• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಂಧಿಯ ತತ್ವಾದರ್ಶ ಮರೆತ ನಮ್ಮ ನಾಯಕರು...

|
Google Oneindia Kannada News

ಇವತ್ತು ಅಕ್ಟೋಬರ್ 2, ಮಹಾತ್ಮ ಗಾಂಧಿ ಹುಟ್ಟಿದ ದಿನ. ಹೀಗಾಗಿ ದೇಶದಾದ್ಯಂತ ಗಾಂಧಿಯ ಸ್ಮರಣೆ ಮಾಡುವ ಮೂಲಕ ಗಾಂಧಿಯ ಭಾವಚಿತ್ರಗಳಿಗೆ, ಪ್ರತಿಮೆಗಳಿಗೆ ಹಾರ ಹಾಕಿ, ಪೂಜಿಸುವ ಮೂಲಕ ನಮನ ಸಲ್ಲಿಸಲಾಗುತ್ತದೆ. ಗಾಂಧಿಯ ಗುಣಗಾನದೊಂದಿಗೆ ಅವರ ತತ್ವಾದರ್ಶನ ಪಾಲನೆಗೆ ಕರೆಕೊಡಲಾಗುತ್ತದೆ.

ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಗಾಂಧಿಯ ತತ್ವಾದರ್ಶಗಳನ್ನು ನಮ್ಮ ರಾಜಕಾರಣಿಗಳಲ್ಲಿ ಎಷ್ಟು ಮಂದಿ ಪಾಲಿಸುತ್ತಿದ್ದಾರೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಗಾಂಧಿ ಜಯಂತಿ ದಿನದಂದು ಗಾಂಧೀಜಿ ಕುರಿತಂತೆ ಒಂದಷ್ಟು ಮಾತನಾಡಿ ಅವರ ಗುಣಗಾನ ಮಾಡಿ ಗಾಂಧಿಯ ಆದರ್ಶಗಳನ್ನು ಪಾಲಿಸಿ ಎಂದು ಜನತೆಗೆ ಕರೆ ನೀಡಿ ಬಿಟ್ಟರೆ ನಮ್ಮ ರಾಜಕಾರಣಿಗಳ ಕೆಲಸ ಮುಗಿದಂತೆ. ಆದರೆ ನಮ್ಮ ನಡುವೆ ಇರುವ ನಾಯಕರು ಎಷ್ಟರ ಮಟ್ಟಿಗೆ ಗಾಂಧಿಯ ತತ್ವಾದರ್ಶಗಳನ್ನು ಪಾಲಿಸುತ್ತಿದ್ದಾರೆ ಎಂಬುದನ್ನು ಅವರೇ ಅವರನ್ನು ಪ್ರಶ್ನಿಸಿಕೊಳ್ಳಲಿ.

ಮಾಧ್ಯಮ ಸ್ವಾತಂತ್ರ್ಯ ಮತ್ತು ಅಜ್ಜ ಹೇಳಿದ ಗಾಂಧಿ ಕಥೆಮಾಧ್ಯಮ ಸ್ವಾತಂತ್ರ್ಯ ಮತ್ತು ಅಜ್ಜ ಹೇಳಿದ ಗಾಂಧಿ ಕಥೆ

 ಗಾಂಧಿಯ ಆದರ್ಶ ಮರೆತ ರಾಜಕಾರಣಿಗಳು

ಗಾಂಧಿಯ ಆದರ್ಶ ಮರೆತ ರಾಜಕಾರಣಿಗಳು

ಬರೀ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ ಸರಳ ಜೀವನದ ಮೂಲಕ ಮಹಾತ್ಮರಾಗಿ ಬದುಕಿದ ಗಾಂಧಿಯ ನಡೆಯನ್ನು ಎಷ್ಟು ಜನ ಪಾಲಿಸುತ್ತಿದ್ದಾರೆ? ಒಂದು ವೇಳೆ ನಮ್ಮ ಮಹಾನ್ ನಾಯಕರು ಗಾಂಧಿಯಂತೆ ನಡೆದಿದ್ದರೆ, ಅವರ ಆದರ್ಶಗಳನ್ನು ಪಾಲಿಸಿದ್ದರೆ ಇವತ್ತು ನಮ್ಮ ದೇಶ ಅಭಿವೃದ್ಧಿಯಲ್ಲಿ ಇತರೆ ದೇಶಗಳನ್ನು ಮೀರಿಸುತ್ತಿತ್ತು. ಆದರೆ ಈಗ ಆಗುತ್ತಿರುವುದೇನು?

