• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CWG 2022: ಕೂಲಿನಾಲಿ, ಎಂಬ್ರಾಯ್ಡರಿ ಮಾಡುತ್ತಾ ಭಾರತದ ಕೀರ್ತಿಪತಾಕೆ ಹಾರಿಸಿದ ಅಚಿಂತ

|
Google Oneindia Kannada News

ಬ್ರಿಟನ್ ದೇಶದ ಬರ್ಮಿಂಗ್‌ಹ್ಯಾಂ ನಗರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 3ನೇ ಚಿನ್ನದ ಪದಕ ಜಯಿಸಿದೆ. ಭಾನುವಾರ ನಡೆದ ಪುರುಷರ ವೇಟ್‌ಲಿಫ್ಟಿಂಗ್‌ನ 73 ಕಿಲೋ ವಿಭಾಗದಲ್ಲಿ ಭಾರತದ ಅಚಿಂತ ಶೆವುಲಿ ಸ್ವರ್ಣ ಪಡೆದರು.

ಪಶ್ಚಿಮ ಬಂಗಾಳದ ಅಚಿಂತ ಶೆವುಲಿ ಒಟ್ಟು 313 ಕಿಲೋ ತೂಕ ಎತ್ತಿ ಅಗ್ರಸ್ಥಾನ ಪಡೆದರು. ಮಲೇಷ್ಯಾದ ಎರಿ ಹಿದಾಯತ್ ಮುಹಮ್ಮದ್ 303 ಕಿಲೋ ಎತ್ತಿ ಎರಡನೇ ಸ್ಥಾನ ಪಡೆದರೆ, ಕೆನಡಾದ ಶಾದ್ ದಾರ್ಸಿಗ್ನಿ 298 ಕಿಲೋ ಮೂಲಕ ಮೂರನೇ ಸ್ಥಾನ ಪಡೆದರು.

ಕೇವಲ 20 ವರ್ಷದ ಅಚಿಂತ ಶೆವುಲಿ ಚಿನ್ನ ಪದಕ ಗೆಲ್ಲಲು ಫೇವರಿಟ್ ಎನಿಸಿದ್ದರು. ತಮ್ಮ ನಿರೀಕ್ಷೆ ಉಳಿಸಿಕೊಂಡರು. ಸ್ನ್ಯಾಚಿಂಗ್‌ನಲ್ಲಿ 143 ಕಿಲೋ ಮತ್ತು ಕ್ಲೀನ್ ಅಂಡ್ ಜರ್ಕ್‌ನಲ್ಲಿ 170 ಕಿಲೋ ಎತ್ತಿದರು. ಇವರ ಒಟ್ಟಾರೆ 313 ಕಿಲೋ ಸಾಧನೆಯು ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಅಳಿಸಿಹಾಕಿತು.

ಕಾಮನ್‌ವೆಲ್ತ್‌: ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾಕಾಮನ್‌ವೆಲ್ತ್‌: ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ

ಭಾರತಕ್ಕೆ ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದು ಮೂರನೇ ಚಿನ್ನದ ಪದಕವಾಗಿದೆ. ಒಟ್ಟು 3 ಚಿನ್ನ 2 ಬೆಳ್ಳಿ, 1 ಕಂಚು ಪದಕಗಳೊಂದಿಗೆ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿ ಮುಂದುವರಿದಿದೆ.

ಅಚಿಂತ ಶೆವುಲಿ ಫೇವರಿಟ್

ಅಚಿಂತ ಶೆವುಲಿ ಫೇವರಿಟ್

20 ವರ್ಷದ ಅಚಿಂತ ಶೆವುಲಿ ಅವರಿಗೆ ಇದು ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟ. ಆದರೂ ಅವರೇ ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಬಿಂಬಿತವಾಗಿದ್ದರು. ಹಿಂದಿನ ಕೆಲ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಅವರು ಮಾಡಿದ ಸಾಧನೆ ವಿಶ್ವಾದ್ಯಂತ ಗಮನ ಸೆಳೆದಿದೆ. 73 ಕಿಲೋ ವಿಭಾಗದಲ್ಲಿ ಅವರು ವಿಶ್ವದ ಅಗ್ರಮಾನ್ಯ ವೇಟ್ ಲಿಫ್ಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ.

ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಎರಡು ಬಾರಿ ಅವರು ಚಿನ್ನದ ಪದಕಗಳನ್ನು ಗೆದ್ದಿದ್ದರು. ಕೇವಲ 17 ವರ್ಷದ ವಯಸ್ಸಿನಲ್ಲೇ ಅವರು ಚಾಂಪಿಯನ್ ಎನಿಸಿದ್ದರು.

2021ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಕಿರಿಯರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ ಅಚಿಂತ.

ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಹೆಮ್ಮೆಯ ಕನ್ನಡಿಗ ಗುರುರಾಜ ಪೂಜಾರಿಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಹೆಮ್ಮೆಯ ಕನ್ನಡಿಗ ಗುರುರಾಜ ಪೂಜಾರಿ

ಅಣ್ಣನಿಗೆ ಚಿನ್ನ ಸಮರ್ಪಿಸಿದ ಅಚಿಂತ

ಅಣ್ಣನಿಗೆ ಚಿನ್ನ ಸಮರ್ಪಿಸಿದ ಅಚಿಂತ

ವೇಟ್‌ಲಿಫ್ಟರ್ ಅಚಿಂತ ಶೆವುಲಿ ತಮ್ಮ ಚಿನ್ನದ ಪದಕವನ್ನು ಅಣ್ಣನಿಗೆ ಸಮರ್ಪಿಸಿದ್ದಾರೆ. "ನನ್ನ ಅಣ್ಣನಿಗೆ ಈ ಚಿನ್ನದ ಪದಕ ಸಮರ್ಪಿಸುತ್ತೇನೆ" ಎಂದು ಪದಕ ಸ್ವೀಕರಿಸಿದ ಬಳಿಕ ಅಚಿಂತ ಭಾವೋದ್ವೇಗದಿಂದ ಹೇಳಿದ್ದಾರೆ. ಅದಕ್ಕೆ ಪ್ರಬಲ ಕಾರಣಗಳೂ ಇವೆ. ಅಚಿಂತ ಈ ಮಟ್ಟಕ್ಕೆ ಬೆಳೆಯಲು ಅವರ ಅಣ್ಣ ಅಲೋಕ್ ತ್ಯಾಗವೇ ಪ್ರಮುಖ ಕಾರಣ.

ಖುದ್ದು ತಾನೇ ವೇಟ್‌ಲಿಫ್ಟರ್ ಆಗಿದ್ದರೂ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗಿತ್ತು ಅಚಿಂತ್ಯನ ವೃತ್ತಿ ಬದುಕು ರೂಪಿಸಿದ ಶ್ರೇಯಸ್ಸು ಅಲೋಕ್‌ನದ್ದು. ಅಣ್ಣ ತಮ್ಮಂದಿರ ಈ ಸಂಬಂಧ ಎಂಥ ನಿಸ್ವಾರ್ಥದ್ದು..!

ಬಡತನದ ಬೇಗೆ

ಬಡತನದ ಬೇಗೆ

ಅಚಿಂತನ ತಂದೆ 2014ರಲ್ಲಿ ತೀರಿಕೊಂಡಾಗ ಅವರ ಕುಟುಂಬ ದಿಕ್ಕೆಟ್ಟು ಕೂತಿತ್ತು. ಬದುಕು ಕೊಟ್ಟಿಕೊಳ್ಳಲು ಕೂಲಿ ನಾಲಿ ಇತ್ಯಾದಿ ನಾನಾ ಕೆಲಸಗಳನ್ನು ಕುಟುಂಬದವರು ಮಾಡಬೇಕಾಯಿತು. ತಾಯಿ ಬಟ್ಟೆ ಹೊಲಿಗೆ ಮಾಡುತ್ತಿದ್ದರು. ಅಲೋಕ್ ಮತ್ತು ಅಚಿಂತ್ಯ ಇಬ್ಬರೂ ಎಂಬ್ರಾಯ್ಡರಿ ಮಾಡಿಕೊಡುತ್ತಿದ್ದರು.

ದಿನಕ್ಕೆ 12 ತಾಸು ಕೆಲಸ. ವಾರವಿಡೀ ಮಾಡಿದರೂ ಕೆಲಸ ಮುಗಿಯುತ್ತಿರಲಿಲ್ಲ. ಆದರೂ ಒಂದು ವಾರದಲ್ಲಿ ಹೆಚ್ಚೆಂದರೆ 1200 ರೂಪಾಯಿ ಸಿಗುತ್ತಿತ್ತು. ಎಂಬ್ರಾಯಿಡರಿ ಮಾತ್ರವಲ್ಲ, ಜಮೀನುಗಳಲ್ಲಿ ಕೃಷಿ ಕಾರ್ಮಿಕರಾಗಿಯೂ ಅಲೋಕ್ ಮತ್ತು ಅಚಿಂತ ಕೆಲಸ ಮಾಡುತ್ತಿದ್ದರು.

