ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್

By ಆರ್ ಟಿ ವಿಠ್ಠಲಮೂರ್ತಿ
|
Google Oneindia Kannada News

Recommended Video

ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲು ಕೆ ಎಸ್ ಈಶ್ವರಪ್ಪ ಮಾಸ್ಟರ್ ಪ್ಲಾನ್ | Oneindia Kannada

ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ!

ಒಬ್ಬ ರಾಜಕಾರಣಿಗೆ ಆ ಕನಸು ಇರಬಾರದು ಎಂದೇನೂ ಇಲ್ಲ. ಅವರು ಮಾತ್ರ ಅಂತಲ್ಲ, ಕರ್ನಾಟಕದ ಮೂರೂ ರಾಜಕೀಯ ಪಕ್ಷಗಳ ಆಂತರ್ಯವನ್ನು ಕೆದಕುತ್ತಾ ಹೋದರೆ ಒಂದು ಡಜನ್ ಗೂ ಅಧಿಕ ಮಂದಿ ನಾಯಕರು ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವುದು ಗೋಚರವಾಗುತ್ತದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಮುನ್ನಡೆಸುತ್ತಾರೆ ಎಂದು ಪಕ್ಷದ ಹೈಕಮಾಂಡ್ ಈಗಾಗಲೇ ಹೇಳಿ ತುಂಬ ದಿನಗಳೇ ಆಗಿವೆ. ಅದರರ್ಥ, ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆ ಅವರೊಬ್ಬರಲ್ಲೇ ಇರಬೇಕು ಎಂದಲ್ಲ.

ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ, ಇದು ರಾಯಣ್ಣ ಬ್ರಿಗೇಡ್ ಬೇಡಿಕೆಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ, ಇದು ರಾಯಣ್ಣ ಬ್ರಿಗೇಡ್ ಬೇಡಿಕೆ

ಹಾಗೆ ನೋಡಿದರೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಕನಸಿದೆ. ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರಿಗೆ ಈ ಕನಸಿದೆ. ಕಳೆದ ವಿಧಾನಸಭಾ ಚುನಾವಣೆ ಮುಗಿದ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಕೂಡಾ, ನಾವೂ ಸಿಎಂ ಹುದ್ದೆಯ ಆಕಾಂಕ್ಷಿಗಳು ಅಂತ ಹೇಳಿಕೊಂಡಿದ್ದರು.

1989ರಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿರುವ ತಮಗೆ ಹಲವು ಶಾಸಕರ ಬೆಂಬಲವಿದೆ. ಹೀಗಾಗಿ ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಇದೇ ಡಿ.ಕೆ. ಶಿವಕುಮಾರ್ ಸದಾಶಿವನಗರದ ತಮ್ಮ ಬಂಗಲೆಯಲ್ಲಿ ಅವತ್ತು ಸುದ್ದಿಗಾರರೆದುರು ಹೇಳಿಕೊಂಡಿದ್ದರು.

ಇನ್ನು ಆರ್.ವಿ. ದೇಶಪಾಂಡೆಯವರು ತಮ್ಮ ಬೀಗರಾದ ಪ್ರಫುಲ್ ಪಟೇಲ್ ಅವರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಲ್ಲದೆ, ಇಲ್ಲೂ ಸುದ್ದಿಗಾರರು ಕೇಳಿದಾಗ, ನಾನೂ ಸಿಎಂ ಹುದ್ದೆಯ ಆಕಾಂಕ್ಷಿ. ಅದರಲ್ಲಿ ತಪ್ಪೇನಿದೆ? ಅಂತ ಪ್ರಶ್ನಿಸಿದ್ದರು.

ಬೆಂಗಳೂರಲ್ಲಿ ರಾಯಣ್ಣ ಬ್ರಿಗೇಡ್ ದಿಢೀರ್ ಸಭೆ!ಬೆಂಗಳೂರಲ್ಲಿ ರಾಯಣ್ಣ ಬ್ರಿಗೇಡ್ ದಿಢೀರ್ ಸಭೆ!

