• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್ ತೀರದಲ್ಲಿ ಮತ್ತೆ ಓರ್ ಫಿಶ್ ಪತ್ತೆ: ಸುನಾಮಿ ಆತಂಕಕ್ಕೆ ಕಾರಣ ನಿಜವೇ?

|

ಭೂಕಂಪದ ಸೂಚನೆ ಪ್ರಾಣಿಗಳಿಗೆ ಮೊದಲೇ ಗೊತ್ತಾಗುತ್ತದೆ. ಭೂಕಂಪ ಮಾತ್ರವಲ್ಲ, ಎಲ್ಲ ನೈಸರ್ಗಿಕ ವಿಕೋಪಗಳ ಮುನ್ಸೂಚನೆಯನ್ನು ಅರಿಯುವ ಶಕ್ತಿ ಪ್ರಾಣಿಗಳಿಗೆ ಇವೆ ಎನ್ನುವುದು ವಿವಿಧ ದೇಶಗಳಲ್ಲಿರುವ ನಂಬಿಕೆ. ಜಪಾನ್‌ನಲ್ಲಿ ಈ ಕಲ್ಪನೆ ತೀವ್ರವಾಗಿವೆ. ಇಲ್ಲಿನ ಬಹುತೇಕ ದೇವತೆ, ಅಸುರ ಕಲ್ಪನೆಗಳು ಸಮುದ್ರದಲ್ಲಿಯೇ ಹುಟ್ಟಿಕೊಳ್ಳುತ್ತವೆ.

ಜಪಾನಿನ ಜನಪದದಲ್ಲಿ ಭೂಕಂಪನದ ಹುಟ್ಟಿನಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ. ಜನಪ್ರಿಯ ಕಥೆಯೊಂದರ ಪ್ರಕಾರ, ಭೂಕಂಪನಕ್ಕೆ ಪ್ರಮುಖ ಕಾರಣ ಬೃಹತ್ ಕ್ಯಾಟ್‌ಫಿಶ್ ನಮಜು. ಜಪಾನ್‌ನ ಮುಖ್ಯಭೂಮಿಯಲ್ಲಿ ಎಲ್ಲೋ ಅಡಗಿಕುಳಿತಿರುವ ನಮಜು ತನ್ನ ಬಾಲವನ್ನು ಅಲ್ಲಾಡಿಸುತ್ತದೆ. ಮನುಷ್ಯ ಜಗತ್ತಿನಲ್ಲಿ ಭೂಕಂಪ ಸಂಭವಿಸಲು ಇದೇ ಕಾರಣ.

ಇದಕ್ಕೆ ವೈಜ್ಞಾನಿಕ ರೂಪವೂ ದೊರಕಿದೆ. ಭೂಕಂಪನಕ್ಕೆ ಮೊದಲು ಕ್ಯಾಟ್‌ಫಿಶ್‌ಗಳ ಅಸಹಜ ವರ್ತನೆಯನ್ನು ಗಮನಿಸಿದ್ದ ಜನರು ಪುರಾಣದಲ್ಲಿ ನಮಜುಗೆ ಭೂಕಂಪನದ ಕಾರಣಕರ್ತ ಎಂದೇ ಪಟ್ಟ ನೀಡಿದ್ದಾರೆ ಎಂದು ಅನೇಕ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಜಪಾನಿನ ತೊಯೆಮಾ ಪ್ರಾಂತ್ಯದ ಕಡಲಿನಲ್ಲಿ ಓರ್ ಫಿಶ್‌ಗಳು ದರ್ಶನ ನೀಡಿವೆ. ಕಳೆದ ಶುಕ್ರವಾರ ಎರಡು ಮೀನುಗಳು ಪತ್ತೆಯಾದ ಬೆನ್ನಲ್ಲೇ ಅಲ್ಲಿನ ಜನರಲ್ಲಿ ಭೂಕಂಪ ಮತ್ತು ಸುನಾಮಿಯ ಭೀತಿ ಮೂಡಿದೆ. ಭೂಕಂಪ ಮತ್ತು ಸುನಾಮಿಯ ವಿಕೋಪಕ್ಕೆ ನಿರಂತರವಾಗಿ ತುತ್ತಾಗುವ ಈ ದೇಶದಲ್ಲಿ, ಅವುಗಳಿಗೆ ಕಾರಣವೇ ಅಸುರ ಮತ್ಸ್ಯಗಳು ಎಂಬ ನಂಬಿಕೆ ಇದೆ. ಅವುಗಳ ಸತ್ಯಾಸತ್ಯತೆ ಬಗ್ಗೆ ಫೋರ್ಬ್ಸ್ ವೆಬ್‌ಸೈಟ್‌ನಲ್ಲಿ ಭೂಶಾಸ್ತ್ರಜ್ಞ ಡೇವಿಡ್ ಬೆಸನ್ ಬರೆದ ಲೇಖನದ ಅವತರಣಿಕೆ ಇಲ್ಲಿದೆ...

