ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮಹಾರಾಜರಿಗೆ ಬಲುಪ್ರಿಯವಾಗಿತ್ತಂತೆ ಎಚ್.ಡಿ.ಕೋಟೆ

|
Google Oneindia Kannada News

ದಸರಾ ಆಚರಣೆಯ ಹೊಸ್ತಿಲಲ್ಲಿರುವ ಈ ವೇಳೆಯಲ್ಲಿ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಮೈಸೂರು ಅರಸರಿಗೂ ಮತ್ತು ಎಚ್.ಡಿ.ಕೋಟೆಗಿರುವ ಸಂಬಂಧದ ಮಹತ್ವ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಇಂದು ಮೈಸೂರು ದಸರಾ ಎಂದರೆ ನಮ್ಮ ಮುಂದೆ ಬರುವುದು ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಗಳ ಜಂಬೂಸವಾರಿ. ಈ ಜಂಬೂಸವಾರಿಗೆ ಹಿಂದೆ ಮೈಸೂರು ಅರಸರ ಕಾಲದಲ್ಲಿ ಎಚ್.ಡಿ.ಕೋಟೆಯಿಂದಲೇ ಗಜಪಡೆಗಳನ್ನು ಕರೆತರಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈಗ ಜಂಬೂಸವಾರಿಗೆ ಚಾಮರಾಜನಗರ, ಕೊಡಗಿನ ಆನೆಶಿಬಿರಗಳಿಂದ ಗಜಪಡೆಗಳನ್ನು ಕರೆ ತರಲಾಗುತ್ತಿದೆ. ಆದರೆ ಹಿಂದೆ ಮಹಾರಾಜರ ಕಾಲದಲ್ಲಿ ಹಾಗಿರಲಿಲ್ಲ.

ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವುವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು

ಎಚ್.ಡಿ.ಕೋಟೆಯಿಂದಲೇ ದಸರಾಕ್ಕೆ ಆನೆಗಳನ್ನು ಕರೆತರಲಾಗುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಇದಕ್ಕೆ ಕಾರಣವೂ ಇದೆ. ಅದು ಏನೆಂದರೆ ಮಹಾರಾಜರ ಕಾಲದಲ್ಲಿ ಹಾಗೂ ಆನಂತರ 1972ರವರೆಗೂ ಎಚ್.ಡಿ.ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ ಕಾಡಾನೆಗಳನ್ನು ಖೆಡ್ಡಾ ಮೂಲಕ ಹಿಡಿದು ಪಳಗಿಸುವ ಕಾರ್ಯವನ್ನು ಮಾಡಲಾಗುತ್ತಿತ್ತು. ಹೀಗಾಗಿ ಪಳಗಿದ ಅತ್ಯುತ್ತಮ ಆನೆಗಳನ್ನು ಇಲ್ಲಿಂದ ಮೈಸೂರು ದಸರಾಕ್ಕೆ ಕರೆತರಲಾಗುತ್ತಿತ್ತು.

 ಹೆಗ್ಗಡದೇವನಿಂದ ಬಂದ ಹೆಸರು

ಹೆಗ್ಗಡದೇವನಿಂದ ಬಂದ ಹೆಸರು

ಎಚ್.ಡಿ.ಕೋಟೆ ತಾಲೂಕು ವನ ಸಂಪತ್ತಿನಿಂದ ಕೂಡಿದ ತಾಲೂಕು ಆಗಿದ್ದು, ಮೈಸೂರಿಗೆ ಮುಕುಟ ಮಣಿಯೂ ಹೌದು. ಇಲ್ಲಿಗೆ ಎಚ್.ಡಿ.ಕೋಟೆ ಎಂಬ ಹೆಸರು ಹೇಗೆ ಬಂತು ಎಂಬುದನ್ನು ನೋಡುವುದಾದರೆ, ಮೊದಲಿಗೆ ಇಲ್ಲಿಗೆ ಪೊನ್ನಾಟ ಎಂಬ ಹೆಸರಿತ್ತೆಂದೂ ನಂತರ ಮೈಸೂರು ಮಹಾರಾಜರ ಸಾಮಂತನಾದ ಹೆಗ್ಗಡದೇವನು ಇಲ್ಲಿ 1622 ಚದರ ಕಿ.ಮೀ. ವಿಸ್ತೀರ್ಣದ ಕಂದಕಗಳನ್ನು ನಿರ್ಮಿಸಿ ಈ ಪ್ರದೇಶದ ಸುತ್ತಲೂ ಮಣ್ಣಿನಿಂದ ಕೋಟೆಯನ್ನು ಕಟ್ಟಿದನು ಎಂದು ಹೇಳಲಾಗಿದೆ.

