• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಡೀಪುರದಲ್ಲಿ ಹಸಿರು ಮರುಸ್ಥಾಪನೆಗೆ ಹೀಗೊಂದು ಹೊಸ ಪ್ರಯೋಗ

|

ಚಾಮರಾಜನಗರ, ನವೆಂಬರ್ 30: ಬಂಡೀಪುರ ಅಭಯಾರಣ್ಯದಲ್ಲಿ ಸದಾ ಹಸಿರು ನೆಲೆಸುವಂತೆ ಮಾಡಲು ಮತ್ತು ಅಗ್ನಿ ಅನಾಹುತದಿಂದ ಬೋಳಾಗಿದ್ದ ಪ್ರದೇಶದಲ್ಲಿ ಅರಣ್ಯವನ್ನು ಮರುಸ್ಥಾಪಿಸಲು ಅರಣ್ಯಾಧಿಕಾರಿಗಳು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

ಈಗಾಗಲೇ ಲಂಟಾನ ತೆರವುಗೊಳಿಸಿ ಹುಲ್ಲು ಬೆಳೆಸುವ ಕೆಲಸವೂ ನಡೆದಿದೆ. ಇದೀಗ ಅಲ್ಲಲ್ಲಿ ಸತ್ತಿರುವ ಮರಗಳ ಪೊಟರೆಗಳಲ್ಲಿ ಪರಾವಲಂಬಿ ಗಿಡಗಳನ್ನು ನೆಟ್ಟು ಅವುಗಳನ್ನು ಮರಗಳನ್ನಾಗಿ ಬೆಳೆಸುವ ಪ್ರಯತ್ನಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿರುವುದು ಕಂಡು ಬರುತ್ತಿದೆ. ಮುಂದೆ ಓದಿ...

ಬಂಡೀಪುರದಲ್ಲಿ ನೈಸರ್ಗಿಕ ಡ್ಯಾಂನಿಂದ ಅಂತರ್ಜಲ ವೃದ್ಧಿ!

 ಅಗ್ನಿ ಅನಾಹುತಕ್ಕೆ ನಲುಗಿದ ಗಿಡಮರಗಳು

ಅಗ್ನಿ ಅನಾಹುತಕ್ಕೆ ನಲುಗಿದ ಗಿಡಮರಗಳು

ಸಾಮಾನ್ಯವಾಗಿ ದೊಡ್ಡ ಮರಗಳ ಪೊಟರೆಗಳಲ್ಲಿ ಗಿಡಗಳು ಹುಟ್ಟಿ ಬಳಿಕ ಅದೇ ಮರವನ್ನು ಆಶ್ರಯಿಸಿಕೊಂಡು ಹೆಮ್ಮರವಾಗಿ ಬೆಳೆಯುವುದು ಅರಣ್ಯಗಳಲ್ಲಿ ಕಂಡು ಬರುತ್ತದೆ. ಪಕ್ಷಿಗಳು ತಿಂದ ಹಣ್ಣುಗಳ ಬೀಜ ಅಥವಾ ಹಕ್ಕಿಗಳ ಹಿಕ್ಕೆಗಳಿಂದ ಬಿದ್ದ ಬೀಜಗಳು ಮರಗಳ ಪೊಟರೆಯಲ್ಲಿ ಉಳಿದು ಮಳೆ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬಳಿಕ ಮರವಾಗಿ ಬೆಳೆದು ನಿಲ್ಲುತ್ತವೆ. ಇದೊಂದು ನೈಸರ್ಗಿಕ ಕ್ರಿಯೆ. ಆದರೆ ಬಂಡೀಪುರ ಅರಣ್ಯದಲ್ಲಿ ಈ ಹಿಂದೆ ಕಾಡ್ಗಿಚ್ಚು ಸಂಭವಿಸಿದ ವೇಳೆ ಬಹಳಷ್ಟು ಮರಗಳು ಬೆಂಕಿಗೆ ಸಿಲುಕಿ ಸತ್ತು ಹೋಗಿವೆ. ಕೆಲವು ಮರಗಳು ಸತ್ತಿದ್ದರೂ ಬೀಳದ ಹಾಗೆಯೇ ನಿಂತಿವೆ.

 ಬೀಜಗಳನ್ನು ಬಿತ್ತುವ ಕಾರ್ಯ

ಬೀಜಗಳನ್ನು ಬಿತ್ತುವ ಕಾರ್ಯ

ಇಂತಹ ಮರಗಳು ಹಾಗೂ ದುರ್ಬಲಗೊಂಡಿರುವ ಮರಗಳನ್ನು ಹುಡುಕಿ ಅವುಗಳ ಪೊಟರೆಯಲ್ಲಿ ಕೃತಕವಾಗಿ ಬೀಜಗಳನ್ನು ಬಿತ್ತಿ ಗಿಡವಾಗಿ, ಮರವಾಗಿ ಬೆಳೆಸುವ ಪ್ರಯೋಗ ನಡೆಯುತ್ತಿದ್ದು ಇದರಲ್ಲಿ ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ಈ ಪ್ರಯೋಗದಿಂದ ಹಲವು ರೀತಿಯ ಉಪಯೋಗಗಳನ್ನು ನಿರೀಕ್ಷೆ ಮಾಡಲಾಗಿದೆ. ಪೊಟರೆಯಲ್ಲಿ ಬೆಳೆದು ಮರವಾಗುವ ಸಸ್ಯಗಳು ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿಯಾಗಿದ್ದು, ಇವು ಮರದ ಪೊಟರೆಯಲ್ಲಿರುವ ನೀರಿನ ಅಂಶ ಹಾಗೂ ಗೊಬ್ಬರವನ್ನು ಬಳಸಿಕೊಂಡು ಬೆಳೆಯುತ್ತಾ ಬೇರನ್ನು ಆಶ್ರಯ ಮರಗಳ ಮೂಲಕವೇ ಭೂಮಿಗೆ ತಲುಪಿಸಿ ಬಳಿಕ ಆಶ್ರಯ ಮರ ಸತ್ತರೂ ಈ ಮರಗಳು ಗಟ್ಟಿಯಾಗಿ ಭೂಮಿಯಲ್ಲಿ ಬೇರೂರಿ ನಿಲ್ಲುತ್ತವೆ.

