ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ದಲಿತ ಮತ ತಂದು ಕೊಡ್ತಾರಾ ಎನ್. ಮಹೇಶ್?

|
Google Oneindia Kannada News

ಮೈಸೂರು, ಏಪ್ರಿಲ್ 26: ಹಳೇ ಮೈಸೂರು ವ್ಯಾಪ್ತಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಅತಿ ಹೆಚ್ಚು ಸ್ಥಾನಗಳನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿಜೆಪಿ ಬಿದ್ದಿದೆ. ಹೀಗಾಗಿ ಹಲವು ತಂತ್ರಗಳನ್ನು ಈಗಿನಿಂದಲೇ ಆರಂಭಿಸಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಇನ್ನೂ ಪ್ರಬಲವಾಗಿಲ್ಲ. ಇಲ್ಲಿ ಏನೇ ಮಾಡಿದರೂ ಗಟ್ಟಿಯಾಗಿ ತಳವೂರುವುದಕ್ಕೆ ಬಿಜೆಪಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಪ್ರಾಬಲ್ಯ ಮೆರೆದಿವೆ. ಆದ್ದರಿಂದ ಅವೆರಡು ಪಕ್ಷಕ್ಕೆ ಪೈಪೋಟಿ ನೀಡಬೇಕಾದರೆ ಏನು ಮಾಡಬೇಕು? ಯಾವ ತಂತ್ರ ಫಲಿಸಬಹುದು? ಹೀಗೆ ಪಕ್ಷದೊಳಗೆ ಅದಾಗಲೇ ಚರ್ಚೆಗಳು ಶುರುವಾಗಿದೆ.

ರಾಜಕೀಯ ವಿಶೇಷ: ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ಎಚ್.ಡಿ. ಕುಮಾರಸ್ವಾಮಿರಾಜಕೀಯ ವಿಶೇಷ: ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ಎಚ್.ಡಿ. ಕುಮಾರಸ್ವಾಮಿ

 ಆಪರೇಷನ್ ಕಮಲ ಅನಿವಾರ್ಯ

ಆಪರೇಷನ್ ಕಮಲ ಅನಿವಾರ್ಯ

ಸದ್ಯಕ್ಕೆ ಈ ಭಾಗದಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೆಳೆಯುವುದು ಅರ್ಥಾತ್ ಆಪರೇಷನ್ ಕಮಲ ಮಾಡುವುದು ಮೊದಲ ಆದ್ಯತೆಯಾಗಿದೆ. ಇದೆಲ್ಲದರ ನಡುವೆ ಹಿಂದುಳಿದ, ದಲಿತರ ಮತಗಳನ್ನು ಕಲೆಹಾಕುವ ಕಾರ್ಯವೂ ಸದ್ದಿಲ್ಲದೆ ಆಗುತ್ತಿದೆ. ಆ ಕೆಲಸವನ್ನು ದಲಿತ ನಾಯಕ, ಅಂಬೇಡ್ಕರ್ ವಾದಿ, ಮಾಜಿ ಸಚಿವ ಎನ್. ಮಹೇಶ್ ಮಾಡುತ್ತಿದ್ದಾರೆ.

ಎನ್. ಮಹೇಶ್ ಅವರು ಅಂಬೇಡ್ಕರ್ ವಿಚಾರವನ್ನು ಪ್ರತಿಪಾದಿಸಿಕೊಂಡು ಬಂದವರು. ಕಾಂಗ್ರೆಸ್ ಅಂಬೇಡ್ಕರ್‌ನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಬಿಎಸ್‌ಪಿ ಪಕ್ಷವನ್ನು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕಟ್ಟಿ ಬೆಳೆಸುವ ಪಣತೊಟ್ಟರು. ನಾಲ್ಕು ಬಾರಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ ಪಕ್ಷವನ್ನು ಸಂಘಟಿಸಿ ಕಳೆದ ಬಾರಿ ಬಿಎಸ್‌ಪಿಯಿಂದಲೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದಿಂದ ಗೆಲುವು ಪಡೆದಿದ್ದರು.

 ರಹಸ್ಯ ಬಿಚ್ಚಿಟ್ಟ ಎನ್. ಮಹೇಶ್

ರಹಸ್ಯ ಬಿಚ್ಚಿಟ್ಟ ಎನ್. ಮಹೇಶ್

ಇದಾದ ನಂತರದ ಬೆಳವಣಿಯಲ್ಲಿ ಅವರು ಬಿಜೆಪಿ ಸೇರುತ್ತಾರೆ ಎಂದಾಗ ಜನ ಹೌಹಾರಿದ್ದರು. ಕಾರಣ ಪಕ್ಕಾ ಅಂಬೇಡ್ಕರ್ ವಾದಿ, ಅದು ಹೇಗೆ ಬಿಜೆಪಿಗೆ ಹೊಂದಿಕೆಯಾಗುತ್ತಾರೆ ಎಂದು ಮಾತನಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ದಲಿತರ ವಿರೋಧ ಕಟ್ಟಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಸದ್ಯಕ್ಕೆ ಅದ್ಯಾವುದೂ ಆದಂತೆ ಕಾಣುತ್ತಿಲ್ಲ.

