• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷರಸ್ಥ, ವೈಜ್ಞಾನಿಕ ಪೀಳಿಗೆಗಳಿಂದ 'ಬೀದಿಗೆ ಬಂದ ಭಗವಂತ'

By ಮದನ್ ಕುಮಾರ್.ಕೆ
|

ನಾನಾ ದೇವತೆಗಳನ್ನು ಆರಾಧಿಸಿ ಪೂಜಿಸಿದಂಥ ಧರ್ಮ ನಮ್ಮದು. ಅಣು ಅಣುವಿನಲ್ಲೂ ದೇವತೆಗಳನ್ನು ಕಂಡು ಪೂಜಿಸುವ ಯೋಗ್ಯತೆ ನಮ್ಮ ಪೂರ್ವಜರಿಗಿತ್ತು. ಪ್ರಾಣಿಗಳಲ್ಲಿ ದೇವರನ್ನು ಕಂಡರು, ಗಿಡ ಮರಗಳಲ್ಲಿ ದೇವತೆಗಳನ್ನು ಕಂಡರು, ಜಲ, ಅಗ್ನಿ, ಈ ಭೂಮಿಯನ್ನೇ ದೇವರೆಂದು ಪೂಜಿಸಿದರು. ಕಣ್ಣಿಗೆ ಕಾಣದ ದೇವರನ್ನು - ಕಲ್ಲು- ಬಂಡೆಗಳಲ್ಲಿ ಕೆತ್ತಿ ಶಿಲೆಯಾಗಿಸಿ, ದೇವಾಲಯದಲ್ಲಿ ಸ್ಥಾಪಿಸಿ, ಫಲ ಪುಷ್ಪಾದಿ ನೈವೇದ್ಯ ಸಮರ್ಪಿಸಿ, ಆರತಿ ಎತ್ತಿ ತಮ್ಮನ್ನು ತಾವೇ ಅರ್ಪಿಸಿದರು.

ತ್ರಿಮೂರ್ತಿಗಳ ಕಾರ್ಯ, ವಿಷ್ಣುವಿನ ದಶಾವತಾರದ ಪ್ರಸಂಗ, ರಾಮನ ಕಾರುಣ್ಯ, ಕೃಷ್ಣನ ವಿಶ್ವರೂಪ, ವೀಣಾಪಾಣಿ ಸರಸ್ವತಿ, ಕಮಲೋದ್ಭವೆ ಲಕ್ಷ್ಮಿ ಇನ್ನೂ ಹತ್ತು ಹಲವು ದೇವತೆಗಳ ವರ್ಣನೆಗಳು ಮನೆ, ಅರಮನೆ, ದೇಗುಲಗಳ ಗೋಡೆಯಮೇಲೆ ಚಿತ್ರ ರೂಪದಲ್ಲಿ ತಿಳಿಯದವರೂ ತಿಳಿದುಕೊಳ್ಳಲಿ, ನಮ್ಮ ಇತಿಹಾಸದ ಕಥೆಗಳನ್ನು ಲೋಕಕ್ಕೆ ಸಾರುವ ಸದುದ್ದೇಶದಿಂದ ಚಿತ್ರಿಸಲಾಗುತ್ತಿತ್ತು. ಕಾಣದೆ, ಬರೀ ಕೇಳರಿತ ದೇವರಲ್ಲಿ, ಅಂದು ಜನರಿಗೆ ಏನೋ ಒಂದು ರೀತಿಯ ಗೌರವ, ಭಯ, ಭಕ್ತಿ, ಸೆಳೆತ, ನಂಬಿಕೆ.

ಗುಡ್ಡದಮಲ್ಲಾಪುರ ಮೂಕಪ್ಪ ಮಹಾ ಸ್ವಾಮಿಗಳ ಪವಾಡವನ್ನು ಬಲ್ಲಿರಾ?

