• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಕಲ ಸದ್ಗುಣಗಳ ಮೂರ್ತರೂಪ ಶ್ರೀ ಶಂಕರರನ್ನು ಸ್ಮರಿಸೋಣ

By ತೇಜಶಂಕರ ಸೋಮಯಾಜಿ, ಕಮ್ಮರಡಿ
|

ಸಾವಿರದ ಇನ್ನೂರು ವರ್ಷಗಳ ಹಿಂದೆ ಸಾವಿರದ (ಸಾವೇ ಇರದ) ದೀಪದಂತಿದ್ದ ವೇದವು ನಾಸ್ತಿಕರೆಂಬ ಬೂದಿಯಿಂದ ಮುಚ್ಚಲ್ಪಟ್ಟು ಮಂಕಾಗಿದ್ದ ಸಮಯ. ಇನ್ನೊಂದು ಕಡೆ ವಾಸ್ತವವಾದ ಆಸ್ತಿಕ ಅರ್ಥಕ್ಕೆ ವಿರುದ್ಧವಾದ ಅರ್ಥಕಲ್ಪನೆಯಿಂದ ಅದೇ ದೀಪವು ಕಾಡ್ಗಿಚ್ಚಿನಂತೆ ಸುಡುವಂತಾಗಿದ್ದ ಕಾಲ. ಪ್ರತಿಯೊಬ್ಬರೂ ಧರ್ಮ ಮತ್ತು ಜ್ಞಾನವೆಂಬ ಎರಡು ಕಣ್ಣುಗಳನ್ನು ಮುಚ್ಚಿಕೊಂಡು ಕುರುಡಾದ ಸಮಯ.

ಇಡೀ ಜಗತ್ತು ಅಂತಃಸತ್ವವೂ ಇಲ್ಲದೆ ಬಹಿರಾಧಾರವೂ ಇಲ್ಲದೇ ನರಳುತ್ತಿದ್ದ ಆ ಕಾಲ ಆಶ್ಚರ್ಯವೊಂದಕ್ಕೆ ಸಾಕ್ಷಿಯಾಯಿತು. ಅದೇ ಸಮಯದಲ್ಲಿ ಭಾರತದ ದಕ್ಷಿಣದ ತುದಿಲ್ಲೊಬ್ಬ ಬಾಲಕನು ಅಮಾವಾಸ್ಯೆಯಲ್ಲಿ‌ ಮರೆಯಾದ ಚಂದ್ರ ಚೌತಿಯಂದು ಈಶ್ವರನ ತಲೆಯಲ್ಲಿ ಮತ್ತೆ ಮೆರೆಯುವಂತೆ ತನ್ನ ಎಂಟನೆಯ ವಯಸ್ಸಿಗೆ ಆ ದೀಪವನ್ನು ಶಿರಸ್ಸಿನಲ್ಲಿ ಧರಿಸಿ ಪುನಃ ಪ್ರಜ್ವಲಿಸುವ ಅವಕಾಶವನ್ನು ನೀಡಿದ್ದಲ್ಲದೆ ನಂದಾದೀಪದಂತೆ ನಿತ್ಯತ್ವವನ್ನು ಪಡೆಯುವಂತೆ ಮಾಡಿದನು. ಜಗತ್ತಿಗೆ ವೇದಚಂದ್ರನನ್ನು ಧರಿಸಿದ (ಉದ್ಧರಿಸಿದ) ಶಂಕರನಂತೆ ಕಂಡನು.

ಚಾಂಡಾಲನಲ್ಲೂ ಈಶ್ವರನನ್ನು ಕಂಡಿದ್ದರು ಆದಿ ಶಂಕರಾಚಾರ್ಯರು!

