• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿಗಾಗಿ ಲಿಂಗಾಯತ ವಿವಾದದ ಬೇರಿಗೆ ಎಂಬಿ ಪಾಟೀಲರ ನೀರು

By ಆರ್ ಟಿ ವಿಠ್ಠಲಮೂರ್ತಿ
|

ಕೆಲ ಕಾಲದ ಹಿಂದೆ ಸಿದ್ದರಾಮಯ್ಯ ಅವರ ಬೆಂಬಲದಿಂದ ವೀರಶೈವ-ಲಿಂಗಾಯತ ವಿವಾದವನ್ನು ತಾರಕಕ್ಕೇರಿಸಿದ್ದ ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ ಈಗ ಸಿಎಂ ಕುಮಾರಸ್ವಾಮಿ ಅವರಿಗಾಗಿ ಈ ವಿವಾದದ ಬೇರುಗಳಿಗೆ ನೀರೆರೆಯಲು ಹೊರಟಿದ್ದಾರೆಯೇ?

ರಾಜಕೀಯ ವಲಯಗಳು ಈ ಪ್ರಶ್ನೆಯನ್ನು ಬಹಳ ಕುತೂಹಲದಿಂದ ಚರ್ಚೆಗೆ ಒಳಪಡಿಸಿವೆ. ಅಂದ ಹಾಗೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ವೀರಶೈವ-ಲಿಂಗಾಯತ ವಿವಾದವನ್ನು ಎಂ.ಬಿ. ಪಾಟೀಲ ಯಾವ ಲೆವೆಲ್ಲಿಗೆ ತೆಗೆದುಕೊಂಡು ಹೋಗಿದ್ದರು ಎಂಬುದು ರಹಸ್ಯದ ಸಂಗತಿ ಏನಲ್ಲ. ಹಾಗೆಯೇ ವೀರಶೈವರು ಬೇರೆ, ಲಿಂಗಾಯತರು ಬೇರೆ ಎಂದು ಪ್ರತಿಪಾದಿಸುವ ವಿಷಯದಲ್ಲಿ ಎಂ.ಬಿ.ಪಾಟೀಲರು ತೋರಿದ ಜೋಷ್ ಗೂ ಒಂದು ಕಾರಣವಿತ್ತು.

ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?

ಅದೆಂದರೆ, ಕರ್ನಾಟಕದ ಸಿಎಂ ಹುದ್ದೆಗೇರಬೇಕು ಎಂದರೆ ತಮಗೆ ಒಂದು ಪ್ರಬಲ ಸಮುದಾಯದ ಬೆಂಬಲ ರಕ್ಷೆಯಾಗಿರಬೇಕು ಎಂಬುದು. ಅವರಿಗೆ ಇದನ್ನು ಹೇಳಿಕೊಟ್ಟವರು ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕ್. ಆದರೆ ಯಾಕೆ ಎಂ.ಬಿ.ಪಾಟೀಲರಿಗೆ ಅದು ಈ ಟೆಕ್ನಿಕ್ಕನ್ನು ಹೇಳಿಕೊಟ್ಟಿತು ಎಂಬುದು ಬಹಿರಂಗವಾಗಿ ತುಂಬ ಚರ್ಚೆಗೊಳಗಾಗಿಲ್ಲ.

ವಾಸ್ತವವಾಗಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಸೆಟ್ಲ್ ಆಗುತ್ತಿದ್ದ ಕಾಲದಲ್ಲಿ ಸಚಿವರಾಗಿದ್ದ ಎಂ.ಬಿ. ಪಾಟೀಲ ಕೂಡಾ ಮುಖ್ಯಮಂತ್ರಿ ಹುದ್ದೆಗಾಗಿ ಹೈಕಮಾಂಡ್ ಎದುರು ಅಪ್ಲಿಕೇಷನ್ನು ಹಾಕಿಕೊಂಡು ಕುಳಿತಿದ್ದರು. ರಾಜಕೀಯವನ್ನು ಬಲ್ಲವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತದೆ. ಅದೆಂದರೆ, ಒಬ್ಬ ಮುಖ್ಯಮಂತ್ರಿಯ ವಿರುದ್ಧ ಹಲವರನ್ನು ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಲೇ ಇರುತ್ತದೆ. ಮೋದಿ ಅವಧಿಯಲ್ಲಿ ಅದು ಕಡಿಮೆ ಇರಬಹುದಾದರೂ ಕಾಂಗ್ರೆಸ್ ಅವಧಿಯಲ್ಲಿ ಅದು ಸದಾ ಜೀವಂತವಾಗಿರುತ್ತದೆ.

