ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಘಾ ಶ್ರೀ- ರಾಜಕೀಯ ಪ್ರಭಾವ ಕುಂದಿದೆಯಾ? ಏನು ಕಾರಣ?

|
Google Oneindia Kannada News

ಚಿತ್ರದುರ್ಗದ ಮುರುಘಾ ಮಠದ ಶ್ರಿ ಡಾ. ಶಿವಮೂರ್ತಿ ಶರಣರು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಎದುರಿಸುತ್ತಿದ್ದು, ಜನರಿಗೆ ಕಾವಿಧಾರಿಗಳ ಮೇಲಿನ ನಂಬಿಕೆ ಇನ್ನಷ್ಟು ಕುಸಿಯುಂತೆ ಮಾಡಿದೆ. ಇಂದು ಸೆ. 12ರಂದು ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಇದೆ.

ಶಿವಮೂರ್ತಿ ಶರಣರ ಮೇಲೆ ಪೋಕ್ಸೋ ಮತ್ತು ಎಸ್‌ಸಿ- ಎಸ್‌ಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ಅತ್ಯಂತ ದೊಡ್ಡ ಮಠಗಳಲ್ಲಿ ಮುರುಘಾ ಮಠ ಒಂದಾಗಿರುವುದರಿಂದ ಶ್ರೀಗಳ ರಾಜಕೀಯ ಪ್ರಭಾವ ಬಹಳ ಇದೆ. ಈ ಕಾರಣಕ್ಕೆ ಅವರ ಬಂಧನ ವಿಳಂಬವಾಗಿದ್ದು ಬಿಟ್ಟರೆ ಕಾನೂನು ರೀತ್ಯ ಅವರ ಮೇಲೆ ಕ್ರಮ ಜರುಗಿಸಲಾಗಿರುವುದು ಹೌದು.

ಮುರುಘಾ ಮಠದ ಇಂದಿನ ಪರಿಸ್ಥಿತಿಯ ಬಗ್ಗೆ ಕೋಡಿಮಠ ಸ್ವಾಮೀಜಿ ಹೇಳಿದ್ದೇನು?ಮುರುಘಾ ಮಠದ ಇಂದಿನ ಪರಿಸ್ಥಿತಿಯ ಬಗ್ಗೆ ಕೋಡಿಮಠ ಸ್ವಾಮೀಜಿ ಹೇಳಿದ್ದೇನು?

64 ವರ್ಷದ ಡಾ. ಶಿವಮೂರ್ತಿ ಮುರುಘಾ ಶರಣರು ಸಾಕಷ್ಟು ಓದಿಕೊಂಡಿದ್ದು, ವಚನ ಸಾಹಿತ್ಯದಲ್ಲಿ ಡಿಲಿಟ್ ಪದವಿ ಪಡೆದಿದ್ದಾರೆ. 1991ರಲ್ಲಿ ಪೀಠಾರೋಹಣ ಮಾಡಿದ ಅವರು ಬಹಳಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ತಂದವರು.

ಮುರುಘಾ ಮಠ ದಕ್ಷಿಣ ಭಾರತದಲ್ಲಿ 200 ಶಾಖೆಗಳನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಇದು ಅತ್ಯಂತ ದೊಡ್ಡ ಮಠಗಳಲ್ಲೊಂದೆನಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಠದ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ ಎಂಬುದು ಸಮುದಾಯ ಮುಖಂಡರ ಆತಂಕ.

ಮೂರು ಶತಮಾನಗಳ ಇತಿಹಾಸ

ಮೂರು ಶತಮಾನಗಳ ಇತಿಹಾಸ

ಐತಿಹಾಸಿಕ ದಾಖಲೆಗಳ ಪ್ರಕಾರ 1704ರಲ್ಲಿ ಮುರುಘಾ ಮಠ ಆರಂಭವಾಗಿದೆ. ಶ್ರೀ ಮುರುಘಾ ಶಾಂತವೀರೇಶ್ವರ ಸ್ವಾಮೀಜಿ ಈ ಮಠದ ಸಂಸ್ಥಾಪಕರು ಎಂದು ಹೇಳಲಾಗುತ್ತದೆ. ಅವರ ನಂತರ ಪೀಠವೇರಿದ ಎರಡನೇ ಮುರಿಗೆ ಸ್ವಾಮೀಜಿ ಬರಮಣ್ಣ ನಾಯಕ ಮತ್ತು ಹಿರೇ ಮದಕರಿ ನಾಯಕರಿಗೆ ರಾಜಗುರುವಾಗಿದ್ದರು. ಬರಮಣ್ಣ ಮತ್ತು ಹಿರೇಮದಕರಿ ನಾಯಕ ವಿಜಯನಗರ ಸಾಮ್ರಾಜ್ಯದ ಸೇನಾಧಿಪತಿಗಳಾಗಿದ್ದರು.