ಈಗಾಗಲೇ ಹಳೇ ಮೈಸೂರು ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿರುವ ಅವರು ಸದ್ಯ ಹಾಸನ ಮತ್ತು ಮೈಸೂರಿನಲ್ಲಿ ತನ್ನ ಅನುಯಾಯಿಗಳನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾಗಾದರೆ ಮಹೇಶ್ ಅವರು ಬಿಎಸ್‌ಪಿಯನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇಕೆ ಎಂಬ ಪ್ರಶ್ನೆಗಳು ಮೂಡುವುದು ಸಹಜವೇ? ಇದೀಗ ತಾನೇಕೆ ಬಿಜೆಪಿಗೆ ಸೇರಿದೆ ಎಂಬುದನ್ನು ಅವರು ತಮ್ಮ ಬೆಂಬಲಿಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 ಪಟ್ಟಭದ್ರ ಹಿತಾಶಕ್ತಿಗಳಿಂದ ಪಿತೂರಿ

ಪಟ್ಟಭದ್ರ ಹಿತಾಶಕ್ತಿಗಳಿಂದ ಪಿತೂರಿ

ರಾಜಕೀಯವಾಗಿ ನನ್ನನ್ನು ಮುಗಿಸಲು ಪಟ್ಟಭದ್ರ ಹಿತಾಶಕ್ತಿಗಳು ಪಿತೂರಿ ನಡೆಸಿದ ಪರಿಣಾಮ ಮಾಯಾವತಿ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದರು. ಪಕ್ಷದಿಂದ ತೆಗೆದ ಮೇಲೆ ನಾನೇನು ಮಾಡಬೇಕು. ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯವಾಗಿ ನನ್ನನ್ನು ಅಪ್ರಸ್ತುತವಾಗಿ ಮಾಡಲು ಪಿತೂರಿ ಮಾಡುತ್ತಿರುವಾಗ ರಾಜಕಾರಣದಲ್ಲಿ ಪ್ರಸ್ತುತವಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದು, ಜತೆಗೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾದ ಕಾರಣ ಎರಡು ವರ್ಷಗಳ ಕಾಲ ಸುಮ್ಮನೆ ಇದ್ದು, ನಂತರ ಬಿಜೆಪಿಗೆ ಸೇರ್ಪಡೆಗೊಂಡೆ ಎಂಬ ವಿಚಾರವನ್ನು ಹೊರಹಾಕಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್‌ಗೆ ಅಗೌರವ ತೋರಿದ ಕಾಂಗ್ರೆಸ್‌ನ್ನು ನಾನು ವಿರೋಧಿಸಿಕೊಂಡು ಬಂದಿರುವ ಕಾರಣ, ಆ ಪಕ್ಷಕ್ಕೆ ಹೋಗುವುದು ಇಷ್ಟವಿರಲಿಲ್ಲ. ಇದೆಲ್ಲದರ ನಡುವೆ ಬಿಜೆಪಿ ಸರ್ಕಾರ ಅಂಬೇಡ್ಕರ್‌ಗೆ ದೊಡ್ಡ ಪ್ರಮಾಣದ ಗೌರವ, ಸನ್ಮಾನವನ್ನು ಕೊಟ್ಟಿದೆ ಹಾಗಾಗಿ ಪಕ್ಷಕ್ಕೆ ಸೇರ್ಪಡೆಯಾದೆ ಎಂಬ ವಿಚಾರವನ್ನು ಅವರು ಹೊರಹಾಕಿದ್ದಾರೆ.

 ಬಿಜೆಪಿ ಪಕ್ಷಕ್ಕೆ ಲಾಭ ತರುತ್ತಾ?

ಬಿಜೆಪಿ ಪಕ್ಷಕ್ಕೆ ಲಾಭ ತರುತ್ತಾ?

ಇನ್ನು ಮಹೇಶ್ ಅವರು ಕಟ್ಟಾ ಕಾಂಗ್ರೆಸ್ ವಿರೋಧಿ ಎಂಬುದನ್ನು ಹೊರ ಹಾಕಿದ್ದು, ನಾನು 21 ವರ್ಷಕ್ಕೆ ಕಾಲಿಟ್ಟು ಮತ ಚಲಾಯಿಸಲು ಆರಂಭಿಸಿದ ದಿನದಿಂದ 2018ರವರೆಗೆ ಕಾಂಗ್ರೆಸ್ ಹೊರತುಪಡಿಸಿ ಬೇರೆಲ್ಲಾ ಪಕ್ಷಗಳಿಗೆ ಮತ ಚಲಾಯಿಸಿದ್ದೇನೆ. ಜನತಾಪಾರ್ಟಿ, ಜನತಾದಳ, ಬಿಎಸ್‌ಪಿಗೆ ಮತ ಹಾಕಿದ್ದೇನೆ. ಅಂಬೇಡ್ಕರ್ ಇದ್ದಾಗ ಗೌರವ ಕೊಡದ ಮತ್ತು ಮೃತರಾದ ಮೇಲೂ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ಬಂದಿದ್ದೇನೆ ಹಾಗಾಗಿ ಬಿಜೆಪಿಯನ್ನು ಸೇರುವ ಮೂಲಕ ಪಕ್ಷವನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿರುವುದಾಗಿ ಹೇಳಿದ್ದಾರೆ.

ಬಿಜೆಪಿಗೆ ದಲಿತ ಮುಖಂಡರ ಅಗತ್ಯತೆ ಹೆಚ್ಚಿದೆ. ಹೀಗಾಗಿ ಎನ್. ಮಹೇಶ್ ಅವರಿಗೆ ಪಕ್ಷದ ಹಿರಿಯ ಮುಖಂಡರ ಅಭಯವಿದೆ. ಮುಂದಿನ ದಿನಗಳಲ್ಲಿ ಅವರ ಮುಖಂಡತ್ವದಲ್ಲಿ ದಲಿತರು ಪಕ್ಷಕ್ಕೆ ಸೇರ್ಪಡೆಯಾದರೆ ಅದರ ಲಾಭ ಬಿಜೆಪಿಗೆ ಆಗುವುದರಲ್ಲಿ ಎರಡು ಮಾತಿಲ್ಲ.

English summary
Under the Former Minister N Mahesh an attempt is being made to draw the backward and dalits votes into the BJP in Old Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X