ಪಾಟೀಲರ ಕಿವಿಕಚ್ಚಿದ ಸಿದ್ದು ವಿರೋಧಿಗಳು

ಪಾಟೀಲರ ಕಿವಿಕಚ್ಚಿದ ಸಿದ್ದು ವಿರೋಧಿಗಳು

ಅದೇ ರೀತಿ ಹೈಕಮಾಂಡ್ ಲೆವೆಲ್ಲಿನಲ್ಲಿ ಸಿದ್ದರಾಮಯ್ಯ ವಿರೋಧಿಗಳು ಅಂತೇನಿದ್ದರು? ಅವರು ಎಂ.ಬಿ.ಪಾಟೀಲರ ಕಿವಿ ಕಚ್ಚಿ, ಇನ್ನೆಷ್ಟು ದಿನ ಅಂತ ಕಾಯುತ್ತಾ ಕೂರುತ್ತೀರಿ? ನೀವೂ ಸಿಎಂ ಹುದ್ದೆಗೆ ಟ್ರೈ ಮಾಡಿ, ಒಂದು ವೇಳೆ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡಿದರೆ ನಾಳೆ ನಿಮಗೆ ಲಕ್ಕು ಕುದುರಲಿ ಎಂದಿದ್ದರು. ಆದರೆ ಆ ಹೊತ್ತಿಗಾಗಲೇ ಸಿದ್ದರಾಮಯ್ಯ ತಮ್ಮ ವಿರೋಧಿಗಳನ್ನೆಲ್ಲ ಬಡಿದು ಹಾಕಿದ್ದರು ಎಂಬುದು ಬೇರೆ ವಿಷಯ.

ಹೀಗಾಗಿ ಎಂ.ಬಿ.ಪಾಟೀಲರು ರಹಸ್ಯವಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಸಂಪರ್ಕಿಸಿದರು. ಸಾರ್, ನನ್ನನ್ನು ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಲು ತಯಾರಿದೆ. ಆದರೆ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಹತ್ತಕ್ಕೂ ಹೆಚ್ಚು ಶಾಸಕರು ಹೋದರೆ ಸರ್ಕಾರ ರಚಿಸುವುದು ಕಷ್ಟ. ಹಾಗೇನಾದರೂ ಆದರೆ ನನಗೆ ಜೆಡಿಎಸ್ ಬೆಂಬಲ ದಕ್ಕುವಂತೆ ಮಾಡಿ ಎಂದು ಕೋರಿದರು. ಇದೇ ಮಾತನ್ನು ಅವರು ಕುಮಾರಸ್ವಾಮಿ ಅವರಿಗೂ ಹೇಳಿದ್ದರು. ಈ ವಿಷಯದಲ್ಲಿ ಹೈಕಮಾಂಡ್ ಅನ್ನು ಒಪ್ಪಿಸುವುದು ನನ್ನ ಜವಾಬ್ದಾರಿ. ಉಳಿದಂತೆ ಸರ್ಕಾರಕ್ಕೆ ನಿಮ್ಮ ಪಕ್ಷದ ಅಭಯ ಇರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.

ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್‌ ಗಾಂಧಿಗೆ ಪತ್ರ!

ಪಾಟೀಲರಿಗೆ ದೊಡ್ಡ ಗೌಡರ ಅಭಯಹಸ್ತ

ಪಾಟೀಲರಿಗೆ ದೊಡ್ಡ ಗೌಡರ ಅಭಯಹಸ್ತ

ಆ ಹೊತ್ತಿಗಾಗಲೇ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಬ್ಬರಿಗೂ ಸಿಎಂ ಸಿದ್ದರಾಮಯ್ಯ ಅವರ ವಿಷಯದಲ್ಲಿ ಆಕ್ರೋಶವಿದ್ದುದು ನಿಜ. ಹೀಗಾಗಿ, ಅವರು ಕೂಡಾ, ಸರ್ಕಾರಕ್ಕೆ ನಮ್ಮ ಬೆಂಬಲ ಅಗತ್ಯವಾದರೆ ಕೊಡಲು ಸಿದ್ಧ. ಮೊದಲು ನಿಮ್ಮ ಹೈಕಮಾಂಡ್ ಅನ್ನು ಒಪ್ಪಿಸಿ ಎಂದು ಭರವಸೆ ನೀಡಿದ್ದರು. ಆದರೆ ಈ ಬೆಳವಣಿಗೆ ಸಿದ್ದರಾಮಯ್ಯ ಅವರಿಗೆ ಬಹುಬೇಗ ಗೊತ್ತಾಯಿತು. ಆದರೆ ತಮಗೇನೂ ತಿಳಿದಿಲ್ಲ ಎಂಬಂತೆ ನಟಿಸಿ ಎಂ.ಬಿ.ಪಾಟೀಲರನ್ನು ಮಾತುಕತೆಗೆ ಕರೆಸಿಕೊಂಡರು.

