• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

HIVಗೆ ಸೆಡ್ಡುಹೊಡೆದು, ಕಂದನನ್ನು ಕಾಪಿಟ್ಟವಳು... 'ಅಮ್ಮ' ಅಂದ್ರೆ ಇವಳು!

|

"ನನ್ನ ಗರ್ಭದಲ್ಲಿ ಕೂಸೊಂದು ಚಿಗುರುತ್ತಿದೆ ಅಂದಾಗ ಜಗತ್ತಲ್ಲಿ ಯಾರೂ ಪಡದಷ್ಟು ಖುಷಿ ಪಟ್ಟವಳು ನಾನು. ಆದರೆ ಆ ಸುದ್ದಿಯ ಜೊತೆಯಲ್ಲೇ ಬರಸಿಡಿಲಂತೇ ಬಂದೆರಗಿದ್ದು, ನನ್ನ ದೇಹಕ್ಕೆ ಎಚ್ ಐವಿ ಎಂಬ ವಿಷಜಂತು ಅಂಟಿದೆ ಎಂಬ ಸುದ್ದಿ! ನಾನಂತೂ ಹೆಚ್ಚು ದಿನ ಬದುಕೋಲ್ಲ, ಹೊಟ್ಟೆಯಲ್ಲಿರುವ ಮಗುವಿಗೆ ಎಚ್ ಐವಿ ಬಾರದಂತೆ ಕಾಪಾಡುವುದು ನನ್ನ ಮುಂದಿದ್ದ ದೊಡ್ಡ ಸವಾಲು..."

"ನನ್ನ ಬದುಕಲ್ಲಿ ದುರದೃಷ್ಟದ ತೇರನ್ನೇ ಎಳೆದಿದ್ದ ದೇವರು, ಮಗುವಿನ ವಿಷಯದಲ್ಲಿ ಹಾಗೆ ಮಾಡಲಿಲ್ಲ! ಮಗು ಎಚ್ ಐವಿ ಸೋಂಕಿಲ್ಲದೆ ಜನಿಸಿತು! ಬದುಕಿರುವಷ್ಟು ದಿನ ಆ ಮಗನಿಗಾಗಿ ಬದುಕಬೇಕು ಅಂದುಕೊಂಡೆ" ಕಣ್ಣಲ್ಲಿ ದುಃಖ, ಹತಾಶೆ, ಅಸಹಾಯಕತೆ, ಒಂದಷ್ಟು ನೆಮ್ಮದಿ ಎಲ್ಲವನ್ನೂ ತುಂಬಿದ ಭಾವದಲ್ಲಿ ಹರಿಣಿ(ಹೆಸರು ಬದಲಾಯಿಸಿದೆ) ಹೇಳುತ್ತಿದ್ದರು.

ಧಾರವಾಡದ ಬಳಿಯ ಸಣ್ಣ ಊರೊಂದರ ಹರಿಣಿ ಇದೀಗ ಎಚ್ ಐವಿ ಕುರಿತು ಜಾಗೃತಿ ಮೂಡಿಸುವ ಎನ್ ಜಿಒ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ತಾತ್ಸಾರಗಳನ್ನು ಗಂಟಲಲ್ಲಿ ನುಂಗಿಕೊಂಡು, ಮಗನ ಮತ್ತು ತನ್ನಂಥ ನೂರಾರು ಮಹಿಳೆಯರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ.

