ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್ ರಾಜ್ ಜತೆಗೆ ಒನ್ ಇಂಡಿಯಾ ಕನ್ನಡ ಎಕ್ಸ್ ಕ್ಲೂಸಿವ್ ಸಂದರ್ಶನ

|
Google Oneindia Kannada News

ಬೆಂಗಳೂರು, ಜನವರಿ 20 : "ಚುನಾವಣೆ ರಾಜಕೀಯಕ್ಕೆ ಬರಲಿ. ಅದು ಬಿಟ್ಟು ಬರೀ ಟೀಕಿಸುವುದಲ್ಲ. ಕರ್ನಾಟಕಕ್ಕೆ ಅವರೇನು? ಬಿಜೆಪಿಯನ್ನು ಟೀಕಿಸಲು ಆತ ಯಾರು?" ಹೀಗೆ ಇಷ್ಟೇ ಅಲ್ಲದೆ ಹಲವು ಪ್ರಶ್ನೆಗಳನ್ನು, ಸವಾಲುಗಳನ್ನು ಎದುರಿಸುತ್ತಿದ್ದ ಬಹುಭಾಷಾ ನಟ- ನಿರ್ಮಾಪಕ ಪ್ರಕಾಶ್ ರಾಜ್ ಅಂತೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿ ಹದಿನೈದು ದಿನವೇ ಕಳೆದುಹೋಗಿದೆ.

ಒಂದು ಪಕ್ಷದಲ್ಲಿ 3 ತಿಂಗಳಿಗಿಂತ ಹೆಚ್ಚು ಕಾಲ ಇರಲಾರೆ: ಪ್ರಕಾಶ್ ರೈಒಂದು ಪಕ್ಷದಲ್ಲಿ 3 ತಿಂಗಳಿಗಿಂತ ಹೆಚ್ಚು ಕಾಲ ಇರಲಾರೆ: ಪ್ರಕಾಶ್ ರೈ

ಇದೂ ಮಾತಷ್ಟೇ ಎಂದು ಹಳಿಯುತ್ತಿದ್ದ ತಮ್ಮ ವಿರೋಧಿಗಳಿಗೂ ಅಚ್ಚರಿ ಹುಟ್ಟಿಸುವಂತೆ ಚುನಾವಣೆಗೆ ಅದ್ಭುತವಾದ ತಯಾರಿ ಆರಂಭಿಸಿಯೇ ಬಿಟ್ಟಿದ್ದಾರೆ ಪ್ರಕಾಶ್ ರಾಜ್. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಲೇ ಸುತ್ತಾಟ ಶುರುವಾಗಿದೆ. ದೆಹಲಿಯಲ್ಲಿ ಕೇಜ್ರಿವಾಲ್ ರನ್ನು ಭೇಟಿ ಮಾಡಿ ಬಂದಿದ್ದಾರೆ.

ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

ಮೈ ಮೇಲೆ ಬಿಳಿ ಷರಟು, ಮುಖದ ಮೇಲೆ ಇಣುಕುವ ನಗು, ಏನನ್ನುತ್ತದೆ ದೇಶ ಎಂದೇ ಅವರ ಮೊದಲ ಮಾತು ಆರಂಭವಾಗಿತ್ತು. ಇಷ್ಟನ್ನು ವಿವರಿಸುತ್ತಾ ಪ್ರಕಾಶ್ ರಾಜ್ ಅವರ ಜತೆ ಒನ್ ಇಂಡಿಯಾ ಕನ್ನಡದಿಂದ ಎಕ್ಸ್ ಕ್ಲೂಸಿವ್ ಆಗಿ ಮಾಡಿರುವ ಸಂದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ. ಅವರ ಮಾತಿನಲ್ಲೊಂದು ಸ್ಪಷ್ಟತೆ ಇದೆ. ಹಂಚಿಕೊಂಡಷ್ಟೂ ಇನ್ನೂ ಹಂಚಿಕೊಳ್ಳುವಷ್ಟು ಕನಸುಗಳಿವೆ.

ಪ್ರಕಾಶ್ ರಾಜ್ ಸ್ಪರ್ಧೆ : ಬೆಂಗಳೂರು ಸೆಂಟ್ರಲ್‌ನ ರಾಜಕೀಯ ಚಿತ್ರಣಪ್ರಕಾಶ್ ರಾಜ್ ಸ್ಪರ್ಧೆ : ಬೆಂಗಳೂರು ಸೆಂಟ್ರಲ್‌ನ ರಾಜಕೀಯ ಚಿತ್ರಣ

ಆ ಕನಸುಗಳನ್ನು ನಿಮ್ಮೆದುರು ಹರಿವಿಟ್ಟಿದ್ದೇವೆ.

