• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

|
   Lok Sabha Election 2019 :ಹಾಸನ ಕ್ಷೇತ್ರದ ಪರಿಚಯ | Oneindia Kannada

   ಹಾಸನದಲ್ಲಿ ಬಹು ಸಂಖ್ಯಾತ ಒಕ್ಕಲಿಗ ಗೌಡ ಸಮುದಾಯದ್ದೇ ಕಾರುಬಾರು. ಹರದನಹಳ್ಳಿಯ ದೇವೇಗೌಡರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಈ ಬಾರಿ ಯಾರು ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

   ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡ ಕ್ಷೇತ್ರದಲ್ಲಿ ಹೇಮಾವತಿ ಜೀವನದಿಯಾಗಿದೆ.

   ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ

   ಕನ್ನಡ ನಾಡಿನ ಜೀವನದಿ ಕಾವೇರಿಯಲ್ಲದೆ, ಯಗಚಿ, ವಾಟೆಹೊಳೆ, ಎತ್ತಿನಹೊಳೆ, ಕೆಂಪುಹೊಳೆ ಹೀಗೆ ನದಿ, ತೊರೆಗಳಿಗೇನು ಕಡಿಮೆಯಿಲ್ಲ.

   ವ್ಯವಸಾಯ, ಹೈನುಗಾರಿಕೆ ಇಲ್ಲಿನ ಜನರ ಮುಖ್ಯ ಕಸುಬಾಗಿದೆ. ಸಕ್ಕರೆ ಕಾರ್ಖಾನೆ, ಇಸ್ರೋ ಕೇಂದ್ರ ಬಿಟ್ಟರೆ ಪ್ರಮುಖ ಕೈಗಾರಿಕಾ ಘಟಕಗಳಿಲ್ಲ. ವಿಶ್ವ ಪ್ರಸಿದ್ಧ ಬೇಲೂರು, ಹಳೆಬೀಡು, ಶಿಲ್ಪಕಲೆಗಳ ಬೀಡನ್ನು ಹೊಂದಿರುವ, ನೈಸರ್ಗಿಕ ತಾಣಗಳನ್ನು ಹೊಂದಿರುವ ಪ್ರವಾಸೋದ್ಯಮಕ್ಕೆ ಇಂಬು ನೀಡುವ ಅನೇಕ ಸ್ಥಳಗಳನ್ನು ಹೊಂದಿದೆ.

   ಜಾತೀವಾರು ಲೆಕ್ಕಾಚಾರ: ಕ್ಷೇತ್ರ ವಿ೦ಗಡಣೆಯ ಮು೦ಚೆ ಈ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎ೦ಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿತ್ತು. ಆದರೆ ಈಗ ಕುರುಬರು ಹೆಚ್ಚಿರುವ ಕಡೂರು ಕ್ಷೇತ್ರ ಸೇರಿರುವುದರಿ೦ದ ಜಾತಿ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಒಕ್ಕಲಿಗರು, ಲಿಂಗಾಯತರು, ಕುರುಬರು, ಎಸ್ ಟಿ, ಎಸ್ಟಿ, ಮುಸ್ಲಿಮರು ಹಾಗೂ ಇತರರು ಕ್ರಮವಾಗಿ ಇಲ್ಲಿ ಏರಿಕೆಯಿಂದ ಇಳಿಕೆ ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದಾರೆ.

   ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ

   ಕಳೆದ ಜನಗಣತಿ ಎಣಿಕೆಯಂತೆ ಹಾಸನ ಕ್ಷೇತ್ರದಲ್ಲಿ 20,16,896 ಮಂದಿ ಇದ್ದು, ಶೇ 78.50ರಷ್ಟು ಜನತೆ ಗ್ರಾಮೀಣ ಭಾಗದಲ್ಲಿದ್ದರೆ, ಶೇ 21.50 ಮಂದಿ ನಗರ ಪ್ರದೇಶದಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ 19.69ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 1.84ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

