ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸರ್ಗ ಚೆಲುವಿನ ಅಪರೂಪದ ಕೊಂಗಳ್ಳಿ ಮಲ್ಲಪ್ಪನ ಬೆಟ್ಟ

|
Google Oneindia Kannada News

ಚಾಮರಾಜನಗರ, ಡಿಸೆಂಬರ್ 20: ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡವನ್ನು ಹೊದ್ದು ಕುಳಿತ ನಿಸರ್ಗ. ದಟ್ಟ ಕಾನನಗಳ ನಡುವೆ ಅಡ್ಡಾಡುವ ಕಾಡಾನೆ, ಕಾಡುಕೋಣ, ಜಿಂಕೆ, ನವಿಲುಗಳು. ತಣ್ಣನೆ ಬೀಸುವ ತಂಗಾಳಿಯ ಪ್ರಶಾಂತ ವಾತಾವರಣದ ನಡುವೆ ಮೈದಾಳಿ ನಿಂತು ತನ್ನಡೆಗೆ ಬರುವವರಿಗೆ ನಿಸರ್ಗ ಸುಂದರ ನೋಟವನ್ನು ಉಣಬಡಿಸುವ ತಾಣವೇ ಕೊಂಗಳ್ಳಿ ಮಲ್ಲಪ್ಪನ ಬೆಟ್ಟ.

ಈ ಬೆಟ್ಟವು ತನ್ನದೇ ಆದ ನಿಸರ್ಗ ಸೌಂದರ್ಯವನ್ನು ಹೊಂದಿದೆಯಲ್ಲದೆ, ದೈವಿಕ ತಾಣವಾಗಿಯೂ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಲೂ ಬರುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು, ಚಾರಣಿಗರಿಗೆ ಕೂಡ ಹೇಳಿ ಮಾಡಿಸಿದ ಬೆಟ್ಟವಾಗಿದೆ. ಮೈಸೂರಿನಿಂದ ಸುಮಾರು ನೂರು ಕಿ.ಮೀ, ಚಾಮರಾಜನಗರದಿಂದ ನಲುವತ್ತು ಕಿ.ಮೀ. ಹಾಗೂ ಗುಂಡ್ಲುಪೇಟೆಯಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತೆರಳಲು ಚಾಮರಾಜನಗರದಿಂದ ಬಸ್ ಸೌಕರ್ಯವಿದ್ದು, ತಾಳವಾಡಿ ಹಾಗೂ ಎತ್ತಗಟ್ಟಿ ಬೆಟ್ಟದ ಮಾರ್ಗದಲ್ಲಿ ತೆರಳಬಹುದಾಗಿದೆ.

ಶ್ರೀಶೈಲದಿಂದ ಬಂದು ನೆಲೆ ನಿಂತ ಮಲ್ಲಪ್ಪ

ಶ್ರೀಶೈಲದಿಂದ ಬಂದು ನೆಲೆ ನಿಂತ ಮಲ್ಲಪ್ಪ

ಕೊಂಗಳ್ಳಿ ಮಲ್ಲಪ್ಪನ ಬೆಟ್ಟದಲ್ಲಿ ಮಲ್ಲಿಕಾರ್ಜುನ ದೇಗುಲವಿದ್ದು, ಮಲ್ಲಿಕಾರ್ಜುನನೇ ಆದಿ ದೈವನಾಗಿದ್ದಾನೆ. ಕೊಂಗಳ್ಳಿ ಬೆಟ್ಟದಲ್ಲಿ ಮಲ್ಲಿಕಾರ್ಜುನ ಹೇಗೆ ನೆಲೆನಿಂತ ಎಂಬುದಕ್ಕೂ ಪುರಾಣ ಐಹಿತ್ಯವಿರುವುದನ್ನು ನಾವು ಕಾಣಬಹುದಾಗಿದೆ. ಹಿಂದೆ ಕೊಂಗಳ್ಳಿ ಮಲ್ಲಪ್ಪನ ಬೆಟ್ಟವು ಈಗಿನಗಿಂತಲೂ ದಟ್ಟಕಾಡಿನಿಂದ ಕೂಡಿತ್ತು. ಇಲ್ಲಿಗೆ ಎಂಟನೇ ಶತಮಾನದಲ್ಲಿ ಶ್ರೀಶೈಲದಿಂದ ಚನ್ನಮಲ್ಲಿಕಾರ್ಜುನ ಸ್ವಾಮಿ, ಬಸಪ್ಪ ಎತ್ತಗಟ್ಟಿ ಬಂದರೆಂದು ಹೇಳಲಾಗಿದ್ದು, ಕೊಂಗಳ್ಳಿ ಬೆಟ್ಟದಲ್ಲಿ ಮಲ್ಲಿಕಾರ್ಜುನ ಸ್ವಾಮಿ ನೆಲೆನಿಂತರೆ, ಬಸಪ್ಪ ಎತ್ತಗಟ್ಟಿ ಸಮೀಪದಲ್ಲಿ ನೆಲೆ ನಿಂತರೆನ್ನಲಾಗಿದೆ. ಇನ್ನು ಈ ದೇಗುಲಕ್ಕೆ ಸಮೀಪದಲ್ಲಿ ಹನುಮಂತರಾಯನ ದೇವಸ್ಥಾನವಿರುವುದನ್ನು ಕಾಣಬಹುದಾಗಿದೆ. ಕೊಂಗಳ್ಳಿ ಬೆಟ್ಟ ಎಂಬ ಹೆಸರು ಹೇಗೆ ಬಂತು ಎಂಬುದನ್ನು ನೋಡುವುದಾದರೆ ದಟ್ಟಕಾಡಿನಿಂದ ಕೂಡಿದ ಕೊಂಗಳ್ಳಿ ಬೆಟ್ಟವು ರೈತರು ಒಕ್ಕಣೆ ಸಮಯದಲ್ಲಿ ಬಳಸುವ ಕೊಂಗದ ಆಕಾರದಲ್ಲಿರುವುದುರಿಂದ ಈ ಹೆಸರು ಬಂತೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.