ಚುನಾವಣಾ ರಾಜಕಾರಣಕ್ಕೆ ಬಂದಿದ್ದು ಏಕೆ?

ಚುನಾವಣಾ ರಾಜಕಾರಣಕ್ಕೆ ಬಂದಿದ್ದು ಏಕೆ?

ನೋಡಿ ಮೊದಲು ಅದು ಚುನಾವಣಾ ರಾಜಕಾರಣ ಆಗಿರಲಿಲ್ಲ. ಯಾವಾಗ ನಮ್ಮ ಸುತ್ತಲಿನ ಸಮಾಜ ಸರಿ ಇಲ್ಲವೋ ಆತಂಕ ಹೆಚ್ಚಾಗುತ್ತಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಬಂದೆ. ಅದು ಸೆಳೆಯುತ್ತಾ ಬಂದಿತು. ರಾಜಕಾರಣಕ್ಕೆ ನಾನು ಬರಲಿಲ್ಲ ನನ್ನನ್ನು ಎಳೆದುಕೊಂಡು ಬಂತು.

ಗೌರಿ ಹತ್ಯೆಯ ನಂತರ ಈ ತರಹದ ವಿಷಗಳು ಏಕೆ ನಡೆಯುತ್ತಿವೆ? ಎಂಬ ಪ್ರಶ್ನೆ ಎದ್ದಿತು. ದಿಢೀರ್ ಎಂದು ದೇಶದಲ್ಲಿ ತುರ್ತು ಪರಿಸ್ಥಿತಿ ನೋಡಿದ್ದೆವು. ಬಾಲ್ಯದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ನಡೆದಿದ್ದ ಬೀದಿ ನಾಟಕಗಳು, ಅದರ ವಿರುದ್ಧ ಮಾತನಾಡಿದ್ದು ನೋಡಿದ್ದೆ.

ಇತ್ತೀಚಿನ ದಿನಗಳಲ್ಲಿ ಒಂದು ಧ್ವನಿಯನ್ನ, ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವ, ದಾರುಣವಾಗಿ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿರುವಾಗ, ಬಾಯಿ ಮುಚ್ಚಿಸುವ ಪ್ರಕ್ರಿಯೆ ಗೌರಿಯ ರೂಪದಲ್ಲಿ ನನ್ನ ಮನೆಯ ಬಾಗಿಲ ಮುಂದೆ ಹೆಣವಾಗಿ ಬಿದ್ದಾಗ, ಹತ್ಯೆಯಾದಾಗ ಅದನ್ನು ತಡೆದುಕೊಂಡು ಇರುವುದಕ್ಕೆ ಆಗಲಿಲ್ಲ.

ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ ಅಂತಹವರನ್ನು ನೋಡಿ, ಓದಿ ಬೆಳೆದವನು ನಾನು. ಈ ಎರಡು ಮೂರು ವರ್ಷಗಳಲ್ಲಿ ನಡೆದ ಘಟನೆಗಳನ್ನು ನೋಡಿ ಇನ್ನು ಸುಮ್ಮನಿದ್ದರೆ ಆಗಲ್ಲ ಎನ್ನಿಸಿತು. ಬರೀ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಲ್ಲ, ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು ಎಂದು ಚುನಾವಣಾ ರಾಜಕಾರಣಕ್ಕೆ ಬಂದೆ.

ಲೋಕಸಭೆ ಚುನಾವಣೆಗೆ ಸ್ಪರ್ಧೆ ಏಕೆ?

ಲೋಕಸಭೆ ಚುನಾವಣೆಗೆ ಸ್ಪರ್ಧೆ ಏಕೆ?

ನೋಡಿ ನಮ್ಮ ರಾಜ್ಯದ ವಿಧಾನಸಭೆ ಚುನಾವಣೆ ನಡೆಯುತ್ತಿರುವಾಗ ನಾನು ಒಂದು ಸ್ಫೂರ್ತಿಯಾಗಿರಬೇಕು ಎಂದುಕೊಂಡೆ. ಏಕೆಂದರೆ ಗಟ್ಟಿಯಾದ ಧ್ವನಿ ಹುಟ್ಟುವುದು ಬಹಳ ಮುಖ್ಯ. ಇದು ನಿಸರ್ಗದ ನಿಯಮ ಕೂಡಾ. ನೀವು ಒಂದು ಧ್ವನಿಯನ್ನು ಹತ್ತಿಕ್ಕಿದಾಗ ಅದಕ್ಕಿಂತ ದೊಡ್ಡದಾದ ಧ್ವನಿ ಹುಟ್ಟಿಕೊಳ್ಳುತ್ತದೆ.

