• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018ರಲ್ಲಿ 'ಮಿಟೂ' ಎಂಬ ಬಿರುಗಾಳಿಗೆ ಸಿಕ್ಕು ತತ್ತರಿಸಿದ ಖ್ಯಾತನಾಮರು!

|

ಯಾವ ಸುಳಿವೂ ನೀಡದೆ ಸದ್ದಿಲ್ಲದೆ ಅಪ್ಪಳಿಸಿ, ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಮಾಡಿ, ರಾಡಿ ಎಬ್ಬಿಸಿ, ಥೇಟ್ ಸುನಾಮಿಯಂತೆ ಸರ್ವನಾಶ ಮಾಡಿ ಏನೂ ಆಗೇಇಲ್ಲವೇನೋ ಎಂಬಂತೆ ಮತ್ತೆ ಶಾಂತವಾಗಿದೆ 'ಮಿಟೂ' ಎಂಬ ಭಾರತದ ಮಹಿಳಾಮಣಿಗಳು ಎಬ್ಬಿಸಿದ ಆಂದೋಲನ.

ಮಿಟೂ ಅಬ್ಬರಕ್ಕೆ ಅನೇಕರು ಥಂಡಾ ಹೊಡೆದಿದ್ದಾರೆ, ಒಂದಿಷ್ಟು ಜನರ ಬದುಕಿನಲ್ಲಿಯೇ ಬಿರುಗಾಳಿ ಎದ್ದಿದೆ, ಕೆಲವೊಬ್ಬರು ಮೊಸಳೆ ಕಣ್ಣೀರು ಸುರಿಸಿದಂತೆ ಮಾಡಿ ಮ ಾಡಿದ ತಪ್ಪಿಗೆ ಕ್ಷಮಾಪಣೆ ಕೇಳಿದ್ದಾರೆ ಜಾಣತನ ಮೆರೆದಿದ್ದಾರೆ, ಇನ್ನೊಂದು ಮಂದಿ ತಾವು ಏನೂ ಮಾಡಿಲ್ಲ ಎಂದು ಘಂಟಾಘೋಷವಾಗಿ ಸಾರಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ.

2018ರಲ್ಲಿ ಹಠಾತ್ತನೆ ಪ್ರಸಿದ್ಧರಾದ ಅದೃಷ್ಟವಂತರಿವರು

ಈ ಚಳವಳಿಯ ಪ್ರಭಾವ ಎಷ್ಟೇ ಇರಬಹುದು, ಆದರೆ ಇದು ಇಡೀ ವ್ಯವಸ್ಥೆಯನ್ನು ಹಿಡಿದು ಗಡಗಡನೆ ಅಲ್ಲಾಡಿಸಿದ್ದಂತೂ ನಿಜ. ಕೆಲವು ವರುಷಗಳ ಹಿಂದೆ, ಕೆಲವು ದಶಕಗಳ ಹಿಂದೆ ನಡೆದ ಘಟನೆಗಳಲ್ಲಿ ಯಾವು ಸತ್ಯ, ಯಾವುದು ಮಿಥ್ಯ ಎಂಬುದು ಅವರವರ ಆತ್ಮಸಾಕ್ಷಿಗೆ ಗೊತ್ತಿರುತ್ತದೆ. ಕೋರ್ಟ್ ಕೂಡ ಈ ಘಟನೆಗಳ ಹಿಂದಿನ ಸತ್ಯವನ್ನು ಎಷ್ಟರ ಮಟ್ಟಿಗೆ ಬಯಲು ಮಾಡಬಲ್ಲವು? ಎಂಬುದು ತೀರ್ಪು ಬಂದ ನಂತರವಷ್ಟೇ ತಿಳಿಯಬಲ್ಲದು.

ಈ ವರ್ಷ ಜಗತ್ತಿನಲ್ಲಿ ಏನೇನಾಯ್ತು? 2018ರ 10 ಪ್ರಮುಖ ಘಟನೆಗಳು

ಆದರೆ, ಮಹಿಳೆ ಅಬಲೆಯಲ್ಲ, ಅವಕಾಶ ಸಿಕ್ಕರೆ ಸಬಲೆಯಾಗಿ ಅಸಹ್ಯ, ಅನಿಷ್ಟ, ಅಕ್ರಮ, ಅನೈತಿಕ ಚಟುವಟಿಕೆಗಳ ವಿರುದ್ಧ ಎದೆಸೆಟಿಸಿ ನಿಲ್ಲಬಲ್ಲೆವು ಎಂಬುದನ್ನು ಕೆಲವು ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಇದು ಮುಂದೆ ಇಂಥ ಘಟನೆಗಳು ಮತ್ತೆ ನಡೆಯಬಾರದು, ನಡೆಯಲೂ ಬಿಡಬಾರದು ಎಂಬ ಎಚ್ಚರಿಕೆಯನ್ನೂ, ಬೇಟೆಯಾಡಲು ಕಾದಿರುವ ಕಾಮುಕರಿಗೆ ನೀಡಿದೆ.

