ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

News Makers 2020: ಹೊಸ ಸಂಚಲನ ಮೂಡಿಸಿದ ತೇಜಸ್ವಿ ಯಾದವ್

|
Google Oneindia Kannada News

ಒಂದೆಡೆ ಅನುಭವಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಪ್ರಾಬಲ್ಯ, ಇನ್ನೊಂದೆಡೆ ಜೈಲಿನಲ್ಲಿರುವ ತಂದೆ, ಕುಟುಂಬದಲ್ಲಿನ ಕಲಹ, ಕ್ರಿಕೆಟ್ ಕಡೆಗಿನ ಪ್ರೀತಿ, ಇವುಗಳೆಲ್ಲದರ ನಡುವೆ ಬಿಹಾರ ರಾಜಕಾರಣದಲ್ಲಿ ಸಂಚಲನ ಮೂಡಿಸಿದವರು ತೇಜಸ್ವಿ ಯಾದವ್. ಆರ್‌ಜೆಡಿ ಕಟ್ಟಿ ಬೆಳೆಸಿದ ಲಾಲೂ ಪ್ರಸಾದ್ ಅವರ ಮಗ ಎನ್ನುವ ಬಲವೊಂದು ಬೆನ್ನಿಗಿದ್ದದ್ದು ಬಿಟ್ಟರೆ, ಮಿತ್ರಪಕ್ಷಗಳಿದ್ದರೂ ಬಿಹಾರದಲ್ಲಿ ಅಕ್ಷರಶಃ ಒಂಟಿಯಾಗಿ ಹೋರಾಟ ನಡೆಸಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಸಣ್ಣ ನಡುಕ ಹುಟ್ಟಿಸಿದವರು ಅವರು.

ಜೆಡಿಯು ಮತ್ತು ಬಿಜೆಪಿ ಮುಂದಾಳತ್ವದ ಎನ್‌ಡಿಎ ಮೈತ್ರಿಕೂಟ ಕೊಂಚ ಎಡವಿದ್ದರೂ 31 ವರ್ಷದ ತೇಜಸ್ವಿ ಯಾದವ್ ಈ ವೇಳೆಗೆ ಬಿಹಾರದ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಗರಿಮೆಯೊಂದಕ್ಕೆ ಅಧಿಕಾರಕ್ಕೆ ಬರುತ್ತಿದ್ದರು. ಆದರೆ ಈ ಪಟ್ಟ ಕೈತಪ್ಪುವಲ್ಲಿ ತೇಜಸ್ವಿ ಯಾದವ್ ಅವರ ವೈಯಕ್ತಿಕ ಅಥವಾ ಪಕ್ಷದ ವೈಫಲ್ಯವೇನೂ ಇರಲಿಲ್ಲ. ಮಿತ್ರಪಕ್ಷವಾಗಿದ್ದ ಕಾಂಗ್ರೆಸ್ ಮುಗ್ಗರಿಸಿದ್ದೇ ತೇಜಸ್ವಿ ವೀರೋಚಿತ ಸೋಲು ಅನುಭವಿಸಲು ಕಾರಣ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!Newsmakers; ಪ್ರಧಾನಿ ಗಮನ ಸೆಳೆದ ಮಂಡ್ಯದ ಕಾಮೇಗೌಡರು!