ಆದರೆ ಸಿಎಂ ಹುದ್ದೆಯ ರೇಸಿನಲ್ಲಿ ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಬಲ್ಲ ಸ್ಥಾನದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಪರಿಣಾಮವಾಗಿ ಸಿಎಂ ಸ್ಥಾನ ಸಿದ್ದರಾಮಯ್ಯ ಅವರಿಗೇ ಎನ್ನುವುದು ಬಹಳ ಬೇಗ ಖಚಿತವಾಗಿ ಹೋಯಿತು.

ಆದರೆ ನಾವೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಎಂದು ಹೇಳಿಕೊಂಡ ಕಾರಣಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಕನಿಷ್ಟ ಪಕ್ಷ ಮಂತ್ರಿಯೂ ಆಗದೆ ವರ್ಷಾನುಗಟ್ಟಲೆ ಕಾಲ ಕಾಯಬೇಕಾಯಿತು. ಇನ್ನು ದೇಶಪಾಂಡೆಯವರಿಗೆ ಮಂತ್ರಿ ಮಾಡುವ ಬದಲು ವಿಧಾನಸಭಾಧ್ಯಕ್ಷ ಸ್ಥಾನ ಕೊಡಿಸಲು ಸಿದ್ದರಾಮಯ್ಯ ಶತಪ್ರಯತ್ನ ಮಾಡಿದರು.

ದೇಶಪಾಂಡೆ ಅವರು ದೆಹಲಿಯಲ್ಲಿ ತಮಗಿರುವ ಶಕ್ತಿಯನ್ನು ಬಳಸದೆ ಹೋಗಿದ್ದರೆ ಅವರು ಮಂತ್ರಿಯಾಗುವುದು ಕಷ್ಟವಿತ್ತು.

ರಾಹುಲ್ ರಾಜ್ಯ ಭೇಟಿ ಹಿನ್ನೆಲೆ ಅಧಿವೇಶನ ಮೊಟಕು: ಈಶ್ವರಪ್ಪ ಕುಟುಕುರಾಹುಲ್ ರಾಜ್ಯ ಭೇಟಿ ಹಿನ್ನೆಲೆ ಅಧಿವೇಶನ ಮೊಟಕು: ಈಶ್ವರಪ್ಪ ಕುಟುಕು

ವಾಸ್ತವವಾಗಿ ಹಳಿಯಾಳದ ಶಾಸಕ ದೇಶಪಾಂಡೆ ಅವರಿಗೆ ಕೈಗಾರಿಕಾ ಸಚಿವರಾಗುವ ಆಸೆಯೇ ಇತ್ತು. ಆದರೆ ಸಿದ್ಧರಾಮಯ್ಯ ಅವರು ಉನ್ನತ ಶಿಕ್ಷಣ ಖಾತೆಯನ್ನು ದೇಶಪಾಂಡೆಯವರಿಗೆ ಕೊಟ್ಟರು. ಮುಂದೆ ದೇಶಪಾಂಡೆ ಅವರು ತಮಗೆ ಯಾವ ದೃಷ್ಟಿಯಿಂದಲೂ ಸಮಸ್ಯೆ ತಂದೊಡ್ಡಲಾರರು ಎಂಬುದು ಖಚಿತವಾದ ಮೇಲೆ ಸಿದ್ದರಾಮಯ್ಯ ಅವರು ಕೈಗಾರಿಕಾ ಖಾತೆಯನ್ನು ನೀಡಿದರು.

ಇದೇ ರೀತಿ ಕಾಂಗ್ರೆಸ್ ಪಕ್ಷದ ಆಂತರ್ಯವನ್ನು ಕೆದಕುತ್ತಾ ಹೋದರೆ ಭಾರೀ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ರಾಷ್ಟ್ರೀಯ ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಸಹಾ ಮುಂದಿನ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿದ್ದಾರೆ.

ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಯಾರು?

ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಯಾರು?

ಜೆಡಿಎಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಅಂತ ದಕ್ಕಿದರೆ ಅದು ಕುಮಾರಸ್ವಾಮಿ ಅವರಿಗೆ ಮಾತ್ರ ಎಂಬುದು ನಿಕ್ಕಿಯಾಗಿರುವುದರಿಂದ ಅಲ್ಲಿ, ಸಿಎಂ ಹುದ್ದೆಯ ಅಕಾಂಕ್ಷಿಗಳು ಬೇರೊಬ್ಬರಿಲ್ಲ.
ಆದರೆ ಬಿಜೆಪಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಷ್ಟೇ ಅಲ್ಲ, ಕೇಂದ್ರ ಸಚಿವ ಅನಂತಕುಮಾರ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಯಾಗಲು ತಮಗೆ ಅವಕಾಶ ದಕ್ಕಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಸ್ವಯಂಬಲದಿಂದ ಗೆದ್ದರೆ ಮಾತ್ರ ಬಿಎಸ್ವೈ

ಸ್ವಯಂಬಲದಿಂದ ಗೆದ್ದರೆ ಮಾತ್ರ ಬಿಎಸ್ವೈ

ಬಿಜೆಪಿ ಸ್ವಯಂಬಲದ ಮೇಲೆ ಗೆದ್ದರೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಪಕ್ಷದ ಹೈಕಮಾಂಡ್ ಸ್ಪಷ್ಟ ಪಡಿಸಿದೆ. ಆದರೆ ಒಂದು ವೇಳೆ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದಿದ್ದರೆ? ಆಗ ಜೆಡಿಎಸ್ ಜತೆ ಸೇರಿ ಮೈತ್ರಿಕೂಟ ಸರ್ಕಾರ ರಚಿಸುವ ಸ್ಥಿತಿ ಬರಬಹುದು ಎಂದು ಹಲವು ನಾಯಕರು ಕಾದಿದ್ದಾರೆ.

ಮೈತ್ರಿ ಕೂಟ ಸರ್ಕಾರ ರಚಿಸುವ ಸನ್ನಿವೇಶ ಸೃಷ್ಟಿಯಾದರೆ ಮಿತ್ರ ಪಕ್ಷದ ಒಲವು ಯಾರ ಕಡೆಗಿದೆ? ಎಂದು ನಿಕ್ಕಿ ಮಾಡಿಕೊಳ್ಳಬೇಕಾಗುತ್ತದೆ.
ಅಂದು ಒಲಿದಿತ್ತು ಧರ್ಮಸಿಂಗ್ ಅವರಿಗೆ ಲಕ್ಕು

ಅಂದು ಒಲಿದಿತ್ತು ಧರ್ಮಸಿಂಗ್ ಅವರಿಗೆ ಲಕ್ಕು

2004ರಲ್ಲಿ ಮೈತ್ರಿಕೂಟ ಸರ್ಕಾರ ರಚಿಸುವುದು ಅನಿವಾರ್ಯವಾದಾಗ ಕಾಂಗ್ರೆಸ್ ಪಕ್ಷದ ವತಿಯಿಂದ ಧರ್ಮಸಿಂಗ್ ಅವರು ಸಿಎಂ ಆದರೆ ನಾವು ಒಪ್ಪುತ್ತೇವೆ ಎಂದು ಜೆಡಿಎಸ್ ಹೇಳಿತ್ತು.

ಹೀಗಾಗಿ ಧರ್ಮಸಿಂಗ್ ಅವರಿಗೆ ಅದೃಷ್ಟ ಒಲಿಯಿತು. ಈ ರೀತಿ ಧರ್ಮಸಿಂಗ್ ಅವರ ಹೆಸರನ್ನು ನಿಕ್ಕಿಗೊಳಿಸುವ ಮುನ್ನ ಜೆಡಿಎಸ್ ಪಕ್ಷ ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ತರಲು ಬಯಸಿತ್ತು. ಆದರೆ ಅದು ಯಾವ ಕಾರಣಕ್ಕಾಗಿ ತಪ್ಪಿತು? ಧರ್ಮಸಿಂಗ್ ಅವರಿಗೆ ಯಾವ ಕಾರಣಕ್ಕಾಗಿ ಮುಖ್ಯಮಂತ್ರಿ ಹುದ್ದೆ ಒಲಿಯಿತು? ಎಂದು ಹೇಳಲು ಹೋದರೆ ಅದೊಂದು ದೊಡ್ಡ ಕತೆ.

