ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷಕ್ಕೆ ನಿಮ್ಮ ಸಂಕಲ್ಪವೇನು? ನಮ್ಮ 5 ಸಲಹೆ

|
Google Oneindia Kannada News

"ಈ ವರ್ಷ ಅದೇನ್ ಬೇಕಾದ್ರೂ ಆಗ್ಲಿ ಒಂದಷ್ಟು ರೆಸೊಲ್ಯೂಶನ್ ಹಾಕ್ಕೊಂಡು ಸ್ಟ್ರಿಕ್ಟ್ ಆಗಿ ಫಾಲೋ ಮಾಡ್ಲೇ ಬೇಕು..." ಅನ್ನೋದು ಹೊಸ ವರ್ಷ ಅಡಿಯಿಡುವ ಸಂದರ್ಭದಲ್ಲಿ ಹಲವರ ಬಾಯಲ್ಲಿ ಸಾಮಾನ್ಯವಾಗಿ ಹರಿವ ಮಾತು. ಆಮೇಲೆ ಅದನ್ನು ಪಾಲಿಸುತ್ತೀವೋ, ಬಿಡುತ್ತೀವೋ, ಒಟ್ಟಿನಲ್ಲಿ ಹೊಸವರ್ಷವನ್ನಂತೂ ಯಾವುದೋ ಉತ್ಸಾಹದಲ್ಲೇ, ಕಂತೆ ಕಂತೆ ಸಂಕಲ್ಪಗಳೊಂದಿಗೇ ಬರಮಾಡಿಕೊಳ್ಳುತ್ತೇವೆ.

ವರ್ಷಾಂತ್ಯಕ್ಕೆ ಕರ್ನಾಟಕದ 5 ವಿಶಿಷ್ಟ ಪ್ರವಾಸಿ ತಾಣಗಳುವರ್ಷಾಂತ್ಯಕ್ಕೆ ಕರ್ನಾಟಕದ 5 ವಿಶಿಷ್ಟ ಪ್ರವಾಸಿ ತಾಣಗಳು

'ಈ ಸಾರಿ ಬಾಡಿ ವೇಟ್ ರೆಡ್ಯೂಸ್ ಮಾಡ್ಲೇ ಬೇಕು ಎಂಬಲ್ಲಿಂದ ಹಿಡಿದು, ಬೇಗ ಏಳೋದು, ಯೋಗ ಮಾಡೋದು, ಸಿಗರೇಟ್ ಬಿಟ್ಟು ಬಿಡೋದು, ಅಂಹಂಕಾರ ಕಳಚಿಹಾಕೋದು, ಕೋಪ ಕಡಿಮೆ ಮಾಡಿಕೊಳ್ಳೋದು, ಹೆಚ್ಚು ಹೆಚ್ಚು ನಗೋದು... ಎಂಬಲ್ಲಿಯವರೆಗೆ ಸಂಕಲ್ಪದ ವ್ಯಾಪ್ತಿ ಹರವಿಕೊಳ್ಳುತ್ತದೆ.

ಪುಟ್ಟ ಮಗು ಹೊಸ ವಸ್ತುವನ್ನು ಎಷ್ಟು ಕೌತುಕದ ಕಣ್ಣಿಂದ ನೋಡುತ್ತದೋ, ಅಂಥದೇ ಮುಗ್ಧ ಕೌತುಕವನ್ನು ಹೊತ್ತು ನಾವೂ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಹಳೆ ವರ್ಷಕ್ಕಿಂತ ಹೊಸತು ಚೆನ್ನಾಗಿರಲಿ ಎಂಬ ಹಾರೈಕೆಯೊಂದಿಗೆ, ಚೆನ್ನಾಗಿರುತ್ತೆ ಎಂಬ ವಿಶ್ವಾಸದೊಂದಿಗೆ 2018 ನ್ನು ವಿಶ್ವಾಸದಿಂದ ಎದಿರುನೋಡುತ್ತಿರುವ ಎಲ್ಲರಿಗೂ ಶುಭಾಶಯ ಕೋರುತ್ತ, ಹೊಸ ವರ್ಷದ ನಿಮ್ಮ ಸಂಕಲ್ಪದ ಪಟ್ಟಿಗೆ ನಮ್ಮದೂ ಒಂದಷ್ಟು ಸಲಹೆ ಇಲ್ಲಿದೆ...