ಗೂಗಲ್ ಟಾಪ್ ಸರ್ಚ್: ಫೀಫಾ ವಿಶ್ವಕಪ್, ಪ್ರಿಯಾ ವಾರಿಯರ್ ಗೆ ಅಗ್ರಸ್ಥಾನ

ಇಷ್ಟೆಲ್ಲ ಬಿರುಗಾಳಿ ಎದ್ದರೂ ಕೆಲಸದ ಸ್ಥಳಗಳಲ್ಲಿ ನಡೆಯುವ ಇಂಥ ಲೈಂಗಿಕ ದೌರ್ಜನ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಏಕೆಂದರೆ, ಮಾನ ಮರ್ಯಾದೆಗೆ ಅಂಜುವವರು ಇಂಥ ಅಸಹ್ಯಕರ ಕೆಲಸಕ್ಕೆ ಕೈಹಾಕುವುದಿಲ್ಲ. ಇದಕ್ಕೆ ಪರಿಹಾರವಾದರೂ ಏನು? ನ್ಯಾಯಾಲಯ ಯಾವ ರೀತಿ ಮಧ್ಯ ಪ್ರವೇಶಿಸಬೇಕು? ದೌರ್ಜನ್ಯಕ್ಕೆ ಒಳಗಾದವರು ಯಾವ ರೀತಿ ವರ್ತಿಸಬೇಕು? ಮುಂತಾದವುಗಳ ಬಗ್ಗೆ ಚರ್ಚೆ ಆಗಬೇಕಾಗಿದೆ. ಅಲ್ಲಿಯವರೆಗೆ ಮಿಟೂ ಸುದ್ದಿಗೆ ಗ್ರಾಸವಾಗಿರುವವರತ್ತ ಒಂದು ಕಣ್ಣು ಹಾಯಿಸೋಣ.

ನಾನಾ ಮೇಲೆ ತನಿಶ್ರೀ ದತ್ತಾ ಮಿಟೂ ದಾಳಿ

ನಾನಾ ಮೇಲೆ ತನಿಶ್ರೀ ದತ್ತಾ ಮಿಟೂ ದಾಳಿ

ಪಾಶ್ಚಾತ್ಯ ರಾಷ್ಟ್ರಗಳ ರೀತಿಯಲ್ಲಿಯೇ ಮಿಟೂ ಅಭಿಯಾನ ನಮ್ಮ ದೇಶದಲ್ಲಿಯೂ ಆರಂಭವಾಗಿತ್ತಾದರೂ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದ್ದು, ಖ್ಯಾತ ಹಿಂದಿ ಚಿತ್ರನಟ ನಾನಾ ಪಾಟೇಕರ್ ವಿರುದ್ಧ ಒಂದಾನೊಂದು ಕಾಲದ ಸುಂದರಿ, ಆದರೀಗ ಸ್ಥೂಲದೇಹಿಯಾಗಿರುವ ನಟಿ ತನುಶ್ರೀ ದತ್ತಾ ಅವರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತಾಗಿ ಪ್ರಸ್ತಾಪವೆತ್ತಿದಾಗ. 2008ರಲ್ಲಿ ಬಿಡುಗಡೆಯಾದ 'ಹಾರ್ನ್ ಓಕೆ' ಚಿತ್ರೀಕರಣ ಸಂದರ್ಭದಲ್ಲಿ ತಾವೇ ನೃತ್ಯ ಕಲಿಸುವುದಾಗಿ ಹೇಳಿ, ತಮ್ಮ ಮೈಯನ್ನು ಅನಗತ್ಯವಾಗಿ ಮುಟ್ಟಿ ದೌರ್ಜನ್ಯ ಎಸಗಿದ್ದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಇದು ಗಾಳಿಗೆ ಸಿಕ್ಕ ಬೆಂಕಿಯಂತೆ ಹಿಂದಿ ಚಿತ್ರರಂಗದಲ್ಲಿ ವಿಸ್ತರಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ. ಚಿತ್ರದಲ್ಲಿ ಮಾತುಗಾರಿಕೆಯಿಂದಲೇ ಅಬ್ಬರಿಸುವ ನಾನಾ, ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಈಗ ಇಬ್ಬರು ಸದ್ದುಗದ್ದಲ ಮಾಡುತ್ತಲೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಿಟೂ ಆರೋಪ ಹಿಂದಿ ಚಿತ್ರರಂಗದಲ್ಲಿ ಕ್ರಾಂತಿ ಎಬ್ಬಿಸಿದೆ. ಇದರ ಹಿಂದೆಯೇ ಇನ್ನೂ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ.

