ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕೃತಿಯೇ ಮುನಿದು ನಿಂತರೆ ಬದುಕುವುದಾದರೂ ಹೇಗೆ?

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಆಗಸ್ಟ್ 22: ಕೊಡಗಿನಲ್ಲಿ ಹುಟ್ಟಿದವರು ಸುರಕ್ಷಿತರು, ಕಾವೇರಮ್ಮ ಕಾಪಾಡುತ್ತಾಳೆ ಎಂಬೆಲ್ಲ ಮಾತುಗಳನ್ನು ಕೇಳುತ್ತಲೇ ಇಲ್ಲಿನವರು ಬೆಳೆದಿದ್ದರು. ಮಳೆ ಬಾರದಿದ್ದಾಗ ಮಳೆದೇವರಾದ ಇಗ್ಗುತ್ತಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದರು. ಮಳೆ ಹೆಚ್ಚಾಗಿ ಸಾಕಪ್ಪಾ ಎನಿಸಿದಾಗ ಆತನಿಗೆ ಮತ್ತೆ ಪ್ರಾರ್ಥನೆ ಸಲ್ಲಿಸಿ ಶಾಂತನಾಗುವಂತೆ ಬೇಡಿಕೊಳ್ಳುತ್ತಿದ್ದರು.

ಕೊಡಗಿನ ಪ್ರಕೃತಿಯೂ ಅಷ್ಟೇ. ಮಳೆಗಾಲದಲ್ಲಿ ರಚ್ಚೆ ಹಿಡಿದಂತೆ ವರುಣ ಆರ್ಭಟಿಸಿದಷ್ಟೂ ಚೆಂದ. ಆ ಮಳೆಯ ಸೊಬಗನ್ನು ಸವಿಯಲೆಂದೇ ದೂರದೂರಿಂದ ಪ್ರವಾಸಿಗರು ಕೊಡಗಿನತ್ತ ಪ್ರಯಾಣಿಸುತ್ತಿದ್ದರು.

ಬಿರು ಬೇಸಿಗೆಯಲ್ಲಿಯೂ ಕೊಡಗಿನ ಪರಿಸರ ಹಿತ. 'ಭೂಮಿ ತಬ್ಬಿದ್ ಮೋಡಿದ್ದಂಗೆ, ಬೆಳ್ಳಿ ಬಳ್ದಿದ್ ರೋಡಿದ್ದಂಗೆ..... ಮಡಿಕೇರಿ ಮೇಲ್ಮಂಜು' ಎಂಬ ಜಿ.ಪಿ. ರಾಜರತ್ನಂ ಅವರ ಸಾಲುಗಳನ್ನು ಗುನುಗುವಂತೆ ಮಾಡುವಂತಿತ್ತು ಕೊಡಗಿನ ಚೆಂದ ಬೀಡು.

ಕೂಜಿಮಲೆ-ಸುಟ್ಟತ್‍ಮಲೆಯಲ್ಲಿ ಮತ್ತೆ ಹರಳುಕಲ್ಲು ದಂಧೆ!ಕೂಜಿಮಲೆ-ಸುಟ್ಟತ್‍ಮಲೆಯಲ್ಲಿ ಮತ್ತೆ ಹರಳುಕಲ್ಲು ದಂಧೆ!

ಗುಡ್ಡವನ್ನು ಹಸಿರಿನಿಂದ ಅಲಂಕೃತಗೊಳಿಸಿದ ಕಾಫಿ ತೋಟಗಳು ಪ್ರವಾಸಿಗರ ಕಣ್ಣುಗಳಿಗೆ ಮುದ ನೀಡುತ್ತಿದ್ದವು. ಪ್ರವಾಸಿಗರ ದಾಹ ತಣಿಸಲೆಂದೇ ಗುಡ್ಡ ಬೆಟ್ಟಗಳಲ್ಲಿ ಹೋಂ ಸ್ಟೇಗಳು, ಮನೆಗಳು ತಲೆಎತ್ತಿದವು.

ಈಗ ಬೆಳ್ಳಿ ಬಳಿದಿದ್ದಂತಹ ರಸ್ತೆಗಳೆಲ್ಲ ಮಳೆಯಲ್ಲಿ ಕೊಚ್ಚಿಹೋಗಿವೆ. ಕಾಫಿ ಪ್ಲಾಂಟೇಷನ್‌ಗಳು ಗುಡ್ಡಗಳ ಸಮೇತ ಕಾಣೆಯಾಗಿವೆ. ಇಂತಹ ದುರಂತಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರವೂ ಎದುರಿಗಿದೆ.

