ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಹಿರಿಯ ಪತ್ರಕರ್ತ ರವಿ ಬೆಳಗೆರೆ (62) ಶುಕ್ರವಾರ (ನವೆಂಬರ್ 13, 2020) ನಿಧನರಾಗಿದ್ದಾರೆ. ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕದ ಸಂಪಾದಕರಾಗಿದ್ದ ಅವರು ಪ್ರಾರ್ಥನಾ ಹೆಸರಿನ ಶಾಲೆ ನಡೆಸುತ್ತಿದ್ದರು. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ರವಿ ಬೆಳಗೆರೆ ಅವರು ಕಥೆಗಾರರಾಗಿ, ಟೀವಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿಯೂ ಅಷ್ಟೇ ಜನಪ್ರಿಯತೆ ಗಳಿಸಿದವರು.

Recommended Video

ಆ ವ್ಯಕ್ತಿಯ inside ಸ್ಟೋರಿ ಹೇಳ್ತಿನಿ ಅಂದಿದ್ದ ರವಿ | Oneindia Kannada

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದ ವ್ಯಕ್ತಿ ರವಿ ಬೆಳಗೆರೆ. ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್ ನಲ್ಲೂ ಚಾನೆಲ್ ಆರಂಭಿಸಿದ್ದ ಅವರಿಗೆ ಅದರಲ್ಲೂ ಜನಪ್ರಿಯತೆ ದಕ್ಕಿತ್ತು. "ನಾನು ಗಣಿತದಲ್ಲಿ ದಡ್ಡ ಇರಬಹುದು, ಎಕನಾಮಿಕ್ಸ್ ನಲ್ಲಿ ಅಲ್ಲ," ಎಂಬುದು ಅವರು ಆಗಾಗ ಹೇಳುತ್ತಿದ್ದ ಮಾತು.

ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

ಕನ್ನಡ ಪತ್ರಿಕೋದ್ಯಮದಲ್ಲಿ ಪಿ.ಲಂಕೇಶ್ ವಾರಪತ್ರಿಕೆ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆ. ಆ ನಂತರ ಭಿನ್ನ ಹಾದಿಯಲ್ಲಿ ಓದುಗರನ್ನು ತಲುಪಲು ಯತ್ನಿಸಿ, ಯಶಸ್ಸು ಕಂಡಿದ್ದವರು ರವಿ ಬೆಳಗೆರೆ. ಕಾರ್ಗಿಲ್ ಯುದ್ಧ, ಗುಜರಾತ್ ಭೂಕಂಪ, ಅಫ್ಗಾನಿಸ್ತಾನದ ಯುದ್ಧ ಭೂಮಿ ಹಾಗೂ ಈಚಿನ ಪುಲ್ವಾಮಾ ತನಕ ಕನ್ನಡದ ಓದುಗರಿಗೆ ದೇಶ- ವಿದೇಶದ ಅತ್ಯಂತ ಸವಾಲಿನ ವರದಿ- ಸುದ್ದಿಯನ್ನು ನೀಡಿದ್ದರು.

Obituary : Journalist, Editor Ravi Belagere journey

ರವಿ ಬೆಳಗೆರೆ ಹುಟ್ಟಿದ್ದು ಮಾರ್ಚ್ 15, 1958. ತಾಯಿ ಬೆಳಗೆರೆ ಪಾರ್ವತಮ್ಮ ಹಾಗೂ ಸ್ವತಃ ರವಿ ಬೆಳಗೆರೆ ಅವರೇ ಹೇಳಿಕೊಂಡಂತೆ ತಂದೆ- ಕನ್ನಡದ ಹೆಸರಾಂತ ಸಾಹಿತಿ ಬೀಚಿ. ಚಿತ್ರದುರ್ಗದ ಚಳ್ಳಕೆರೆ, ತುಮಕೂರು, ಬಳ್ಳಾರಿ, ಧಾರವಾಡ ಹೀಗೆ ವಿವಿಧೆಡೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಬಳ್ಳಾರಿಯಲ್ಲಿ ಉಪನ್ಯಾಸಕರಾಗಿಯೂ ಇದ್ದರು.

ಅಲ್ಲಿ ಬಳ್ಳಾರಿ ಪತ್ರಿಕೆ ಎಂದು ಸ್ವಂತ ಪತ್ರಿಕೆ ಕೂಡ ಇತ್ತು. ಸಂಯುಕ್ತ ಕರ್ನಾಟಕ, ಲಂಕೇಶ್ ಪತ್ರಿಕೆ, ಈ ಸಂಜೆ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ ಅವರು, 1995ರ ಸೆಪ್ಟೆಂಬರ್ 25ನೇ ತಾರೀಕು ಹಾಯ್ ಬೆಂಗಳೂರ್ ವಾರಪತ್ರಿಕೆ ಆರಂಭಿಸಿದರು. ಆ ನಂತರ ಅವರು ಟ್ರೆಂಡ್ ಸೆಟ್ಟರ್ ಆದರು. ಆ ಮೇಲೆ ಓ ಮನಸೇ ಪಾಕ್ಷಿಕ ಮಾಡಿದರು.

ಈಟಿವಿಗಾಗಿ ಅವರು ನಡೆಸಿಕೊಡುತ್ತಿದ್ದ ಕ್ರೈಂ ಡೈರಿ ಕಾರ್ಯಕ್ರಮ ರವಿ ಬೆಳಗೆರೆ ಅವರನ್ನು ಇನ್ನೊಂದು ಎತ್ತರಕ್ಕೆ ಒಯ್ದಿತು. ಇನ್ನು ಆಕಾಶವಾಣಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಈಟಿವಿಗಾಗಿ ಅವರು ನಡೆಸಿಕೊಡುತ್ತಿದ್ದ ಎಂದೂ ಮರೆಯದ ಹಾಡು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತ್ತು. ಟಿ.ಎನ್. ಸೀತಾರಾಂ ಹಾಗೂ ಭಾವನಾ ಬೆಳಗೆರೆ ನಿರ್ಮಾಣದ ಧಾರಾವಾಹಿಯಲ್ಲೂ ಅವರು ಅಭಿನಯಿಸಿದ್ದರು.