2017 ವರ್ಷದ ಹಿನ್ನೋಟ: ರಾಜ್ಯದಲ್ಲಿ ಸುದ್ದಿಯಾದ 5 ಮಾನಿನಿಯರು2017 ವರ್ಷದ ಹಿನ್ನೋಟ: ರಾಜ್ಯದಲ್ಲಿ ಸುದ್ದಿಯಾದ 5 ಮಾನಿನಿಯರು

ನಕ್ಕು ಬಿಡು ಚಿಕ್ಕ ಮುತ್ತು ಸುರಿದು ಹೋಗಲಿ...
ಪಕ್ಕನೊಮ್ಮೆ ನಕ್ಕುಬಿಡು ಚಿಂತೆ ತೊಲಗಲಿ... ಎಂಬ ದಾಂಪತ್ಯ ಕವಿ ಕೆ.ಎಸ್.ನರಸಿಂಹ ಸ್ವಾಮಿಯವರ ಕವನದ ಸಾಲುಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ...

ನಗು ನಗುತಾ ನಲಿ ನಲಿ ಏನೇ ಆಗಲಿ...

ನಗು ನಗುತಾ ನಲಿ ನಲಿ ಏನೇ ಆಗಲಿ...

"ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಿರುವ ಪುಕ್ಕಟೆ ಉಪಾಯವೆಂದರೆ ನಗುವಂತೆ!" ಹೌದು, ಯಾವ ಸೌಂದರ್ಯ ಸಾಧನದ ಅಗತ್ಯವಿಲ್ಲದೆ, ಕಾಸ್ಮೆಟಿಕ್ಸ್ ಗಳನ್ನು ಬಳಸಿ ಚರ್ಮವನ್ನು ಹಾಳುಮಾಡಿಕೊಳ್ಳದೆ, ಜೇಬಿಗೆ ಕತ್ತರಿ ಹಾಕುವಂಥ ಪಾರ್ಲರ್ ಗಳ ಅಗತ್ಯವಿಲ್ಲದೆ... ಒಟ್ಟಿನಲ್ಲಿ ಒಂದು ಪೈಸೆ ಖರ್ಚಿಲ್ಲದೆ ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಸಾಧನವೆಂದರೆ ಅದು ನಗು. ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ನಗು ಅತ್ಯಂತ ಮುಖ್ಯ ಎಂಬುದು ಈಗಾಗಲೇ ಸಾಬೀತಾಗಿದೆ. ಆದ್ದರಿಂದಲೇ ಈ ವರ್ಷ ನಗುವೆಂಬ ಸುಂದರ ಅಂಗಿಯನ್ನು ತೊಟ್ಟು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಣ, ಆರೋಗ್ಯವನ್ನೂ ಕಾಪಾಡಿಕೊಳ್ಳೋಣ.

ಕೋಪವನ್ನು ಮೂಟೆಕಟ್ಟಿ ಎಸೆಯೋಣ..!

ಕೋಪವನ್ನು ಮೂಟೆಕಟ್ಟಿ ಎಸೆಯೋಣ..!

