• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಮ್ ವಿಲಾಸ್ ಪಾಸ್ವಾನ್: ಯಾವ ಸರ್ಕಾರ ಬಂದರೂ ಇವರಿಗೆ ಸಚಿವ ಸ್ಥಾನ ಕಾಯಂ!

|
   Lok Sabha Elections 2019 : ರಾಮ್ ವಿಲಾಸ್ ಪಾಸ್ವಾನ್ ವ್ಯಕ್ತಿಚಿತ್ರ | Oneindia kannada

   ಎನ್‌ಡಿಎ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವರಾಗಿರುವ ರಾಮ್ ವಿಲಾಸ್ ಪಾಸ್ವಾನ್ ಬಿಹಾರದವರು. ಅವರು ಎನ್‌ಡಿಎ ಸರ್ಕಾರದ ಜೊತೆ ಕೈಜೋಡಿಸಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರೂ ಹೌದು.

   ರಾಮ್ ವಿಲಾಸ್ ಪಾಸ್ವಾನ್ ಅವರು ಒಂದು ರೀತಿ 'ಅದೃಷ್ಟದ ಸಚಿವ'. ಏಕೆಂದರೆ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಪಾಸ್ವಾನ್ ಆ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವ ಸ್ಥಾನ ಗಿಟ್ಟಿಸುತ್ತಾರೆ. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಅವರು, 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದ ಅವಧಿಯಲ್ಲಿಯೂ ಸಚಿವರಾಗಿದ್ದರು. ಈಗ ಮೋದಿ ಸರ್ಕಾರದಲ್ಲಿ ಕೂಡ ಅವರಿಗೆ ಸಚಿವ ಸ್ಥಾನಕ್ಕೆ ಧಕ್ಕೆಯಾಗಿಲ್ಲ.

   ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಕೆ.ಸಿ. ವೇಣುಗೋಪಾಲ್ ವ್ಯಕ್ತಿಚಿತ್ರ

   ಸುಮಾರು 40 ವರ್ಷದಿಂದ ರಾಜಕೀಯದಲ್ಲಿರುವ ಅವರು ಅದರಿಂದ ನಿವೃತ್ತಿ ಹೊಂದುವ ಸುಳಿವನ್ನೂ ನೀಡಿದ್ದಾರೆ. ಎಲ್‌ಜೆಪಿಯ ಅಧಿಕಾರವನ್ನು ಮಗ ಚಿರಾಗ್ ಪಾಸ್ವಾನ್‌ಗೆ ಹಸ್ತಾಂತರಿಸುವ ಉದ್ದೇಶ ಅವರಲ್ಲಿದೆ. ಆದರೆ, ನಾನು ಆ ಸ್ಥಾನದಲ್ಲಿಯೇ ಮುಂದುವರಿಯಬೇಕು ಎಂದು ಆತ ಬಯಸಿದ್ದಾನೆ ಎಂಬುದಾಗಿ ಪಾಸ್ವಾನ್ ಹೇಳಿದ್ದರು.

   ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

   ಬಿಹಾರದ ರಾಜಧಾನಿ ಪಟ್ನಾದ ಸಮೀಪವೇ ಇರುವ ಹಾಜಿಪುರ ಲೋಕಸಭೆ ಕ್ಷೇತ್ರದ ಸಂಸದರಾಗಿರುವ ಅವರು ಮುಂದಿನ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಅವರು ರಾಜ್ಯಸಭೆಯ ಸದಸ್ಯತ್ವ ಬಯಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

   ವೈಯಕ್ತಿಕ ಬದುಕು

   ವೈಯಕ್ತಿಕ ಬದುಕು

   1946ರಲ್ಲಿ ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಪಾಸ್ವಾನ್, ಪಟ್ನಾ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಕಲಾ ಪದವಿ ಪಡೆದುಕೊಂಡರು. 1960ರಲ್ಲಿ ರಾಜಕುಮಾರಿ ದೇವಿ ಅವರನ್ನು ಮದುವೆಯಾದರು.

   2014ರಲ್ಲಿ ಅವರ ಲೋಕಸಭೆ ನಾಮಪತ್ರಿಕೆ ಸಲ್ಲಿಕೆಯ ಬಗ್ಗೆ ಪ್ರಶ್ನೆಗಳು ಎದ್ದಾಗ, ಪತ್ನಿಗೆ 1981ರಲ್ಲಿಯೇ ವಿಚ್ಛೇದನ ನೀಡಿದ್ದಾಗಿ ಬಹಿರಂಗಪಡಿಸಿದರು. ಮೊದಲ ಪತ್ನಿಯಿಂದ ಉಷಾ ಮತ್ತು ಆಶಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.

