ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ತಂತ್ರಕ್ಕೆ ಜೆಡಿಎಸ್ ಅತಂತ್ರ!

|
Google Oneindia Kannada News

ಮೈಸೂರು, ಏಪ್ರಿಲ್ 5: ಬಲು ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ದು, ಜೆಡಿಎಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಆದರೆ ತಟಸ್ಥವಾಗಿರುವ ಹಾಲಿ ಶಾಸಕ ಜಿ.ಟಿ. ದೇವೇಗೌಡರ ನಡೆಯ ಮೇಲೆ ಜೆಡಿಎಸ್ ಭವಿಷ್ಯ ಅಡಗಿದೆ.

ಹಾಗೆ ನೋಡಿದರೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ತೀವ್ರ ಪೈಪೋಟಿ ನೀಡಿ ಗೆದ್ದು ಬೀಗಿದ ಜಿ.ಟಿ. ದೇವೇಗೌಡರನ್ನು ಜೆಡಿಎಸ್ ನಡೆಸಿಕೊಂಡ ರೀತಿಯೇ ಬೇಸರ ತರಿಸುವಂತದ್ದಾಗಿತ್ತು. ಒಬ್ಬ ಮುಖ್ಯಮಂತ್ರಿಯನ್ನು ಸೋಲಿಸಿ ಇಡೀ ರಾಜ್ಯದ ಜನ ತಿರುಗಿ ನೋಡುವಂತೆ ಮಾಡಿದ್ದ ಒಬ್ಬ ಪ್ರಭಾವಿ ಒಕ್ಕಲಿಗ ಸಮುದಾಯದ ನಾಯಕನನ್ನು ತದನಂತರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಯಾವ ರೀತಿಯಲ್ಲಿ ನಡೆಸಿಕೊಂಡರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ.

ಚಾಮರಾಜನಗರದಲ್ಲಿ ಖಾತೆ ತೆರೆಯಲು ಜೆಡಿಎಸ್ ಕಸರತ್ತು!ಚಾಮರಾಜನಗರದಲ್ಲಿ ಖಾತೆ ತೆರೆಯಲು ಜೆಡಿಎಸ್ ಕಸರತ್ತು!

 ಚಾಮುಂಡೇಶ್ವರಿ ಕ್ಷೇತ್ರದತ್ತ ಎಲ್ಲರ ದೃಷ್ಟಿ

ಚಾಮುಂಡೇಶ್ವರಿ ಕ್ಷೇತ್ರದತ್ತ ಎಲ್ಲರ ದೃಷ್ಟಿ

ಒಂದು ಕಾಲದಲ್ಲಿ ಒಂದೇ ಪಕ್ಷದಲ್ಲಿದ್ದು, ಬದಲಾದ ಕಾಲಘಟ್ಟದಲ್ಲಿ ಇಬ್ಬರು ಪ್ರತಿಸ್ಪರ್ಧಿಯಾಗಿ ಚುನಾವಣೆ ಎದುರಿಸಿದ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಚಾಮುಂಡೇಶ್ವರಿ ಕ್ಷೇತ್ರದತ್ತ ಎಲ್ಲರೂ ದೃಷ್ಟಿ ನೆಡುವಂತೆ ಮಾಡಿದ್ದರು. ಜೆಡಿಎಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿತ್ತೇ ವಿನಃ ಬಿಜೆಪಿಯತ್ತ ಮೃದುಧೋರಣೆ ತಾಳಿತ್ತು. ಹೀಗಾಗಿಯೇ ಅವಕಾಶ ಸಿಕ್ಕಾಗಲೆಲ್ಲ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂಬ ಆರೋಪ ಮಾಡುತ್ತಲೇ ಬಂದರು.

ಇದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆಲಸ ಮಾಡಿತ್ತು. ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಪರೋಕ್ಷವಾಗಿ ಜೆಡಿಎಸ್‌ಗೆ ಅನುಕೂಲವಾಗುವಂತೆ ನೋಡಿಕೊಂಡಿತ್ತು. ಅವತ್ತು ಬಿಜೆಪಿಗೆ ತನ್ನ ಗೆಲುವಿಗಿಂತ ಹೆಚ್ಚಾಗಿ ಸಿದ್ದರಾಮಯ್ಯ ಅವರ ಸೋಲು ಮುಖ್ಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಹವಾ ಜೋರಾಗಿಯೇ ಇತ್ತು. ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ಅವರಿಗೆ ತನ್ನ ಗೆಲುವು ಅಷ್ಟು ಸುಲಭವಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿಯೇ ಮತ್ತೊಂದು ಕ್ಷೇತ್ರ ಬಾದಾಮಿಯನ್ನು ಆಯ್ಕೆ ಮಾಡಿಕೊಂಡು ಸೋಲಿನ ಸುಳಿಯಿಂದ ತಪ್ಪಿಸಿಕೊಂಡರು.

