ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿ ಜೀವನ ಅಂದುಕೊಂಡಷ್ಟು ಸುಲಭ ಅಲ್ಲ, ಬಹಳ ಕಷ್ಟ!

By Sushma Chatra
|
Google Oneindia Kannada News

ಅಪ್ಪ ಇಬ್ಬರು ಮಕ್ಕಳು ಹಳ್ಳಿಲೇ ಇದ್ರೆ ಇರೋ ನಾಲ್ಕು ಎಕರೇಲಿ ಬದುಕೋದು ಕಷ್ಟ ಆಗುತ್ತೆ ಅನ್ನೋ ಕಾರಣಕ್ಕೆ ಒಬ್ಬ ಮಗನಿಗೆ ಒಳ್ಳೆ ವಿದ್ಯೆ ಕಲಿಸಿ ಕೆಲಸ ಸಿಗೋ ಹಾಗೆ ಮಾಡಿ ಪೇಟೆ ಸೇರಿಸಿಬಿಟ್ಟ. ಪೇಟೆಯಲ್ಲಿ ಬದುಕೋಕೆ ಬೇಕಾಗೋ ಎಲ್ಲಾ ವ್ಯವಸ್ಥೆಯ ಖರ್ಚನ್ನು ಸಾಲಸೂಲ ಮಾಡಿ ಭರಿಸಿದ್ದಾಯ್ತು. ಓಡಾಡೋಕೊಂದು ಬೈಕು, ಮನೆಗೆ ಬೇಕಾಗೋ ಫರ್ನಿಚರ್ ಗಳು, ಬೆಲೆಬಾಳೋದೊಂದು ಸೈಟು ಕೊಡಿಸಿ ಮದುವೆ ಮಾಡೋಕೆ ಹಳ್ಳಿಯ ದುಡ್ಡನ್ನೇ ವಿನಿಯೋಗಿಸಿ ಖರ್ಚು ಹಾಕ್ಕೊಂಡಿದ್ದಾಯ್ತು.

ಪೇಟೆಯಲ್ಲಿ ದುಡಿತಾ ಇದ್ದ ಮಗನಿಗೆ ಹಳ್ಳಿಯ ಗಂಧಗಾಳಿಯೂ ಗೊತ್ತಾಗಲಿಲ್ಲ. ವಿದ್ಯೆಗೆಂದು ಹಳ್ಳಿ ಬಿಟ್ಟವನಿಗೆ ಅಪ್ಪ ದುಡಿಯುತ್ತಿದ್ದ ಕಷ್ಟದ ಅರಿವೇ ಇಲ್ಲ. ಅಪ್ಪ ಮಾರಾಟ ಮಾಡುತ್ತಿದ್ದ ಅಡಿಕೆ‌ ರೇಟ್ ಅನ್ನು ಪೇಪರ್ ನಲ್ಲಿ ಓದಿ ಅಪ್ಪನಿಗೆ ಎಷ್ಟು ಅಡಿಕೆ ಆಗುತ್ತೆ, ಅದನ್ನು ಮಾರಿದ್ರೆ ಇಂತಿಷ್ಟು ದುಡ್ಡು ಬರುತ್ತೆ ಅನ್ನೋದಷ್ಟೇ ಗೊತ್ತು. ಅದೂ ಅಡಿಕೆ ರೇಟ್ ಜಾಸ್ತಿ ಇದ್ದಾಗಲೇ ಅವ್ನ ಲೆಕ್ಕಾಚಾರದ ಮಂಡೆ ಓಡುವುದು. ಯಾಕಂದ್ರೆ ಪೇಪರ್ ನಲ್ಲಿ ಅಡಿಕೆ ರೇಟ್ ಜಾಸ್ತಿ ಅಂತ ಹೆಡ್ ಲೈನ್ ಬರೋದು ಅವಾಗ್ಲೇ ತಾನೆ!

ಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿಆತ್ಮಹತ್ಯೆಗೆ ಯತ್ನಿಸುವ ಆಸೆಗಳನ್ನು ಪದೇ ಪದೇ ಬದುಕಿಸಿ