ತನ್ನ ಹನ್ನೆರಡನೇ ವರ್ಷಕ್ಕೆ ಸಕಲ ವೇದಾಂಗಗಳನ್ನು ಶಾಸ್ತ್ರಗಳನ್ನು ಅಧ್ಯಯನ ಮಾಡಿ ಸಯುಕ್ತಿಗಳಿಂದ ವೇದವು ಮೋಕ್ಷಮಾರ್ಗದ ದೀಪವಾಗುವುದೇ ಹೊರತು ಬೆಂಕಿಯಾಗಲಾರದು ಎಂದು ಸಾಬೀತು ಪಡಿಸಿದನು. ಎಲ್ಲಕಿಂತ ಮಿಗಿಲಾಗಿ ಕಟ್ಟುಕಥೆಯ ಹರಿಕಾರರಿಂದ ವೇದವು ಆತ್ಮ ಮತ್ತು ಆತ್ಮಕ್ಕಿಂತ ಭಿನ್ನವಾದ ಪರಮಾತ್ಮನನ್ನು ಬೋಧಿಸುತ್ತದೆ ಎಂದು ಸಾರುತ್ತಿದ್ದವರಿಂದ ವೇದವನ್ನು ರಕ್ಷಿಸಿ ಆತ್ಮನೇ ಪರಮಾತ್ಮನು, ಜೀವನು ಮೋಹಾದಿ ಮಾಯೆಯಿಂದ ಕನಸಿನಂತೆ ಜಗತ್ತನ್ನು ಅನುಭವಿಸುತ್ತಿದ್ದಾನೆ ಎಂದು ವಾಸ್ತವತೆಯನ್ನು ಅರಿವಿಗೆ ಬರುವಂತೆ ಹದಿನಾರನೇ ವಯಸ್ಸಿನಲ್ಲೇ ವೇದಗಳಿಗೆ ಭಾಷ್ಯವನ್ನು ಬರೆದು ಪ್ರತಿಪಾದಿಸಿದನು.

ಆ ಬಾಲಕನಿಗೆ ಮೂವತ್ತೆರೆಡು ವಯಸ್ಸಾದಾಗ ಇಡೀ ಭಾರತವನ್ನು ಮೂರು ಬಾರಿ ಕಾಲ್ನಡಿಗೆಯಲ್ಲಿ ಸುತ್ತಿ ಧರ್ಮದ ಪುನರುತ್ಥಾನವನ್ನು ಮಾಡಿ ಸರ್ವಜ್ಞ ಪೀಠಾರೋಹಣವನ್ನು ಮಾಡಿಯಾಗಿತ್ತು. ಅವರೇ ಶ್ರೀಶಂಕರಾಚಾರ್ಯರೆಂದು ಪ್ರಸಿದ್ಧರಾದ ಮಹಾಪುರುಷರು. ವೇದ ವೇದಾಂಗ ಸನಾತನಧರ್ಮದ ರಕ್ಷಣೆಗೆ ಭಾರತದ ನಾಲ್ಕು ಮೂಲೆಯಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಅವಿಚ್ಛಿನ್ನವಾಗಿ ಆ ಪೀಠಗಳ ಮೂಲಕ ಧರ್ಮರಕ್ಷಣೆಯ ವ್ಯವಸ್ಥೆಯನ್ನು‌ ಮಾಡಿದರು. ಅದೇ ರಕ್ಷಣೆಯಲ್ಲೆ ನಾವಿಂದು ಉಸಿರಾಡುತ್ತಿರುವುದೆಂದು ಅರಿವಿಗೆ ಬರುತ್ತಿದೆಯಷ್ಟೇ. ಮೂವತ್ತಮೂರರ ಸಂಖ್ಯೆಯ ಅದೃಷ್ಟಹೀನತೆ ಯಾವ ಮಟ್ಟಿಗಿತ್ತೆಂದರೆ ಮೂವತ್ತಮೂರೆಂಬುದು ಆ ಶಂಕರರ ಶರೀರವನ್ನು ಮುಟ್ಟಲೇ ಇಲ್ಲ. ಅಂತಹ ಮಹಾಮುನಿಗಳನ್ನೇ ನಾವು...

ದೇವರಲ್ಲಿ ನಂಬಿಕೆಯಿದೆಯೆ? ಎಲ್ಲಿದ್ದಾನೆ, ಯಾವ ಸ್ವರೂಪದಲ್ಲಿದ್ದಾನೆ?