ಪ್ರಕೃತಿಯ ಒಡನಾಟದಲ್ಲಿ ಬೆಳೆದ ಜನ

ಪ್ರಕೃತಿಯ ಒಡನಾಟದಲ್ಲಿ ಬೆಳೆದ ಜನ

ಗ್ರಾಮಗಳಲ್ಲಿ ನಟ್ಟ ನಡು ಬೇಸಿಗೆಯಲ್ಲೇ ಪೂಜಾ ಕೈಂಕರ್ಯಗಳು ನಡೆದರೂ ಆ ಕಾರ್ಯ ಮುಗಿಯುವ ವೇಳೆಗೆ ನಾಲ್ಕಾರು ಮಳೆ ಹನಿ ಸುರಿದು ಹೋಗುತ್ತಿತ್ತು. ಜನ ಶುಭವಾಗಿದೆ ಎಂದು ಕೊಳ್ಳುತ್ತಿದ್ದರು. ಇಂದಿಗೂ ದಟ್ಟ ಕಾನನದಲ್ಲಿ ದೇವರ ಕಲ್ಲು, ದೇವಸ್ಥಾನಗಳಿವೆ. ಅವುಗಳನ್ನು ಭಕ್ತಿಯಿಂದ ಪೂಜಿಸಿ ವರ್ಷಕ್ಕೊಮ್ಮೆ ಊರವರು ಸೇರಿ ಪೂಜೆ ಮಾಡಿ ಬರುತ್ತಾರೆ.

ತಮ್ಮ ತೋಟಗಳಲ್ಲಿ ಹೆಮ್ಮರದ ಕೆಳಗೆ ಪೂಜೆ ಮಾಡಿ ಪ್ರಕೃತಿ ದೇವರನ್ನು ಒಳ್ಳೆಯದು ಮಾಡುವಂತೆ ಬೇಡಿಕೊಳ್ಳುತ್ತಾರೆ. ಒಂದು ಗಿಡ ಕಡಿದರೂ ಮತ್ತೊಂದು ಗಿಡ ನೆಡುವ ಮನೋಭಾವವಿದೆ. ದಟ್ಟ ಕಾಡು, ಗುಡ್ಡಗಳ ನಡುವೆ ಸದಾ ಪ್ರಕೃತಿ ಮಡಿಲಲ್ಲಿ ಬದುಕುವ ಪ್ರತಿಯೊಬ್ಬರೂ ಇಲ್ಲಿನ ಪ್ರಕೃತಿಯೊಂದಿಗೆ ಅದರ ಒಡನಾಟದಲ್ಲಿ ಬೆಳೆದು ಬಂದಿದ್ದಾರೆ. ಅಂತಹ ಪ್ರಕೃತಿಯೇ ಮುನಿದು ನಿಂತ ಮೇಲೆ ಬದುಕು ಹೇಗೆ ? ಇದು ಪ್ರತಿಯೊಬ್ಬ ಕೊಡಗಿನ ಜನರು ಕೇಳಿಕೊಳ್ಳುತ್ತಿರುವ ಪ್ರಶ್ನೆಯಾಗಿದೆ.

ಒಂದೇ ದಿನ 26 ಜನರನ್ನು ರಕ್ಷಿಸಿದ ನೌಕಾದಳದ ಕ್ಯಾಪ್ಟನ್ ಒಂದೇ ದಿನ 26 ಜನರನ್ನು ರಕ್ಷಿಸಿದ ನೌಕಾದಳದ ಕ್ಯಾಪ್ಟನ್

ಕಷ್ಟ ಪಡುವುದು ಹೊಸತೇನಲ್ಲ...

ಕಷ್ಟ ಪಡುವುದು ಹೊಸತೇನಲ್ಲ...

