ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರದಿ: ಬಂಡೀಪುರದಲ್ಲಿ ಹೊಸ ವರ್ಷಾಚರಣೆಗಿಲ್ಲ ಪ್ರವಾಸಿಗರಿಗೆ ಅವಕಾಶ!

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 27: ಹೊಸ ವರ್ಷಾಚರಣೆಯನ್ನು ಚಾಮರಾಜನಗರ ಜಿಲ್ಲೆಯ ಬಂಡೀಪುರದ ನಿಸರ್ಗದ ನಡುವಿನ ರೆಸಾರ್ಟ್‌ಗಳಲ್ಲಿ, ಅರಣ್ಯ ಇಲಾಖೆಯ ವಸತಿಗೃಹಗಳಲ್ಲಿ ಆಚರಿಸಲು ಈ ಹಿಂದಿನ ವರ್ಷಗಳಲ್ಲಿ ಅವಕಾಶ ನೀಡಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಅದನ್ನು ನಿರ್ಬಂಧಿಸಲಾಗಿದೆ. ಅದು ಈ ಬಾರಿಯೂ ಮುಂದುವರೆದಿದೆ.

ಅರಣ್ಯ ಇಲಾಖೆ ಬಂಡೀಪುರ ವಸತಿಗೃಹದಲ್ಲಿ ನೂತನ ವರ್ಷಾರಂಭವನ್ನು ಆಚರಣೆಗೆ ಅವಕಾಶ ಮಾಡಿಕೊಡುವ ಮೂಲಕ ಒಂದಷ್ಟು ಆದಾಯವನ್ನು ಪಡೆಯುತ್ತಿತ್ತು. ಆದರೆ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಪ್ರವಾಸಿಗರು ಮೋಜು- ಮಸ್ತಿಯಲ್ಲಿ ತೊಡಗುತ್ತಿದ್ದರು. ಇದರಿಂದ ವನ್ಯಪ್ರಾಣಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ. ಅಭಯಾರಣ್ಯದಲ್ಲಿ ಇದಕ್ಕೆ ಅವಕಾಶ ನೀಡಬಾರದೆಂಬ ಒತ್ತಾಯಗಳು ಕೇಳಿ ಬಂದಿತ್ತು. ಅದರಂತೆ ಅರಣ್ಯ ಇಲಾಖೆ ಹೊಸವರ್ಷಾಚರಣೆಗೆ ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡುವುದಾಗಲೀ, ವರ್ಷಾಚರಣೆಗೆ ಅವಕಾಶ ನೀಡುವುದನ್ನು ನಿರ್ಬಂಧಿಸಿತ್ತು.

ಮೋಜು ಮಸ್ತಿಯಲ್ಲಿ ಪ್ರವಾಸಿಗರು

ಮೋಜು ಮಸ್ತಿಯಲ್ಲಿ ಪ್ರವಾಸಿಗರು

ಕಳೆದ ವರ್ಷ ಕೊರೊನಾ ಕಾರಣದಿಂದ ಹೊಸವರ್ಷಾಚರಣೆ ಅವಕಾಶ ನೀಡಿರಲಿಲ್ಲ. ಈ ಬಾರಿಯೂ ಅದು ಮುಂದುವರೆದಿದೆ. ಡಿ.31 ಹಾಗೂ ಜನವರಿ 1ರ ರಾತ್ರಿ ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಮೊದಲು ಡಿ.31ರಂದು ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡುತ್ತಿರಲಿಲ್ಲ. ಈ ಬಾರಿ ಎರಡು ದಿನಗಳ ಕಾಲ ನಿರ್ಬಂಧಿಸಲಾಗಿದೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಖಾಸಗಿ ರೆಸಾರ್ಟ್‌ಗಳಿಗೂ ನಿರ್ಬಂಧ ಹೇರಲಾಗಿದೆ.

ವರ್ಷಾಚರಣೆಗಾಗಿ ಕಾಯುತ್ತಿದ್ದ ಪ್ರವಾಸಿಗರು

ವರ್ಷಾಚರಣೆಗಾಗಿ ಕಾಯುತ್ತಿದ್ದ ಪ್ರವಾಸಿಗರು

ಹಾಗೆ ನೋಡಿದರೆ ಬಂಡೀಪುರದಲ್ಲಿ 19 ವಸತಿ ಗೃಹಗಳಿದ್ದು, ಇಲ್ಲಿ ತಂಗಲು ಪ್ರವಾಸಿಗರು ವೀಕೆಂಡ್ ಮತ್ತು ವಿಶೇಷ ದಿನಗಳಲ್ಲಿ ಮುಗಿಬೀಳುತ್ತಾರೆ. ಅದರಲ್ಲೂ ಹೊಸ ವರ್ಷಾಚರಣೆಯನ್ನು ಇಲ್ಲಿಯೇ ಮಾಡಬೇಕೆಂದು ಹಲವರು ಕಾಯುತ್ತಾ ಕನಸು ಕಾಣುತ್ತಿದ್ದರು. ಮೊದಮೊದಲು ಅದು ಉತ್ತಮವಾಗಿ ನಡೆಯುತ್ತಾ ಬಂದಿತ್ತಾದರೂ, ಕ್ರಮೇಣ ಪ್ರವಾಸಿಗರ ವರ್ತನೆ ಅತಿರೇಕಕ್ಕೆ ಹೋಗಿತ್ತು. ಹೀಗಾಗಿಯೇ ಅದಕ್ಕೆ ನಿರ್ಬಂಧ ಹೇರಲಾಯಿತು. ಜತೆಗೆ ಬಂಡೀಪುರ ವ್ಯಾಪ್ತಿಯಲ್ಲಿರುವ ಖಾಸಗಿ ರೆಸಾರ್ಟ್‌ಗಳಿಗೂ ನಿರ್ಬಂಧ ಹೇರಲಾಯಿತು.

