• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ರಾಜವಂಶದ 550 ವರ್ಷಗಳ ರೋಚಕ ಇತಿಹಾಸ

|

ಮೈಸೂರು, ಅಕ್ಟೋಬರ್ 22: ಇವತ್ತು ಮೈಸೂರು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಹಲವು ವಿಶೇಷತೆಗಳಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದರೆ ಅದಕ್ಕೆ ದೀರ್ಘಕಾಲದವರೆಗೆ ಆಡಳಿತ ಮಾಡಿದ ಮಹಾರಾಜರು ಕಾರಣಕರ್ತರಾಗುತ್ತಾರೆ.

ಸುಮಾರು 550 ವರ್ಷಗಳ ಒಂದು ರಾಜವಂಶ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಆದರೂ ಶತ್ರುಗಳೊಂದಿಗೆ ಹೋರಾಡುತ್ತಾ ಮೈಸೂರು ರಾಜ್ಯವನ್ನು ಕಟ್ಟಿ ಬೆಳೆಸಿದ್ದಲ್ಲದೆ, ಸಮೃದ್ಧ ನಾಡನ್ನಾಗಿ ಮಾಡಿದ್ದು, ರಾಜರ ಆಡಳಿತದ ವೈಖರಿಯನ್ನು ತೋರಿಸುತ್ತದೆ.

ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು...

ಇತಿಹಾಸದ ಪುಟಗಳಲ್ಲಿ ನೋಡುವುದಾದರೆ ಸುಮಾರು 550 ವರ್ಷಗಳ ಕಾಲ ಸುಮಾರು 25 ಮಹಾರಾಜರು ಮೈಸೂರು ಸಂಸ್ಥಾನವನ್ನು ಆಳಿರುವುದು ಕಂಡು ಬರುತ್ತದೆ. ಮೈಸೂರು ರಾಜರ ಆಡಳಿತವು 1399 ರಿಂದ ಆರಂಭವಾಗುತ್ತದೆಯಲ್ಲದೆ, ಯದುರಾಯರನ್ನು ಯದುವಂಶದ ಸ್ಥಾಪಕರೆಂದು ಹೇಳಲಾಗುತ್ತದೆ. ಉತ್ತರದ ದ್ವಾರಕಾಪಟ್ಟಣದ ರಾಜದೇವನ ಮಗನೇ ಯದುರಾಯ. ಯದುರಾಯರು ತನ್ನ ಸಹೋದರ ಕೃಷ್ಣರಾಯರೊಂದಿಗೆ ಸ್ವಾಮಿ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡುವ ಸಲುವಾಗಿ ಮೇಲುಕೋಟೆಗೆ ಬರುತ್ತಾರೆ. ಅಲ್ಲಿಂದ ಹಿಂತಿರುಗಿ ಕಾವೇರಿ ನದಿ ದಾಟಿ ಮೈಸೂರನ್ನು ಸೇರುತ್ತಾರೆ.

ಪಾಳೆಗಾರನ ಕೊಂದು ಯದುವಂಶ ಸ್ಥಾಪನೆ

ಪಾಳೆಗಾರನ ಕೊಂದು ಯದುವಂಶ ಸ್ಥಾಪನೆ

ಅದೇ ವೇಳೆಯಲ್ಲಿ ಮೈಸೂರನ್ನು ಆಳುತ್ತಿದ್ದ ಪಾಳೇಗಾರ ಚಾಮರಾಜ ತೀರಿಕೊಂಡಿದ್ದರಿಂದ ಅವರ ಹೆಂಡತಿ ಹಾಗೂ ಸುಂದರ ಮಗಳಿಗೆ ಮೈಸೂರು ಸೀಮೆಯ ದಳವಾಯಿಯಾಗಿದ್ದ ಕೊರಗಳ್ಳಿ ಮಾರನಾಯಕ ಹಿಂಸೆ ನೀಡುತ್ತಿದ್ದುದಲ್ಲದೆ ಪುತ್ರಿ ದೇವಾಜಮ್ಮಣಿಯನ್ನು ತನಗೆ ವಿವಾಹ ಮಾಡಿಕೊಡುವಂತೆ ಪೀಡಿಸುತ್ತಿದ್ದನು. ಇದನ್ನು ತಿಳಿದ ಯದುರಾಯರು ಮಹಾರಾಣಿಯ ಸಹಾಯಕ್ಕೆ ಬರುವುದರೊಂದಿಗೆ ಮಾರನಾಯಕನನ್ನು ಕೊಲ್ಲುತ್ತಾರೆ. ಈ ವೇಳೆ ಮಹಾರಾಣಿ ತನ್ನ ಪುತ್ರಿ ದೇವಾಜಮ್ಮಣಿಯನ್ನು ಯದುರಾಯರಿಗೆ ಕೊಟ್ಟು ಮದುವೆ ಮಾಡುತ್ತಾರೆ. ಹೀಗೆ ಮೈಸೂರಿನಲ್ಲಿ ಯದುವಂಶದ ಆಡಳಿತ ಶುರುವಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಯದುರಾಯರ ಬಳಿಕ ಆಡಳಿತ ಮುಂದುವರಿಕೆ