ಹಾಗೆನೋಡಿದರೆ ಇವತ್ತು ಜಲಪ್ರಳಯಕ್ಕೊಳಗಾಗಿರುವ ಹತ್ತಾರು ಗ್ರಾಮಗಳಲ್ಲಿರುವ ಜನತೆ ತಾವು ನೆಲೆಸಿರುವ ಮನೆಗಳು ಒತ್ತೊತ್ತಾಗಿಲ್ಲ. ಕೆಲವು ಮನೆಗಳು ಕೂಗಳತೆಯಲ್ಲಿದ್ದರೆ, ಮತ್ತೆ ಕೆಲವು ಕಿ.ಮೀ.ಗಟ್ಟಲೆ ದೂರದಲ್ಲಿವೆ. ಅಂತಹ ಮನೆಗಳಲ್ಲಿ ಎಂತಹದ್ದೇ ಸಂಕಟ ಬಂದರೂ ತಾವೇ ಧೈರ್ಯವಾಗಿ ನಿಭಾಯಿಸಿಕೊಳ್ಳಬೇಕಾಗಿದೆ.

ಬೆಂಕಿಪೊಟ್ಟಣವಿಲ್ಲ ಎಂದರೂ ಅವರು ಹತ್ತಾರು ಕಿ.ಮೀ. ಬರಬೇಕು. ಅವರಾರದೂ ಸುಖ ಜೀವನವಲ್ಲ. ಹೊರಪ್ರಪಂಚದಿಂದ ದೂರವಿದ್ದುಕೊಂಡು ತಾವಾಯಿತು ತಮ್ಮ ತೋಟ ಗದ್ದೆಯಾಯಿತು ಎಂಬಂತೆ ದುಡಿಯುತ್ತಾ ಬದುಕಿದವರು. ಅವರಿಗೆ ಕಲ್ಲು, ಮುಳ್ಳು, ಬೆಟ್ಟದ ಹಾದಿಯಲ್ಲಿ ಸಾಗುವುದು ಕಷ್ಟ ಅಂಥ ಇದುವರೆಗೆ ಅನಿಸಿಯೇ ಇಲ್ಲ. ವಿದ್ಯುತ್ ಇಲ್ಲದಿದ್ದರೂ ಬದುಕುತ್ತಾರೆ. ಹಾಲಿಲ್ಲವೆಂದರೂ ಬರೀ ಕಪ್ಪು ಕಾಫಿ ಕುಡಿಯುವುದು ಕಷ್ಟವಲ್ಲ.

ತಮ್ಮ ಸುತ್ತ ಇರುವ ಬೆಟ್ಟಗುಡ್ಡಗಳೇ ಅವರಿಗೆ ತಡೆಗೋಡೆಯಾಗಿದ್ದವು. ಮನೆ ಪಕ್ಕ ಹರಿಯುವ ಜರಿಯೇ ಜೀವಸೆಲೆಯಾಗಿತ್ತು. ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಪಟ್ಟಣಕ್ಕೆ ಬಂದು ತಮಗೆ ಅಗತ್ಯವಿರುವ ಸಾಮಾನುಗಳನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿದ್ದರು. ಬಿಸಿಲಿರಲಿ ಮಳೆಯಿರಲಿ ತಮ್ಮ ಕಾಯಕದಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಇಂತಹವರಿಗೆ ಇವತ್ತು ಬಂದಿರುವ ಸಂಕಟವನ್ನು ಅಷ್ಟು ಸುಲಭವಾಗಿ ಯಾರಿಂದಲೂ ಪರಿಹರಿಸಲು ಸಾಧ್ಯವಿಲ್ಲ.

ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ

ಆ ಘಟನೆ ಕಲ್ಲು ಹೃದಯವನ್ನೂ ಕರಗಿಸುತ್ತದೆ

ಆ ಘಟನೆ ಕಲ್ಲು ಹೃದಯವನ್ನೂ ಕರಗಿಸುತ್ತದೆ

ತಾವು ನೆಲೆಸಿದ್ದ ಊರು ಮತ್ತು ಅದರ ಸುತ್ತ ಇದ್ದಂತಹ ಹತ್ತಾರು ನೆಲೆಗಳು ತಾವೇ ಇಷ್ಟಪಟ್ಟು ಮಾಡಿದ ಮನೆ, ತೋಟಗಳು ಎಲ್ಲವೂ ಮಣ್ಣು ಪಾಲಾಗಿ ಹೋಗಿದೆ ಎಂದರೆ ಅದೆಂತಹ ಆಘಾತವನ್ನು ನೀಡಿರಬಹುದು ಎಂಬುದನ್ನು ಯೋಚಿಸಿದರೆ ಎಂಥ ಕಲ್ಲು ಹೃದಯಗಳಲ್ಲಿಯೂ ಚುರುಕ್ ಎನ್ನದಿರದು. ಬೆಳಗ್ಗೆ ಎದ್ದು ನೋಡುತ್ತಿದ್ದ ಗುಡ್ಡ ಮೃತ್ಯುವಾಗಿ ಕುಸಿಯುತ್ತದೆ. ಮನೆ ಮಂದಿಗೆ ನೀರೊದಗಿಸುತ್ತಿದ್ದ ಪಕ್ಕದ ಜರಿ ಪ್ರವಾಹವಾಗಿ ಮನೆಗೆ ನುಗ್ಗುತ್ತದೆ ಎಂದರೆ ಆ ಭೀಕರತೆ, ರೌದ್ರತೆ ಹೇಗಿರಬಹುದು?

ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ

ಜಲಪ್ರಳಯಕ್ಕೆ ಸಾವಿರ ಕಾರಣಗಳಿರಬಹುದು

ಜಲಪ್ರಳಯಕ್ಕೆ ಸಾವಿರ ಕಾರಣಗಳಿರಬಹುದು

ಇಷ್ಟಕ್ಕೂ ಕೊಡಗಿನಲ್ಲಿ ಇದೀಗ ನಡೆದು ಹೋದ ಇಂತಹ ಭೀಕರತೆಗಳಿಗೆ ಕಾರಣವೇನಿರಬಹುದು ಎಂದು ಹುಡುಕುತ್ತಾ ಹೋದರೆ ಅದಕ್ಕೆ ಸಾವಿರ ಕಾರಣಗಳು ಸಿಗುತ್ತವೆ.

ಇಷ್ಟಕ್ಕೂ ಈಗ ಘಟನೆಗಳು ನಡೆದ ಗ್ರಾಮಗಳೆಲ್ಲವೂ ಒಂದು ಕಾಲದಲ್ಲಿ ಕುಗ್ರಾಮಗಳಾಗಿದ್ದವು. ಅಲ್ಲಿಗೆ ತಲುಪಲು ಸಮರ್ಪಕವಾದ ರಸ್ತೆಗಳೇ ಇರಲಿಲ್ಲ. ವಿದ್ಯುತ್ ಅಂತು ಇಲ್ಲವೇ ಇಲ್ಲ. ಜನ ತಾವು ಎಲ್ಲಿಗಾದರೂ ಹೋಗಬೇಕಾದರೆ ನಡೆದುಕೊಂಡೇ ಹೋಗಬೇಕಾಗಿತ್ತು. ಅಲ್ಲಿ ಸದಾ ಮಳೆ, ಮಂಜು ಮುಸುಕಿದ ವಾತಾವರಣ, ಮೈಕೊರೆಯುವ ಚಳಿ, ಭತ್ತದ ಕೃಷಿ ಮಾಡಿದರೂ ಹೇಳಿಕೊಳ್ಳುವಂತಹ ಇಳುವರಿ ಸಿಗುತ್ತಿರಲಿಲ್ಲ.

ಇನ್ನು ಅವತ್ತಿನ ಕಾಲದಲ್ಲಿ ಗುಡ್ಡಗಳಲ್ಲೆಲ್ಲಾ ಒತ್ತೊತ್ತಾಗಿ ಮರಗಳಿದ್ದು ದಟ್ಟಕಾಡಿನಿಂದ ಕೂಡಿದ್ದರಿಂದ ಅಲ್ಲಿ ಕಾಫಿ ಬೆಳೆಯುವುದು ಅಸಾಧ್ಯವಾಗಿತ್ತು. ಹೀಗಾಗಿ ಕಾಡುಗಳ ನಡುವೆ ಜನ ಏಲಕ್ಕಿಯನ್ನು ಬೆಳೆಯುತ್ತಿದ್ದರು. ಆ ಕಾಲದಲ್ಲಿ ಏಲಕ್ಕಿಗೆ ಹೆಚ್ಚಿನ ಬೇಡಿಕೆಯಿದ್ದುದರಿಂದ ಅವರಿಗೆ ಕಷ್ಟಕ್ಕೆ ಏಲಕ್ಕಿ ಆಸರೆಯಾಗಿತ್ತು.