ಪಾಟೀಲರೇ, ನನ್ನ ನಂತರ ನೀವು ಸಿಎಂ ಆಗಬೇಕು ಎಂಬುದು ನನ್ನ ಬಯಕೆ. ಆದರೆ ಅದಕ್ಕಾಗಿ ನೀವು ಒಂದು ಕೆಲಸ ಮಾಡಬೇಕು ಎಂದರು. ತಾವು ಮುಖ್ಯಮಂತ್ರಿಯಾಗಬೇಕು ಎಂಬ ವಿಷಯದಲ್ಲಿ ಸಿದ್ದರಾಮಯ್ಯ ಅವರಿಗಿರುವ ಕಕ್ಕುಲತೆಯನ್ನು ಕಂಡ ಎಂ.ಬಿ. ಪಾಟೀಲರಿಗೆ ಅಚ್ಚರಿಯಾದರೂ ಸಿದ್ದರಾಮಯ್ಯ ಅವರ ಕುರ್ಚಿಯ ಮೇಲೆ ತಕ್ಷಣವೇ ಕಣ್ಣು ಹಾಕಬಾರದು ಎಂಬ ಲೆಕ್ಕಾಚಾರಕ್ಕೆ ಬಂದರು. ಹಾಗಂತಲೇ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಯನ್ನರ್ಪಿಸಿದ ಎಂ.ಬಿ. ಪಾಟೀಲರು, ಸಾರ್ ನಾನೇನು ಮಾಡಬೇಕು ಹೇಳಿ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ: ಮತ್ತೆ ವಿಭಜನೆಯ ಮಾತಾಡಿದ ಎಂಬಿ ಪಾಟೀಲ್‌

ಸಿದ್ದರಾಮಯ್ಯ ಅವರು ಹೇಳಿಕೊಟ್ಟ ಲೆಕ್ಕಾಚಾರ

ಸಿದ್ದರಾಮಯ್ಯ ಅವರು ಹೇಳಿಕೊಟ್ಟ ಲೆಕ್ಕಾಚಾರ

ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಗೆ ಏರುವ ಮುನ್ನ ನೀವು ನಿಮ್ಮ ಸಮುದಾಯದ ನಾಯಕರಾಗಿ ಬೆಳೆಯುವುದು ಅಗತ್ಯ. ಹೇಗಿದ್ದರೂ ವೀರಶೈವರು ಬೇರೆ, ಲಿಂಗಾಯತರು ಬೇರೆ. ವೀರಶೈವರು ಪುರೋಹಿತಶಾಹಿಯ ಪ್ರತಿನಿಧಿಗಳು. ಆದರೆ ಲಿಂಗಾಯತರು ತಳ ವರ್ಗದಿಂದ ಬಂದವರು. ಪುರೋಹಿತಶಾಹಿಯ ದಬ್ಬಾಳಿಕೆಯಿಂದ ನೊಂದ ಬಸವಣ್ಣನವರು ತಳ ವರ್ಗದವರು ಲಿಂಗವನ್ನು ಅಪ್ಪಿಕೊಳ್ಳುವಂತೆ ಮಾಡಿ ಲಿಂಗಾಯತ ಸಮುದಾಯವನ್ನು ಸೃಷ್ಟಿಸಿದರು.

ಆದರೆ ಬಸವಣ್ಣನವರ ಉದ್ದೇಶ ಈಡೇರಿಲ್ಲ. ಯಾಕೆಂದರೆ ಆ ಸಮುದಾಯ ಈಗಲೂ ಪುರೋಹಿತಶಾಹಿಯ ಪ್ರತಿನಿಧಿಯಾದ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಆದರೆ ವಾಸ್ತವವಾಗಿ ನೀವು ತಳ ವರ್ಗದವರು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಿ. ಆ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಎಂದರು.