ಅರಣ್ಯದಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಡಿಆರ್ ‌ಎಫ್‌ಒಗಳ ವಿಶೇಷ ತಂಡ ರಚನೆ

 13 ವಲಯಗಳಲ್ಲಿ ಕನಿಷ್ಠ 10 ಸಾವಿರ ಗಿಡಗಳು

13 ವಲಯಗಳಲ್ಲಿ ಕನಿಷ್ಠ 10 ಸಾವಿರ ಗಿಡಗಳು

ಈ ಮರಗಳ ಹಣ್ಣು ಸೊಪ್ಪು ಎಲ್ಲವೂ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವಾಗುವುದರಿಂದ ಕಾಡಿನಲ್ಲಿ ಮೇವಿನ ಕೊರತೆಯಾಗುವುದಿಲ್ಲ. ಜತೆಗೆ ಪರಿಸರ ಹಸಿರಾಗಲಿದೆ. ಸದ್ಯ ಅಧಿಕಾರಿಗಳು ಬಂಡೀಪುರ ವ್ಯಾಪ್ತಿಯ 13 ವಲಯಗಳಲ್ಲಿ ಕನಿಷ್ಠ 10 ಸಾವಿರ ಗಿಡಗಳನ್ನು ಬೆಳೆಸಿದ್ದು, ಒಂದು ವಲಯದಲ್ಲಿ ಗರಿಷ್ಠ ಎಂಟು ನೂರರಿಂದ ಸಾವಿರ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿದೆ. ಇದು ಯಶಸ್ವಿಯಾಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಒಣಗಿದ ಮರಗಳು ಇರುವ ಖಾಲಿ ಪ್ರದೇಶ ಹಾಗೂ ಮರಗಿಡಗಳಿಲ್ಲದ ಜಾಗಗಳಲ್ಲಿ ಗಿಡಗಳನ್ನು ನಿರಂತರವಾಗಿ ನೆಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಅರಣ್ಯದಲ್ಲಿ ಎಷ್ಟು ಗಿಡಗಳು ನೆಡುವುದು ಮುಖ್ಯವಾಗುವುದಿಲ್ಲ. ಗಿಡಗಳು ಎಷ್ಟು ಬದುಕಿವೆ ಎಂಬುದು ಮುಖ್ಯವಾಗುತ್ತದೆ. ಕಾರಣ ಹಲವು ಕಾರಣಗಳಿಗೆ ನೆಟ್ಟ ಗಿಡಗಳು ಬದುಕದೆ ಸಾಯಬಹುದು. ಆದರೆ ನಿರಂತರವಾಗಿ ಗಿಡನೆಡುವ ಕಾರ್ಯಗಳು ನಡೆಯುತ್ತಿದ್ದರೆ ಮುಂದೊಂದು ದಿನ ಅರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಿಡಗಳು ಬೆಳೆದು ಉಳಿಯಲು ಸಾಧ್ಯವಾಗಲಿದೆ.

 ಎಲ್ಲ ಅರಣ್ಯ ವಲಯಗಳಲ್ಲಿಯೂ ಪ್ರಯೋಗ

ಎಲ್ಲ ಅರಣ್ಯ ವಲಯಗಳಲ್ಲಿಯೂ ಪ್ರಯೋಗ

ಈ ಕುರಿತಂತೆ ಮಾತನಾಡಿರುವ ಹೆಡಿಯಾಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಅವರು, ಈಗ ಮಾಡಿರುವ ಪ್ರಯೋಗದಿಂದ ಕಾಡ್ಗಿಚ್ಚಿನ ವೇಳೆ ಬೆಂಕಿ ಹರಡಿ ಕಾಡು ನಾಶವಾಗುವುದು ತಪ್ಪಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಲ್ಲಿರುವ ಒಣಗಿದ ಮರಗಳನ್ನು ಗುರುತಿಸಿ ಸಸಿ ನೆಡುವ ಮತ್ತು ಬೀಜ ಬಿತ್ತನೆ ಮಾಡುವ ಪ್ರಯೋಗ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಹಿಂದೆ ನಡೆದ ಅಗ್ನಿ ಅನಾಹುತದಿಂದ ಅರಣ್ಯಕ್ಕೆ ಬಹಳಷ್ಟು ಹಾನಿಯಾಗಿದ್ದು, ಮತ್ತೆ ಅದೇ ಹಸಿರು ಸಿರಿಯನ್ನು ಬಂಡೀಪುರದಲ್ಲಿ ಸೃಷ್ಟಿಸುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ.

English summary
Forest depoartment is using new method of growing plants in bandipura region to tackle fire problem and revoke greenary,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X