ಬಂಡೀಪುರ ವ್ಯಾಪ್ತಿಯಲ್ಲಿ ಹಲವು ರೆಸಾರ್ಟ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಕೋಟ್ಯಂತರ ರೂಪಾಯಿ ಬಂಡವಾಳ ಸುರಿದು ನಿರ್ಮಿಸಿರುವ ರೆಸಾರ್ಟ್‌ಗಳಿಗೆ ಪ್ರವಾಸಿಗರೇ ಪ್ರಮುಖ ಬಂಡವಾಳವಾಗಿದ್ದು, ಪ್ರವಾಸಿಗರನ್ನು ಸೆಳೆಯಲು ಹರಸಾಹಸ ಮಾಡುತ್ತಿದ್ದು, ಕೊರೊನಾ ಲಾಕ್‌ಡೌನ್‌ನಿಂದಾಗಿ ಈಗಾಗಲೇ ನಷ್ಟ ಅನುಭವಿಸುವಂತಾಗಿದೆ. ಹೊಸ ವರ್ಷಾಚರಣೆ ಸಂದರ್ಭವಾದರೂ ಒಂದಷ್ಟು ಸಂಪಾದನೆ ಮಾಡಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಈಗ ನಿರಾಸೆಯಾಗಿದೆ.

ರೆಸಾರ್ಟ್‌ಗಳಿಗೆ ಒಂದಷ್ಟು ಸೂಚನೆಗಳು

ರೆಸಾರ್ಟ್‌ಗಳಿಗೆ ಒಂದಷ್ಟು ಸೂಚನೆಗಳು

ಈ ಹಿಂದಿನ ದಿನಗಳಿಗೆ ಹೋದರೆ ಆಗ ಹೊಸ ವರ್ಷಾಚರಣೆಗೆ ಒಂದು ವಾರವಿರುವಾಗಲೇ ಗುಂಡ್ಲುಪೇಟೆ ಸೇರಿದಂತೆ ಬಂಡೀಪುರ ಸುತ್ತಮುತ್ತಲಿನ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಮುಂಗಡ ಟಿಕೆಟ್ ಕಾದಿರಿಸುತ್ತಿದ್ದರು. ಆದರೆ ಈಗ ಅದಕ್ಕೆ ಅವಕಾಶವಿಲ್ಲ. ಜತೆಗೆ ಈ ಬಾರಿ ವನ್ಯಪ್ರಾಣಿಗಳಿಗೆ ತೊಂದರೆಯಾಗದಿರಲೆಂದು ಅರಣ್ಯ ಇಲಾಖೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಕ್ಕಪಕ್ಕದಲ್ಲಿರುವ 12 ರೆಸಾರ್ಟ್‌ಗಳಿಗೆ ಧ್ವನಿವರ್ಧಕ ಬಳಸಬಾರದು, ಸಂಗೀತ ಕಾರ್ಯಕ್ರಮ ನಡೆಸಬಾರದು, ಪ್ಲಢ್ ಲೈಟ್ ಮತ್ತು ಫೋಕಸ್ ಲೈಟ್ ಹಾಕುವಂತಿಲ್ಲ. ಫೈರ್ ಕ್ಯಾಂಪ್‌ಗೆ ಅವಕಾಶವಿಲ್ಲ. ವನ್ಯಜೀವಿಗಳಿಗೆ ಯಾವುದೇ ಧಕ್ಕೆ ಆಗದಂತೆ, ಒತ್ತಡ ಬೀಳದಂತೆ ನಡೆದುಕೊಳ್ಳುವಂತೆ ಈ ಹಿಂದೆ ಸೂಚಿಸಲಾಗಿತ್ತು.

28ರಿಂದ 10 ದಿನಗಳವರೆಗೆ ನೈಟ್ ಕರ್ಫ್ಯೂ

28ರಿಂದ 10 ದಿನಗಳವರೆಗೆ ನೈಟ್ ಕರ್ಫ್ಯೂ

ಆದರೆ ಇದೀಗ ಸರ್ಕಾರ ರಾಜ್ಯದಾದ್ಯಂತ ಡಿಸೆಂಬರ್ 28ರಿಂದ 10 ದಿನಗಳವರೆಗೆ ನೈಟ್ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಬಂಡೀಪುರ ಸ್ತಬ್ಧವಾಗಲಿದೆ. ಸಾಮಾನ್ಯವಾಗಿ ಇಲ್ಲಿಗೆ ಕೇರಳ, ತಮಿಳುನಾಡಿನಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು. ಆದರೆ ಗಡಿಭಾಗದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಕೊರೊನಾ ಕಾರಣಕ್ಕೆ ಹೆಚ್ಚಿನ ನಿಗಾವಹಿಸಲಾಗಿದೆ. ಹೀಗಾಗಿ ಬಂಡೀಪುರದತ್ತ ಪ್ರವಾಸಿಗರು ಹೊಸ ವರ್ಷಕ್ಕೆ ತೆರಳದಿರುವುದು ಒಳ್ಳೆಯದು.

English summary
New Year celebration banned in Bandipur national park of Chamarajanagar district, Tourists Entry Restricted on Dec 31 and Jan 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X