ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದ ವ್ಯಕ್ತಿ: ಬಹುಭಾಷಾ ನಟ ಪ್ರಕಾಶ್ ರೈ

By Sachhidananda Acharya
|
Google Oneindia Kannada News

ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.

ಬಹುತೇಕ ನಟನೆಗಷ್ಟೇ ಸೀಮಿತವಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಬೆಳ್ಳಿ ಪರದೆಯ ಅಂಚಿನಿಂದ ಹೊರ ಬಂದಿದ್ದು 2017ರ ವಿಶೇಷ. ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ, ಟ್ವಿಟ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿ, ಸಂಸದ ಪ್ರತಾಪ್ ಸಿಂಹರಿಗೆ ಲೀಗಲ್ ನೋಟಿಸ್ ನೀಡುವುದರ ಮೂಲಕ ವರ್ಷಪೂರ್ತಿ ಪ್ರಕಾಶ್ ರೈ ಸುದ್ದಿಗೆ ಗ್ರಾಸವಾದರು.

ವರ್ಷದ ವ್ಯಕ್ತಿ 2017

Newsmaker of Karnataka 2017: Multilingual actor Prakash Rai

ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ಸಾಲಮನ್ನಾಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ತಮಿಳುನಾಡು ರೈತರ ಪರವಾಗಿ ತಮಿಳು ನಟ ವಿಶಾಲ್ ಜತೆ ಸೇರಿ ಕೇಂದ್ರ ಸರಕಾರಕ್ಕೆ ಪ್ರಕಾಶ್ ರೈ ಮನವಿ ಸಲ್ಲಿಸಿದರು.

ನಂತರ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಪ್ರಕಾಶ್ ರೈ ಬಲಪಂಥೀಯರ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಕೆಂಡ ಕಾರಲು ಆರಂಭಿಸಿದರು. "ಉತ್ತರ ಪ್ರದೇಶ ಮುಖ್ಯಮಂತ್ರಿಗಳ ನಟನೆ ನೋಡಿ ನನಗೆ ಸಿಕ್ಕಿರುವ 5 ರಾಷ್ಟ್ರಪ್ರಶಸ್ತಿಗಳು ಕೊಟ್ಟುಬಿಡೋಣ ಅನ್ನಿಸಿತು," ಎಂದು ಹೇಳಿಕೆ ನೀಡಿ ಗದ್ದಲವೆಬ್ಬಿಸಿದರು.

ಪತ್ರಕರ್ತೆ ಗೌರಿ ಲಂಕೇಶ್ ರನ್ನು ಕೊಂದವರು ಯಾರು ಎಂಬುದು ಗೊತ್ತಿಲ್ಲದಿರಬಹುದು. ಆದರೆ ಗೌರಿಯವರ ಸಾವನ್ನು ಸಂಭ್ರಮಿಸುತ್ತಿರುವವರು ಯಾರು ಎಂಬುದು ಗೊತ್ತಿದೆ ಎಂದೂ ಹೇಳಿಕೆ ನೀಡಿದ್ದರು.

ಇದೇ ಸಂದರ್ಭದಲ್ಲಿ ಪ್ರಕಾಶ್ ರೈ ಅವರಿಗೆ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ' ಘೋಷಣೆಯಾಯಿತು. ಇದಕ್ಕೆ ರಾಜ್ಯ ಬಿಜೆಪಿ ನಾಯಕರೇ ತಗಾದೆ ತೆಗೆದರು. ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದ ರೈ ವಿರೋಧದ ನಡುವೆಯೇ ಪ್ರಶಸ್ತಿ ಸ್ವೀಕರಿಸಿದರು.

ಇದಾದ ಬಳಿಕ ಜಸ್ಟ್ ಆಸ್ಕಿಂಗ್ ಎಂದು ಪದೇ ಪದೇ ಟ್ವಿಟ್ಟರಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ ರೈ, ಪ್ರಧಾನಿ ನರೇಂದ್ರ ಮೋದಿಯವರನ್ನು ನಿರಂತರ ಟೀಕಿಸುತ್ತಾ ಬಂದರು.

