ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಮುದ್ದಾಡಿದ್ದ ಆನೆಗೆ ಪುನೀತ್ ಹೆಸರು ನಾಮಕರಣ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 10: ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜಕುಮಾರ್‌ರವರ ಹೆಸರು ಇಡಲಾಗಿದೆ.

ಇಂದು (ಬುಧವಾರ) ವೀನಿಂಗ್ ಪ್ರಕ್ರಿಯೆ ವೇಳೆ ಮರಿ ಆನೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಕ್ರೆಬೈಲು ಬಿಡಾರದ ನೇತ್ರಾವತಿ ಅನೆಯ ಮರಿಗೆ ಪುನೀತ್ ರಾಜಕುಮಾರ್‌ರವರ ಹೆಸರನ್ನಿಡಲಾಗಿದೆ.

ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜಕುಮಾರ್ ಸಕ್ರೆಬೈಲು ಶಿಬಿರಕ್ಕೆ ಭೇಟಿ ನೀಡಿದ್ದರು. ಆಗ ನೇತ್ರಾವತಿಯ ಮರಿ ಜೊತೆಗೆ ನಟ ಪುನೀತ್ ಕೆಲವು ಹೊತ್ತು ಕಳೆದಿದ್ದರು. ಅದನ್ನು ಮೈದಡವಿದ್ದರು, ಮುದ್ದಾಡಿದ್ದರು. ಹಾಗಾಗಿ ಅವರ ಹೆಸರನ್ನೇ ಆನೆಗೆ ಇಡಲಾಗಿದೆ.

'ಆನೆಗೆ ನಟ ಪುನೀತ್ ರಾಜಕುಮಾರ್ ಹೆಸರನ್ನು ಇಡಲಾಗುತ್ತಿದೆ. ಪುನೀತ್ ರಾಜಕುಮಾರ್ ಬಂದು ಹೋದ ಮೇಲೆ ಎಲ್ಲರೂ ಅದನ್ನು ಅಪ್ಪು ಎಂದು ಕರೆಯುತ್ತಿದ್ದರು. ಹಾಗಾಗಿ ಪುನೀತ್ ಎಂದೇ ನಾಮಕರಣ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್ಒ ಐ.ಎಂ. ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇವತ್ತಿಂದ ತಾಯಿ, ಮಗ ದೂರ ದೂರ

ಇವತ್ತಿಂದ ತಾಯಿ, ಮಗ ದೂರ ದೂರ

ನೇತ್ರಾವತಿ ಮತ್ತು ಅದರ ಮರಿ ಪುನೀತ್ ಇವತ್ತಿನಿಂದ ದೂರ ದೂರ ಉಳಿಯಬೇಕಿದೆ. ಈವರೆಗೂ ತಾಯಿ ಹಾಲು ಕುಡಿಯಲು ಮರಿ ಆನೆಗೆ ಅವಕಾಶವಿತ್ತು. ಆದರೆ ಇನ್ಮುಂದೆ ಮರಿ ಆನೆ ಪುನೀತ್, ಸ್ವತಂತ್ರವಾಗಿ ಬದುಕಬೇಕಿದೆ. ಹಾಗಾಗಿ ತಾಯಿ ಮತ್ತು ಮರಿಯನ್ನು ಬೇರ್ಪಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ವೀನಿಂಗ್ ಎಂದು ಕರೆಯಲಾಗುತ್ತದೆ.

ತಾಯಿ ನೇತ್ರಾವತಿಯನ್ನು ಕಾಡಿನಲ್ಲಿ ಬಿಡಲಾಗುತ್ತದೆ. ಸಕ್ರೆಬೈಲು ಅರಣ್ಯ ವ್ಯಾಪ್ತಿಯಲ್ಲಿ ತಾಯಿ ಆನೆಯನ್ನು ಕಟ್ಟಿ ಬಿಡಲಾಗುತ್ತದೆ. ಅದರ ಜೊತೆಗೆ ಬಿಡಾರದ ಕೆಲವು ಆನೆಗಳು ಇರಲಿವೆ. ಮರಿ ಆನೆಯು ತಾಯಿಯ ಆಸರೆ ಇಲ್ಲದೆ ಸ್ವತಂತ್ರವಾಗಿ ಬದುಕುವಂತಾದಾಗ ನೇತ್ರಾವತಿ ಆನೆಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಕಾಡಿಗೆ ತಾಯಿ, ಬಿಡಾರದಲ್ಲಿ ಮರಿ ಬಂಧಿ

ಕಾಡಿಗೆ ತಾಯಿ, ಬಿಡಾರದಲ್ಲಿ ಮರಿ ಬಂಧಿ

ಇನ್ನು ಮರಿ ಆನೆ ಪುನೀತ್‌ನನ್ನು ಬಿಡಾರದಲ್ಲೇ ಇರಿಸಿಕೊಳ್ಳಲಾಗುತ್ತದೆ. ಈವರೆಗೂ ತಾಯಿ ಹಾಲು ಕುಡಿಯುವುದರ ಜೊತೆಗೆ ಪುನೀತ್‌ಗೆ ಬಿಡಾರದ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಕೊಡಲಾಗುತಿತ್ತು. ವೀನಿಂಗ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಮರಿ ಆನೆಯನ್ನು ಸಕ್ರೆಬೈಲು ಬಿಡಾರದಲ್ಲಿ ಕಟ್ಟಿ ಹಾಕಲಾಗುತ್ತದೆ.