ತನುಶ್ರೀ ಆರೋಪ : ನಾನಾ ಪಾಟೇಕರ್, ಗಣೇಶ್ ವಿರುದ್ಧ ಎಫ್ಐಆರ್

ಹಲವರ ಮೇಲೆ ಮಿಟೂ ಆರೋಪಗಳ ಸುರಿಮಳೆ

ಹಲವರ ಮೇಲೆ ಮಿಟೂ ಆರೋಪಗಳ ಸುರಿಮಳೆ

ನಾನಾ ಪಾಟೇಕರ್ ನಂತರ ಮಿಟೂ ಅಭಿಯಾನಕ್ಕೆ ಗುರಿಯಾದವರು ಕ್ವೀನ್ ಚಿತ್ರದ ಖ್ಯಾತಿಯ ನಿರ್ಮಾಪಕ ಮತ್ತು ನಿರ್ದೇಶಕ ವಿಕಾಸ್ ಬಾಹ್ಲ್, ಎಕ್ಕಾ ರಾಜಾ ರಾಣಿ ನಿನ್ನ ಕೈಯೊಳಗ, ಹಿಡಿ ಮಣ್ಣು ನಿನ್ನ ಬಾಯೊಳಗ ಕನ್ನಡ ಹಾಡಿನ ಖ್ಯಾತಿಯ, ಕಂಚಿನ ಕಂಠದ ಹಾಡುಗಾರ ಕೈಲಾಶ್ ಖೇರ್, ಕಪೂರ್ ಆಂಡ್ ಸನ್ಸ್ ಖ್ಯಾತಿಯ ರಜತ್ ಕಪೂರ್, ಸಂಸ್ಕಾರಿ ಬಾಬು ಎಂದೇ ಖ್ಯಾತಿವೆತ್ತಿದ್ದ ಹಿರಿಯ ನಟ ಅಲೋಕ್ ನಾಥ್, ಸೆಕ್ಸ್ ಕಾಮಿಡಿ ಮೂಲಕವೇ ಅಪಹಾಸ್ಯಕ್ಕೆ ಗುರಿಯಾಗಿರುವ ಫ್ಲಾಪ್ ಚಿತ್ರಗಳ ನಿರ್ದೇಶಕ ಸಾಜಿದ್ ಖಾನ್ ಮತ್ತು ಎಐಬಿ ಸ್ಟಾಂಡ್ ಅಪ್ ಕಾಮಿಡಿಯನ್ ಗಳೂ ಮಿಟೂ ಆರೋಪಕ್ಕೆ ತುತ್ತಾಗಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೂ ವ್ಯಾಪಿಸಿದೆ. ಉಪ್ಪು ತಿಂದವರು ನೀರು ಕುಡಿದೇ ಕುಡಿಯಲೇಬೇಕು.

ಶಾಕಿಂಗ್ ಸುದ್ದಿ: ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ.!

ಸಂಸ್ಕಾರಿ ಬಾಬು ಅಲೋಕ್ ಹೀಗೆಲ್ಲ ಮಾಡಿದ್ದರೆ?

ಸಂಸ್ಕಾರಿ ಬಾಬು ಅಲೋಕ್ ಹೀಗೆಲ್ಲ ಮಾಡಿದ್ದರೆ?