ನಿಸರ್ಗ ನಿರ್ಮಿತ ಹುಲಿತಾಳದ ಅಪೂರ್ವ ಶಿಲಾದೇಗುಲನಿಸರ್ಗ ನಿರ್ಮಿತ ಹುಲಿತಾಳದ ಅಪೂರ್ವ ಶಿಲಾದೇಗುಲ

ಕೊಂಗಳ್ಳಿಬೆಟ್ಟಕ್ಕೆ ಮಹಿಳೆಯರು ತೆರಳುವುದಿಲ್ಲ

ಕೊಂಗಳ್ಳಿಬೆಟ್ಟಕ್ಕೆ ಮಹಿಳೆಯರು ತೆರಳುವುದಿಲ್ಲ

ಸಾಮಾನ್ಯವಾಗಿ ಕೊಂಗಳ್ಳಿಬೆಟ್ಟಕ್ಕೆ ಮಹಿಳೆಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ತೆರಳುತ್ತಾರೆ. ಹಾಗಾದರೆ ಮಹಿಳೆಯರೇಕೆ ಇಲ್ಲಿಗೆ ತೆರಳುವುದಿಲ್ಲ ಎನ್ನುವುದಕ್ಕೆ ಇಲ್ಲಿನವರು ಮಹಿಳೆಯರು ರಜಸ್ವಲೆಯಾಗುವುದರಿಂದ ತೆರಳುವುದಿಲ್ಲ ಎನ್ನಲಾಗಿದ್ದು, ಹಿಂದಿನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಹಾಗೊಂದು ವೇಳೆ ನಿಯಮ ಮೀರಿ ಹೋದರೆ ಕಲ್ಲಾಗುತ್ತಾರೆ, ಶಾಪಕ್ಕೆ ತುತ್ತಾಗುತ್ತಾರೆ ಎಂಬ ನಂಬಿಕೆ ಜನರದ್ದಾಗಿದೆ. ಹೀಗಾಗಿ ಯಾರೂ ಕೂಡ ಆ ಕಡೆ ತೆರಳುವುದಿಲ್ಲ. ಜತೆಗೆ ಈ ವ್ಯಾಪ್ತಿಯಲ್ಲಿ ದಂತಕಥೆ ಹರಿದಾಡುತ್ತಿದ್ದು, ಅದೇನೆಂದರೆ ಸುಮಾರು ಐನೂರು ವರ್ಷಕ್ಕೂ ಹಿಂದೆ ಇಲ್ಲಿಗೆ ಭೇಟಿ ನೀಡಿದ ಗಾಣಗಿತ್ತಿ ಮಹಿಳೆಯೊಬ್ಬರು ಕಲ್ಲಾದಳು ಎಂಬುದು ಪ್ರಚಲಿತದಲ್ಲಿದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ತೆರಳದೆ ಎತ್ತಗಟ್ಟಿ ಬಸಪ್ಪ ಮತ್ತು ಹನುಮಂತರಾಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿಕೊಂಡು ಹಿಂತಿರುಗುವುದನ್ನು ಕಾಣಬಹುದಾಗಿದೆ.