ಮುಂದೆ ಹೆಗ್ಗಡದೇವನು ಕಟ್ಟಿದ ಕೋಟೆಯ ಕಾರಣಕ್ಕೆ ಹೆಗ್ಗಡದೇವನಕೊಟೆ ಎಂದು ಕರೆಯಿಸಿಕೊಂಡಿತು. ಮುಂದೆ ಸಂಕ್ಷಿಪ್ತ ರೂಪ ತಾಳಿ ಎಚ್.ಡಿ.ಕೋಟೆಯಾಯಿತು ಎನ್ನಲಾಗಿದೆ. ಎಚ್.ಡಿ.ಕೋಟೆ ಪ್ರದೇಶವನ್ನು ಮೈಸೂರು ಮಹಾರಾಜರಿಗೂ ಮೊದಲು ಹೊಯ್ಸಳರು ಮತ್ತು ವಿಜಯನಗರ ಅರಸರು ಆಳಿದ್ದರಂತೆ. ಇದಕ್ಕೆ ನಿದರ್ಶನವಾಗಿ ಐತಿಹಾಸಿಕ ದಾಖಲೆ, ಶಾಸನಗಳನ್ನು ನಾವು ಕಾಣಬಹುದಾಗಿದೆ.

 ಮಹಾರಾಜರಿಗೆ ಅಚ್ಚುಮೆಚ್ಚಿನ ತಾಣ

ಮಹಾರಾಜರಿಗೆ ಅಚ್ಚುಮೆಚ್ಚಿನ ತಾಣ

ಇನ್ನು ಮೈಸೂರು ಮಹಾರಾಜರುಗಳಿಗೆ ಎಚ್.ಡಿ.ಕೋಟೆ ಅಚ್ಚುಮೆಚ್ಚಿನ ತಾಣವಾಗಿತ್ತು. ಇಲ್ಲಿನ ವನಸಿರಿಯ ನಡುವೆ ಶಿಕಾರಿ ನಡೆಸುವುದು ಹವ್ಯಾಸವಾಗಿತ್ತು. ಹೀಗಾಗಿಯೇ ಶಿಕಾರಿಗೆ ಬಂದಾಗ ಉಳಿದುಕೊಳ್ಳಲೆಂದೇ ಆ ಕಾಲದಲ್ಲಿ ಇವತ್ತಿನ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದ ಕಾರಾಪುರದಲ್ಲಿ ಬಂಗಲೆಯೊಂದನ್ನು ನಿರ್ಮಿಸಿದ್ದರು. ಶಿಕಾರಿಗೆ ಬಂದಾಗಲೆಲ್ಲ ಇಲ್ಲಿ ಉಳಿದುಕೊಂಡು ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಕಾಲ ಕಳೆಯುತ್ತಿದ್ದರು. ಮಹಾರಾಜರು ನಿರ್ಮಿಸಿದ ಬಂಗಲೆ ಮಹಾರಾಜ ಬಂಗಲೆಯಾಗಿಯೇ ಹೆಸರುವಾಸಿಯಾಗಿತ್ತು. ಆದರೆ ಇವತ್ತು ಈ ಬಂಗಲೆ "ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್' ಆಗಿದೆ.

ಅವತ್ತಿನ ರುಚಿಯಲ್ಲೇ ಇವತ್ತಿನ ಮೈಸೂರ್ ಪಾಕ್... ಇದೇ ಇಲ್ಲಿನ ಸ್ಪೆಷಲ್ಅವತ್ತಿನ ರುಚಿಯಲ್ಲೇ ಇವತ್ತಿನ ಮೈಸೂರ್ ಪಾಕ್... ಇದೇ ಇಲ್ಲಿನ ಸ್ಪೆಷಲ್

 ಎಚ್.ಡಿ.ಕೋಟೆ ಬಗ್ಗೆ...

ಎಚ್.ಡಿ.ಕೋಟೆ ಬಗ್ಗೆ...

ಎಚ್.ಡಿ.ಕೋಟೆ ಬಗ್ಗೆ ಹೇಳುವುದಾದರೆ, ಇಡೀ ಏಷ್ಯಾ ಖಂಡದಲ್ಲಿಯೇ ಹೆಚ್ಚು ಆನೆಗಳನ್ನು ಹೊಂದಿರುವ ತಾಲೂಕಾಗಿದೆ. ಜತೆಗೆ ಇಲ್ಲಿ ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಹಂದಿ, ಮುಳ್ಳುಹಂದಿ, ಮೊಸಳೆ, ಜಿಂಕೆ, ನವಿಲು, ಸಾರಂಗ ಸೇರಿದಂತೆ ಹಲವು ರೀತಿಯ ವನ್ಯಜೀವಿಗಳಿಗೆ ಇಲ್ಲಿನ ಅರಣ್ಯ ಪ್ರದೇಶ ಆಶ್ರಯ ತಾಣವಾಗಿದೆ. ಇಲ್ಲಿನ ಅರಣ್ಯಗಳಲ್ಲಿ ಸಾಗುವಾನಿ, ತೇಗ, ಗಂಧ, ಬೀಟೆ, ಹೊನ್ನೆ, ಬಿಲ್ವಾರ ಮುಂತಾದ ಬೆಲೆ ಬಾಳುವ ಮರಗಳಿವೆ. ಹಲವು ಸಿನಿಮಾಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಅದರಲ್ಲಿ ಮಾಸ್ತಿಯವರ "ಕಾಕನಕೋಟೆ", ಶ್ರೀ ಕೃಷ್ಣ ಆಲನಹಳ್ಳಿಯವರ 'ಕಾಡು', ಎಂ.ಪಿ. ಶಂಕರ್ ಅವರ 'ಕಾಡಿನ ರಹಸ್ಯ' ಮತ್ತು 'ಕಾಡಿನ ರಾಜ' ಹಾಗು 'ಗಂಧದಗುಡಿ' ಪ್ರಮುಖ ಸಿನಿಮಾಗಳಾಗಿವೆ.

