ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕೋಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು, ಸಮಸ್ಯೆಗಳು ನೂರಾರು

|
Google Oneindia Kannada News

Recommended Video

Lok Sabha Election 2019 : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

ಬೆಳಗಾವಿ, ಜನವರಿ 28: ಬೆಳಗಾವಿ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳಲ್ಲಿ ಚಿಕ್ಕೋಡಿಯೂ ಒಂದು. ಆದರೆ, ಬೃಹತ್ ಜಿಲ್ಲೆಯೊಳಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರವಾಗಿ ಸ್ಥಾನ ಪಡೆದಿದೆ. ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಯ ಹಲವು ವರ್ಷದಿಂದ ಕೇಳಿಬರುತ್ತಿದೆ. ಆಡಳಿತಾತ್ಮಕ ದೃಷ್ಟಿಯಿಂದ ಚಿಕ್ಕೋಡಿ ಜಿಲ್ಲೆಯನ್ನು ಬೇರ್ಪಡಿಸಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುವುದು ಹೋರಾಟಗಾರರ ಅಭಿಪ್ರಾಯ.

ಪ್ರಸ್ತುತ ಚಿಕ್ಕೋಡಿ ಲೋಕಸಭಾ ಕ್ಷೇತ್ರವು ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ಅಥಣಿ, ಕಾಗವಾಡ, ಕುಡಚಿ, ರಾಯಭಾಗ, ಹುಕ್ಕೇರಿ ಮತ್ತು ಯಮಕನಮರಡಿ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.

ರಮಣೀಯ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ? ರಮಣೀಯ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ?

ಬೆಳಗಾವಿ ಜಿಲ್ಲೆಯ ಈ ಭಾಗದ ಮತದಾರರು ಒಮ್ಮೆ ಆರಿಸಿದ ಸಂಸದರನ್ನೇ ಮತ್ತೆ ಮತ್ತೆ ಆಯ್ಕೆ ಮಾಡುವಲ್ಲಿ ಒಲವು ತೋರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.

lok sabha elections 2019 chikkodi constituency profile

1951ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿ ಚಿಕ್ಕೋಡಿ ಬಾಂಬೆ ರಾಜ್ಯಕ್ಕೆ ಸೇರಿತ್ತು. ಆಗ ಚಿಕ್ಕೋಡಿ ಲೋಕಸಭೆ ಕ್ಷೇತ್ರ ಅಸ್ತಿತ್ವದಲ್ಲಿ ಇರಲಿಲ್ಲ. ಬೆಳಗಾವಿ ಉತ್ತರ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.

ಈ ಚುನಾವಣೆಯಲ್ಲಿ ಪಾಟೀಲ್ ಶಂಕರಗೌಡ ವೀರನಗೌಡ ಕಾಂಗ್ರೆಸ್‌ನಿಂದ ಜಯಭೇರಿ ಭಾರಿಸಿದ್ದರು.

ಮತ್ತೆ ಇಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು 1962ರಲ್ಲಿ. ಆಗ ರಾಜ್ಯ ಪುನರ್ ವಿಂಗಣೆಯಾಗಿ ಚಿಕ್ಕೋಡಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿತ್ತು. ಆಗ ವಿ.ಎಲ್. ಪಾಟೀಲ್ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.

ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ

1967ರಲ್ಲಿ ಬಿ. ಶಂಕರಾನಂದ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದರು. ಅಲ್ಲಿಂದ ಅವರನ್ನು ತಡೆಯುವವರೇ ಇರಲಿಲ್ಲ. ಒಂದಲ್ಲ, ಎರಡಲ್ಲ, ಸತತ ಏಳು ಬಾರಿ ಅವರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಶಂಕರನಾಂದ್ ಪರಮಾಪ್ತರಾಗಿದ್ದರು.

1991ರ ಚುನಾವಣೆ ಅವರ ಕೊನೆಯ ಗೆಲುವಿಗೆ ಸಾಕ್ಷಿಯಾಯಿತು. ಪರಿಶಿಷ್ಟ ಜಾತಿಗೆ ಸೇರಿದ್ದ ಈ ಕ್ಷೇತ್ರದಲ್ಲಿ ಶಂಕರಾನಂದ್ ಅವರ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡಿದ್ದು ಜನತಾದಳದ ರತ್ನಮಾಲಾ ಧಾರೇಶ್ವರ ಸವಣೂರ್.

