ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಜಾನಪದ ಸಿರಿ" ಸಿರಿಯಜ್ಜಿಯ ನೆನಪಿಗೆ ಸ್ಮಾರಕವಾದರೂ ಬೇಡವೇ?

By ಚಿದಾನಂದ ಎಂ.ಮಸ್ಕಲ್
|
Google Oneindia Kannada News

ಜಾನಪದ ಎನ್ನುತ್ತಿದ್ದಂತೆ, ತನ್ನ ಸಿರಿಕಂಠದಲ್ಲೇ ಜನಪದ ಸಂಪತ್ತನ್ನು ತುಂಬಿಕೊಂಡಿದ್ದ ಸಿರಿಯಜ್ಜಿ ನೆನಪಾಗದೇ ಇರಲು ಸಾಧ್ಯವೇ? ಸಸಿ ನಾಟಿ ಮಾಡುವಾಗ, ಕಳೆ ಕೀಳುವಾಗ, ಧಾನ್ಯ ಕುಟ್ಟುವಾಗ, ಬೀಸುವಾಗ, ಹಬ್ಬ-ಹರಿದಿನ ಬಂದಾಗ, ಮದುವೆ- ಮುಂಜಿ ಆದಾಗ, ಹೀಗೆ ಪ್ರತಿಯೊಂದಕ್ಕೂ ಅರ್ಥಗರ್ಭಿತವಾದ ಜನಪದ ಹಾಡನ್ನು ಹಾಡುತ್ತಿದ್ದ, ಆ ಮೂಲಕವೇ ತಿಳಿವಳಿಕೆ ಹಂಚುತ್ತಿದ್ದ, ಜನಪದವನ್ನೇ ಆಸ್ತಿ ಎಂದು ಜತನದಿಂದ ಕಾಯ್ದುಕೊಂಡಿದ್ದ ಚಿತ್ರದುರ್ಗದ "ಸಿರಿಯಜ್ಜಿ" ಹೆಸರಿನಲ್ಲೂ ಜಾನಪದವೇ ಸೇರಿಕೊಂಡು "ಜಾನಪದ ಸಿರಿಯಜ್ಜಿ" ಎಂದೇ ಪ್ರಸಿದ್ಧವಾಗಿದೆ.

ಕಾಡುಗೊಲ್ಲರ ಗಾನ ಕೋಗಿಲೆ, ಜನಪದ ಕಣಜ, ಜನಪದ ಸಿರಿ ಎಂದೂ ಸಿರಿಯಜ್ಜಿಯನ್ನು ಕನ್ನಡ ಸಾಹಿತ್ಯ ಲೋಕ ನೆನಪಿಸಿಕೊಳ್ಳುತ್ತದೆ. ಆದರೆ ಜನಪದ ಕಲೆಗೆ ಇಷ್ಟೆಲ್ಲಾ ಕೊಡುಗೆ ಕೊಟ್ಟಿದ್ದರೂ ಸಿರಿಯಜ್ಜಿಯನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುವಂತೆ ಮಾಡುವ ಒಂದು ಪ್ರಯತ್ನವೂ ಸರ್ಕಾರದ ವತಿಯಿಂದ ನಡೆದಿಲ್ಲ. ಸಿರಿಯಜ್ಜಿ ಸತ್ತು ಹತ್ತು ವರ್ಷಗಳೇ ಕಳೆದರೂ ಆಕೆಯ ಹೆಸರನ್ನು ಅಜರಾಮರಗೊಳಿಸುವ ಒಂದು ಸ್ಮಾರಕವಾಗಲಿ, ಸಮಾಧಿಯಾಗಲಿ ನಿರ್ಮಾಣವಾಗಿಲ್ಲ.

 ಜಾನಪದ ಕಲೆಗೆ ಜೀವ ತುಂಬುವ ಹಾದಿಯಲ್ಲಿ ಅಮರಯ್ಯಸ್ವಾಮಿ ಹಿರೇಮಠ ಜಾನಪದ ಕಲೆಗೆ ಜೀವ ತುಂಬುವ ಹಾದಿಯಲ್ಲಿ ಅಮರಯ್ಯಸ್ವಾಮಿ ಹಿರೇಮಠ

 ಗೊಲ್ಲರಹಟ್ಟಿಯ ಜನಪದ ಕಣಜ ಸಿರಿಯಜ್ಜಿ

ಗೊಲ್ಲರಹಟ್ಟಿಯ ಜನಪದ ಕಣಜ ಸಿರಿಯಜ್ಜಿ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯಲ್ಲಿ ಈರಪ್ಪ ಮತ್ತು ಕಾಡಮ್ಮ ದಂಪತಿ ಮಗಳಾಗಿ ಜನಿಸಿದ ಸಿರಿಯಜ್ಜಿ ಅಕ್ಷರಜ್ಞಾನದಿಂದ ದೂರವಿದ್ದವರು. ಆದರೆ ತನ್ನ ಬುದ್ಧಿಶಕ್ತಿಯಿಂದಲೇ ಸಾವಿರಾರು ಪದಗಳ ಒಡತಿಯಾಗಿದ್ದರು.