ಮೊದಲನೇ ಮುರಿಗೆ ಸ್ವಾಮೀಜಿಯಿಂದ ಆರಂಭಗೊಂಡು ಈಗಿನ ಶಿವಮೂರ್ತಿ ಮುರುಘಾ ಶರಣರವರೆಗೆ 21 ಸ್ವಾಮೀಜಿಗಳು ಮುರುಘಾ ಮಠದ ಪೀಠ ಏರಿದ್ದಾರೆ.

ಮುರುಘಾ ಶ್ರೀಗಳ ಕ್ರಾಂತಿಕಾರಕ ಸಾಧನೆಗಳು

ಮುರುಘಾ ಶ್ರೀಗಳ ಕ್ರಾಂತಿಕಾರಕ ಸಾಧನೆಗಳು

ಈಗ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ಎದುರಿಸುತ್ತಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಗತಿಪರ ಸ್ವಾಮಿ ಎಂದೇ ಗುರುತಿಸಿಕೊಂಡವರು. ಶೋಷಿತ ಸಮುದಾಯದವರಿಗೆ ಮಠದ ವೇದಿಕೆ ಕಲ್ಪಿಸಿದರು. ಬಹಳಷ್ಟು ಉಪಮಠಗಳನ್ನು ಸ್ಥಾಪಿಸುವ ಮೂಲಕ ಮಠದ ಪರಂಪರೆಯಲ್ಲೇ ಕ್ರಾಂತಿ ತಂದ ಖ್ಯಾತಿ ಅವರದ್ದು. ಬೇರೆ ಬೇರೆ ಜಾತಿ ಸಮುದಾಯಗಳು ತಮಗೆ ಬೇಕಾದವರನ್ನು ಉಪಮಠಗಳ ಪೀಠಕ್ಕೆ ಕೂರಿಸುವ ಅವಕಾಶ ನೀಡಿದರು.

ಸಾಮುದಾಯಿಕ ವಿವಾಹ, ವಿಧವಾ ಪುನರ್‌ವಿವಾಹಗಳನ್ನು ನೆರವೇರಿಸಿದರು. ತಮ್ಮ ಹೆಸರಿಗೆ ಸೇರಿಸಲಾಗುತ್ತಿದ್ದ ಜಗದ್ಗುರು ಎಂಬ ಪದವಿಯನ್ನು ತಿರಸ್ಕರಿಸಿದರು. ದಾಸೋಹಕ್ಕೆ ಒತ್ತು ಕೊಟ್ಟರು. ಇವರ ನೇತೃತ್ವದಲ್ಲಿ ಮುರುಘಾ ಮಠ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಹಾಗೂ ದಾನದತ್ತಿ ಸಂಸ್ಥೆಗಳನ್ನು ನಿವರ್ಹಿಸುತ್ತದೆ.

ಪ್ರಗತಿಪರ ಸ್ವಾಮೀಜಿ

ಪ್ರಗತಿಪರ ಸ್ವಾಮೀಜಿ

ಸಾಮಾನ್ಯವಾಗಿ ಮಠಗಳು ಬಿಜೆಪಿ ಪರವಾಗಿ ಇರುತ್ತವೆ. ಆದರೆ, ರಾಜ್ಯದ ಕೆಲ ಮಠಗಳು ಮತ್ತು ಸ್ವಾಮೀಜಿಗಳು ಕಾಂಗ್ರೆಸ್ ಸಿದ್ಧಾಂತವನ್ನು ಪುರಸ್ಕರಿಸುತ್ತವೆ. ಮುರುಘಾ ಶರಣರು ಅಂಥವರಲ್ಲಿ ಒಬ್ಬರು. ಅದರೆ, ಇವರು ಕಾಂಗ್ರೆಸ್ ಮಾತ್ರವಲ್ಲ ಎಲ್ಲಾ ರಾಜಕೀಯ ಪಕ್ಷಗಳೊಂದಿಗೂ ಉತ್ತಮ ಸಂಬಂಧ ಮತ್ತು ಪ್ರಭಾವ ಹೊಂದಿದವರು.

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯದವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ಕೊಡಿಸುವ ಪ್ರಯತ್ನ ನಡೆದಿತ್ತು. ಅದಕ್ಕೆ ಮುರುಘಾ ಶ್ರೀಗಳ ಬೆಂಬಲ ಇತ್ತು. ಮೇಕೆದಾಟು ಸೇರದಂತೆ ಕಾಂಗ್ರೆಸ್‌ನ ಕೆಲ ರಾಜಕೀಯ ಹೋರಾಟಗಳಲ್ಲೂ ಶರಣರು ಪಾಲ್ಗೊಂಡಿದ್ದರು.

