ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!

|
Google Oneindia Kannada News

ಮಲೆನಾಡಲ್ಲಿ ಜೋರು ಮಳೆಯಂತೆ... ಈ ಸುದ್ದಿ ಕೇಳುತ್ತಿದ್ದಂತೆಯೇ ಅವ್ಯಕ್ತ ಸಂಭ್ರಮವೊಂದು ಮನಸ್ಸಲ್ಲಿ ಸದ್ದಿಲ್ಲದೆ ಬಂದು ಕೂರುತ್ತೆ. ತುಂಟ ಬಾಲ್ಯದ ಸುಂದರ ಕ್ಷಣಗಳು ನೆನಪಿನಂಗಳದಲ್ಲಿ ರಂಗಿನ ರಂಗೋಲಿ ಬರೆಯುತ್ತೆ.

ಮೊದಲ ಮಳೆ ಮಣ್ಣಿಗೆ ಮುತ್ತಿಕ್ಕುವ ಹೊತ್ತು. ಆಹಾ..! ಆ ಮಣ್ಣಿನ ಪರಿಮಳ... ಆಸ್ವಾದಿಸಿದವರಿಗೇ ಗೊತ್ತು!

ಮಲೆನಾಡಿನ ಹಳ್ಳಿಗಳಲ್ಲಿ ಹುಟ್ಟಿದವರಿಗೆ ಮಳೆಗಾಲವೆಂದರೆ ಕೇವಲ ಪ್ರಕೃತಿ ನಿಯಮದ ನೀರಸ ಪ್ರಕ್ರಿಯೆಯಲ್ಲ. ಅದು ಸಂಭ್ರಮದ ಹಬ್ಬ. ಹನಿ ಹನಿಯಲ್ಲೂ ಹುದುಗಿರುವ ಮಧುರ ಅನುಭೂತಿ ಮೈಯೊಡ್ಡಿ ನೆಂದವರಿಗಷ್ಟೇ ದಕ್ಕಿದ ಅದೃಷ್ಟ! ತುಂಬಿದ ಹೊಳೆ, ಮುರಿದು ಬಿದ್ದ ಮರಗಳು, ಅಪರೂಪದ ಅತಿಥಿಯಾದ ಕರೆಂಟು, ಸೋರುವ ಮನೆ, ಬೆಚ್ಚಗೆ ಕೂತು ತಿನ್ನುವ ಹಪ್ಪಳ, ಮೂರು ಹೊತ್ತೂ ಉರಿಯುತ್ತಲೇ ಇರುವ ಅಗ್ಗಿಷ್ಟಿಕೆ, ಧೋ ಎಂದು ಸುರಿವ ಮಳೆ, ಜೀರುಂಡೆಯ ನಿರಂತರ ಸುಪ್ರಭಾತ... ಮಲೆನಾಡಿನ ಮಳೆಯೊಳಗೆ ಹೊಸೆದು, ಬೆಸೆದ ಸಂಗತಿಗಳಿವು!

ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...

ಹೊರಗಿನ ಪ್ರಪಂಚದೊಂದಿಗಿನ ಸಂವಹನದ ಕೊಂಡಿಯೇ ಕಳಚಿಕೊಂಡಂಥ ದ್ವೀಪದ ಬದುಕು ಮಲೆನಾಡ ಮಳೆಗಾಲ ಅಲ್ಲಿನ ಜನರಿಗೆ ನೀಡುವ ಬಳುವಳಿ! ಇಳೆಗೆ ಜೀವಕಳೆ ನೀಡುವ, ಹೊಟ್ಟೆಗೆ ಅನ್ನ ನೀಡುವ ಮಳೆಗಾಲವನ್ನು ಬೈದವರು ಇವರಲ್ಲ, ಬದಲಾಗಿ ಅದು ಬಂದಂತೇ ಸ್ವೀಕರಿಸಿ, ಮಳೆಯನ್ನು ಪೂಜಿಸುವವರು ಇವರು!

ಈಗಲೂ ಮಳೆ ಸುರಿಯುತ್ತಿದೆ. ಈ ಜೋರು ಮಳೆ, ಅದು ಅನಾಮತ್ತಾಗಿ ಹೊತ್ತು ತರುವ ಬಾಲ್ಯದ ನೆನಪು ಸಂಭ್ರಮದ ಜೋಪಡಿಯಲ್ಲಿ ಬೆಚ್ಚಗೆ ಕೂತು ಕಚಗುಳಿ ಇಡುತ್ತೆ!

ವ್ಹಾವ್... ಶಾಲೆಗೆ ರಜೆಯಂತೆ..!

ವ್ಹಾವ್... ಶಾಲೆಗೆ ರಜೆಯಂತೆ..!