ಮಧ್ಯ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವ ಬುಡಕಟ್ಟು ಕಾಡುಗೊಲ್ಲರು ತಮ್ಮದೇ ಆದ ಸಂಪ್ರದಾಯ, ಆಚಾರ ವಿಚಾರ, ನಂಬಿಕೆಗಳಿಂದ ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದಾರೆ. ಅದೇ ಸಮುದಾಯದಿಂದ ಬಂದ ಸಿರಿಯಜ್ಜಿ ಹಾಡುವ ಪ್ರತಿಯೊಂದು ಪದವೂ ವೈಶಿಷ್ಟ್ಯವಾಗಿದ್ದಂಥವು. ಹೊಲಗಳಲ್ಲಿ ಬಿತ್ತನೆ ಮಾಡುವಾಗ, ಮದುವೆ, ವಿವಿಧ ಸಭೆ ಸಮಾರಂಭಗಳಲ್ಲಿ ಹಾಡುತ್ತಿದ್ದ ಅಜ್ಜಿಯ ಸಿರಿಕಂಠಕ್ಕೆ ಮನಸೋಲದವರೇ ಇಲ್ಲ.

 ದೇವರ ಮೇಲೆ ಪದ ಕಟ್ಟುತ್ತಿದ್ದ ಅಜ್ಜವ್ವ

ದೇವರ ಮೇಲೆ ಪದ ಕಟ್ಟುತ್ತಿದ್ದ ಅಜ್ಜವ್ವ

ಕಾಡುಗೊಲ್ಲರ ಕುಲಪುರುಷರಾದ ಎತ್ತಪ್ಪ, ಕ್ಯಾತಪ್ಪ, ಜುಂಜಪ್ಪ, ಕಾಟಯ್ಯ, ಚಿತ್ತಯ್ಯ, ಕಾಟವ್ವ, ಕೊಂಡದ ಚಿತ್ತವ್ವ, ಗೌರಸಮುದ್ರ ಮಾರಮ್ಮ ಇನ್ನಿತರ ದೇವರುಗಳ ಮೇಲೆ ಪದ ಪೋಣಿಸಿ ಹಾಡುವ ಕಲೆ ಅವರಿಗೆ ದೈವದತ್ತವಾಗಿ ಒಲಿದುಬಂದಿತ್ತು. ಬೆಳಗೆರೆ ಕೃಷ್ಣಶಾಸ್ತ್ರಿಗಳ ಪ್ರೋತ್ಸಾಹದಿಂದ ಸಿರಿಯಜ್ಜಿಯಲ್ಲಿ ಜಾನಪದ ಹಾಡುಗಳ ಗ್ರಂಥಾಲಯವೇ ಅನಾವರಣಗೊಂಡಿತು. ಸಿರಿಯಜ್ಜಿ ಕುರಿತ "ಕತ್ತಲೆ ದಾರಿ ದೂರ", "ಮಹಾಸತಿ ಕಾಟವ್ವ" ಎನ್ನುವ ಕಥನಗೀತೆಗಳು ಜನರ ಮನಸ್ಸನ್ನು ಗೆದ್ದವು. ಸಿರಿಯಜ್ಜಿ ಹಾಡುತ್ತಿದ್ದ ಕಾಡುಗೊಲ್ಲರ ದೇವರ ಹಾಡುಗಳು ಕೇಳುಗರನ್ನು ಭಕ್ತಿ ಪರವಶರನ್ನಾಗಿ ಮಾಡುತ್ತಿದ್ದವು.

ಪಂಜಿನ ಮಂದ ಬೆಳಕಲ್ಲಿ ಅನಾವರಣಗೊಂಡ ಕೊರಗ ಮಕ್ಕಳ ಯಕ್ಷಲೋಕಪಂಜಿನ ಮಂದ ಬೆಳಕಲ್ಲಿ ಅನಾವರಣಗೊಂಡ ಕೊರಗ ಮಕ್ಕಳ ಯಕ್ಷಲೋಕ