ಇವರಲ್ಲಿ ಭಾರೀ ಸದ್ದು ಮಾಡಿದ್ದು ಸಂಸ್ಕಾರಿ ಬಾಬು ಎಂದೇ ಜನಜನಿತರಾಗಿರುವ, ಸಂಸ್ಕಾರವಂತ ನಟನ ಪಾತ್ರದಲ್ಲಿಯೇ ಮಿಂಚಿ ಸ್ಟಾರ್ ಅನ್ನಿಸಿಕೊಂಡಿರುವ ಅಲೋಕ್ ನಾಥ್ ಅವರ ಪ್ರಕರಣ. ಒಬ್ಬರಲ್ಲ ಇಬ್ಬರಲ್ಲ ನಾಲ್ಕಾರು ಮಹಿಳೆಯರು ಅಲೋಕ್ ನಾಥ್ ಅವರು ಎರಡು ದಶಕಗಳ ಹಿಂದೆ ಎಸಗಿರುವ ದೌರ್ಜನ್ಯವನ್ನು ಈಗ ಧೈರ್ಯ ಮಾಡಿ ಬಹಿರಂಗಬಡಿಸಿದ್ದಾರೆ. ಅವರಲ್ಲಿ ಪ್ರಮುಖರು ಬರಹಗಾರ್ತಿ ವಿನ್ತಾ ನಂದಾ ಅವರದ್ದು. ಸುಮಾರು ಎರಡು ದಶಕಗಳ ಹಿಂದೆ ತಮ್ಮ ಮನೆಯಲ್ಲಿ ಪಾರ್ಟಿ ಮಾಡುವಾಗ ಮದ್ಯದ ಅಮಲಿನಲ್ಲಿ ಇದ್ದ ತಮ್ಮ ಮೇಲೆ ಎರಗಿ ಅತ್ಯಾಚಾರ ಎಸಗಿದ್ದರು ಎಂದು ವಿನ್ತಾ ನಂದಾ ಗಂಭೀರ ಆರೋಪ ಮಾಡಿದ್ದಾರೆ. ಅವರ ನಂತರ ಸ್ಯಾಂಡಿ ಎಂದೇ ಕರೆಯಿಸಿಕೊಳ್ಳುವ ಸಂಧ್ಯಾ ಮೃದುಲ್ ಅವರು, ಕೊಡೈಕೆನಾಲ್ ನಲ್ಲಿ ಟೆಲಿಫಿಲ್ಮಂಗಾಗಿ ಶೂಟ್ ಮಾಡುತ್ತಿದ್ದಾಗ ತಮ್ಮ ಮೇಲೆ ಹೇಗೆ ಅಲೋಕ್ ಅತ್ಯಾಚಾರವೆಸಗಲು ಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಅವರ ನಂತರ, ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮ ಎದುರಿಗೇ ಅಲೋಕ್ ಬೆತ್ತಲಾದರು ಎಂದು ಹೆಸರು ಹೇಳಲಿಚ್ಛಿಸದ ನಟಿಯೊಬ್ಬರು 'ನಗ್ನ' ಸತ್ಯವನ್ನು ನುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಲೋಕ್ ಅಸಹ್ಯವಾಗಿ ವರ್ತಿಸುತ್ತಿದ್ದರು ಎಂದು ಇನ್ನೂ ಹಲವಾರು ನಟಿಯರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಅಲೋಕ್ ನಾಥ್ ಅವರ ಮುಖವಾಡ ಕಳಚಿಬಿದ್ದಿದೆ, ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗಿದೆ.

'ಸಂಸ್ಕಾರಿ'ಯಿಂದ ಅತ್ಯಾಚಾರ! ಸ್ಫೋಟಕ ಸುದ್ದಿ ಹೊರಹಾಕಿದ ವಿನ್ತಾ ನಂದಾ

ಖ್ಯಾತ ಪತ್ರಕರ್ತ ಎಂಜೆ ಅಕ್ಬರ್ ಮಾಡಿದ್ದೇನು?

ಖ್ಯಾತ ಪತ್ರಕರ್ತ ಎಂಜೆ ಅಕ್ಬರ್ ಮಾಡಿದ್ದೇನು?