ಯಾವುದೇ ಕಾರಣಕ್ಕೂ ಮರಿ ಆನೆ ತಪ್ಪಿಸಿಕೊಂಡು ತಾಯಿಯ ಬಳಿಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತದೆ. ಬಿಡಾರದಲ್ಲಿ ಪುನೀತ್ ಆನೆಗೆ ಹಾಲು ಕೊಡುವುದಿಲ್ಲ. ಬದಲಾಗಿ ಉಳಿದ ಆನೆಗಳಿಗೆ ಕೊಡುವ ಆಹಾರವನ್ನೇ ನೀಡಲಾಗುತ್ತದೆ.

ಅಲ್ಲದೆ ಪುನೀತ್ ಆನೆಗೆ ಮಾವುತರೊಬ್ಬರನ್ನು ನಿಯೋಜಿಸಲಾಗುತ್ತದೆ. ಅವರು ಹೇಳಿದಂತೆ ಪುನೀತ್ ಆನೆ ಕೇಳಬೇಕು. ಭವಿಷ್ಯದಲ್ಲಿ ಪುನೀತ್ ಆನೆಯು ಅವರೊಂದಿಗೆ ಹೊಂದಿಕೊಂಡು, ಅವರು ಹೇಳಿದಂತೆ ಕೇಳಬೇಕು. ಇನ್ಮುಂದೆ ಆ ಮಾವುತನೇ ಪುನೀತ್ ಆನೆಯ ಆರೈಕೆ ಮಾಡಬೇಕಾಗುತ್ತದೆ.

ಈ ಬಾರಿ ಉಲ್ಟಾ ಪ್ರಯೋಗ

ಈ ಬಾರಿ ಉಲ್ಟಾ ಪ್ರಯೋಗ

ಪ್ರತಿ ಬಾರಿ ವೀನಿಂಗ್ ವೇಳೆ ಬಿಡಾರದಲ್ಲಿ ತಾಯಿ ಆನೆಯನ್ನು ಇರಿಸಲಾಗುತಿತ್ತು. ಮರಿ ಆನೆಯನ್ನು ಕಾಡಿನಲ್ಲಿ ಕಟ್ಟಿ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಪ್ರಕ್ರಿಯೆಯನ್ನು ಉಲ್ಟಾ ಮಾಡಲಾಗಿದೆ. ತಾಯಿ ಆನೆಯನ್ನು ಕಾಡಿನಲ್ಲಿ ಕಟ್ಟಲಾಗಿದೆ. ಮರಿಯನ್ನು ಬಿಡಾರದಲ್ಲಿ ಬಂಧಿಸಲಾಗಿದೆ. ತಾಯಿ ನೇತ್ರಾವತಿ ಜೊತೆಗೆ ಕುಂತಿ ಮತ್ತು ಶಿವ ಆನೆಗಳು ಕೂಡ ಕಾಡಿನಲ್ಲಿವೆ. ಇತ್ತ ಮರಿ ಆನೆ ಪುನೀತ್ ಜೊತೆಗೆ ಸಾಗರ್, ಬಾಲಣ್ಣ, ಬಹದ್ದೂರ್, ಆಲೆ ಆನೆಗಳಿವೆ. ಮರಿ ಆನೆಯನ್ನು ಕಾಡಿನಲ್ಲಿ ಕಟ್ಟಿದರೆ ಒಂಟಿತನ ಕಾಡುವ ಸಾಧ್ಯತೆ ಇದೆ. ಆದರೆ ತಾಯಿ ಆನೆಗಾದರೆ ಕಾಡಿನಲ್ಲಿದ್ದ ಅನುಭವ ಇದೆ. ಹಾಗಾಗಿ ಈ ಭಾರಿ ವೀನಿಂಗ್‌ನಲ್ಲಿ ಹೊಸ ಮಾದರಿ ಅನುಸರಿಸಲಾಗಿದೆ.

ಆರು ವರ್ಷದವರೆಗೆ ಜೊತೆಗಿರುತ್ತವೆ

ಆರು ವರ್ಷದವರೆಗೆ ಜೊತೆಗಿರುತ್ತವೆ

ಕಾಡಿನಲ್ಲಾದರೆ ತಾಯಿ ಮತ್ತು ಮರಿ ಆನೆಗಳು ಆರು ವರ್ಷದವರೆಗೂ ಜೊತೆಗಿರುತ್ತವೆ. ಆ ಬಳಿಕ ನೈಸರ್ಗಿಕವಾಗಿ ದೂರಾಗುತ್ತವೆ. ಆದರೆ ಬಿಡಾರದಲ್ಲಿ ಎರಡು ವರ್ಷಕ್ಕೆಲ್ಲ ವೀನಿಂಗ್ ಮಾಡಲಾಗುತ್ತದೆ. ಬಿಡಾರದಲ್ಲಿರುವ ಮರಿಗಳು ಹೆಚ್ಚು ಅವಧಿ ತಾಯಿ ಜೊತೆಗಿದ್ದರೆ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ.

ತಾಯಿ ಮತ್ತು ಮರಿ ಆನೆ ಬೇರ್ಪಡುವ ದೃಶ್ಯ ಮನಕಲಕುವಂತಿರುತ್ತದೆ. ಈ ವೇಳೆ ಆನೆಗಳು ರೊಚ್ಚಿಗೇಳುವ ಸಾಧ್ಯತೆಯು ಇರುತ್ತದೆ. ಇದೇ ಕಾರಣಕ್ಕೆ ಈ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗುತ್ತದೆ.

English summary
Names Elephant Calf After Puneeth Rajkumar In Sakrebailu Camp of Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X