ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರ ಮುಖ್ಯಮಂತ್ರಿಯಂತೆ ಕಾಣ್ತಿದ್ದಾರೆ ಕುಮಾರಸ್ವಾಮಿ, ನೀವೇನಂತೀರಿ?

By ಅನಿಲ್
|
Google Oneindia Kannada News

ಇದಕ್ಕೆ ಯಾರು ಏನೇ ಹೇಳಲಿ, ಕುಮಾರಸ್ವಾಮಿ ಅವರ ಇಂಥ ನಡವಳಿಕೆಗಳೇ ಬಹಳ ಇಷ್ಟವಾಗುತ್ತವೆ. ಅಲ್ಲರೀ, ಯಾರಿಗಾದರೂ ನೆನಪಿದ್ದರೆ ಹೇಳಲಿ. ರಾಜ್ಯದ ಮುಖ್ಯಮಂತ್ರಿಯೊಬ್ಬರು ಗದ್ದೆಗೆ ಇಳಿದು, ಭತ್ತ ನಾಟಿ ಮಾಡ್ತೀನಿ ಅಂತ ಹೇಳಿದ್ದು ಇದೆಯಾ? ಬರೀ ಹೇಳುವುದಲ್ಲ. ಕುಮಾರಸ್ವಾಮಿ ಅವರು ಆ ಕೆಲಸವನ್ನು ಮಾಡಿದ್ದಾರೆ.

ಗರಿ-ಗರಿ ಬಟ್ಟೆ ಹಾಕಿಕೊಂಡು, ಅದರ ಮೇಲೆ ಒಂದು ಕಣ ದೂಳಿಲ್ಲದಂತೆ ಕಾಣಿಸಿಕೊಳ್ಳುವ ವ್ಯಕ್ತಿಯನ್ನು ಜನರು ಶಿಸ್ತುಗಾರ ಪುಟ್ಟಸ್ವಾಮಿ ಅನ್ನಬಹುದು. ಅಬ್ಬಾ, ತಮ್ಮ ಬಟ್ಟೆ ಬಗ್ಗೆ ಎಂಥ ಕಾಳಜಿ ಅಂತಲೂ ಹೊಗಳಬಹುದು. ಆದರೆ ಅಂಥವರನ್ನು, ಆತ ನಮ್ಮ ಹಾಗೆ ಇದ್ದಾರಲ್ಲಾ ಅನ್ನೋದು ಉಂಟಾ?

ಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿಭತ್ತ ನಾಟಿ ರಾಜಕೀಯ ಗಿಮಿಕ್ ಅಲ್ಲ : ಕುಮಾರಸ್ವಾಮಿ

ಪಂಚೆ ಕಟ್ಟಿಕೊಂಡು, ಗದ್ದೆಗೆ ಇಳಿದು, ಹಿಮ್ಮಡಿವರೆಗೆ ಇರುವ ನೀರಿನಲ್ಲಿ ನಿಂತು ನಾಟಿ ಮಾಡಿಯೇ ಕುಮಾರಸ್ವಾಮಿ ಅವರು ಗಿಮಿಕ್ ಮಾಡಬೇಕೆ? ಜನರ ಮಧ್ಯೆ ಜನರಾಗಿ, ಸಾಮಾನ್ಯರಂತೆ ಕಾಣುವ ಕುಮಾರಸ್ವಾಮಿ ಮಾಜಿ ಪ್ರಧಾನಿಗಳ ಖಾಂದಾನ್ ನಿಂದ ಬಂದವರು ಅಂತ ಖಂಡಿತಾ ಹೇಳುವುದಕ್ಕೆ ಆಗಲ್ಲ.