ಚಿತ್ರರಂಗದಲ್ಲಿ ಹೀಗಾಗಿದ್ದರೆ, ಪತ್ರಿಕೋದ್ಯಮದಲ್ಲಿ ಮಿಟೂ ಬಿರುಗಾಳಿ ಎಬ್ಬಿಸಿದ್ದು ಮಾಜಿ ಕೇಂದ್ರ ಸಚಿವ, ಮಾಜಿ ಪತ್ರಕರ್ತ ಮೊಬಶಾರ್ ಜಾವೇದ್ ಅಕ್ಬರ್ ಅವರ ವಿರುದ್ಧ ಅಪ್ಪಳಿಸಿದ ಮಿಟೂ ಆರೋಪಗಳು. ಇವರ ವಿರುದ್ಧ ಡಜನ್ ಗಟ್ಟಲೆ ಮಹಿಳೆಯರು, ತಮ್ಮನ್ನು ಎಂಜೆ ಅಕ್ಬರ್ ಹೇಗೆ ಲೈಂಗಿಕವಾಗಿ ದುರ್ಬಳಸಿಕೊಂಡರು ಎಂಬ ಕಥಾನಕವನ್ನು ಬಿಚ್ಚಿಟ್ಟಿದ್ದಾರೆ. ಈ ಆರೋಪಗಳಿಗೆ ನಾಂದಿ ಹಾಡಿದವರು ಪ್ರಿಯಾ ರಮಣಿ ಎಂಬ ಪತ್ರಕರ್ತೆ. ಏಷ್ಯನ್ ಏಜ್ ಪತ್ರಿಕೆ ಸೇರಲೆಂದು ಸಂದರ್ಶನಕ್ಕೆ ಹೋಗಿದ್ದಾಗ, ಕೇವಲ ಗೌನ್ ಮಾತ್ರ ಧರಿಸಿದ್ದ ಅಕ್ಬರ್ ಹೇಗೆ ಅಸಭ್ಯವಾಗಿ ನಡೆದುಕೊಂಡು ಎಂದು ಹೇಳಿ ಸರಣಿ ಸರಣಿ ಆರೋಪಗಳಿಗೆ ಶ್ರೀಕಾರ ಹಾಕಿದರು. ಸುಪರ್ಣಾ ಶರ್ಮಾ ಎಂಬುವವರು ಅಕ್ಬರ್ ತಮ್ಮ ಕಂಚುಕದ ಕೊಂಡಿ ಕಳಚಿದ್ದರು ಎಂದಿದ್ದರೆ, ಮಜಲಿ ಡೇ ಪುಯ್ ಕಂಪ್ ಎಂಬ ಪತ್ರಕರ್ತೆ, ಹಸ್ತಲಾಘವ ಮಾಡುವ ನೆಪದಲ್ಲಿ ತಮ್ಮ ಬಾಯೊಳಗೆ ನಾಲಿಗೆಯನ್ನು ಹರಿಯಬಿಟ್ಟಿದ್ದರು ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ಪತ್ರಕರ್ತೆ ಗಝಾಲಾ ವಹಾಬ್ ತಮ್ಮ ಮೇಲೆ ನಡೆದ ದೌರ್ಜನ್ಯದ ಕಥಾನಕವನ್ನೇ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರು ತಮ್ಮ ಸೊಂಟ ಹಿಡಿದು, ಸ್ತನಗಳ ಮೇಲೆಲ್ಲ ಕೈಯಾಡಿಸಿ ಅಸಹ್ಯ ಮೆರೆದಿದ್ದರು ಎಂದು ಆರೋಪಿಸಿದ್ದಾರೆ. ಇವರ ಹಿಂದೆಯೆ ಕನಿಕಾ ಗೆಹ್ಲೋಟ್, ರುಥ್ ಡೆವಿಡ್, ಸಾಬಾ ನಕ್ವಿ, ಶುತಾಪಾ ಪೌಲ್, ಶುಮಾ ರಹಾ, ಪ್ರೇರಣಾ ಬಿಂದ್ರಾ, ಕಾದಂಬರಿ ವಾಡೆ ಮುಂತಾದವರು ಎಂಜಿ ಅಕ್ಬರ್ ಎಂಥ ಕಾಮುಕರಾಗಿದ್ದರು ಎಂದು ತಮ್ಮ ಮೇಲಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?

