ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ತಿಕ-ನಾಸ್ತಿಕರ ಸೆಳೆಯುವ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟ

|
Google Oneindia Kannada News

ಮೈಸೂರು, ಡಿಸೆಂಬರ್ 13: ಮೈಸೂರು ಜಿಲ್ಲೆಯ ತಾಲೂಕು ಕೇಂದ್ರವಾದ ತಿ.ನರಸೀಪುರಕ್ಕೆ ಸಮೀಪದ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವು ಪ್ರೇಕ್ಷಣೀಯ ತಾಣಗಳಲ್ಲೊಂದಾಗಿದ್ದು, ಇಲ್ಲಿನ ನಿಸರ್ಗ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ.

ತಿ.ನರಸೀಪುರದಿಂದ ಸುಮಾರು ಒಂಬತ್ತು ಕಿ.ಮೀ. ದೂರದಲ್ಲಿರುವ ಒಡ್ಡುಗಲ್ಲ್ಲು ರಂಗಸ್ವಾಮಿ ಬೆಟ್ಟವನ್ನು ಸಿದ್ಧರಬೆಟ್ಟ, ಚಿದರವಳ್ಳಿ ಬೆಟ್ಟ ಎಂದು ಕೂಡ ಕರೆಯಲಾಗುತ್ತಿದೆ. ಬೃಹದಾಕಾರದ ಬಂಡೆಗಳಿಂದ ಕೂಡಿರುವುದು ಈ ಬೆಟ್ಟದ ವಿಶೇಷತೆಯಾಗಿದೆ. ಪೇಟೆ ಪಟ್ಟಣಗಳ ಗೌಜು ಗದ್ದಲದಲ್ಲಿ ದಿನ ಕಳೆಯುತ್ತಿರುವವರು ಈ ಬೆಟ್ಟಕ್ಕೆ ಬಂದು ಒಂದಷ್ಟು ಸಮಯವನ್ನು ಪ್ರಶಾಂತ ವಾತಾವರಣದಲ್ಲಿ ಕಳೆದು ಹೋಗಿದ್ದೇ ಆದರೆ, ಮನಃಶಾಂತಿ ದೊರೆಯುವುದರಲ್ಲಿ ಎರಡು ಮಾತಿಲ್ಲ.

ಪ್ರವಾಸದ ಪಟ್ಟಿಯಲ್ಲಿರಲಿ ಈ ತಾಣ

ಪ್ರವಾಸದ ಪಟ್ಟಿಯಲ್ಲಿರಲಿ ಈ ತಾಣ

ಹಿಂದಿನ ಕಾಲದಲ್ಲಿ ಈ ಬೆಟ್ಟದ ತಪ್ಪಲಿನಲ್ಲಿ ನೆಲೆಸಿದ್ದ ಸಿದ್ಧಿ ಪುರುಷರು ತಪಸ್ಸು ಮಾಡಿ ಸಿದ್ಧಿಯನ್ನು ಪಡೆದರೆಂದೂ, ಅದರಿಂದಲೇ ಈ ಬೆಟ್ಟಕ್ಕೆ ಸಿದ್ಧಿಗಿರಿ, ಸಿದ್ದನಬೆಟ್ಟ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಬೆಟ್ಟದ ಪಕ್ಕದಲ್ಲಿ ಹಳ್ಳಿಯಿದ್ದು, ಇದನ್ನು ಮೊದಲಿಗೆ ಸಿದ್ದರಹಳ್ಳಿ ಎಂದು ಕೂಡ ಕರೆಯಲಾಗುತ್ತಿತ್ತು. ಆದರೆ ಕಾಲಕ್ರಮೇಣ ಸಿದ್ದರಹಳ್ಳಿ ಮುಂದೆ ಚಿದರವಳ್ಳಿ ಆಯಿತು, ಇದೀಗ ಅದು ಚಿದ್ರಳ್ಳಿಯಾಗಿದೆ. ತಿ.ನರಸೀಪುರಕ್ಕೆ ಭೇಟಿ ನೀಡುವವರು, ತಲಕಾಡಿಗೆ ತೆರಳುವವರು ತಮ್ಮ ಪ್ರವಾಸದ ಪಟ್ಟಿಯಲ್ಲಿ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವನ್ನು ಸೇರಿಸಿಕೊಳ್ಳಬಹುದಾಗಿದೆ.