ಯದುರಾಯರ ಬಳಿಕ ಆಡಳಿತ ಮುಂದುವರಿಕೆ

ಯದುರಾಯರ ಬಳಿಕ 1423 ರಿಂದ 1459 ರವರೆಗೆ ಒಂದನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್, 1459 ರಿಂದ 1478 ರವರೆಗೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಪುತ್ರ ತಿಮ್ಮರಾಜ ಒಡೆಯರ್ ಆಡಳಿತ ನಡೆಸಿದರೆ, ನಂತರ 1478 ರಿಂದ 1513 ರವರೆಗೆ ಎರಡನೇ ಹಿರಿಯ ಚಾಮರಾಜ ಒಡೆಯರ್, 1513 ರಿಂದ 1553 ರವರೆಗೆ ಮೂರನೇ ಹಿರಿಯ ಬೆಟ್ಟದ ಚಾಮರಾಜ ಒಡೆಯರ್ ಆಡಳಿತ ನಡೆಸಿದರು.

ಮೈಸೂರು ಟಾಂಗಾವಾಲಗಳ ಮೊಗದಲ್ಲಿ ನಿರಾಸೆಯ ಕಾರ್ಮೋಡ

ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು

ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು

1553 ರಿಂದ 1572 ರವರೆಗೆ ಆಡಳಿತ ನಡೆಸಿದ ಎರಡನೆಯ ತಿಮ್ಮರಾಜ ಒಡೆಯರ್ ಮೈಸೂರನ್ನು ವಿಸ್ತರಿಸಿದರು. 1572 ರಿಂದ 1576 ರವರೆಗೆ ನಾಲ್ಕನೇ ಬೋಳಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಐದನೇ ಬೆಟ್ಟದ ಚಾಮರಾಜ ಒಡೆಯರ್ 1576 ರಿಂದ 1578 ರವರೆಗೆ ಕೇವಲ ಎರಡು ವರ್ಷಗಳ ಕಾಲ ಆಡಳಿತ ನಡೆಸಿದರಲ್ಲದೆ, ವೈರಾಗ್ಯ ತಾಳಿದ ಅವರು ಆಡಳಿತವನ್ನು ತನ್ನ ಸಹೋದರರಿಗೆ ವಹಿಸಿಕೊಟ್ಟರು.

ದಸರಾ ಆಚರಣೆ ಆರಂಭ

ದಸರಾ ಆಚರಣೆ ಆರಂಭ

ಆ ನಂತರ ಆಡಳಿತ ವಹಿಸಿಕೊಂಡ ಒಂದನೇ ರಾಜ ಒಡೆಯರ್ 1578 ರಿಂದ 1617 ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಅಂದರೆ 1610 ರಲ್ಲಿ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತಲ್ಲದೆ, ದಸರಾ ಆಚರಣೆಯೂ ಜಾರಿಗೆ ಬಂದಿತು. 1617 ರಿಂದ 1637 ರವರೆಗೆ ಆರನೇ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಮೈಸೂರು ರಾಜ್ಯ ಇನ್ನಷ್ಟು ವಿಸ್ತಾರಗೊಂಡಿತು. 1637 ರಲ್ಲಿ ಪಟ್ಟಕ್ಕೆ ಬಂದ ಇಮ್ಮಡಿರಾಜ ಒಡೆಯರ್ ವೀರರಾಗಿದ್ದರಲ್ಲದೆ ಒಂದೇ ವರ್ಷದಲ್ಲಿ ಮಲೆವರಗಂಡ, ಸಂಗೀತಲೋಲ, ವೀರ ಶೂರ, ಸಾಹಿತ್ಯ ರತ್ನಾಕರ, ಅಭಯ ಪ್ರತಾಪಾಧೀಶ್ವರ ಮುಂತಾದ ಬಿರುದು ಪಡೆದರಾದರೂ 1638 ರಿಂದ 1659 ರಣಧೀರ ಕಂಠೀರವ ನರಸರಾಜ ಒಡೆಯರ್ ಆಡಳಿತ ನಡೆಸಿದರು. ಸುಮಾರು 20 ವರ್ಷಗಳ ಕಾಲ ಆಡಳಿತ ನಡೆಸಿದರು.