ಅಷ್ಟವರ್ಷೇ ಚತುರ್ವೇದಿ

ದ್ವಾದಶೇ ಸರ್ವಶಾಸ್ತ್ರವಿತ್

ಷೋಡಶೇ ಕೃತವಾನ್ ಭಾಷ್ಯಂ

ದ್ವಾತ್ರಿಂಶೇ ಮುನಿರಭ್ಯಗಾತ್ ಎಂಬ ಶ್ಲೋಕದಿಂದ ಆರಾಧಿಸಿ ಶ್ರೀಶಂಕರಭಗವತ್ಪಾದಾಚಾರ್ಯರೆಂದು ಆರಾಧಿಸುತ್ತೇವೆ. ಅಂಥ ಮಹಾತ್ಮರ ಜನ್ಮ ಪಡೆದ ಆ ಪುಣ್ಯದಿನ ವೈಶಾಖ ಮಾಸದ ಶುಕ್ಲ ಪಂಚಮೀ. ಈ ಸಂವತ್ಸರದಲ್ಲಿ ಆ ಶುಭ ಮುಹೂರ್ತ ಇಂದು (09-05-2019) ಬಂದಿದೆ. ಅನೇಕ ಸ್ತೋತ್ರ ಸಾಹಿತ್ಯಗಳಿಂದ ಧಾರ್ಮಿಕತೆಯ ಧಾರೆಯನ್ನು ಹರಿಸಿದ ಶಂಕರರನ್ನು ಸಾಕ್ಷಾತ್ ಪರಶಿವನ ಅವತಾರವೆಂದು ನಂಬಲೇಬೇಕು.

ಶ್ರೀಶಂಕರರು‌ ತಮ್ಮ ಸ್ತೋತ್ರಗಳಲ್ಲಿ ಹೇಳುವ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತೀ (ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ) ಎಂದು ತಾಯಿಯ ಶ್ರೇಷ್ಠತೆಗೆ, ಚಿತಾಭಸ್ಮಾಲೇಪೋ ಎಂಬಿತ್ಯಾದಿಯಾಗಿ ಶಿವನ ದಾರಿದ್ರ್ಯವೇಷವನ್ನು ಹೇಳಿ ನಂತರ ಭವಾನಿ ತ್ವತ್ಪಾಣಿಗ್ರಹಣ ಪರಿಪಾಠೀ ಫಲಮಿದಂ ಎಂದು ಪಾರ್ವತೀಪರಮೇಶ್ವರರ ದಾಂಪತ್ಯದ ಸಿರಿವಂತಿಕೆಯನ್ನು ಹೇಳುವ ಉಪಮಾವಿಶಿಷ್ಟವಾದ ಕಾವ್ಯಪ್ರೌಢಿಮೆಗೆ, ಚಾಂಡಾಲೋ ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ (ಮನೀಷಾಪಂಚಕ) ಎಂದು ಜಾತ್ಯತೀತತೆಗೆ, ಭಜಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ (ಭಜಗೋವಿಂದಸ್ತೋತ್ರ) ಎಂದು ಹರಿಯನ್ನು, ಕ್ಷಂತವ್ಯೋ ಮೇSಪರಾಧಃ ಶಿವ ಶಿವ ಭೋ ಶ್ರೀಮಹಾದೇವ ಶಂಭೋ (ಶಿವಾಪರಾಧಕ್ಷಮಾಪಣಸ್ತೋತ್ರ) ಎಂದು ಹರನನ್ನು ಭಜಿಸಿ ಹರಿಹರರಲ್ಲಿ ಅಭೇದಕ್ಕೆ, ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ (ಗಣೇಶಪಂಚರತ್ನ) ಎಂಬ ಸಾಹಿತ್ಯರಚನಾ ಪದಲಾಲಿತ್ಯಕ್ಕೆ, ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ (ಕರಾವಲಂಬನಸ್ತೋತ್ರ) ಎಂದು ಭಗವಂತನಲ್ಲಿ ದೀನನಾದ ಭಾವಕ್ಕೆ, ದೂರೀಕೃತಸೀತಾರ್ತಿಃ ಪ್ರಕಟೀಕೃತ ರಾಮವೈಭವಸ್ಫೂರ್ತಿಃ (ಹನುಮತ್‌ಪಂಚರತ್ನಮ್) ಎಂದು ಹನುಮಂತನನ್ನು ಭಜಿಸುತ್ತಾ ಒಂದೇ ವಾಕ್ಯದಲ್ಲಿ ಒಬ್ಬನ ಚರಿತ್ರೆಯನ್ನೇ ಹಾಡಿಹೊಗಳುವ ಕಲೆಗೆ, ವೇದೋನಿತ್ಯಮಧೀಯತಾಂ ತದುದಿತಂ ಕರ್ಮಸ್ವನುಷ್ಠೀಯತಾಂ (ಉಪದೇಶಪಂಚಕ) ಎಂಬ ಧರ್ಮಮಾರ್ಗದ ಉಪದೇಶಕ್ಕೆ ಇನ್ನೂ ಮುಂತಾದ ಇಂತಹ ವೈಶಿಷ್ಟ್ಯಪೂರ್ಣವಾದ ವಿಚಾರಗಳಿಗೆ ಶ್ರೀಶಂಕರರ ಕೃತಿಗಳ ಹೊರತಾಗಿ ಬೇರೆಯಾವುದಾದರೂ ಸರಿಸಾಟಿಯುಂಟೇ?

ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ

ಆರ್ಯಾಂಬಾ ಶಿವಗುರುಗಳ ಮಗನಾಗಿ ಕೇರಳದಲ್ಲಿ ಜನಿಸಿ ಬಾಲ್ಯದಲ್ಲಿಯೇ ಸನ್ಯಾಸ ಪಡೆದು ಗೋವಿಂದ ಭಗವತ್ಪಾದರ ಶಿಷ್ಯರಾಗಿ ವೇದ ಗೀತೆಗಳಿಗೆ ಭಾಷ್ಯ ರಚಿಸಿ ಸಾಮಾನ್ಯರಿಗೆ ಸ್ತೋತ್ರ ಸಾಹಿತ್ಯಗಳನ್ನು ರಚಿಸಿ, ಅದ್ವೈತಮತ ಸ್ಥಾಪನಾಚಾರ್ಯರಾಗಿ ಚತುರಾಮ್ನಾಯಪೀಠಗಳನ್ನು ಸ್ಥಾಪಿಸಿ ಧರ್ಮರಕ್ಷಣೆಯನ್ನು ಮಾಡಿ ಶಂಕರರು ಸನಾತನ ಹಿಂದೂ ಸಂಸ್ಕೃತಿಯನ್ನು ಮತ್ತು ಅದರ ಅನುಯಾಯಿಗಳಾದ ನಮ್ಮನ್ನು ಕಾಪಾಡಿದ್ದಾರೆ.

ಭಗವಂತ ರಾಮನಾಗಿ ರಾವಣನನ್ನು, ಕೃಷ್ಣನಾಗಿ ಕಂಸನನ್ನು ಶಸ್ತ್ರಗಳಿಂದ ನಾಶಮಾಡಿದರೆ, ಶ್ರೀಶಂಕರರು ಶಾಸ್ತ್ರದ ಬಲದಿಂದ ಅಧರ್ಮವನ್ನು ಕಿತ್ತೊಗೆದರು. ವೇದ ಕಾವ್ಯ ಶಾಸ್ತ್ರ ಸಾಹಿತ್ಯ ವಿನಯ ಆಚಾರ ಭಕ್ತಿ ಕ್ಷಮಾ ಚಾತುರ್ಯ ಹೀಗೆ ಇನ್ನೂ ಯಾವ ಯಾವ ಸದ್ಗುಣಗಳಿವೆಯೋ ಅದೆಲ್ಲದರ ಮೂರ್ತರೂಪವೇ ಶ್ರೀಶಂಕರರು. ಅಂತಹಾ ಶಂಕರರನ್ನು ಸ್ಮರಿಸಿ ಪಾವನರಾಗೋಣ.

English summary
Adi Shankara was an early 8th century Indian philosopher and theologian who consolidated the doctrine of Advaita Vedanta. Let's remember the legend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X