ಬೆತ್ತಲಾಗು ಎನ್ನುತ್ತಿದ್ದನೆ ಸಾಜಿದ್ ಖಾನ್

ಬೆತ್ತಲಾಗು ಎನ್ನುತ್ತಿದ್ದನೆ ಸಾಜಿದ್ ಖಾನ್

ಈ ಎಲ್ಲ ಘಟನೆಗಳಿಗಿಂತ ಅಸಹ್ಯಾತಿಅಸಹ್ಯವಾಗಿ ವರ್ತಿಸಿದವರೆಂದರೆ ಸೆಕ್ಸ್ ಕಾಮಿಡಿ ಚಿತ್ರಗಳನ್ನು ಮಾಡುತ್ತಲೇ ನಿರ್ಮಾಪಕರನ್ನು ದಿವಾಳಿ ಎಬ್ಬಿಸಿರುವ ಸಾಜಿದ್ ಖಾನ್. ಇವರು ದೈಹಿಕವಾಗಿ ಮಹಿಳೆಯರ ಮೇಲೆ ಹಲ್ಲೆ ನಡೆಸದಿದ್ದರೂ, ಹೆಸರು ಮಾಡಬೇಕೆಂದು ಚಿತ್ರರಂಗಕ್ಕೆ ಬರುವ ಯುವ ನಟಿಯರೊಂದಿಗೆ ಲೈಂಗಿಕ ಮಾತುಕತೆ ನಡೆಸುವುದರಲ್ಲಿ ಅಗ್ರಗಣ್ಯ. ನೀನು ಸ್ಟಾರ್ ಆಗಬೇಕಿದ್ದರೆ ನಾನು ಹೇಳಿದ ಬಟ್ಟೆ ಧರಿಸಬೇಕು, ನಾನು ಹೇಳಿದಂತೆ ನಟಿಸಬೇಕು ಎಂದೆಲ್ಲ ಹೇಳಿ, ಹೊತ್ತಲ್ಲದ ಹೊತ್ತಿನಲ್ಲಿ ಕರೆ ಮಾಡಿ ಅಸಹ್ಯಕರ ಮಾತುಕತೆ ನಡೆಸುತ್ತಿದ್ದ ಎಂದು ಪ್ರಿಯಾಂಕಾ ಬೋಸ್, ರಚೇಲ್ ವೈಟ್, ಸಲೋನಿ ಚೋಪ್ರಾ, ಸಿಮ್ರನ್ ಸೂರಿ, ಕರಿಶ್ಮಾ ಉಪಾಧ್ಯಾಯ್ ಮುಂತಾದವರು ಸಾಜಿದ್ ಖಾನ್ ರನ್ನು ಮಾಧ್ಯಮಗಳಲ್ಲಿ ಬೆತ್ತಲೆ ಮಾಡಿದ್ದಾರೆ. ಜುಹೂದಲ್ಲಿರುವ ತಮ್ಮ ಮನೆಗೆ ಕರೆಯಿಸಿಕೊಂಡು "ನಾನು ನಿರ್ದೇಶಕ, ನಾನು ನಿನ್ನ ದೇಹ ಹೇಗಿದೆಯೆಂದು ನೋಡಬೇಕು, ಬೆತ್ತಲಾಗು" ಎಂದು ಸಾಜಿದ್ ಆಗ್ರಹಿಸಿದ್ದರೆಂದು ಸಿಮ್ರನ್ ಸೂರಿ ಟ್ವೀಟ್ ಮಾಡಿದ್ದರು. ಈ ಎಲ್ಲ ಆರೋಪಗಳ ಪರಿಣಾಮವಾಗಿ ಸಾಜಿದ್ ಖಾನ್ ಅವರನ್ನು ಎಲ್ಲ ಪ್ರಾಜೆಕ್ಟುಗಳಿಂದ ಕಿತ್ತು ಬಿಸಾಡಲಾಗಿದೆ.

ಸಾಜಿದ್ ಖಾನ್ ವಿರುದ್ಧ ಆರೋಪಗಳನ್ನು ಕೇಳಿ ಸಹೋದರಿ ಫರಾ ಖಾನ್ ಹೃದಯ ಛಿದ್ರ.!

ಮಹಿಳೆಯ ತೊಡೆಯ ಮೇಲೆ ಕೈಲಾಶ್ ಕೈ

ಮಹಿಳೆಯ ತೊಡೆಯ ಮೇಲೆ ಕೈಲಾಶ್ ಕೈ

ಎಕ್ಕಾ ರಾಜಾ ರಾಣಿ ನಿನ್ನ ಕೈಯೊಳಗ ಹಿಡಿ ಮಣ್ಣು ನಿನ್ನ ಬಾಯೊಳಗ ಎಂದು ಕನ್ನಡ ಚಿತ್ರದಲ್ಲಿ ಹಾಡಿ ರಂಜಿಸಿದ್ದ ಕಂಚಿನ ಕಂಠದ ಗಾಯಕ ಕೈಲಾಶ್ ಖೇರ್ ಅವರೇ ಮಣ್ಣು ತಿನ್ನುವಂಥ ಕೆಲಸ ಮಾಡಿದ್ದರು ಎಂದು ಮಹಿಳಾ ಫೋಟೋ ಜರ್ನಲಿಸ್ಟ್ ವೊಬ್ಬರು ಆರೋಪ ಮಾಡಿದ್ದರು. ಸಂದರ್ಶನಕ್ಕಾಗಿ ಫೋಟೋ ಶೂಟ್ ಮಾಡಲೆಂದು ನಟಾಶಾ ಹೇಮರಾಜಾನಿ ಎಂಬ ಮಹಿಳಾ ಫೋಟೋ ಜರ್ನಲಿಸ್ಟ್ ಕೈಲಾಶ್ ಖೇರ್ ಮನೆಗೆ ಹೋಗಿದ್ದಾಗ, ಇಬ್ಬರೂ ಮಹಿಳೆಯರ ತೊಡೆಯ ಮೇಲೆ ಕೈಲಾಶ್ ಖೇರ್ ಕೈಹಾಕುತ್ತಿದ್ದುದನ್ನು ನೋಡಿ ಬೇಸತ್ತು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಅರ್ಜುನ್ ಸರ್ಜಾ ವರ್ಸಸ್ ಶ್ರುತಿ ಹರಿಹರನ್