ಹಲವು ಬಿರುದುಗಳ ಸರದಾರ

ಹಲವು ಬಿರುದುಗಳ ಸರದಾರ

1659 ರಿಂದ 1672 ರವರೆಗೆ ಆಡಳಿತ ನಡೆಸಿದ ದೊಡ್ಡ ದೇವರಾಜ ಒಡೆಯರ್ ಪರಾಕ್ರಮಿಯಾಗಿದ್ದು, ರಾಜಕುಲತಿಲಕ, ರಾಜಮಾರ್ತಾಂಡ, ರಾಜಾಧಿರಾಜ, ಪರಮೇಶ್ವರ ಮುಂತಾದ ಬಿರುದು ಪಡೆದುಕೊಂಡರು. 1672 ರಿಂದ 1704 ರವರೆಗೆ ರಾಜ್ಯಭಾರ ಮಾಡಿದ ಚಿಕ್ಕದೇವರಾಜ ಒಡೆಯರ್ ಪಂಡಿತರೂ, ಮಹಾಪರಾಕ್ರಮಿಯೂ ಆಗಿದ್ದರು. ಇವರು ಶಿವಾಜಿ ಮತ್ತು ಔರಂಗಜೇಬನ ಸಮಕಾಲೀನರಾಗಿದ್ದರು. ರಾಜ್ಯಭಾರ ವಹಿಸಿಕೊಂಡ ಐದು ದಿನದಲ್ಲಿ ದಂಡೆತ್ತಿ ಬಂದ ಮಧುರೆಯ ಚೊಕ್ಕನಾಯಕನೆಂಬ ಪಾಳೇಗಾರನನ್ನು ಎದುರಿಸಿ ಜಯಪಡೆದರಲ್ಲದೆ, ಸತ್ಯಮಂಗಲ ಮತ್ತು ಧರ್ಮಪುರಂ ಎಂಬ ಎರಡು ಚಿಕ್ಕ ರಾಜ್ಯವನ್ನು ತಮ್ಮ ವಶ ಮಾಡಿಕೊಂಡರು.

ಕಪ್ಪಕಾಣಿಕೆ ಸಲ್ಲಿಸಿ ಸಂಧಾನ

ಕಪ್ಪಕಾಣಿಕೆ ಸಲ್ಲಿಸಿ ಸಂಧಾನ

ಚಿಕ್ಕದೇವರಾಜ ಒಡೆಯರ್ ಪುತ್ರರಾದ ಕಂಠೀರವ ಮಹಾರಾಜ ಒಡೆಯರ್ 1704 ರಿಂದ 1713 ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಔರಂಗಜೇಬನ ಆಡಳಿತದಲ್ಲಿದ್ದ ದಕ್ಷಿಣ ಭಾರತದ ಗೌರ್ನರ್ ಶ್ರೀರಂಗಪಟ್ಟಣದ ಮೇಲೆ ದಂಡೆತ್ತಿ ಬಂದಿದ್ದರು. ಈ ಸಂದರ್ಭ ಕಂಠೀರವ ಮಹಾರಾಜ ಒಡೆಯರ್ ಒಂದೂವರೆ ಕೋಟಿ ರೂ.ಗಳ ಕಪ್ಪಕಾಣಿಕೆ ಸಲ್ಲಿಸಿ ಸಂಧಾನ ಮಾಡಿಕೊಂಡರು. ಇವರ ಪುತ್ರ ದೊಡ್ಡ ಕೃಷ್ಣರಾಜ ಒಡೆಯರ್ ಕೇವಲ ಹನ್ನೆರಡು ವರ್ಷಕ್ಕೆ ಪಟ್ಟಕ್ಕೇರಿದರು. 1714 ರಿಂದ 1732 ರವರೆಗೆ ಆಡಳಿತ ನಡೆಸಿದರು. ಇವರ ಕಾಲದಲ್ಲಿ ನಿಜಾಂ, ಆರ್ಕಾಟ್ ನವಾಬ್, ಸಿರಾ, ಕಡಪ, ಕರ್ನೂಲ್, ಸವಾನೂರ್ ಮತ್ತು ಇಕ್ಕೇರಿ ರಾಜರು ಒಟ್ಟಾಗಿ ಯುದ್ಧಕ್ಕೆ ಬಂದಿದ್ದರಿಂದ ಒಂದು ಕೋಟಿ ಕಾಣಿಕೆ ನೀಡಿ ಸಂಧಾನ ಮಾಡಿಕೊಳ್ಳಲಾಯಿತು.

