ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಕಿನ ದಸರಾಕ್ಕೆ ಸಜ್ಜಾದ ಮಂಜಿನನಗರಿ

|
Google Oneindia Kannada News

ಮಹಾಮಳೆ, ಪ್ರವಾಹ, ಭೂಕುಸಿತದಂತಹ ಪ್ರಕೃತಿ ವಿಕೋಪಗಳಿಂದ ನಲುಗಿದ ಕೊಡಗು ತನ್ನೆಲ್ಲ ಸಮಸ್ಯೆಗಳನ್ನು ಕೊಡವಿಕೊಂಡು ದಸರಾ ಆಚರಣೆಗೆ ಸಜ್ಜಾಗಿದೆ. ಹೀಗಾಗಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ.

 ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ... ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ...

ಮೈಸೂರಿನಲ್ಲಿ ದಸರಾ ಸಮಾರೋಪವಾಗುತ್ತಿದ್ದರೆ ಮಡಿಕೇರಿಯಲ್ಲಿ ದಸರಾ ಆರಂಭಗೊಳ್ಳುತ್ತದೆ. ರಾತ್ರಿಪೂರ್ತಿ ನಡೆಯುವ ದಸರಾದಲ್ಲಿ ದಶಮಂಟಪಗಳ ಶೋಭಾಯಾತ್ರೆ ಮತ್ತು ನಾಲ್ಕು ಕರಗಗಳ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಿದೆ. ಇದು ಮಡಿಕೇರಿ ದಸರಾದ ಸೂತ್ರಧಾರಿಯೂ ಹೌದು. ಮಡಿಕೇರಿ ದಸರಾವನ್ನು ಹಿಂದೂಗಳು ಮಾತ್ರವಲ್ಲದೆ, ಎಲ್ಲಾ ಮತಗಳ, ಧರ್ಮಗಳ ಜನರು ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದಲೇ ಮಡಿಕೇರಿ ದಸರಾ ಭಾವೈಕ್ಯತೆ ಸಾರುವ ಉತ್ಸವವಾಗಿ ಗಮನಸೆಳೆಯುತ್ತದೆ.

 ಮಡಿಕೇರಿ ದಸರಾಗೂ ಇದೆ ಗತ ಇತಿಹಾಸ

ಮಡಿಕೇರಿ ದಸರಾಗೂ ಇದೆ ಗತ ಇತಿಹಾಸ

ಮಡಿಕೇರಿಯಲ್ಲಿ ನಡೆಯುವ ದಸರಾ ಆಚರಣೆಗೂ ಗತ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗಿದೆ. 1781ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯರ್ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರು ಎಂದು ಹೇಳಲಾಗಿದೆ.

ಅವತ್ತು ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ ಹೀಗೆ ಎರಡು ಆನೆಗಳು ಮುನ್ನಡೆದರೆ ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.

ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

 ನಾಲ್ಕು ಶಕ್ತಿ ದೇವತೆಗಳ ಪೂಜೆ

ನಾಲ್ಕು ಶಕ್ತಿ ದೇವತೆಗಳ ಪೂಜೆ

ಆದರೆ ಮಹಾರಾಜರ ಈ ನವರಾತ್ರಿ ಉತ್ಸವ ಹೆಚ್ಚು ದಿನ ನಡೆಯಲಿಲ್ಲ. 1834ರಲ್ಲಿ ಕೊಡಗನ್ನಾಳುತ್ತಿದ್ದ ಚಿಕ್ಕವೀರರಾಜನನ್ನು ಬ್ರಿಟಿಷರು ಸೆರೆಹಿಡಿದರು. ಆ ನಂತರ ನವರಾತ್ರಿ ಉತ್ಸವ ಸಾರ್ವಜನಿಕ ಉತ್ಸವವಾಗಿ ಬದಲಾಯಿತು. ನಂತರ ಮಡಿಕೇರಿಯಲ್ಲಿದ್ದ ಭಜನಾಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರೆಸಿದವು. ಮಡಿಕೇರಿಯ ಕೋಟೆಯನ್ನು ಕಾಯುವ ಕೋಟೆ ಮಾರಿಯಮ್ಮ, ನಗರವನ್ನು ಕಾಯುವ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಸೈನ್ಯವನ್ನು ಕಾಪಾಡುವ ದಂಡಿನ ಮಾರಿಯಮ್ಮ, ಆರೋಗ್ಯ ಹಾಗೂ ಐಶ್ವರ್ಯವನ್ನು ದಯಪಾಲಿಸುವ ಶ್ರೀ ಕಂಚಿಕಾಮಾಕ್ಷಮ್ಮ ಹೀಗೆ ನಾಲ್ಕು ಶಕ್ತಿದೇವತೆಗಳನ್ನು ಪೂಜಿಸುವ ಮೂಲಕ ತೇರನ್ನು ರಚಿಸಿ ಮೆರವಣಿಗೆಯಲ್ಲಿ ಸಾಗುವ ಆಚರಣೆ ರೂಢಿಗೆ ಬಂತು. ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ ಬೀಳುತ್ತಿತ್ತು ಎಂದು ಹೇಳಲಾಗಿದೆ.

