• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ 2019 : ಬಳ್ಳಾರಿ ಕ್ಷೇತ್ರ ಪರಿಚಯ

|
   Lok Sabha Elections 2019 : ಬಳ್ಳಾರಿ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

   ಬಿರು ಬಿಸಿಲಿನ ಕ್ಷೇತ್ರ ಬಳ್ಳಾರಿ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರ. ಐತಿಹಾಸಿಕವಾಗಿ ಬಳ್ಳಾರಿಯು ಶಾತವಾಹನ, ಕಲ್ಯಾಣ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953 ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

   ಗಣಿ ಧೂಳು, ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ, ಬಳ್ಳಾರಿ ಸೇರಿದಂತೆ ನಗರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹಿಂದುಳಿದ ಜಿಲ್ಲೆಗಳ ಪಟ್ಟಿ ಜೊತೆಗೆ ಅತಿವೃಷ್ಟಿಯ ಪ್ರಹಾರ. ಶೈಕ್ಷಣಿಕವಾಗಿ ಒಂದೆರಡು ವಿವಿಗಳನ್ನು ಹೊಂದಿರುವುದು ಬಿಟ್ಟರೆ ಸಾಕ್ಷರತೆ ಪ್ರಮಾಣ ಈಗಲೂ ಮೇಲಕ್ಕೆದ್ದಿಲ್ಲ.

   ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕಣ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ

   ಬಳ್ಳಾರಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಸ್ವಾತಂತ್ರ್ಯ ಬಂದ ಬಳಿಕ ಮದ್ರಾಸ್, ಮೈಸೂರು ಆನಂತರ ಕರ್ನಾಟಕ ರಾಜ್ಯಗಳಲ್ಲಿ ಈ ಕ್ಷೇತ್ರ ಸೇರಿಕೊಂಡಿದೆ.

   ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳು ಪರಿಶಿಷ್ಟ ಜಾತಿ(ಎಸ್ ಸಿ) ಅಥವಾ ಪರಿಶಿಷ್ಟ ಪಂಗಡ(ಎಸ್ ಟಿ)ಕ್ಕೆ ಸೇರಿದ್ದಾಗಿದೆ.

   ಹಡಗಲಿ(ಎಸ್ ಸಿ), ಹಗರಿ ಬೊಮ್ಮನಹಳ್ಳಿ (ಎಸ್ ಸಿ), ವಿಜಯನಗರ, ಕಂಪ್ಲಿ(ಎಸ್ ಟಿ), ಬಳ್ಳಾರಿ (ಎಸ್ ಟಿ), ಬಳ್ಳಾರಿ ನಗರ, ಸಂಡೂರು (ಎಸ್ ಟಿ), ಕೂಡ್ಲಿಗಿ (ಎಸ್ ಟಿ)

   ಧಾರವಾಡ ಲೋಕಸಭಾ ಕ್ಷೇತ್ರದ ಪರಿಚಯ

   ಎಂಟು ಕ್ಷೇತ್ರಗಳ ಪೈಕಿ ಬಳ್ಳಾರಿ, ಬಳ್ಳಾರಿ ನಗರ, ಕೂಡ್ಲಿಗಿ ಬಿಜೆಪಿ ವಶದಲ್ಲಿದ್ದರೆ, ಕಂಪ್ಲಿ, ವಿಜಯನಗರ, ಸಂಡೂರು, ಹಗರಿ ಬೊಮ್ಮನಹಳ್ಳಿ, ಹಡಗಲಿ ಕ್ಷೇತ್ರಗಳು ಕಾಂಗ್ರೆಸ್ ವಶದಲ್ಲಿವೆ.

   ಕ್ಷೇತ್ರದ ಇತಿಹಾಸ: ಸ್ವಾತಂತ್ರ್ಯ ನಂತರ 1951ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಟೇಕೂರು ಸುಬ್ರಮಣ್ಯಂ ಅವರು ಮೊದಲ ಬಾರಿಗೆ ಗೆಲುವು ಸಾಧಿಸಿದರು. ಮೈಸೂರು ರಾಜ್ಯದಲ್ಲಿ 1957, 1962ರಲ್ಲೂ ಸುಬ್ರಮಣ್ಯಂ ಅವರಿಗೆ ಜಯ ಲಭಿಸಿತ್ತು.

