ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

|
Google Oneindia Kannada News

ಇದು ಆಧುನಿಕ ಯುಗ. ತಂತ್ರಜ್ಞಾನ ಬೆಳೆದಂತೆ, ಮನುಷ್ಯದ ಬುದ್ಧಿವಂತಿಕೆ ಹೆಚ್ಚಾದಂತೆ ಪ್ರಕೃತಿಗೆ ಅಪಾಯ ಎದುರಾಗುತ್ತಿದೆ. ಮರ ಬೆಳೆಸಿ, ನೀರು ಉಳಿಸಿ ಎಂದು ಅಭಿಯಾನವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಇಂದಿನದು.

ಓದಿಕೊಂಡವರು, ವಿಶ್ವವಿದ್ಯಾಲಯಗಳಿಂದ ಪದವಿ ಮತ್ತು ಡಾಕ್ಟರೇಟ್ ಪಡೆದವರು ನೀರು ಉಳಿಸುವ ಬಗ್ಗೆ ಚೆನ್ನಾಗಿ ಭಾಷಣ ಮಾಡುತ್ತಾರೆ. ಅದನ್ನು ಕೇಳಿದ ಎಷ್ಟು ಮಂದಿ ಅಂತಹ ಕಾರ್ಯ ಮಾಡುತ್ತಾರೆ? ಎಂಬುದು ಬೇರೆಯದೇ ಚರ್ಚೆಯ ಆಯಾಮ.

ಮನ್ ಕೀ ಬಾತ್‌; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿಮನ್ ಕೀ ಬಾತ್‌; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ

ಮನೆಯ ಕಸವನ್ನೇ ಹಸಿ, ಒಣ ಎಂದು ವಿಂಗಡನೆ ಮಾಡಿಕೊಡದ ಕಾಲವಿದು. ಅದಕ್ಕೂ ಕೂಡಾ ನಿಯಮವನ್ನು ರೂಪಿಸಿ, ದಂಡ ಹಾಕುವಂತರಹ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಹಳ್ಳಿಯ ಸಾಮಾನ್ಯ ಬಡ ಕುಟುಂಬದ ವ್ಯಕ್ತಿಯೊಬ್ಬರ ಪರಿಸರ ಕಾಳಜಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು.

News makers of Karnataka 2020 Mandya District Kamegowda

2020ರಲ್ಲಿ ದೇಶಾದ್ಯಂತ ಸುದ್ದಿಯಾದವರು, ಗೂಗಲ್‌ನಲ್ಲಿ ಅವರ ಹೆಸರನ್ನು ಲಕ್ಷಾಂತರ ಜನರು ಹುಡುಕುವಂತೆ ಮಾಡಿದವರು ಕರ್ನಾಟಕದ ಮಂಡ್ಯ ಜಿಲ್ಲೆಯ ಕಾಮೇಗೌಡ. ಸಾಮಾನ್ಯ ಕುಟುಂಬದ, ಕುರಿ ಕಾಯುತ್ತಾ ಜೀವನ ಸಾಗಿಸುವ ಬಡ ರೈತ ಕಾಮೇಗೌಡ ದೇಶವೇ ಒಮ್ಮೆ ತಮ್ಮತ್ತ ತಿರುಗಿ ನೋಡುವಂತೆ ಸುದ್ದಿಯಾದರು.

ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಜೂನ್ 28ರ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು. ಆಗ ಕಾಮೇಗೌಡರ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಆ ಮೂಲಕ ದೇಶಕ್ಕೆ ಸಾಮಾನ್ಯ ವ್ಯಕ್ತಿಯನ್ನು ಪರಿಚಯಿಸಿದರು.

ಮಂಡ್ಯದ ಕಾಮೇಗೌಡರಿಗೆ 'ಪ್ರಣಾಮ್' ಎಂದ ಮಾಜಿ ಕ್ರಿಕೆಟರ್ ಲಕ್ಷ್ಮಣ್ಮಂಡ್ಯದ ಕಾಮೇಗೌಡರಿಗೆ 'ಪ್ರಣಾಮ್' ಎಂದ ಮಾಜಿ ಕ್ರಿಕೆಟರ್ ಲಕ್ಷ್ಮಣ್

ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರಿಗೆ 83 ವರ್ಷ. ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಪುತ್ರ ಕಾಮೇಗೌಡರು ಶಾಲೆ ಮೆಟ್ಟಿಲು ಹತ್ತಿದವರಲ್ಲ. ಇರುವ ತುಂಡುಭೂಮಿಯಲ್ಲಿ ಕೃಷಿ ಮಾಡಿಕೊಂಡು, ಕುರಿಗಳನ್ನು ಸಾಕಿಕೊಂಡು ಜೀವನ ಮಾಡುತ್ತಾರೆ. ಈಗ ಜನರ ಪಾಲಿಗೆ ಅವರು 'ಆಧುನಿಕ ಭಗೀರಥ'.