ಉತ್ತಮ ಮಳೆ ಆಗುವ ನಂಬಿಕೆ

ಉತ್ತಮ ಮಳೆ ಆಗುವ ನಂಬಿಕೆ

ಈ ಹಿಂದೊಮ್ಮೆ ತಮ್ಮ ಮೈ ಬಣ್ಣದ ಬಗ್ಗೆಯೂ ತುಂಬ ಸ್ವಾಭಾವಿಕವಾಗಿ ಮಾತನಾಡಿದ್ದರು ಕುಮಾರಸ್ವಾಮಿ. ಆ ಮನುಷ್ಯ ನಮ್ಮಂಗೆ ಅಂತ ಅನ್ನಿಸುವುದರಲ್ಲಿ ಅವರ ಮೈ ಬಣ್ಣದ ಕಾರಣವೂ ಇದೆ ಅನಿಸುತ್ತದೆ. ರಾಜಕಾರಣ ಪಕ್ಕಕ್ಕಿಟ್ಟು, ಸದ್ಯದ ಸನ್ನಿವೇಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹೇಳುವುದಾದರೆ ನಮ್ಮ ರಾಜ್ಯಕ್ಕೆ ಒಬ್ಬರು ಜನರ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಒಳ್ಳೆ ಮಳೆ ಆಗುತ್ತದೆ ಎಂಬ ನಂಬಿಕೆ ಇದೆ. ನೋಡಿ, ಈ ವರ್ಷ ಭಾರೀ ಮಳೆ ಆಗುತ್ತಿದೆ. ಅತಿವೃಷ್ಟಿ ಆಗುತ್ತಿದೆ. ತಮಿಳುನಾಡಿಗೆ ಬಿಡಬೇಕಾದ ಕಾವೇರಿ ನದಿ ನೀರನ್ನು ಬಿಟ್ಟು ಆಗಿದೆ.

ತಪ್ಪನ್ನೂ ಒಪ್ಪಿಕೊಳ್ಳುವ ಗುಣದ ಕುಮಾರಸ್ವಾಮಿ

ತಪ್ಪನ್ನೂ ಒಪ್ಪಿಕೊಳ್ಳುವ ಗುಣದ ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ ಅವರ ಸಮಸ್ಯೆ ಅಂತಾದರೂ ಅಂದುಕೊಳ್ಳಬಹುದು ಅಥವಾ ಆ ಗುಣವೇ ಅವರನ್ನು ಜನ ನಾಯಕನನ್ನಾಗಿ ಮಾಡಿದೆ ಅಂತಲಾದರೂ ಭಾವಿಸಬಹುದು. ಹಲವು ಸಂದರ್ಭಗಳಲ್ಲಿ ಅವರು ಕಣ್ಣೀರು ಹಾಕಿದ್ದಿದೆ. ದೇವೇಗೌಡರು, ಯಡಿಯೂರಪ್ಪ ಇವರಿಬ್ಬರನ್ನು ಹೊರತುಪಡಿಸಿದರೆ ಹಾಗೆ ಸಾರ್ವಜನಿಕವಾಗಿ ಕಣ್ಣೀರು ಹಾಕಿದಂಥ ನಾಯಕ ಕುಮಾರಸ್ವಾಮಿ. ಆದರೆ ಸಿಟ್ಟು- ನೇರ ಮಾತಿನ ಮೂಲಕ ಹಾಗೂ ಅದೇ ಸಂದರ್ಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಅಪರೂಪದ ಗುಣ ಇರುವ ಕುಮಾರಸ್ವಾಮಿ ಖಂಡಿತಾ ಭಿನ್ನವಾಗಿ ನಿಲ್ಲುತ್ತಾರೆ. ಧರಂ ಸಿಂಗ್ ತೀರಿಕೊಂಡ ವರ್ಷಾಚರಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಹೇಳಿದ್ದ ಮಾತನ್ನು ನೆನಪಿಸಿಕೊಳ್ಳಬೇಕು. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರಕಾರ ಬೀಳುವುದಕ್ಕೆ ನಾನೇ ಕಾರಣ ಎಂದಿದ್ದರು. ಆ ರೀತಿ ಒಪ್ಪಿಕೊಳ್ಳುವ ರಾಜಕಾರಣಿಗಳು ವಿರಳ.