ಫ್ರೆಂಚರ ಸಹಾಯ ಪಡೆದ ರಾಜರು

ಫ್ರೆಂಚರ ಸಹಾಯ ಪಡೆದ ರಾಜರು

ದೊಡ್ಡ ಕೃಷ್ಣರಾಜ ಒಡೆಯರ್ ಮಕ್ಕಳಿಲ್ಲದ ಕಾರಣ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡರು. ಚಾಮರಾಜ ಒಡೆಯರ್ 1732 ರಿಂದ 1734 ರವರೆಗೆ ರಾಜ್ಯವಾಳಿದರು. ಅವರ ಬಳಿಕ ಎರಡನೇ ಇಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದು 1734 ರಿಂದ 1766 ರವರೆಗೆ ರಾಜ್ಯಾಭಾರ ನಡೆಸಿದರು. ಇವರ ಕಾಲದಲ್ಲಿ ಶತ್ರುಗಳ ಸೈನ್ಯ ಆಗಾಗ್ಗೆ ಯುದ್ಧ ಸಾರುತ್ತಿದ್ದುದನ್ನು ಗಮನಿಸಿ ಫ್ರೆಂಚರ ಸಹಾಯ ಪಡೆದು ಮೈಸೂರಿನ ಗಡಿಯನ್ನು ಭದ್ರಪಡಿಸಿಕೊಂಡರು. ಇಮ್ಮಡಿ ಕೃಷ್ಣರಾಜ ಒಡೆಯರ್ ನಂತರ ನವಾಬ್ ಹೈದರಾಲಿ ಖಾನರ ಸಲಹೆ ಮೇರೆಗೆ ಚಲುವಾಜಮ್ಮಣ್ಣಿ ಅವರು ನಂಜರಾಜ ಒಡೆಯರ್‌ಗೆ ಪಟ್ಟ ಕಟ್ಟಿದರು ಅವರು 1766 ರಿಂದ 1770 ರವರೆಗೆ ರಾಜಭಾರ ನಡೆಸಿದರು.

ಮೈಸೂರಿಗೆ ರಾಜಧಾನಿ ವರ್ಗಾವಣೆ

ಮೈಸೂರಿಗೆ ರಾಜಧಾನಿ ವರ್ಗಾವಣೆ

1770 ರಿಂದ 1776 ರವರೆಗೆ ಎಂಟನೇ ಬೆಟ್ಟದ ಚಾಮರಾಜ ಒಡೆಯರ್ ಆಡಳಿ ನಡೆಸಿದರಾದರೂ ಹೈದರಾಲಿಯೇ ಸರ್ವಾಧಿಕಾರಿಯಾಗಿದ್ದನು. 1776 ರಿಂದ 1796 ರವರೆಗೆ ಒಂಬತ್ತನೇ ಖಾಸಾ ಚಾಮರಾಜ ಒಡೆಯರ್ ಆಡಳಿತ ನಡೆಸಿದರು. ಇವರ ಕಾಲದಲ್ಲಿ ಬಹಳಷ್ಟು ಐತಿಹಾಸಿಕ ಘಟನೆಗಳು ನಡೆದವು. ಟಿಪ್ಪು ಸುಲ್ತಾನ್ ರಾಜ ಕುಟುಂಬವನ್ನು ಅರಮನೆಯಿಂದ ಸ್ಥಳಾಂತರಿಸಿದನು. ಆಂಗ್ಲರೊಡನೆ ನಡೆದ ಯುದ್ಧದಲ್ಲಿ ಟಿಪ್ಪು ಮೃತಪಟ್ಟ ಬಳಿಕ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು.