ನನಗೆ ರಾಜಕಾರಣಕ್ಕೆ ಬರಬೇಕು ಎನ್ನುವ ಚಿಂತನೆ ಇರಲಿಲ್ಲ. ನಾನು ಕೇಳುವ ಪ್ರಶ್ನೆಗಳು ಕೇವಲ ಕಿವುಡಾದ ಕಿವಿಗೆ ಬೀಳುತ್ತಿದೆಯೇ ಅನ್ನಿಸಿತು. ಐದೂವರೆ ಲಕ್ಷ ಜನರಿಂದ ಆಯ್ಕೆಯಾದ ವ್ಯಕ್ತಿ ಒಂದು ಪಕ್ಷದ ವ್ಯಕ್ತಿಯಾಗಿ ಪಕ್ಷವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾನೆ. ಅಲ್ಲಿ ಜನರ ಧ್ವನಿ ಅಡಗಿ ಹೋಗುತ್ತಿದೆ. ಆದ್ದರಿಂದ ಅಲ್ಲಿಗೆ ಹೋಗಬೇಕು. ಅಲ್ಲಿಗೆ ಜನರ ಧ್ವನಿ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಆಶಯ.

ಪಕ್ಷೇತರ ಅಭ್ಯರ್ಥಿಯಾಗಿ ಏಕೆ ಸ್ಪರ್ಧೆ?

ಪಕ್ಷೇತರ ಅಭ್ಯರ್ಥಿಯಾಗಿ ಏಕೆ ಸ್ಪರ್ಧೆ?

ಈಗಿರುವ ಎಲ್ಲಾ ರಾಜಕೀಯ ಪಕ್ಷಗಳು ಉಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿವೆ. ನಾವು ಸ್ಪಷ್ಟವಾಗಿ ಸಂವಿಧಾನವನ್ನು ನೋಡಿದಾಗ ಅಲ್ಲಿ ಪಕ್ಷ ಎಂಬ ಮಾತು ಬರುವುದಿಲ್ಲ. ಪ್ರತಿಯೊಂದು ಕ್ಷೇತ್ರದ ಪ್ರತಿನಿಧಿಗಳು ಚುನಾಯಿತರಾದ ಮೇಲೆ ಎಲ್ಲರೂ ಒಂದಾಗಿ, ಒಂದೇ ಉದ್ದೇಶದಿಂದ, ಒಂದೇ ರೀತಿಯ ಆಡಳಿತ ಮಾಡಬೇಕು. ಅದು ಸಹಮತದ ಸರ್ಕಾರ ಆಗಬೇಕು.

ನನ್ನಂತಹವರು ಜನರ ಧ್ವನಿಯಾಗಬೇಕು ಎಂದು ಕೊಂಡವರು, ಜನರ ಪರವಾಗಿ ಪ್ರಶ್ನೆ ಕೇಳುವವನು ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಕ್ಕೆ ಹೋದರೂ ಮೂರು ತಿಂಗಳು ಸಹ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಸ್ವತಂತ್ರವಾಗಿರಬೇಕು, ಜನರ ಧ್ವನಿಯಾಗಿರಬೇಕು ಎಂಬುದು ನನ್ನ ಆಸೆ.

ಭಾರತದ ರಾಜಕೀಯ ಸ್ವರೂಪವನ್ನು ಈಗ ನೀವು ನೋಡಬೇಕು. ಯಾವುದೇ ಪಕ್ಷ ಬಹುಮತವನ್ನು ಪಡೆಯುವ ಸ್ಥಿತಿಯಲ್ಲಿಲ್ಲ. ಪ್ರಾಂತೀಯ ರಾಜಕೀಯ, ಪ್ರಾಂತೀಯ ಪಕ್ಷಗಳು ಮತ್ತು ನಮ್ಮ ವಿಭಿನ್ನ ಧ್ವನಿಗಳು ಸೇರಿ ಒಂದು ದೇಶವನ್ನು ಕಟ್ಟುವ ಕೆಲಸವಾಗಬೇಕು. ಸಾಕಷ್ಟು ನಾಯಕರು ಬರಬೇಕು, ಬೇರೆ-ಬೇರೆ ಆಲೋಚನೆಗಳ ಬರಬೇಕು.

