ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜಯ್ ರಾವತ್ ಬಂಧನ; ಏನಿದು 'ಪಾತ್ರ ಚಾಲ್' ಹಗರಣ?

|
Google Oneindia Kannada News

ಮಹಾ ವಿಕಾಸ್ ಆಘಾಡಿ ಮೈತ್ರಿ ಸರಕಾರ ಇದ್ದಾಗ ಬಿಜೆಪಿಗರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಶಿವಸೇನಾ ಸಂಸದ ಸಂಜಯ್ ರಾವತ್ ಇದೀಗ ಬಂಧನಕ್ಕೊಳಗಾಗಿದ್ದಾರೆ. ಪಾತ್ರ ಚಾಲ್ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾವತ್‌ರನ್ನು ಬಂಧಿಸಿದ್ದಾರೆ.

ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಇಡಿ ಅಧಿಕಾರಿಗಳು ಸಂಜಯ್ ರಾವತ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದರು. ಅಲ್ಲಿ ಅವರಿಗೆ 11.5 ಲಕ್ಷ ರೂ ನಗದು ಹಣ ಹಾಗು ಇತರ ದಾಖಲೆಗಳು ಸಿಕ್ಕಿವೆ. ವಿಚಾರಣೆ ಬಳಿಕ ಕಸ್ಟಡಿಗೆ ಪಡೆದುಕೊಂಡು ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಮತ್ತೆ ವಿಚಾರಣೆ ನಡೆಸಿದ ಬಳಿಕ ಸಂಜಯ್ ರಾವತ್‌ರನ್ನು ಬಂಧಿಸಲಾಗಿದೆ.

ಮಹಾ ಟ್ವಿಸ್ಟ್? ರಾವತ್ ಮನೆಯಲ್ಲಿ ಇಡಿಗೆ ಸಿಕ್ಕ ಹಣದ ಗಂಟಿನಲ್ಲಿ ಸಿಎಂ ಹೆಸರು?ಮಹಾ ಟ್ವಿಸ್ಟ್? ರಾವತ್ ಮನೆಯಲ್ಲಿ ಇಡಿಗೆ ಸಿಕ್ಕ ಹಣದ ಗಂಟಿನಲ್ಲಿ ಸಿಎಂ ಹೆಸರು?

ಸೋಮವಾರ ಬೆಳಗ್ಗೆ 11:30ಕ್ಕೆ ರಾವತ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಮತ್ತೆ ಕಸ್ಟಡಿಗೆ ಪಡೆಯಲು ಇಡಿ ಪ್ರಯತ್ನಿಸಲಿದೆ. ತನ್ನನ್ನು ಸುಳ್ಳು ಅರೋಪದಲ್ಲಿ ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಶಿವಸೇನಾ ಸಂಸದ ರಾವತ್ ಕಿಡಿಕಾರಿದ್ದಾರೆ.

ಇದೇ ವೇಳೆ ಶಿವಸೇನಾದ ಉದ್ಧವ್ ಠಾಕ್ರೆ ಬಣದ ನಾಯಕರು ಸಂಜಯ್ ರಾವತ್ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಅವರನ್ನು ಕಂಡರೆ ಬಿಜೆಪಿಗೆ ಭಯ. ಅದಕ್ಕೆ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿರುವ ಶಿವಸೇನಾ ನಾಯಕರುಗಳು, ಸೋಮವಾರ ಮುಂಬೈನ ವಿವಿಧೆಡೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ಅಷ್ಟಕ್ಕೂ ಸಂಜಯ್ ರಾವತ್ ಸಿಲುಕಿರುವ ಪಾತ್ರ ಚಾಲ್ ಹಗರಣ ಏನು?. ರಾವತ್ ಕುಟುಂಬ ಸದಸ್ಯರಿಗೆ ಸೇರಿದ 11.15 ಕೋಟಿ ಮೌಲ್ಯದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲು ಏನು ಕಾರಣ? ಇಲ್ಲಿದೆ ಈ ಹಗರಣದ ಕೆಲ ಪ್ರಮುಖ ಅಂಶಗಳು...

ಏನಿದು ಪಾತ್ರ ಚಾಲ್ ಹಗರಣ?

ಏನಿದು ಪಾತ್ರ ಚಾಲ್ ಹಗರಣ?