ವಾರಸ್ದಾರ, ಮಾದೇಶ, ಗಂಡ- ಹೆಂಡತಿ ಸೇರಿದಂತೆ ಕನ್ನಡದ ಕೆಲ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಹಾಯ್ ಬೆಂಗಳೂರ್ ಹೆಸರಿನಲ್ಲಿ ಸಿನಿಮಾವೊಂದು ಬಂದಿದ್ದು, ಅದಕ್ಕೆ ಶಶಿಕುಮಾರ್ ನಾಯಕ. ಸ್ವತಃ ರವಿ ಬೆಳಗೆರೆ ಅವರೇ ನಿರ್ದೇಶನ- ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದ ಸಿನಿಮಾ 'ಮುಖ್ಯಮಂತ್ರಿ ಐ ಲವ್ ಯೂ'. ಆ ಸಿನಿಮಾ ವಿವಾದಕ್ಕೆ ಗುರಿಯಾಗಿ ಚಿತ್ರೀಕರಣದ ನಂತರದ ಹಂತ ತಲುಪಲಿಲ್ಲ.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಜನಶ್ರೀ ಚಾನೆಲ್ ನಲ್ಲಿ ಕೆಲ ಸಮಯ ಪ್ರಮುಖ ಹುದ್ದೆ ಕೂಡ ನಿರ್ವಹಿಸಿದ್ದರು ರವಿ ಬೆಳಗೆರೆ. ರವಿ ಬೆಳಗೆರೆ ಅವರಿಗೆ ಲಲಿತಾ ಬೆಳಗೆರೆ, ಯಶೋಮತಿ ಆಚಾರ್ ಇಬ್ಬರು ಪತ್ನಿಯರು. ಚೇತನಾ ಬೆಳಗೆರೆ, ಭಾವನಾ ಬೆಳಗೆರೆ, ಕರ್ಣ ಬೆಳಗೆರೆ ಹಾಗೂ ಹಿಮವಂತ್ ಬೆಳಗೆರೆ ನಾಲ್ವರು ಮಕ್ಕಳು.

Obituary : Journalist, Editor Ravi Belagere journey

ಇಪತ್ತೆರಡನೇ ವಯಸ್ಸಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಬೆಳಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೋಟಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಅನುವಾದ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿವೆ. ಇನ್ನು ಕಳೆದ ಸೀಸನ್ ನಲ್ಲಿ ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ರವಿ ಬೆಳಗೆರೆ ಭಾಗವಹಿಸಿದ್ದರು.

ಕಚೇರಿಯಲ್ಲಿ 'ಬಾಸ್' ಎಂದು ಕರೆಸಿಕೊಳ್ಳುವ ರವಿ ಬೆಳಗೆರೆ, ತಮ್ಮ ನಿಧನಕ್ಕೂ ಮುನ್ನ ಪತ್ರಿಕೆಯನ್ನು ಅಚ್ಚಿಗೆ ಕಳುಹಿಸಿಕೊಟ್ಟಿದ್ದಾರೆ. ಹಾಯ್ ಬೆಂಗಳೂರ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಕೊರೊನಾ ಕಾರಣಕ್ಕೆ ಕೆಲ ಕಾಳ ಪತ್ರಿಕೆ ಪ್ರಕಟಣೆಯನ್ನು ಅವರು ನಿಲ್ಲಿಸಿದ್ದರು. ಆ ಮೇಲೆ ಈಚೆಗೆ ಪುನರಾರಂಭಿಸಿದ್ದರು.

ಅಂದ ಹಾಗೆ, ರವಿ ಬೆಳಗೆರೆ ಅಂದರೆ ವಿವಾದ ಸಹ ಹೊರತಾಗಿರಲಿಲ್ಲ. ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನನ್ನು ಕೊಲ್ಲಿಸಲು ಸುಪಾರಿ ನೀಡಿದ್ದರು ಎಂಬ ಆರೋಪ ಇತ್ತು. ಬ್ಲ್ಯಾಕ್ ಮೇಲರ್ ಎಂದು ಆರೋಪಿಸುತ್ತಿದ್ದರು. ನಾನಾ ಆರೋಪ ಮಾಡುತ್ತಿದ್ದರೂ ಅವರೊಬ್ಬ ಅದ್ಭುತ ಬರಹಗಾರ ಎಂಬುದನ್ನು ಎಂಥವರೂ ಒಪ್ಪುತ್ತಿದ್ದರು.

"ನೀವು ಹಣ ಮಾಡಬೇಕು ಅಂದುಕೊಂಡರೆ ಹಣ ಮಾತ್ರ ಮಾಡ್ತೀರಿ, ಹೆಸರು ಮಾಡಬೇಕು ಅಂದರೆ ಹೆಸರು, ಆದರೆ ಕೆಲಸ ಮಾಡಬೇಕು ಅಂತ ಶುರು ಮಾಡಿದರೆ ಹಣ-ಹೆಸರು ಹುಡುಕಿಕೊಂಡು ಬರುತ್ತದೆ," ಎಂಬುದು ರವಿ ಬೆಳಗೆರೆ ಹೇಳುತ್ತಿದ್ದ ಮಾತು.

English summary
Senior journalist, Hai Bangalore and O manase Editor Ravi Belagere passed away on November 13,2020. Here is an obituary and look at his journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X