   ಕರ್ನಾಟಕ ರಾಜ್ಯದಲ್ಲಿ 1977ರಲ್ಲಿ ಕಾಂಗ್ರೆಸ್ಸಿನ ಕೆಎಸ್ ವೀರಭದ್ರಪ್ಪ ಅವರು ಜಯ ಸಾಧಿಸಿದ್ದರು. 1999ರಲ್ಲಿ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದನ್ನು ಮರೆಯುವಂತಿಲ್ಲ.

   'ಭತ್ತದ ಕಣಜ' ಕೊಪ್ಪಳ ಲೋಕಸಭಾ ಕ್ಷೇತ್ರದ ಪರಿಚಯ

   ಬಿಜೆಪಿಗೆ 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಿ ಕರುಣಾಕರ ರೆಡ್ಡಿ ಅವರಿಗೆ ಜಯ ಲಭಿಸಿತ್ತು. 2009ರಲ್ಲಿ ಜೆ ಶಾಂತಾ, 2014ರಲ್ಲಿ ಬಿ ಶ್ರೀರಾಮುಲು ಅವರು ಸಂಸದರಾದರು.

   ರಾಜ ಮನೆತನದ ಎಂವೈ ಘೋರ್ಪಡೆ, ಸೋನಿಯಾ ಗಾಂಧಿ, ಮಾಜಿ ಸಚಿವೆ ಬಸವರಾಜೇಶ್ವರಿ ಅವರಂಥ ಕಾಂಗ್ರೆಸ್ ಮುಖಂಡರನ್ನು ಆರಿಸಿ ಗಳಿಸಿದ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಮಾತನ್ನು ಗಣಿಧಣಿಗಳ ಕುಟುಂಬ ಅಳಿಸಿ ಹಾಕಿತ್ತು. ಬಳ್ಳಾರಿ ಕೋಟೆ ಮೇಲೆ ಕೇಸರಿ ಬಾವುಟ ಹಾರಾಟ ಕಂಡಿತ್ತು. ಆದರೆ, 2018ರಲ್ಲಿ ಪರಿಸ್ಥಿತಿ ಬದಲಾಗಿದ್ದು, ಕಾಂಗ್ರೆಸ್ ಮತ್ತೊಮ್ಮೆ ತನ್ನ ಹಿಡಿತ ಸಾಧಿಸಿದೆ.

   2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪ ಅವರು ಶೇ 59.99ರಷ್ಟು ಮತ (6,28,365 ಮತಗಳು) ಗಳಿಸಿ ಬಿಜೆಪಿಯ ಜೆ ಶಾಂತಾ ಅವರನ್ನು ಶೇ 36.78 ಮತ ಗಳಿಕೆ(3,85,204) ಸೋಲಿಸಿದರು.

   2014ರಲ್ಲಿ ಶೇ 70ರಷ್ಟು ಮತದಾನವಾಗಿತ್ತು. 10,47,772 ಮತಗಳ ಪೈಕಿ 5,42,128 ಪುರುಷರು ಹಾಗೂ 5,03,644 ಮಹಿಳೆಯರು ಮತದಾನ ಮಾಡಿದ್ದರು.

   1980ರಿಂದ ಇಲ್ಲಿ ತನಕ ಸ್ಟ್ರೈಕ್ ರೇಟ್ ನೋಡಿದರೆ ಕಾಂಗ್ರೆಸ್ ಶೇ 70ರಷ್ಟು ಸರಾಸರಿಯೊಂದಿಗೆ 7 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಶೇ 30ರಷ್ಟು ಗೆಲುವಿನ ಸರಾಸರಿಯೊಂದಿಗೆ 3 ಬಾರಿ ಗೆಲುವು ಸಾಧಿಸಿದೆ.

   ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಪರಿಚಯ

   ಕ್ಷೇತ್ರ ವಿಂಗಡಣೆಯ ನಂತರ ಸಿರಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದರೆ, ಕೊಪ್ಪಳದಲ್ಲಿದ್ದ ವಿಜಯನಗರ ಕ್ಷೇತ್ರ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಂದಿದೆ.