ಕೆಎಸ್ ಈಶ್ವರಪ್ಪ ಅವರು ಬಯಕೆ ಏನು?

ಕೆಎಸ್ ಈಶ್ವರಪ್ಪ ಅವರು ಬಯಕೆ ಏನು?

ಅದೇನೇ ಇರಲಿ, ನಾಳೆ ವಿಧಾನಸಭೆ ಚುನಾವಣೆ ಮುಗಿದ ನಂತರ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಮುಖ್ಯಮಂತ್ರಿ ಹುದ್ದೆ ಬಿಜೆಪಿಗೆ ಹೋಗುತ್ತದೋ? ಜೆಡಿಎಸ್ ಗೆ ಹೋಗುತ್ತದೋ? ಅದು ಬೇರೆ ವಿಷಯ. ಇಷ್ಟಾದರೂ ಅಂತಹ ಸನ್ನಿವೇಶ ಎದುರಾದರೆ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶ ತಮಗೆ ಸಿಗುವಂತೆ ಮಾಡಿಕೊಳ್ಳಬೇಕು ಎಂದು ಕೆ.ಎಸ್. ಈಶ್ವರಪ್ಪ ಬಯಸಿದ್ದಾರೆ.

ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಬಿಎಸ್ವೈ ಅಡ್ಡಗಾಲು

ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಬಿಎಸ್ವೈ ಅಡ್ಡಗಾಲು

ವಾಸ್ತವವಾಗಿ ಮೊನ್ನೆ ಮೊನ್ನೆಯ ತನಕ ಅವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ವಿಷಯದಲ್ಲೂ ಯಡಿಯೂರಪ್ಪ ತಕರಾರು ಮಾಡುತ್ತಲೇ ಇದ್ದರು. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ರುದ್ರೇಗೌಡರು ಗೆಲುವಿನ ಸನಿಹಕ್ಕೆ ಬಂದಿದ್ದರು. ಹೀಗಾಗಿ ಅವರಿಗೇ ಟಿಕೆಟ್ ಕೊಡೋಣ ಎಂಬುದು ಯಡಿಯೂರಪ್ಪ ಅವರ ವಾದವಾಗಿತ್ತು.

ಯಡಿಯೂರಪ್ಪ ಅವರಲ್ಲಿ ಇಂತಹ ಮನಃಸ್ಥಿತಿ ಇತ್ತು ಎಂಬ ಕಾರಣಕ್ಕಾಗಿಯೇ ಈಶ್ವರಪ್ಪ ಮುನಿಸಿಕೊಂಡಿದ್ದರು. ಹೀಗೆ ಮುನಿಸಿಕೊಂಡ ಈಶ್ವರಪ್ಪ ಅವರನ್ನು ಪುಸಲಾಯಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಕೆಲಸ, ಸಂಘ ಪರಿವಾರ ಮೂಲದ ಪ್ರಮುಖ ನಾಯಕರಿಂದ ನಡೆದಿದ್ದೂ ರಹಸ್ಯವಲ್ಲ. ಹೇಳಲು ಹೋದರೆ ಅದು ಕೂಡಾ ದೊಡ್ಡ ಕತೆಯೇ.

ಬ್ರಿಗೇಡ್ : ಈಶ್ವರಪ್ಪ ಬೇಕು, ಬಿಎಸ್ವೈ ಬೇಡ!

ಬ್ರಿಗೇಡ್ : ಈಶ್ವರಪ್ಪ ಬೇಕು, ಬಿಎಸ್ವೈ ಬೇಡ!

ಹಿಂದ (ಹಿಂದುಳಿದ ಮತ್ತು ದಲಿತ) ಸಮುದಾಯಗಳ ಮತಗಳನ್ನು ಕ್ರೋಢೀಕರಿಸಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಪ್ರಮುಖ ಗುರಿ ಎಂದು ಸ್ವತಃ ಈಶ್ವರಪ್ಪ ಅವರೇ ಹೇಳಿಕೊಂಡಿದ್ದರು.