ಇತ್ತ ಇನ್ನೊಬ್ಬ ಮಗ ವಿದ್ಯೆ ಕಲಿಯದೆ ಅಪ್ಪನ ದುಡಿಮೆಗೆ ಕೈ ಜೋಡಿಸಿದ. ಆದರೆ ಅಪ್ಪನ ಆಲೋಚನೆ ಕೈಗೂಡಲಿಲ್ಲ. ಅಪ್ಪ ತೀರಿಕೊಂಡ ಕೆಲವು ವರ್ಷದ ನಂತರ ವಿದ್ಯೆ ಕಲಿತ ಬುದ್ಧಿವಂತ, ಅಪ್ಪನ ಆಸ್ತಿಯ ಹಕ್ಕು ಅಂತ ವಿದ್ಯೆ ಇಲ್ಲದ ತನ್ನ ಒಡಹುಟ್ಟಿದವನ ಜೊತೆ ಕಿರಿಕ್ ತೆಗೆದ. ಇಂತಹ ಕಿರಿಕ್ ಗಳಿಂದಲೇ ಭಾರತದ ಕೃಷಿ ವ್ಯವಸ್ಥೆ ತಲೆಮಾರುಗಳಿಂದ ಹದಗೆಡುತ್ತಾ ಬಂದಿರೋದು.

 ನೀರು, ಹಾಲು ಫ್ರೀ ಆಗಿ ಮನೆ ಬಾಗಿಲಿಗೆ ಬಂದು ಬೀಳೋದಿಲ್ಲ

ನೀರು, ಹಾಲು ಫ್ರೀ ಆಗಿ ಮನೆ ಬಾಗಿಲಿಗೆ ಬಂದು ಬೀಳೋದಿಲ್ಲ

ಹೌದು. ಪೇಟೆ ಸೇರಿದ ಮಂಕು (ಕ್ಷಮಿಸಿ ಈ ಪದ ಬಳಕೆಗಾಗಿ)ಗಳಿಗೆ ಹಳ್ಳಿಯ ವ್ಯವಸ್ಥೆಯ ಅರಿವೇ ಇಲ್ಲ. ಬಾಯಿ ಬಿಟ್ರೆ ನಿಮಗೆ ನೀರು ಫ್ರೀ, ಹಾಲು ಫ್ರೀ ಅಂತಾರೆ. ನೀರು ಫ್ರೀ ಆಗಿ ಮನೆ ಬಾಗಿಲಿಗೆ ಬಂದು ಬೀಳೋದಿಲ್ಲ. ಕೆರೆನೊ, ಬಾವಿನೋ ಮಾಡಿಸ್ಬೇಕು. ಅದು ಬತ್ತಿ ಹೋದ್ರೆ ಬೋರ್ ವೆಲ್ ತೆಗಿಸ್ಬೇಕು. ಆಗಾಗ ಆ ಬಾವಿಯ, ಕೆರೆಯ ಹೂಳು ತೆಗಿಸ್ಬೇಕು. ಇದರ ವೆಚ್ಚ ಲಕ್ಷಗಟ್ಟಲೆ ಆಗುತ್ತೆ. ಇನ್ನು ಪೈಪ್ ಲೈನ್ ಮಾಡಿಸ್ಬೇಕು. ಇದು ಒಮ್ಮೆ ಮಾಡಿದ್ರೆ ಮುಗಿದ್ಹೊಯ್ತಾ? ಜಿಂಕೆನೋ ಇನ್ಯಾವುದೋ ಪ್ರಾಣಿ ಆಗಾಗ ಮುರಿದು ಹಾಕುತ್ತೆ. ಅದಕ್ಕೆ ಹೊಸ ಪೈಪ್ ಹಾಕಿಸ್ತನೆ ಇರಬೇಕು. ಹಾಗಂತ ಇದೆಲ್ಲಾ ಕೆಲ್ಸನ ಮನೆಯವರೊಬ್ಬರೆ ಮಾಡ್ಕೊಳೋಕೆ ಆಗುತ್ತಾ? ಖಂಡಿತ ಇಲ್ಲ. ಅದಕ್ಕೆ ಕೆಲಸದವರೂ ಬೇಕಾಗ್ತಾರೆ. ಅವರ ಸಂಬಳ ಕಡಿಮೆ ಏನಿಲ್ಲ. ಹಾಗಾಗಿ ಹಳ್ಳೀಲಿ ನೀರು ಖಂಡಿತ ಫ್ರೀ ಅಲ್ಲ. ಜೊತೆಗೆ ಮೋಟರ್ ನ ಕರೆಂಟ್ ಬಿಲ್ ಪೇಟೆಯವರಿಗೆ ಬರುವಂತೆ ಹಳ್ಳಿಯವರಿಗೂ ಬರುತ್ತೆ.