"ಕೋಪದಿಂದ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಅದರಿಂದ ಏನನ್ನೂ ಕಟ್ಟುವುದಕ್ಕೂ ಸಾಧ್ಯವಿಲ್ಲ. ಅದು ನಮ್ಮನ್ನೇ ನಾಶ ಮಾಡುತ್ತದಷ್ಟೆ" ಎಂಬ ಮಾತಿದೆ. ನಮ್ಮ ವಿರುದ್ಧವೇ ಕತ್ತಿಮಸೆವ, ನಮ್ಮೊಳಗೇ ಹುಟ್ಟಿದ ಶತ್ರುವೆಂದರೆ ಅದು ಕೋಪ! ಮನುಷ್ಯನನ್ನು ಮಾನಸಿಕವಾಗಿ ಮತ್ತು ಕ್ರಮೇಣ ದೈಹಿಕವಾಗಿಯೂ ದುರ್ಬಲನನ್ನಾಗಿ ಮಾಡುವ ಈ ಕೋಪವನ್ನು ಬಿಟ್ಟು ಬಿಡುವ ಸಂಕಲ್ಪ, ಮತ್ತು ಆ ಸಂಕಲ್ಪದ ಅನುಷ್ಠಾನ ನಮ್ಮನ್ನು ದೊಡ್ಡವರನ್ನಾಗಿ ಮಾಡುವುದು ಖಂಡಿತ. ಹೊರಗಿನ ಶತ್ರುಗಳನ್ನು ನಾಶ ಮಾಡುವ ಮುನ್ನ ನಮ್ಮೊಳಗಿನ ಘಾತುಕನನ್ನು ಮಟ್ಟ ಹಾಕುವುದು ಈ ವರ್ಷದ ಮತ್ತೊಂದು ಸಂಕಲ್ಪವಾಗಲಿ.

ಕೆಟ್ಟ ನೆನಪು ಸರಿದುಹೋಗಲಿ ಹಾಗೇ...

ಕೆಟ್ಟ ನೆನಪು ಸರಿದುಹೋಗಲಿ ಹಾಗೇ...

"ಕೆಟ್ಟ ನೆನಪುಗಳನ್ನು ಬಿಟ್ಟುಹಾಕಿ... ಹೊಸ ನಾಳೆಯ ಬಗ್ಗೆ ಭರವಸೆ ಇಡಿ" ಮಹಾಪುರುಷರೊಬ್ಬರ ಈ ಮಾತು ಜೀವನ ಪ್ರೀತಿಯನ್ನು ಹೆಚ್ಚಿಸುವುದಕ್ಕೆ ಅತ್ಯಂತ ಮುಖ್ಯ. ನಾವುಗಳು ಹಾಗೇ, ಒಳ್ಳೆಯದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೋ ಇಲ್ಲವೋ, ಆದರೆ ಕೆಟ್ಟ ನೆನಪುಗಳನ್ನು ಮಾತ್ರ ಜೋಪಾನವಾಗಿ ಕಾದಿಟ್ಟುಕೊಳ್ಳುತ್ತೇವೆ. ಮನುಷ್ಯನನ್ನು ಖಿನ್ನತೆಗೆ ದೂಡುವ ಇಂಥ ನೆನಪುಗಳನ್ನು ಪಕ್ಕಕ್ಕೆ ಸರಿಸಿ, ಸಿಹಿ ನೆನಪುಗಳನ್ನಷ್ಟೇ ಉಳಿಸಿಕೊಂಡರೆ ಹೇಗೆ? ಹೊಸ ವರ್ಷ ಹಸನಾಗುವುದಕ್ಕೆ ಇದಕ್ಕಿಂತ ಉತ್ತಮ ದಾರಿ ಯಾವುದಿದೆ? ನಮ್ಮ ಸಂಕಲ್ಪಗಳ ಪಟ್ಟಿಯ ಪ್ರಮುಖ ಸ್ಥಾನ ಇದಕ್ಕಿರಲಿ.