ಹಿಂದೆಲ್ಲಾ, ಮಾಡುವ ಪ್ರತೀ ಕೆಲಸದ ಮುನ್ನ ದೇವರನ್ನು ಜಪಿಸುತ್ತಿದ್ದರು. ಮಾಡಿ ಮುಗಿಸಿದ ಪ್ರತೀ ಕಾರ್ಯದ ಬಳಿಕ ಅವನನ್ನು ನೆನೆಯುತ್ತಿದ್ದರು. ಆಚರಣೆಗಳ ಮಹತ್ವ ತಿಳಿದಿದ್ದರು. ಹಬ್ಬಗಳು ಸುಸಂಪನ್ನವಾಗಿ ನಡೆಯುತ್ತಿದ್ದವು. ಕಾಲ ಬದಲಾದಂತೆ, ವಿಜ್ಞಾನ ಮುಂದುವರಿದಂತೆ, ತಂತ್ರಜ್ಞಾನ ಹೆಚ್ಚಿದಂತೆ ನಮ್ಮ ಬದುಕು ತಾಂತ್ರಿಕವಾಗುತ್ತಿದೆ.

ತಾಂತ್ರಿಕ ಜಗತ್ತಿನಲ್ಲಿ ಮುನ್ನಡೆಯುತ್ತ ಎಲ್ಲೋ ಏಕೋ ನಾವು ಎಡವಿದಂತೆ ಭಾಸವಾಗುತ್ತದೆ. ಆಧ್ಯಾತ್ಮಿಕ, ಧಾರ್ಮಿಕ, ದೇವರೊಂದಿಗಿನ ನಮ್ಮ ನಂಬಿಕೆ, ವಿಶ್ವಾಸ, ಸಂಬಂಧ, ಬೆಸುಗೆ ಕ್ಷೀಣಿಸುತ್ತಿದೆ. ಆಚರಣೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಕೇವಲ ಸಾಂಪ್ರದಾಯಿಕವಾಗುತ್ತಿವೆ. ಹಬ್ಬ ಹರಿದಿನಗಳು ತಮ್ಮ ವಿಶೇಷತೆಯನ್ನು ಕಳೆದುಕೊಳ್ಳುತ್ತಿವೆ.

ಗತ ಕಾಲದ ಚರಿತ್ರೆಯಲ್ಲ. ದಶಕದ ಹಿಂದಿನ ಮಾತು. ನಮ್ಮೂರಿನಲ್ಲಿ ನಡೆಯುತ್ತಿದ್ದ ವಾರ್ಷಿಕ ಗಣೇಶೋತ್ಸವಕ್ಕೂ ಇಂದು ಬೆಂಗಳೂರಿನಂಥ ಮಹಾನಗರಿಯಲ್ಲಿ ನಡೆಯುತ್ತಿರುವ ಆಚರಣೆಗೂ ಅಜಗಜಾಂತರ. ಅಂದು ಊರಿಗೊಂದು ಗಣೇಶ. ಊರಿನವರಿಗೆಲ್ಲ ಒಂದು ವಾರದ ಸಂಭ್ರಮಾಚರಣೆ. ಸೂರ್ಯನ ಪ್ರಪ್ರಥಮ ಕಿರಣ ಬೀಳುತ್ತಿದ್ದಂತೆ ಶುರುವಾಗುತ್ತಿದ್ದ ದೇವರ ನಾಮ, ಶ್ಲೋಕ ಮುಂತಾದ ಭಕ್ತಿ ಗೀತೆಗಳು ಸೂರ್ಯಾಸ್ತಮಾನದವರೆಗೂ ಕೇಳಿಬರುತ್ತಿತ್ತು.