ಆದರೆ ಬಿಜೆಪಿಯಲ್ಲಿ ಶುರುವಾದ ಬ್ರಿಗೇಡ್ ಕಲಹ ಸುಮಾರು ಒಂದು ವರ್ಷ ಕಾಲ ನಡೆಯಿತು. ಬ್ರಿಗೇಡ್ ಬೇಕೇ ಬೇಕು ಎಂದು ಈಶ್ವರಪ್ಪ ಗ್ಯಾಂಗು, ಬೇಡವೇ ಬೇಡ ಎಂದು ಯಡಿಯೂರಪ್ಪ ಗ್ಯಾಂಗು ಪಟ್ಟು ಹಿಡಿದವು. ತಕರಾರು ಹೈಕಮಾಂಡ್ ಅಂಗಳಕ್ಕೆ ಹೋಯಿತು. ಮುಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬ್ರೇಕ್ ಹಾಕಿದರು.

ಈಶ್ವರಪ್ಪ ಮುಖ್ಯಮಂತ್ರಿ ಕನಸಿಗೆ ಇಂಬು

ಈಶ್ವರಪ್ಪ ಮುಖ್ಯಮಂತ್ರಿ ಕನಸಿಗೆ ಇಂಬು

ಇದಾದ ಕೆಲ ಕಾಲದ ನಂತರ, ಪಕ್ಷದ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಷಯವನ್ನು ಬಹುತೇಕ ಇತ್ಯರ್ಥಗೊಳಿಸಿದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಈಶ್ವರಪ್ಪ ಅವರಿಗೇ ಎಂಬುದು ಇದರ ಸಾರಾಂಶ.

ಈ ಬೆಳವಣಿಗೆ ಈಶ್ವರಪ್ಪ ಅವರ ಸಿಎಂ ಹುದ್ದೆಯ ಕನಸಿನ ಗಿಡಕ್ಕೆ ಸೆಕೆಗಾಲದಲ್ಲೂ ನೀರು ಸಿಕ್ಕಂತಾಗಿದೆ.

ಜೆಡಿಎಸ್ ಜೊತೆ ಈಶ್ವರಪ್ಪ ಒಳಒಪ್ಪಂದವೇನು?

ಜೆಡಿಎಸ್ ಜೊತೆ ಈಶ್ವರಪ್ಪ ಒಳಒಪ್ಪಂದವೇನು?

ಇದೇ ಕಾರಣಕ್ಕಾಗಿ ಅವರು ಜೆಡಿಎಸ್ ನಾಯಕರ ಜತೆ ಒಳ ಸಂಧಾನ ಮಾಡಿಕೊಂಡು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಮತಗಳನ್ನು ಒಡೆಯಲು ತಮಗೆ ಬೇಕಾದ ಕ್ಯಾಂಡಿಡೇಟ್ ಅನ್ನು ಹಾಕಿ ಅಂತ ಕೇಳಿಕೊಂಡಿದ್ದಾರೆ.

ಈಶ್ವರಪ್ಪ ಅವರು ಹೀಗೆ ಕೇಳಿಕೊಂಡ ಪರಿಣಾಮವಾಗಿ, ಜೆಡಿಎಸ್ ನಾಯಕರು ತಮ್ಮ ನಿಲುವು ಸಡಿಲಿಸಿ ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿರುವ, ಜೆಡಿಎಸ್ ಜತೆ ಗುರುತಿಸಿಕೊಂಡಿರುವ ಹಬೀಬ್ ಅಥವಾ ರೆಹಮಾನ್ ಎಂಬ ನಾಯಕರ ಪೈಕಿ ಒಬ್ಬರನ್ನು ಕಣಕ್ಕಿಳಿಸಲಿದ್ದಾರೆ ಎಂಬುದು ಯಡಿಯೂರಪ್ಪ ಅವರಿಗೆ ಅವರ ಆಪ್ತರು ನೀಡಿರುವ ಮೆಸೇಜು.