   ಕ್ಷೇತ್ರದ ಸಮಸ್ಯೆಗಳು : ಕೃಷಿ, ಹೈನುಗಾರಿಕೆ ಆಧಾರಿತ ಕೈಗಾರಿಕೆಗಳಿದ್ದರೂ, ಇಸ್ರೋ, ಪೆಟ್ರೋಲಿಯಂ ಸಂಶೋಧನಾ ಕೇಂದ್ರಗಳಿದ್ದರೂ ಸ್ಥಳೀಯರಿಗೆ ಪ್ರಯೋಜನವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಸುಧಾರಣೆ ಕಂಡಿಲ್ಲ. ಸಾರಿಗೆ, ಸಂಪರ್ಕ ವ್ಯವಸ್ಥೆ ಏಳಿಗೆಯಾಗಿಲ್ಲ. ಪ್ರಮುಖವಾಗಿ ಐತಿಹಾಸಿಕ, ಪಾರಂಪರಿಕ ದೇಗುಲಗಳ ರಕ್ಷಣೆ, ದೇಗುಲ ಪ್ರವಾಸೋದ್ಯಮ, ಅರಣ್ಯ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಕಾಳಜಿ ಇನ್ನೂ ಸಿಕ್ಕಿಲ್ಲ.

   ಲೋಕಸಭೆ ಚುನಾವಣೆ 2019: ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಪರಿಚಯ

   ಪ್ರಮುಖವಾಗಿ ಹಾಸನದಿಂದ ಬೆಂಗಳೂರು ಏಕ್ಸ್ ಪ್ರೆಸ್, ಸೂಪರ್ ಫಾಸ್ಟ್ ರೈಲುಗಳಿಲ್ಲ, ಹಾಸನದಿಂದ ಚಿಕ್ಕಮಗಳೂರು ರೈಲು ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ದೇವೇಗೌಡರ ಕನಸಾದ ವಿಮಾನ ನಿಲ್ದಾಣ ಇನ್ನೂ ನಿರ್ಮಾಣವಾಗಿಲ್ಲ. ಹೇಮಾವತಿ, ಯಗಚಿ ನೀರಾವರಿ ಯೋಜನೆ ಅಪೂರ್ಣವಾಗಿದೆ. ಎತ್ತಿನಹೊಳೆ ಯೋಜನೆ ಜಾರಿಯಲ್ಲಿದ್ದರೂ ಇದರ ಪ್ರಯೋಜನ ಬಯಲು ಸೀಮೆಗೆ ಹೆಚ್ಚಾಗಿ ಸಿಗಲಿದೆ. ಮಲೆನಾಡು ಭಾಗಗಳಲ್ಲಿ ಕಾಡಾನೆ ಸಮಸ್ಯೆ ಹೆಚ್ಚಳವಾಗಿದೆ.

   ಸಂಸದರ ರಿಪೋರ್ಟ್ ಕಾರ್ಡ್ : ದೇವೇಗೌಡರು ಸಂಸದರಾಗಿ ಲಭ್ಯವಿರುವ 25 ಕೋಟಿ ರು ನಿಧಿ ಪೈಕಿ 15.22 ಕೋಟಿ ರು ಸಂಸದರ ನಿಧಿ ಲಭ್ಯವಿದ್ದು, ಈ ಪೈಕಿ 12.27 ಕೋಟಿ ರು ಗಳಷ್ಟು ಈ ಕ್ಷೇತ್ರಕ್ಕಾಗಿ ದೇವೇಗೌಡರು ಖರ್ಚು ಮಾಡಿದ್ದಾರೆ. ಸಂಸತ್ತಿನಲ್ಲಿ 16 ಚರ್ಚೆಗಳಲ್ಲಿ ಭಾಗವಹಿಸಿದ್ದು, 54% ಹಾಜರಾತಿ ಹೊಂದಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೋತ್ತರ ರಾಷ್ಟ್ರೀಯ ಸರಾಸರಿ 233ರಷ್ಟಿದೆ. ಹಾಜರಾತಿ ಪ್ರಮಾಣ ರಾಷ್ಟ್ರೀಯ ಸರಾಸರಿ 40%, ಚರ್ಚೆಯಲ್ಲಿ ಪಾಲ್ಗೊಂಡ ಪ್ರಮಾಣದ ರಾಷ್ಟ್ರೀಯ ಸರಾಸರಿ ಕೂಡಾ 233.