   1983ರಲ್ಲಿ ಅವರು ಅಮೃತಸರದ ಪಂಜಾಬಿ ಹಿಂದೂ ಕುಟುಂಬದ ಗಗನಸಖಿ ರೀನಾ ಶರ್ಮಾ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು. ಅವರ ಪುತ್ರ ಚಿರಾಗ್ ಪಾಸ್ವಾನ್ ನಟ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.

   ಪೊಲೀಸ್ ಆಗಲಿಲ್ಲ, ರಾಜಕಾರಣಿಯಾದರು

   ಪೊಲೀಸ್ ಆಗಲಿಲ್ಲ, ರಾಜಕಾರಣಿಯಾದರು

   ಬಿಹಾರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿ ಆಯ್ಕೆಯಾದರು. 1968ರಲ್ಲಿ 22 ವರ್ಷದ ಅವರು ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಖಾಜಿಗಡ ಜಿಲ್ಲೆಯ ಶಹರ್ಬನಿ ಗ್ರಾಮಕ್ಕೆ ಮರಳಿದ್ದರು. ಆಗ ಊರಲ್ಲಿ ನಡೆದ ಘಟನೆ ಅವರ ಬದುಕನ್ನು ಬದಲಿಸಿತು.

   ವೈದ್ಯಕೀಯ ವೆಚ್ಚಕ್ಕಾಗಿ ಮಾಲೀಕನಿಂದ 150 ರೂ ಪಡೆದು ಮರಳಿ ಕೊಡದೆ ಇದ್ದ ದಲಿತ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ನೂರಾರು ಜನರ ಮುಂದೆ ಪಂಚಾಯಿತಿಯಲ್ಲಿ ವಿಚಾರಣೆ ಮಾಡಲಾಗುತ್ತಿತ್ತು. ಪೊಲೀಸ್ ಅಧಿಕಾರಿಯಾಗುವ ಹುಮ್ಮಸ್ಸಿನಲ್ಲಿದ್ದ ಪಾಸ್ವಾನ್, ಆ ವ್ಯಕ್ತಿಯನ್ನು ಬಿಡಿಸಿದರು. ಆರೋಪಕ್ಕೆ ಪುರಾವೆಯಾಗಿ ತಂದಿದ್ದ ಲೆಕ್ಕದ ಪುಸ್ತಕವನ್ನು ಹರಿದು ಹಾಕಿದರು.

   ಯುವ ಪಾಸ್ವಾನ್ ಆಗಲೇ ಆ ಹಳ್ಳಿ ಜನರ ಪಾಲಿನ ಹೀರೋ ಆದರು. ಅವರ ಜನಪ್ರಿಯತೆ ಎಲ್ಲೆಡೆ ಹರಡಿತು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದರು. ಹೀಗಾಗಿ, ಪೊಲೀಸ್ ಅಧಿಕಾರಿಯ ಉದ್ಯೋಗಕ್ಕೆ ಸೇರುವ ಬದಲು ಅವರು ರಾಜಕೀಯದಲ್ಲಿ ವೃತ್ತಿ ಕಟ್ಟಿಕೊಳ್ಳಲು ಪಾಸ್ವಾನ್ ಮುಂದಾದರು.

   ಪಾಸ್ವಾನ್ ಪೊಲೀಸ್ ಕೆಲಸ ಬಿಟ್ಟು ರಾಜಕೀಯಕ್ಕೆ ಹೊರಟಿದ್ದು ಅವರ ತಂದೆಗೆ ಇಷ್ಟವಿರಲಿಲ್ಲ. ಆದರೆ, ಸೋಷಿಯಲಿಸ್ಟ್ ಪಕ್ಷದಲ್ಲಿದ್ದ ಸ್ನೇಹಿತರೊಬ್ಬರು, 'ನೀನು ಸರ್ಕಾರವಾಗಬೇಕು ಎಂದಿದ್ದರೆ ಶಾಸಕನಾಗು. ಸೇವಕನಾಗಲು ಬಯಸಿದ್ದರೆ ಪೊಲೀಸ್ ಕೆಲಸಕ್ಕೆ ಸೇರಿಕೋ' ಎಂದು ಹೇಳಿದ್ದರಂತೆ.

   ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವ್ಯಕ್ತಿ ಪರಿಚಯ

   ರಾಜಕೀಯದ ಬದುಕು

   ರಾಜಕೀಯದ ಬದುಕು

   ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಪಾಸ್ವಾನ್, 1969ರಲ್ಲಿ ಬಿಹಾರ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದರು. ಅಲೋಲಿ ಕ್ಷೇತ್ರದಿಂದ ಅವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಯನ್ನು 700 ಮತಗಳಿಂದ ಸೋಲಿಸಿದ್ದರು.

   1970ರಲ್ಲಿ ಎಎಸ್‌ಪಿಯ ಬಿಹಾರ ಘಟಕದ ಜಂಟಿ ಕಾರ್ಯದರ್ಶಿಯಾದರು. ಬಳಿಕ 1974ರಲ್ಲಿ ಹೊಸದಾಗಿ ರಚನೆಯಾದ ಲೋಕದಳವನ್ನು ಸೇರಿಕೊಂಡು, ಅದರ ಬಿಹಾರ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಬಿಹಾರದ ದಲಿತರು, ಇತರೆ ಕೆಳವರ್ಗದ ಹಿಂದೂಗಳು ಮತ್ತು ಮುಸ್ಲಿಮರ ನಾಯಕನಾಗಿ ಅವರು ಬೆಳೆದಿದ್ದಾರೆ.

   ಅದೇ ವೇಳೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಅದರ ವಿರುದ್ಧ ಅನೇಕ ನಾಯಕರು ಸಿಡಿದೆದ್ದಿದ್ದರು. ಅವರಲ್ಲಿ ಪಾಸ್ವಾನ್ ಕೂಡ ಒಬ್ಬರು. ಆ ಸಂದರ್ಭದಲ್ಲಿ ಅವರು ಜೈಲಿಗೂ ಹೋಗಿ ಬಂದಿದ್ದರು. 1975-1977ರ ಅವಧಿಯಲ್ಲಿ ಬಿಡುಗಡೆ ಹೊಂದಿದರು.

   ಆ ವರ್ಷವೇ ಅವರು ಅವರು ಜನತಾ ಪಕ್ಷದ ಸಂಸದರಾಗಿ ಹಾಜಿಪುರ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಅಲ್ಲಿಂದ ಅವರು 1984 ಮತ್ತು 2009ರ ಚುನಾವಣೆಯಲ್ಲಿ ಮಾತ್ರ ಅವರು ಸೋಲಿನ ಕಹಿ ಅನುಭವಿಸಿದರು. ಲೋಕಸಭೆಯಲ್ಲಿ ಸೋತರೂ 2009ರಲ್ಲಿ ಬಿಹಾರ ಕ್ಷೇತ್ರದಿಂದ ರಾಜ್ಯಸಭೆಗೆ ಆಯ್ಕೆಯಾದರು.

   ಚಾಮರಾಜನಗರದಲ್ಲಿ ಹ್ಯಾಟ್ರಿಕ್ ಸರದಾರರಾಗುವರೇ ಧ್ರುವನಾರಾಯಣ್?

   ಎಂಟು ಬಾರಿ ಸಂಸತ್ ಸದಸ್ಯ

   ಎಂಟು ಬಾರಿ ಸಂಸತ್ ಸದಸ್ಯ

   1977, 1980, 1989, 1996, 1999, 2004 ಮತ್ತು 2014ರಲ್ಲಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು. ಎಂಟು ಬಾರಿ ಲೋಕಸಭೆ ಸದಸ್ಯರಾಗಿ ಮತ್ತು ರಾಜ್ಯಸಭೆ ಸದಸ್ಯರಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ.

   1985ರಲ್ಲಿ ರಾಷ್ಟ್ರೀಯ ಲೋಕದಳದ ಪ್ರಧಾನ ಕಾರ್ಯದರ್ಶಿಯಾದರು. 1987ರಲ್ಲಿ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿದರು. ಮರುವರ್ಷ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಜನತಾ ಪಕ್ಷಗಳು ಒಂದಾಗಿ ಜನತಾ ದಳ ರಚನೆಯಾಯಿತು. ಆಗಲೂ ಅದರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಆದರೆ, 2000ದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬಳಗವನ್ನು ಸೇರುವ ವಿಚಾರದಲ್ಲಿ ಜನತಾದಳ ಇಬ್ಭಾಗವಾಯಿತು. ಆಗ ಪಾಸ್ವಾನ್ ಮತ್ತು ಪಕ್ಷದ ಇತರೆ ಸದಸ್ಯರು ಜತೆಗೂಡಿ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ರಚಿಸಿದರು. ಅಲ್ಲಿಂದ ಇಲ್ಲಿಯವರೆಗೂ ಪಾಸ್ವಾನ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