ಆದರೆ ಇದು ತೇಜಸ್ವಿ ಯಾದವ್ ಎಂಬ ಯುವ ರಾಜಕಾರಣಿಗೆ ಅಂತ್ಯವಲ್ಲ, ಒಂದು ಆರಂಭಿಕ ಪಾಠವಷ್ಟೇ. ಭ್ರಷ್ಟಾಚಾರದ ಆರೋಪಗಳ ರಾಶಿಯನ್ನೇ ಹೊತ್ತಿರುವ ಲಾಲೂ ಪ್ರಸಾದ್, ಗಂಡನ ಅಣತಿಯಂತೆ ಸಿಎಂ ಗಾದಿಯ ಮೇಲೆ ಕುಳಿತಿದ್ದ ರಾಬ್ಡಿ ದೇವಿಯ ಕಿರಿಯ ಮಗ ಹಾಗೂ ಹುಚ್ಚಾಟಗಳಿಂದ ವೈಯಕ್ತಿಕ ಬದುಕನ್ನು ಬೀದಿಪಾಲು ಮಾಡಿಕೊಂಡ ತೇಜ್ ಪ್ರತಾಪ್ ಯಾದವ್‌ನ ತಮ್ಮ ಕುಟುಂಬದ ಇತರರಿಗಿಂತ ವಿಭಿನ್ನವಾಗಿ ಕಾಣಿಸುತ್ತಾರೆ. ಕುಟುಂಬದ ಗುಣಗಳು ಅವರನ್ನು ಭವಿಷ್ಯದಲ್ಲಿ ಕಾಡದಿದ್ದರೆ ದೇಶಕ್ಕೆ ಒಬ್ಬ ಸಮರ್ಥ ನಾಯಕ ಸಿಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಮುಂದೆ ಓದಿ.

ಸಿಗದ ಬೆಂಬಲ

ಸಿಗದ ಬೆಂಬಲ

2020ರಲ್ಲಿ ದೇಶದಲ್ಲಿ ಸದ್ದು ಮಾಡಿದ ಕೆಲವು ರಾಜಕಾರಣಿಗಳಲ್ಲಿ ತೇಜಸ್ವಿ ಯಾದವ್ ಒಬ್ಬರು. ಮೇವು ಹಗರಣ ಸೇರಿದಂತೆ ಅನೇಕ ಆರೋಪಗಳನ್ನು ಹೊತ್ತಿರುವ ತಂದೆ ಲಾಲೂ ಪ್ರಸಾದ್ ಅನಾರೋಗ್ಯದಿಂದ ಕೂಡ ಬಳಲುತ್ತಿದ್ದಾರೆ. ಅತ್ತ ಬಿಜೆಪಿ ಮತ್ತು ಜೆಡಿಯು ಪಕ್ಷದ ಪ್ರಮುಖರನ್ನು ತನ್ನಡೆಗೆ ಸೆಳೆದುಕೊಳ್ಳುತ್ತಾ ಆರ್‌ಜೆಡಿಯ ಬಲ ಕುಂದಿಸುತ್ತಿದ್ದಾರೆ. ಇನ್ನೊಂದೆಡೆ 2015ರ ಚುನಾವಣೆ ವೇಳೆ ಮಹಾಘಟಬಂಧನದ ಮಿಂಚು ಹರಿಸಿದ್ದ ನಾಯಕರೆಲ್ಲ ತಣ್ಣಗಾಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಉತ್ಸಾಹವೇ ಇಲ್ಲದಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳಿದ್ದವು. ತೇಜಸ್ವಿ ಯಾದವ್ ಎಂಬ ಯುವ ನಾಯಕನನ್ನು ಅರೆಮನಸ್ಸಿನಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಂಡಂತಿತ್ತು.