ನಮಜು ಇತಿಹಾಸ

ಜನಪದ ತಜ್ಞರು ಈ ನಂಬಿಕೆಯ ಹಿಂದಿನ ಇತಿಹಾಸ ಸಂಕೀರ್ಣವಾದದ್ದು ಎಂದು ಹೇಳುತ್ತಾರೆ. ನಮಜು ಎನ್ನುವುದು ಕೆಡುಕನ್ನು ಮತ್ತು ದುರದೃಷ್ಟವನ್ನು ಉಂಟುಮಾಡುವ ಯೋ-ಕೈನ (ಜಪಾನ್ ಪುರಾಣಗಳಲ್ಲಿನ ಬೃಹತ್ ರಾಕ್ಷಸೀಯ ಪ್ರಾಣಿಗಳು) ಸೃಷ್ಟಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನಮಜುವಿನ ಚಿತ್ರಣಗಳು 15ನೇ ಶತಮಾನದಿಂದಲೂ ಇವೆ. ಆದರೆ, ಕ್ಯಾಟ್‌ಫಿಶ್‌ಗಳನ್ನು ನೈಸರ್ಗಿಕ ಅವಘಡಗಳೊಂದಿಗೆ ಬೆಸೆದಿದ್ದು 18ನೇ ಶತಮಾನದ ಬಳಿಕ.

ದೇವತೆಗಳಾಗಿದ್ದ ಕ್ಯಾಟ್‌ ಫಿಶ್‌ಗಳು

ಟೊಕುಗವಾ ಅವಧಿಯಲ್ಲಿ (1603-1868) ಕ್ಯಾಟ್‌ಫಿಶ್‌ಅನ್ನು ಪ್ರವಾಹ ಮತ್ತು ಭಾರಿ ಮಳೆಗೆ ಸಂಬಂಧಿಸಿದ ನದಿ ದೇವತೆ ಎಂದು ಪರಿಗಣಿಸಲಾಗಿತ್ತು. ನಮಜು ಭಾರಿ ವಿಪತ್ತುಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡುತ್ತಿತ್ತು ಅಥವಾ ಅಪಾಯಕಾರಿ ವಾಟರ್ ಡ್ರ್ಯಾಗನ್‌ಗಳನ್ನು ನುಂಗುವ ಮೂಲಕ ಹೆಚ್ಚಿನ ಅವಘಡವನ್ನು ತಪ್ಪಿಸುತ್ತಿತ್ತು. ಕಾಲ ಕ್ರಮೇಣ ವಾಟರ್ ಡ್ರ್ಯಾಗನ್, ಈಲ್ ಜಿನ್ಷಿನ್-ಯುವೊ ಅಥವಾ ಡ್ರ್ಯಾಗನ್ ಬೀಟಲ್ ಜಿನ್ಷಿನ್-ಮುನ್ಷಿಯ ಸ್ಥಾನವನ್ನು ಕ್ಯಾಟ್‌ಫಿಶ್ ಆವರಿಸಿಕೊಳ್ಳತೊಡಗಿತು.

ಜಪಾನ್‌ನ ಪುರಾಣದ ಇತಿಹಾಸ ಈ ರೀತಿಯೂ ವಿವರಣೆಗಳನ್ನು ನೀಡುತ್ತದೆ. ಹಾಗೆಯೇ ಇಂದಿಗೂ ಆ ದೇಶದಲ್ಲಿ ಕೆಲವು ಪ್ರಾಣಿಗಳು, ಅವುಗಳಲ್ಲಿಯೂ ಮುಖ್ಯವಾಗಿ ಮೀನುಗಳನ್ನು ನೈಸರ್ಗಿಕ ವಿಕೋಪಗಳ ಮುನ್ಸೂಚಕಗಳೆಂದೇ ಪರಿಗಣಿಸಲಾಗುತ್ತಿದೆ.