ತನಗೆ ಎಚ್ ಐವಿ ತಗುಲಿದ ದುಃಖಕ್ಕಿಂತ ತನ್ನ ಮಗನಿಗೆ ಅದು ತಾಕದಂತೆ ಕಾಪಾಡಿದ ಖುಷಿ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಅಮ್ಮಂದಿರೇ ಹಾಗೇ, ಎದೆಯನ್ನು ಸುಟ್ಟುಕರಕಲಾಗಿರುವಂಥ ಜ್ವಾಲಾಮುಖಿ ಹೃದಯದಲ್ಲಿದ್ದರೂ, ಮಕ್ಕಳೆದುರಲ್ಲಿ ನಗುತ್ತ ಏನೂ ಆಗಿಯೇ ಇಲ್ಲ ಎಂಬಂತೆ ಉಳಿದುಬಿಡುವವರು. ಹರಿಣಿಯೂ ಹಾಗೆ. ತಾನು ಮಾಡದ ತಪ್ಪಿಗೆ ಎಚ್ ಐವಿ ಎಂಬ ಮಾರಕ ರೋಗಕ್ಕೆ ತುತ್ತಾಗಿ ಈ ಸಮಾಜದ ತಾತ್ಸಾರಕ್ಕೊಳಗಾಗದ ದಿನವಿಲ್ಲ. ಪ್ರತಿದಿನವೂ ಸಾವನ್ನು ಮುಟ್ಟಿಬರುವ ಉತ್ಕಟ ಬಯಕೆಯ ನಡುವಲ್ಲೂ, ಮಗನಿಗಾಗಿ ಪ್ರತಿಕ್ಷಣವೂ ಸಾಯುತ್ತಲೇ ಬದುಕುತ್ತಿದ್ದಾರೆ ಹರಿಣಿ.

ವಿಶೇಷ ಲೇಖನ: ಅಮ್ಮ... ನಮ್ಮೆಲ್ಲರ ಬದುಕಿನ ಜೀವಂತ ಪವಾಡ!

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ(ಈ ಬಾರಿ ಮೇ 12)ವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಎಷ್ಟೋ ಅಮ್ಮಂದಿರಿಗೆ ಮಕ್ಕಳು ದುಬಾರಿ ಉಡುಗೊರೆಯನ್ನು ಕೈಮೇಲಿಡುವ ಹೊತ್ತಲ್ಲಿ, ಮಗನ ಆರೋಗ್ಯವಂತ ನಗುವನ್ನೇ ಉಡುಗೊರೆ ಎಂದುಕೊಂಡ HIV ಪೀಡಿತ 'ಅಮ್ಮ'ನ ಯಶೊಗಾಥೆ ಇಲ್ಲಿದೆ.... ನಿಜವಾಗಿಯೂ 'ಅಮ್ಮ' ಅಂದ್ರೆ ಇವಳು...

ಮದುವೆಯಾಗೋಲ್ಲ ಅನ್ನೋಕೆ ಕಾರಣವೇ ಇರಲಿಲ್ಲ!

ಮದುವೆಯಾಗೋಲ್ಲ ಅನ್ನೋಕೆ ಕಾರಣವೇ ಇರಲಿಲ್ಲ!

ಹರಿಣಿಗೆ ಮದುವೆ ಗೊತ್ತಾದಾಗ ಆಕೆಗೆ ಕೇವಲ 21 ವರ್ಷ. ತಾನು ಸ್ವಾವಲಂಬನೆಯಿಂದ ಬದುಕಬೇಕು ಎಂಬ ಆಸೆಯಲ್ಲಿ ಉದ್ಯೋಗವನ್ನು ಅರಸುತ್ತಿದ್ದಾಗಲೇ ಶ್ರೀಮಂತ, ಸ್ಪುರದ್ರೂಪಿ ಯುವಕನೊಬ್ಬನೊಂದಿಗೆ ಮದುವೆ ಪ್ರಸ್ತಾಪ ಬಂತು. ಶ್ರೀಮಂತಿಕೆ, ನೋಡುವುದಕ್ಕೂ ಚೆನ್ನಾಗಿದ್ದ ಹುಡುಗ, ಮಾತಲ್ಲೇ ಭವಿಷ್ಯದ ಕನಸು ಹೆಣೆಯಲ್ಲಿ ನಿಸ್ಸೀಮನಾಗಿದ್ದ! ನಯಾಪೈಸೆಯೂ ವರದಕ್ಷಿಣೆ ಬೇಡ ಎಂದ ಅತ್ತೆ-ಮಾವ ದೇವರಂತೆ ಕಂಡರು. ವಯಸ್ಸೂ ಹಾಗೇ ಇತ್ತಲ್ಲ, ಬೇಡ ಅನ್ನೋಕೆ ಕಾರಣವಾದರೂ ಏನಿತ್ತು. ನಾಚಿ ತಲೆಯಲ್ಲಾಡಿಸಿದ್ದರು ಹರಿಣಿ. ಮದುವೆಯಾಗಿ ಒಂದಷ್ಟು ದಿನ ಆಕಾಶಕ್ಕೆ ಮೂರೇ ಗೇಣು!