ಒಡಿಶಾದ ಮಹಾನದಿಯೊಳಗೆ ಮುಳುಗಿ ಹೋಗಿದ್ದ 500 ವರ್ಷ ಹಳೆಯ ದೇವಸ್ಥಾನ ಪತ್ತೆ

ಸಜ್ಜಾದ ರಂಗಮಂಚ ವಿವಿಧ ಸಾಂಸೃತಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿರುತ್ತಿತ್ತು. ಭಕ್ತಿ ಗೀತೆ, ಗಣೇಶನ ಚಿತ್ರ ಬಿಡಿಸುವ, ಭಾಷಣ, ರಾಮಾಯಣ - ಮಹಾಭಾರತ ಆಧಾರಿತ ರಸಪ್ರಶ್ನೆ ಹೀಗೆ ಮುಂತಾದ ಸ್ಪರ್ಧೆಗಳು ಆಯೋಜಿಸಲ್ಪಡಲಾಗುತ್ತಿತ್ತು. ಯಕ್ಷಗಾನ, ಪ್ರವಚನ ಹೀಗೆ ನಾಲ್ಕಾರು ಬಗೆಯ ಚಟುವಟಿಕೆಗಳು ಎಲ್ಲಾ ವಯಸ್ಸಿನ ಜನರನ್ನು ಅಲ್ಲಿ ಕೂಡಿಟ್ಟು ಬಂಧಿಸುತ್ತಿದ್ದವು. ನೆರೆದ ಜನರ ಮನದಲ್ಲಿ ಮೂಡುತ್ತಿದ್ದುದು ಭಕ್ತಿ ಭಾವ ಒಂದೇ.

ಆದರೆ ಇಂದು 'ಊರಿಗೊಬ್ಬ ಗಣೇಶ' ಹೋಗಿ 'ಬೀದಿಗೊಬ್ಬ ಗಣೇಶ' ನಿದ್ದಾನೆ. ಗಣೇಶನನ್ನು ಕೂರಿಸಿ, ಕೇಳಸಿಗುವುದು "ಶೀಲಾ ಕಿ ಜವಾನಿ, ಊರಿಗೊಬ್ಳೆ ಪದ್ಮಾವತಿ" ಯಂಥ ಹಾಡುಗಳು. ಆರ್ಕೆಸ್ಟ್ರದವರನ್ನು ಕರೆಯಿಸಿ ಹಾಡಿಸುವುದು ಸಿನಿಮಾ ಹಾಡುಗಳನ್ನು. ಹಾಡಿ ಹೊಗಳಿ ಗಣೇಶನನ್ನು ಆಹ್ವಾನಿಸುವ ಬದಲು, "ಬಸಣ್ಣಿ ಬಾ, ಬಸಣ್ಣಿ ಬಾ" ಹಾಡಿಗೆ ಜನರು "ಸೀಟಿ ಹೊಡೆದು, ಚಪ್ಪಾಳೆ ತಟ್ಟಿ, ಒನ್ಸ್ ಮೋರ್ (once more)" ಎಂದು ಮುಗಿಬೀಳುತ್ತಾರೆ.

ಭರತನಾಟ್ಯದಂತಹ ಕಲೆಗೆ ಬೆಲೆ ಕೊಟ್ಟು ಪ್ರೋತ್ಸಾಹಿಸುವ ಬದಲು, ವೇದಿಕೆಗೆ ಅನುಚಿತವಾದ, ಸಂದರ್ಭಕ್ಕೆ ಅರ್ಥಗರ್ಭಿತವಲ್ಲದ, ಶೋಭೆ ತಾರದ ಹಾಡಿಗೆ/ ನೃತ್ಯಕ್ಕೆ ಜನರು ಮರುಳಾಗುತ್ತಾರೆ. ಇಂಥಾ ಮರುಳಿಗೆ ಗಣೇಶನೇಕೆ ಸಾಕ್ಷಿಯಾಗಬೇಕೋ ನಾ ಕಾಣೆ.

"ಮನೆಯೇ ಮಂತ್ರಾಲಯ ಮನವೇ ದೇವಾಲಯ". ನಮ್ಮ ಹಿರಿಯರು ಮನಸ್ಸೆಂಬ ದೇವಾಲಯದಲ್ಲಿ ತಮ್ಮ ಗ್ರಾಮ ದೇವರು, ಮನೆ ದೇವರು, ಇಷ್ಟ ದೇವರನ್ನು ಕುಳ್ಳಿರಿಸಿ, ಆರಾಧಿಸಿ ತಮ್ಮ ಆತ್ಮ ಪುಷ್ಪವನ್ನು ಭಗವಂತನಿಗೆ ಅರ್ಪಿಸಿ ಚೈತನ್ಯ ಪಡೆದುಕೊಳ್ಳುತ್ತಿದ್ದರು.