   ಸಚಿವರಾಗಿ ಪಾಸ್ವಾನ್

   ಸಚಿವರಾಗಿ ಪಾಸ್ವಾನ್

   1989-90ರ ಅವಧಿಯಲ್ಲಿ ವಿಪಿ ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ಕಲ್ಯಾಣ ಸಚಿವರಾಗಿ ಪಾಸ್ವಾನ್ ಕಾರ್ಯನಿರ್ವಹಿಸಿದ್ದರು. 1996-98ರ ಅವಧಿಯಲ್ಲಿನ ನ್ಯಾಷನಲ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದರು. ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 1999-2001ರ ಅವಧಿಯಲ್ಲಿ ಸಂವಹನ ಸಚಿವರಾಗಿ ಮತ್ತು 2001-02ರಲ್ಲಿ ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವರಾಗಿದ್ದರು. ಸರ್ಕಾರದ ಅವಧಿಯಲ್ಲಿಯೇ ಎಲ್‌ಜೆಪಿ ಮೈತ್ರಿಯಿಂದ ಹೊರನಡೆಯಿತು.

   ಕಾಂಗ್ರೆಸ್‌ನ ವಿರೋಧಿ ಪಾಳೆಯದಲ್ಲಿಯೇ ರಾಜಕಾರಣದಲ್ಲಿದ್ದ ಅವರು 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದೊಂದಿಗೆ ಕೂಡ ಕೈಜೋಡಿಸಿದರು. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಉಕ್ಕು ಖಾತೆಯನ್ನು ನಿಭಾಯಿಸಿದರು.

   ಅಭಿಮಾನಿಗಳ ಪಾಲಿಗೆ 'ಅಭಿನವ ಇಂದಿರಾ' ಪ್ರಿಯಾಂಕಾ ವಾದ್ರಾ ವ್ಯಕ್ತಿಚಿತ್ರ

   ಬಿಹಾರದಲ್ಲಿ ಸೋಲಿನ ಆಘಾತ

   ಬಿಹಾರದಲ್ಲಿ ಸೋಲಿನ ಆಘಾತ

   2005ರ ಫೆಬ್ರವರಿಯಲ್ಲಿ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರು. ಆದರೆ, ಅತಂತ್ರ ಫಲಿತಾಂಶ ಬಂದು ಯಾವ ಪಕ್ಷವೂ ಸರ್ಕಾರ ರಚಿಸಲು ಅವಕಾಶ ಇಲ್ಲದಂತಾಯಿತು. ಪಾಸ್ವಾನ್, ಲಾಲೂ ಯಾದವ್ ಅವರನ್ನಾಗಲೀ ಎನ್‌ಡಿಎಯನ್ನಾಗಲೀ ಬೆಂಬಲಿಸಲು ಬಯಸಲಿಲ್ಲ. ಈ ನಡುವೆ ಜೆಡಿಯು ನಾಯಕ ನಿತೀಶ್ ಕುಮಾರ್, ಪಾಸ್ವಾನ್ ಪಕ್ಷದ 12 ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಿಸಿದರು. ಆದರೆ, ರಾಜ್ಯಪಾಲರು ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿದರು. ನವೆಂಬರ್‌ನಲ್ಲಿ ಮತ್ತೆ ಚುನಾವಣೆ ನಡೆದಾಗ ಎಲ್‌ಜೆಪಿ ಹೀನಾಯ ಸೋಲು ಅನುಭವಿಸಿತು. ಎನ್‌ಡಿಎ ಸರ್ಕಾರ ರಚನೆ ಮಾಡಿತು.

   2014ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೂ ಅವರು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ, ಏಪ್ರಿಲ್‌-ಮೇನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡರು. ಅದು ಯಶಸ್ವಿಯೂ ಆಯಿತು. ಎಲ್‌ಜೆಪಿ ಬಿಹಾರದಲ್ಲಿ ಆರು ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತು. ಹಾಜಿಪುರ ಕ್ಷೇತ್ರದಲ್ಲಿ ಮರಳಿ ಗೆಲುವು ಕಂಡ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡರು.

   English summary
   Lok Sabha Elections 2019: Bihar LJP leader eight time parliamentarian Ram Vilas Paswan is not contesting in this election. He wanted to elect for Rajya Sabha, sources said. Here is his profile.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X