90ರ ದಶಕದ ನಂತರ ಆಗಿದ್ದೇ ಬದಲಾವಣೆ

90ರ ದಶಕದ ನಂತರ ಆಗಿದ್ದೇ ಬದಲಾವಣೆ

ಸುಮಾರು 90 ದಶಕಗಳವರೆಗೂ ಅಲ್ಲಿನವರ ಬದುಕು ಹಾಗೆಯೇ ಇತ್ತು. ಯಾವ ಆಧುನಿಕ ಸೌಲಭ್ಯಗಳು ಅವರನ್ನು ತಲುಪಿಯೇ ಇರಲಿಲ್ಲ. ಹತ್ತಾರು ಎಕರೆ ತೋಟಗಳಿದ್ದರೂ ಬದುಕು ಮಾತ್ರ ಹಸನಾಗಿರಲಿಲ್ಲ. ಜನರು ಕೂಡ ಆ ಕಷ್ಟದ ಬದುಕಲ್ಲಿಯೂ ಸುಖ ಕಂಡುಕೊಂಡಿದ್ದರು.

90ರ ದಶಕದ ನಂತರದ ದಿನಗಳು ಕೊಡಗಿನಲ್ಲೊಂದು ಬದಲಾವಣೆಯನ್ನು ಹುಟ್ಟು ಹಾಕಿದ ಕಾಲಘಟ್ಟ ಎಂದರೆ ತಪ್ಪಾಗಲಾರದು. ಜತೆಗೆ ಅವತ್ತಿನ ಪರಿಸ್ಥಿತಿಯೂ ಹಾಗೆಯೇ ಇತ್ತು.

ಕೊಡಗಿನಲ್ಲಿ ಕಾಫಿ ಬೆಳೆಯುತ್ತಿದ್ದರಾದರೂ ಅದನ್ನು ಎಲ್ಲರೂ ಬೆಳೆಯಲು ಸಾಧ್ಯವಿರಲಿಲ್ಲ. ಅದು ದಟ್ಟವಾದ ಕಾಡು ಪ್ರದೇಶದಲ್ಲಿ ಬೆಳೆಯುತ್ತಿರಲಿಲ್ಲ. ಅದನ್ನು ಬೆಳೆಯಬೇಕಾದರೆ ಮರಗಳು ಇಲ್ಲದ ಪ್ರದೇಶ ಬೇಕಾಗಿತ್ತು. ಜತೆಗೆ ನೀರು ನಿಲ್ಲದ ಹರಿದು ಹೋಗುವ ಪ್ರದೇಶ, ಹೆಮ್ಮರಗಳಂತೂ ಇರಲೇ ಬಾರದಾಗಿತ್ತು. ತೋಟದ ಅಲ್ಲೊಂದು ಇಲ್ಲೊಂದು ಎಂಬಂತೆ ಮರಗಳು ಬೇಕಾಗಿದ್ದವು.

ಕೊಡಗಿನ ಹೆಚ್ಚಿನ ಭಾಗ ಅದರಲ್ಲೂ ಪಶ್ಚಿಮ ಘಟ್ಟದ ಈಗ ಜಲಪ್ರಳಯವಾದ ಗ್ರಾಮಗಳು ದಟ್ಟ ಕಾಡು ಗುಡ್ಡಗಳಿಂದ ಆವೃತವಾಗಿದ್ದರಿಂದ ಕಾಫಿ ಬೆಳೆಯುವುದು ಅಸಾಧ್ಯವೇ ಆಗಿತ್ತು. ಜತೆಗೆ ಏಲಕ್ಕಿಗೆ ಉತ್ತಮ ಬೆಲೆ ಇದ್ದಿದ್ದರಿಂದ ಕಾಫಿ ಬೆಳೆಯಬೇಕೆಂಬ ಆಲೋಚನೆಯೂ ಜನರಲ್ಲಿ ಬಂದಿರಲಿಲ್ಲ.

ಕಾಫಿ ತೋಟದ ಮೇಲಿನ ಆಸಕ್ತಿ ಹೆಚ್ಚಾಯಿತು !

ಕಾಫಿ ತೋಟದ ಮೇಲಿನ ಆಸಕ್ತಿ ಹೆಚ್ಚಾಯಿತು !