1997ರಿಂದ ಮುರುಘಾ ಮಠದಿಂದ ಬಸವಶ್ರೀ ಪುರಸ್ಕಾರ ನೀಡುವ ಪದ್ಧತಿ ಆರಂಭವಾಯಿತು. ಮಲಾಲ ಯೂಸುಫ್‌ಝೈ, ದಲೈ ಲಾಮ, ಮೇಧಾ ಪಾಟ್ಕರ್, ಅಣ್ಣಾ ಹಜಾರೆ, ಸ್ವಾಮಿ ಅಗ್ನಿವೇಶ್, ಶಬಾನ ಅಜ್ಮಿ, ದಲೈ ಲಾಮ, ಮೊದಲಾದ ಪ್ರಗತಿಪರ, ಜಾತ್ಯತೀತರೆಂದು ಗುರುತಿಸಿಕೊಂಡ ಹಲವರಿಗೆ ಬಸವಶ್ರೀ ಪುರಸ್ಕಾರ ನೀಡಲಾಗಿದೆ.

ಮುರುಘಾ ಶರಣರ ರಾಜಕೀಯ ಪ್ರಭಾವ ಕುಂದಿದೆಯಾ?

ಮುರುಘಾ ಶರಣರ ರಾಜಕೀಯ ಪ್ರಭಾವ ಕುಂದಿದೆಯಾ?

ಡಾ. ಶಿವಮೂರ್ತಿ ಮುರಘಾ ಶರಣರು 200ಕ್ಕೂ ಹೆಚ್ಚು ಉಪಮಠಗಳನ್ನು ಸ್ಥಾಪಿಸಿದ್ದು ಕ್ರಾಂತಿಕಾರಕ ಹೆಜ್ಜೆ ಎಂದೇ ಹೇಳಲಾಗುತ್ತದೆ. ಆದರೆ, ಅವರ ಈ ಕ್ರಮವು ಸ್ವಾಮೀಜಿಯ ಪ್ರಭಾವಳಿ ಕುಂದುವಂತೆ ಮಾಡಿದೆ. ಈ ಉಪಮಠಗಳನ್ನು ಪಡೆದಿರುವ ಸಮುದಾಯಗಳು ಮತ್ತು ಮುಖ್ಯಸ್ಥರು ತಮ್ಮದೇ ಸ್ವಂತ ಹೆಜ್ಜೆಗಳನ್ನು ಇಡಲು ಆರಂಭಿಸಿವೆ. ಮುರುಘಾ ಶ್ರೀಗಳ ಅಂಕೆಯಲ್ಲಿ ಯಾರೂ ಇಲ್ಲ.

ಈ ವಿಚಾರವು ಕಾಂಗ್ರೆಸ್ ಪಕ್ಷಕ್ಕೆ 2018ರ ಚುನಾವಣೆಯಲ್ಲಿ ಅರಿವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಾಂಗ್ರೆಸ್ ಬೆಂಬಲದಲ್ಲಿ ನಡೆದ ಹೋರಾಟದಲ್ಲಿ ಮುರುಘಾ ಶರಣರು ಬೆಂಬಲ ನೀಡಿದ್ದು ಹೌದು. ರಾಜ್ಯದ ಅತ್ಯಂತ ಪ್ರಬಲ ಸಮುದಾಯಗಳಲ್ಲಿ ಒಂದೆನಿಸಿದ ಲಿಂಗಾಯತರು ರಾಜಕೀಯವಾಗಿ ಸಾಮಾನ್ಯವಾಗಿ ಬಿಜೆಪಿಗೆ ಬೆಂಬಲ ನೀಡುತ್ತಾರೆ. ಈಗ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುರುಘಾ ಶರಣರನ್ನು ಭಾಗಿಯಾಗಿಸುವ ಮೂಲಕ ಲಿಂಗಾಯತ ಮತಗಳನ್ನು ಬಿಜೆಪಿಯಿಂದ ಸೆಳೆದುಕೊಳ್ಳುವ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿತ್ತು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಿರೀಕ್ಷೆ ತಲೆಕೆಳಗಾಯಿತು.

2013ರ ಚುನಾವಣೆಯಲ್ಲಿ ಚಿತ್ರದುರ್ಗದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 4 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ 2018ರ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆಲ್ಲಲು ಶಕ್ಯವಾಯಿತು. ಅದೂ ಆ ಒಂದು ಸ್ಥಾನ ಗೆದ್ದದ್ದೇ ಹರಸಾಹಸದಲ್ಲಿ.

ಪ್ರತ್ಯೇಕ ಲಿಂಗಾಯದ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ಜಾಮದಾರ್ ಪ್ರಕಾರ, ಮುರುಘಾ ಶ್ರೀಗಳು ರಾಜಕೀಯ ಪ್ರಭಾವ ಕಳೆದುಕೊಂಡಿರಬಹುದು, ಅಥವಾ ಉದ್ದೇಶಪೂರ್ವಕವಾಗಿ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡದೇ ಹೋಗಿದ್ದಿರಬಹುದು, ಅಥವಾ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡದೇ ಹೋಗಿರಬಹುದು.