ಸಿದ್ದರಾಮಯ್ಯ ಅವರು ಹೇಳಿಕೊಟ್ಟ ಲೆಕ್ಕಾಚಾರ ಎಂ.ಬಿ. ಪಾಟೀಲರಿಗೂ ಇಷ್ಟವಾಯಿತು. ಮುಂದೆ ನಡೆದಿದ್ದು ಇತಿಹಾಸ. ಚುನಾವಣೆಯಲ್ಲಿ ಅದವರಿಗೆ ದೊಡ್ಡ ಮಟ್ಟದ ಲಾಭ ತಂದು ಕೊಡುವಲ್ಲಿ ಯಶಸ್ವಿಯಾಗದಿದ್ದರೂ ನಾಡಿನ ಗಮನ ಸೆಳೆದಿದ್ದು ಮಾತ್ರ ನಿಜ. ಹಾಗೊಂದು ವೇಳೆ ಎಂ.ಬಿ. ಪಾಟೀಲರ ಪವರ್ ನಿಂದ ಬಲಿಷ್ಠವಾಗಿ ಕಾಣಿಸಿದ ವೀರಶೈವ-ಲಿಂಗಾಯತ ವಿವಾದ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದರೆ ನೋ ಡೌಟ್, ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುತ್ತಿತ್ತು. ಮತ್ತು ಸಿದ್ದರಾಮಯ್ಯ ಅವರೇ ಕರ್ನಾಟಕದ ಸಿಎಂ ಆಗಿರುತ್ತಿದ್ದರು. ಆದರೆ ಇದಾಗಲಿಲ್ಲ.

ವಿಶ್ಲೇಷಣೆ : ಸಿದ್ದರಾಮಯ್ಯ ಯುರೋಪ್ ಪ್ರವಾಸದ ರಹಸ್ಯ ಬಟಾಬಯಲು!

ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟ ಸಿದ್ದು

ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟ ಸಿದ್ದು

ಈ ಬೆಳವಣಿಗೆ ಸಿದ್ದರಾಮಯ್ಯ ಅವರಿಗೆ ಅಸಮಾಧಾನ ಮೂಡಿಸಿತು. ಯಾಕೆಂದರೆ ಅದು ಸಕ್ಸಸ್ ಆಗಿದ್ದರೆ ಅವರು ಮರಳಿ ಸಿಎಂ ಆಗುತ್ತಿದ್ದರು. ಹೀಗೆ ಅದು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಅವರು ಎಂ.ಬಿ. ಪಾಟೀಲರ ವಿಷಯದಲ್ಲಿ ಆಸಕ್ತಿ ಕಳೆದುಕೊಂಡಿದ್ದು ನಿಜ. ಹೀಗಾಗಿಯೇ ಅವರು, ಬಾದಾಮಿಯಲ್ಲಿ ತಾವು ಗೆಲುವು ಸಾಧಿಸಲು ಕಾರಣರಾದ ಶಿವಾನಂದ ಪಾಟೀಲರು ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗುವಂತೆ ನೋಡಿಕೊಂಡರು. ಆ ಮೂಲಕ ಎಂ.ಬಿ. ಪಾಟೀಲರ ವಿರೋಧ ಕಟ್ಟಿಕೊಂಡರು. ಯಾಕೆಂದರೆ ಆ ಭಾಗದಿಂದ ಇವರಿಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ತೀರ್ಮಾನವಾಗಿತ್ತು. ಹೀಗೆ ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಶಿವಾನಂದ ಪಾಟೀಲರ ಬೆನ್ನಿಗೆ ನಿಂತರು.

ಅಲ್ಲಿಂದ ಮುಂದೆ ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲರ ದಾರಿ ಬೇರೆ ಬೇರೆ. ಹೀಗೆ ಅವರಿಬ್ಬರ ದಾರಿ ಬೇರೆ ಬೇರೆ ಎಂಬುದು ಕನ್ ಫರ್ಮ್ ಆದ ನಂತರ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಎಂ.ಬಿ. ಪಾಟೀಲರನ್ನು ಬೆಂಬಲಿಸತೊಡಗಿದರು. ಮಂತ್ರಿ ಸ್ಥಾನವೂ ಸಿಗದೆ ನಿರಾಶರಾಗಿದ್ದ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಮಾಡಿಸಿದರು.

ಈ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಎದುರು ಎಂ.ಬಿ. ಪಾಟೀಲ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಮುಂದಿನ ಕಂತಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನೀವು ಮಂತ್ರಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದು ಈಗ ರಹಸ್ಯದ ವಿಷಯವೇನಲ್ಲ.

ಕರ್ನಾಟಕದ ಪಾಲಿಟಿಕ್ಸ್ ಎಂಬ ಪಕ್ಕಾ ರೂಮರ್ ಬಜಾರ್!

