ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪಿನ ತೋರಣದಲ್ಲಿ ಕೊಡಗಿನ ಮಳೆಯೂ... ಭತ್ತದ ಕೃಷಿಯೂ...

|
Google Oneindia Kannada News

ಭತ್ತದ ಕೃಷಿಯೇ ಜೀವಾಳವಾಗಿದ್ದ ಕೊಡಗಿನಲ್ಲಿ ಹಬ್ಬ ಹರಿದಿನಗಳೆಲ್ಲವೂ ಅದರ ಸುತ್ತಲೇ ಆಚರಣೆಯಾಗುತ್ತಿತ್ತು. ಅಷ್ಟೇ ಅಲ್ಲ, ಮಳೆಗಾಲವೂ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತಿತ್ತು. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಿದ್ದರು. ಅಲ್ಲಿಂದ ಶುರುವಾದ ಗದ್ದೆಯಲ್ಲಿ ಕೃಷಿ ಚಟುವಟಿಕೆ ಮುಗಿಯುತ್ತಿದ್ದದ್ದು ಆಗಸ್ಟ್ ತಿಂಗಳ ಕೊನೆಯಲ್ಲಿ...

ಮುಂಗಾರು ಆರಂಭಗೊಳ್ಳುತ್ತಿದೆ ಎನ್ನುವಾಗಲೇ ಇಲ್ಲಿನ ಜನ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮಳೆಗಾಲವೂ ಮೊದಲಿನಂತಿಲ್ಲ. ಯಾವಾಗ ಬರುತ್ತೆ? ಯಾವಾಗ ಹೋಗುತ್ತೆ ಎಂಬುದೇ ಗೊತ್ತಾಗುವುದಿಲ್ಲ. ಬಂದರೂ ಅನಾಹುತ... ಬಾರದಿದ್ದರೂ ಅನಾಹುತವೇ... ಈಗ ಇಂತಹ ಪರಿಸ್ಥಿತಿಯೊಂದು ನಿರ್ಮಾಣವಾಗಿ ಹೋಗಿದೆ.

 ಭತ್ತದ ಕೃಷಿಯೇ ಪ್ರಧಾನವಾಗಿದ್ದ ಕಾಲವದು...

ಭತ್ತದ ಕೃಷಿಯೇ ಪ್ರಧಾನವಾಗಿದ್ದ ಕಾಲವದು...

ಭತ್ತದ ಕೃಷಿಯೇ ಪ್ರಧಾನವಾಗಿದ್ದ ಆ ಕಾಲದಲ್ಲಿ ಮಳೆಗಾಲ ಆರಂಭವಾಯಿತೆಂದರೆ ಜನರು ಭತ್ತದ ಕೃಷಿಗೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿಬಿಡುತ್ತಿದ್ದರು. ಗದ್ದೆ ಉಳುಮೆ ಮಾಡುವುದು, ಗೊಬ್ಬರ ಹರಡುವುದು, ಗದ್ದೆ ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವುದು ಹೀಗೆ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿರುವ ದೃಶ್ಯಗಳು ಗೋಚರಿಸುತ್ತಿದ್ದವು. ಜೂನ್ ಆರಂಭದಿಂದ ಆಗಸ್ಟ್ ತಿಂಗಳ ತನಕವೂ ವಿಶಾಲ ಗದ್ದೆ ಬಯಲುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದ ಜನರು ಕಂಡುಬರುತ್ತಿದ್ದರು. ಮಳೆಯಿರಲಿ ಇಲ್ಲದಿರಲಿ ಜನ ಮಾತ್ರ ತಮ್ಮ ಕೆಲಸವನ್ನು ನಿಲ್ಲಿಸುತ್ತಿರಲಿಲ್ಲ.