ಈಗ ಹಾಲಿನ ವಿಚಾರಕ್ಕೆ ಬರಣ. ದನನ ಕೊಟ್ಟಿಗೆಲಿ ಕಟ್ಟಿ ಇಟ್ರೆ ಹಾಲೇನು ದುಸುದುಸು ಅಂತ ಇಳಿಸಿ ಬಿಡುತ್ತಾ? ಅದಕ್ಕೆ ಹಿಂಡಿ ತರಬೇಕು. ಸದ್ಯ ಒಂದ್ ಹಿಂಡಿ ಚೀಲದ ರೇಟು 1250 ರುಪಾಯಿ. ಒಂದ್ ಹಿಂಡಿ ಚೀಲ ಒಂದ್ ದನಕ್ಕೆ ಒಂದ್ ತಿಂಗಳೂ ಬರಲ್ಲ. ಇನ್ನು ಬರೀ ಹಿಂಡಿ ಹಾಕ್ಬಿಟ್ರೆ ದನ ಹಾಲು ಕೊಡುತ್ತಾ? ಅದಕ್ಕೆ ಹುಲ್ಲು ತರಿಸ್ಬೇಕು. ದಿನಾ‌ ಹಸಿ ಹುಲ್ಲೆ ಹಾಕ್ಬೇಕು ಅಂದ್ರೆ ಒಂದೋ ಮೇಯಿಸ್ಬೇಕು, ಇಲ್ಲ ಹೊರೆ ಹೊತ್ಕೊಂಡು ತಂದು ಹಾಕ್ಬೇಕು. ಮಳೆಗಾಲದಲ್ಲೆಲ್ಲಾ ಬಿಟ್ಟು ಮೇಯಿಸೋಕೆ ಆಗಲ್ಲ. ಕೃಷ್ಣ ಪರಮಾತ್ಮ ಮೂರು ಹಗಲು ಮೂರು ರಾತ್ರಿ ಮೇಯಿಸಿದ್ರೂ ದನದ ಹೊಟ್ಟೆ ತುಂಬಿರಲಿಲ್ಲ ಅಂತೆ. ಹಾಗಾಗಿ ಒಂದು ದನದ ಹೊಟ್ಟೆ ತುಂಬಿಸೋದು ಅಷ್ಟು ಸುಲಭದ ಮಾತಲ್ಲ. ಬಿಳಿಹುಲ್ಲಿನ ವ್ಯವಸ್ಥೆ ಆಗ್ಬೇಕು. ಅದರ ರೇಟೋ ಗಗನಮುಖಿ. ಅಂದ್ರೆ ಒಂದ್ ಲೀಟರ್ ಪ್ಯಾಕೆಟ್ ಹಾಲಿಗಿಂತ ಹೆಚ್ಚು ವೆಚ್ಚ, ಶ್ರಮ ಈ ಸಾಕುವಿಕೆಯಲ್ಲಿರುತ್ತೆ.

 ಹಿರಿಯರು ಕಟ್ಟಿಸಿದ ಮನೆ ಇಂದಿಗೂ ಸುಂದರವಾಗಿರೋಕೆ ಇನ್ನೇನು ಕಾರಣ...

ಹಿರಿಯರು ಕಟ್ಟಿಸಿದ ಮನೆ ಇಂದಿಗೂ ಸುಂದರವಾಗಿರೋಕೆ ಇನ್ನೇನು ಕಾರಣ...

ಇನ್ನೂ ಒಂದ್ ಡೈಲಾಗ್ ಪೇಟೆಯವರು ಹೇಳೋದುಂಟು. ಹಳ್ಳಿಯವರಿಗೇನು ಬಾಡಿಗೆ ಕಟ್ಬೇಕಾ ಅಂತ. ಬಾಡಿಗೆ ಕಟ್ಟೋದು ಬ್ಯಾಡ ಸ್ವಾಮಿ, ಆದರೆ ನಿಮ್ ತರಹ ಕೊನೆಗೆ ಐದು ವರ್ಷಕ್ಕೆ ಒಂದ್ ಸಲನೂ ಮನೆಗೆ ಪೇಯಿಂಟ್ ಮಾಡಿಸೋಕೆ ಆಗಲ್ಲ ಗೊತ್ತಾ?. ಒರಲೆ ಕಾಟ, ಜಿರಲೆ ಕಾಟ, ಇತ್ಯಾದಿ ಹುಳಗಳ ಕಾಟದಿಂದಾಗಿ ಕೊಟ್ಟಿಗೆ ರಿಪೇರಿ, ಮಾಳಿಗೆ ರಿಪೇರಿ, ಉಪ್ಪರಿಗೆ ರಿಪೇರಿ ಅಂತ ಹಳೆ ಮನೆಯ ರಿಪೇರಿಗಳೇ ನಿಮ್ಮ ಬಾಡಿಗೆಯನ್ನು ಮೀರಿಸುತ್ತೆ. ಪ್ಯಾಟೆಲಿ ಇರೋ ನೀವು ಹಳ್ಳಿಗೆ ಬಂದಾಗ ಹಿರಿಯರು ಕಟ್ಟಿಸಿದ ಮನೆ ಇವತ್ತೂ ಅಷ್ಟೇ ಸುಂದರವಾಗಿ ಕಾಣ್ತಿದೆ ಅಂದ್ರೆ ಅದರ ಹಿಂದೆ ಅಗಾಧವಾದ ದೊಡ್ಡ ಪರಿಶ್ರಮ ಇರುತ್ತೆ.

ಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿಮದುವೆ ಆಗೋ ತನಕ ಮಗ ಸಿಟಿಲಿ ಇರಲಿ, ಆಮೇಲೆ ಮನೆಗೆ ಬರಲಿ

ನೀವ್ ಮಾಡದೇ ಇರೋ ಅಷ್ಟು ದೇವರ ಕಾರ್ಯ ಎಲ್ಲರ ಮನೆಲೂ ನಡೆಯುತ್ತೆ. ಅದಕ್ಕಾಗೋ ಖರ್ಚು ದೊಡ್ಡದೆ ಆದ್ರೂ ಯಾವ ಹಳ್ಳಿಗನೂ ಅದನ್ನ ಖರ್ಚು ಅಂತ ಭಾವಿಸೋದೆ ಇಲ್ಲ. ತಿಥಿ, ನಾಗ ದೇವರ ಕೆಲಸಗಳು, ದೈವದ ಪೂಜೆಗಳು, ಇತ್ಯಾದಿ ವಂಶಪಾರಂಪರ್ಯವಾಗಿ ನಡೆದು ಬಂದ ಕಾರ್ಯಗಳಿಗೆ ಸಮಯ, ಹಣ ಎರಡೂ ಇಡಲೇಬೆಕು. ವರ್ಷದ ವರಾಡಕ್ಕೆ ಒಂದಷ್ಟು ಹಣ ಮೀಸಲಿಡಬೇಕಾಗುತ್ತದೆ. ಇದು ನಿಮ್ಮ ಶಾಪಿಂಗ್ ನಂತೆ ಸ್ವಾರ್ಥಕ್ಕಾಗಿ ಮಾಡುವ ಕೆಲಸಗಳಲ್ಲ. ಇಡೀ ಕುಟುಂಬ ವ್ಯವಸ್ಥೆಯ ಕಲ್ಯಾಣಕ್ಕಾಗಿ ಮಾಡುತ್ತಿರುವ ಕೆಲಸಗಳು.

 ಕೃಷಿಯನ್ನು ವೃತ್ತಿ ಮಾಡಿಕೊಂಡವರಿಗೆ ಸವಲತ್ತು ಬೇಡವೇ?

ಕೃಷಿಯನ್ನು ವೃತ್ತಿ ಮಾಡಿಕೊಂಡವರಿಗೆ ಸವಲತ್ತು ಬೇಡವೇ?

ಅಪ್ಪ ಕಲಿಸಿದ ವಿದ್ಯೆಯಿಂದ ನೀವು ಯಾವುದೋ ಕಂಪೆನಿಯಲ್ಲಿ ಯಾವನನ್ನೋ ಉದ್ಧಾರ ಮಾಡೋಕೆ ದುಡಿದದ್ದು ನಿಮ್ಮ ಪರಿಶ್ರಮ. ಆದರೆ ನಿಮ್ಮವರೇ ನಿಮ್ಮ ಅಪ್ಪ‌ನ ಆಸ್ತಿಯಲ್ಲಿ ದುಡಿದದ್ದು ಯಾಕೆ ಪರಿಶ್ರಮ ಅನ್ನಿಸೋದೆ ಇಲ್ಲ. ತೋಟದಲ್ಲಿ ಕೆಲಸ ಮಾಡುವವರಿಗೂ ಸಂಬಳ, ಇನ್ಕ್ರಿಮೆಂಟ್, ಪೆನ್ಶನ್ ಬೇಡವೇ? ಹಾಗಾದ್ರೆ ಕೃಷಿಯನ್ನು ವೃತ್ತಿ ಮಾಡಿಕೊಂಡವರಿಗೆ ಇದ್ಯಾವ ಸವಲತ್ತೂ ಬೇಡವೇ?