ಅಮ್ಮ' ಹೀಗೇ ಇರಬೇಕೆಂದು ಯಾರು ಹೇಳಿದ್ದು ನಿಮಗೆ?

ಮೊದಲ ಭ್ರೂಣ ಗರ್ಭದಲ್ಲೇ ಕರಗಿಹೋಗಿತ್ತು!

ಮೊದಲ ಭ್ರೂಣ ಗರ್ಭದಲ್ಲೇ ಕರಗಿಹೋಗಿತ್ತು!

ಮದುವೆಯಾಗಿ ಕೆಲವೇ ತಿಂಗಳುಗಳಲ್ಲಿ ಆಕೆಯ ಗರ್ಭಿಣಿ ಎಂದು ತಿಳಿದಾಗಲಂತೂ ತನ್ನ ಅದೃಷ್ಟ ನೆನೆದು ತನಗೇ ಹೊಟ್ಟೆಕಿಚ್ಚಾಗಬೇಕು ಎಂದು ಬೀಗಿದ್ದಳು ಹರಿಣಿ. ಆದರೆ ತನ್ನ ದುರದೃಷ್ಟದ ಬಾಗಿಲು ತೆರೆದಿದ್ದೇ ಆಗ ಎಂಬ ಕಲ್ಪನೆ ಆಕೆಗಿರಲಿಲ್ಲ! ಆಕೆ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆಯೇ ಪತಿ ತನ್ನನ್ನು ಎತ್ತಿಕೊಂಡು ಮುತ್ತಿಡುತ್ತಾನೆ ಎಂದೆಲ್ಲ ಸಿನಿಮಾ ದೃಶ್ಯಗಳನ್ನೆಲ್ಲ ಕಣ್ಮುಂದೆ ತಂದುಕೊಂಡ ಹರಿಣಿಗೆ ಎದುರಾಗಿದ್ದು ಭ್ರಮನಿರಸನದ ಪ್ರತಿಕ್ರಿಯೆ. 'ನಮಗೆ ಮದುವೆಯಾಗಿ ಎಷ್ಟು ತಿಂಗಳಾಯ್ತು ಹೇಳು? ನಮಗಿಬ್ಬರಿಗೂ ವಯಸ್ಸಾದರೂ ಎಷ್ಟಾಗಿದೆ ಮಹಾ? ಈಗಲೇ ಬೇಕಾ ಮಗು?' ಎಂದು ಪತಿ ಹೊಸ ವರಸೆ ಆರಂಭಿಸಿದ್ದ. ಒಂದು ಕ್ಷಣ ಆಘಾತವಾದರೂ ಪತ್ನಿಯನ್ನು ಗರ್ಭಪಾತಕ್ಕೆ ಒಪ್ಪಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದ ಪತಿ. ತಾನು ಗರ್ಭಿಣಿ ಎಂದು ಮನೆ ಜನರಿಗೆ ತಿಳಿಸುವ ಮೊದಲೇ ಆಕೆಯ ಕೂಸು ಗರ್ಭದಲ್ಲೇ ಕಮರಿಹೋಗಿತ್ತು.

ತಾಯಿ ಪ್ರೀತಿ : ಮನುಜನಿಗಿಂತ ಪ್ರಾಣಿಗಳೇ ಗುಣದಲಿ ಮೇಲು!

ಎರಡನೇ ಬಾರಿಯೂ ಅದೇ ಕತೆ!

ಎರಡನೇ ಬಾರಿಯೂ ಅದೇ ಕತೆ!