ಅಸ್ತ್ರಗಳು ಮತ್ತು ಸವಾಲುಗಳು

ಅಸ್ತ್ರಗಳು ಮತ್ತು ಸವಾಲುಗಳು

ಬಿಹಾರವನ್ನು ಕಾಡುತ್ತಿರುವ ವಲಸೆ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ಆರೋಗ್ಯ ಸೇವೆಗಳ ಕೊರತೆ, ಅಪರಾಧ ಪ್ರಕರಣಗಳು ಮುಂತಾದವು ತೇಜಸ್ವಿ ಯಾದವ್ ಅವರಿಗೆ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ವಿರುದ್ಧದ ಹೋರಾಟಕ್ಕೆ ಪ್ರಬಲ ಅಸ್ತ್ರಗಳಾಗಿದ್ದವು. ಅವುಗಳನ್ನು ಅವರು ಪ್ರತಿ ಹಂತದಲ್ಲಿಯೂ ಬಳಸಿಕೊಂಡರು. ಆದರೆ ಹಿರಿಯ ನಿತೀಶ್ ಕುಮಾರ್ ಮತ್ತು ಕೇಂದ್ರದಲ್ಲಿನ ಬಿಜೆಪಿಯ ನಾಯಕರನ್ನು ಚುನಾವಣೆಯಲ್ಲಿ ಮಣಿಸುವುದು ಸುಲಭದ ಮಾತಾಗಿರಲಿಲ್ಲ.

News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!News makers; ಕ್ಯಾಮರಾದಲ್ಲಿ ಕರಿಚಿರತೆ ಸೆರೆ ಹಿಡಿದ ಶಾಜ್ ಜುಂಗ್!

ಸತತ ಹೊಡೆತಗಳ ಆಘಾತ

ಸತತ ಹೊಡೆತಗಳ ಆಘಾತ

ಮೊದಲನೆಯದಾಗಿ ಬಿಹಾರದಲ್ಲಿ ಆರ್‌ಜೆಡಿ ಸತತ ಹೊಡೆತ ತಿಂದು ಸುಣ್ಣವಾಗಿತ್ತು. 2015ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬೃಹತ್ ಮೈತ್ರಿಕೂಟ ರಚನೆಯಾಗಿತ್ತು. ಆಗ ಲಾಲು ಪ್ರಸಾದ್ ಆರೋಗ್ಯದಿಂದ ಇದ್ದರು. ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ಬಿಜೆಪಿಯ ವಿರೋಧಪಕ್ಷಗಳ ನಾಯಕತ್ವಗಳು ಆಗ ಬಿಹಾರದಲ್ಲಿ ನೆಲೆಯೂರಿದ್ದವು. ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಕೂಡ ಅಂದು ಮಹಾಘಟಬಂಧನದ ಪಾಳೆಯದಲ್ಲಿದ್ದರು. ಹೀಗೆ ಜತೆಯಾಗಿ ಅಧಿಕಾರ ಹಿಡಿದ ಸಂಭ್ರಮದಲ್ಲಿದ್ದ ಮಹಾಘಟಬಂಧನಕ್ಕೆ ಆಘಾತ ನೀಡಿದ ನಿತೀಶ್ ಕುಮಾರ್, ಬಿಜೆಪಿ ಜತೆಗೆ ಕೈಜೋಡಿಸಿದರು.

ಕೌಟುಂಬಿಕ ಸಮಸ್ಯೆಗಳು

ಕೌಟುಂಬಿಕ ಸಮಸ್ಯೆಗಳು

2019ರ ಲೋಕಸಭೆ ಚುನಾವಣೆಯಲ್ಲಿಯೂ ಎನ್‌ಡಿಎ ಮೈತ್ರಿಕೂಟ ಬಿಹಾರದಲ್ಲಿ ಅಬ್ಬರಿಸಿತ್ತು. ಲಾಲು ಜೈಲು ಪಾಲಾಗಿದ್ದರು. ಅಣ್ಣ ತೇಜ್ ಪ್ರತಾಪ್ ಯಾದವ್ ಮತ್ತು ಹೆಂಡತಿ ಕಿತ್ತಾಟ ಮನೆ ವಿಚಾರವನ್ನು ಬೀದಿಗೆ ತಂದಿತ್ತು. ಇದೆಲ್ಲದರ ನಡುವೆ ಈ ಬಾರಿಯ ಚುನಾವಣೆಯಲ್ಲಿ ಆರ್‌ಜೆಡಿಯನ್ನು ಮತ್ತೆ ಕಟ್ಟಿ ಬೆಳೆಸುವ ಬಹುದೊಡ್ಡ ಸವಾಲು ತೇಜಸ್ವಿ ಯಾದವ್ ಅವರ ಮೇಲಿತ್ತು. ಆರ್‌ಜೆಡಿಯ ಮೂಲ ಬೆಂಬಲಿಗರು ಪಕ್ಷದ ಮೇಲಿನ ನಂಬಿಕೆ ಕಳೆದುಕೊಳ್ಳದಂತೆ ಮಾಡುವುದು ಸುಲಭದ ಮಾತಾಗಿರಲಿಲ್ಲ.

Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!Yahooನಲ್ಲಿ ಈ ವರ್ಷ ಅತಿ ಹೆಚ್ಚು ಸರ್ಚ್ ಆದ ರಾಜಕಾರಣಿಗಳು!

ಕ್ರಿಕೆಟ್‌ನಲ್ಲಿ ಸಿಗದ ಯಶಸ್ಸು

ಕ್ರಿಕೆಟ್‌ನಲ್ಲಿ ಸಿಗದ ಯಶಸ್ಸು

ತೇಜಸ್ವಿ ಯಾದವ್ ಕ್ರಿಕೆಟರ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರು. 2008ರಲ್ಲಿ ಐಪಿಎಲ್ ಆರಂಭವಾದಾಗ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಅಯ್ಕೆಯಾಗಿದ್ದರು. ಆದರೆ 2012ರವರೆಗೂ ಅವರು ಬೆಂಚ್ ಕಾದಿದ್ದೇ ಬಂದಿತು. ಆಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಅದಕ್ಕೂ ಮುನ್ನ ಅಂಡರ್ 19 ರಾಷ್ಟ್ರೀಯ ಕ್ರಿಕೆಟ್ ತಂಡದ ಹೆಚ್ಚುವರಿ ಆಟಗಾರರ ತಂಡದಲ್ಲಿದ್ದರು. ಆ ಬಾರಿ ಭಾರತ ವಿಶ್ವಕಪ್ ಗೆದ್ದಿತ್ತು. 2009ರಲ್ಲಿ ಜಾರ್ಖಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳಲ್ಲಿ ಆಡುವ ಅವಕಾಶಗಳೇನೋ ಸಿಕ್ಕಿತು. ಆದರೆ ಯಶಸ್ಸು ಅವರಿಗೆ ಸಿಗಲಿಲ್ಲ. ಇದರಿಂದ 2013ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು.

ಸಚಿವರಾಗಿದ್ದ ತೇಜಸ್ವಿ

ಸಚಿವರಾಗಿದ್ದ ತೇಜಸ್ವಿ

ಕ್ರಿಕೆಟ್‌ನಲ್ಲಿ ಆದ ಕಹಿ ಅನುಭವ ಅವರಿಗೆ ರಾಜಕೀಯದಲ್ಲಿಯೂ ಆಗಿದೆ. ಆದರೆ ಅಪ್ಪನದೇ ಪಕ್ಷ ಇದ್ದ ಕಾರಣ ರಾಜಕೀಯದಲ್ಲಿ ಕಣಕ್ಕಿಳಿಯುವುದು ಕಷ್ಟವಾಗಲಿಲ್ಲ. ಕ್ರಿಕೆಟ್ ಆಡುವಾಗಲೇ ಅಪ್ಪನೊಂದಿಗೆ ಪಕ್ಷದ ಚಟುವಟಿಕೆ, ಪ್ರಚಾರಗಳಲ್ಲಿ ಭಾಗಿಯಾಗುತ್ತಿದ್ದರಿಂದ ರಾಜಕಾರಣ ಮತ್ತು ಪಕ್ಷದ ನಾಯಕರ ಒಡನಾಟ ಚೆನ್ನಾಗಿಯೇ ಬೆಳೆದಿತ್ತು. 2015ರ ಚುನಾವಣೆಯಲ್ಲಿ ಮಹಾಘಟಬಂಧನದಿಂದ ವಿಧಾನಸಭೆಗೆ ಆಯ್ಕೆಯಾಗಿ, ನಿತೀಶ್ ಕುಮಾರ್ ಸರ್ಕಾರದಲ್ಲಿ ಸಚಿವರೂ ಆದರು.