ಓರ್ ಫಿಶ್‌ಗಳೂ ಎಚ್ಚರಿಕೆಯ ಧೂತರು

ನೀರಿನ ಸುಮಾರು 650-3,300 ಅಡಿ ಆಳದಲ್ಲಿ ವಾಸಿಸುವ ಜಲಚರ ಜೀವಿ ಓರ್ ಫಿಶ್ ಜಗತ್ತಿನ ಅತಿ ದೊಡ್ಡ ಎಲುಬಿನ ಮೀನು. ಇದು 15 ಅಡಿಗೂ ಹೆಚ್ಚು ಉದ್ದ ಬೆಳೆಯಬಲ್ಲದು. ಯುರೋಪಿನ ನಾವಿಕರಿಗೆ ಕಾಣಿಸಿದ್ದವೆನ್ನಲಾದ ಸಮುದ್ರ ಹಾವುಗಳು ಈ ಮೀನುಗಳೇ ಇರಬಹುದು ಎನ್ನಲಾಗಿದೆ. ಜಪಾನಿಗರ ನಂಬಿಕೆ ಪ್ರಕಾರ ಈ ಮೀನುಗಳನ್ನು ಕರಾವಳಿಯ ಜನರಿಗೆ ಭೂಕಂಪ ಅಥವಾ ಸುನಾಮಿಯ ಎಚ್ಚರಿಕೆ ನೀಡಲು ಸಮುದ್ರದ ಡ್ರ್ಯಾಗನ್ ರಾಜ ಕಳುಹಿಸುತ್ತಾನೆ. ಉಳಿದ ಸಮಯದಲ್ಲಿ ಇವು ಜನರಿಗೆ ಕಾಣಿಸುವುದಿಲ್ಲ.

ಓರ್ ಫಿಶ್ ಕಾಣಿಸಿದ ನಿದರ್ಶನಗಳು

ಕಳೆದ ವಾರ ಜಪಾನ್‌ನ ಸಮುದ್ರದ ಟೊಯಾಮಾ ಬೇ ತೀರದಲ್ಲಿ 10.5 ಅಡಿಯ ಓರ್ ಫಿಶ್ ತೀರಕ್ಕೆ ತೇಲಿಕೊಂಡು ಬಂದಿತ್ತು. ಅದರ ಬಳಿಕ ಇಮಿಜು ಪ್ರಾಂತ್ಯದ ಕರಾವಳಿಯಲ್ಲಿ 13 ಅಡಿ ಉದ್ದದ ಮೀನು ಮೀನುಗಾರರ ಬಲೆಗೆ ಸಿಲುಕಿತ್ತು. ಇದರಿಂದ ಈ ಅವಧಿಯಲ್ಲಿ ಒಟ್ಟು ಏಳು ಓರ್ ಫಿಶ್‌ಗಳು ಪತ್ತೆಯಾದಂತಾಗಿದೆ.

2011ರಲ್ಲಿ ಫುಕುಶಿಮಾ ಭೂಕಂಪ ಮತ್ತು ಬಳಿಕ ಉಂಟಾದ ಸುನಾಮಿಗೂ ಮುನ್ನ ಆ ವರ್ಷ ಡಜನ್‌ಗಟ್ಟಲೆ ಓರ್ ಫಿಶ್‌ಗಳು ಜಪಾನ್ ಕರಾವಳಿ ತೀರಕ್ಕೆ ತೇಲಿ ಬಂದಿದ್ದವು. ಇದರಿಂದಾಗಿ ಭೂಕಂಪಕ್ಕೂ ಮೀನುಗಳಿಗೂ ಸಂಬಂಧವಿದೆ ಎಂಬ ನಂಬಿಕೆಗೆ ಇಂಬು ದೊರೆತಿತ್ತು. 2015ರ ಜುಲೈನಲ್ಲಿ ಸಾಂಟಾ ಕ್ಯಟಲಿನಾ ಐಲ್ಯಾಂಡ್ ಸಮೀಪ ಜೀವಂತ ಓರ್ ಫಿಶ್ ಸೆರೆ ಸಿಕ್ಕಿತ್ತು. ದ್ವೀಪವನ್ನು ಆವರಿಸಿಕೊಂಡಿದ್ದ ನೀರು ತೀರವನ್ನು ಕೊಚ್ಚಿಕೊಂಡು ಹೋದ ಬಳಿಕ 19 ತಿಂಗಳಲ್ಲಿ ದೊರೆತ ಮೂರನೇ ಓರ್ ಫಿಶ್ ಇದಾಗಿತ್ತು. 2014ರಲ್ಲಿ ಸಾಂಟಾ ಮೋನಿಕಾ ಕರಾವಳಿ ತೀರದಲ್ಲಿ ಒಮದು ಮೀನು ತೇಲಿಬಂದಿತ್ತು. 2013ರಲ್ಲಿ ಒಂದೇ ವಾರದಲ್ಲಿ ಎರಡು ಓರ್ ಫಿಶ್‌ಗಳು ಸಾಂಟಾ ಕ್ಯಟಲಿನಾ ಐಲ್ಯಾಂಡ್‌ನಲ್ಲಿ ಶವವಾಗೊ ದೊರೆತಿದ್ದವು.