ಪರರನ್ನು ಗೌರವಿಸುವುದು ನಮ್ಮ ಘನತೆಯನ್ನು ಹೆಚ್ಚಿಸುತ್ತೆ

ಪರರನ್ನು ಗೌರವಿಸುವುದು ನಮ್ಮ ಘನತೆಯನ್ನು ಹೆಚ್ಚಿಸುತ್ತೆ

"ಮತ್ತೊಬ್ಬರನ್ನು ಗೌರವಿಸುವುದು ನಮ್ಮನ್ನು ಚಿಕ್ಕವರನ್ನಾಗಿಸುವುದಿಲ್ಲ, ಬದಲಾಗಿ ಅದು ನಮ್ಮ ಘನತೆಯನ್ನು ಹೆಚ್ಚಿಸುತ್ತದೆ" ಎಂಬ ಮಾತು ಅಕ್ಷರಶಃ ಸತ್ಯವಲ್ಲವೇ? ಮತ್ತೊಬ್ಬರನ್ನು ಕೀಳಂದಾಜಿಸುವುದು, ನೋಯಿಸುವುದು, ಅಗೌರವ ತೋರುವುದು ನಮ್ಮ ಸಂಕುಚಿತ ಮನಸ್ಥಿತಿಯ ಪ್ರತೀಕವಾದೀತು. ನಮ್ಮಂತೇ ಮತ್ತೊಬ್ಬರಿಗೂ ಆತ್ಮಗೌರವವಿದೆ ಎಂಬುದು ಅರಿವಾದರೆ, ಮತ್ತೊಬ್ಬರನ್ನೂ ಗೌರವಿಸುವ ಉದಾರತೆ ನಮ್ಮಲ್ಲಿ ಮೂಡುತ್ತದೆ. ಅಂಥ ಉದಾರತೆಯನ್ನು ನೆಲೆಗೊಳಿಸಿಕೊಳ್ಳುವುದಕ್ಕೆ ಹೊಸ ವರ್ಷ ನೆರವಾಗಲಿ.

ಅಹಂಕಾರ ಕಿತ್ತೆಸೆಯೋಣ

ಅಹಂಕಾರ ಕಿತ್ತೆಸೆಯೋಣ

"ಅಹಂಕಾರ ಬಿಟ್ಟುಬಿಡಿ, ಇಲ್ಲವೆಂದರೆ ಇಡೀ ಜಗತ್ತು ನಿಮ್ಮನ್ನೇ ಬಿಟ್ಟುಬಿಡುತ್ತದೆ" ಎಂಬ ಮಾತೊಂದಿದೆ. ಎಷ್ಟು ದಿನ ಅಹಂಕಾರ ನಮ್ಮ ಮೈ ತುಂಬ ತುಂಬಿರುತ್ತದೆಯೋ ಅಲ್ಲಿಯವರೆಗೂ ನಾವು ಈ ಜಗತ್ತಿನ ಸಹಜ ಸಂತಸವನ್ನು ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಸಂಬಂಧಗಳ ನಡುವೆ ಬೃಹತ್ ಗೋಡೆಗಳನ್ನು ಎಬ್ಬಿಸಿರುವ, ಪರಿಚಿತರ ನಡುವಲ್ಲಿ ಅಪರಿಚಿತತೆಯ ಪರದೆ ಎಳೆದಿರುವ, ಆತ್ಮೀಯರ ನಡುವಲ್ಲೂ ಶತ್ರುತ್ವದ ಭಾವ ಬಿತ್ತಿರುವ ಈ ಅಹಂಕಾರ ಕಿತ್ತೆಸೆದರೆ ಬದುಕು ಬಂಗಾರ. ಸಂಕಲ್ಪದ ಪಟ್ಟಿಯಲ್ಲಿ ಅಹಂಕಾರಕ್ಕೆ ಗುಡ್ ಬೈ ಹೇಳೋದನ್ನ ಮರೆಯದಿರೋಣ.

English summary
Countdown begins for New year 2018. Many People are busy in framing resolutions for new year. Here are few suggestions from Oneindia to make new year more beautiful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X