ಪೇಟೆಯಲ್ಲಿ ದುಡಿದದ್ದನ್ನು ಅಪ್ಪ‌ನ ತೋಟಕ್ಕೆ ಅಂತ ಯಾರು ತಂದು ಕೊಡ್ತೀರಿ ಹೇಳಿ? I think ಒಬ್ಬರೂ ಇಲ್ಲ. ಹಳ್ಳಿ ಜೀವನ ಅದ್ಯಾಕೆ ಪೇಟೆಯವರಿಗೆ ಸುಲಭದ ಜೀವನ ಅನ್ನಿಸುತ್ತದೋ ಗೊತ್ತಿಲ್ಲ. ಒಂದ್ ದಿನ ಕೆಲಸಕ್ಕೆ ಹೋಗದೆ ಇದ್ರೆ ಸಂಬಳ ಸಿಗಲ್ಲ ಅಂತ ಹೇಳೋ ಪೇಟೆ ಮಂದಿಗೆ ಹಳ್ಳಿಯಲ್ಲೂ ಗಾಳಿ ಮಳೆಗೆ ಬಿದ್ದು ಹೋಗೋ ಮರಕ್ಕೆ ಬದಲಾಗಿ ಪ್ರತಿವರ್ಷ ಗಿಡ ನೆಟ್ರೆ ಮಾತ್ರವೇ ಮುಂದಿನ ವರ್ಷಗಳಲ್ಲಿ ಮರಗಳು ತೋಟದಲ್ಲಿ ಕಾಣುತ್ತೆ, ಫಸಲು ಕೊಡುತ್ತೆ ಅನ್ನೋ ಲಾಜಿಕ್ ಯಾಕೆ ಅರ್ಥ ಆಗಲ್ಲ. ಔಷಧಿ ಹೊಡೆಸದೆ ಇದ್ರೆ, ಪ್ರತಿ ದಿನ ಬಿದ್ದ ಅಡಿಕೆ ಆರಿಸಿ ತರದೇ ಇದ್ರೆ, ಕಳೆ ಕೀಳದೆ ಇದ್ರೆ, ಗೊಬ್ಬರ ಹಾಕದೆ ಇದ್ರೆ, ಬುಡ ಬಿಡಿಸದೆ ಇದ್ರೆ, ನೀರು ಹಾಯಿಸದೆ ಇದ್ರೆ, ಕೈಕಟ್ಟಿ ಕೂತ್ರೆ ವರ್ಷದ ಫಸಲೇ ಸಿಕ್ಕಲ್ಲ ಅಂತ ಯಾಕೆ ಅನ್ನಿಸೋದೇ ಇಲ್ಲ. ಮೇಲೆ ಹೇಳಿದ ಎಲ್ಲಾ ಕೆಲಸವನ್ನು ಮಾಡಿಸೋಕೆ ಎಷ್ಟು ಖರ್ಚು ಬರುತ್ತದೆ ಗೊತ್ತಾ?

 ಹಳ್ಳಿಯ ಕಠಿಣ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವವರಾರು...

ಹಳ್ಳಿಯ ಕಠಿಣ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವವರಾರು...

ತೆಂಗಿಗೆ ಮಂಗಗಳ ಹಾವಳಿ, ಅಡಿಕೆಗೆ ಕೊಳೆಯ ಹಾವಳಿ, ಹೀಗೆ ಪ್ರತಿ ಬೆಳೆಗೂ ಪಟ್ಟಿ ಮಾಡೋಕೆ ಆಗದಷ್ಟು ಸಮಸ್ಯೆಗಳಿವೆ. ಅಂತದರ ನಡುವೆಯೂ ಹಳ್ಳಿಯಲ್ಲಿ ನಿಮ್ಮವರೊಬ್ಬರು ಬದುಕುತ್ತಿರುವುದು ಅದೆಷ್ಟು ಕಠಿಣ ಪರಿಸ್ಥಿತಿ ಎಂಬುದನ್ನು ಅರ್ಥೈಸಿಕೊಳ್ಳುವವರು ಯಾರು?

ಮಾರುಕಟ್ಟೆಯ ಏರಿಳಿತದ ಸಮಸ್ಯೆ ಬೇರೆ. ಪೇಪರ್ ನಲ್ಲಿ ಬರೋ ಅತೀ ಹೆಚ್ಚು ಬೆಲೆಗೆ ಮಾರಾಟ ಮಾಡಲು ಯಾವ ರೈತನಿಗೆ ಸಾಧ್ಯವಾದೀತು ಹೇಳಿ. ಇವತ್ತು ಒಂದ್ ಕ್ವಿಂಟಾಲ್ ಅಡಿಕೆಗೆ 35,000 ರೇಟ್ ಇದ್ರೆ ವರ್ಷದ ಎಲ್ಲಾ ಅಡಿಕೆನು ಇವತ್ತೇ ಹೋಗಿ ಮಾರುಕಟ್ಟೆಗೆ ಹಾಕೋಕೆ ಯಾವ ರೈತನಿಗೆ ಸಾಧ್ಯವಾಗುತ್ತೆ. ಯಾರಿಗೂ ಇಲ್ಲ. ಒಮ್ಮೊಮ್ಮೆ ಅಡಿಕೆ ಇದ್ದರೂ ಅದನ್ನು ಸುಲಿಸಿ ರೆಡಿ ಮಾಡುವಾಗ ರೇಟ್ ಇಳಿದಿರುತ್ತದೆ. ಸುಲಿಸೋದಕ್ಕೇನು ದುಡ್ಡು ಕೊಡಬೇಡವೇ ಹೇಳಿ? ಅದಕ್ಕೆಲ್ಲಾ ಮಷೀನ್ ಬಂದಿದ್ಯಲ್ಲ ಅಂತ ಹೇಳೋರು ಇದಾರೆ. ಮಷೀನ್ ಏನ್ ಫ್ರೀ ಆಗಿ ಸಿಗುತ್ತಾ?

