ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾ ಅಂದ್ರೆ ಬರೀ ದಸರಾ ಅಲ್ಲ!; ಅದರಾಚೆಗೆ ಸಾಂಸ್ಕೃತಿಕ ಐತಿಹ್ಯವಿದೆ

|
Google Oneindia Kannada News

ಮೈಸೂರು, ಅಕ್ಟೋಬರ್ 11: ದಸರಾ ಎಲ್ಲೆಡೆ ನಡೆದರೂ ಮೈಸೂರು ದಸರಾಕ್ಕೊಂದು ಐತಿಹಾಸಿಕ ಮೆರುಗು ಇದೆ. ಹೀಗಾಗಿಯೇ ಅದು ವಿಶ್ವವಿಖ್ಯಾತಿಯಾಗಿದೆ. ದಸರಾ ಅಂದರೆ ನಮ್ಮ ಕಣ್ಣಿಗೆ ಕಾಣುವ ಝಗಮಗಿಸುವ ವಿದ್ಯುದ್ದೀಪದ ಅಲಂಕಾರ, ಜಂಬೂಸವಾರಿ ಮಾತ್ರವಲ್ಲದೆ ಅದರಾಚೆಗೆ ಕರ್ನಾಟಕದ ಸಂಸ್ಕೃತಿಯೇ ತೆರೆದುಕೊಳ್ಳುತ್ತದೆ.

ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ ಹೇಳಿ. ನಾಲ್ಕು ಶತಮಾನಗಳ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ, ಬೆಡಗು ಭಿನ್ನಾಣವಿದೆ. ಇದು ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿಯೊಂದಿಗೆ ಹಳ್ಳಿಗಳಿಂದ ಆರಂಭವಾಗಿ ಜಾಗತಿಕ ಜಗುಲಿಯ ಎತ್ತರಕ್ಕೆ ದಸರಾ ಬೆಳೆದು ನಿಂತಿರುವ ಜನಮನದ ಜನತಾ ದಸರಾ. ಮೈಸೂರು ದಸರಾವನ್ನು ಹೊಗಳಲು ಪದಗಳಿಲ್ಲ. ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜೆಯ ನಂತರ ಹತ್ತನೇ ದಿನದ "ವಿಜಯದಶಮಿ' ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತದೆ. ವಿಶ್ವದ ಎಲ್ಲೆಡೆಯಿಂದ ಜನ ಬರುತ್ತಾರೆ. ಹಳ್ಳಿಹಳ್ಳಿಗಳಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟುತ್ತದೆ. ನಾಡಹಬ್ಬಕ್ಕಾಗಿ ಅರಮನೆ, ಚಿನ್ನದ ಸಿಂಹಾಸನ, ಚಿನ್ನ- ಬೆಳ್ಳಿಯ ಅಂಬಾರಿಗಳು, ದೇವರುಗಳು ಸಿದ್ಧಗೊಂಡರೆ, ಮೈಸೂರಿನ ಗಲ್ಲಿಗಲ್ಲಿಗಳಲ್ಲೂ ಜನ ಹಿತ್ತಾಳೆ, ಕಂಚಿನ ದೇವರುಗಳ ವಿಗ್ರಹ ತೊಳೆದು ಆಯುಧ ಪೂಜೆಗೆ ಸಜ್ಜಾಗುತ್ತಾರೆ.

 ಬಡವ- ಬಲ್ಲಿದರೆನ್ನದ ದಸರಾ ಸಂಭ್ರಮ

ಬಡವ- ಬಲ್ಲಿದರೆನ್ನದ ದಸರಾ ಸಂಭ್ರಮ

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆರಂಭವಾಗುವ ದಸರಾ ಆ ಒಂಭತ್ತು ರಾತ್ರಿ- ಹಗಲು ಮಿಂಚಿನಂತೆ ಮೆರೆಯುತ್ತದೆ. ಇತಿಹಾಸದ ಕಾಲಘಟ್ಟಗಳಿಗೆ ಹೊಸತು ಕೊಂಡಿಯನ್ನು ಸೇರಿಸಿ, ಮಕ್ಕಳಿಂದ ಮುದುಕರವರೆಗೂ, ಸಿರಿವಂತರಿಂದ ಬಡವರವರೆಗೂ ಎಲ್ಲರಿಗೂ ಸಂಭ್ರಮವನ್ನು ಉಣಬಡಿಸುತ್ತದೆ. ಐತಿಹಾಸಿಕ ಪುರಾಣ ಕಥೆ ಜೊತೆಗೆ 1399ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿದವರಾಗಿ ಕಾಣುತ್ತಾರೆ.