ಯಡಿಯೂರಪ್ಪ ಕಂಡರೆ ಇಬ್ಬರಿಗೂ ಆಗಲ್ಲ

ಯಡಿಯೂರಪ್ಪ ಕಂಡರೆ ಇಬ್ಬರಿಗೂ ಆಗಲ್ಲ

ಯಡಿಯೂರಪ್ಪ ಅವರನ್ನು ಕಂಡರೆ ದೇವೇಗೌಡ, ಕುಮಾರಸ್ವಾಮಿ ಇಬ್ಬರೂ ಇಷ್ಟಪಡುವುದಿಲ್ಲ ಅನ್ನುವುದು ರಹಸ್ಯವೇನಲ್ಲ. ಹೀಗಾಗಿ ಯಡಿಯೂರಪ್ಪ ಅವರ ಇಚ್ಛೆಗೆ ವಿರುದ್ಧವಾಗಿ ಈಶ್ವರಪ್ಪ ಗೆಲ್ಲಲಿ ಎಂದು ಅವರು ಬಯಸಿದರೆ ಅದು ಅಸಹಜವೂ ಅಲ್ಲ.

ಈಗಾಗಲೇ ಎ.ಐ.ಎಂ.ಎ.ಐ ಪಕ್ಷದ ಮುಖಂಡರಾದ ಓವೈಸಿ ಬ್ರದರ್ಸ್ ಜತೆ ಮಾತುಕತೆ ನಡೆಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಬಯಸಿರುವುದೂ ಈಗ ರಹಸ್ಯದ ಸಂಗತಿಯಲ್ಲ.
ಈ ಮೈತ್ರಿ ಸಾಧಿತವಾದರೆ ಮುಸ್ಲಿಂ ಮತ ಬ್ಯಾಂಕಿಗೆ ಲಗ್ಗೆ ಹಾಕುವಲ್ಲಿ ಅದು ಕೂಡಾ ಒಂದು ಮಟ್ಟದಲ್ಲಿ ಸಫಲವಾಗುತ್ತದೆ. ಯಾಕೆಂದರೆ ಓವೈಸಿ ಸಹೋದರರಿಗೆ ಮುಸ್ಲಿಂ ಮತ ಬ್ಯಾಂಕಿನಲ್ಲಿ ಫೇಸ್ ವ್ಯಾಲ್ಯೂಇದೆ.
ಮುಸ್ಲಿಂ ಮತ ಸೆಳೆದರೆ ಈಶ್ವರಪ್ಪ ಗೆಲುವು ಸುಲಭ

ಮುಸ್ಲಿಂ ಮತ ಸೆಳೆದರೆ ಈಶ್ವರಪ್ಪ ಗೆಲುವು ಸುಲಭ

ಹೀಗಾಗಿ ಜೆಡಿಎಸ್ ಏನಾದರೂ ಶಿವಮೊಗ್ಗದಲ್ಲಿ ಗಣನೀಯ ಪ್ರಮಾಣದ ಮುಸ್ಲಿಂ ಮತಗಳನ್ನು ಸೆಳೆದರೆ ತಮ್ಮ ಗೆಲುವು ಸುಲಭ ಎಂದು ಈಶ್ವರಪ್ಪ ಭಾವಿಸಿದ್ದಾರೆ.

ಸುಮಾರು 2 ಲಕ್ಷ 30 ಸಾವಿರದಷ್ಟು ಮತಗಳಿರುವ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ, 45 ಸಾವಿರ ಮುಸ್ಲಿಂ ಮತದಾರರು, 40 ಸಾವಿರ ಮಂದಿ ಬ್ರಾಹ್ಮಣ ಮತದಾರರು, 30 ಸಾವಿರ ಮಂದಿ ದಲಿತರು, 20 ಸಾವಿರ ಮಂದಿ ಲಿಂಗಾಯತರು ಇದ್ದಾರೆ.