ಒಂದೊಂದು ಮಷೀನ್ ಬೆಲೆ ಕೇಳಿದ್ರೆ ವರ್ಷದ ಅರ್ಧ ಉತ್ಪತ್ತಿಯನ್ನೇ ಇಡಬೇಕು. ಹೌದಪ್ಪಾ ಅದಕ್ಕೂ ಸಬ್ಸಿಡಿ ಸಿಗುತ್ತೆ ಅಂತ ಹೇಳೋ ಪ್ಯಾಟೆ ಮಂದಿ ಇದಾರೆ. ಸಬ್ಸಿಡಿ ತಗೊಳೋಕೆ ಅದೆಷ್ಟು ಸಲ ಸರ್ಕಾರಿ ಕಚೇರಿ ಅಲೀಬೇಕು ಹೇಳಿ. ಎಷ್ಟೆಲ್ಲಾ ಡಾಕ್ಯುಮೆಂಟ್ ಕೊಡ್ಬೇಕು, ಅವೆಲ್ಲಾ ಡಾಕ್ಯುಮೆಂಟ್ ಸರಿ ಇರಬೇಕು. ಹೀಗೆ ಅಲಿಯೋಕೆ ಹೋದಾಗೆಲ್ಲಾ ಮನೆ ಕಡೆ ಕೆಲಸಗಳು ಹಾಳು ಬೀಳೋದಿಲ್ವೆ. ಹಾಗೆ ಅಲಿಯೋಕೆ ಖರ್ಚೇನು ಕಡಿಮೆ ಬೀಳುತ್ತಾ? ಹಾಳಾಗಿ ಹೋಗ್ಲಿ ಸಬ್ಸಿಡಿ. ಮನೆ ಕಡೆ ನೋಡ್ಕೊಂಡ್ ಇದ್ರೆ ಸಾಕು ಅನ್ನಿಸಿ ಬಿಡುತ್ತೆ. ಅಷ್ಟೇ ಅಲ್ಲ. ಮಷೀನ್ ಸಿಕ್ರೂ ಅದರ ಮೈಂಟೇನೆನ್ಸ್‌ಗೆ ಬರೋ ಖರ್ಚೇನು ಸಾಮಾನ್ಯವೇ?

ದೊಡ್ಡ ಮಷೀನ್ ಗಳ ಕಥೆ ಬೇಡ. ಸಣ್ಣಪುಟ್ಟ ವಸ್ತುಗಳದ್ದೇ ತೆಗೆದುಕೊಳ್ಳೋಣ. ಕತ್ತಿ, ಪಿಕಾಸಿ, ಹಾರೆ, ಬುಟ್ಟಿ, ಹೆಡಗೆ ಹೀಗೆ ಬೇಕಾಗೋ ಇತ್ಯಾದಿಗಳ ಖರೀದಿ, ರಿಪೇರಿಗೆ ಎಷ್ಟು ದುಡ್ಡು ಬೇಕಾಗುತ್ತೆ ಗೊತ್ತಾ? ಇದೆಲ್ಲಾ ನೋಡುಗರ, ಅಂದರೆ ಪ್ಯಾಟೆ ಮಂದಿಗೆ ಕಾಂಜಿಪೀಂಜಿ. ಇವೆಲ್ಲದರ ಬೆಲೆ ವರ್ಷಂಪ್ರತಿ 30% ದಷ್ಟು ಹೆಚ್ಚುತ್ತಲೇ ಸಾಗುತ್ತದೆ. ಜೊತೆಗೆ ಕೂಲಿ ಕಾರ್ಮಿಕರ ಸಂಬಳ, ತುತ್ತ-ಸುಣ್ಣ, ರಾಳ, ಇತರೆ ತೋಟಕ್ಕೆ ಬೇಕಾಗೋ ಕೀಟನಾಶಕ, ಕಳೆನಾಶಕದ ಬೆಲೆ ಕೂಡ ಪ್ರತಿ ವರ್ಷ ಏರುತ್ತಲೇ ಇರುತ್ತದೆ.