 ಮಗನ ರಾಜಕೀಯ ಭವಿಷ್ಯದ ಚಿಂತೆ

ಮಗನ ರಾಜಕೀಯ ಭವಿಷ್ಯದ ಚಿಂತೆ

ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದಷ್ಟು ಗೊಂದಲ ಏರ್ಪಟ್ಟಿದೆ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿರುವ ಜಿ.ಟಿ. ದೇವೇಗೌಡರು ಮಾನಸಿಕವಾಗಿ ಜೆಡಿಎಸ್‌ನಿಂದ ಹೊರಬಂದು ತಟಸ್ಥರಾಗಿದ್ದಾರೆ. ಮುಂದಿನ ಚುನಾವಣೆ ತನಕವೂ ಯಾವುದೇ ನಿರ್ಧಾರ ಕೈಗೊಳ್ಳದೆ ಪಕ್ಷದ ನಾಯಕರ ವಿರುದ್ಧವೂ ಮಾತನಾಡದೆ ಮೌನಿಯಾಗಿರುವ ಅವರು ಒಳಗೊಳಗೆ ತಮ್ಮ ಮತ್ತು ಮಗನ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

ಚುನಾವಣೆಗೆ ಒಂದು ವರ್ಷ ಬಾಕಿ ಇರುವುದರಿಂದ ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ನಿಧಾನವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ. ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಆದರೆ ಅವರು ತಮ್ಮ ಮಗ ಜಿ.ಡಿ. ಹರೀಶ್ ಗೌಡರ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿದಂತೆ ಕಂಡು ಬರುತ್ತಿದ್ದು, ಮಗನಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನದ ಜತೆಗೆ ಚುನಾವಣೆಗೆ ತಾವು ಬಯಸುವ ಕ್ಷೇತ್ರದಿಂದ ಟಿಕೆಟ್ ನೀಡುವ ಬೇಡಿಕೆಯಿಟ್ಟಿದ್ದು, ಅದನ್ನು ಈಡೇರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಾ? ಎಂಬುದೇ ಕುತೂಹಲಕಾರಿ ವಿಚಾರವಾಗಿದೆ.

 ಜೆಡಿಎಸ್ ನಾಯಕರಲ್ಲಿ ಆತಂಕ

ಜೆಡಿಎಸ್ ನಾಯಕರಲ್ಲಿ ಆತಂಕ

ಈಗಾಗಲೇ ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆಗಳು ಹೆಚ್ಚಾಗುತ್ತಿವೆ. ಜಿ.ಟಿ. ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಟ್ಟು ಹುಣಸೂರಿಗೆ ಹೋಗುತ್ತಾರಾ? ಮಗನಿಗೆ ಕೆ.ಆರ್. ನಗರದಿಂದ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಾರಾ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ದಿಢೀರ್ ಆಗಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ಮೂಲ ಕಾಂಗ್ರೆಸ್ಸಿಗರು ಸುಮ್ಮನಿರುತ್ತಾರಾ? ಇದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಜಿ.ಟಿ. ದೇವೇಗೌಡರ ಬೆಂಬಲಕ್ಕೆ ನಿಲ್ಲುವುದರೊಂದಿಗೆ ಸದಾ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಹೀಗಿರುವಾಗ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ಬೆಂಬಲಿಗರು ಕೂಡ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರಾ? ಅದು ಗೊತ್ತಿಲ್ಲ. ಆದರೆ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ಜೆಡಿಎಸ್ ಮತದಾರರು ಕಾಂಗ್ರೆಸ್ ಕಡೆಗೆ ವಾಲಿ ಬಿಡಬಹುದಾ ಎಂಬ ಭಯ ಜೆಡಿಎಸ್ ನಾಯಕರಲ್ಲಿ ಶುರುವಾಗಿದೆ.

 ಗೊಂದಲ ಸರಿಪಡಿಸುವುದು ಕಷ್ಟಸಾಧ್ಯ

ಗೊಂದಲ ಸರಿಪಡಿಸುವುದು ಕಷ್ಟಸಾಧ್ಯ

ಹೀಗಾಗಿಯೇ ನಿಖಿಲ್ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಜತೆಗೆ ಕ್ಷೇತ್ರದ ಜೆಡಿಎಸ್‌ನಲ್ಲಿ ಗೊಂದಲವಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಅದನ್ನು ಸರಿಪಡಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಆದರೆ ಗೊಂದಲವನ್ನು ಹೇಗೆ ಸರಿಪಡಿಸುತ್ತಾರೆ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಏಕೆಂದರೆ ಕ್ಷೇತ್ರದಲ್ಲಿ ಗೊಂದಲವಿರುವುದೇ ಜಿ.ಟಿ. ದೇವೇಗೌಡರ ನಡೆಯ ಸುತ್ತ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿಯಿದೆ. ಆದ್ದರಿಂದ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ನಂಬಿಕೆ ಜೆಡಿಎಸ್ ಕಾರ್ಯಕರ್ತರದ್ದಾಗಿದೆ.

English summary
Mysuru: Representing Chamundeshwari constituency GT Devegowda comes out of the JDS and he is neutral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X