   ದಾವಣಗೆರೆ ಲೋಕಸಭಾ ಕ್ಷೇತ್ರದ ಪರಿಚಯ

   ಕ್ಷೇತ್ರದ ಚುನಾವಣಾ ಇತಿಹಾಸ: ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ ಹಾಸನ -ಚಿಕ್ಕಮಗಳೂರು ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. 1951ರಲ್ಲಿ ಕಾಂಗ್ರೆಸ್ಸಿನ ಜೆಎಚ್ ಸಿದ್ದನಂಜಪ್ಪ ಅವರು ಇಲ್ಲಿಂದ ಆಯ್ಕೆಯಾದ ಮೊದಲ ಸಂಸದರು. 1967ರಲ್ಲಿ ಸ್ವತಂತ್ರ ಪಾರ್ಟಿಯ ಎನ್ ಶಿವಪ್ಪ ಅವರು ಗೆಲುವು ಸಾಧಿಸಿದರು. ಕರ್ನಾಟಕ ರಾಜ್ಯ ಉದಯವಾದ ಬಳಿಕ 1977ರಲ್ಲಿ ಎಸ್ ನಂಜೇಶ ಗೌಡ ಅವರು ಭಾರತೀಯ ಲೋಕದಳದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. 1991ರಲ್ಲಿ ಮೊದಲ ಬಾರಿಗೆ ಎಚ್ ಡಿ ದೇವೇಗೌಡರು ಇಲ್ಲಿ ಜಯ ಕಂಡರು.

   ದೇವೇಗೌಡ ಅವರು ಹಾಸನ ಜಿಲ್ಲೆಯಿಂದ ರಾಜಕೀಯ ಆರಂಭಿಸಿ, ಪ್ರಧಾನಿ ಪಟ್ಟಕ್ಕೇರಿದವರು. ಎರಡು ಬಾರಿ ಇಲ್ಲಿ ಸೋಲು ಕಂಡಿದ್ದು ಬಿಟ್ಟರೆ, ಹಾಸನದಲ್ಲಿ 85 ವರ್ಷ ವಯಸ್ಸಿನ 24/7 ರಾಜಕಾರಣಿ ದೇವೇಗೌಡರದ್ದೇ ದರ್ಬಾರು.

   1980ರಿಂದ ಇಲ್ಲಿ ತನಕ ಸ್ಟ್ರೈಕ್ ರೇಟ್ ನೋಡಿದರೆ ಜೆಡಿಎಸ್ 5 ಬಾರಿ ಗೆಲುವು ಸಾಧಿಸಿ ಶೇ56ರಷ್ಟು ಗೆಲುವಿನ ಸರಾಸರಿ ಹೊಂದಿದ್ದರೆ, ಕಾಂಗ್ರೆಸ್ 4 ಬಾರಿ ಗೆಲುವು ಸಾಧಿಸಿ ಶೇ 44ರಷ್ಟು ಗೆಲುವನ್ನು ಕಂಡಿದೆ.

   2014ರಲ್ಲಿ ಕಾಂಗ್ರೆಸ್ಸಿನ ಅರಕಲಗೂಡು ಮಂಜು (409,379ಮತಗಳು) ವಿರುದ್ಧ 100462 ಮತಗಳ ಅಂತರದಿಂದ ದೇವೇಗೌಡರು(509841 ಮತಗಳು) ಜಯ ಗಳಿಸಿದ್ದರು.

   'ಭತ್ತದ ಕಣಜ' ಕೊಪ್ಪಳ ಲೋಕಸಭಾ ಕ್ಷೇತ್ರದ ಪರಿಚಯ

   2014ರಲ್ಲಿ ಶೇ 73ರಷ್ಟು ಮತದಾನವಾಗಿತ್ತು. ಒಟ್ಟು 11,47,172 ಮತಗಳ ಪೈಕಿ 5,86,090 ಪುರುಷರು, 5,61,082 ಮಹಿಳಾ ಮತಗಳು ದಾಖಲಾಗಿತ್ತು.

   ಒಟ್ಟಾರೆ, 15,61,336ಮತದಾರರಿದ್ದು, 789,668 ಪುರುಷರು, 771,668 ಮಹಿಳೆಯರಿದ್ದಾರೆ. ಕಳೆದ ಬಾರಿ ಶೇ73 ರಷ್ಟು ಮತದಾನವಾಗಿತ್ತು.

   ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದ ಸಂಪದ್ಭರಿತ ಕ್ಷೇತ್ರ ಎನ್ನಬಹುದು. ಹಾಸನ ನಗರದಲ್ಲಿ ಕೈಗಾರಿಕಾ ಪ್ರದೇಶವಿದ್ದರೂ ಹೆಚ್ಚಿನ ಏಳಿಗೆ ಕಂಡಿಲ್ಲ.

   English summary
   Lok Sabha Election 2019 : Hassan Constituency is one of the main constituency out of 28 in Karnataka. Former PM, JDS supremo HD Deve Gowda is the current MP. This constituency comprises Hassan and Kadur in Chikamangaluru!
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X