ಈ ಪೈಕಿ ಬ್ರಾಹ್ಮಣರು, ಲಿಂಗಾಯತರ ಮತಗಳು ಸಾಲಿಡ್ ಆಗಿ ತಮಗೆ ದಕ್ಕಿದರೆ ಮತ್ತು ಬಿ.ಎಸ್.ಪಿ, ಮತ್ತಿತರ ಪಕ್ಷಗಳ ಜತೆಗಿನ ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಪಾಲಿಗೆ ಅಡ್ಡೇಟು ಹಾಕಿದರೆ, ತಮ್ಮ ಗೆಲುವು ಸುಲಭವಾಗಲಿದೆ ಎಂಬುದು ಈಶ್ವರಪ್ಪ ಅವರ ವಿಶ್ವಾಸ ಮತ್ತು ಲೆಕ್ಕಾಚಾರ.

ಗೌಡರ ಜತೆ ಈಶ್ವರಪ್ಪ ರಹಸ್ಯ ಮಾತುಕತೆ

ಗೌಡರ ಜತೆ ಈಶ್ವರಪ್ಪ ರಹಸ್ಯ ಮಾತುಕತೆ

ಹೀಗೆ ಶಿವಮೊಗ್ಗದಲ್ಲಿ ತಾವು ಗೆದ್ದ ಕಾಲಕ್ಕೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ, ಮತ್ತು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದೇ ಆದರೆ, ನಾವು ಹೇಳಿದವರು ಸಿಎಂ ಆಗಬೇಕು ಎಂದು ಜೆಡಿಎಸ್ ಪಟ್ಟು ಹಿಡಿದರೆ, ಆ ಸಂದರ್ಭದಲ್ಲಿ ಕಮಲ ಪಾಳೆಯ ತೀರಾ ತಕರಾರು ಮಾಡುವುದಿಲ್ಲ.

ಇದನ್ನು ಗಮನದಲ್ಲಿಟ್ಟುಕೊಂಡು ಈಶ್ವರಪ್ಪ ಈಗಾಗಲೇ ದೇವೇಗೌಡರ ಜತೆ ರಹಸ್ಯ ಮಾತುಕತೆ ನಡೆಸಿ, ಮುಖ್ಯಮಂತ್ರಿಯಾಗುವ ಅವಕಾಶ ತಮಗೆ ದಕ್ಕಲು ನೆರವು ಕೊಡಿ ಎಂದು ಕೇಳಿಕೊಂಡಿದ್ದಾರೆ ಎಂಬ ವರ್ತಮಾನ ಯಡಿಯೂರಪ್ಪ ಅವರಿಗೆ ತಲುಪುವಂತೆ ಮಾಡಲಾಗಿದೆ.

ಮುಂದೇನಾಗುತ್ತದೋ? ಅದು ಬೇರೆ ವಿಷಯ. ಆದರೆ ರಾಜಕಾರಣದ ಮೂಸೆಯಲ್ಲಿ ಲೋಹಗಳು ಕರಗುವ, ಗಟ್ಟಿಯಾಗುವ ಕೆಲಸ ಯಾವ್ಯಾವ ರೀತಿ ಆಗುತ್ತಿರುತ್ತದೆ ಎಂಬುದಕ್ಕೆ ಇದು ಉದಾಹರಣೆ.

ಶಿವಮೊಗ್ಗ ಬಿಜೆಪಿಯಲ್ಲಿ ಟಿಕೆಟ್ ರಾಜಕೀಯ, ಕಣ್ಣೀರಿಟ್ಟ ಕೆ.ಎಸ್.ಈಶ್ವರಪ್ಪಶಿವಮೊಗ್ಗ ಬಿಜೆಪಿಯಲ್ಲಿ ಟಿಕೆಟ್ ರಾಜಕೀಯ, ಕಣ್ಣೀರಿಟ್ಟ ಕೆ.ಎಸ್.ಈಶ್ವರಪ್ಪ

English summary
There are many aspirants in every party to become chief minister of Karnataka. Though Yeddyurappa has been pitched as the CM candidate, Eshwarappa is making all efforts, behind the scene, to see that he is also in the race. This may happen if Karnataka Assembly Election results doesn't give clear majority to any party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X