ಗಾಂಧಿ ಜಯಂತಿ ದಿನದಂದು ನಮ್ಮ ರಾಜಕಾರಣಿಗಳೇನು ಮಾಡುತ್ತಾರೆ ಗೊತ್ತಾ? ಸತ್ಯವನ್ನೇ ನುಡಿಯುತ್ತಿದ್ದ ಮಹಾತ್ಮನ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಕೊಲೆ, ಸುಲುಗೆ, ಅಪರಾಧ ಕೃತ್ಯವೆಸಗಿಯೇ ಅಧಿಕಾರ ಗದ್ದುಗೆ ಏರಿರುವ ಕೆಲವು ಮುಖಂಡರು ಗಾಂಧಿಯ ಕುರಿತು ರಸಪೂರ್ಣವಾಗಿ ಮಾತನಾಡುವ ಮೂಲಕ ಅವರಂತೆ ಬದುಕಲು ಜನತೆಗೆ ಹೇಳುತ್ತಾ ತಾವು ಮಾತ್ರ ಎಕರೆಗಟ್ಟಲೆ ಜಾಗದಲ್ಲಿ ಭವ್ಯ ಬಂಗಲೆ ನಿರ್ಮಿಸಿ ಐಷಾರಾಮಿ ಬದುಕು ಸಾಗಿಸುತ್ತಾರೆ.
 ಗಾಂಧಿಯವರಿಗಿದ್ದದ್ದು ಅದೊಂದೇ ಬಯಕೆ

ಗಾಂಧಿಯವರಿಗಿದ್ದದ್ದು ಅದೊಂದೇ ಬಯಕೆ

ಒಂದು ವೇಳೆ ಗಾಂಧಿ ಇವತ್ತಿನ ರಾಜಕಾರಣಿಗಳಂತೆ ಸ್ವಾರ್ಥಿಯಾಗಿದ್ದರೆ ಖಂಡಿತಾ ಅವರು ದೇಶದ ಮೊದಲ ರಾಷ್ಟ್ರಪತಿಯಾಗುತ್ತಿದ್ದರು. ಆದರೆ ಅವರಿಗೆ ಅಧಿಕಾರ ಬೇಕಿರಲಿಲ್ಲ. ದೇಶದ ಜನತೆ ಬ್ರಿಟಿಷರ ದಾಸ್ಯದಿಂದ ಮುಕ್ತಿ ಕಾಣಬೇಕೆಂಬ ಒಂದೇ ಒಂದು ಹೆಬ್ಬಯಕೆಯಾಗಿತ್ತು.

ಅಹಿಂಸೆಯನ್ನೇ ಮಂತ್ರವನ್ನಾಗಿಸಿಕೊಂಡು ಇಡೀ ದೇಶವನ್ನೇ ಮುನ್ನಡೆಸಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಭಾರತೀಯರಿಗೆ ಕೊಟ್ಟ ಭಾರತಾಂಬೆಯ ಸಂಜಾತ ಗಾಂಧಿ. ಇಂತಹ ಗಾಂಧಿಯವರ ತತ್ವ, ಆದರ್ಶ, ಅವರ ಹೋರಾಟಕ್ಕೆ ನಾವೂ ಈಗ ಸ್ವಲ್ಪವಾದರೂ ಬೆಲೆ ಕೊಡುತ್ತಿದ್ದೇವೆಯೇ? ದೇಶದ ಹೆಮ್ಮೆಯ ಪ್ರತೀಕವಾದ ಟೋಪಿ ಧರಿಸಿದರೆ ನಾವದನ್ನು ಗಾಂಧಿ ಟೋಪಿ ಎಂದೇ ಗೇಲಿ ಮಾಡುತ್ತೇವೆ. ಚಲನಚಿತ್ರ ಮಂದಿರದ ಮುಂದಿನ ಸಾಲಿನ ಕಡಿಮೆ ದರದ ಟಿಕೆಟುಗಳ ಸೀಟುಗಳನ್ನು ಗಾಂಧಿ ಕ್ಲಾಸ್ ಎಂದು ಕರೆಯುತ್ತೇವೆ, ಬೀಡಿ, ಸಿಗರೇಟು, ಮಾಂಸಾಹಾರ ಸೇವನೆ, ಮದ್ಯಪಾನ ಸೇರಿದಂತೆ ಯಾವುದೇ ದುಶ್ಚಟಗಳಿಗೂ ಒಳಗಾಗದ ಜನರನ್ನು ಗಾಂಧಿ ಎಂದೇ ಸಂಬೋಧಿಸಿ ಹೀಯಾಳಿಸುತ್ತೇವೆ.