ಎರಡನೇ ಬಾರಿ ಗರ್ಭಣಿಯಾದಾಗಲೂ ಪತಿಯಿಂದ ಇದೇ ಪ್ರತಿಕ್ರಿಯೆ. ಆತ ಪ್ರತಿದಿನವೂ ಅದೇನೋ ಮಾತ್ರೆ ತೆಗೆದುಕೊಳ್ಳುವುದು ಗೊತ್ತಿದ್ದರೂ ಅದಕ್ಕೂ ಏನೋ ಸಮಜಾಯಿಷಿ ಹೇಳಿ ಸುಮ್ಮನಾಗಿದ್ದ. ಪತಿಯ ಮೇಲಿನ ನಂಬಿಕೆಗೆ ಹರಿಣಿಯೂ ಸುಮ್ಮನಿದ್ದಳು. ಆದರೆ ಎರಡನೇ ಬಾರಿಯೂ ಗರ್ಭಪಾತದ ವಿಷಯ ಬಂದಾಗ ಆಕೆಗೆ ಕೈಕಾಲು ಆಡಲಿಲ್ಲ. ಆದರೂ ಪತಿ ಒತ್ತಾಯದಿಂದ ಆಗಲೂ ಗರ್ಭಪಾತ ಮಾಡಿಸಿದ್ದ.

ಬರಸಿಡಿಲಂತೆ ಬಂದೆರಗಿದ್ದು ಹೊರಬಿತ್ತು ಸತ್ಯ!

ಬರಸಿಡಿಲಂತೆ ಬಂದೆರಗಿದ್ದು ಹೊರಬಿತ್ತು ಸತ್ಯ!

ಈ ಎರಡು ಘಟನೆಯ ನಂತರ ಅದ್ಯಾಕೋ ಗಂಡನ ನಡವಳಿಕೆಯ ಮೇಲೆ ಅನುಮಾನ ಶುರುವಾಗಿತ್ತು. ಸ್ಪುರದ್ರೂಪಿ ಪತಿ ದಿನೇ ದಿನೇ ಕೃಶನಾಗುತ್ತಿರುವುದು ಅನುಭವಕ್ಕೆ ಬಂತು. ಸಣ್ಣ ನೆಗಡಿಯಾದರೂ ವಾರಾನುಗಟ್ಟಲೆ ಸುಸ್ತಾಗುತ್ತಿದ್ದ ಆತನ ಮೇಲೆ ಅನುಮಾನ ಪಡಬಾರದೆಂದು ಎಷ್ಟೇ ಅಂದುಕೊಂಡರೂ ಆಗುತ್ತಿರಲಿಲ್ಲ. ಇವೆಲ್ಲವುಗಳ ನಡುವೆ ಮೂರನೇ ಬಾರಿ ಗರ್ಭ ಧರಿಸಿದ್ದಳು ಹರಿಣಿ. ಆಗಲೂ ಪತಿಯಿಂದ ಅದೇ ರೀತಿಯ ಬೇಡಿಕೆ. ಈ ಬಾರಿ ಹರಿಣಿ ರೋಸಿಹೋಗಿದ್ದಳು. ಒಂದು ದಿನ ಹೇಳದೆ ಕೇಳದೆ ಪತಿಯ ಮನೆಯಿಂದ ತವರು ಮನೆಗೆ ತೆರಳಿದಳು. ವಿಷಯವನ್ನೆಲ್ಲ ತಿಳಿಸಿ, ತಂದೆಯೊಂದಿಗೆ ಆಸ್ಪತ್ರೆಗೆ ತೆರಳಿದರೆ, ತಪಾಸಣೆ ಮಾಡಿದ ವೈದ್ಯರು ಆಕೆಯನ್ನು ತೀರಾ ಮರುಕದಿಂದ ನೋಡಿದ್ದರು. 'ನೋಡಿ, ನಿಮ್ಮ ಪತಿ ಎಲ್ಲಿದ್ದಾರೆ? ನಾಳೆ ಅವರನ್ನು ಕರೆತನ್ನಿ. ಮಾತನಾಡಬೇಕು' ಎಂದಷ್ಟೇ ಹೇಳಿದರು. ಹರಿಣಿಗೆ ಏನೊಂದೂ ಅರ್ಥವಾಗಲಿಲ್ಲ. ಎಚ್ ಐವಿ ಎಂಬ ಮಾರಕ ರೋಗಕ್ಕೆ ತಾನು ತುತ್ತಾಗಿದ್ದೇನೆ ಎಂದು ಕಲ್ಪನೆಯನ್ನಾದರೂ ಯಾರು ಮಾಡಿಕೊಳ್ಳುವುದಕ್ಕೆ ಸಾಧ್ಯ?ಹರಿಣಿ ಕುಟುಂಬದ ಒತ್ತಾಯದ ಮೇರೆಗೆ ವೈದ್ಯರ ಬಳಿ ಬಂದ ಪತಿಗೆ ಹೆಚ್ ಐವಿ ಸೋಂಕು ತಗುಲಿರುವುದನ್ನೂ, ಆತನ ಮೂಲಕ ಹರಿಣಿಗೂ ತಗುಲಿರುವುದನ್ನು ವೈದ್ಯರು ತಿಳಿಸಿದರು. ಆದರೆ ಮಗುವನ್ನು ಎಚ್ ಐವಿ ಇಂದ ರಕ್ಷಿಸಬಹುದು ಎಂಬ ಭರವಸೆ ನೀಡಿದರು. ಅದಾಗಿ ಕೆಲ ದಿನಗಳಲ್ಲೇ ಹರಿಣಿ ಪತಿ ಮೃತರಾದರು.

