• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವ್ಯಕ್ತಿಚಿತ್ರ: ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ರಾಜಕೀಯ ಜೀವನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 13: ಯೋಗ ಮಾಡುತ್ತಿದ್ದಾಗ ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ (80) ಸೋಮವಾರ ವಿಧಿವಶರಾಗಿದ್ದಾರೆ.

ಆಸ್ಕರ್ ಫೆರ್ನಾಂಡಿಸ್ ಅವರಿಗೆ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಕರ್ ಫರ್ನಾಂಡಿಸ್‌ರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

Breaking; ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶBreaking; ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ವಿಧಿವಶ

ರಾಜಕೀಯ ಜೀವನ
ಮಾರ್ಚ್ 27, 1941ರಲ್ಲಿ ಜನಿಸಿದ ಆಸ್ಕರ್ ಫರ್ನಾಂಡಿಸ್, ಉಡುಪಿಯ ಬೋರ್ಡ್ ಹೈಸ್ಕೂಲ್ ಮತ್ತು ಎಂಜಿಎಂ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು. 1972ರಲ್ಲಿ ಉಡುಪಿ ಪುರಸಭೆಗೆ ಜನರಿಂದ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.

ಸತತ ಐದು ಬಾರಿ ಲೋಕಸಭೆ ಸದಸ್ಯರು ಹಾಗೂ ಸತತ ನಾಲ್ಕು ಬಾರಿ ರಾಜ್ಯಸಭೆ ಸದಸ್ಯರಾಗಿ ಚುನಾಯಿತರಾಗಿದ್ದರು. 1980ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿಯ ಡಾ. ವಿ.ಎಸ್. ಆಚಾರ್ಯ ವಿರುದ್ಧ 1.59 ಲಕ್ಷ ಮತಗಳ ಅಂತರದಿಂದ ಗೆದ್ದು ಪ್ರಥಮ ಬಾರಿಗೆ ಸಂಸದರಾಗಿದ್ದರು. ಆಗಿನ ರೈಲ್ವೆ ಸಚಿವ ಟಿ.ಎ. ಪೈ ಕಾಂಗ್ರೆಸ್ (ಅರಸು)ಪಕ್ಷದಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.

1980ರಲ್ಲಿ ಒಮ್ಮಿಂದೊಮ್ಮೆಗೆ ರಾಷ್ಟ್ರ ರಾಜಕಾರಣಕ್ಕೆ ನೆಗೆದು ಅಲ್ಲಿಂದ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ಐದು ಬಾರಿ ಸಂಸತ್ ಸದಸ್ಯರಾಗಿ ಉಡುಪಿಯಲ್ಲಿ ಚುನಾಯಿತರಾಗಿದ್ದ ಅವರು, 1998ರ ಲೋಕಸಭೆ ಚುನಾವಣೆಯಲ್ಲಿ ಸೋತರು.

ನಂತರ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಡಾ.ಮನಮೋಹನ್ ಸಿಂಗ್ ಸರಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

1980ರಿಂದ 1996ರವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಳಿಕ, 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಆಸ್ಕರ್ ಫರ್ನಾಂಡಿಸ್, ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಸತತ ಆಯ್ಕೆ
1984ರ ಚುನಾವಣೆಯಲ್ಲಿ ಪುನರಾಯ್ಕೆಗೊಂಡ ಆಸ್ಕರ್ 1989, 1991 ಮತ್ತು 1996 ಚುನಾವಣೆಯಲ್ಲಿ ಸತತ ಜಯ ಸಾಧಿಸಿ ಒಟ್ಟು 5 ಬಾರಿ ಸಂಸತ್ ಪ್ರವೇಶಿಸಿದರು. ಪ್ರತಿ ಬಾರಿ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಆಸ್ಕರ್ 1996ರ ಚುನಾವಣೆಯಲ್ಲಿ ಮಾತ್ರ ಬಿಜೆಪಿಯ ಐ.ಎಂ. ಜಯರಾಮ ಶೆಟ್ಟಿ ವಿರುದ್ಧ ಪ್ರಯಾಸದ ಜಯ (2,454 ಮತಗಳ ಅಂತರ)ಕಂಡರು.

1998ರ ಚುನಾವಣೆಯಲ್ಲಿ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ವಿರುದ್ದ ಪ್ರಥಮ ಸೋಲು ಅನುಭವಿಸಿದರು. ಕೇವಲ ಎರಡೇ ತಿಂಗಳಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಆಸ್ಕರ್ ಬಳಿಕ ಚುನಾವಣೆಯಿಂದ ದೂರವೇ ಉಳಿದಿದರು, 1998, 2004, 2010 ಮತ್ತು 2016ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದರು. 2022ರ ಜೂನ್ 30ಕ್ಕೆ ಅವರ 4ನೇ ಅವಧಿಯ ಸದಸ್ಯತ್ವ ಪೂರ್ಣವಾಗಲಿದೆ.

ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಮ್ ಫೆರ್ನಾಂಡಿಸ್, ಪುತ್ರ ಹಾಗೂ ಪುತ್ರಿಯೊಂದಿಗೆ ಅಪಾರ ಸಂಖ್ಯೆಯ ಬಂಧುಮಿತ್ರರು, ನಿಕಟವರ್ತಿಗಳು, ಅಭಿಮಾನಿಗಳು ಹಾಗೂ ಹಿಂಬಾಲಕರನ್ನು ಅಗಲಿದ್ದಾರೆ.

ದೂರವಾಣಿ ಕರೆ ಮಾಡಿದ ಸೋನಿಯಾ ಗಾಂಧಿ
ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ನಿಧನ ಹಿನ್ನಲೆ, ಆಸ್ಕರ್ ಪತ್ನಿ ಬ್ಲೋಸಂಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದರು.

ಎರಡು ದಿನದ ಬಳಿಕ ಬೆಂಗಳೂರಿನಲ್ಲಿ ಆಸ್ಕರ್ ಫರ್ನಾಂಡೀಸ್ ಅಂತ್ಯಕ್ರಿಯೆ ನಡೆಯಲಿದ್ದು, ಇಂದು ಸಂಜೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಸ್ಕರ್ ಪಾರ್ಥೀವ ಶರೀರ ತರಲಾಗುತ್ತದೆ.

ಬಳಿಕ ಬೆಂಗಳೂರು ಕಾಂಗ್ರೆಸ್ ಕಚೇರಿಗೆ ಪಾರ್ಥೀವ ಶರೀರ ರವಾನೆಯಾಗಲಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ಸೊನೀಯಾ ಗಾಂಧಿ ಹೇಳಿದ್ದಾರೆ. ಆಸ್ಕರ್ ನಿಧನ ದೇಶಕ್ಕಾಗಿರುವ ನಷ್ಟ ಎಂದು ಬ್ಲೋಸಂ ಜೊತೆ ಸೋನಿಯಾ ಗಾಂಧಿ ಸಂತಾಪ ವ್ಯಕ್ತಪಡಿಸಿದರು.

ಯಕ್ಷಗಾನದ ಬಗ್ಗೆ ವಿಶೇಷ ಅಭಿಮಾನ
ಯಕ್ಷಗಾನದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಆಸ್ಕರ್ ಫರ್ನಾಂಡಿಸ್, ದೆಹಲಿಗೆ ಮಕ್ಕಳ ಹೂವಿನಕೋಲು ಮೇಳವನ್ನು ಕರೆಸಿ ಪ್ರದರ್ಶನ ಏರ್ಪಡಿಸಿದ್ದರು. ಕರಾವಳಿಯ ಶಾಸಕರಿಂದ ಸದನದಲ್ಲಿ ನಡೆದಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಆಸ್ಕರ್ ಬಣ್ಣ ಹಚ್ಚಿ ಕುಣಿದಿದ್ದರು. ಕರಾವಳಿಯ ಸೊಗಡನ್ನು ದೆಹಲಿಗೂ ವಿಸ್ತರಿಸಿದ್ದ ಅಪರೂಪದ ರಾಜಕಾರಣಿಯಾಗಿದ್ದರು.

ಹುಲಿ ಕುಣಿತದಲ್ಲೂ ಹೆಚ್ಚಿನ ಆಸಕ್ತಿ ತೋರಿದ್ದ ಆಸ್ಕರ್, ಹುಲಿ ವೇಷಧಾರಿಯೊಡನೆ ಒಂದೆರಡು ಸ್ಟೆಪ್ ಹಾಕಿದ್ದರು. ಮೌತ್ ಆರ್ಗನ್ ನುಡಿಸುವ ಜೊತೆಗೆ ಯೋಗ, ಈಜು ಪಟುವಾಗಿ ಗಮನ ಸೆಳೆದಿದ್ದರು. ಪತ್ನಿ ಬ್ಲೋಸಂ ಫರ್ನಾಂಡೀಸ್ ಜೊತೆ ಎಲ್ಲಾ ವೇದಿಕೆ ಹಂಚಿಕೊಂಡಿದ್ದ ಆಸ್ಕರ್ ಫರ್ನಾಂಡೀಸ್, ಕೈ ಹಿಡಿದೇ ವೇದಿಕೆಗೆ ಕರೆದುಕೊಂಡು ಬರುವ ಮೂಲಕ ಸುಖೀ ದಾಂಪತ್ಯ ತೋರಿಸಿ ಕೊಟ್ಟಿದ್ದರು.

English summary
In 1972 Oscar Fernandes began his political career by getting elected to the Udupi Municipality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X