 ಆಗಾಗ್ಗೆ ಅಲ್ಲಲ್ಲಿ ಗಾಂಧಿಗೆ ಅಪಮಾನ

ಆಗಾಗ್ಗೆ ಅಲ್ಲಲ್ಲಿ ಗಾಂಧಿಗೆ ಅಪಮಾನ

ಮಹಾತ್ಮ ಗಾಂಧಿಯನ್ನು ದಿನವೂ ಸ್ಮರಿಸೋಣ ಎಂಬ ಉದ್ದೇಶದಿಂದ ರಾಷ್ಟ್ರದ ವಿವಿಧ ಪಟ್ಟಣ, ನಗರ, ಹಳ್ಳಿ ಹಳ್ಳಿಗಳಲ್ಲೂ ವೃತ್ತ, ಉದ್ಯಾನವನ, ನ್ಯಾಯಾಲಯದ ಆವರಣ, ಶಾಲಾ-ಕಾಲೇಜು ಆವರಣ ಹೀಗೆ ಎಲ್ಲ ಸ್ಥಳಗಳಲ್ಲೂ ಗಾಂಧಿ ಪುತ್ಥಳಿ ಹಾಗೂ ಆಳೆತ್ತರದ ನಿಲುವಿನ ಭಂಗಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಇದಕ್ಕೆ ಆಗಾಗ್ಗೆ ಕಿಡಿಗೇಡಿಗಳು ಅವಮಾನ ಮಾಡುವ ಘಟನೆಗಳು ಆಗಾಗ್ಗೆ ನಡೆಯುತ್ತವೆ.

ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಿದ ಗಾಂಧಿ ನೇಕಾರರ ಸಂಕಷ್ಟವನ್ನು ಅರಿತು ತಾವೇ ಚರಕ ಹಿಡಿದು ನೂಲನ್ನು ನೇಯ್ದು ಖಾದಿ ಬಟ್ಟೆ ಧರಿಸುತ್ತಿದ್ದರು. ಅಂತಹ ಸರಳ ಜೀವಿ ಗಾಂಧಿಯನ್ನು ಮತ್ತು ಅವರ ಹೆಸರನ್ನು ಇವತ್ತು ನಮ್ಮ ರಾಜಕಾರಣಿಗಳು ಕೇವಲ ಚುನಾವಣೆಗೆ ಬಳಸಿಕೊಳ್ಳುತ್ತಾರೆ ಅವರ ಬಗ್ಗೆ ಮಾತನಾಡಿ ತಮ್ಮ ಸ್ಥಾನ ಭದ್ರ ಮಾಡಿಕೊಳ್ಳುತ್ತಾರೆ. ಆದರೆ ಅವರಂತೆ ಸರಳ, ಸಜ್ಜನಿಕೆ, ಪ್ರಾಮಾಣಿಕತೆಯಿಂದ ತಾನು ಬದುಕುತ್ತಿದ್ದೇನೆ ಎನ್ನುವ ನಾಯಕರು ನಮ್ಮ ನಡುವೆ ಎಷ್ಟು ಜನರಿದ್ದಾರೆ?
 ಗಾಂಧಿ ಬಗ್ಗೆ ನಾಯಕರಿಗೆಷ್ಟು ಗೊತ್ತು?

ಗಾಂಧಿ ಬಗ್ಗೆ ನಾಯಕರಿಗೆಷ್ಟು ಗೊತ್ತು?