ಭಕ್ತಿಯಿಂದ, ಪೂಜೆಯಿಂದ ತಮ್ಮ ಇಷ್ಟಾರ್ಥ ಸಿದ್ದಿಸುತ್ತಿತ್ತೋ ಇಲ್ಲವೋ 'ಎಲ್ಲಾ ದೈವೇಚ್ಛೆ' ಎಂದು ತಮ್ಮ ತಮ್ಮ ಹಣೆಯ ಬರಹವನ್ನು ದೂಷಿಸುತ್ತಿದ್ದರೇ ಹೊರತು ಎಂಥಾ ಪರಿಸ್ಥಿತಿಯಲ್ಲೂ ದೇವರನ್ನು ಬೀದಿಗೆ ತಳ್ಳುತ್ತಿರಲಿಲ್ಲ. ಆದರೆ, ಇಂದು ನಾವು ದೇವರನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದೇವೆ. ಯಾರ ಸ್ಥಾನ ಎಲ್ಲಿ ಎಂಬುದನ್ನೇ ಮರೆತ್ತಿದ್ದೇವೆ.

ಎಣ್ಣೆ ಸಿಕ್ಕಿದ್ದಕ್ಕೆ ದೇವರಿಗೂ ಮದ್ಯ ಸೇವೆ ಮಾಡಿದ ಕುಡುಕ

ಇಂದಿನ ವಿದ್ಯಾವಂತ ಜನರು ತಮ್ಮ ಮನೆಯ ಕಾಂಪೌಂಡ್ ಮೇಲೆ ಅನ್ಯರು ಉಗುಳದಿರಲಿ, ಮೂತ್ರ ವಿಸರ್ಜನೆ ಮಾಡದಿರಲಿ ಎಂದು ದೇವರ ಫೋಟೋ ಇಡುತ್ತಾರೆ. ಅನ್ಯ ಧರ್ಮದ ಜನರು ಶೌಚ ಮಾಡದಿರಲೆಂದು ಅನೇಕ ಧರ್ಮದ ದೇವರ ಚಿತ್ರ ಬಳಸುತ್ತಾರೆ. ಒಟ್ಟಿನಲ್ಲಿ ದೇವರ ಬಳಕೆ ಅಸಹ್ಯ ನಿರ್ಮೂಲನಾ ಕಾರ್ಯಕ್ಕೆ ಮೀಸಲಾಗಿದೆ.

ಇನ್ನು ದೇವರ ಕೋಣೆಯಿಂದ ಹೊರ ಬಿದ್ದ ದೇವರುಗಳು, ಜನರು ಧರಿಸುವ ವಸ್ತ್ರದ ಮೇಲೆ ಕಾಣಸಿಗುತ್ತಾರೆ. ಜನರು ಮೆಟ್ಟಿ ನಡೆಯುವ ಚಪ್ಪಲಿಯೂ ಇದಕ್ಕೆ ಹೊರತಾಗಿಲ್ಲ. ಬಹುಷಃ ಇಂದಿನ ಕಾಲದ ಅಕ್ಷರಸ್ಥ, ವೈಜ್ಞಾನಿಕ ಪೀಳಿಗೆಗಿಂತ ಹಿಂದಿನ ಕಾಲದ ಅನಕ್ಷರಸ್ಥ, ಅವೈಜ್ಞಾನಿಕ ಜನರ "ದೇವರೊಂದಿಗಿನ ನಂಟು ಮತ್ತು ನಂಬಿಕೆ" ಸೂಕ್ತ ಹಾಗು ಸ್ವೀಕಾರಾರ್ಹ.

English summary
Literary Scientific Generations Not Showing Interest To Follow Tradition And God.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X