ಗಿರಿಗುಹೆ ಹೊಂದಿದ ಸುಂದರ ಬೆಟ್ಟ

ಗಿರಿಗುಹೆ ಹೊಂದಿದ ಸುಂದರ ಬೆಟ್ಟ

ಇಲ್ಲಿ ನೆಲೆಸಿರುವ ಸಿದ್ದರು ವೀರಶೈವರಾಗಿದ್ದು, ಒಡ್ಡುಗಲ್ಲು ರಂಗನಾಥಸ್ವಾಮಿಯ ಭಕ್ತರು ವೈಷ್ಣವ ಪಂಥಕ್ಕೆ ಸೇರಿದವರಾಗಿದ್ದು, ಈ ತಾಣವು ಶೈವ ಮತ್ತು ವೈಷ್ಣವ ಧರ್ಮದ ಯಾತ್ರಾ ಸ್ಥಳವೆಂದರೂ ತಪ್ಪಾಗಲಾರದು. ಇಲ್ಲಿನ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟವು ಅತಿ ಎತ್ತರವೂ ಇಲ್ಲದ, ದೊಡ್ಡ ಬೆಟ್ಟವೂ ಅಲ್ಲದ ಆದರೆ ಸುಂದರವಾದ ಬೆಟ್ಟವಾಗಿದೆ. ಈ ಬೆಟ್ಟ ಏಕೆ ಪ್ರಸಿದ್ಧಿ ಹೊಂದಿದೆ ಎನ್ನವುದನ್ನು ನೋಡುವುದಾದರೆ, ಇದು ಹೆಬ್ಬಂಡೆಗಳ, ಗಿರಿ ಗುಹೆಗಳನ್ನು ಹೊಂದಿದ್ದು, ಋಷಿ ಮುನಿಗಳ ತಪಸ್ಸಿಗೆ ಯೋಗ್ಯವಾಗಿತ್ತು ಎಂದು ಹೇಳಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಕುದುರೆ ಬೆನ್ನಿನ ಆಕಾರದ ಸ್ಥಳವಿದ್ದು, ಇದನ್ನು ವಿಭೂತಿ ತಿಟ್ಟು ಎಂದು ಕೂಡ ಕರೆಯಲಾಗುತ್ತಿದೆ. ಈ ಜಾಗವು ಹಿಂದೆ ಸಿದ್ದರಬೀಡಾಗಿತ್ತಂತೆ. ಇದರ ಕುರುಹುವಾಗಿ ಈಗಲೂ ಇಲ್ಲಿ ಸುಟ್ಟ ಇಟ್ಟಿಗೆ, ಹೆಂಚು ಚೂರು, ಮಣ್ಣು ಬೂದಿಗಳನ್ನು ಕಾಣಬಹುದಾಗಿದೆ.

ಕಣ್ಮನ ತಣಿಸುವ ಸುಂದರ ನೋಟ

ಕಣ್ಮನ ತಣಿಸುವ ಸುಂದರ ನೋಟ

ಹಿಂದಿನ ಕಾಲದಲ್ಲಿ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದಿಂದ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನ ಕುಂದೂರು ಬೆಟ್ಟಕ್ಕೆ ಸುರಂಗ ಮಾರ್ಗವಿತ್ತೆಂದೂ, ಸಿದ್ದರು ಈ ಸುರಂಗ ಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಬೆಟ್ಟವನ್ನು ಏರುತ್ತಾ ಹೋದರೆ ಮಧ್ಯಭಾಗದಲ್ಲಿ ಗವಿಯಿದ್ದು ಅದಕ್ಕೆ ಮೇಗಳ ಗವಿ ಎಂಬ ಹೆಸರಿದೆ. ಬೃಹತ್ ಬಂಡೆಯಿಂದ ಸೃಷ್ಠಿಯಾಗಿರುವ ಗವಿಯು ಬಹುದೊಡ್ಡದಾಗಿದೆ. ಇಲ್ಲಿ ಹರಿಯುವ ನೀರನ್ನು ಸಿದ್ದಗಂಗೆ ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತಿದೆ. ಬೆಟ್ಟದ ಮೇಲ್ಭಾಗವನ್ನು ತಲುಪಿ ಸುತ್ತಲೂ ಕಣ್ಣು ಹಾಯಿಸಿದರೆ ಕಾಣ ಸಿಗುವ ಸುಂದರ ನೋಟ ಮನತಣಿಸುತ್ತದೆ.

ಪ್ರತಿಧ್ವನಿಸುವ ನಾದಾನುಸಂಧಾನ ಕಲ್ಲು

ಪ್ರತಿಧ್ವನಿಸುವ ನಾದಾನುಸಂಧಾನ ಕಲ್ಲು

ಬೆಟ್ಟವು ಹಲವು ಐತಿಹ್ಯವನ್ನು ಹೊಂದಿದ್ದು, ಇಲ್ಲಿರುವ ಮೇಗಳಗವಿಯಲ್ಲಿ ಗವಿಮಠದ ಶಿವಯೋಗಿಗಳು ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಧ್ಯಾನಾಸಕ್ತರಾದಾಗ, ಅವರ ಸುತ್ತಲೂ ಕರಡಿ, ಹುಲಿಗಳಂತಹ ಪ್ರಾಣಿಗಳು ಸುತ್ತುವರಿದು ಕುಳಿತುಕೊಳ್ಳುತ್ತಿದ್ದವಂತೆ. ಇಲ್ಲೊಂದು ಹೆಬ್ಬಂಡೆಯಿದ್ದು, ಅದಕ್ಕೆ ಓಕಳಿಕಲ್ಲು ಎಂಬ ಹೆಸರಿದೆ. ಈ ಹೆಬ್ಬಂಡೆಗೆ ಅಭಿಮುಖವಾಗಿ ಕುಳಿತು ಕೂಗಿದರೆ ಪ್ರತಿಧ್ವನಿ ಕೇಳಿ ಬರುತ್ತಿದ್ದು, ಇದಕ್ಕೆ ನಾದಾನುಸಂಧಾನ ಕಲ್ಲೆಂಬ ಮತ್ತೊಂದು ಹೆಸರಿದೆ.