ಪಾತ್ರ ಚಾಲ್ ಎಂಬುದು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣ. ಮುಂಬೈನ ಉತ್ತರ ಭಾಗದಲ್ಲಿರುವ ಗೋರೆಗಾಂವ್‌ನ ಸಿದ್ಧಾರ್ಥ ನಗರದಲ್ಲಿ ಅಸ್ತಿತ್ವದಲ್ಲಿದ್ದುದು ಪಾತ್ರ ಚಾಲ್ ಸೊಸೈಟಿ. ಸುಮಾರು 47 ಎಕರೆ ಪ್ರದೇಶ ವಿಸ್ತೀರ್ಣದಲ್ಲಿದ್ದ ಈ ಸೊಸೈಟಿಯಲ್ಲಿ 672 ಮನೆಗಳು ಇದ್ದವು. ಈ ಪ್ರದೇಶದ ಪುನರಾಭಿವೃದ್ಧಿ ಹೆಸರಿನಲ್ಲಿ ನಡೆದ ಸರಣಿ ವಂಚನೆಗಳೇ ಈಗ ಪಾತ್ರ ಚಾಲ್ ಹಗರಣವಾಗಿ ಮಾರ್ಪಟ್ಟಿದೆ. ಇದು 14 ವರ್ಷಗಳ ಹಿಂದಿನ ಕರ್ಮಕಾಂಡ.

ಅವ್ಯವಹಾರ ಹೇಗೆ?

ಅವ್ಯವಹಾರ ಹೇಗೆ?

2008ರಲ್ಲಿ ಪಾತ್ರ ಚಾಲ್ ಪ್ರದೇಶದ ಪುನರಾಭಿವೃದ್ಧಿಗಾಗಿ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಚ್‌ಎಡಿಎ) ಯೋಜನೆ ಕೈಗೆತ್ತಿಕೊಂಡಿತು. ಅದಕ್ಕಾಗಿ ಗುರು ಆಶಿಶ್ ಕನ್ಸ್‌ಟ್ರಕ್ಷನ್ ಪ್ರೈ. ಲಿ (ಜಿಎಸಿ) ಎಂಬ ಕಂಪನಿಗೆ ಗುತ್ತಿಗೆ ನೀಡಿತು. ಈ ಸಂಬಂಧ ಪಾತ್ರ ಚಾಲ್ ಸೊಸೈಟಿ, ಎಂಎಚ್‌ಎಡಿಎ ಮತ್ತು ಜಿಎಸಿ ನಡುವೆ ತ್ರಿಪಕ್ಷೀಯ ಒಪ್ಪಂದವಾಯಿತು.

ಅದರ ಪ್ರಕಾರ ಪಾತ್ರ ಚಾಲ್ ಪ್ರದೇಶದ ಮರು ಅಭಿವೃದ್ಧಿಯಾಗಬೇಕು. ಸೊಸೈಟಿಯಲ್ಲಿದ್ದ 672 ಕುಟುಂಬಗಳಿಗೆ ಫ್ಲ್ಯಾಟ್‌ಗಳನ್ನು ನಿರ್ಮಿಸಿಕೊಡಬೇಕು. ಫ್ಲ್ಯಾಟ್ ಕಟ್ಟಿಕೊಡುವವರೆಗೂ ಇವರಿಗೆಲ್ಲಾ ತಿಂಗಳಿಗೆ ಇಂತಿಷ್ಟು ಬಾಡಿಗೆಯನ್ನೂ ಕೊಡಬೇಕು. ಹಾಗೆಯೇ, ಎಂಎಚ್‌ಎಡಿಎಗೂ ಫ್ಯಾಟ್‌ಗಳನ್ನು ಕಟ್ಟಿಕೊಡಬೇಕು. ಇಷ್ಟಾಗಿ ಮಿಕ್ಕುವ ಭಾಗವನ್ನು ಜಿಎಸಿಯವರು ಖಾಸಗಿ ಡೆವಲಪರ್‌ಗಳಿಗೆ ಮಾರಾಟ ಮಾಡಬಹುದು. ಇದು ತ್ರಿಪಕ್ಷೀಯ ಒಪ್ಪಂದದ ಸೂತ್ರವಾಗಿತ್ತು. ಆದರೆ, ಜಿಎಸಿಯವರು ಪಾತ್ರ ಚಾಲ್ ಸೊಸೈಟಿಯ ಜನರಿಗೆ ಮೋಸ ಮಾಡಿದರು, ಎಂಎಚ್‌ಎಡಿಎಗೂ ವಂಚಿಸಿದರು. ಸೊಸೈಟಿ ಜನರಿಗೆ 14 ವರ್ಷವಾದರೂ ಮನೆ ಭಾಗ್ಯ ಸಿಕ್ಕಿಲ್ಲ, 2014ರಿಂದ ಬಾಡಿಗೆಯೂ ಬರುತ್ತಿಲ್ಲ.