ವೀರಶೈವ-ಲಿಂಗಾಯತ ವಿವಾದಕ್ಕೆ ಮತ್ತೆ ಜೀವ

ವೀರಶೈವ-ಲಿಂಗಾಯತ ವಿವಾದಕ್ಕೆ ಮತ್ತೆ ಜೀವ

ಈಗ ಅದೇ ಎಂ.ಬಿ. ಪಾಟೀಲ ಅವರು ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಮಂತ್ರಿಯಾಗಲು ತಯಾರಾಗುತ್ತಿದ್ದಾರೆ. ಅದೇ ರೀತಿ, ಕುಮಾರಸ್ವಾಮಿ ಅವರ ಸಲಹೆಯ ಮೇರೆಗೆ ವೀರಶೈವ-ಲಿಂಗಾಯತ ವಿವಾದವನ್ನು ಪುನ: ತಾರಕಕ್ಕೇರಿಸಲು ಅಣಿಯಾಗುತ್ತಿದ್ದಾರೆ.

ಕುಮಾರಸ್ವಾಮಿ ಯಾವ ಕಾರಣಕ್ಕಾಗಿ ಈ ವಿವಾದ ತಾರಕಕ್ಕೇರಲಿ ಎಂದು ಬಯಸುತ್ತಿದ್ದಾರೆ? ಅಂತ ನೋಡಿದರೆ ಅವರಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬೇಕಿದೆ. ಯಾಕೆಂದರೆ ಯಾವುದೇ ಚಳವಳಿಗಳು ಒಂದೇ ಹಂತದಲ್ಲಿ ಯಶಸ್ವಿಯಾಗುವುದಿಲ್ಲ. ಬದಲಿಗೆ ಅದನ್ನು ನಿರಂತರವಾಗಿ ಮುಂದುವರಿಸಿಕೊಂಡೇ ಹೋಗಬೇಕಾಗುತ್ತದೆ. ಹಾಗಾದಾಗ ಸಿಗುವ ಸ್ವಲ್ಪ ಮಟ್ಟದ ಯಶಸ್ಸು ಕೂಡಾ ಎಂ.ಬಿ. ಪಾಟೀಲರ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಂತೆಯೇ ಎಂ.ಬಿ. ಪಾಟೀಲ ಕೂಡಾ ಪವರ್ ಫುಲ್ ಲೀಡರ್ ಆಗುವುದು ಕುಮಾರಸ್ವಾಮಿ ಅವರಿಗೆ ಬೇಕು.

ಲಿಂಗಾಯತ ನಾಯಕತ್ವಕ್ಕೆ ವಿಜಯೇಂದ್ರ ಲಗ್ಗೆ

ಲಿಂಗಾಯತ ನಾಯಕತ್ವಕ್ಕೆ ವಿಜಯೇಂದ್ರ ಲಗ್ಗೆ

ಹಾಗಾದಾಗ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಸನ್ನಿವೇಶಕ್ಕೆ ಅನುಗುಣವಾಗಿ ಜೆಡಿಎಸ್ ಗೂ ಲಾಭವಾಗುತ್ತದೆ.

ಇದು ಒಂದು ಕಡೆಗಾದರೆ ಮತ್ತೊಂದು ಕಡೆಯಿಂದ ಲಿಂಗಾಯತ ನಾಯಕತ್ವಕ್ಕಾಗಿ ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಲಗ್ಗೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ತಾವು ಮೌನವಾಗಿ ಕುಳಿತರೆ ಅವರು ನಿರಾಯಾಸವಾಗಿ ಬೆಳೆಯುತ್ತಾ ಹೋಗುತ್ತಾರೆ. ಸಮುದಾಯದಲ್ಲಿ ತಮ್ಮದೇ ವರ್ಚಸ್ಸು ಬೆಳೆಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ.

ಹಾಗೇನಾದರೂ ಆದರೆ ಮುಖ್ಯಮಂತ್ರಿಯಾಗುವ ತಮ್ಮ ಕನಸು ಯಾವತ್ತೂ ಈಡೇರುವುದಿಲ್ಲ ಎಂಬುದು ವಿಜಯಪುರ ಜಿಲ್ಲೆಯ ಬಬಲೇಶ್ವರದ ಶಾಸಕ ಡಾ. ಎಂ.ಬಿ. ಪಾಟೀಲರ ಯೋಚನೆ. ಹೀಗಾಗಿ ಮೂಲದ ತಮ್ಮ ಆಸೆಯ ಬೇರುಗಳಿಗೆ ಅವರು ಮತ್ತೊಮ್ಮೆ ನೀರೆರೆಯಲು ಹೊರಟಿದ್ದಾರೆ. ಈ ಕೆಲಸದಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ? ಅನ್ನುವುದನ್ನು ಕಾಲವೇ ಹೇಳಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When MB Patil has started Lingayat separate religion movement last time he had done it for Siddaramaiah. Now, he is set to revive the movement for the sake of Kumaraswamy. Political analysis by R T Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more