ ಮುಂದೆಯೋ ಇಲ್ಲ ಮೊಬೈಲ್ ಮುಂದೆಯೋ ಕುಳಿತು ಒಂದೆರಡು ದಿನ ರಜೆ ಕಳೆದು ವಾಪಸ್ ಮರಳಿ ಬಿಡುತ್ತಾರೆ. ಈ ಸಮಯದಲ್ಲಿ ಅವರಿಗೆ ತೋಟದ ಕಡೆಯಾಗಲಿ, ಅಪ್ಪನ ಕೆಲಸದ ಕಾರ್ಯವೈಖರಿಯ ಬಗ್ಗೆಯಾಗಲಿ, ದನ-ಕರು, ಆಳು-ಕಾಳು, ಮನೆಯ ಪರಿಸರದ ಆಗುಹೋಗುಗಳ ಬಗ್ಗೆಯಾಗಲಿ, ಹಿತ್ತಲು, ಗಿಡಗಳು, ಮರಗಳು ಇತ್ಯಾದಿ ಯಾವುದರ ಬಗ್ಗೆಯೂ ತಿಳಿದುಕೊಳ್ಳುವುದಕ್ಕಾಗಲಿ ಅಥವಾ ತಿಳಿಸುವುದಕ್ಕಾಗಲೀ ಸಮಯವೇ ಸಿಗುವುದಿಲ್ಲ. ಹಾಸ್ಟೆಲ್ ನಿಂದ ಅಪರೂಪಕ್ಕೆ ಬಂದ ಮಕ್ಕಳಲ್ಲಿ ಹೇಗೆ ತಾನೆ ಪೋಷಕರು ಗೊಬ್ಬರ ಹೊರುವುದನ್ನೋ ಇಲ್ಲ ಕಟ್ಟಿಗೆ ಮಾಡಿಸುವುದನ್ನೋ ಇಲ್ಲಾ ಗಿಡಗಳ, ದನಕರುಗಳ ಚಾಕರಿ ಮಾಡುವುದನ್ನೋ ಮಾಡಿಸುತ್ತಾರೆ ಹೇಳಿ? ಖಂಡಿತ ಮಾಡಿಸುವುದಿಲ್ಲ. ಹೀಗೆ ಇವೆಲ್ಲವೂ ಅವರ ಪಾಲಿನ ಕಣ್ಣಾರೆ ನೋಡಿದ ಅಪರಚಿತ ಕೆಲಸಗಳಾಗಿ ಮಾರ್ಪಡುತ್ತಾ ಸಾಗುತ್ತದೆ.

ಅರ್ಧ ಜೀವನ ಹಾಸ್ಟೆಲ್ ನಲ್ಲಿ, ಇನ್ನು ಅರ್ಧ ಜೀವನ ಸಿಟಿಯ ಕೆಲಸ ಅಂತ ಕಳೆದು ನಂತರ ವಯಸ್ಸು ನಲವತ್ತಾದ ಮೇಲೆ ವಯಸ್ಸಾಗಿರುವ ಪೋಷಕರು ಮಕ್ಕಳನ್ನು ಇನ್ ನನ್ ಕೈಯಲ್ಲಿ ಆಗಲ್ಲ, ನೀನೇ ಮನೆಗೆ ಬಂದು ಬಿಡು ಅಂದ್ರೆ ಅವರು ಹಳ್ಳಿ ಜೀವನಕ್ಕೆ ಹೋಗಲು ಹೇಗೆ ತಾನೆ ಸಿದ್ಧರಿರುತ್ತಾರೆ? ಅದಾಗಲೇ ಸಿಟಿ ಜೀವನಕ್ಕೆ ಒಗ್ಗಿಕೊಂಡ ಅವರು ಹಳ್ಳಿಯ ಪರಿಸರ ವ್ಯವಸ್ಥೆಯನ್ನು, ಅಪ್ಪನ ವ್ಯವಹಾರವನ್ನು ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯವನ್ನಾದರೂ ಹೊಂದಿರಲು ಹೇಗೆ ಸಾಧ್ಯ? ಒಂದು ವೇಳೆ ನಲವತ್ತರ ಆಸುಪಾಸಲ್ಲಿ ಪುನಃ ಹಳ್ಳಿಗೆ ಸೇರುವ ಮನಸ್ಸು ಮಾಡಿದರೂ ಅವರಿಗೆ ಹಳ್ಳಿಯ ಪರಿಸರ ವ್ಯವಸ್ಥೆಯನ್ನು ನಿಭಾಯಿಸಿ ಅಪ್ಪ ಮಾಡಿಟ್ಟ ತೋಟವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದಕ್ಕಾಗಲೀ ಅಥವಾ ಇರೋ ಸ್ಥಿತಿಯಲ್ಲೇ ನೋಡಿಕೊಂಡು ಹೋಗುವುದಕ್ಕಾಗಲೀ ಸಾಧ್ಯವಾದೀತೇ? ಅದೆಷ್ಟೋ ದಶಕಗಳ ಕಾಲ ಒಂದೇ ಯಜಮಾನರನ್ನು ನೋಡಿದ್ದ ಅಲ್ಲಿನ ಕೂಲಿಕಾರ್ಮಿಕರು ಹೊಸ ವ್ಯಕ್ತಿಯನ್ನು ಹೇಗೆ ತಾನೇ ಸ್ವೀಕರಿಸಿಯಾರು? ಸ್ವೀಕರಿಸಿದರೂ ಅಪ್ಪನಿಗೆ ಗೊತ್ತಿದ್ದಷ್ಟು ಮಗನಿಗೆ ಏನೂ ಗೊತ್ತಿಲ್ಲ ಅನ್ನೋ ಮಾತು ಬರುವುದಿಲ್ಲವೇ? ಇದನ್ನ ನಿಭಾಯಿಸೋ ಸಾಮರ್ಥ್ಯ ಆತನಿಗೆ ಹೇಗೆ ತಾನೆ ಬಂದೀತು?