ಅಡಿಕೆ ಕೊನೆಗಳಿಗೆ ಕೊಳೆ ರೋಗ ಬಾರದಂತೆ ಔಷಧಿ ಹೊಡೆಸುವ ತಲೆಬಿಸಿ ಒಂದೆಡೆ, ಗದ್ದೆ ನೆಟ್ಟಿಯ ಸಂಭ್ರಮ ಇನ್ನೊಂದೆಡೆ. ಇದ್ಯಾವುದರ ಪರಿವೆಯೂ ಇಲ್ಲದೆ, ಮಳೆ ಹೆಚ್ಚಾದಷ್ಟೂ ಖುಷಿ ಪಡುವವರೆಂದರೆ ತುಂಟ ಮಕ್ಕಳು. ಜೋರು ಮಳೆ ಅಂತ ಶಾಲೆಗೆ ಸಿಗುವ ರಜೆಯ ಮಜ ಅನುಭವಿಸಬೇಕಲ್ಲ! ಶಾಲೆಗೆ ರಜೆ ಅಂತ ಗೊತ್ತಾಗೋದು ಆ ದಿನ ಶಾಲೆಗೆ ಹೋದ ಮೇಲೆಯೇ! ಧಾರಾಕಾರವಾಗಿ ಸುರಿವ ಮಳೆಯಲ್ಲಿ ನಾಲ್ಕಾರು ಮೈಲಿ ದೂರ ನಡೆದು ಹೋಗಿ, ಶಾಲೆ ತಲುಪಿದರೆ 'ಈ ದಿನ ರಜೆ' ಅನ್ನೋ ಘೋಷಣೆ.ಆ ಮಾತು ಕೇಳುತ್ತಿದ್ದಂತೆಯೇ... ನಡೆದು ಬಂದ ಆಯಾಸವೆಲ್ಲ ಹೋಗಿ ಎಂಥದೋ ಸಂಭ್ರಮ ಮನಸ್ಸು ತುಂಬಿಕೊಳ್ಳುತ್ತಿತ್ತು!

ನೆನಪಿನ ಸಾಗದರಲ್ಲಿ ಕಾಗದದ ದೋಣಿ!

ನೆನಪಿನ ಸಾಗದರಲ್ಲಿ ಕಾಗದದ ದೋಣಿ!

'ಶಾಲೆಗೆ ರಜೆಯಂತೆ' ಎಂದು ಕೂಗುತ್ತ ವಾಪಸ್ ಮನೆಗೆ ಬರುವ ಸಂಭ್ರಮ ನೋಡಬೇಕು! ಮಳೆಗಾಲಕ್ಕೆಂದೇ ಹಠ ಮಾಡಿ ತರಿಸಿಕೊಂಡ ಚಪ್ಪಲಿಯಂತೂ ಆಗೆಲ್ಲ ಕಾಲಲ್ಲಿದ್ದಿದ್ದಕ್ಕಿಂತ ಕೈಯಲ್ಲಿದ್ದಿದ್ದೇ ಹೆಚ್ಚು! ಚಪ್ಪಲಿ ಹಾಕಿಕೊಂಡು ಬಿದ್ದರೆ ಅನ್ನೋ ಭಯವೂ ಸೇರಿ ಕಾಲಲ್ಲಿರಬೇಕಾದ್ದು ಕೈಯಲ್ಲಿ ಭದ್ರವಾಗಿರುತ್ತಿತ್ತು. ಕಡ್ಡಿ ಮುರಿದರೂ ಮಳೆಯಿಂದ ರಕ್ಷಿಸುತ್ತಿದ್ದ ಛತ್ರಿ, ಜೋರು ಗಾಳಿಗೆ ಡಿಶ್ ಆಗಿ ಹಾರಾಡಿದ್ದೇ ಹೆಚ್ಚು! ಕಚ್ಚಾಪಟ್ಟಿಯ(Rough Notes) ಹಾಳೆಗಳೆಲ್ಲ ಕಾಗದದ ದೋಣಿಯಾಗಿ ಅದೆಷ್ಟು ದೂರ ತಲುಪಿದ್ದವೋ..! ಇಂದಿಗೂ ನೆನಪಿನ ಸಾಗರದಲ್ಲಿ ಅವೇ ಬಂದು ತೇಲಿದ ಅನುಭವ!

ಈ ಹಳೇ ಶಾಲೆಯ ಗೋಡೆ ಬೀಳಬಾರದಾ..?!

ಈ ಹಳೇ ಶಾಲೆಯ ಗೋಡೆ ಬೀಳಬಾರದಾ..?!