 ಹಳ್ಳಿಯವರ ಶ್ರಮ ನಗರದಲ್ಲಿರುವವರಿಗೆ ಹೇಗೆ ಅರ್ಥ ಆಗುತ್ತೆ

ಹಳ್ಳಿಯವರ ಶ್ರಮ ನಗರದಲ್ಲಿರುವವರಿಗೆ ಹೇಗೆ ಅರ್ಥ ಆಗುತ್ತೆ

ಹಳ್ಳಿಯವರಿಗೆ ತರಕಾರಿ ಏನ್ ದುಡ್ಡು ಕೊಟ್ಟು ತರಬೇಕಾ? ಅಂತ ಮೂಗು ಮುರಿಯುವವರಿಗೆ ಹೇಳ್ತೀವಿ ಕೇಳಿ. ಬೇಡ ಸ್ವಾಮಿ ಬೆಳ್ಕೊಂಡ್ರೆ ಸಿಗುತ್ತೆ ನಿಜ. ಆದರೆ ತರಕಾರಿ ತನ್ನಷ್ಟಕ್ಕೇ ತಾನೇ ಬೆಳೆಯೋದಿಲ್ಲ. ಅದಕ್ಕೆ ಬೀಜ ಬಿತ್ತನೆ ಮಾಡ್ಬೇಕು, ಗೊಬ್ಬರ ಹಾಕ್ಬೇಕು, ಚಪ್ಪರ ಮಾಡ್ಬೇಕು, ಹುಳ ಬಿದ್ರೆ ಕಾಳಜಿ ಮಾಡ್ಬೇಕು, ಮರದಲ್ಲಿರೋ ದಿವಿ ಹಲಸಿನ ಕಾಯಿ ಉಳಿಸಿಕೊಳ್ಳೋಕೆ ಎಷ್ಟು ಸಲ ಮಂಗನ್ನ ಓಡಿಸ್ಬೇಕು ಅಂತ ಪೇಟೆಲಿರೋರಿಗೆ ಹೇಗೆ ಅರ್ಥ ಆಗುತ್ತೆ ಹೇಳಿ.

ಮಳೆಗಾಲದಲ್ಲಿ ಕೆಸಿನ ಸೊಪ್ಪು ತನ್ನಷ್ಟಕ್ಕೆ ಹುಟ್ಕಳತ್ತೆ. ಅದಕ್ಕೇನೂ ಮಾಡೋದು ಬೇಡ. ಹಾಗಂತ ಇಡೀ ಮಳೆಗಾಲ ಪೂರ್ತಿ ಕೆಸವಿನ ಸೊಪ್ಪು ಮಾತ್ರ ತಿನ್ಕಂಡ್ ಇರಕ್ಕೆ ಆಗುತ್ತಾ?

ಮಾವಿನ ಹಣ್ಣು ಕೆ.ಜಿ.ಗೆ 100 ರುಪಾಯಿ ನಾವ್ ಮಾರೋಕೆ ಹೋದ್ರೆ ಒಂದ್ ಹಣ್ಣಿಗೆ ಒಂದ್ ರುಪಾಯಿ. ಹಾಗಾಗಿ ಅದನ್ನು ಕೊಯ್ಸೋದು ಬೇಡ, ಮಾರೋದು ಬೇಡ ಅನ್ನಿಸುತ್ತೆ. ಹಲಸಿನಕಾಯಿ ಮಾರಾಟ ಮಾಡ್ಬಹುದು. ಬೆಂಗಳೂರಲ್ಲಿ ಅದರ ರೇಟ್ ಎಷ್ಟು ಗೊತ್ತಾ? ಹೌದು ಸ್ವಾಮಿ ಬೆಂಗಳೂರಲ್ಲಿ ಬೆಲೆ ಜಾಸ್ತಿನೆ. ಹಾಗಂತ ಉಪ ಫಸಲಾಗಿರೋ ಅದನ್ನು ಅಂದರೆ 20, 25 ಹಲಸಿನಕಾಯಿನ 500 ಕಿಲೋಮೀಟರ್ ದೂರದಲ್ಲಿರೋ ಬೆಂಗಳೂರಿಗೆ ತಗೊಂಡ್ ಹೋಗಿ ಮಾರಾಟ ಮಾಡೋಕೆ ಆಗುತ್ತಾ?