   ಜಾತಿವಾರು ಲೆಕ್ಕಾಚಾರ : ವಾಲ್ಮೀಕಿ ನಾಯಕ ಜನಾಂಗ, ಕುರುಬರು ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಮಿಕ್ಕಂತೆ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪ ಸಂಖ್ಯಾತರರು ಸಮಾನ ಅವಕಾಶವನ್ನು ಹೊಂದಿದ್ದಾರೆ.

   ಸಂಸದರಾಗಿ ವಿಎಸ್ ಉಗ್ರಪ್ಪ ಅವರ ಅಧಿಕಾರ ಅವಧಿ ಅಲ್ಪಾವಧಿಯಾಗಿದೆ. ಹೀಗಾಗಿ, ಈ ಹಿಂದಿನ ಸಂಸದರಾದ ಬಿ ಶ್ರೀರಾಮುಲು ಅವರ ಕಾರ್ಯಕ್ಷಮತೆ ಬಗ್ಗೆ ಗಮನ ಹರಿಸಿದರೆ, ಬಿ ಶ್ರೀರಾಮುಲು ಅವರು ಸಂಸತ್ತಿನಲ್ಲಿ 20 ಚರ್ಚೆಗಳಲ್ಲಿ ಭಾಗವಹಿಸಿದ್ದು, 572 ಪ್ರಶ್ನೆಗಳನ್ನು ಕೇಳಿದ್ದಾರೆ. ಶೇ 52ರಷ್ಟು ಹಾಜರಾತಿ ಹೊಂದಿದ್ದರು. ಬಳ್ಳಾರಿ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ ಲಭ್ಯವಾದ 20.24 ಕೋಟಿ ರು ಗಳ ಪೈಕಿ 16.89 ಕೋಟಿ ರು ಗಳನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಿದ್ದಾರೆ.

   ಕಳೆದ ಜನಗಣತಿ ಎಣಿಕೆಯಂತೆ ಕ್ಷೇತ್ರದಲ್ಲಿ 21,83,491 ಮಂದಿ ಇದ್ದು, ಈ ಪೈಕಿ ಶೇ 61.46 ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿದ್ದರೆ, ಶೇ 38.54ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಒಟ್ಟಾರೆ, ಜನಸಂಖ್ಯೆಯಲ್ಲಿ ಶೇ 21.06ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 18.38ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ.

   ಒಟ್ಟಾರೆ, 14,87,945 ಮತದಾರರಿದ್ದು, 7.50,789 ಪುರುಷರು, 7,37,156 ಮಹಿಳೆಯರಿದ್ದಾರೆ. ಕಳೆದ ಬಾರಿ ಶೇ70 ರಷ್ಟು ಮತದಾನವಾಗಿತ್ತು.

   ಕ್ಷೇತ್ರಗಳ ಸಮಸ್ಯೆ:

   ಬಳ್ಳಾರಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಆದರೆ, ಗಣಿ ಮತ್ತು ಕೃಷಿ ಕೂಲಿ ಕಾರ್ಮಿಕರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮರಳು ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತುಂಗ ಭದ್ರಾ ನದಿ ಹರಿದರೂ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.

   ವಿಶ್ವಖ್ಯಾತ ಸಿದ್ಧ ಉಡುಪು ಕೇಂದ್ರಕ್ಕೆ ಸಿಗದ ಮನ್ನಣೆ, ಶಾಶ್ವತವಾದ ವಿಮಾನ ನಿಲ್ದಾಣಕ್ಕಾಗಿ ಬೇಡಿಕೆ ಈಡೇರಿಲ್ಲ. ಬಳ್ಳಾರಿಯ ಪರಿಸರ ಉಳಿಸುವ, ರಸ್ತೆ ಸಂಪರ್ಕ ಸಮರ್ಪಕಗೊಳಿಸುವ ಕಾರ್ಯಕ್ಕೆ ಇಲ್ಲಿ ತನಕ ಯಾವ ಸಂಸದರು ಕೈ ಹಾಕಿಲ್ಲ ಎಂಬುದು ವಿಪರ್ಯಾಸವಾದರೂ ಸತ್ಯ.

   English summary
   Lok Sabha Election 2019 : Bellary Constituency is one of the main constituency out of 28 in Karnataka. This constituency is reserved for the candidates belonging to the Scheduled tribes. Bellary Lok Sabha constituency comprises the following eight Legislative Assembly segments
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X