ಬೆಚ್ಚಗೆ ಮನೆಯಲ್ಲೇ ಕೂತುಬಿಡೋಣ ಎನ್ನಿಸುವ ಈ ಮಳೆಯಲ್ಲೂ ಶಾಲೆಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದಾಗಲಂತೂ ಅದೆಷ್ಟು ಬೈದುಕೊಂಡಿದ್ದೆವೋ! 'ಇಷ್ಟು ಜೋರು ಮಳೆ ಬಂದು ಅಡಿಕೆ ಮರಗಳೆಲ್ಲ ಲಟ ಲಟಾಂತ ಮುರಿದು ಬಿದ್ರೂ, ಈ ಹಳೇ ಶಾಲೆಯ ಗೋಡೆ ಮಾತ್ರ ಬೀಳಲ್ಲಪ್ಪ! ಆ ಗೋಡೆ ಬಿದ್ದು ಒಂದಷ್ಟು ದಿನ ರಜಾ ಆದ್ರೂ ಸಿಕ್ಬಾರ್ದಾ..?' ಈ ತುಂಟ ಯೋಚನೆಯೊಂದಿಗೇ ಎಷ್ಟೋ ಮಳೆಗಾಲ ಆರಂಭವಾಗಿದ್ದಿದೆ! ಸರಸ್ವತಿಯ ನಿಲಯ, ನಮಗೆ ಭವಿಷ್ಯ ನೀಡಿದ ಶಾಲೆಯನ್ನು ಆಗ ಹೀಗೆಲ್ಲ ಬೈದುಕೊಂಡಿದ್ದೆವಲ್ಲ ಎಂದು ನೆನಪಿಸಿಕೊಂಡರೆ ನಗುವಿನೊಂದಿಗೆ ಈಗ ಕೋಪವೂ ಉಕ್ಕುತ್ತೆ!

ಅಜ್ಜಿಯ ಅಗ್ಗಿಷ್ಟಿಕೆ ಆರಿದ್ದೇ ಇಲ್ಲ!

ಅಜ್ಜಿಯ ಅಗ್ಗಿಷ್ಟಿಕೆ ಆರಿದ್ದೇ ಇಲ್ಲ!

ರಸ್ತೆ ರಸ್ತೆಯಲ್ಲೂ ಜಾರುಬಂಡಿಯಾಡುತ್ತ, ಒದ್ದೆ ಯೂನಿಫಾರ್ಮ್ನಲ್ಲೇ ಶಾಲೆಯಲ್ಲಿ ನಡುಗುತ್ತ ಕೂತಿದ್ದ ದಿನಗಳನ್ನು ಮರೆಯುವುದು ಹೇಗೆ? ಇರುತ್ತಿದ್ದ ಒಂದೇ ಯೂನಿಫಾರ್ಮ್ ಅನ್ನು ಸಂಜೆ ಮನೆಗೆ ಬಂದು ಅಗ್ಗಿಷ್ಟಿಕೆಯ ಮೇಲೆ ಕಟ್ಟಿದ್ದ ಹಗ್ಗದ ಮೇಲೆ ಒಣಗಿ ಹಾಕಿ, ಮತ್ತೆ ಮರುದಿನ ಅದನ್ನೇ ತೊಟ್ಟು ಹೋಗಿಲ್ಲವೇ?! ಅಜ್ಜಿ ಹಾಕಿಟ್ಟ ಅಗ್ಗಿಷ್ಟಿಕೆಯಂತೂ ಮಳೆಗಾಲದ ಮೂರರಿಂದ ನಾಲ್ಕು ತಿಂಗಳು ಆರಿದ್ದೇ ಇಲ್ಲ. ಮಕ್ಕಳಿಗಂತೂ ಊಟ, ಕುರುಕುಲು ತಿಂಡಿ ಎಲ್ಲ ಅಲ್ಲಿಗೇ ಸಪ್ಲೈ ಆಗಬೇಕಿತ್ತು!

ಮನೆಮದ್ದುಗಳು ಒಂದೋ ಎರಡೋ!

ಮನೆಮದ್ದುಗಳು ಒಂದೋ ಎರಡೋ!

ಮಳೆಗಾಲದ ಆರಂಭದಿಂದ ಮಲೆನಾಡಿನ ಮನೆಗಳಲ್ಲಿ ಅಡುಗೆಯೆಂದರೆ ಅದು ಮನೆ ಮದ್ದು ಎಂದೇ ಅರ್ಥ! ಮಳೆಗಾಲಕ್ಕೆ ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ಹೆಚ್ಚಿಸುವ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಪದಾರ್ಥಗಳಲ್ಲದೆ ಬೇರೇನೂ ದಕ್ಕುತ್ತಿರಲಿಲ್ಲ. ಅರಿಶಿಣ ಕೊಂಬಿನ ಗೊಜ್ಜು, ಅಮೃತ ಬಳ್ಳಿಯ ಕಷಾಯ, ಕೆಸುವಿನ ಕರಕಲಿ(ಗೊಜ್ಜು)... ರುಚಿಗೂ ಮೋಸವಿಲ್ಲದೆ ಅಜ್ಜಿ, ಅಮ್ಮ ಮಾಡಿಕೊಡುತ್ತಿದ್ದ ಈ ಮನೆಮದ್ದುಗಳು ಒಂದೋ ಎರಡೋ!