ಅಲೋಕ್ ಗಟ್ಟಿ ನಿರ್ಧಾರ

ಅಲೋಕ್ ಗಟ್ಟಿ ನಿರ್ಧಾರ

ಅಲೋಕ್ ವೇಟ್‌ಲಿಫ್ಟಿಂಗ್‌ನಲ್ಲಿ ಅದಾಗಲೇ ಭರವಸೆ ಮೂಡಿಸಿದ್ದ ಆಟಗಾರ ಎನಿಸಿದ್ದರು. ಜಿಲ್ಲಾ ಮಟ್ಟದಲ್ಲಿ ಪದಕಗಳನ್ನು ಜಯಿಸಿದ್ದರು. ವೇಟ್‌ಲಿಫ್ಟಿಂಗ್ ಎಂದರೆ ಮಹಾ ಪ್ರಾಣ. ಆದರೆ, ಮನೆಯಲ್ಲಿನ ಬಡತನದಿಂದಾಗಿ ಅವರ ಇಡೀ ದಿನ ದುಡಿಮೆಯಲ್ಲೇ ಹೋಗುತ್ತಿತ್ತು. ಬೆಳಗ್ಗೆಯಿಂದ ರಾತ್ರಿಯವರೆಗೂ ನಿರಂತರವಾಗಿ ಕೆಲಸ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು. ವೇಟ್‌ಲಿಫ್ಟಿಂಗ್‌ಗೆ ಸಿದ್ಧವಾಗಲು ಸಮಯವೇ ಇರಲಿಲ್ಲ.

ಈ ಸಂದರ್ಭದಲ್ಲಿ ಅವರು ತನ್ನ ಸಹೋದರ ಅಚಿಂತನ ಬದುಕು ರೂಪಿಸುವ ಸಂಕಲ್ಪ ತೊಟ್ಟರು. ತನಗೆ ವೇಟ್‌ಲಿಫ್ಟಿಂಗ್‌ಗೆ ಅಣಿಯಾಗಲು ಆಗದಿದ್ದರೇನಾಯ್ತು ಎಂದು ಯೋಚಿಸಿದ ಅವರು ಅಚಿಂತನಿಗೆ ಲಿಫ್ಟಿಂಗ್ ಹೊಣೆಯ ನೊಗ ಹೊರಿಸಿದರು.

ತಾನು ಕಷ್ಟಪಟ್ಟು ದುಡಿದು ಅಚಿಂತನನ್ನು ವೇಟ್‌ಲಿಫ್ಟಿಂಗ್ ತರಬೇತಿಗೆ ಕಳುಹಿಸಿದರು. ತಮ್ಮ ಕುಟುಂಬ ಸಂಕಷ್ಟದಲ್ಲಿದ್ದು, ಈ ಕ್ರೀಡೆಯ ಮೂಲಕ ಮುಂದೆ ಬದುಕು ಕಟ್ಟಿಕೊಳ್ಳಬಹುದು ಎಂದು ಅಚಿಂತನಿಗೆ ಹುರಿದುಂಬಿಸಿ ಈ ಕ್ರೀಡೆಗೆ ಅಪ್ಪುವಂತೆ ಮಾಡಿದರು.

ಅಲ್ಲಿಂದ ಶುರುವಾದ ಅಚಿಂತನ ವೇಟ್‌ಲಿಫ್ಟಿಂಗ್ ಪ್ರಯಾಣ ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಸಾಧನೆವರೆಗೂ ಸಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

   Mahamastakabhisheka ಚನ್ನಪಟ್ಟಣದಲ್ಲಿ ವಿಶ್ವದ ಅತಿ ದೊಡ್ಡ ಚಾಮುಂಡೇಶ್ವರಿ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ | OneIndia Kannada
   English summary
   Indian 20 year old weightlifter Achinta Sheuli has won Gold medal in Commonwealth Games 2022. He has dedicated this gold medal to brother Alok. Know the role of Alok in shaping Achinta's career.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X