ಒಂದು ಲೀ ಪೆಟ್ರೋಲ್ ಇದ್ದಿದ್ದರೆ ಶಿಶು ಪ್ರಾಣ ಉಳಿಯುತ್ತಿತ್ತಾ? ಲಂಕಾದಲ್ಲೊಂದು ದುರಂತ
ಕೊಲಂಬೋ, ಮೇ 24: ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಹಲವು ಅಗತ್ಯ ವಸ್ತುಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗದೇ ಜನಸಾಮಾನ್ಯರು ಹಾಹಾಕಾರ ನಡೆಸುವಂತಾಗಿದೆ. ದೇಶಾದ್ಯಂತ ಜನರು ಹತಾಶೆಯಿಂದ ದಂಗೆ, ಲೂಟಿಗಳಲ್ಲಿ ನಿರತರಾಗುತ್ತಿರುವುದು ಒಂದೆಡೆಯಾದರೆ, ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ಜನರೂ ಇದ್ದಾರೆ. ಟುಕ್ ಟುಕ್ ವಾಹನಕ್ಕೆ ಪೆಟ್ರೋಲ್ ಸಿಗದ ಕಾರಣ ಅಸ್ವಸ್ಥ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ಮೃತಪಟ್ಟ ದಾರುಣ ಘಟನೆ ಶ್ರೀಲಂಕಾದ ರಾಜಧಾನಿ ಸಮೀಪವೇ ನಡೆದಿದೆ.
ಕೊಲಂಬೋ ನಗರದಿಂದ ಸುಮಾರು ಇನ್ನೂರು ಕಿಮೀ ದೂರದಲ್ಲಿರುವ ಹಲ್ದಮುಲ್ಲಾ ಎಂಬಲ್ಲಿ ಎರಡು ದಿನದ ಧರೆಗಿಳಿದ್ದ ಶಿಶು ಜಾಂಡೀಸ್ನಿಂದ ಅಸ್ವಸ್ಥಗೊಂಡಿತ್ತು. ತಾಯಿಯ ಎದೆಹಾಲು ಕುಡಿಯಲೂ ಸಾಧ್ಯವಿರಲಿಲ್ಲ. ಹಲ್ದಮುಲ್ಲಾ ಬಳಿಯ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಯತ್ನಿಸಿದರು. ಆದರೆ ಆ ಮಗುವಿನ ತಂದೆಯ ಬಳಿ ಟುಕ್ ಟುಕ್ ವಾಹನ ಇತ್ತಾದರೂ ಅದಕ್ಕೆ ಹಾಕಿಸಲು ಪೆಟ್ರೋಲ್ ಸಿಗಲಿಲ್ಲ. ಹೀಗಾಗಿ ಸಕಾಲಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಲಿಲ್ಲ. ಹಾಗೂ ಹೀಗೂ ಬೇರೆ ವಾಹನದ ಮೂಲಕ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಗುವಿನ ಪರಿಸ್ಥಿತಿ ಗಮನಿಸಿ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಷ್ಟರಲ್ಲಿ ಮಗುವಿನ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸಾವನ್ನಪ್ಪಿದೆ.
ಶ್ರೀಲಂಕಾದಲ್ಲಿ ಸಾರ್ವಕಾಲಿಕ ದಾಖಲೆ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ
ಮಗುವಿನ ಶವಪರೀಕ್ಷೆ ನಡೆಸಿದ ನ್ಯಾಯಾಂಗ ವೈದ್ಯಕೀಯ ಅಧಿಕಾರಿ ಶನಕ ರೋಷನ್ ಪದಿರಾನ ಎಂಬುವವರು ಸೋಷಿಯಲ್ ಮೀಡಿಯಾದಲ್ಲಿ ಈ ಮಗುವಿನ ಸಾವಿನ ದಾರುಣ ಕಥೆಯನ್ನು ಪೋಸ್ಟ್ ಮಾಡಿದ್ದಾರೆ.
"ಮಗುವಿನ ಎಲ್ಲಾ ಅಂಗಾಂಗಗಳು ಪೂರ್ಣವಾಗಿ ಬೆಳವಣಿಗೆ ಹೊಂದಿದ್ದರಿಂದ ಪೋಸ್ಟ್ ಮಾರ್ಟಂ ಮಾಡಬೇಕಾಗಿ ಬಂತು. ಒಂದು ಲೀಟರ್ ಪೆಟ್ರೋಲ್ ಸಿಗದ ಕಾರಣ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ತಂದೆ ತಾಯಿಯನ್ನು ಜೀವನಪರ್ಯಂತ ಕಾಡುತ್ತದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ಇತಿಹಾಸದಲ್ಲೇ ಇದು ಅತ್ಯಂತ ಹೀನ ಆರ್ಥಿಕ ಸ್ಥಿತಿ ಆಗಿದ್ದು, ಈ ಸಂದರ್ಭದಲ್ಲಿ ರಾಜಕೀಯ ನೇತಾರರು ಜನರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಪದಿರಾನ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಲಂಕಾ ಜರ್ಝರಿತ
ಶ್ರೀಲಂಕಾದಲ್ಲಿ ಆರ್ಥಿಕತೆ ಸಿಕ್ಕಾಪಟ್ಟೆ ಕುಸಿದಿದೆ. ಸಾಲದ ಬಾಧೆ. ಆದಾಯ ಕುಂಠಿತ ಇತ್ಯಾದಿ ಅನೇಕ ಕಾರಣಗಳಿಂದಾಗಿ ಲಂಕಾ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದೆ. ಜನರು ದಂಗೆ, ಲೂಟಿಗಳಲ್ಲಿ ತೊಡಗಿದ್ಧಾರೆ. ಪ್ರತಿಭಟನೆ ವ್ಯಾಪಕವಾಗಿ ನಡೆದಿದೆ. ಕಳೆದ ವಾರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹಲವರು ಸಾವನ್ನಪ್ಪಿದ್ದರು.
ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಯ 484 ಫೋಟೋ, 73 ವಿಡಿಯೊ ಸಂಗ್ರಹ
ಹಿಂಸಾಚಾರಕ್ಕಿಂತ ಹೆಚ್ಚಾಗಿ ಲಂಕಾದ ಜನಜೀವನ ಅಗತ್ಯವಸ್ತುಗಳ ಲಭ್ಯತೆ ಇಲ್ಲದೇ ಹೈರಾಣವಾಗಿದೆ. ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳನ್ನ ಕೊಳ್ಳಲೂ ಲಂಕಾ ಬಳಿ ಹಣ ಇಲ್ಲದಂತಾಗಿದೆ. ಭಾರತದಿಂದ ಒಂದಷ್ಟು ಔಷಧ ಸಾಮಗ್ರಿಗಳ ವ್ಯವಸ್ಥೆ ಆಗಿದೆ. ಭಾರತ ಸ್ವಲ್ಪಮಟ್ಟಿಗೆ ಹಣಕಾಸಿನ ನೆರವನ್ನೂ ನೀಡಿದೆ. ಇತರ ದೇಶಗಳಿಂದ ಲಂಕಾಗೆ ನಿರೀಕ್ಷಿತ ನೆರವು ಸಿಕ್ಕಿಲ್ಲ.
(ಒನ್ಇಂಡಿಯಾ ಸುದ್ದಿ)