ಕಾಲರ್ ಕೊಳೆಯಾಗದಂತೆ ನೋಡಿಕೊಳ್ಳುವ ರಾಜಕಾರಣಿಗಳು

ಕಾಲರ್ ಕೊಳೆಯಾಗದಂತೆ ನೋಡಿಕೊಳ್ಳುವ ರಾಜಕಾರಣಿಗಳು

ಇನ್ನು ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ವಿಚಾರ ಬಂದರೆ ಅಲ್ಲೂ ಕುಮಾರಸ್ವಾಮಿ ಬೇರೆಯದೇ ರೀತಿ ಸ್ವಭಾವದವರು ಅನ್ನುವುದಕ್ಕೆ ಶನಿವಾರದ ಘಟನೆ ಇನ್ನೊಂದು ನಿದರ್ಶನ. ರೈತರ ಸಾಲ ಮನ್ನಾ ವಿಚಾರದಲ್ಲಿ ದಿನಕ್ಕೊಂದರಂತೆ ಹೊಸ ಆರೋಪಗಳನ್ನು ಬಿಜೆಪಿ ಮಾಡುತ್ತಿದ್ದರೂ ಅದೇ ಕೃಷಿಕ ಸಮುದಾಯದ ಮಧ್ಯೆ ಹೋಗಿ ಭತ್ತ ನಾಟಿ ಮಾಡ್ತೇನೆ ಅನ್ನೋ ನಿರ್ಧಾರ ಮಾಡುವುದಕ್ಕೆ ಸಾಧ್ಯವಾ? ರಾಜಕಾರಣಿಗಳು ಅಂದರೆ ಕಾಲರ್ ಕೊಳೆಯಾಗದಂತೆ ಜೀವನ ನಡೆಸಿಕೊಂಡು ಹೋಗುವವರು ಎಂಬುದು ಜಗಜ್ಜಾಹೀರಾದ ಸಂಗತಿ. ಆದರೆ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಐದು ವರ್ಷ ಇರುವಾಗ ಒಬ್ಬ ಮುಖ್ಯಮಂತ್ರಿ ಮಣ್ಣಿನಲ್ಲಿ ಇಳಿದು ಹೀಗೆ ಕೆಲಸ ಮಾಡಿ, ಜನರಿಗೆ ಹತ್ತಿರವಾಗ್ತಾರಾ?

ಮುಖ್ಯಮಂತ್ರಿ ಹೀಗೆ ಜನರ ಮಧ್ಯೆ ಬೆರೆಯಬೇಕಲ್ಲವೆ?

ಮುಖ್ಯಮಂತ್ರಿ ಹೀಗೆ ಜನರ ಮಧ್ಯೆ ಬೆರೆಯಬೇಕಲ್ಲವೆ?

ಜೆಡಿಎಸ್ ಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ಪೂರ್ಣ ಬಹುಮತ ಕೊಟ್ಟಿದ್ದಾರೋ ಇಲ್ಲವೋ? ಕುಮಾರಸ್ವಾಮಿ ಅವರು ಜನರೇ ಆರಿಸಬೇಕು ಅಂದುಕೊಂಡ ಮುಖ್ಯಮಂತ್ರಿ ಹೌದೋ ಅಲ್ಲವೋ ಎಂಬ ವಿವಾದಕ್ಕೆ ಕಾರಣ ಆಗಬಹುದಾದ ಚರ್ಚೆಯನ್ನು ಪಕ್ಕಕ್ಕಿಟ್ಟು ಹೇಳುವುದಾದರೆ ಈ ವ್ಯಕ್ತಿಯಂಥ ಮುಖ್ಯಮಂತ್ರಿ ಬೇಕು ಅನ್ನಿಸುವುದರಲ್ಲಿ ಏನಾದರೂ ಅನುಮಾನ ಇದೆಯಾ? ಮುಖ್ಯಮಂತ್ರಿ ಆದವರು ರೈತರ ಜತೆಗೆ ಬೆರೆಯಬೇಕು. ಕಣ್ಣೀರಿಗೆ ಉತ್ತರವಾಗಬೇಕು. ಕಷ್ಟ ಎಂದಾಗ ಬೆಂಬಲ ಆಗಬೇಕು. ಸಂತೋಷದಲ್ಲಿರುವಾಗ ತನ್ನ ಮನೆಯಲ್ಲಿನ ಸಂತಸ ಇರುವಂತೆ ಸಂಭ್ರಮಿಸಬೇಕು. ಇದಕ್ಕೆ ನೀವೇನಂತೀರಿ?

English summary
It is really rare sighting of chief minister. Karnataka chief minister in agriculture field surrounded by common people. Those pictures send positive message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X