ಈ ಎಲ್ಲ ಘಟನೆಗಳಾದಾಗ ಮಾಧ್ಯಮಗಳು ಓರ್ ಫಿಶ್ ಕಾಣಿಸುವುದಕ್ಕೂ ಭೂಕಂಪ ಘಟನೆಗಳಿಗೂ ಸಂಬಂಧ ಕಲ್ಪಿಸುವ ಹುಡುಕಾಟಗಳನ್ನು ಮಾಡಿದವು. ಆದರೆ, ಅದಾವುದೂ ಸಂಭವಿಸಲಿಲ್ಲ.

ವಿಜ್ಞಾನಿಗಳು ಹೇಳುವುದೇನು?

ಓರ್ ಫಿಶ್‌ಗಳು ಕೆಲವು ಅವಧಿಗಳಲ್ಲಿ ಸಮುದ್ರದ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದಕ್ಕೆ ಅಥವಾ ಕರಾವಳಿ ತೀರದಲ್ಲಿ ಮೃತ ಸ್ಥಿತಿಯಲ್ಲಿ ಸಿಗುವುದಕ್ಕೆ ಜೀವ ವಿಜ್ಞಾನಿಗಳು ವಿವಿಧ ಬಗೆಯ ಅಭಿಪ್ರಾಯಗಳನ್ನು ನೀಡುತ್ತಾರೆ. ಈ ಮೀನುಗಳು ಒಳ್ಳೆಯ ಈಜುಪಟುಗಳಲ್ಲ. ಕೆಲವು ಕಾಲಾವಧಿಯಲ್ಲಿ ಅಲೆಗಳು ಅವುಗಳನ್ನು ಮೇಲ್ಭಾಗಕ್ಕೆ ತಳ್ಳಬಹುದು. ಆಗ ಅವು ಆಯಾಸದಿಂದ ಸಾಯಬಹುದು.

ಇನ್ನೊಂದು ವಿಲಕ್ಷಣ ವಿವರಣೆ ಎಂದರೆ, ನೀರಿನಾಳದಲ್ಲಿರುವ ಕಂದರಗಳಿಂದ ಹೊರಬರುವ ರಾಸಾಯನಿಕಗಳು, ವಿಷಕಾರಿ ಅಂಶಗಳು ಸಮುದ್ರದಲ್ಲಿನ ಪ್ರಾಣಿಗಳ ಸಾವಿಗೆ ಕಾರಣವಾಗುತ್ತವೆ. ಆದರೆ, ಈ ವಾದ ಇನ್ನೂ ಸಾಬೀತಾಗಿಲ್ಲ. ಪ್ರಾಣಿಗಳ ವರ್ತನೆಗೂ ಭೂಕಂಪದ ಚಟುವಟಿಕೆಗಳಿಗೂ ಸಂಬಂಧ ಬೆಸೆಯುವ ಯಾವುದೇ ಮಹತ್ವದ ಅಂಶಗಳು ಪತ್ತೆಯಾಗಿಲ್ಲ. ಈ ಮೀನುಗಳು ಪತ್ತೆಯಾದಾಗಲೂ ಜಪಾನ್‌ನಲ್ಲಿ ಭೂಕಂಪದ ತೀವ್ರ ಘಟನೆಗಳು ಸಂಭವಿಸಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Japanese believe giant Oarfish are sent by the dragon king to warn people of Earthquake and Tsunami. Was the Myth is true? Here is an analytical story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more