ತೋಟಕ್ಕೆ ಯಾವಾಗ ಏನು ಹಾಕಬೇಕು? ಯಾವ ಕೆಲಸ ಯಾವಾಗ ಮಾಡಿಸಬೇಕು? ಹವಾಮಾನ ವೈಪರೀತ್ಯವನ್ನು ಎದುರಿಸಿ ಬೆಳೆ ತೆಗೆಯುವುದು ಹೇಗೆ? ಮಾರುಕಟ್ಟೆ ಏರಿಳಿತವನ್ನು ಅರ್ಥೈಸಿಕೊಂಡು ಬೆಳೆಯನ್ನು ಮಾರುವುದು, ಹಳ್ಳಿಯ ರಾಜಕೀಯ ವ್ಯವಸ್ಥೆಯನ್ನು ನಿರ್ವಹಿಸುವುದು ಇದೆಲ್ಲಾ ಅಷ್ಟು ಸುಲಭದ ಮಾತಾದೀತೇ? ಇದೆಲ್ಲಾ ಮ್ಯಾಟರ್ರೇ ಅಲ್ಲ. ಅವನಿಗೆ ವಿದ್ಯೆ ಇರುವುದಿಲ್ಲವೇ? ಖಂಡಿತ ನಿಭಾಯಿಸುವುದಕ್ಕೆ ಸಾಧ್ಯವಿದೆ ಎಂದು ನೀವಂದುಕೊಂಡಿದ್ದರೂ ವಯಸ್ಸು ಅನ್ನುವುದು ಅವರ ಉತ್ಸಾಹವನ್ನು ಕುಂದಿಸಿರುವ ಸಾಧ್ಯತೆ ದಟ್ಟವಾಗಿರುತ್ತದೆ. ಹದಿಹರೆಯದ ಸಮಯದಲ್ಲಿ ಸಿಟಿ ಜೀವನ ಮತ್ತು ಅಲ್ಲಿನ ಆಫೀಸ್ ವ್ಯವಸ್ಥೆಯಲ್ಲಿ ಬದುಕಿದ ಅವರು ಹಳ್ಳಿಯ ವ್ಯವಸ್ಥೆಯನ್ನು ನಿರ್ವಹಿಸುವುದು ಅಷ್ಟು ಸುಲಭವಾಗುವುದಿಲ್ಲ. ಆಫೀಸ್ ವಾತಾವರಣಕ್ಕೂ ಹಳ್ಳಿಯ ಜಂಜಾಟಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ.