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಕೈಪಿಡಿಯಲ್ಲಿ ತಾಜ್ ಮಹಲ್ ನಾಪತ್ತೆಯಾದ ಸಂದರ್ಭ, "ತಾಜ್ ಮಹಲನ್ನು ಯಾವಾಗ ಕೆಡವಬೇಕೆಂದಿದ್ದೀರಿ?" ಎಂದು ಪ್ರಶ್ನಿಸಿದರು. "ಧರ್ಮ, ಸಂಸ್ಕೃತಿ, ನೈತಿಕತೆ ಹೆಸರಿನಲ್ಲಿ ಭಯ ಬಿತ್ತುವುದು ಭಯೋತ್ಪಾದನೆ ಅಲ್ಲವಾದರೆ.. ಭಯೋತ್ಪಾದನೆ ಅಂದರೆ ಮತ್ತೇನು.. ಸುಮ್ಮನೆ ಕೇಳುತ್ತಿದ್ದೇನೆ," ಎನ್ನುವ ಅರ್ಥದ ಪ್ರಕಾಶ್ ರೈ ಟ್ವೀಟ್ ಮಾಡಿದರು.

ಜತೆಗೆ "ಅಪನಗದೀಕರಣದಂಥ ಅತಿ ದೊಡ್ಡ ತಪ್ಪು ಮಾಡಿದ ಕೇಂದ್ರ ಸರಕಾರ ದೇಶದ ಜನರ ಕ್ಷಮೆ ಯಾಚಿಸಬೇಕು" ಎಂದು ಆಗ್ರಹಿಸಿದರು.

'ಟ್ರೋಲ್ ಗೂಂಡಾಗಿರಿ' ವಿರುದ್ಧ ಧ್ವನಿ ಎತ್ತಿದ ರೈ

ಪ್ರಕಾಶ್ ರೈ ಹೇಳಿಕೆಗಳು ಟ್ರೋಲ್ ಗೆ ಒಳಗಾಗುತ್ತಿದ್ದಂತೆ ಅವರು ಟ್ರೋಲ್ ಗೂಂಡಾಗಿರಿ ಪದ ಹುಟ್ಟು ಹಾಕಿದರು.

ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರೈ, "ಯಾವುದೇ ಹೇಳಿಕೆಗಳನ್ನು ಕೊಟ್ಟರೂ ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದೆ. ಇದು ಒಂದು ರೀತಿಯ ಗೂಂಡಾ ಪ್ರವೃತ್ತಿ," ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೇ ವೇಳೆ ಸಂಸದ ಪ್ರತಾಪ್ ಸಿಂಹ ಅವರಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ಕೂಡ ನೀಡಿದ್ದರು. ಸದ್ಯ ಗುಜರಾತ್ ಫಲಿತಾಂಶದ ಬೆನ್ನಿಗೆ "ಪ್ರೀತಿಯ ಪ್ರಧಾನಮಂತ್ರಿಗಳೇ, ಗೆಲುವಿಗಾಗಿ ನಿಮಗೆ ಅಭಿನಂದನೆ, ಆದರೆ, ನಿಮಗೆ ನಿಜಕ್ಕೂ ಸಂತೋಷವಾಗಿದೆಯೇ? ಸುಮ್ನೆ ಕೇಳುತ್ತಿದ್ದೇನೆ," ಎಂದು ಹ್ಯಾಶ್ ಟ್ಯಾಗ್ ಹಾಕಿ ಕಾಲೆಳೆದಿದ್ದಾರೆ.

ಹೀಗೆ ಸರಣಿ ಟ್ವೀಟ್, ಭಾಷಣಗಳು, ವಿವಾಗಳ ಮೂಲಕ 2017ರ ವರ್ಷದುದ್ದಕ್ಕೂ ಪ್ರಕಾಶ್ ರೈ ಸುದ್ದಿ ಕೇಂದ್ರದಲ್ಲೇ ಝಂಡಾ ಹೂಡಿದರು.

English summary
Oneindia Kannada has chosen multilingual actor Prakash Rai as the 'Newsmaker of Karnataka 2017' as he was in the news for many reasons. Attacking on Prime Minister Narendra Modi, his #Justasking tweets and conflict with Mysuru MP Pratap Simha which is why Prakash Rai comes in on the Newsmaker of the Year 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X