ಕೊನೆಯಾದ ರಾಜ ಆಡಳಿತ

ಕೊನೆಯಾದ ರಾಜ ಆಡಳಿತ

ಮೂರನೇ ಮುಮ್ಮಡಿ ಕೃಷ್ಣರಾಜ ಒಡೆಯರ್ 1799 ರಿಂದ 1863 ರವರೆಗೆ ಆಡಳಿತ ನಡೆಸಿದರು. ಇವರ ಹುಟ್ಟು ಹೆಸರು ನಂಜರಾಜ ಒಡೆಯರ್. ನಂಜುಂಡೇಶ್ವರ ಅನುಗ್ರಹದಿಂದ ಜನಿಸಿದ್ದರಿಂದ ಆ ಹೆಸರು ಇಡಲಾಯಿತು. 1863 ರಿಂದ 1894 ರವರೆಗೆ ರಾಜ್ಯವಾಳಿದ ಚಾಮರಾಜೇಂದ್ರ ಒಡೆಯರ್ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದತ್ತುಪುತ್ರರಾಗಿದ್ದು, 18ನೇ ವಯಸ್ಸಲ್ಲೇ ರಾಜ್ಯಭಾರವನ್ನು ವಹಿಸಿಕೊಂಡಿದ್ದರು. 1888 ರಲ್ಲಿ ಜನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1940ರಲ್ಲಿ ಕಾಲವಾದರು. 1919 ರಲ್ಲಿ ಜನಿಸಿದ ಜಯಚಾಮರಾಜೇಂದ್ರ ಒಡೆಯರ್‌ಗೆ 1940 ರಲ್ಲಿ ಪಟ್ಟಾಭಿಷೇಕ ನಡೆಯಿತು. ಇವರು ರಾಜ್ಯಭಾರ ವಹಿಸಿಕೊಂಡ ಏಳು ವರ್ಷಕ್ಕೆ ಭಾರತ ಸ್ವಾತಂತ್ರ್ಯವಾಯಿತು.

ರಾಜ್ಯಪಾಲರಾಗಿ ಸೇವೆ ಸಲ್ಲಿಕೆ

ರಾಜ್ಯಪಾಲರಾಗಿ ಸೇವೆ ಸಲ್ಲಿಕೆ

ಆ ನಂತರ 1950 ರಲ್ಲಿ ಜಾರಿಗೆ ಬಂದ ರಾಜ್ಯಾಂಗ ರಚನೆಯ ಪ್ರಕಾರ ರಾಜತ್ವ ಕೊನೆಗೊಂಡು ಅಖಂಡ ಭಾರತದಲ್ಲಿ ಲೀನವಾಯಿತು. ಆ ನಂತರ 1950 ರಿಂದ 1956 ರವರೆಗೆ ಜಯಚಾಮರಾಜೇಂದ್ರ ಒಡೆಯರ್ ಮೈಸೂರಿನ ಗವರ್ನರ್ ಆಗಿ ಸೇವೆ ಸಲ್ಲಿಸಿದರು. 1974 ರಲ್ಲಿ ಕಾಲವಾದರು. ಅಲ್ಲಿಗೆ ಸುಮಾರು 550 ವರ್ಷಗಳ ಮೈಸೂರು ರಾಜರ ರಾಜ್ಯಭಾರವೂ ಕೊನೆಗೊಂಡಿತು.

ಮೈಸೂರಲ್ಲಿ ಮುಂದುವರೆದ ರಾಜವಂಶ

ಮೈಸೂರಲ್ಲಿ ಮುಂದುವರೆದ ರಾಜವಂಶ

ಮೈಸೂರು ರಾಜವಂಶ ಮುಂದುವರೆದಿದ್ದು, ಜಯಚಾಮರಾಜೇಂದ್ರ ಅವರ ಪುತ್ರರಾಗಿ 1953ರಲ್ಲಿ ಜನಿಸಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 2013ರಲ್ಲಿ ನಿಧನರಾದರು. ಆ ನಂತರ ರಾಜಮಾತೆ ಪ್ರಮೋದ ದೇವಿ ಅವರು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದತ್ತು ಪುತ್ರನಾಗಿ ಸ್ವೀಕರಿಸಿದ್ದಾರೆ. ಇದೀಗ ಯದುವೀರ ಮತ್ತು ತೃಷಿಕಾ ಕುಮಾರಿ ದಂಪತಿ 2017ರಲ್ಲಿ ಪುತ್ರ ಆದ್ಯವೀರ ನರಸಿಂಹರಾಜರಿಗೆ ಜನ್ಮ ನೀಡಿದ್ದಾರೆ.

English summary
Mysore has long been known for its art, literature, culture and many other specialties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X