ಬೆಂಗಳೂರು ಸೆಂಟ್ರಲ್ ಕ್ಷೇತ್ರವೇ ಏಕೆ

ಬೆಂಗಳೂರು ಸೆಂಟ್ರಲ್ ಕ್ಷೇತ್ರವೇ ಏಕೆ

ಬೆಂಗಳೂರು ಸೆಂಟ್ರಲ್ ನನ್ನ ಕ್ಷೇತ್ರ. ನಾನು ಹುಟ್ಟಿದ್ದು ಇಲ್ಲಿನ ಮಾರ್ಥಾಸ್‌ ಆಸ್ಪತ್ರೆಯಲ್ಲಿ. ನನ್ನ ಬಾಲ್ಯ ಇಲ್ಲಿನ ಶಾಂತಿನಗರ, ಚಾಮರಾಜಪೇಟೆಯ ಬಾಡಿಗೆ ಮನೆಗಳಲ್ಲಿ ಕಳೆದಿದೆ. ನನ್ನ ಪ್ರಾಥಮಿಕ ಶಿಕ್ಷಣ ಶಾಂತಿನಗರದಲ್ಲಿ, ಪ್ರೌಢ ಶಾಲೆ ಸೇಂಟ್ ಜೋಸೆಫ್ ಹೈಸ್ಕೂಲ್‌ನಲ್ಲಿ, ನನ್ನ ಕಾಲೇಜ್ ಈ ಕ್ಷೇತ್ರದಲ್ಲಿದೆ. ದಶಕಕ್ಕಿಂತ ಹೆಚ್ಚಿನ ಕಲೆ, ರಂಗಭೂಮಿ ಸಾಹಿತಿಗಳ ಒಡನಾಟ ಇಲ್ಲಿದೆ. ಸಿನಿಮಾರಂಗಕ್ಕೆ ನನ್ನ ಒಂದು ದಶಕದ ಪ್ರಯತ್ನ ಗಾಂಧಿನಗರ ಅದೂ ಈ ಕ್ಷೇತ್ರದಲ್ಲಿದೆ. ನನಗೆ ಗೊತ್ತಿರುವ ಜನರಿಂದ, ನನಗೆ ಗೊತ್ತಿರುವ ಕ್ಷೇತ್ರವನ್ನು ಪ್ರತಿನಿಧಿಸುವುದು ಬಹಳ ಮುಖ್ಯ.

ಪ್ರಣಾಳಿಕೆ ತಯಾರಿ ಹೇಗೆ ಸಾಗಿದೆ?

ಪ್ರಣಾಳಿಕೆ ತಯಾರಿ ಹೇಗೆ ಸಾಗಿದೆ?

ಬೆಂಗಳೂರು ಸೆಂಟ್ರಲ್ ಕ್ಷೇತ್ರ ನಗರ ಪ್ರದೇಶದಲ್ಲಿದೆ. ಸಮಸ್ಯೆಗಳು ಹಾಗೇ ಇವೆ. ಆದ್ದರಿಂದ ನಾನು ಜನರೊಂದಿಗೆ ಈ ಹತ್ತು ದಿನಗಳ ಕಾಲ ಪ್ರಜಾ ಪ್ರಣಾಳಿಕೆಯನ್ನು ಶೇಖರಿಸುತ್ತಿದ್ದೇನೆ.

ನಮಗೆ ನಿಮ್ಮ ಸಮಸ್ಯೆ ಗೊತ್ತು ಎಂಬ ಅಹಂಕಾರ ಬೇಡ. ಜನರ ನೋವೇನು? ಅವರ ಇಂಗಿತವೇನು? ಎಷ್ಟು ವರ್ಷಗಳಿಂದ ಈ ಸಮಸ್ಯೆ ಇದೆ ಎಂಬುದು ಬೇಕು.

ಎಷ್ಟೋ ಜನರಿಗೆ ಒಬ್ಬ ಸಂಸತ್ ಸದಸ್ಯ ತಮಗೆ ಏನು ಮಾಡಬೇಕು ಎಂಬುದು ತಿಳಿದಿಲ್ಲ. ಇಂದು ಸಹ ಹಲವಾರು ಜನರು ನಮ್ಮ ಸಂಸತ್ ಸದಸ್ಯರು ಯಾರೆಂದು ತಿಳಿದಿಲ್ಲ ಎಂದರು. ಯಾವುದೋ ಪಕ್ಷಕ್ಕೆ ಓಟು ಹಾಕಿದ್ದೇವೆ ಎಂದರು. ಅವರನ್ನು ನಾವು ರಸ್ತೆಯಲ್ಲಿ ನೋಡಿಲ್ಲ ಎಂದರು.