ಸತತ ಒಂಬತ್ತು ಚುನಾವಣೆಗಳಲ್ಲಿ ಸೋಲಿನ ಮುಖ ನೋಡದ ಕಾಂಗ್ರೆಸ್‌ಗೆ ರತ್ನಮಾಲಾ ಸೋಲಿನ ರುಚಿ ತೋರಿಸಿದ್ದರು. ಅದರಲ್ಲಿಯೂ ಪ್ರಭಾವಶಾಲಿಯಾಗಿದ್ದ ಶಂಕರಾನಂದ್ ಅವರ ವಿರುದ್ಧ 1,12,759 ಓಟುಗಳ ಭರ್ಜರಿ ಅಂತರದ ಗೆಲುವು ಕಂಡಿದ್ದರು.

ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ

ಇಲ್ಲಿಂದ ಮೂರು ಚುನಾವಣೆಗಳಲ್ಲಿ ರಮೇಶ್ ಚಂದ್ರಪ್ಪ ಜಿಗಜಿಣಗಿ ಅವರ ಸಾಮರ್ಥ್ಯ ಪ್ರದರ್ಶನವಾಯಿತು. ವಿಶೇಷವೆಂದರೆ ಈ ಮೂರೂ ಬಾರಿಯೂ ರಮೇಶ್ ಜಿಗಜಿಣಗಿ ಬೇರೆ ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು.

1998ರ ಚುನಾವಣೆಯಲ್ಲಿ ಲೋಕಶಕ್ತಿ ಪಕ್ಷದ ರಮೇಶ್ ಜಿಗಜಿಣಗಿ ತಮ್ಮ ಶಕ್ತಿ ಪ್ರದರ್ಶಿಸಿದರು. ಈ ಬಾರಿಯೂ ಶಂಕರಾನಂದ್ ಅವರಿಗೆ ಸೋಲಾಯಿತು. 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ರಮೇಶ್ ಜನತಾದಳ (ಸಂಯುಕ್ತ) ಅಭ್ಯರ್ಥಿಯಾಗಿ ಗೆಲುವು ಕಂಡರೆ, 2004ರ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಕಮಲ ಅರಳುವಂತೆ ಮಾಡಿದರು.

2009ರಲ್ಲಿ ಕೂಡ ಈ ಕ್ಷೇತ್ರ ಬಿಜೆಪಿ ಪಾಲಾಯಿತು. ರಮೇಶ್ ವಿಶ್ವನಾಥ್ ಕತ್ತಿ ಗೆಲುವಿನ ನಗೆ ಬೀರಿದ್ದರು. 2014ರ ಚುನಾವಣೆಯಲ್ಲಿ ಎರಡು ದಶಕದ ಬಳಿಕ ಮತ್ತೆ ಚಿಕ್ಕೋಡಿ ಕಾಂಗ್ರೆಸ್ ಪಾಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಇಲ್ಲಿ ಕಾಂಗ್ರೆಸ್‌ಗೆ ಗೆಲುವನ್ನು ಮರಳಿ ತಂದುಕೊಟ್ಟರು. ಆದರೆ, ಈ ಗೆಲುವಿನ ಅಂತರ ಅತಿ ಚಿಕ್ಕದು. ಬಿಜೆಪಿಯ ಪ್ರಕಾಶ್ ವಿಶ್ವನಾಥ್ ಕತ್ತಿ ಅವರ ಎದುರು ಕೇವಲ 3,003 ಮತಗಳ ತ್ರಾಸದಾಯಕ ಗೆಲುವು ಸಿಕ್ಕಿತು.

lok sabha elections 2019 chikkodi constituency profile

20,59,216 ಒಟ್ಟು ಜನಸಂಖ್ಯೆ ಈ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾರೆ. ಗ್ರಾಮೀಣ ಭಾಗದಲ್ಲಿ 86.10%, ನಗರ ಭಾಗದಲ್ಲಿ 13.90%ರಷ್ಟು ಜನರಿದ್ದಾರೆ. 15.78% ಪರಿಶಿಷ್ಟ ಜಾತಿ ಮತ್ತು 4.97% ಪರಿಶಿಷ್ಟ ಪಂಗಡದ ಜನರಿದ್ದಾರೆ. ಲಿಂಗಾಯತ ಮತ್ತು ಪಂಚಮಸಾಲಿಗಳ ಮತಗಳು ಇಲ್ಲಿ ಹೆಚ್ಚು ನಿರ್ಣಾಯಕವೆನಿಸಿವೆ.

lok sabha elections 2019 chikkodi constituency profile

ಚಿಕ್ಕೋಡಿ ಕ್ಷೇತ್ರದಲ್ಲಿ 2014ರಲ್ಲಿ ಒಟ್ಟು 1,442,296 ಮತದಾರರಿದ್ದಾರೆ. 7,46,113 ಪುರುಷರು ಮತ್ತು 696,183, ಮಹಿಳೆಯರು ಮತಚಲಾಯಿಸುವ ಅರ್ಹತೆ ಹೊಂದಿದ್ದರು.

ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

ಆ ಅವಧಿಯಲ್ಲಿ ಒಟ್ಟು ಶೇ 74ರಷ್ಟು ಮತಚಲಾವಣೆಯಾಗಿತ್ತು. 5,64,257 ಪುರುಷರು ಮತ್ತು 5,06,846 ಮಹಿಳೆಯರು ಸೇರಿ ಒಟ್ಟು 1,071,103 ಮತದಾರರು ಮತಚಲಾಯಿಸಿದ್ದರು.

lok sabha elections 2019 chikkodi constituency profile

ಹುಕ್ಕೇರಿ ಅವರ ಲೋಕಸಭೆ ಪಾಲ್ಗೊಳ್ಳುವಿಕೆಯ ಅಂಕಿ ಅಂಶಗಳು ಅಷ್ಟೇನೂ ಪ್ರಶಂಸನೀಯವಾಗಿಲ್ಲ. ಅವರ ಒಟ್ಟಾರೆ ಹಾಜರಾತಿ ಶೇ 33ರಷ್ಟಿದ್ದರೆ, ರಾಜ್ಯ ಸಂಬಂಧಿ ಚರ್ಚೆಗಳಲ್ಲಿ ಶೇ 78 ರಷ್ಟು ಸಲ ಅವರು ಪಾಲ್ಗೊಂಡಿದ್ದಾರೆ. ಅವರು ಕೇಳಿರುವುದು ಕೇವಲ ಮೂರು ಪ್ರಶ್ನೆಗಳನ್ನು. 11 ಚರ್ಚೆಗಳಲ್ಲಿ ಅವರು ಭಾಗವಹಿಸಿದ್ದಾರೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 20 ಕೋಟಿ ರೂ. ಸಂಸದರ ನಿಧಿ ಮೊತ್ತದಲ್ಲಿ ಬಡ್ಡಿ ಸಹಿತ 20.37 ಕೋಟಿ ರೂ. ಹಣ ಜಿಲ್ಲಾಧಿಕಾರಿ ಖಜಾನೆಯಲ್ಲಿದೆ. 21.68 ಕೋಟಿ ರೂ. ಯೋಜನೆಗಳಿಗೆ ಸಂಸದರು ಶಿಫಾರಸು ಮಾಡಿದ್ದರು. ಇದರಲ್ಲಿ 19.78 ಕೋಟಿ ರೂ. ವೆಚ್ಚದ ಕೆಲಸಗಳಿಗೆ ಅನುಮೋದನೆ ದೊರಕಿದ್ದು, 15.8 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪೂರ್ಣಗೊಂಡಿವೆ. 4.57 ಕೋಟಿ ರೂಪಾಯಿ ಖಜಾನೆಯಲ್ಲಿ ಉಳಿದಿದೆ.

ಕಾಂಗ್ರೆಸ್ ಸುದೀರ್ಘ ಕಾಲ ಮತ್ತು ಎರಡು ಅವಧಿಗಳಲ್ಲಿ ಬಿಜೆಪಿ ಇಲ್ಲಿ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಆದ ಪ್ರಯೋಜನ ಅಷ್ಟಕಷ್ಟೇ. ಇಲ್ಲಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ, ಬೆಲೆಯ ಸಮಸ್ಯೆ, ಕುಡಿಯುವ ಹಾಗೂ ಕೃಷಿ ನೀರಿನ ಕೊರತೆಯ ಸಮಸ್ಯೆಗಳು ಇಂದು ನಿನ್ನೆಯದ್ದೇನಲ್ಲ. ಇದಾವುದೂ ನಿವಾರಣೆಯಾಗುವ ಸೂಚನೆಗಳೂ ಕಾಣಿಸುತ್ತಿಲ್ಲ.