ಗತಕಾಲದ ಮಳೆಯ ದಿನವನ್ನು ಮೆಲುಕು ಹಾಕಿಸಿದ ಮಡಿಕೇರಿ ಮಳೆಗತಕಾಲದ ಮಳೆಯ ದಿನವನ್ನು ಮೆಲುಕು ಹಾಕಿಸಿದ ಮಡಿಕೇರಿ ಮಳೆ

ಇದರ ಜೊತೆಗೆ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರಿಂದ ಅವರೇ ಬಹಳಷ್ಟು ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಹೆಚ್ಚಿನ ಗದ್ದೆ ಹೊಂದಿದ್ದವರು ಇತರೆ ಕುಟುಂಬಗಳ ಜೊತೆ ಕೂಡು ಆಳುಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ಹೆಂಗಸರು ಪೈರು ಕೀಳುವ ಕೆಲಸ ಮಾಡಿದರೆ ಗಂಡಸರು ನಾಟಿ ಮಾಡುತ್ತಿದ್ದರು. ಗದ್ದೆಗಳಲ್ಲಿ ನಾಟಿ ಮಾಡುವುದೆಂದರೆ ಆನಂದವೋ ಆನಂದ... ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಯಾರೂ ಸುಮ್ಮನೆ ಹಾದು ಹೋಗುತ್ತಿರಲಿಲ್ಲ. ಗದ್ದೆಗಿಳಿದು ಸ್ವಲ್ಪ ನಾಟಿ ನೆಟ್ಟು ಹೋಗುತ್ತಿದ್ದರು.

 ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದರು

ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದರು

ಹೆಚ್ಚಿನ ಜನರು ಗದ್ದೆಯನ್ನು ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿದ್ದರು. ಮುಂಜಾನೆ ಐದು ಗಂಟೆಗೆಲ್ಲ ಉಳುಮೆಗೆ ಗದ್ದೆಗಿಳಿದು ಬಿಡುತ್ತಿದ್ದರು. ಆಗೆಲ್ಲ ವಾರಾನುಗಟ್ಟಲೆ ಮಳೆ ಬಿಡುವು ನೀಡದೆ ಒಂದೇ ಸಮನೆ ಸುರಿಯುತ್ತಿತ್ತು. ಆದರೆ ಅದನ್ನು ಲೆಕ್ಕಿಸದೆ ಸುರಿಯುವ ಮಳೆಯಲ್ಲೇ ಮುಂಜಾನೆ ಐದಕ್ಕೆ ಉಳುಮೆ ಶುರು ಮಾಡಿ ಹತ್ತು, ಹನ್ನೊಂದು ಗಂಟೆಗೆ ಉಳುಮೆ ನಿಲ್ಲಿಸುತ್ತಿದ್ದರು. ದೊಡ್ಡ ಗದ್ದೆಗಳಲ್ಲಿ ಹತ್ತಾರು ಜನ ಹರಟೆ ಹೊಡೆಯುತ್ತಾ ಜೋಕ್ ಮಾಡುತ್ತಾ ಹಳೆಯ ಕಥೆಗಳನ್ನು ಹೇಳುತ್ತಾ ಖುಷಿ ಖುಷಿಯಾಗಿ ನಾಟಿ ಮಾಡುತ್ತಿದ್ದರು.

ಪೊಲೀಸ್, ಸೇನೆ, ಇನ್ನಿತರ ಕೆಲಸಗಳ ಮೇಲೆ ಊರಿಂದ ಹೊರಗೆ ಹೋದವರು ನಾಟಿ ಸಮಯದಲ್ಲಿ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲ ತಾವು ಕೂಡ ಗದ್ದೆಗಳಲ್ಲಿ ನಾಟಿ ಮಾಡುತ್ತಿದ್ದರು. ಸಾಮಾನ್ಯವಾಗಿ ಎಷ್ಟೇ ಓದಿದ್ದರೂ ಹೆಣ್ಣು ಮಕ್ಕಳು ಪೈರು ಕೀಳುವುದನ್ನು, ಗಂಡು ಮಕ್ಕಳು ನಾಟಿ ನೆಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಬಿಡುತ್ತಿದ್ದರು. ಅವತ್ತಿಗೆ ಎಷ್ಟು ಎಕರೆ ಗದ್ದೆಯಿದೆ ಎಂಬುದರ ಮೇಲೆ ಆತನ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು. ಅದರಲ್ಲೂ ನೀರಾವರಿ ಭೂಮಿಯಿದ್ದರಂತೂ ಆತನ ಬಗ್ಗೆ ಮಾತನಾಡುವಂತಿರಲಿಲ್ಲ.