ಕುರಿಗಳನ್ನು ಕಾಯುತ್ತಲೇ ತಾಲೂಕಿನ ಕುಂದನಿ ಬೆಟ್ಟದಲ್ಲಿ ಕಾಮೇಗೌಡರು 15ಕ್ಕೂ ಅಧಿಕ ಕೆರೆಗಳನ್ನು ನಿರ್ಮಿಸಿದ್ದಾರೆ. ತಾವು ಕಾಯುತ್ತಿರುವ ಕುರಿಗಳಿಗೆ ಕುಡಿಯಲು ನೀರು ಸಿಗಲಿ ಎಂದು ಏಕಾಂಗಿಯಾಗಿ ಬೆಟ್ಟದಲ್ಲಿ ಕೆರೆಗಳನ್ನು ತೋಡಿದ್ದಾರೆ. ಕಾಮೇಗೌಡರ ಈ ಕಾಳಜಿ ಪರಿಸರವನ್ನು ಕಾಪಾಡಲು ಸಹಾಯಕವಾಗಿದೆ.

News makers of Karnataka 2020 Mandya District Kamegowda

ಒಂದು ಚೆಡ್ಡಿ, ಒಂದು ಅಂಗಿ, ಕೈಯಲ್ಲಿ ಕೋಲು, ಹೆಗಲಲ್ಲಿ ಚೀಲ. ಕಾಮೇಗೌಡರು ಇರುವುದು ಹಾಗೇ. ತುಂಡು ಭೂಮಿಯಲ್ಲಿ ಬೇಸಾಯ, ಕುರಿ ಕಾಯುವುದು ಕಾಯಕ. ಆಗಾಗ ಮಲೆ ಮಹದೇಶ್ವರನ ದರ್ಶನ, ರಾಮನಗರದ ಹನುಮ ದೇವಾಲಯಕ್ಕೆ ಭೇಟಿ ಇಷ್ಟೇ ಕಾಮೇಗೌಡರ ಜೀವನ.

ಉಳಿದಂತೆ ಕುರಿ, ಕೆರೆ ಇವುಗಳೇ ಅವರ ಪ್ರಪಂಚ. ಕುರಿಗಳು ನೀರು ಕುಡಿಯಲಿ ಎಂದು ಕಾಮೇಗೌಡರು ಏಕಾಂಗಿಯಾಗಿ ನಿರ್ಮಿಸಿದ ಕೆರೆಗಳು ಬೆಟ್ಟದಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರು ಇಂಗಲು ಸಹಾಯಕವಾಗಿವೆ. ಇದರಿಂದಾಗಿ ಅಂತರ್ಜಲ ಮಟ್ಟ ಅಭಿವೃದ್ಧಿಯಾಗುತ್ತಿದೆ. ಬೆಟ್ಟದಲ್ಲಿ ಹಸಿರು ಚಿಗುರಲು ನೆರವಾಗಿದೆ.

ಮಂಡ್ಯದ ಭಗೀರಥ ಕಾಮೇಗೌಡರ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿ ಮಂಡ್ಯದ ಭಗೀರಥ ಕಾಮೇಗೌಡರ ಕಾರ್ಯ ಮೆಚ್ಚಿದ ಜಿಲ್ಲಾಧಿಕಾರಿ

ಸುಮಾರು 12 ವರ್ಷಗಳ ಹಿಂದೆ ಕಾಮೇಗೌಡರು ಕುಂದನಿ ಬೆಟ್ಟದಲ್ಲಿ ಕುರಿ ಕಾಯುವಾಗ ವಿಪರೀತ ದಾಹ ವಾಗುತ್ತದೆ, ಎಷ್ಟು ಹುಡುಕಿದರೂ ಹನಿ ನೀರು ಸಿಗುವುದಿಲ್ಲ. ದೂರದಲ್ಲಿ ಕಂಡ ಮನೆಗೆ ಹೋಗಿ ನೀರು ಕುಡಿದು ದಾಹ ಇಂಗಿಸಿಕೊಳ್ಳುತ್ತಾರೆ. ನನಗೆ ನೀರು ಸಿಕ್ಕಿತು ಕುರಿಗಳ ಕಥೆ ಏನು?, ಪ್ರಾಣಿಗಳು ಏನು ಮಾಡಬೇಕು? ಎಂದು ಅಲೋಚಿಸುತ್ತಾರೆ. ಆಗಲೇ ಅವರಿಗೆ ಬೆಟ್ಟದಲ್ಲಿ ಚಿಕ್ಕ ಚಿಕ್ಕ ಕರೆಗಳನ್ನು ನಿರ್ಮಿಸುವ ಆಲೋಚನೆ ಬಂದಿದ್ದು.