 ದಶಮಂಟಪಗಳ ದಸರಾ ಮೆರುಗು

ದಶಮಂಟಪಗಳ ದಸರಾ ಮೆರುಗು

ಮೊದಲಿದ್ದ ನಾಲ್ಕು ಮಂಟಪಗಳ ಜೊತೆಗೆ ಇನ್ನು ಕೆಲವು ದೇವಾಲಯಗಳು ಕೂಡ ಮಂಟಪವನ್ನು ಹೊರಡಿಸುವುದರ ಮೂಲಕ ದಸರಾ ಮೆರವಣಿಗೆಗೆ ಕಳೆಕಟ್ಟತೊಡಗಿದವು. 1958ರಲ್ಲಿ ರಾಜಸ್ತಾನದಿಂದ ಬಂದು ಮಡಿಕೇರಿಯಲ್ಲಿ ನೆಲೆಸಿದ್ದ ಭೀಮ್ ಸಿಂಗ್‌ರವರು ಬಾಣೆಮೊಟ್ಟೆಯ ರಘುರಾಮ ಮಂಟಪವನ್ನು ಮೆರವಣಿಗೆಗೆ ಸೇರ್ಪಡೆ ಮಾಡಿದರು. ಆಗ ಮೆರವಣಿಗೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಮಂಟಪದೊಂದಿಗೆ ಪೇಟೆ ಶ್ರೀ ರಾಮಮಂದಿರ, ದೇಚೂರಿನ ರಾಮಮಂದಿರ, ಚಿಕ್ಕಪೇಟೆಯ ಬಾಲಕ ರಾಮಮಂದಿರದ ಮಂಟಪಗಳು ಸಾಗುತ್ತಿದ್ದವು. ಮೊದಲು ಇದ್ದ ನಾಲ್ಕು ಮಂಟಪಗಳು ನಂತರದ ವರ್ಷದಲ್ಲಿ ಐದು, ಏಳು, ಒಂಬತ್ತು ಆಯಿತು. ಬಳಿಕ ಹನ್ನೊಂದಕ್ಕೆ ಏರಿತಾದರೂ ದಸರಾ ಸಮಿತಿ ಮಂಟಪದ ಸಂಖ್ಯೆಯನ್ನು ಹತ್ತಕ್ಕೆ ಸೀಮಿತಗೊಳಿಸಿದೆ. ಇದೀಗ ದಶಮಂಟಪಗಳು ಮಡಿಕೇರಿ ದಸರಾಕ್ಕೆ ಮೆರಗು ನೀಡುತ್ತಿವೆ.

 ಪೌರಾಣಿಕ ಕಥಾ ಕಲಾಕೃತಿಗಳ ಮೆರವಣಿಗೆ

ಪೌರಾಣಿಕ ಕಥಾ ಕಲಾಕೃತಿಗಳ ಮೆರವಣಿಗೆ

ಈ ದಶಮಂಟಪಗಳು ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುತ್‌ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆಯಲ್ಲದೆ, ದೇವಲೋಕವೇ ಧರೆಗೆ ಇಳಿದು ಬಂದಂತೆ ಭಾಸವಾಗುತ್ತದೆ. ನಗರದ ಗಾಂಧಿ ಮೈದಾನದಲ್ಲಿರುವ ಬೃಹತ್ ವೇದಿಕೆಯಲ್ಲಿ ಜನೋತ್ಸವ ಕಾರ್ಯಕ್ರಮಗಳು ನಡೆದರೆ, ನಗರದಾದ್ಯಂತ ರಾತ್ರಿ ಪೂರ್ತಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಒಮ್ಮೆ ಮಡಿಕೇರಿಯ ಮಂಜಿನಲ್ಲಿ ಮಿಂದೆದ್ದು ದಸರಾ ವೀಕ್ಷಿಸಿ ಹೋದವರು ಆ ಸುಂದರ ಕ್ಷಣವನ್ನು ಎಂದೆಂದಿಗೂ ಮರೆಯಲಾರರು.

English summary
Kodagu is all set to celebrate Dasara give it up all the problems faced by natural disasters such as floods and landslides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X