 ನಾಟಿ ಓಟದಲ್ಲಿ ಪ್ರತಿಭೆ ಅನಾವರಣ

ನಾಟಿ ಓಟದಲ್ಲಿ ಪ್ರತಿಭೆ ಅನಾವರಣ

ನಾಟಿಗೆ ತುಂಬಾ ಜನ ಸೇರುತ್ತಿದ್ದರು. ದೊಡ್ಡ ನಾಟಿಯಂದು ಭೂರಿ ಭೋಜನ ನಡೆಯುತ್ತಿತ್ತು. ಗದ್ದೆಯಲ್ಲಿ ಕೊಡಿನಾಟಿ ನೆಡುವ ಪರಿಣತರಿದ್ದರು. ಅದು ಗದ್ದೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗದ್ದೆಯನ್ನು ವಿಭಜಿಸಿ ಎದ್ದು ಕಾಣುತ್ತಿತ್ತು. ಆ ನಂತರ ದೊಡ್ಡಗದ್ದೆಯಲ್ಲಿ ನಾಟಿಯ ಬಳಿಕ ಓಟ ನಡೆಯುತ್ತಿತ್ತು. ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನ ಕಾಯಿ ನೀಡಿ ಗೌರವಿಸಲಾಗುತ್ತಿತ್ತು.

ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ

ಇನ್ನು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದ್ದುದರಿಂದ ಜತೆಗೆ ಮರಕಾಡು ದಟ್ಟವಾಗಿ ಇದ್ದುರಿಂದ ಕಾಫಿಗಿಂತ ಹೆಚ್ಚಾಗಿ ಏಲಕ್ಕಿಯನ್ನು ಬೆಳೆಯಲಾಗುತ್ತಿತ್ತು. ದಟ್ಟ ಕಾಡುಗಳ ನಡುವೆ ಏಲಕ್ಕಿ ಹುಲುಸಾಗಿ ಬೆಳೆಯುತ್ತಿತ್ತು. ಅಷ್ಟೇ ಅಲ್ಲದೆ ಅದಕ್ಕೆ ಹೆಚ್ಚಿನ ಬೇಡಿಕೆಯೂ ಇತ್ತು. ಅವತ್ತಿನ ಮಟ್ಟಿಗೆ ಭತ್ತದ ಹೆಚ್ಚಿನವರು ಏಲಕ್ಕಿ ಬೆಳೆಯುತ್ತಿದ್ದರು. ಕಾಫಿ ಬೆಳೆಯ ಬೇಕಾದರೆ ಕೆಲವೊಂದು ನಿಬಂಧನೆಗಳಿದ್ದುದರಿಂದ ಆ ಬಗ್ಗೆ ಜನ ತಲೆ ಕೆಡಿಸಿಕೊಂಡಿರಲಿಲ್ಲ.