ಇವತ್ತು ಗಾಂಧಿ ಬಗ್ಗೆ ನಮ್ಮ ನಾಯಕರಲ್ಲಿ ಎಷ್ಟು ಜನ ತಿಳಿದುಕೊಂಡಿದ್ದಾರೆ? ಯಾರೋ ಬರೆದುದನ್ನು ಓದಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾಯಕರು ಗಾಂಧಿ ಬಗ್ಗೆ ಅಧ್ಯಯನ ಮಾಡಿದ್ದಾರಾ? ಅವರ ಸರಳತೆ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿದ್ದಾರಾ? ತಮಗೆ ತಮ್ಮ ಮೊಮ್ಮಕ್ಕಳು ಸೇರಿದಂತೆ ತಲೆಮಾರಿಗೆ ಆಸ್ತಿ ಮಾಡಿಡುವ, ಸ್ವಿಸ್ ಬ್ಯಾಂಕ್ ನಲ್ಲಿ ಹಣವಿಟ್ಟು ಸದಾ ವಿದೇಶಿ ಪ್ರವಾಸದ ಮೂಲಕ ಐಷಾರಾಮಿ ಬದುಕು ನಡೆಸುತ್ತಿರುವ ನಾಯಕರಿಗೆ ವಿದೇಶಿ ಬಟ್ಟೆಗಳನ್ನು ತ್ಯಜಿಸಿದ, ದೇಶದ ಬಡ ಜನತೆಗೆ ಮೈಮುಚ್ಚಿಕೊಳ್ಳುವಷ್ಟು ಬಟ್ಟೆ ಸಿಗದಿರುವಾಗ ನಾನೇಕೆ ಉಡುಪುಗಳನ್ನು ಧರಿಸಬೇಕೆಂದು ತುಂಡುಡುಗೆ ತೊಟ್ಟ ಗಾಂಧಿ ಏಕೆ ನೆನಪಾಗುವುದಿಲ್ಲ?

 ಗಾಂಧೀಜಿ ಆದರ್ಶ ಯಾರು ಪಾಲಿಸಬೇಕು?

ಗಾಂಧೀಜಿ ಆದರ್ಶ ಯಾರು ಪಾಲಿಸಬೇಕು?

ಸ್ವದೇಶಿ ಬಟ್ಟೆಗಳನ್ನು ತ್ಯಜಿಸಿ ಖಾದಿ ಬಟ್ಟೆಗಳನ್ನೇ ಧರಿಸಿ ಆ ಮೂಲಕ ತಮ್ಮ ದೇಶದ ನೇಕಾರರಿಗೆ ಅನ್ನಕೊಡಿ ಎಂದು ಪ್ರೇರೇಪಿಸಿದ ಗಾಂಧಿ ಅವರಲ್ಲಿದ್ದ ಕಾಳಜಿ ಇವತ್ತಿನ ನಾಯಕರಲ್ಲಿ ಏಕಿಲ್ಲ? ಗಾಂಧಿಯ ಖಾದಿಯ ಮಹತ್ವ ಅರಿಯದೆ, ಸತ್ಯದ ಪ್ರತಿಪಾದಕನ ಮೆಚ್ಚಿನ ಉಡುಪಿನ ಮಹತ್ವವನ್ನು ಅರಿಯದೆ ಕೆಲವು ಭ್ರಷ್ಟ ರಾಜಕಾರಣಿಗಳು ಅದನ್ನು ಧರಿಸಿ ಅಗೌರವ ತೋರುತ್ತಾ ಗಾಂಧಿ ಜಯಂತಿ ದಿನದಂದು ಗಾಂಧಿಯ ತತ್ವಾದರ್ಶ ಪಾಲನೆಗೆ ಕರೆಕೊಡುತ್ತಾರೆ. ಆದರೆ ಪಾಲಿಸುವವರು ಯಾರು ಎಂಬುದೇ ಪ್ರತಿ ವರ್ಷವೂ ಪ್ರಶ್ನೆಯಾಗಿಯೇ ಉಳಿಯುತ್ತಿದೆ.

English summary
Today is October 2, Mahatma Gandhi's birthday. On this day, our leaders use to give speech about gandhi philosophies. But the question is, how many of our political leaders following Gandhi philosophies?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X