ಅರ್ಜುನ್ ಸರ್ಜಾ ವರ್ಸಸ್ ಶ್ರುತಿ ಹರಿಹರನ್

ಮಿಟೂಗಳಮಿಟೂ ಅಂದ್ರೆ ಕನ್ನಡ ಚಿತ್ರರಂಗದ ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಕಿರಿಯ ನಟಿ ಶ್ರುತಿ ಹರಿಹರನ್ ಅವರು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪ. 'ವಿಸ್ಮಯ' ಚಿತ್ರೀಕರಣದ ಸಂದರ್ಭದಲ್ಲಿ ರಿಹರ್ಸಲ್ ಮಾಡುವಾಗ ಅರ್ಜುನ್ ಸರ್ಜಾ ಅವರು ಅನಗತ್ಯವಾಗಿ ತಮ್ಮನ್ನು ತಬ್ಬಿಕೊಳ್ಳುತ್ತಿದ್ದರು, ಮೈಮೇಲೆಲ್ಲ ಕೈಯಾಡಿಸುತ್ತಿದ್ದರು, ಫೋನ್ ಮಾಡಿ ರೆಸಾರ್ಟಿಗೆ ಹೋಗೋಣ ಅನ್ನುತ್ತಿದ್ದರು, ಒಂದು ಬಾರಿ ಹೋಟೆಲೊಂದರಲ್ಲಿ ತೊಡೆಯ ಮೇಲೂ ಕೈಯಿಟ್ಟು ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಚಿತ್ರದಲ್ಲಿ ಇಂಟಿಮೇಟ್ ಸನ್ನಿವೇಶಗಳಿದ್ದಾಗ ನಟಿಯನ್ನು ಮುಟ್ಟದೆ ನಟಿಸುವುದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದ ಅರ್ಜುನ್ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಲ್ಲದೆ ಶ್ರುತಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದಾರೆ. ಇದು ಫಿಲ್ಮಂ ಚೇಂಬರ್ ಮೆಟ್ಟಿಲೇರಿ, ಇಬ್ಬರ ನಡುವೆ ದಿವಂಗತ ಅಂಬರೀಶ್ ನೇತೃತ್ವದಲ್ಲಿ ಸಂಧಾನ ನಡೆಸಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಶ್ರುತಿ ಕೂಡ ಅರ್ಜುನ್ ವಿರುದ್ಧ ಕ್ರಮ ಜರುಗಿಸಬೇಕೆಂದು ನ್ಯಾಯಾಲಯದ ಕದ ತಟ್ಟಿದ್ದಾರೆ. ಈ ಪ್ರಕರಣ ಎತ್ತ ಸಾಗುವುದೋ, ಯಾರಿಗೆ ನ್ಯಾಯ ದೊರಕುವುದೋ?

#ಮಿಟೂ: ಹಿರಿಯ ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ

ಸಂಗೀತಾ ಭಟ್ ಆರೋಪ ಮಾಡಿದ್ದು ಯಾರ ಮೇಲೆ?

ಸಂಗೀತಾ ಭಟ್ ಆರೋಪ ಮಾಡಿದ್ದು ಯಾರ ಮೇಲೆ?

ಅಸಲಿಗೆ ಮೇಲಿನ ಅರ್ಜುನ್ ಮತ್ತು ಶ್ರುತಿ ಪ್ರಕರಣಕ್ಕೂ ಮೊದಲು, ತಮ್ಮ ಮೇಲೆಯೂ ಲೈಂಗಿಕ ಹಲ್ಲೆಯಾಗಿದೆ ಎಂದು ಯಾರ ಹೆಸರನ್ನೂ ಹೇಳದೆ ಚಿತ್ರನಟಿ ಸಂಗೀತಾ ಭಟ್ ಅವರು ಕತ್ತಲಲ್ಲಿ ಬಾಣ ಬಿಟ್ಟಿದ್ದಾರೆ. ಸಾಮಾಜಿಕ ತಾಣದಲ್ಲಿ ಅವರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ನೋವನ್ನು ಹಂಚಿಕೊಳ್ಳುತ್ತಿದ್ದಂತೆ ಊಹಾಪೋಹಗಳು ಹರಿದಾಡಲು ಆರಂಭವಾಗಿದ್ದವು. ಆದರೆ, ಅವರು ಒಂದು ಹಿಂಟ್ ಮಾತ್ರ ನೀಡಿದ್ದರು. ಅದೇನೆಂದರೆ, ಕನ್ನಡ ಚಿತ್ರರಂಗದ ಫೇಮಸ್ ಕುಟುಂಬದ ಸದಸ್ಯರಿಬ್ಬರು ತಮ್ಮನ್ನು ಲೈಂಗಿಕವಾಗಿ ದುರ್ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ಅವರು ಆರೋಪಿಸಿದ್ದರು. ಅವರು ಯಾರನ್ನೂ ಹೆಸರಿಸದೆ ಇದ್ದರಿಂದ ಅವರು ಬಿಟ್ಟ ಬಾಣ ಅವರ ವಿರುದ್ಧವೇ ತಿರುಗಿತು. ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಭಟ್ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಲು ಆರಂಭಿಸಲಾಯಿತು. ಕೊನೆಗೆ ಸಂಗೀತಾ ಅವರು ಕಣ್ಣೀರುಗರೆದು, ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ, ಯಾರ ವಿರುದ್ಧವೂ ಬೊಟ್ಟು ಮಾಡಿಲ್ಲ, ನನ್ನ ಮೇಲೆ ದಾಳಿ ಮಾಡಬೇಡಿ, ಇದನ್ನು ಹೆಚ್ಚು ಬೆಳೆಸಬೇಡಿ, ದಯವಿಟ್ಟು ನನ್ನ ಪಾಲಿಗೆ ನನ್ನನ್ನು ಇರಲು ಬಿಡಿ ಎಂದು ಗೋಗರೆಯಬೇಕಾಯಿತು.