ರಾಜವಂಶದ ಯದುರಾಯ, ಕೃಷ್ಣರಾಯರು ಸ್ಥಳೀಯನಾಗಿದ್ದ, ಹದಿನಾಡಿನ ಪಾಳೆಯಗಾರನಾಗಿದ್ದ ಮಹಾಶೂರ ಕಾರುಗಳ್ಳಿ ಮಾರನಾಯಕನನ್ನು ಕೊಂದು ಹದಿನಾಡಿನ ಅರಸರಾಗುತ್ತಾರೆ. ದಳಪತಿ ಮಾರನಾಯಕ ಕೆಳ ಜಾತಿಯಾಗಿದ್ದು, ಹದಿನಾಡಿನ ಅರಸರ ಮಗಳನ್ನು ಕೇಳಿದನೆಂಬ ವಿಚಾರ ಹೊಸತೊಂದು ಸಾಮ್ರಾಜ್ಯಕ್ಕೆ ಕಾರಣವಾಗುತ್ತದೆ. ಇಂತಹ ಗೆಲುವು ವಿಜಯದಶಮಿಯ ಕಾರಣಕ್ಕೂ ಸೇರುತ್ತದೆ.

 ಮಗ್ಗುಲು ಬದಲಿಸುತ್ತಾ ಸಾಗುವ ದಸರಾ

ಮಗ್ಗುಲು ಬದಲಿಸುತ್ತಾ ಸಾಗುವ ದಸರಾ

ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ. 'ಗಂಡಭೇರುಂಡ' ಪಕ್ಷಿ ಲಾಂಛನವಾಗುತ್ತದೆ. 26ಕ್ಕೂ ಹೆಚ್ಚು ಒಡೆಯರ್ 1399ರಿಂದ 1970ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ. ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ 'ಮೈಸೂರು ದಸರಾ' ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಸಾಗುತ್ತಿರುವುದು ವಿಶೇಷವಾಗಿದೆ.

 ಅರಸರು, ದಿವಾನರ ಸುದೀರ್ಘವಾದ ಆಳ್ವಿಕೆ

ಅರಸರು, ದಿವಾನರ ಸುದೀರ್ಘವಾದ ಆಳ್ವಿಕೆ

ಅರಸರು, ದಿವಾನರ ಸುದೀರ್ಘವಾದ ಆಳ್ವಿಕೆಯಿಂದ ಮೈಸೂರು ಒಂದು ಮಹಾ ಸಂಸ್ಥಾನವಾದದ್ದೂ ಹೆಚ್ಚುಗಾರಿಕೆ. ಬ್ರಿಟೀಷರ ಕಾಲದಲ್ಲಿ ಮೈಸೂರು ಒಂಭತ್ತು ಜಿಲ್ಲೆಗಳಿಂದ ಕೂಡಿತ್ತು. ಕರ್ನಾಟಕ ಏಕೀಕರಣದ ನಂತರ 1ನೇ ನವೆಂಬರ್ 1956ರಲ್ಲಿ ಮೈಸೂರು ರಾಜ್ಯವಾಯಿತು. ದೇವರಾಜ ಅರಸರು ಮುಖ್ಯಮಂತ್ರಿಯಾದ ಕಾಲಕ್ಕೆ 1-11-1973ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಇದರೊಟ್ಟಿಗೆ ಮೈಸೂರು ಮಾತ್ರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿಯೇ ಉಳಿಯಿತು.