 ನಿಮಗೆ ಇಲ್ಲಿನ ಜೀವನ ಅರ್ಥ ಆಗಲ್ಲ, ಏಕೆಂದರೆ ನೀವು ಇದನ್ನು ಅನುಭವಿಸಿಲ್ಲ...

ನಿಮಗೆ ಇಲ್ಲಿನ ಜೀವನ ಅರ್ಥ ಆಗಲ್ಲ, ಏಕೆಂದರೆ ನೀವು ಇದನ್ನು ಅನುಭವಿಸಿಲ್ಲ...

ಇಲ್ಲೆ ಹತ್ತಿರದ ಮಾರುಕಟ್ಟೆಗೆ ಹಾಕೋಕೆ ಹೋದ್ರೆ ಒಂದ್ ಇಡೀ ಹಲಸಿನ ಕಾಯಿನ 10 ರುಪಾಯಿಗೂ ಖರೀದಿ ಮಾಡಲ್ಲ. ಹೀಗೆ ತೋಟದಲ್ಲಿರೋ ಎಲ್ಲಾ ಉಪಫಸಲೂ ಕೂಡ ಪ್ರಯೋಜನವಿಲ್ಲದಂತೆಯೇ ಆಗಿದೆ. ಆದರೂ ರೈತನಾದವ ಯಾವುದೇ ನಿರೀಕ್ಷೆ, ಆಸೆ ಇಲ್ಲದೆ ಹಳ್ಳಿಗೆ ಬರೋ ಪೇಟೆ ಮಂದಿನ ಖುಷಿಯಾಗಿ ನೋಡ್ಕೊತಾರೆ. ಮಾಡಿರೋ 100 ಹಪ್ಪಳದಲ್ಲಿ 50 ಹಪ್ಪಳ ನಿಮ್ಗೆ ಕೊಟ್ಟು ಕಳಿಸ್ತಾರೆ. ಹಲಸಿನಕಾಯಿ ಹಪ್ಪಳ ಮಾಡಿ ಮಾರಾಟ ಮಾಡಿ ಅಂತ ಹಪ್ಪಳ ನೋಡಿದಾಗ ಸಲಹೆ ಕೊಡೋ ನೀವು ನಿಮ್ಗೆ ಕೊಟ್ಟ 50 ಹಪ್ಪಳಕ್ಕೆ ದುಡ್ಡು ಕೊಟ್ಟು ಹೋಗಲ್ಲ ಅನ್ನೋದು ದುರಂತ!

ಅಪರೂಪಕ್ಕೊಮ್ಮೆ ಅಪ್ಪನ ಆಸ್ತಿ ಮನೆ ಹತ್ತಿರ ಬರೋ ನಿಮಗೆ ನೀವಿರೋ ಜಾಗದಿಂದ ಇಲ್ಲಿಗೆ ಬರೋಕೆ ಬಸ್ ಚಾರ್ಜ್ ಎಷ್ಟು ಖರ್ಚಾಯ್ತು ಅನ್ನೋ ಲೆಕ್ಕ ಸಿಗುತ್ತೆ. ಆದರೆ ಇಲ್ಲಿನ ಜೀವನ ವ್ಯವಸ್ಥೆಯ ಲೆಕ್ಕ ಮಾತ್ರ ಸರಿಯಾಗಿ ಸಿಗೋದಿಲ್ಲ ಯಾಕೆ ಗೊತ್ತಾ? ಇಲ್ಲಿನ ಜೀವನ ವ್ಯವಸ್ಥೆಯನ್ನು ನೀವು ಅನುಭವಿಸಿಲ್ಲ. ಬರೀ ಮೂರನೆಯವರ ಬಾಯಲ್ಲಿ ಕೇಳಿದ್ದೀರಿ ಅಷ್ಟೇ!

ಹೀಗೆ ಬರೀತಾ ಹೋದ್ರೆ ಇನ್ನೊಂದು 20 ಪುಟಗಳಷ್ಟು ಕಥೆಗಳಿವೆ. ಅರ್ಥ ಮಾಡ್ಕೊಳ್ಳೋರಿಗೆ ಇಷ್ಟು ಸಾಕಲ್ಲವೆ? ಹಳ್ಳಿ ಜೀವನ ಸುಲಭವಲ್ಲ. ಹಳ್ಳಿ ಬದುಕು ಬಹಳ ಕಷ್ಟ ಅನ್ನೋದು ಗೊತ್ತಾಗೋಕೆ? ನಿಮ್ಮ ಅಭಿಪ್ರಾಯ ಮರೆಯದೆ ತಿಳಿಸಿ.

English summary
Village life is very easy in the eyes of city people. But they didnt notice the difficulties and efforts of village people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X