 ಸಿರಿಯಜ್ಜಿ ಭೇಟಿಯಾದ ವಿದ್ವಾಂಸರು

ಸಿರಿಯಜ್ಜಿ ಭೇಟಿಯಾದ ವಿದ್ವಾಂಸರು

ಸಿರಿಯಜ್ಜಿಯ ಬಳಿ ಕಲಾದೇವತೆಯಿದ್ದಳು. ಅಜ್ಜಿಯನ್ನು ಅನೇಕ ವಿದ್ವಾಂಸರು ಭೇಟಿ ಮಾಡಿದ್ದಾರೆ. ಪ್ರಮುಖವಾಗಿ ಬೆಳಗೆರೆ ಕೃಷ್ಣಶಾಸ್ತ್ರೀ, ಡಾ. ಕೃಷ್ಣಮೂರ್ತಿ, ಡಾ. ತೀ.ನಂ.ಶಂಕರನಿರಾಯಣ, ಡಾ. ಎಚ್. ಎಲ್. ನಾಗೇಗೌಡ, ಡಾ. ಎಂ. ಚಿದಾನಂದಮೂರ್ತಿ, ಜೀಶಂಪ, ಡಾ. ಎ.ಕೆ. ರಾಮಾನುಜಮ್, ಡಾ. ಮಲ್ಲೇಶಪುರಂ ಮುತಾಂದವರು ಈಕೆಯ ಪ್ರತಿಭೆಗೆ ಮನಸೋತಿದ್ದಾರೆ. ಸಿರಿಯಜ್ಜಿಯ "ಬದುಕು ಮತ್ತು ಕಾವ್ಯ"( ಡಾ. ಮೀರಾಸಾಬಿಹಳ್ಳಿ ಶಿವಣ್ಣ) ಕುರಿತ ಪುಸ್ತಕವನ್ನು ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಸಂಸ್ಥೆ ಹಾಗೂ ಡಾ. ಕೃಷ್ಣಮೂರ್ತಿ ಹನೂರು ಅವರು ಸಿರಿಯಜ್ಜಿಯಿಂದ ಸಂಪಾದಿಸಿದ ಜಾನಪದ ಕಥನ ಗೀತೆಗಳನ್ನು ಕನ್ನಡ ವಿಶ್ವವಿದ್ಯಾಲಯ "ಸಾವಿರ ಸಿರಿ ಬೆಳಗು" ಎಂಬ ಹೆಸರಿನಲ್ಲಿ ಪುಸ್ತಕವಾಗಿ ಹೊರ ತಂದಿದೆ.

ಸಿರಿಯಜ್ಜಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಗುಂಡೂರಾಯರ ಕಾಲದಲ್ಲಿ "ಜನಪದ ಸಿರಿ" ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ. ಕರ್ನಾಟಕ ಜನಪದ ಅಕಾಡೆಮಿ "ಜಾನಪದಶ್ರೀ" ಎಂಬ ಬಿರುದು ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ "ನಾಡೋಜ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ. ವಿವಿಧ ಸೇವಾ ಸಂಸ್ಥೆಗಳು, ಮಠ, ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

 ಸಿರಿಯಜ್ಜಿಗೆ ಅವಮಾನ ಮಾಡಿದಂತಲ್ಲವೇ?

ಸಿರಿಯಜ್ಜಿಗೆ ಅವಮಾನ ಮಾಡಿದಂತಲ್ಲವೇ?

ಜನಪದ ಕಲಾವಿದೆ, ನಾಡೋಜ ಪ್ರಶಸ್ತಿ ಪುರಸ್ಕೃತೆ ಸಿರಿಯಜ್ಜಿ ಬಗ್ಗೆ ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ. ಅವರಿಗೆ ಒಂದು ಸಮಾಧಿಯನ್ನಾಗಲೀ, ಸ್ಮಾರಕವನ್ನಾಗಲೀ ನಿರ್ಮಿಸಲು ಯಾರೂ ಮನಸ್ಸು ಮಾಡಿಲ್ಲ. ಹತ್ತು ಸಾವಿರಕ್ಕೂ ಮಿಕ್ಕಿದ ಹಾಡು ಗಳನ್ನು ನೆನಪಿನಲ್ಲಿರಿಸಿಕೊಂಡಿದ್ದ ಅಜ್ಜಿಯ ನೆನಪನ್ನು ಅಜರಾಮರಗೊಳಿಸುವ ಪ್ರಯತ್ನ ನಡೆಸಿಲ್ಲ. "ಕಾಡುಗೊಲ್ಲ ಸಮುದಾಯ ಕೂಡ ಅಜ್ಜಿಯ ಬೆಂಬಲಕ್ಕೆ ನಿಂತಿಲ್ಲ. ಕೆಲವರು ಸಿರಿಯಜ್ಜಿ ಹೆಸರು ಹೇಳಿಕೊಂಡು ಸ್ವಾರ್ಥ ಜೀವನ ಮಾಡುತಿದ್ದಾರೆ. ಇಂಥವರು ಅನೇಕ ಜನರಿದ್ದಾರೆ. ಇವರು ಯಾರಿಗೂ ಕಲೆಯ ಬಗ್ಗೆ, ಅದನ್ನು ಉಳಿಸಿ ಬೆಳೆಸಿದವರ ಬಗ್ಗೆ ಕಾಳಜಿ ಇಲ್ಲ" ಎಂದು ಸಿರಿಯಜ್ಜಿಯ ತಮ್ಮನ ಮಗ ವೀರೇಶ್ ಜಿ.ವಿ. ನೋವಿನ ಮಾತುಗಳನ್ನು ಹಂಚಿಕೊಂಡರು.

English summary
Siriyajji of chitradurga contributed so much to the folk art. But no attempts has been made by the government to build atleast one monument to make people remember her contribution,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X