 ಅರಮನೆಯಿಂದ ಮನೆಮನೆಗೆ ದಸರಾ ಸಂಭ್ರಮ

ಅರಮನೆಯಿಂದ ಮನೆಮನೆಗೆ ದಸರಾ ಸಂಭ್ರಮ

ಸರಿಸುಮಾರು 410 ದಸರಾಗಳು ಬಂದು ಹೋಗಿವೆ. ಆದರೆ ಕಳೆದ ದಸರಾದ ಗುಂಗಿನೊಂದಿಗೆ ನಾಳಿನ ದಸರೆಗೆ ಜನ ಮುಂದಡಿ ಇಡುವುದು ಮಾಮೂಲಿ. ಕಳೆದ ವರ್ಷದಿಂದ ಕೊರೊನಾ ಕಾರಣಕ್ಕೆ ದಸರಾ ಸರಳವಾಗಿದೆ. ಆದರೆ ಜನಸಾಮಾನ್ಯರು ಮಾತ್ರ ತಮ್ಮ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಒಂದಷ್ಟು ಪೂಜೆ ಹಬ್ಬ ಮಾಡಿ ಖುಷಿ ಪಡುತ್ತಿದ್ದಾರೆ. ಅರಮನೆಯಿಂದ ಮನೆಮನೆಗೆ ದಸರಾ ಸಂಭ್ರಮ ತೆರಳಿದೆ. ಸಿರಿವಂತರು ಬೊಂಬೆ ಪ್ರದರ್ಶನ, ತೋಟಗಳ ಹಬ್ಬ ಮಾಡುತ್ತಾರೆ.

 ಬಡಜನರು ಪೂರ್ವಿಕರನ್ನು ಸ್ಮರಿಸುತ್ತಾರೆ

ಬಡಜನರು ಪೂರ್ವಿಕರನ್ನು ಸ್ಮರಿಸುತ್ತಾರೆ

ಕೇರಿಕೇರಿಯ ಬಡಜನರು ಪೂರ್ವಿಕರನ್ನು ಸ್ಮರಿಸಿ ಹಬ್ಬ (ಪಿತೃಪಕ್ಷ) ಮಾಡುತ್ತಾರೆ. ಬಾಳೆ ಎಲೆಯ ಮೇಲೆ ತಾಮ್ರ, ಹಿತ್ತಾಳೆ ಅಥವಾ ಮರದಿಂದ ಮಾಡಿದ ದೇವರುಗಳ ಹಾಗೂ ಫೋಟೋ ಇಟ್ಟು ಪೂಜಿಸಿ ಕೃತಾರ್ಥರಾಗುತ್ತಾರೆ. ಒಕ್ಕಲು ಮನೆತನದ ಜನ, ವ್ಯಾಪಾರಸ್ಥರು, ಉದ್ದಿಮೆದಾರರು ಆಯುಧ ಪೂಜೆಯೊಂದಿಗೆ ಇಡೀ ದಸರಾದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ. ನವರಾತ್ರಿಯ ಒಂಭತ್ತು ದಿನವೂ ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ. ಜೊತೆಗೆ ಅರಮನೆ ಸೇರಿದಂತೆ ವಿವಿಧೆಡೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

 ಈ ಬಾರಿ ದಸರಾ ನಗರದ ಪ್ರದಕ್ಷಿಣೆಗಷ್ಟೆ ಸೀಮಿತ

ಈ ಬಾರಿ ದಸರಾ ನಗರದ ಪ್ರದಕ್ಷಿಣೆಗಷ್ಟೆ ಸೀಮಿತ

ಸದ್ಯ ದಸರಾ ಸಂಭ್ರಮ ವಿದ್ಯುದ್ದೀಪದ ಬೆಳಕಿಗೆ ಸೀಮಿತವಾಗಿರುವುದರಿಂದ ಸಂಜೆಯಾಗುತ್ತಿದ್ದಂತೆಯೇ ಮನೆ ಮಂದಿಯೆಲ್ಲಾ ಒಟ್ಟಾಗಿ ನಗರ ಪ್ರದಕ್ಷಿಣೆ ಹೊರಡುವುದು ಕಾಣಿಸುತ್ತಿದೆ. ಮನೆಗಳು, ಕಟ್ಟಡಗಳು, ವೃತ್ತಗಳು ರಸ್ತೆಗಳು ವಿದ್ಯುದ್ದೀಪಗಳಿಂದ ಮಿಂಚುವುದನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಅದು ಏನೇ ಇರಲಿ ಮೈಸೂರು ದಸರಾ ಹೀಗೆಯೇ ಇರಲ್ಲ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋದರೆ ಮತ್ತೆ ಅದೇ ವೈಭವ, ಸಂಭ್ರಮ, ಸಡಗರ ಮೇಳೈಸಲಿದೆ.

English summary
Dasara festival celebrate everywhere, but Mysuru Dasara has a historical glaze of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X