ಆದರೆ ಅವತ್ತಿನ ಪರಿಸ್ಥಿತಿ ಏಲಕ್ಕಿ ಬೆಳೆಯ ಬಗ್ಗೆ ನಿರಾಸಕ್ತಿ ಮತ್ತು ಕಾಫಿ ಬಗ್ಗೆ ಆಸಕ್ತಿಯನ್ನು ಹುಟ್ಟು ಹಾಕಿತ್ತು. ಅದರಿಂದಾದ ಪರಿಣಾಮವೇ ಇವತ್ತಿನ ಜಲಪ್ರಳಯ ಎಂದರೆ ತಪ್ಪಾಗಲಾರದು. ಎರಡು ದಶಕಗಳ ಹಿಂದೆಯೇ ಏಲಕ್ಕಿಗೆ ಕೆಜಿಗೆ 500 ರಿಂದ 1000 ರೂ.ತನಕವೂ ದರವಿತ್ತು. ಆದರೆ ಅದೇನಾಯಿತೋ ಏಲಕ್ಕಿಗೆ ಕಟ್ಟೆರೋಗ ಬಂತು ಪರಿಣಾಮ ನೆಟ್ಟ ಕೆಲವೇ ವರ್ಷಗಳಲ್ಲಿ ರೋಗ ಗಿಡಗಳನ್ನು ಬಲಿತೆಗೆದುಕೊಳ್ಳತೊಡಗಿತು. ಇದರಿಂದ ಬೆಳೆಗಾರರಲ್ಲೂ ನಿರಾಸಕ್ತಿ ಉಂಟಾಗಿತ್ತು.

ಇದೇ ವೇಳೆ ಕಾಫಿ ಮಂಡಳಿಯ ಕಪಿ ಮುಷ್ಠಿಯಲ್ಲಿದ್ದ ಕಾಫಿ ಮುಕ್ತ ಮಾರುಕಟ್ಟೆಗೆ ಬಂತು. ಅಲ್ಲಿ ತನಕ ಕಾಫಿ ಬೆಳೆಯಬೇಕಾದರೆ ಬೆಳೆಗಾರ ಕಾಫಿ ಮಂಡಳಿಯಿಂದ ಪರವಾನಗಿ ಪಡೆಯಬೇಕಾಗಿತ್ತು. ಜತೆಗೆ ಬೆಳೆದರೂ ಕಾಫಿ ಮಂಡಳಿಗೆ ಮಾರಾಟ ಮಾಡಬೇಕಾಗಿತ್ತು. ಹೊರಗೆ ಮಾರಾಟ ಮಾಡುವಂತೆಯೂ ಇರಲಿಲ್ಲ. ಕಾಫಿ ಮಂಡಳಿ ಅಷ್ಟೋ ಇಷ್ಟೋ ನೀಡಿ ಖರೀದಿಸಿ ಬಳಿಕ ಬೋನಸ್ ರೂಪದಲ್ಲಿ ಹಣ ನೀಡುತ್ತಿತ್ತು. ಇಂತಹ ಕಟ್ಟುನಿಟ್ಟಿನ ಕಾನೂನು ಇದ್ದಿದ್ದರಿಂದ ಬೆಳೆಗಾರರು ಕಾಫಿ ಬೆಳೆಯುವ ಗೋಜಿಗೆ ಹೋಗದೆ ಎಲ್ಲರೂ ಏಲಕ್ಕಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು.

ಇಡೀ ಕೊಡಗೇ ಬದಲಾಗಿ ಹೋಯಿತು !

ಇಡೀ ಕೊಡಗೇ ಬದಲಾಗಿ ಹೋಯಿತು !

ಅದು 1994 ನಂತರದ ಕಾಲಘಟ್ಟ. ಅತ್ತ ಬ್ರೆಜಿಲ್‌ನಲ್ಲಿ ಪ್ರತಿಕೂಲ ಪರಿಣಾಮ ಕಾಫಿ ನೆಲಕಚ್ಚಿತ್ತು. ಇತ್ತ ಕಾಫಿ ಬೆಳೆಯು ಮುಕ್ತ ಮಾರುಕಟ್ಟೆಗೆ ಬಂದಿತ್ತು. ಅದರ ಪರಿಣಾಮ 50 ಕೆಜಿ ಚೀಲಕ್ಕೆ 500 ರೂ. ಇದ್ದ ಬೆಲೆ ದಿಢೀರ್ 2000 ರೂ. ಆಗಿತ್ತು.