ಫ್ಲ್ಯಾಟ್ ಕಟ್ಟುವ ಮೊದಲೇ ಮಾರಾಟ

ಫ್ಲ್ಯಾಟ್ ಕಟ್ಟುವ ಮೊದಲೇ ಮಾರಾಟ

ಪಾತ್ರ ಚಾಲ್ ಪ್ರದೇಶ ಪುನರಾಭಿವೃದ್ಧಿ ಯೋಜನೆಯ ಗುತ್ತಿಗೆ ಪಡೆದ ಜಿಎಸಿ ಸಂಸ್ಥೆ ಮಹಾ ವಂಚನೆ ಎಸಗಿತು. ಬಾಡಿಗೆದಾರರು ಮತ್ತು ಎಂಎಚ್‌ಎಡಿಎಗೆ ಫ್ಲ್ಯಾಟ್‌ಗಳನ್ನು ಕಟ್ಟಿಕೊಟ್ಟ ಬಳಿಕ ಉಳಿದ ನಿರ್ದಿಷ್ಟ ಪ್ರದೇಶಗಳನ್ನು ಬೇರೆಯವರಿಗೆ ಮಾರಾಟ ಮಾಡಬೇಕು ಎಂದು ಒಪ್ಪಂದವಾಗಿತ್ತು. ಅದರೆ, ಫ್ಲ್ಯಾಟ್ ನಿರ್ಮಿಸುವ ಮೊದಲೇ ಫ್ಲೋರ್ ಸ್ಪೇಸ್ ಇಂಡೆಕ್ಸ್ ಅನ್ನು ಒಂಬತ್ತು ಖಾಸಗಿ ಡೆವಲಪರ್‌ಗಳಿಗೆ ಮಾರಾಟ ಮಾಡಿತು. ಅದೂ ಬರೋಬ್ಬರಿ 901.79 ಕೋಟಿ ರೂ ಮೊತ್ತದ ಹಣಕ್ಕೆ ಈ ಸೇಲ್ ಆಗಿದ್ದು.

ಅತ್ತ ಪಾತ್ರ ಚಾಲ್ ಸೊಸೈಟಿಯ ಜನರು ಫ್ಲ್ಯಾಟ್ ಆಸೆಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟು ಪರಿತಪಿಸತೊಡಗಿದರು. 2014ರವರೆಗೆ ಮಾತ್ರ ಅವರಿಗೆ ಬಾಡಿಗೆ ಸಂದಾಯವಾಗಿದ್ದು. ಅದಾದ ಬಳಿಕ ಅದೂ ನಿಂತುಹೋಯಿತು. ಇಷ್ಟಕ್ಕೆ ಸುಮ್ಮನಾಗದ ಜಿಎಸಿ ಸಂಸ್ಥೆ ಮೀಡೋಸ್ (Meadows Project) ಎಂಬ ಇನ್ನೊಂದು ಯೋಜನೆ ಕೈಗೆತ್ತಿಕೊಂಡಿತು. ಅದೂ ಕೂಡ ಫ್ಲ್ಯಾಟ್‌ಗಳನ್ನು ನಿರ್ಮಿಸುವ ಪ್ರಾಜೆಕ್ಟ್. ಲಕ್ಷುರಿ ಫ್ಲ್ಯಾಟ್‌ಗಳನ್ನು ನಿರ್ಮಿಸುತ್ತಿರುವುದಾಗಿ ಹೇಳಿ ಬುಕಿಂಗ್ ಹಣವಾಗಿ ಬರೋಬ್ಬರಿ 138 ಕೋಟಿ ರೂ ಕಲೆಹಾಕಿತು. ಆದರೆ, ಯಾವ ಮನೆಯನ್ನೂ ಕಟ್ಟಿಕೊಡಲಿಲ್ಲ.

ಅಕ್ರಮವಾಗಿ ಫ್ಲೋರ್ ಸ್ಪೇಸ್ ಇಂಡೆಕ್ಸ್ (FSI- Floor Space Index) ಅನ್ನು ಮಾರಾಟ ಮಾಡಿದ್ದು ಮತ್ತು ಮೀಡೋಸ್ ಪ್ರಾಜೆಕ್ಟ್ ಹೆಸರಲ್ಲಿ ವಂಚನೆ ಮಾಡಿದ್ದು ಎಲ್ಲವೂ ಸೇರಿ 1039.79 ಮೊತ್ತದಷ್ಟು ಅಕ್ರಮ ಚಟುವಟಿಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಸಂಜಯ್ ರಾವತ್ ಪಾತ್ರ ಏನು?