 ಬದಲಾವಣೆ ತಂದ ಕಾಫಿ ದರ ಏರಿಕೆ

ಬದಲಾವಣೆ ತಂದ ಕಾಫಿ ದರ ಏರಿಕೆ

ಗದ್ದೆಯಲ್ಲಿ ನಾಟಿ ಕೆಲಸ ಮುಗಿಸಿ ಏಲಕ್ಕಿ ತೋಟದ ಕೆಲಸ ಮಾಡುತ್ತಿದ್ದರು. ಆಗಸ್ಟ್ ಸೆಪ್ಟಂಬರ್ ವೇಳೆಗೆ ಏಲಕ್ಕಿ ಫಸಲಿಗೆ ಬರುತ್ತಿತ್ತು. ಜತೆಗೆ ಒಂದಷ್ಟು ಆದಾಯವನ್ನು ತಂದುಕೊಡುತ್ತಿತ್ತು. ಏಲಕ್ಕಿ ಬೆಳೆಗಾರ ಶ್ರೀಮಂತನಾಗಿಯೇ ಇದ್ದ. ಆಧುನಿಕತೆ ಅಷ್ಟೊಂದು ಬೆಳೆಯದ ಕಾರಣದಿಂದಾಗಿ ಅದಕ್ಕೆ ರೋಗಗಳು ಅಷ್ಟೊಂದಾಗಿ ತಗುಲಿರಲಿಲ್ಲ. ಆದರೆ 90ರ ದಶಕದ ನಂತರ ಕೊಡಗಿನಲ್ಲಿ ಒಂದಷ್ಟು ಬದಲಾವಣೆಗಳಾದವು. ಅದು ಏನೆಂದರೆ, ಬ್ರೆಜಿಲ್ ನಲ್ಲಿ ಶೀತ ಹವೆಯಿಂದ ಕಾಫಿ ನೆಲಕಚ್ಚಿತ್ತು. ಇದೇ ವೇಳೆಗೆ ಭಾರತದಲ್ಲಿಯೂ ಕಾಫಿ ಮಂಡಳಿಯ ಮುಷ್ಟಿಯಲ್ಲಿದ್ದ ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ತರುವಂತೆ ಹೋರಾಟಗಳು ಆರಂಭವಾಗಿದ್ದವು. ಅದು ಫಲಕೊಟ್ಟು ಕಾಫಿ ಮುಕ್ತ ಮಾರುಕಟ್ಟೆಗೆ ಬಂದಿತ್ತು. ಜತೆಗೆ ಕಾಫಿಗೂ ಮೊದಲಿದ್ದ ಬೆಲೆಗಿಂತ ಎಂಟತ್ತು ಪಟ್ಟು ಬೆಲೆ ಜಾಸ್ತಿಯಾಗಿತ್ತು.

 ನೇಪಥ್ಯಕ್ಕೆ ಸರಿದ ಏಲಕ್ಕಿ ಕೃಷಿ

ನೇಪಥ್ಯಕ್ಕೆ ಸರಿದ ಏಲಕ್ಕಿ ಕೃಷಿ

ಇದ್ದಕ್ಕಿದ್ದಂತೆ ಜನರಿಗೆ ಕಾಫಿ ತೋಟದತ್ತ ವ್ಯಾಮೋಹ ಜಾಸ್ತಿಯಾಯಿತು. ಅದೇ ವೇಳೆಗೆ ಏಲಕ್ಕಿಗೂ ಕಟ್ಟೆರೋಗ ಆರಂಭವಾಗಿ ಅದನ್ನು ಬೆಳೆಯುವುದು ಕಷ್ಟವಾಗಿ ಕಾಣತೊಡಗಿತು. ಮಳೆಯ ಅನಿಶ್ಚಿತತೆಯೂ ಇದೇ ವೇಳೆಗೆ ಆರಂಭವಾಗಿತ್ತು. ಮಳೆಯ ನೀರನ್ನೇ ನಂಬಿ ಭತ್ತ ಬೆಳೆಯುತ್ತಿದ್ದ ರೈತನಿಗೂ ಸಮಸ್ಯೆಗಳು ಆರಂಭವಾಗಿದ್ದವು. ಒಂದಡೆ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರೆ ಮತ್ತೊಂದೆಡೆ ಭತ್ತದ ಗದ್ದೆಯನ್ನು ಕೂಡ ಕಾಫಿ ತೋಟವನ್ನಾಗಿ ಮಾಡಲು ರೈತರು ಮುಂದಾದರು. ಇದೆಲ್ಲವೂ ಸಮಾರೋಪಾದಿಯಲ್ಲಿ ಸಾಗುತ್ತಿರುವಾಗಲೇ ಕೇರಳದಿಂದ ಶುಂಠಿ ಬೆಳೆಯಲು ಬೆಳೆಗಾರರು ಕೊಡಗಿನತ್ತ ಬಂದರು. ಅವರಿಗೆ ತಮ್ಮ ಗದ್ದೆಯನ್ನು ಗುತ್ತಿಗೆಗೆ ನೀಡಿದ ಕೆಲವು ರೈತರು ಕ್ರಮೇಣ ತೋಟ ಮಾಡಿದರು.