ಆಗಲೇ ಎಲ್ಲರೂ ಕಾಫಿ ಬೆಳೆಯಲು ಮುಂದಾಗಿದ್ದರು. ಆ ಹೊತ್ತಿಗೆ ಏಲಕ್ಕಿಯ ದರವೂ ಕುಸಿದು ಬಿದ್ದಿತ್ತು. ಅದರೊಂದಿಗೆ ಹೆಣಗಾಡಿ ಸುಸ್ತಾದ ಬೆಳೆಗಾರ ಕಾಫಿ ತೋಟದತ್ತ ಮುಖ ಮಾಡಿ ಬಿಟ್ಟಿದ್ದನು. ತಾನು ಹೊಂದಿದ್ದ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಿಯೇ ಬಿಟ್ಟನು.

ಅದರ ತೀವ್ರತೆ ಹೇಗಿತ್ತು ಎಂದರೆ ಕಾಫಿಗೆ ತೊಡಕಾಗುತ್ತಿದ್ದ ನೆರಳನ್ನು ತೆಗೆಯುವ ಸಲುವಾಗಿ ಹೆಮ್ಮರಗಳನ್ನು ನೆಲಕ್ಕುರುಳಿಸತೊಡಗಿದರು. ಒತ್ತೊತ್ತಾಗಿದ್ದ ಮರಗಳು ನೆಲಕ್ಕುರುಳಿ ಗುಡ್ಡಗಳು ಬೋಳಾದವು. ತೋಟಗಳಿಗೆ ತೆರಳಲು ಅನುಕೂಲವಾಗುವಂತೆ ಜೆಸಿಬಿಯನ್ನು ತಂದು ಗುಡ್ಡಗಳನ್ನು ಕೊರೆದು ರಸ್ತೆ ಮಾಡಲಾಯಿತು. ಹೆಮ್ಮರಗಳು ಸತ್ತ ಪರಿಣಾಮ ಅವು ಮಣ್ಣನ್ನು ಹಿಡಿದಿಟ್ಟಿದ್ದ ಬೇರುಗಳು ಸತ್ತು ಮಣ್ಣು ಸಡಿಲವಾಯಿತು.

ಗುಡ್ಡದ ಮೇಲೆ ಹೋಂಸ್ಟೇ, ರೆಸಾರ್ಟ್

ಗುಡ್ಡದ ಮೇಲೆ ಹೋಂಸ್ಟೇ, ರೆಸಾರ್ಟ್

ಕಳೆದ ಒಂದೂವರೆ ದಶಕದಲ್ಲಿ ಒಂದಷ್ಟು ಬದಲಾವಣೆ ಕಾಣುವಂತಾಯಿತು. ತಮಿಳುನಾಡಿನಲ್ಲಿ ಸುನಾಮಿ ಬಂದ ಬಳಿಕ ಪ್ರವಾಸಿಗರು ಕೊಡಗಿನತ್ತ ಬರತೊಡಗಿದರು. ಅವರಿಗೋಸ್ಕರ ರೆಸಾರ್ಟ್‌ಗಳು ಸದ್ದಿಲ್ಲದೆ ಮೇಲೇಳತೊಡಗಿದವು. ಗುಡ್ಡದ ಮೇಲೆ ಕಾಡಿನ ನಡುವೆ ಹೋಂಸ್ಟೇ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಬಹುದೆಂಬ ಆಲೋಚನೆ ಮಾಡಿದ ಕೆಲವರು ಬಂಡವಾಳ ಸುರಿದು ರೆಸಾರ್ಟ್ ನಿರ್ಮಿಸಿದರು.

ಅದಕ್ಕೆ ದಾರಿ ಮಾಡುವ ಸಲುವಾಗಿ ಗುಡ್ಡ ಕೊರೆದರು. ಆಧುನೀಕತೆ ಕುಗ್ರಾಮಗಳನ್ನು ನಾಗರಿಕತೆಯತ್ತ ಕೊಂಡೊಯ್ಯತೊಡಗಿತು. ಒಂದು ಕಾಲದಲ್ಲಿ ಈ ಗ್ರಾಮಗಳತ್ತ ತೆರಳಲು ಹಿಂದೇಟು ಹಾಕುತ್ತಿದ್ದವರು ಖುಷಿಯಿಂದ ಆ ಕಡೆ ಮುಖ ಮಾಡುವಂತಾದರು. ಎಲ್ಲವೂ ವಾಣಿಜ್ಯಮಯವಾಗತೊಡಗಿತು.