ಇನ್ನು ಹಾಸ್ಟೆಲ್ ನಲ್ಲಿದ್ದಾಗ ಎಕ್ಸಾಂ, ಓದು ಎಂದೂ, ಕೆಲಸಕ್ಕೆ ಸೇರಿದ ಮೇಲೆ ಆಫೀಸಲ್ಲಿ ರಜಾ ಸಿಗುತ್ತಿಲ್ಲವೆಂದೂ ಮನೆಯ ಅದೆಷ್ಟೋ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ದೂರ ಉಳಿದವರು ಅವರ ಜೀವನದ ಅರ್ಧ ಆಯಸ್ಸು ಕಳೆದ ಮೇಲೆ ವಾಪಸ್ ಬಂದು ನಿಮ್ಮ ಮನೆಯ ಹಳೆಯ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳನ್ನು ಮುಂದುವರಿಸುವುದಾದರೂ ಹೇಗೆ? ಅವರಿಗೆ ಅದರ ಪರಿಚಯವೇ ಇಲ್ಲದಂತಾಗಿ ಬಿಡುವುದಿಲ್ಲವೇ? ಹಿಂದೆಲ್ಲಾ ಅತ್ತೆಯು ಆಚರಿಸಿದ ಆಚರಣೆಗಳನ್ನು ಸೊಸೆ ನೋಡಿ ಕಲಿತು ಮುಂದುವರಿಸಿಕೊಂಡು ಹೋಗುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಈಗ ಅತ್ತೆ-ಸೊಸೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿರುವುದೇ ಕಡಿಮೆ. ಆಕೆಗೆ ಗಂಡನ ಮನೆಯ ಸಂಪ್ರದಾಯಗಳ ಪರಿಚಯವಾಗುವುದೇ ಅಪರೂಪಕ್ಕೆ ಎಂಬಂತಾಗಿರುತ್ತದೆ. ಹೆಚ್ಚಿನ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸಿಟಿ ಜೀವನಕ್ಕೇ ಸೇರಿಸುವುದಕ್ಕೇ ಉತ್ಸುಕರಾಗಿರುತ್ತಾರೆ. ಯಾಕಂದ್ರೆ ಅವರದ್ದೂ ಸೇಮ್ ಲೈಫ್ ಸ್ಟೈಲ್. ವಿದ್ಯಾಭ್ಯಾಸ, ಹಾಸ್ಟೆಲ್, ಕೆಲಸ ಅಂತ ಹಳ್ಳಿ ಹೆಣ್ಣುಮಕ್ಕಳೇ ಆಗಿದ್ದರೂ ನೋಡಿರುವುದು ಸಿಟಿ ಜೀವನವನ್ನೇ! ಅಂಥವರು ನಲವತ್ತಾದ ಮೇಲೆ ಹೇಗೆ ತಾನೆ ಹಳ್ಳಿಗೆ ಒಗ್ಗಿಕೊಳ್ಳುತ್ತಾರೆ?

ಹಳ್ಳಿಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಫ್ರಿಡ್ಜ್, ವಾಷಿಂಗ್ ಮಷೀನ್, ಕರೆಂಟ್ ಸೌಲಭ್ಯ, ಮಿಕ್ಸಿ, ಗ್ರೈಂಡರ್, ಓಡಾಟಕ್ಕೆ ವಾಹನ, ರಸ್ತೆ ಸೌಕರ್ಯ ಎಲ್ಲವೂ ಇರುತ್ತದೆ. ಆದರೂ ಹಳ್ಳಿ ಅಂದರೆ ಸಸಾರ ಎಂಬ ಭಾವನೆಯೊಂದು ಜನಮಾನಸದಲ್ಲಿ ಕೂತು ಬಿಟ್ಟಿದೆ. ವಿದ್ಯಾಭ್ಯಾಸಕ್ಕಾಗಿ 15-20 ಕಿಲೋಮೀಟರ್ ಹಳ್ಳಿಯಲ್ಲಿ ಸಾಗುವುದೂ ಒಂದೇ, ಸಿಟಿ ಟ್ರಾಫಿಕ್ ಜಂಜಾಟದಲ್ಲಿ ಮೂರು ಕಿಲೋಮೀಟರ್ ಸಾಗುವುದೂ ಒಂದೇ. ಇದನ್ನು ಹಳ್ಳಿಯಲ್ಲಿರುವ ಪೋಷಕರು ಅರ್ಥೈಸಿಕೊಳ್ಳಬೇಕಾಗಿದೆ. ಸಿಟಿ ಅಂದರೆ ಸುಖವಲ್ಲ. ಹಳ್ಳಿ ಎಂದರೆ ದುಃಖವಲ್ಲ. ಮದುವೆ ಅನ್ನೋ ಮೂರಕ್ಷರಕ್ಕಾಗಿ ಮಕ್ಕಳನ್ನು ಮನೆ ತೊರೆಸಿ ಮತ್ತ್ಯಾವತ್ತೋ ಬಾ ಎಂದರೆ ಅವರು ಬರುವ ಸ್ಥಿತಿಯಲ್ಲಿ ಇರಲು ಸಾಧ್ಯವೇ ಎಂಬ ಸಣ್ಣ ಪರಿಕಲ್ಪನೆಯೊಂದು ನಿಮ್ಮ ಮನಸ್ಸಿನಲ್ಲಿ ಆಗಾಗ ಮಿಸುಕಾಡಿದರೆ ಒಳ್ಳೆಯದು.

English summary
Any parents in the village like to send their children to city. They think It is difficult for their children to get good opportunities if they will be in village,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X