ಸಂಜಯ್ ರಾವತ್ ಪಾತ್ರ ಏನು?

ವಂಚನೆಯ ಸೂತ್ರಧಾರ ಎನಿಸಿದ ಗುರು ಆಶಿಶ್ ಕನ್ಸ್‌ಟ್ರಕ್ಷನ್ಸ್ ಸಂಸ್ಥೆಯ ನಿರ್ದೇಶಕರಲ್ಲಿ ಪ್ರವೀಣ್ ರಾವತ್ ಒಬ್ಬರು. ಇವರು ಶಿವಸೇನಾ ಸಂಸದ ಸಂಜಯ್ ರಾವತ್ ಆಪ್ತ. ಇನ್ನು ಜಿಎಸಿ ಕೂಡ ಹೆಚ್‌ಡಿಐಎಲ್ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಅಂಗ ಸಂಸ್ಥೆ. ಈ ಹೆಚ್‌ಡಿಐಎಲ್ ಸಂಸ್ಥೆಯೇ ಹಲವು ಅಕ್ರಮಗಳನ್ನು ನಡೆಸಿ ಸಿಬಿಐ ತನಿಖೆಗೆ ಬಿದ್ದಿದೆ.

ಜಿಎಸಿಯ ನಿರ್ದೇಶಕ ಪ್ರವೀಣ್ ರಾವತ್ ಹೆಚ್‌ಡಿಐಎಲ್‌ನಿಂದ 100 ಕೋಟಿ ರೂ ಪಡೆದಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪ. ಪ್ರವೀಣ್ ರಾವತ್ ಈ ಹಣವನ್ನು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಹಂಚಿಕೆ ಮಾಡಿದ್ದಾರೆ. ಶಿವಸೇನಾ ಸಂಸದ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್‌ಗೂ ಹಣದ ಒಂದು ಪಾಲು ಹೋಗಿದೆ ಎಂದು ಇಡಿ ಹೇಳುತ್ತದೆ.

ಪ್ರವೀಣ್ ರಾವುತ್ ಪತ್ನಿ ಮಾಧುರಿ ರಾವುತ್ ಅವರು 83 ಲಕ್ಷ ರೂ ಹಣವನ್ನು ವರ್ಷಾ ರಾವುತ್‌ಗೆ ಸಾಲದ ರೂಪದಲ್ಲಿ ಕೊಟ್ಟಿರುತ್ತಾರೆ. ವರ್ಷಾ ಈ ಹಣವನ್ನು ಬಳಸಿ ದಾದರ್‌ನಲ್ಲಿ ಒಂದು ಫ್ಲಾಟ್ ಖರೀದಿಸಿರುತ್ತಾರೆ. ಇದು ಆಗಿದ್ದು 2010ರಲ್ಲಿ.

ವರ್ಷಾ ರಾವುತ್ ಜೊತೆಗೆ ಸ್ವಪ್ನಾ ಪಾಟ್ಕರ್ ಎಂಬುವರ ಹೆಸರಿನಲ್ಲೂ 8 ಕಡೆ ಜಮೀನು ಖರೀದಿ ಆಗಿರುತ್ತದೆ. ಸಂಜಯ್ ರಾವುತ್ ಆಪ್ತ ಸುಜೀತ್ ಅವರ ಪತ್ನಿ ಈ ಸ್ವಪ್ನಾ ಪಾಟ್ಕರ್.

ದಾದರ್‌ನಲ್ಲಿರುವ ವರ್ಷಾ ರಾವತ್‌ರ ಫ್ಲ್ಯಾಟ್ ಹಾಗು ಖಿಮ್ ಬೀಚ್‌ನಲ್ಲಿರುವ 8 ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇವುಗಳ ಒಟ್ಟು ಮೌಲ್ಯ 10 ಕೋಟಿಗೂ ಹೆಚ್ಚು.

(ಒನ್ಇಂಡಿಯಾ ಸುದ್ದಿ)

Recommended Video

ಬದ್ಧ ವೈರಿ ಪಾಕಿಸ್ತಾನವನ್ನ ಬಗ್ಗುಬಡಿದ ಟೀಮ್ ಇಂಡಿಯಾ ವನಿತೆಯರು | *Cricket | Oneindia Kannada

English summary
Shiv Sena MP Sanjay Raut has been arrested in connection with Patra Chawl case. Here is details of the case that led to the arrest of Raut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X