ಮೂರು ವರ್ಷದಿಂದ ನಾಯಕತ್ವ

ಮೂರು ವರ್ಷದಿಂದ ನಾಯಕತ್ವ

ತೇಜಸ್ವಿ 2018ರಿಂದ ಆರ್‌ಜೆಡಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್‌ನ 2004ರ ಭ್ರಷ್ಟಾಚಾರ ಆರೋಪದಲ್ಲಿ ಲಾಲೂ ಪ್ರಸಾದ್ ಕುಟುಂಬದ ಮೇಲೆ ಸಿಬಿಐ ಮತ್ತು ಇಡಿ 2017ರಲ್ಲಿ ತನಿಖೆ ನಡೆಸಿದ್ದವು. ಇದರಲ್ಲಿ ತೇಜಸ್ವಿ ಯಾದವ್ ಹೆಸರೂ ಇತ್ತು. ಆದರೆ ಭ್ರಷ್ಟಾಚಾರ ನಡೆದಾಗ ಅವರಿಗೆ ಇನ್ನೂ 14 ವರ್ಷ. ಹೀಗಾಗಿ ಪ್ರಕರಣದಿಂದ ವಿನಾಯಿತಿ ದೊರಕಿತು. ಅದೇ ಸಮಯಕ್ಕೆ ನಿತೀಶ್ ಮಹಾಘಟಬಂಧನ ತೊರೆದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದಾಗ ತೇಜಸ್ವಿ ಯಾದವ್ ವಿರೋಧಪಕ್ಷದ ನಾಯಕತ್ವದ ಜವಾಬ್ದಾರಿ ಹೊತ್ತರು.

ಏಕಾಂಗಿ ಹೋರಾಟ

ಏಕಾಂಗಿ ಹೋರಾಟ

ಹಲವು ಸವಾಲು, ಎಡರುತೊಡರುಗಳ ನಡುವೆ ತೇಜಸ್ವಿ ಯಾದವ್ ಈ ಬಾರಿ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಪಕ್ಷ ಕಳೆದ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಐದು ಕಡಿಮೆ ಸೀಟುಗಳನ್ನು ಪಡೆದುಕೊಂಡಿದೆ. ಆದರೆ ಎದುರಾಳಿಗಳ ವಿರುದ್ಧ ತೇಜಸ್ವಿ ಹೆಚ್ಚೂ ಕಡಿಮೆ ಏಕಾಂಗಿಯಾಗಿದ್ದರು. 31 ವರ್ಷದ ಯುವ ರಾಜಕಾರಣಿ, ರಾಜಕೀಯದಲ್ಲಿಯೇ 40ಕ್ಕೂ ಹೆಚ್ಚು ವರ್ಷಗಳ ಅನುಭವ ಇರುವ ನಿತೀಶ್ ಎದುರು ಅಷ್ಟು ಪೈಪೋಟಿ ನೀಡುವುದು ಸಣ್ಣ ಸಾಧನೆಯೇನಲ್ಲ. ಹೀಗಾಗಿ 2020ರಲ್ಲಿನ ಭಾರತವು ಕಂಡ 'ನ್ಯೂಸ್ ಮೇಕರ್'ಗಳಲ್ಲಿ ಒಬ್ಬರು ಎಂದು ತೇಜಸ್ವಿ ಯಾದವ್ ಅವರನ್ನು ನಿಸ್ಸಂಶಯವಾಗಿ ಗುರುತಿಸಬಹುದು.

English summary
News Makers Of 2020: RJD chief Tejashwi Yadav has created political vibes in 2020 Bihar assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X