 ಗದ್ದೆಗಳು ತೋಟಗಳಾಗಿ ಪರಿವರ್ತನೆ

ಗದ್ದೆಗಳು ತೋಟಗಳಾಗಿ ಪರಿವರ್ತನೆ

ಇದೆಲ್ಲದರ ನಡುವೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗತೊಡಗಿತು. ಕೂಲಿ ದರವೂ ಹೆಚ್ಚಳವಾಯಿತು. ಹೀಗಾಗಿ ಲಾಭ ನಷ್ಟಗಳ ಲೆಕ್ಕಾಚಾರ ಮಾಡಿದ ಬಹಳಷ್ಟು ರೈತರು ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಪಾಳು ಬಿಟ್ಟರು. ಇನ್ನು ಕೆಲವರು ನಿವೇಶನಗಳನ್ನಾಗಿ ಪರಿವರ್ತಿಸಿದರು. ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುತ್ತಿರುವ ರೈತ ಈಗ ಸಂಕಷ್ಟವನ್ನೇ ಅನುಭವಿಸುತ್ತಿದ್ದಾನೆ.

 ವಾಣಿಜ್ಯ ಬೆಳೆಗಳ ನಡುವೆ ಕುಗ್ಗಿದ ಭತ್ತದ ಕೃಷಿ

ವಾಣಿಜ್ಯ ಬೆಳೆಗಳ ನಡುವೆ ಕುಗ್ಗಿದ ಭತ್ತದ ಕೃಷಿ

ಮೊದಲಿಗೆ ಮಳೆ ಬಾರದೆ ನೀರಿಲ್ಲದೆ ಸಂಕಷ್ಟ ಅನುಭವಿಸಿದರೆ, ಇನ್ನೊಮ್ಮೆ ಮಳೆ ಜಾಸ್ತಿಯಾಗಿ ಮಾಡಿದ್ದೆಲ್ಲವೂ ನೀರು ಪಾಲಾಗುತ್ತದೆ. ಹೆಚ್ಚಿನವರು ಗದ್ದೆಯನ್ನು ತೋಟವನ್ನಾಗಿ ಮಾಡಿ ಸ್ವಲ್ಪವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಎಲ್ಲರೂ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಹೆಚ್ಚು ಬಂಡವಾಳ ಸುರಿದು ಹೆಚ್ಚು ಆದಾಯ ತರುವ ಬಗ್ಗೆ ಯೋಚಿಸತೊಡಗಿದ್ದಾರೆ. ಹೀಗಾಗಿ ಭತ್ತ ಕೊಡಗಿನ ಮಟ್ಟಿಗೆ ಹೇಳುವುದಾದರೆ ದೊಡ್ಡ ಮಟ್ಟದ ಆದಾಯ ತರುವಷ್ಟರ ಮಟ್ಟಿಗಿನ ಕೃಷಿಯಾಗಿ ಉಳಿದಿಲ್ಲ. ಹೀಗಾಗಿ ಅದರ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಹೋಗುತ್ತಿದೆ... ನೆನಪುಗಳಷ್ಟೆ ಉಳಿಯುತ್ತಿದೆ...

English summary
Paddy cultivation starts with the rain in kodagu. Most of the rituals of Kodagu people surrounded by this. But these beautiful experiences becoming memories...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X