ಒಬ್ಬ ಎಂಪಿ ನಿಮ್ಮ ಪ್ರತಿನಿಧಿ. ಇಲ್ಲಿಂದ ಕುಳಿತು ದೇಶದ ನೀತಿ ನಿರ್ಧರಿಸುವವರು ನೀವು. ನಿಮ್ಮ ಜೊತೆ ಕುಳಿತು, ನಿಮ್ಮ ಪರ ಧ್ವನಿ ಎತ್ತುವ, ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಸಲಹೆಗಳನ್ನು ಸ್ವೀಕರಿಸಬೇಕು. ಆದ್ದರಿಂದ ಪ್ರಜಾ ಪ್ರಣಾಳಿಕೆ ರಚನೆ ಆಗುವ ಕೆಲಸ ಆಗಬೇಕು.

ಚುನಾವಣಾ ಪ್ರಚಾರದ ಶೈಲಿ ಹೇಗಿರುತ್ತದೆ?

ಚುನಾವಣಾ ಪ್ರಚಾರದ ಶೈಲಿ ಹೇಗಿರುತ್ತದೆ?

ಜನರನ್ನು ನೇರವಾಗಿ ಭೇಟಿ ಮಾಡಿ ಪ್ರಚಾರ ಮಾಡುವುದು, ಬೇರೆ ಸ್ವತಂತ್ರ ಅಭ್ಯರ್ಥಿಯಂತೆ ನಾನು ಯಾರು ಎಂದು ಜನರಿಗೆ ಹೇಳಬೇಕಾದ ಅವಶ್ಯಕತೆ ನನಗೆ ಇಲ್ಲ.

ತುಂಬಾ ಪ್ರಮುಖ ಅಂಶವೆಂದರೆ ಬೆಂಗಳೂರು ಸೆಂಟ್ರಲ್‌ನಲ್ಲಿ ಬೇರೆ-ಬೇರೆ ಭಾಷೆ, ಬೇರೆ-ಬೇರೆ ಧರ್ಮದ ಜನರಿದ್ದಾರೆ. ಹಾಗೆ ಇಲ್ಲಿಯ ಪ್ರಕಾಶ್ ರಾಜ್ ಅವರೊಟ್ಟಿಗೆ ಮಾತನಾಡುತ್ತಾ ಅವರೊಟ್ಟಿಗೆ ಬರೆಯುತ್ತಾ ಜನರ ಪ್ರತಿನಿಧಿಯಾಗಬೇಕು ಎಂಬುದು ಆಶಯ.

ತುಂಬಾ ವಿಶೇಷ ಎಂದರೆ ಇಲ್ಲಿ ಜಾತಿ ಇಲ್ಲ. ಅದು ಜನರಿಗೆ ಬೇಕಾಗೂ ಇಲ್ಲ. ಇಲ್ಲಿ ಹಣ ಇಲ್ಲ, ಆದ್ದರಿಂದ ಜನರ ಬಡತನವನ್ನು ಹಣ ಕೊಟ್ಟು ಖರೀದಿ ಮಾಡಲಾಗುತ್ತದೆ.

ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ ಎಂದರೆ ಈ ಕೋಮಿನವರು ಅವರಿಗೆ ವೋಟು ಹಾಕಲ್ಲ. ಇದು ನಮ್ಮ ಓಟು ಎಂಬುದು. ಇದನ್ನು ನಾವು ಒಡೆಯಬೇಕಿದೆ.

ಎರಡೂ ಕಡೆಯ ಜನರನ್ನು ಭೇಟಿಯಾದಾಗ, ಅವರು "ಹೌದು, ನಮಗೆ ಇದು ಬೇಡ, ಆರೋಗ್ಯ ಬೇಕು, ಸೌಕರ್ಯ ಬೇಕು. ಸಮಾನ ಶಿಕ್ಷಣ ಬೇಕು" ಎನ್ನುತ್ತಾರೆ.

ಯಾರನ್ನೋ ಬೈಯುವುದಕ್ಕಿಂತ ಜನಪರವಾಗಿ, ಅಭಿವೃದ್ಧಿ ಬಗ್ಗೆ ಮಾತನಾಡುತ್ತಾ ಈ ಚುನಾವಣೆ ನಡೆಸಬೇಕು ಎಂದು ಇಷ್ಟ ಪಡುತ್ತೇನೆ.

English summary
Actor, Film director, Producer Prakash Raj contesting for Lok Sabha Elections 2019 from Bangalore central seat. Here are the interview of Prakash Raj about election preparation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X