ಮಗನ ನಗುವಲ್ಲೇ ಬದುಕು

ಮಗನ ನಗುವಲ್ಲೇ ಬದುಕು

ಹರಿಣಿಯ ಪತಿಗೆ ಎಚ್ ಐವಿ ಇರುವ ವಿಷಯ ಆತನ ತಂದೆ-ತಾಯಿಗೂ ತಿಳಿದಿರಲಿಲ್ಲ. ಸದ್ಯಕ್ಕೆ ಹರಿಣಿಯನ್ನು ಆಕೆಯ ಅತ್ತೆ-ಮಾವ ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಸೇವೆ ಮಾಡುತ್ತಿದ್ದಾರೆ. ಮಗನೂ ಆರೋಗ್ಯವಂತನಾಗಿದ್ದಾನೆ. ಶಾಲೆಯಲ್ಲಿ 'ನಿನ್ನ ಅಮ್ಮನಿಗೆ ಏಡ್ಸ್ ಅಂತೆ' ಎಂದು ಮಗನ ಸ್ನೇಹಿತರ್ಯಾರಾದರೂ ಕೇಳಿದರೆ ಆತನಿಗೆ ಮುಜುಗರವಾಗುತ್ತದೆಂದು, ಎಂದಿಗೂ ಆತನ ಸ್ನೇಹಿತರಿಗಾಗಲೀ, ಶಾಲೆಯವರಿಗಾಗಲೀ ತನ್ನ ಗುರುತನ್ನು ಹರಿಣಿ ಬಿಟ್ಟುಕೊಟ್ಟಿಲ್ಲ. ಸ್ವತಃ ಮಗನಿಗೂ ಈ ವಿಷಯ ಗೊತ್ತಿಲ್ಲ. ಆದರೆ ಹರಿಣಿ ಮಾತ್ರ ತನ್ನ ಮಗನೂಬ್ಬನಿಗೋಸ್ಕರ ಈ ಸಮಾಜದ ಎಲ್ಲಾ ಹಿಯಾಳಿಗೆ, ವ್ಯಂಗ್ಯ, ಅಪಹಾಸ್ಯಗಳನ್ನು ಎದುರಿಸುತ್ತಲೇ ಬದುಕುತ್ತಿದ್ದಾಳೆ. ಅಮ್ಮಂದಿರ ದಿನದಂದು ಹರಿಣಿಯಂತೆ ಮಕ್ಕಳಿಗಾಗಿ ನೋವನ್ನೆಲ್ಲ ಮರೆತು ಬದುಕನ್ನು ಸವೆಸುತ್ತಿರುವ ಅಮ್ಮಂದಿರಿಗೆ ನಮ್ಮ ನಮನ

English summary
Mothers' day special article: A mother whi is struggling with HIV positive has saved her son from this deadly disease and facing society with immense courage only for her son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more