ಸಂಗೀತಾ ಭಟ್ ಚಿತ್ರರಂಗ ಬಿಡಲು 'ಮೀಟೂ' ಕಾರಣವಲ್ಲ.! ಮತ್ತೇನು.?

ತಿಥಿ ಖ್ಯಾತಿಯ ಈರೇಗೌಡರ ಮೇಲೆ ಆರೋಪ

ತಿಥಿ ಖ್ಯಾತಿಯ ಈರೇಗೌಡರ ಮೇಲೆ ಆರೋಪ

ಈ ನಡುವೆ 'ತಿಥಿ' ಚಿತ್ರದಲ್ಲಿ ಚಿತ್ರಕಥೆ ಬರೆದು ಹೆಸರುವಾಸಿಯಾಗಿದ್ದ ಈರೇಗೌಡ ವಿರುದ್ಧವೂ ಮಿಟೂ ಆರೋಪ ಕೇಳಿಬಂದಿತು. ಇಲ್ಲಿ ಈರೇಗೌಡ ವಿರುದ್ಧ ಯಾವ ನಟಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ ಎಂಬುದು ಖಚಿತವಾಗಿಲ್ಲ. ಏಕೆಂದರೆ, ಏಕ್ತಾ ಎಂ ಎಂಬುವವರೊಬ್ಬರು ತಮ್ಮ ಸ್ನೇಹಿತೆಗೆ ಹೀಗಾಗಿದೆ ಎಂದು ಫೇಸ್ ಬುಕ್ ನಲ್ಲಿ ವಿವರಿಸಿದ್ದರು. ಆದರಲ್ಲಿ, ಚಿತ್ರಕಥೆ ಬರೆಯುವುದನ್ನು 'ಬಳೆಕೆಂಪ' ಚಿತ್ರವನ್ನು ನಿರ್ದೇಶಿಸಿದ್ದ ಈರೇಗೌಡ ಬಳಿ ಕಲಿಯಲೆಂದು ಬಂದಿದ್ದ ಆ ಅನಾಮಿಕ ನಟಿಯನ್ನು ಬ್ಯಾಡರಹಳ್ಳಿಗೆ ಕರೆದುಕೊಂಡು ಹೋಗಿದ್ದಾಗ, ಅವರ ಎದೆಯ ಮೇಲೆ ಕೈ ಇಟ್ಟಿದ್ದಲ್ಲದೆ, ಆ ನಟಿಯ ಮೇಲೆ ಸ್ಖಲನ ಮಾಡಿದ್ದರು ಎಂದು ಆ ನಟಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೇಗೌಡ ಅವರು ನಟಿಯ ಕ್ಷಮೆ ಕೇಳಿದ್ದರಿಂದ ಆ ಪ್ರಕರಣ ತಣ್ಣಗಾಗಿದೆ. ಆದರೆ ಆ ಯುವತಿ ಯಾರು, ಈಗೆಲ್ಲಿದ್ದಾರೆ, ಏನು ಕ್ರಮ ಜರುಗಿಸಿದ್ದಾರೆ ಇತ್ಯಾದಿ ವಿವರಗಳು ಎಲ್ಲಿಯೂ ಬಹಿರಂಗವಾಗಿಲ್ಲ.

'ತಿಥಿ' ಖ್ಯಾತಿಯ ಈರೇಗೌಡ ವಿರುದ್ಧ #ಮೀಟೂ ಆರೋಪ.!

English summary
MeToo allegations rock India in 2018 : Many dignitaries like Alok Nath, MJ Akbar, Nana Patekar, Arjun Sarja, Kailash Kher, Sajid Khan, Rajat Kapoor faced MeToo allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X