ಪಡಿ ಎತ್ತಿ ಬಸಪ್ಪನಿಗೆ ಪೂಜೆ

ಪಡಿ ಎತ್ತಿ ಬಸಪ್ಪನಿಗೆ ಪೂಜೆ

ಬೆಟ್ಟದ ಒಂದು ಭಾಗದಲ್ಲಿ ಕೋಡುಗಲ್ಲು ಬಸಪ್ಪನ ಬಂಡೆಯಿದ್ದು, ಇದನ್ನು ಕೆಲವರು ಮಾರಮ್ಮನ ಕಲ್ಲು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮಳೆಗಾಲದಲ್ಲಿ ಮಳೆ ಸುರಿಯದೆ ಕ್ಷಾಮ ಕಾಣಿಕೊಂಡಾಗ ಊರಿನ ಹಿರಿಯರೆಲ್ಲರೂ ಸೇರಿ ಮನೆ ಮನೆಗೆ ತೆರಳಿ ಪಡಿ ಎತ್ತಿ ಬಸಪ್ಪನಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ನೈವೇದ್ಯ ಸಲ್ಲಿಸಿದರೆ ಮಳೆ ಸುರಿಯುತ್ತಿತ್ತು ಎಂದು ಹೇಳಲಾಗಿದೆ.

ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟದ ಸಮೀಪವೇ ಸೋಮೇಶ್ವರ ದೇವಾಲಯವಿದೆ. ಈ ದೇವಾಲಯ ಅಪರೂಪದ್ದಾಗಿದೆ. ಇದಲ್ಲದೆ ಈ ಊರಿನ ಸುತ್ತಮುತ್ತ ಸಿದ್ದೇಶ್ವರ ಸ್ವಾಮಿ, ಬೀರೇಶ್ವರ, ಚಿಕ್ಕಮ್ಮ, ದೊಡ್ಡಮ್ಮ ತಾಯಿಯ ದೇವಾಲಯ, ಗಣಪತಿ, ಸತ್ಯನಾರಾಯಣ ಸ್ವಾಮಿಯ ದೇವಾಲಯವೂ ಇದೆ. ಆದರೆ ಸಿದ್ದೇಶ್ವರ ಸ್ವಾಮಿಯೇ ಈ ಊರಿನ ಅಧಿದೇವತೆಯಾಗಿದ್ದು, ಈ ದೇವಾಲಯದ ಬಗ್ಗೆ ಅಪಾರ ಭಕ್ತಿ ಹಾಗೂ ನಂಬಿಕೆಯನ್ನು ಜನ ಹೊಂದಿದ್ದಾರೆ.

ಆಸ್ತಿಕ ನಾಸ್ತಿಕರ ಸೆಳೆಯುವ ಬೆಟ್ಟ

ಆಸ್ತಿಕ ನಾಸ್ತಿಕರ ಸೆಳೆಯುವ ಬೆಟ್ಟ

ಸಿದ್ದೇಶ್ವರ ಸ್ವಾಮಿಯು ಕುದುರೆಯನ್ನೇರಿ ಕಲ್ಲು ನೀರು ಕರಗುವ ಹೊತ್ತಿನಲ್ಲಿ ಗ್ರಾಮದ ರಕ್ಷಣೆಗಾಗಿ ಓಡಾಡುತ್ತಾನೆ ಎಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಗ್ರಾಮದಲ್ಲಿ ಭಕ್ತರಲ್ಲಿ ತಪ್ಪು ನಡೆದರೆ ಸರ್ಪ ಕಾಣಿಸಿಕೊಳ್ಳುತ್ತಿತ್ತು ಎಂದು ಜನ ಹೇಳುತ್ತಾರೆ. ಒಟ್ಟಾರೆ ಹಲವು ಮಹತ್ವಗಳನ್ನು ಹೊಂದಿರುವ ಒಡ್ಡುಗಲ್ಲು ರಂಗಸ್ವಾಮಿ ಬೆಟ್ಟ ಆಸ್ತಿಕ ನಾಸ್ತಿಕರೆನ್ನದೆ ಎಲ್ಲರನ್ನು ತನ್ನತ್ತ ಸೆಳೆಯುವ ತಾಣವಾಗಿದೆ ಎಂಬುದಂತು ಸತ್ಯ

English summary
The Oddugallu Rangaswamy Hill, near the T.Narasipura taluk of Mysuru district, is a popular tourist destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X