ರಾಜಕೀಯ ಪಕ್ಷಗಳಿಗೆ ಭಯ

ರಾಜಕೀಯ ಪಕ್ಷಗಳಿಗೆ ಭಯ

ಮುರುಘಾ ಶ್ರೀಗಳ ರಾಜಕೀಯ ಪ್ರಭಾವ ಕುಂದಿರಬಹುದಾದರೂ ಅವರು ಪ್ರಮುಖ ಲಿಂಗಾಯತ ಮಠದ ಸ್ವಾಮೀಜಿಯಾದ್ದರಿಂದ ಸಮುದಾಯದ ಭಾವನೆಗಳಿಗೆ ಘಾಸಿಯಾಗುವ ಸಾಧ್ಯತೆ ಇದ್ದೇ ಇದೆ. ಇದು ಬಿಜೆಪಿಗೂ ಮತ್ತು ಕಾಂಗ್ರೆಸ್‌ಗೂ ಅರಿವಿನಲ್ಲಿದೆ. ಈ ಕಾರಣದಿಂದಲೇ ರಾಜ್ಯ ಸರಕಾರ ಸಾಧ್ಯವಾದಷ್ಟೂ ಸದ್ದಿಲ್ಲದೇ ಈ ಪ್ರಕರಣವನ್ನು ಮುನ್ನಡೆಸುವ ಇರಾದೆ ತೋರಿದೆ. ಕಾಂಗ್ರೆಸ್ ಕೂಡ ತೀವ್ರ ತರದಲ್ಲಿ ಈ ಪ್ರಕರಣವನ್ನು ಕೆದಕುವ ಗೋಜಿಗೆ ಹೋಗುತ್ತಿಲ್ಲ.

ಮುರುಘಾ ಶ್ರೀಗಳು ಕಾಂಗ್ರೆಸ್ ಪರವಾಗಿ ಹಲವು ಹೆಜ್ಜೆಗಳನ್ನು ಇಟ್ಟಿದ್ದರಾದರೂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಡಾ. ಶಿವಮೂರ್ತಿ ಮುರುಘಾ ಶರಣರಿಗೂ ಮುನ್ನ ಮಠದ ಸ್ವಾಮಿಯಾಗಿದ್ದ ಶ್ರೀ ಮಲ್ಲಿಕಾರ್ಜುನರೊಂದಿಗೆ ಯಡಿಯೂರಪ್ಪ ಆಪ್ತರಾಗಿದ್ದರು. ಡಾ. ಶಿವಮೂರ್ತಿ ಶರಣರೊಂದಿಗೂ ಅದು ಮುಂದುವರಿದಿದೆ.

ಮುರುಘಾ ಶ್ರೀಗಳಿಗೆ ಈಗ ತಡೆಯಾಗಿರುವುದು ಅವರ ರಾಜಕೀಯ ನಿಲುವುಗಳ ವೈರುದ್ಧ್ಯತೆ. ಒಂದೆಡೆ ಅವರು ಕಾಂಗ್ರೆಸ್‌ನ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾರೆ, ಮತ್ತೊಂದೆಡೆ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಹೊಗಳುತ್ತಾರೆ. ಹೀಗಾಗಿ, ಬಿಜೆಪಿಯಾಗಲೀ ಕಾಂಗ್ರೆಸ್ ಅಗಲೀ ಮುರುಘಾ ಶ್ರೀಗಳ ಪರವಾಗಿ ಗಟ್ಟಿಯಾಗಿ ನಿಲ್ಲಲು ಹಿಂದೇಟು ಹಾಕುತ್ತಿವೆ. ಅದೇ ವೇಳೆ, ಲಿಂಗಾಯತರನ್ನು ಎದಿರು ಹಾಕಿಕೊಳ್ಳುವ ಭಯದಿಂದಲ ಶ್ರೀಗಳ ವಿರೋಧಿ ನಿಲುವನ್ನೂ ಗಟ್ಟಿಯಾಗಿ ತಳೆಯಲು ಆಗುತ್ತಿಲ್ಲ.

ಈ ಎಲ್ಲಾ ಹಗ್ಗ ಜಗ್ಗಾಟಗಳೊಂದಿಗೆ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣ ತಾರ್ಕಿಕ ಅಂತ್ಯ ಮುಟ್ಟುತ್ತದಾ ಇಲ್ಲವಾ ಗೊತ್ತಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Murugha Mutt Seer Dr. Shivamurthy Murugha Sharanaru is facing serious allegations in POCSO act. Though he projected as progressive thinker, Congress is carefully treading the path of not to support the seer in this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X