ಹೇಳಿಕೇಳಿ ಮಹಾರಾಷ್ಟ್ರದ ಅಂಚಿನಲ್ಲಿರುವ ಗಡಿ ಜಿಲ್ಲೆಯಲ್ಲಿರುವ ಕ್ಷೇತ್ರವಿದು. ಹೀಗಾಗಿ ಭಾಷೆಯ ಪ್ರಶ್ನೆಯೂ ಇಲ್ಲಿ ದೊಡ್ಡ ಮಟ್ಟದಲ್ಲಿದೆ. ಇನ್ನು ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಅವುಗಳ ಅಭಿವೃದ್ಧಿ ಕೂಡ ಹಿಂದೆ ಉಳಿದಿದೆ. ಆದರೆ, ಶೈಕ್ಷಣಿಕ ಪ್ರಗತಿಯಲ್ಲಿ ಚಿಕ್ಕೋಡಿಯ ಸಾಧನೆ ಗಮನಾರ್ಹ.

ತಂಬಾಕು ಈ ಪ್ರದೇಶದ ಪ್ರಮುಖ ಬೆಳೆ. ಕಬ್ಬು ಬೆಳೆಗಾರರೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಜತೆಗೆ ನಿರುದ್ಯೋಗದ ಸಮಸ್ಯೆ ಜನರನ್ನು ಕಾಡುತ್ತಿದೆ. ಪದೇ ಪದೇ ಕೈಕೊಡುವ ವಿದ್ಯುತ್ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟುಮಾಡುತ್ತಿದೆ.

ಪ್ರಸ್ತುತ ಇನ್ನೂ ಬೇಸಿಗೆ ಆರಂಭವಾಗಲು ಎರಡು ತಿಂಗಳು ಇರುವಾಗಲೇ ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸಂಪರ್ಕ ಸಮರ್ಪಕವಾಗಿಲ್ಲದೆ ಜನರು ಪರದಾಡುತ್ತಿದ್ದಾರೆ.

ನೆರೆಯನ್ನೂ ಕಂಡ, ಜತೆಗೆ ಬರಗಾಲದ ಸಂಕಟವನ್ನೂ ಅನುಭವಿಸಿದ ಕ್ಷೇತ್ರವಿದು. ಚಿಕ್ಕೋಡಿ ತಾಲ್ಲೂಕಿನಲ್ಲಿಯೇ ಐದು ನದಿಗಳು ಹರಿಯುತ್ತವೆ. ಮಳೆಗಾಲದಲ್ಲಿ ಉಕ್ಕಿ ಅಬ್ಬರಿಸುತ್ತದೆ. ಕುಡಚಿ, ಚಿಕ್ಕೋಡಿ ಮತ್ತು ರಾಯಭಾಗಗಳಲ್ಲಿ ಬರವೂ ದೂರವಲ್ಲ.

ಇಲ್ಲಿ ಸಾಕಷ್ಟು ಸಕ್ಕರೆ ಕಾರ್ಖಾನೆಗಳಿವೆ. ಅವುಗಳಲ್ಲಿ ಕೆಲವು ಬಂದ್ ಆಗಿವೆ. ಇನ್ನು ಕೆಲವು ರೈತರಿಗೆ ಸೂಕ್ತ ಬೆಲೆ ನೀಡದೆ ಸತಾಯಿಸುತ್ತಿವೆ ಎಂಬ ಆರೋಪಗಳಿವೆ. ರಾಜ್ಯ ಸರ್ಕಾರದ ವಿರುದ್ಧ ನಡೆದ ರೈತರ ಹೋರಾಟದಲ್ಲಿ ಈ ಭಾಗದ ಕಬ್ಬು ಬೆಳೆಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಅಥಣಿ ವಿಧಾನಸಭೆಯೊಂದರಲ್ಲಿಯೇ ಆರು ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಉತ್ಪಾದನೆಯಾಗುವ ಸಕ್ಕರೆ ಕರ್ನಾಟಕದ ಜನರ ಪಾಲಿಗೆ ಸಿಗುವುದಿಲ್ಲ. ಇಲ್ಲಿಂದ ನೇರವಾಗಿ ಮಹಾರಾಷ್ಟ್ರ ಮಾರುಕಟ್ಟೆಗೆ ಹೋಗುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ಸೂಚನೆಗಳೇ ಕಾಣಿಸುತ್ತಿಲ್ಲ. ಈ ನಡುವೆ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಸೃಷ್ಟಿಯ ಕೂಗು ಬಲವಾಗುತ್ತಿದೆ. ಇದೆಲ್ಲವೂ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

English summary
Lok Sabha elections 2019: Chikkodi is a Taluk and a Lok Sabha constituency in Belagavi District. Congress MP Prakash Hukkeri representing the constituency. Here is a brief profile of Chikkodi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X