ಮೌಢ್ಯ ಮುರಿದ ಮುರುಘರಾಜೇಂದ್ರ ಮಠದ ಶ್ರೀಗಳು

ಮೌಢ್ಯ ಮುರಿದ ಮುರುಘರಾಜೇಂದ್ರ ಮಠದ ಶ್ರೀಗಳು

ಆದರೆ ಕೆಲವು ವರ್ಷಗಳ ಹಿಂದೆ ಇಲ್ಲಿರುವ ಮೌಢ್ಯವನ್ನು ಹೋಗಲಾಡಿಸುವ ಸಲುವಾಗಿ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮಿಗಳು ಚಾಮರಾಜನಗರದಿಂದ ಸುಮಾರು ಇಪ್ಪತ್ತು ಮಂದಿ ಮಹಿಳೆಯರನ್ನು ಬೆಟ್ಟಕ್ಕೆ ಕರೆದೊಯ್ದು ಪೂಜೆ ಸಲ್ಲಿಸಿ ಬಂದಿದ್ದರು. ಆ ನಂತರ ಯಾವುದೇ ಮಹಿಳೆಯರು ಭೇಟಿ ನೀಡಿ ಪೂಜೆ ಸಲ್ಲಿಸಿಲ್ಲ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಯಾವುದೇ ಮಹಿಳೆಯರು ಇಲ್ಲಿಗೆ ತೆರಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕೊಂಗಳ್ಳಿ ಮಲ್ಲಪ್ಪನ ಬೆಟ್ಟವು ಗಡಿಪ್ರದೇಶದಲ್ಲಿರುವುದರಿಂದ ಅಲ್ಲದೆ ತಮಿಳುನಾಡಿಗೆ ಒಳಪಡುವುದರಿಂದ ದೇವಾಲಯವು ತಮಿಳುನಾಡಿನ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಆದರೆ ಅರ್ಚಕರು ಕರ್ನಾಟಕದವರಾಗಿದ್ದು, ದೇವಸ್ಥಾನದ ಫಲಕ ಎಲ್ಲವೂ ಕನ್ನಡ ಭಾಷೆಯಲ್ಲಿಯೇ ಇದೆ. ಇಲ್ಲಿ ಸರ್ಕಾರ ಭಕ್ತರಿಗೆ ಅನುಕೂಲವಾಗುವಂತೆ ವಸತಿ ಗೃಹ, ಶೌಚಾಲಯ, ವಿದ್ಯುತ್ ವ್ಯವಸ್ಥೆ, ರಸ್ತೆ ವ್ಯವಸ್ಥೆ ಹೀಗೆ ಹಲವು ಮೂಲಸೌಲಭ್ಯಗಳನ್ನು ಕಲ್ಪಿಸಿದೆ.

ಭಕ್ತರಿಗೆ ರಾತ್ರಿ ಪ್ರವೇಶಕ್ಕೆ ನಿರ್ಬಂಧ

ಭಕ್ತರಿಗೆ ರಾತ್ರಿ ಪ್ರವೇಶಕ್ಕೆ ನಿರ್ಬಂಧ

ವರ್ಷದ ಮಾರ್ಚ್ ನಲ್ಲಿ ಕೊಂಡೋತ್ಸವ, ಹಾಲರಿವೆ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆಗಳು, ದೀಪಾವಳಿ ಸಂದರ್ಭ ಹುಲಿವಾನ ಸೇರಿದಂತೆ ಹಲವು ಸೇವೆಗಳನ್ನು ಭಕ್ತರು ಮಾಡುತ್ತಾರೆ. ಮೊದಲೆಲ್ಲ ಕಾರ್ತಿಕ ಮಾಸದಲ್ಲಿ ಮೈಸೂರು, ಮಂಡ್ಯ, ತುಮಕೂರು ಹೀಗೆ ಹಲವು ಕಡೆಗಳಿಂದ ಭಕ್ತರು ಆಗಮಿಸಿ ರಾತ್ರಿ ಉಳಿದುಕೊಂಡು ಎಲ್ಲರೂ ಒಟ್ಟಾಗಿ ಸೇರಿ ಅಡುಗೆ ಮಾಡಿ ಊಟ ಮಾಡಿ ತೆರಳುವ ಸಂಪ್ರದಾಯವೂ ಇತ್ತು. ಆದರೆ ಕೊರೊನಾದ ಕಾರಣದಿಂದಾಗಿ ಮತ್ತು ಈ ಅರಣ್ಯವಲಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಒಳಪಡುವ ಕಾರಣದಿಂದ ಭಕ್ತರಿಗೆ ಈಗ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಮಾತ್ರ ಭೇಟಿ ನೀಡಿ ಹಿಂತಿರುಗಬೇಕು. ರಾತ್ರಿ 6 ಗಂಟೆಯ ನಂತರ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ.

ಸದಾ ಪೇಟೆ ಪಟ್ಟಣಗಳ ಗೌಜು ಗದ್ದಲಗಳಲ್ಲಿಯೇ ತಮ್ಮನ್ನು ತೊಡಗಿಸಿಕೊಂಡವರು. ಒಂದಷ್ಟು ಸಮಯವನ್ನು ನಿಸರ್ಗದ ಪ್ರಶಾಂತ ಮಡಿಲಲ್ಲಿ ಕಳೆದುಕೊಂಡು ಬರುತ್ತೇನೆ ಎನ್ನುವವರು ಇಲ್ಲಿಗೆ ಭೇಟಿ ನೀಡಿದ್ದೇ ಆದರೆ, ಒಂದಷ್ಟು ಮನಃಶಾಂತಿ ಪಡೆದು ಬರುವುದರಲ್ಲಿ ಸಂಶಯವಿಲ್ಲ.

English summary
The rare Kongalli Mallappa's Hill, located on the border of Karnataka and Tamil Nadu, is also a popular hill for trekkers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X