ಕಾಮೇಗೌಡರು ಕುರಿ ಕಾಯಲು ಹೋಗುವಾಗ ಗುದ್ದಲಿ ಹಿಡಿದು ಹೋಗುತ್ತಿದ್ದರು. ಬೆಟ್ಟದಲ್ಲಿ ಕೆರೆ ನಿರ್ಮಾಣ ಮಾಡುವೆ ಎಂದು ಅವರು ಹೇಳಿದ ಮಾತನ್ನು ಕೇಳಿದ ಜನರು ನಕ್ಕಿದ್ದೇ ಹೆಚ್ಚು, ಸಂಬಂಧಿಕರಂತೂ ಇವರಿಗೆ ಹುಚ್ಚು ಹಿಡಿದಿದೆ. ಒಬ್ಬರೇ ಕೆರೆ ತೋಡುತ್ತಾರಂತೆ ಎಂದು ಲೇವಡಿ ಮಾಡಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಗೌಡರು ತಮ್ಮ ಕೆಲಸವನ್ನು ಮುಂದುವರೆಸಿದರು. ಗುದ್ದಲಿ ಹಿಡಿದು ಬೆಟ್ಟ ಅಗೆದರು.

News makers of Karnataka 2020 Mandya District Kamegowda

ಕಾಮೇಗೌಡರ ಕಾಳಜಿಯಿಂದಾಗಿ ಬೆಟ್ಟದಲ್ಲಿ ಕೆರೆಗಳು ನಿರ್ಮಾಣವಾದವು. ನಗುತ್ತಿದ್ದ ಊರಿನವರು ನೋಡುತ್ತಲೇ ಇದ್ದರು, ಮಳೆ ಬಂದು ಗೌಡರು ಕಟ್ಟಿದ ಕೆರೆಗಳು ತುಂಬಿಕೊಂಡವು. ಪ್ರಾಣಿಗಳಿಗೆ ನೀರಿಗೆ ಆಸರೆ ಆಯಿತು. ನೀರು ಇಂಗಲು, ಬೆಟ್ಟದ ಪರಿಸರ ಸದಾ ಹಸಿರಾಗಿರಲು ಕಾಮೇಗೌಡರು ತೋಡಿದ ಕೆರೆಗಳು ಆಸರೆಯಾದವು. ಮಳ್ಳವಳ್ಳಿಯಲ್ಲಿ ಗೌಡರು ಕಟ್ಟಿದ ಕೆರೆಗಳ ಕಥೆ ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪಿತು. ಪ್ರಧಾನಿಗಳು ಕಾಮೇಗೌಡರನ್ನು ಹೊಗಳಿ, ದೇಶಕ್ಕೆ ಅವರ ಕಾರ್ಯವನ್ನು ಪರಿಚಯಿಸಿದರು.

ಮೋದಿ ಮನ್ ಕೀ ಬಾತ್‌ನಲ್ಲಿ ಕಾಮೇಗೌಡರ ಕಾರ್ಯದ ಬಗ್ಗೆ ತಿಳಿಸಿದರು. ಯಾವುದೇ ಪ್ರಶಸ್ತಿ, ಪದವಿಗಾಗಿ ಆಸೆ ಪಡದ ಕಾಮೇಗೌಡರ ಶ್ರಮವನ್ನು ಸರ್ಕಾರ ಗುರುತಿಸಬೇಕು ಎಂದು ಚರ್ಚೆಗಳು ಆರಂಭವಾದವು. "ಹಣ, ಪ್ರಶಸ್ತಿ ಏನೂ ಬೇಡ ಉಚಿತ ಸರ್ಕಾರಿ ಬಸ್ ಪಾಸು ಮಾಡಿಸಿಕೊಡಿ" ಎಂಬ ಬೇಡಿಕೆಯನ್ನು ಮಾತ್ರ ಗೌಡರು ಇಟ್ಟರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಕಾಮೇಗೌಡರು ಬದುಕಿರುವಷ್ಟು ದಿನ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಸಂಚಾರ ನಡೆಸಲು ಪಾಸು ಮಾಡಿಸಿತು. ಮಂಡ್ಯದಲ್ಲಿರುವ ಕಾಮೇಗೌಡರ ನಿವಾಸಕ್ಕೆ ತೆರಳಿ ಬಸ್ ಪಾಸನ್ನು ನೀಡಿ ಅವರನ್ನು ಗೌರವಿಸಿತು. ಕಾಮೇಗೌಡರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. ಆದರೆ, ಊರಿನವರು ತಮ್ಮ ಬುದ್ಧಿಯನ್ನು ಬಿಡಲಿಲ್ಲ.