ಆಗೊಮ್ಮೆ ಈಗೊಮ್ಮೆ ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿದ್ದವಾದರೂ ಮಾಂದಾಲಪಟ್ಟಿ ಪ್ರವಾಸಿ ತಾಣವಾಗಿ ಯಾವಾಗ ಜನರ ಗಮನಸೆಳೆಯಿತೋ ಇಲ್ಲಿಗೆ ಬರುವವರ ಸಂಖ್ಯೆ ಜತೆಗೆ ವಾಹನಗಳ ಓಡಾಟವೂ ಹೆಚ್ಚಾಯಿತು.

ದೊಡ್ಡ ಆಘಾತ ತಂದಿದ್ದು ಹರಳು ಕಲ್ಲು ದಂಧೆ

ದೊಡ್ಡ ಆಘಾತ ತಂದಿದ್ದು ಹರಳು ಕಲ್ಲು ದಂಧೆ

ಇವತ್ತು ಭೀಕರ ಜಲಪ್ರಳಯಕ್ಕೆ ತುತ್ತಾದ ಬೆಟ್ಟ ಸಾಲುಗಳಲ್ಲೇ ಮತ್ತೊಂದು ಆಘಾತಕಾರಿ ಅಂಶವೂ ಅಡಗಿದೆ. ಅದೇನೆಂದರೆ ಹರಳು ಕಲ್ಲು ದಂಧೆ.

ಇದು ಸುಮಾರು ಎರಡು ದಶಕಗಳಿಂದಲೂ ನಡೆಯುತ್ತಿದೆ. ಕಡಮಕಲ್, ಪೂಜಿಮಲೆ, ಸುಟ್ಟತ್‍ಮಲೆ ಮೊದಲಾದ ಕಡೆ ಬೆಟ್ಟವನ್ನು ಕೊರೆದು ಸುರಂಗತೋಡಿ ಕಲ್ಲನ್ನು ತೆಗೆಯಲಾಗುತ್ತಿದೆ. ಇದರಿಂದ ತುಂಬಾ ಅರಣ್ಯ ನಾಶವಾಗಿದೆ. ಜೀವಹಾನಿಯೂ ಆಗಿದೆ. (ಈ ದಂಧೆ ಬಗ್ಗೆ ಒನ್ ಇಂಡಿಯಾ ಹಿಂದೆ ಸಮಗ್ರ ವರದಿಯನ್ನು ಪ್ರಕಟಿಸಿತ್ತು)

ಹರಳು ಕಲ್ಲು ದಂಧೆಯ ಪರಿಣಾಮ ಅತ್ತ ಸುಬ್ರಹ್ಮಣ್ಯ ಬೆಟ್ಟದ ತಪ್ಪಲು ಪ್ರದೇಶವಾದ ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು ಸೇರಿದಂತೆ ಹಲವು ಗ್ರಾಮಗಳು ಭಯದಿಂದ ಬದುಕುವಂತಾಗಿದೆ. ಇಲ್ಲಿ ಬೆಟ್ಟಗಳು ಬಿರುಕು ಬಿಟ್ಟು ನಿಂತಿವೆ.

ಅದು ಏನೇ ಇರಲಿ. ಈ ಲೇಖನವನ್ನು ಓದಿದ ಬಳಿಕ ಜಲಪ್ರಳಯಕ್ಕೆ ಕಾರಣಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಿರುತ್ತದೆ. ಆದರೂ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಸಂಕಷ್ಟ ಅನುಭವಿಸುವಂತಾಗಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿಯಾಗಿದೆ. ಆಧುನೀಕತೆ ಮತ್ತು ವಾಣಿಜ್ಯಕರಣದ ಹೆಸರಿನಲ್ಲಿ ನಾವು ಪ್ರಕೃತಿ ವಿರುದ್ಧ ಹೋದರೆ ಸುಖವಾಗಿರಲು ಸಾಧ್ಯವಿಲ್ಲ ಎಂಬುದು ಇದರಿಂದ ಗೊತ್ತಾಗುತ್ತಿದೆ.

English summary
Kodagu life before coffee plantations and resorts came. How the attack on nature of Kodagu caused people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X