 ಒಂದೊಳ್ಳೆಯ ಪ್ರವಾಸಿ ತಾಣವೂ ಹೌದು

ಒಂದೊಳ್ಳೆಯ ಪ್ರವಾಸಿ ತಾಣವೂ ಹೌದು

ನಿಸರ್ಗದ ಸೌಂದರ್ಯವನ್ನು ಮಡಿಲಲ್ಲಿಟ್ಟುಕೊಂಡಿರುವ ಎಚ್.ಡಿ.ಕೋಟೆ ಒಂದೊಳ್ಳೆಯ ಪ್ರವಾಸಿ ತಾಣವಾಗಿದೆ. ಕಾರಾಪುರದ ಮಹಾರಾಜ ಬಂಗಲೆಯ ಬಳಿಯೇ ವನ್ಯ ಮೃಗಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕೆರೆಯೊಂದರ ಸನಿಹ ಕಟ್ಟಿರುವ ವೀಕ್ಷಣಾಗೋಪುರ, ಬೀಚನಹಳ್ಳಿಯಲ್ಲಿ 1975ರಲ್ಲಿ ನಿರ್ಮಿಸಿರುವ "ಕಬಿನಿ ಜಲಾಶಯ', 1957ರಲ್ಲಿ ನಿರ್ಮಿಸಿರುವ "ನುಗು ಜಲಾಶಯ" ಮತ್ತು ತಾರಕದಲ್ಲಿರುವ "ತಾರಕ ಜಲಾಶಯ" ಹಾಗೂ ಹೆಬ್ಬಳ್ಳದಲ್ಲಿರುವ "ಹೆಬ್ಬಳ್ಳ ಜಲಾಶಯ" ಇವೆಲ್ಲವೂ ನಿಸರ್ಗ ಪ್ರೇಮಿಗಳ ಮನಸೆಳೆಯುತ್ತವೆ.

1970ರ ದಶಕದ ಈ ಮಳಿಗೆಯಲ್ಲಿ ಈಗಲೂ 1970ರ ದಶಕದ ಈ ಮಳಿಗೆಯಲ್ಲಿ ಈಗಲೂ "ನಂಜನಗೂಡು ರಸಬಾಳೆ"ಗೆ ಡಿಮ್ಯಾಂಡ್

 ಭಕ್ತರ ಸೆಳೆಯುತ್ತಿರುವ ದೇಗುಲಗಳು

ಭಕ್ತರ ಸೆಳೆಯುತ್ತಿರುವ ದೇಗುಲಗಳು

ಇದಲ್ಲದೆ ಪುರಾತನ ಕಾಲದ ವರದರಾಜಸ್ವಾಮಿ ದೇವಸ್ಥಾನ, ರಾಮಾನುಜಾಚಾರ್ಯರು ಕಟ್ಟಿಸಿದರೆಂದು ಹೇಳಲಾಗುವ ಕೆ. ಬೆಳತ್ತೂರಿನಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯ, ಕಪಿಲಾ ನದಿದಂಡೆಯ ಮೇಲಿರುವ ರಾಜರಾಜ ಚೋಳ ನಿರ್ಮಿಸಿದನೆಂದು ಹೇಳಲಾಗುವ ಎಚ್. ಮಟಕೆರೆಯ ರಾಮಲಿಂಗೇಶ್ವರ ದೇಗುಲ, ಭೀಮನಕೊಲ್ಲಿಯ ಮಹದೇಶ್ವರಸ್ವಾಮಿ ದೇವಸ್ಥಾನ ಹೀಗೆ ಹತ್ತಾರು ದೇವಸ್ಥಾನಗಳು ಎಚ್.ಡಿ.ಕೋಟೆಯತ್ತ ಭಕ್ತರನ್ನು ಸೆಳೆಯುವಂತೆ ಮಾಡಿದೆ. ಒಟ್ಟಾರೆ ಎಚ್.ಡಿ.ಕೋಟೆ ಮೈಸೂರು ಜಿಲ್ಲೆಯಲ್ಲಿರುವ ತಾಲೂಕುಗಳ ಪೈಕಿ ತನ್ನದೇ ಆದ ಇತಿಹಾಸ ಮತ್ತು ಮಹತ್ವ ಹೊಂದಿರುವ ತಾಲೂಕಾಗಿ ಮೈಸೂರು ಮಹಾರಾಜರ ನಿಕಟ ಸಂಬಂಧದಲ್ಲಿದ್ದ ಊರು ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
As mysuru dasara is near, it is important to know the significance of the relationship between the Mysure kings and the HD kote
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X