ಕಾಮೇಗೌಡರು ಕುಂದನಿ ಬೆಟ್ಟವೇ ತನ್ನದು ಎಂಬಂತೆ ಮಾತನಾಡುತ್ತಾರೆ. ಬೆಟ್ಟದಲ್ಲಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಗ್ರಾಮಸ್ಥರಿಗೆ ಅನಗತ್ಯ ಕಿರುಕುಳ ನೀಡುತ್ತಾರೆ ಎಂದು ಆರೋಪ ಮಾಡಿದರು. ಜಿಲ್ಲಾಧಿಕಾರಿಗಳ ಕಚೇರಿ ತನಕ ದೂರುನ್ನು ಕೊಟ್ಟರು. ಗ್ರಾಮಸ್ಥರು ಮತ್ತು ಕಾಮೇಗೌಡರ ಜೊತೆ ಸಭೆ ನಡೆಸಿ ಭಿನ್ನಾಭಿಪ್ರಾಯ ಸರಿಪಡಿಸಿ ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಸೂಚನೆಯೂ ಹೋಯಿತು.

News makers of Karnataka 2020 Mandya District Kamegowda

ಒಬ್ಬ ಸಾಮಾನ್ಯ ವ್ಯಕ್ತಿಯಾದ ಕಾಮೇಗೌಡರು ದೇಶಾದ್ಯಂತ ಸುದ್ದಿಯಾದರು. ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ ದಯಾಳ್ ಪದ್ಮನಾಭ ಕಾಮೇಗೌಡರ ಜೀವನದ ಕುರಿತು ಡಾಕ್ಯುಮೆಂಟರಿ ಮಾಡಲು ತೀರ್ಮಾನಿಸಿದ್ದಾರೆ. 'ದಿ ಗುಡ್ ಶೆಫರ್ಡ್' ಎಂದು ಅದಕ್ಕೆ ಶೀರ್ಷಿಕೆ ಇಟ್ಟಿದ್ದಾರೆ. ಎಲ್ಲರೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟರಲ್ಲಿ ಕಾಮೇಗೌಡರ ಸಾಧನೆ ಡಾಕ್ಯುಮೆಂಟರಿ ಆಗಬೇಕಿತ್ತು.

ಜುಲೈನಿಂದ ಚಿತ್ರೀಕರಣ ನಡೆಸಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿ ಕೋವಿಡ್ ಸೋಂಕಿನ ಕಾರಣಕ್ಕೆ ಎಲ್ಲಾ ಚಟುವಟಿಕೆಗಳು ಸ್ಥಗಿತವಾದವು. ಕಾಮೇಗೌಡರಿಗೆ ಸಹ ಉಸಿರಾಟದ ತೊಂದರೆ, ಕೋವಿಡ್ ಸೋಂಕು ಕಾಣಿಸಿಕೊಂಡಿತು. ವಯೋಸಹಜ ಕಾಲು ನೋವಿನಿಂದಾಗಿ ಅವರು ನಡೆಯದಂತಾದವರು. ಸರ್ಕಾರವೇ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಿತು. ಈಗ ಕಾಮೇಗೌಡರು ಚೇತರಿಸಿಕೊಳ್ಳುತ್ತಿದ್ದಾರೆ.

2020ನೇ ವರ್ಷದಲ್ಲಿ ಕರ್ನಾಟಕದಲ್ಲಿ ಸುದ್ದಿ ಮಾಡಿದ ವ್ಯಕ್ತಿಗಳಲ್ಲಿ ಕಾಮೇಗೌಡರು ಸಹ ಒಬ್ಬರು. ಕಾಮೇಗೌಡರ ಕಾಯಕ ಸಾವಿರಾರು ಜನರಿಗೆ ಸ್ಪೂರ್ತಿಯಾಗಲಿ. ಪರಿಸರ ಕಾಳಜಿ, ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಲಿ.

English summary
News makers of 2020; Karnataka's Mandya district Kamegowda praised by Prime Minister Narendra Modi in Man Ki Baat. Kamegowda has created more than 15 ponds for birds and animals in Kundani hill of district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X