ಕರೆಂಟು ನಾಪತ್ತೆಯಾಗಿದೆ, ನೀವೇನಾದರೂ ನೋಡಿದ್ದೀರಾ?!

ಕರೆಂಟು ನಾಪತ್ತೆಯಾಗಿದೆ, ನೀವೇನಾದರೂ ನೋಡಿದ್ದೀರಾ?!

ಮಲೆನಾಡಲ್ಲಿ ಮಳೆಗಾಲದಲ್ಲಿ ಕರೆಂಟು ಬಂದರೆ ಆದು ಜಗತ್ತಿನ ಅದ್ಭುತಗಳಲ್ಲೊಂದು! ಕರೆಂಟು ಎಂಬ ಅತಿಥಿ ಮಳೆಗಾಲದ ಆರಂಭದಲ್ಲಿ ತಲೆಮರೆಸಿಕೊಂಡರೆ, ಮತ್ತೆ ಹಿಂದಿರುಗುವುದು ಚೌತಿ(ಗಣೇಶ ಚತುರ್ಥಿ) ಸಮಯದಲ್ಲೇ! ಅದೂ ಗ್ಯಾರಂಟಿ ಏನಿಲ್ಲ! ಟಿವಿ ಇಲ್ಲ, ಫೋನ್ ಸಂಪರ್ಕವಿಲ್ಲ, ಕೆಲವೊಮ್ಮೆ ಬಸ್ ಗಳಿಲ್ಲ, ಮನೆಯ ವಾಹನಗಳನ್ನು ತೆಗೆಯುವುದಕ್ಕೆ ರಸ್ತೆ ಸರಿಯಿಲ್ಲ... ಯಾರಾದರೂ ಹುಷಾರು ತಪ್ಪಿದರೆ, ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದರೆ, ಗರ್ಭಿಣಿಯರಿದ್ದರೆ ಅವರ ಪಾಡು ದೇವರಿಗೇ ಪ್ರೀತಿ!

ಸಂಭ್ರಮ ಮತ್ತು ಸಾಹಸದ ಮಿಶ್ರಣ

ಸಂಭ್ರಮ ಮತ್ತು ಸಾಹಸದ ಮಿಶ್ರಣ

ಅಮೋಘ ಸೌಂದರ್ಯದ ಗಣಿಯಾದ ಮಲೆನಾಡಿನ ಮಳೆಗಾಲ ಸಂಭ್ರಮ ಮತ್ತು ಸಾಹಸದ ಮಿಶ್ರಣ. ಈ ಭಾಗದಲ್ಲಿ ಹುಟ್ಟಿದ ಮಕ್ಕಳಿಗೆ ಸಿಕ್ಕಂಥ ಬಾಲ್ಯ, ಪ್ರಕೃತಿಯೇ ಕಲಿಸಿದ ಜೀವನ ಪಾಠ ಬೆಲೆಕಟ್ಟಲಾರದ ಸಂಪತ್ತು! ಪ್ರತಿ ಮಳೆಗಾಲ ಬಂದಾಗಲೂ ಬಾಲ್ಯದ ನೆನಪುಗಳ ನವಿಲುಗರಿ ಮರಿಹಾಕಿದಂತನ್ನಿಸುತ್ತೆ. ವಿದ್ಯೆ, ಕೆಲಸ, ಮದುವೆ... ಎನ್ನುತ್ತ ಮಲೆನಾಡನ್ನು ಬಿಟ್ಟು ಬದುಕಿನ ಅನಿವಾರ್ಯತೆಗೆ ಹೊಂದಿಕೊಳ್ಳಬೇಕಾದಲೂ ನಮ್ಮೊಂದಿಗುಳಿದಿದ್ದು ಬಾಲ್ಯದ ಮಧುರ ನೆನಪುಗಳೊಂದೇ.
ನಿಜ, ಈ ಮಲೆನಾಡ ಮಳೆ ಭುವಿಗೆ ಬೀಳೋ ಹೊತ್ತು, ಮಣ್ಣಿನ ಪರಿಮಳ ತಂದ ಮತ್ತು, ಜಿಟಿ ಜಿಟಿ ಮಳೆ ಇತ್ತ ನೆನಪಿನ ಮುತ್ತು... ಈ ಸಂಭ್ರಮ ಅನುಭವಿಸಿದವರಿಗೇ ಗೊತ್ತು!

English summary
Monsoon 2018: Malenadu, the place is in its glory in the monsoon season; for any rain lover this region is a must visit place during the south west monsoon. Uttara Kananada, Sivamogga, Chikkamagaluru districts are the perfect destinations for rain lovers!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X